Monday 17 June 2019

ಎಲ್ಲರಂತಲ್ಲ ನನ್ನ ಅಪ್ಪ.


     ಎಲ್ಲ ಮಕ್ಕಳಿಗೂ ಅಪ್ಪನೇ ಆದರ್ಶ, ಅಪ್ಪನೇ ಹೀರೋ, ಅಪ್ಪನೇ ಸರ್ವಸ್ವ. ನೆನ್ನೆ ನನ್ನ ಮಗಳು ಬಂದು 'ಅಪ್ಪಾ ಐ ಲವ್ ಯು, ಹ್ಯಾಪಿ ಫಾದರ್ಸ್ ಡೇ' ಎಂದು ಹೇಳಿ 'ನಿನಗೇನು ಬೇಕು?' ಎಂದು ಕೇಳಿದಳು.
 'ನನಗಿನ್ನೇನು ಬೇಕು? ನಿನ್ನ ಬೆಳವಣಿಗೆ, ನಿನ್ನ ಸಾಧನೆ ನನಗೆ ಎಲ್ಲ ಖುಷಿಯನ್ನೂ ಕೊಟ್ಟಿದೆ ಅಷ್ಟು ಸಾಕು ಎಂದೆ.'
 'ಇಲ್ಲ, ಏನಾದರೂ ಕೇಳು ಅದೆಷ್ಟೇ ಖರ್ಚಾದರೂ, ಅದೇನೇ ಆದರೂ ನಾನು ತಂದುಕೊಡುತ್ತೇನೆ' ಎಂದಳು. 
ಹಾಗೆ ಅವಳು ಹೇಳಲು ಕಾರಣವೂ ಇತ್ತು. ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದವಳು ಈಗ ಹೊಸ ಜಾಗದಲ್ಲಿ ಸೈಕಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಳೆ. ಸ್ಥಾನವೂ ದೊಡ್ಡದು, ಸಂಬಳವೂ ದೊಡ್ಡದು ! ಇಷ್ಟು ಸಣ್ಣ ವಯಸ್ಸಿನಲ್ಲಿ ಆಕೆಯ ಸಾಧನೆ ಯಾವ ತಂದೆಗಾದರೂ ನಿಜಕ್ಕೂ ಹೆಮ್ಮೆ ತರುವಂತಹದು. ನಾನು ಏನನ್ನೂ ಕೇಳದಿದ್ದರೂ ಅಪ್ಪನಿಗೆ ಡ್ರೈ ಫ್ರೂಟ್ಸ್ ಇಷ್ಟ ಎಂದು ಅವಳೇ ತೀರ್ಮಾನಿಸಿ ಚಂದದ ಡ್ರೈ ಫ್ರೂಟ್ ಡಬ್ಬವೊಂದನ್ನು ಉಡುಗೊರೆಯಾಗಿ ಕೊಟ್ಟಳು. ನನಗೆ ಅತ್ಯಂತ ಖುಷಿ ಕೊಡುವ ವಿಷಯವೆಂದರೆ ನನ್ನ ಮಗಳು. ಅಪ್ಪನಾಗಿ ನಾನು ಅದನ್ನು ಮನಸಾರೆ ಅನುಭವಿಸುತ್ತಿದ್ದೇನೆ. ಈ ಸಂತಸದಲ್ಲಿ ತೇಲಾಡುತ್ತಿದ್ದಂತೇ ಮನಸ್ಸು ನನ್ನ ತಂದೆಯ ನೆನಪಲ್ಲಿ ಮುಳುಗಿತು. 

