ನಮ್ಮ ಮಹಾಮಾಯಿ ದೇವಸ್ಥಾನದ ಬಗ್ಗೆ ಸಣ್ಣ ಪರಿಚಯ ಮಾಡಿದ್ದಾಯಿತು. ಈಗ ಅಲ್ಲಿ ನಡೆಯುತ್ತಿದ್ದ 'ದರ್ಶನ' ಅಂದರೆ ಪಾತ್ರಿಯ ಮೇಲೆ ಬರುತ್ತಿದ್ದ ದೇವಿಯ ಆವೇಶದ ಬಗ್ಗೆ ಕೆಲವು ವಿವರಗಳನ್ನು ಹೇಳಿ ನನ್ನ ತಾಂತ್ರಿಕ ಸಾಧನೆಯ ಅನುಭವಗಳನ್ನು ಬಿಚ್ಚಿಡುತ್ತೇನೆ. ನದಿಯೊಳಗೆ ಮುಳುಗಿದ್ದ ಮೂಲವಿಗ್ರಹ ನಮ್ಮ ವಂಶಸ್ಥರಿಗೆ ದೊರೆತಾಗಿನಿಂದ ಒಬ್ಬ ಪಾತ್ರಿಯ ಮೇಲೆ ದೇವರ ಆವಾಹನೆಯಾಗುವುದು ಸಾಮಾನ್ಯವಾಗಿತ್ತು. ಮಧ್ಯ ಕೆಲವೊಂದು ಕಾಲ ನಿಂತರೂ ಮತ್ತೆ ಇನ್ನೊಬ್ಬರ ಮೇಲೆ ಅವಾಹನೆಯಾಗುವುದು ಮುಂದುವರೆಯುತ್ತಿತ್ತು.
ಬೇರೆ ಭಾಗದ ಜನರಿಗೆ ಇದು ವಿಚಿತ್ರವಾಗಿ ಕಂಡರೂ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅದು ವಿಶೇಷವಾಗಿತ್ತು. ಭೂತಕೋಲ, ನಾಗಾರಾಧನೆ, ದರ್ಶನ, ಆವಾಹನೆ, ಆವೇಶ ಮುಂತಾದವು ದಕ್ಷಿಣ ಕನ್ನಡದ ಸಂಸ್ಕೃತಿಯಲ್ಲಿಯೇ ಬೆರೆತು ಹೋಗಿವೆ. ಈ ನಂಬಿಕೆಗಳೊಂದಿಗೆ ಬೆಳೆದ ನನಗೆ ನಮ್ಮ ದೇವಸ್ಥಾನದ ದರ್ಶನ, ಭಾವಾತ್ಮಕ ಹಾಗೂ ಭಾವನಾತ್ಮಕವಾಗಿತ್ತು. ದಕ್ಷಿಣಕನ್ನಡದ ಹಲವೆಡೆ ಇಂತಹ 'ದೇವರು/ದೆವ್ವ' ಮೈಮೇಲೆ ಬರುವುದು ಅವರವರ ಲಾಭಕ್ಕೆ, ವೈಯುಕ್ತಿಕ ಕಾರಣಗಳಿಗಾಗಿ ಕೃತ್ರಿಮವಾಗಿರುವಂತೆ ಕಂಡರೂ ನಮ್ಮ ದೇಗುಲದಲ್ಲಿ ಅದು ಸಹಜವಾಗಿರುವಂತೆಯೇ ಕಾಣಿಸುತ್ತಿತ್ತು.