     ಎಲ್ಲರಂತಲ್ಲ ನನ್ನ ಅಪ್ಪ, ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದ ದೇವರು. ಅಪ್ಪನ ಮೇಲೆ ನನಗಿದ್ದ ಭಯ,ಪ್ರೀತಿ ನನಗೆ ದೇವರ ಮೇಲೂ ಇರಲಿಲ್ಲ. ಭಯಕ್ಕೆ ಕಾರಣ ಅಪ್ಪ ನೀಡುತ್ತಿದ್ದ ಶಿಕ್ಷೆ. ಪ್ರೀತಿ ಏಕೆಂದರೆ ಶಿಕ್ಷೆಯ ನಂತರ ಸಿಗುತ್ತಿದ್ದ ಭಕ್ಷೀಸು ! ಬಹುತೇಕ ಪ್ರತಿದಿನ ಏನಾದರೂ ಒಂದು ತಪ್ಪು ಮಾಡಿ ಅಪ್ಪನ ಕೈಯಲ್ಲಿ ಏಟು ತಿನ್ನುತ್ತಿದ್ದೆ. ನಂತರ ನಾನು ಅಳುತ್ತಿದ್ದಾಗ ಅಪ್ಪನಿಗೆ ನನ್ನ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿತ್ತು. ಪ್ರೀತಿಯಿಂದ ಕರೆದು 'ಯಾಕೋ ದಿನಾ ಹೀಗೆ ಏಟು ತಿಂತೀಯಾ?' ಎಂದು ಹೇಳಿ ಮುದ್ದಿಸಿ ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೆ ಬಜ್ಜಿ ಬೋಂಡ, ಮಸಾಲೆದೋಸೆ, ಸಿಹಿತಿನಿಸು...ಹೀಗೆ ಏನಾದರೂ ಒಂದು ಸಿಗುವುದು ಕಟ್ಟಿಟ್ಟ ಬುತ್ತಿಯಾಗಿತ್ತು. 
     ಗವೀಪುರಂನಲ್ಲಿ ನಮ್ಮ ಮನೆಯಿತ್ತು. ನನಗೆ ಲೋಕಲ್ ಆಟಗಳೆಂದರೆ ತುಂಬಾ ಒಲವಿತ್ತು. ಬುಗುರಿ, ಗೋಲಿ, ಚಿನ್ನಿದಾಂಡು, ಲಗೋರಿ, ಸೂರ್ ಚೆಂಡು .. ಇವೆಲ್ಲಾ ನನ್ನ ಮೆಚ್ಚಿನ ಆಟಗಳು. ಆದರೆ ನನ್ನೊಡನೆ ಆಡಲು ಬರುತ್ತಿದ್ದ ಹುಡುಗರೆಲ್ಲ ಗುಟ್ಟಳ್ಳಿಯವರೋ, ಸುಂಕೇನ ಹಳ್ಳಿಯವರೋ ಆಗಿರುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರೆಲ್ಲಾ ರೌಡಿ ಗೆಳೆಯರು. ಅವರ ಭಾಷೆಯೆಲ್ಲಾ ಲೋಕಲ್ ಭಾಷೆಯೇ ಆಗಿತ್ತು. '..ಮ್ಮನ್, ...ಕ್ಕನ್' ಪದಗಳೆಲ್ಲಾ ಧಾರಾಳವಾಗಿ ಬಳಕೆಯಾಗುತ್ತಿದ್ದವು.ನನಗೂ ಅದೇ ಅಭ್ಯಾಸ ಆಗಿತ್ತು (ಅರ್ಥ ಗೊತ್ತಿಲ್ಲದಿದ್ದರೂ). ಒಮ್ಮೆ ಮೈದಾನವೊಂದರಲ್ಲಿ ಲಗೋರಿ ಆಡುತ್ತಿರುವಾಗ ನನ್ನ ಚೆಂಡು ಗುರಿ ತಪ್ಪಿದಾಗ  '..ಮ್ಮನ್, ...ಕ್ಕನ್' ಪದಗಳು ಸಹಜವಾಗಿ ಉದುರುವ ಅಣಿಮುತ್ತಿನಂತೇ ನನ್ನ ಬಾಯಿಯಿಂದ ಉದುರಿದವು. ಹಿಂದಿನಿಂದ ಯಾರೋ ನನ್ನ ತಲೆಗೆ ಒಂದೇಟು ಹೊಡೆದು ನನ್ನ ಬಲಕಿವಿಯನ್ನು ಬಲವಾಗಿ ತಿರುಚಿ ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡರು. ಯಾರೆಂದು ತಿರುಗಿ ನೋಡಿದರೆ ಸಾಕ್ಷಾತ್ ನನ್ನ ಅಪ್ಪ
        ಅಲ್ಲಿಂದ ಮನೆಯವರೆಗೆ ಕಿವಿ ಹಿಡಿದುಕೊಂಡೇ ದರ ದರನೆ ಎಳೆದುಕೊಂಡು ಬಂದರು. ಅಮ್ಮನ ಬಳಿ ಹೇಳಿದರು 'ಪ್ರವೀಣ ಹೀಗಾಗ್ತಾನೆ ಅಂದ್ಕೊಂಡಿರಲಿಲ್ಲ. ಪೋಲಿ ಹುಡುಗರ ಸಹವಾಸಕ್ಕೆ ಬಿದ್ದು ಪೂರ್ತಿ ಹಾಳಾಗಿ ಹೋಗಿದ್ದಾನೆ. ಹೀಗೇ ಬಿಟ್ಟರೆ ದೊಡ್ಡ ರೌಡಿಯಾಗುತ್ತಾನೆ.' 
'ಅವರೆಲ್ಲ ನನ್ನ ಫ್ರೆಂಡ್ಸ್ ಅಲ್ಲ, ಆಟ ಆಡೋಕೆ ಮಾತ್ರ ಸಿಗ್ತಾರೆ' ನನಗೆ ತೋಚಿದ ಸಮಜಾಯಿಷಿ ನೀಡಿದೆ. 
'ಇವನ ಮಾತು ಏನೂ ನಂಬಬೇಡ. ನಾಳೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ಇವನನ್ನು ವಿವೇಕಾನಂದ ಬಾಲಕ ಸಂಘಕ್ಕೆ ಸೇರಿಸಿಬಿಡೋಣ. ಇಲ್ಲಾಂದ್ರೆ ಇವ್ನು ಯಕ್ಕುಟ್ಟಿ ಹೋಗ್ತಾನೆ' ಅಂದರು. 
ಮರುದಿನವೇ ನಾನು ಸ್ವಾಮೀ ಪುರುಷೋತ್ತಮಾನಂದರ ಎದುರಿಗೆ ಕೈ ಕಟ್ಟಿ ನಿಂತಿದ್ದೆ. ಅಪ್ಪ ಅಮ್ಮ ಅದೇನೇನು ಹೇಳಿದರೋ ತಲೆಗೆ ಹೋಗಲಿಲ್ಲ. ಮನಸ್ಸೆಲ್ಲಾ ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರಲ್ಲ ಈ ಅಪ್ಪ, ಅಮ್ಮ ಎಂದೇ ಚಿಂತಿಸುತ್ತಿತ್ತು. ಅಲ್ಲಿಂದ ಮುಂದೆ ಶಾಲೆ ಬಿಟ್ಟೊಡನೆ ರಾಮಕೃಷ್ಣಾಶ್ರಮಕ್ಕೆ ಹೋಗುವುದು, ವಿವೇಕಾನಂದ ಬಾಲಕ ಸಂಘದಲ್ಲಿ ಆಡುತ್ತಿದ್ದ ಆಟಗಳು ಹಾಗೂ ಭಜನೆ ನನ್ನ ಅಂದಿನ ದಿನಗಳಲ್ಲಿ ಬಾಳಿನ ಅವಿಭಾಜ್ಯ ಅಂಗವಾಗಿ ಹೋದವು ! ಕ್ರಮೇಣ ನನ್ನ ತಂದೆ ಹೇಳುತ್ತಿದ್ದ ಒಂದೊಂದು ಮಾತೂ ಅರ್ಥವತ್ತಾಗಿ ಕಾಣಲು ಶುರುವಾಯಿತು. ತಂದೆಯವರು ನಡೆಸುತ್ತಿದ್ದ ಜೀವನ, ಅವರು ನಂಬಿದ್ದ ಮಾನವೀಯ ಮೌಲ್ಯಗಳು ನನ್ನ ಮನದಲ್ಲಿ ಆಳವಾಗಿ ಬೇರೂರಲಾರಂಭಿಸಿದವು. ಇಂದು ನಾನು ಮನುಷ್ಯನಾಗಿದ್ದೇನೆ ಎಂದರೆ ಅದಕ್ಕೆ ನೂರಕ್ಕೆ ನೂರು ಕಾರಣ ನನ್ನ ಅಪ್ಪ.  