ದರ್ಶನದ ಪಾತ್ರಿ - ಕೆ.ಕೃಷ್ಣನಾಯಕ್
ಇದಕ್ಕೆ ಉದಾಹರಣೆಯಾಗಿ ನನ್ನ ಅಕ್ಕ ಕೆ. ಪ್ರೀತಾ ನಾಯಕ್ (ಈಗ ಪ್ರಭು) ಅವರ ಒಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ನನ್ನಕ್ಕನಿಗೆ ಮದುವೆಯಾಗಿ ಕೆಲವು ವರ್ಷಗಳು ಸಂದರೂ ಮಕ್ಕಳಾಗಿರಲಿಲ್ಲ. ಅವರು ಮಗುವಿನ ಕೋರಿಕೆಯನ್ನು 'ದರ್ಶನ'ದ ವೇಳೆಯಲ್ಲಿ ವ್ಯಕ್ತ ಪಡಿಸಿದರು. ಅದಕ್ಕೆ ಉತ್ತರವಾಗಿ 'ದರ್ಶನ' ಪಾತ್ರಿ (ಅಂದರೆ ನನ್ನ ಅಪ್ಪ) ಪರಿಹಾರವನ್ನು ಸೂಚಿಸಿದರು. 'ಇಲ್ಲಿಂದ ಮುಂದೆ ಒಂದು ವರ್ಷ ಪ್ರತೀ ಹುಣ್ಣಿಮೆಯಂದು ಯಾವುದಾದರೂ ನಾಗಶಿಲೆಗೆ ಹಾಲಿನ ಅಭಿಷೇಕ ಮಾಡತಕ್ಕದ್ದು. ಅಲ್ಲದೇ ಹುಟ್ಟಿದ ಮಗುವಿಗೆ 'ನಾಗ'ನಿಗೆ ಸಂಬಂಧಪಟ್ಟ ಹೆಸರೊಂದನ್ನು ಇಡತಕ್ಕದ್ದು. ಇದಕ್ಕೆ ಈ ಸ್ಥಳದಲ್ಲಿ ನಿಂತು ಒಪ್ಪಿಗೆ ನೀಡಿದರೆ ಮುಂದಿನ ವರ್ಷ ನೀವು ಬರುವಾಗ ನಿಮ್ಮ ಮಗುವಿನೊಂದಿಗೆ ಬರುವಂತೆ ಮಾಡುತ್ತೇನೆ. ಒಪ್ಪಿಗೆಯೇ?' ಎಂದು ಕೇಳಿದಾಗ ನನ್ನ ಅಕ್ಕ ಹಾಗೂ ಭಾವ ಇಬ್ಬರೂ ಸಮ್ಮತಿಸಿದರು. ಅದರಂತೆಯೇ ನನ್ನಕ್ಕ ಗಂಡುಮಗುವೊಂದಕ್ಕೆ ಜನ್ಮ ನೀಡಿದರು. ಕಾಕತಾಳೀಯವೋ ಎಂಬಂತೆ ಆ ಮಗು ಹುಟ್ಟಿದ್ದು ನಾಗರಪಂಚಮಿಯ ದಿನ. ಅವನಿಗೆ 'ನಾಗರಾಜ' ಎಂಬ ಹೆಸರನ್ನೂ ನಾಮಕರಣ ಮಾಡಲಾಯಿತು. ಇಂತಹ ಹಲವು ಹತ್ತು ಉದಾಹರಣೆಗಳು ನನಗೆ ದರ್ಶನದ ಮೇಲಿದ್ದ ಅಭಿಮಾನ, ಪ್ರೀತಿ, ನಂಬಿಕೆಯನ್ನು ನೂರ್ಮಡಿ ಮಾಡಿದವು.