     ನನ್ನ ಅಪ್ಪ ನನಗೆ ಆದರ್ಶಗಳನ್ನು ಬೋಧಿಸಲಿಲ್ಲ. ಮೌಲ್ಯಗಳ ಬಗ್ಗೆ ಭಾಷಣ ಬಿಗಿಯಲಿಲ್ಲ. ಹೀಗೆ ಬದುಕು ಎಂದು ತಿಳಿಹೇಳಲಿಲ್ಲ. ಅವರ ಬದುಕೇ ನನಗೆ ಅವೆಲ್ಲವನ್ನೂ ಕಲಿಸಿತು.
     ನನ್ನ ಅಪ್ಪನಷ್ಟು ಸರಳ, ಸಾತ್ವಿಕ, ಹೃದಯಶ್ರೀಮಂತಿಕೆಯ ಮತ್ತೊಬ್ಬ ಮನುಷ್ಯನನ್ನು ನಾನು ನೋಡಲಿಲ್ಲ. ನೋಡಿಯೇ ಇಲ್ಲ ಎಂದರೆ ತಪ್ಪಾದೀತು. ಅದೇ ಗುಣಗಳನ್ನು ನಾನು ನಮ್ಮ ವರನಟ ರಾಜ್ ಕುಮಾರ್ ಅವರಲ್ಲೂ ಕಂಡಿದ್ದೇನೆ. ಅಪ್ಪನೊಡನಾಟದ ಕೆಲವು ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. 
     ನಾನಾಗ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದೆ. ನನ್ನ ಗೆಳೆಯನೊಬ್ಬ 'ನೆನ್ನೆ ನಮ್ಮಪ್ಪ ಅಶೋಕ ಹೋಟೆಲ್ ಗೆ ಕರ್ಕೊಂಡ್ ಹೋಗಿ ಮಸಾಲೆ ದೋಸೆ ಕೊಡಿಸಿದ್ರು' ಎಂದು ಹೇಳಿ ನಮಗೆಲ್ಲಾ ಹೊಟ್ಟೆ ಉರಿಸಿದ್ದ. ಅವರಪ್ಪ ನಿಜಕ್ಕೂ ಸಾಹುಕಾರನಾಗಿದ್ದ. ಮನೆಗೆ ಬಂದಾಗ ಅಪ್ಪನ ಬಳಿ ಹೇಳಿದೆ 'ನೆನ್ನೆ ನನ್ನ ಫ್ರೆಂಡನ್ನ ಅವರಪ್ಪ ಅಶೋಕಾ ಹೋಟೆಲ್ ಗೆ ಕರ್ಕೊಂಡು ಹೋಗಿ ಮಸಾಲೆ ದೋಸೆ ತಿನ್ನಿಸಿದ್ರಂತೆ. ಸುಮ್ನೆ ದುಡ್ಡು ವೇಸ್ಟ್ ಆಲ್ವಾ ಅಪ್ಪಾ' ಎಂದು ಅಮಾಯಕನಂತೆ ಹೇಳಿದೆ. ನನ್ನ ಮನದಾಳದ ಆಸೆಯನ್ನು ಅರ್ಥ ಮಾಡಿಕೊಂಡ ನನ್ನಪ್ಪ ತಕ್ಷಣ ರೆಡಿಯಾಗಲು ಹೇಳಿ ಅಶೋಕಾ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಸಾಲೆ ದೋಸೆಯನ್ನು ಕೊಡಿಸಿದರು. ಆಗ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆಗೆ ಆರುವತ್ತು ಪೈಸೆ ಇತ್ತು, ಅಶೋಕಾ ಹೋಟೆಲ್ ನಲ್ಲಿ ಹತ್ತು ರೂಪಾಯಿ ! ನನಗೆ ಯಾವುದೇ ಕೀಳರಿಮೆ ಬಾರದಿರಲು ಅಶೋಕಾ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಸಾಲೆ ದೋಸೆ ಕೊಡಿಸಿದ್ದರು ನನ್ನ ಅಪ್ಪ !   
     ಒಮ್ಮೆ ನಾನು, ನನ್ನ ಅಪ್ಪ ತರಕಾರಿ ತರಲು ಹೊರಟೆವು. ಅಪ್ಪ ಒಂದೊಂದೇ ತರಕಾರಿಯ ಬೆಲೆಯನ್ನು ವಿಚಾರಿಸುತ್ತಿದ್ದರು. 'ಕ್ಯಾರೆಟ್ ಎಷ್ಟು ?' ಅಂದಾಗ ಆ ಅಂಗಡಿಯಾತ ಹೇಳಿದ.  ಮತ್ತೆ ಬೇರೆ ಒಂದೆರಡು ತರಕಾರಿಯ ಬೆಲೆ ಕೇಳಿದ ಮೇಲೆ 'ಕ್ಯಾರೆಟ್ ಎಷ್ಟು ಹೇಳಿದ್ರಿ?' ಎಂದು ಮತ್ತೆ ಕೇಳಿದರು. 'ಎಷ್ಟು ಲಾರೀ ಕೇಳ್ತೀರಾ.. ಹೇಳಿದ್ನಲ್ಲ ಎಂಟು ರುಪಾಯ್ ಕೆ. ಜಿ. ಗೆ ಅಂತ' ಎಂದು ತುಸು ಜೋರುಧ್ವನಿಯಲ್ಲೇ ಹೇಳಿದ. ನನ್ನ ಅಪ್ಪ 'ನಾನ್ಯಾಕೆ ಬಂದೆ ಇಲ್ಲಿ ?' ಎಂದು ಕೇಳಿದರು. ಎಲ್ಲೋ ಅರಿವು ಮರೆವಿನ ಗಿರಾಕಿ ಇರಬೇಕು ಎಂದುಕೊಂಡ ಅಂಗಡಿಯಾತ 'ಅದನ್ನೂ ಮರೆತುಬಿಟ್ರಾ? ತರಕಾರಿ ತಗೋಳ್ಳೋಕೆ ಬಂದಿದೀರಾ' ಅಂದ. ಅದಕ್ಕೆ ನಸುನಕ್ಕು ನನ್ನ ಅಪ್ಪ ಹೇಳಿದರು 'ಹೌದಲ್ವಾ? ನಾನು ತರಕಾರಿ ತಗೋಳ್ಳೋಕೆ ತಾನೇ ಬಂದಿದ್ದು, ನಿನ್ನ ಜತೆ ಜಗಳ ಆಡೋಕೆ ಅಲ್ಲವಲ್ಲಾ?' ಅಂದರು. ಮಾತು ಮುಂದುವರೆಸುತ್ತಾ 'ನೋಡಪ್ಪ ನನಗೂ ವಯಸ್ಸಾಗ್ತಾ ಬಂತು, ಒಮ್ಮೊಮ್ಮೆ ಮರೆತು ಹೋಗ್ತೀನಿ. ಇನ್ನೊಂದು ಸಲ ಹೇಳು, ನಷ್ಟ ಏನಿದೆ? ವ್ಯಾಪಾರ ಮಾಡೋಕೆ ತಾನೇ ನೀನು ಕೂತಿರೋದು ?' ಅಂದರು. ಆತ 'ಸಾರಿ ಸಾರ್' ಅಂದ. ತುಂಬಾ ಮುತುವರ್ಜಿ ವಹಿಸಿ ತರಕಾರಿ ಬ್ಯಾಗನ್ನು ಸ್ಕೂಟರ್ ವರೆಗೂ ಅವನೇ ತಂದುಕೊಟ್ಟ. 'ಒಳ್ಳೇದಾಗಲಪ್ಪಾ ನಿನಗೆ' ಎಂದು ಹೇಳಿ ಸ್ಕೂಟರ್ ಸ್ಟಾರ್ಟ್ ಮಾಡಿದರು ನನ್ನ ಅಪ್ಪ
     ಸಿಂಡಿಕೇಟ್ ಬ್ಯಾಂಕ್ ನಲ್ಲಿ ನನ್ನ ಅಪ್ಪ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದರು. ಒಮ್ಮೆ ಊಟ ಮಾಡುತ್ತಿರುವಾಗ ಬ್ಯಾಂಕಿನ ಅಟೆಂಡರ್ ಸಂಪಂಗಿ ಅನ್ನುವವರು ಮನೆಗೆ ಬಂದರು. 'ಏನಪ್ಪಾ ಸಂಪಂಗಿ ?' ಕೇಳಿದರು ಅಪ್ಪ. 