ಶ್ರೀಮದ್ ವರದೇಂದ್ರತೀರ್ಥ ಸ್ವಾಮೀಜಿ
ಎರಡನೆಯದಾಗಿ ನಮ್ಮ ಕಾಶೀಮಠದ ಹಿಂದಿನ ಯತಿವರ್ಯರಲ್ಲೊಬ್ಬರಾದ ಶ್ರೀ ವರದೇಂದ್ರ ಸ್ವಾಮೀಜಿಯವರು 'ಪ್ರಾಮಾಣಿಕ ದರ್ಶನ' ಎಂದು ಒಪ್ಪಿಕೊಂಡದ್ದು ಮೂರು ಸ್ಥಳಗಳಲ್ಲಿ ಮಾತ್ರ. ಅವು ಮಂಜೇಶ್ವರ, ಕಾರ್ಕಳ ಹಾಗೂ ಬಂಟವಾಳದ ನಮ್ಮ ದೇವಸ್ಥಾನದ 'ದರ್ಶನ'ಗಳು. ಇದನ್ನು ಕೂಡ ನನಗೆ ತಿಳಿಸಿದ್ದ ನಮ್ಮ 'ಅಪ್ಪಿ ಮಾಯಿ'.
ಅಪ್ಪಿ ಮಾಯಿ
ನನ್ನ ತಂದೆ ಪಾತ್ರಿಯಾಗಿ ದೇವಸ್ಥಾನ ಪ್ರವೇಶಿಸುವವರೆಗೂ ತಂದೆಯಂತೆಯೇ ಕಾಣುತ್ತಿದ್ದರು. ಒಮ್ಮೆ ದೇಗುಲವನ್ನು ಪ್ರವೇಶಿದರೆಂದರೆ ಅವರ ಮುಖವು ಅತ್ಯಂತ ಗಂಭೀರವಾಗುತ್ತಿತ್ತು. ಬಾಲ್ಯದಲ್ಲಿ ಮೊದಲ ಬಾರಿಗೆ ದರ್ಶನವನ್ನು ನೋಡಿದ ಮೇಲೆ ನನಗೆ ನನ್ನ ತಂದೆಯ ಬಳಿ ಹೋಗಲು ಭಯವಾಗುತ್ತಿತ್ತು. ಅವರ ಗಂಭೀರ ಮುಖಚರ್ಯೆ, ಧ್ವನಿಯ ಏರಿಳಿತ ಹಾಗೂ ಅಧಿಕಾರಯುತವಾಗಿ ಮಾತನಾಡುವ ಶೈಲಿ... ಇವೆಲ್ಲವನ್ನೂ ನೋಡುವಾಗ 'ಇವರೇನಾ ನನ್ನ ಅಪ್ಪ?' ಎಂದೆನಿಸುತ್ತಿತ್ತು. ಕಾಲ ಕಳೆದಂತೆ ಅದು ಭಕ್ತಿಯ ರೂಪವನ್ನು ಪಡೆದುಕೊಂಡಿತು. ಪ್ರತಿ ನವರಾತ್ರಿಯ ದಿನದಂದು ಭಾವೋನ್ಮಾದದ ವಾತಾವರಣವಿರುತ್ತಿತ್ತು.
ಅಂದಿನ ನಮ್ಮ ಪುರೋಹಿತರಾದ ಶ್ರೀ ರಾಮಾಚಾರ್ಯ ಅವರು ದೇವಿಯನ್ನು 'ಹೇ ಚಂಡಮುಂಡಾಂಬಿಕೇ, ಹೇ ಮಹಿಷಾಸುರಮರ್ದಿನೀ, ಹೇ ಮಹಾಮಾಯೇ ನಿನ್ನ ಪರಿವಾರದೊಂದಿಗೆ ಸಕಲಶಕ್ತಿಯೊಂದಿಗೆ ಆವಿರ್ಭವಿಸು ತಾಯೇ' ಎಂದು ಪ್ರಾರ್ಥಿಸುತ್ತಿರುವಾಗ ನನ್ನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ದೇವಿಯ ಆವಾಹನೆಯಾದ ಮೇಲೆ ಚಿತ್ರ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧವಾಗಿದ್ದುದರಿಂದ, ಅದರ ಮುಂಚೆ ತೆಗೆದ ವಿಡಿಯೋ ಒಂದು ಇಲ್ಲಿದೆ.
No comments:
Post a Comment