'ಇಲ್ಲೊಂದು ಸಹಿ ಹಾಕಬೇಕಂತೆ ಸಾರ್, ಸ್ವಲ್ಪ ಅರ್ಜೆಂಟ್ ಇದೆ ಅಂತ ನನ್ನ ಕಳಿಸಿದ್ದಾರೆ ಬ್ಯಾಂಕಿಂದ , ನೀವು ಊಟ ಮುಗಿಸ್ಕೊಂಡು ಬನ್ನಿ ಸಾರ್, ನಾನು ಹೊರಗಡೆ ಕೂತಿರ್ತೀನಿ' ಅಂದ ಆತ. 
'ನಿನ್ನ ಊಟ ಆಯ್ತಾ? ಇಲ್ಲಾಂದ್ರೆ ಬಾ ಕೂತ್ಕೋ' ಎಂದು ಕರೆದರು ಅಪ್ಪ.
 'ಇಲ್ಲ ಸಾರ್ ಬೇಡ' ಎಂದು ತುಂಬಾ ಸಂಕೋಚ ಪಟ್ಟುಕೊಂಡು ಆತ ಹೇಳಿದಾಗ 'ಯಾಕೆ ಅಷ್ಟೊಂದು ಸಂಕೋಚ ಪಡ್ತಿದೀಯಾ ಪರವಾಗಿಲ್ಲ ಬಾ ಕೂತ್ಕೋ' ಎಂದು ಬಲವಂತ ಮಾಡಿದರು ಅಪ್ಪ. 
'ಇಲ್ಲ ಸಾರ್ ನಾನು ಎಸ್.ಸೀ, ನಿಮ್ಮ ಜತೆ ಊಟ ಮಾಡೋದು ಬೇಡ ಸಾರ್' ಅಂದ. 
 'ಅಕ್ಕಿಕಾಳಿಗೆ ಗೊತ್ತೇನಪ್ಪಾ ಯಾರ ಹೊಟ್ಟೆಗೆ ಹೋಗ್ತೀನಿ ಅಂತ ಅದಕ್ಕಿಲ್ಲದಿರೋ ಭೇದ ನಮಗ್ಯಾಕೆ?' ಎಂದು ಒತ್ತಾಯ ಮಾಡಿ ಊಟಕ್ಕೆ ಕೂರಿಸಿದರು ನನ್ನ ಅಪ್ಪ
     ಬಾಲ್ಯಾವಸ್ಥೆ ದಾಟಿ ಮದುವೆಗೆ ಸಿದ್ಧನಾಗಿದ್ದೇನೆ ಎಂದು ನನಗೆ ತಿಳಿದದ್ದು ಹಲವಾರು ಹೆಣ್ಣುಮಕ್ಕಳ ಫೋಟೋಗಳು ನಮ್ಮ ಮನೆಗೆ ದಾಳಿ ಇಡತೊಡಗಿದಾಗ. ಯಾವ ಫೋಟೋ ನೋಡಿದರೂ 'ಇವಳು ನನ್ನ ಹೆಂಡತಿ ಅಲ್ಲ' ಎಂದೇ ಅನ್ನಿಸುತ್ತಿತ್ತು. ಆದರೂ 'ಒಮ್ಮೆ ನೋಡಲು ಹೇಳಿ, ಆಮೇಲೆ ಬೇಡ ಎಂದರೂ ಪರವಾಗಿಲ್ಲ' ಎಂದು ಹುಡುಗಿ ಕಡೆಯವರು ಹೇಳುತ್ತಿದ್ದರಂತೆ. 
     ನನಗೋ ಅವರ ಮನೆಗೆ ಹೋಗಿ ಉಪ್ಪಿಟ್ಟು ತಿಂದು 'ಬೇಡ' ಎನ್ನುವುದು ಅಸಾಧ್ಯದ ಕೆಲಸವಾಗಿತ್ತು. ಏಕೆಂದರೆ ಅದಾಗಲೇ ನಾನು ಫೋಟೋ ಸ್ಟುಡಿಯೋ ಒಂದರ ಮಾಲೀಕನಾಗಿದ್ದೆ. ಗಂಡಿಗೆ ತೋರಿಸಲು ಫೋಟೋ ತೆಗೆಸಿಕೊಳ್ಳಲು ಬರುವ ಹುಡುಗಿಯರ ಸಂಕಟ ನೋಡಿದ್ದೆ. 'ಹೀಗೆ ನಿಂತ್ಕೋ, ಹಾಗೆ ನಿಂತ್ಕೋ .. ವಾಚು ಕಾಣ್ತಿಲ್ಲ, ನೆರಿಗೆ ಸರಿಯಾಗಿಲ್ಲ ...' ಹೀಗೆಲ್ಲಾ ಹೇಳಿ ಹುಡುಗಿಯನ್ನು ಬೊಂಬೆಯಂತೆ ನಿಲ್ಲಿಸಿ ಫೋಟೋ ತೆಗೆಸುತ್ತಿದ್ದರು ಹೆತ್ತವರು. ನಾನೂ ಮನೆಗೆ ಹೋಗಿ 'ಬೇಡ' ಎಂದು ಹೇಳಿ ಅವರನ್ನು ಮತ್ತಷ್ಟು ನೋಯಿಸಲು ನಾನು ಸುತರಾಂ  ಸಿದ್ಧನಿರಲಿಲ್ಲ. ಒಮ್ಮೆ ನೋಡಲು ಹೋದರೆ 'ಯಸ್' ಅಂತ ಹೇಳಿನೇ ಬರೋದು ಎಂದು ತೀರ್ಮಾನಿಸಿದ್ದೆ. ಆದ್ದರಿಂದ ಫೋಟೋ ನೋಡಿಯೇ ತೀರ್ಮಾನ ಮಾಡುತ್ತಿದ್ದೆ, 'ಇವ್ಳು ಯಾಕೋ ನನ್ನವಳೆಂದು ಅನ್ನಿಸುತ್ತಿಲ್ಲ' ಎಂದು. 
     ನನ್ನ ಅಪ್ಪ ಒಮ್ಮೆ ನನ್ನನ್ನು ಕರೆದು 'ಬಾರೋ ಕಾಫಿ ಕುಡ್ಕೊಂಡು ಬರೋಣ' ಎಂದು ಕರೆದು ಕೊಂಡು ಹೋದರು. 'ಪ್ರವೀಣಾ, ನೀನು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಧೈರ್ಯವಾಗಿ ಹೇಳು. ನಾನೇ ನಿಂತು ಮಾಡುವೆ ಮಾಡಿಸುತ್ತೇನೆ. ಸಂಕೋಚ ಪಡಬೇಡ' ಎಂದು ನೇರವಾಗಿ ಹೇಳಿದರು.
ನಾನು 'ಆ ತರಹ ಏನೂ ಇಲ್ಲಪ್ಪಾ' ಎಂದಾಗ 'ಮತ್ತೆ ಯಾಕೆ ಯಾವ ಫೋಟೋ ನೋಡಿದ್ರೂ ಬೇಡ ಅಂತೀದೀಯಾ?' ಅಂದರು. 
ನಾನು ನನ್ನ ಅನಿಸಿಕೆಯನ್ನು ಹೇಳಿದೆ. 'ಐ ಲೈಕ್ ದಟ್ ' ಎಂದರು ನನ್ನ ಅಪ್ಪ
ಕಾಲಚಕ್ರ ಉರುಳುತ್ತಿತ್ತು......
     ನಾನು ಕೋರಮಂಗಲದಲ್ಲಿ ಸ್ಟುಡಿಯೋ ಹಾಗೂ ಮನೆಯನ್ನು ಮಾಡಿಕೊಂಡಿದ್ದೆ. ಅಪ್ಪನಿಗೆ ಒಮ್ಮೆ ಹುಷಾರಿರಲಿಲ್ಲ. ತಂದೆ ತಾಯಿಯನ್ನು ಕೋರಮಂಗಲಕ್ಕೆ ಕೆಲದಿನಗಳ ಮಟ್ಟಿಗಾದರೂ ಬನ್ನಿ ಎಂದು ಕರೆದೆ. ಅಮ್ಮನ ಕಡೆಯ ಸಂಬಂಧಿಕರು ಅತಿಥಿಗಳಾಗಿ ಬಂದಿದ್ದರಿಂದ ಅಮ್ಮ 'ಅಪ್ಪನ್ನ ಕರ್ಕೊಂಡು ಹೋಗು, ನಾನು ಎರಡು ಮೂರು ದಿನ ಬಿಟ್ಟು ಬರ್ತೀನಿ' ಅಂದರು. ಅಪ್ಪನನ್ನು ಕರೆದುಕೊಂಡು ಮನೆಗೆ ಬಂದೆ. ನಮ್ಮಲ್ಲಿ ಸ್ವಾಮೀಜಿಯವರು ಬಂದಾಗ ಹೇಗೆ ಗೌರವಿಸುತ್ತಾರೋ ಹಾಗೆ ಗೌರವಿಸಿದೆ. ಅಪ್ಪ ಸೇವೆ ಮಾಡುವ ಎಲ್ಲಾ ಸೌಭಾಗ್ಯಗಳು ನನಗೆ, ನನ್ನ ಮಡದಿ ಪುಷ್ಪಾಳಿಗೆ, ನನ್ನ ಮಗಳು ಸುಶ್ಮಿತಾಳಿಗೆ ದೊರಕಿದವು. ರುಚಿ ರುಚಿಯಾದ ಅಡುಗೆ ಹಾಗೂ ತಿಂಡಿಗಳನ್ನು ಬಹಳ ಆಸ್ಥೆಯಿಂದ ಪುಷ್ಪಾ ಮಾಡಿಕೊಡುತ್ತಿದ್ದಳು. ಸುಶ್ಮಿತಾಳಂತೂ ಅಪ್ಪನನ್ನು ಖುಷಿಯಾಗಿಡಲು ಎಲ್ಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಳು, ಅಪ್ಪನ್ನು ನಗಿಸುತ್ತಿದ್ದಳು. ನಾನಂತೂ ಅಪ್ಪನಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಅವರು ಮಲಗುವವರೆಗೆ ಎಲ್ಲ ಸೇವೆಯನ್ನೂ ಮಾಡುತ್ತಿದ್ದೆ. ಮಗುವಾಗ ಅವರ ಕಾಲೊತ್ತಿ ಎಳೆಯ ಮಗುವಿನಂತೆ ಮಲಗಿಸುತ್ತಿದ್ದುದು ನನಗೆ ದೊರೆತ ಸ್ವರ್ಗ. ಮೂರು ದಿನಗಳ ನಂತರ ಅಪ್ಪ ಮತ್ತೆ ತಮ್ಮ ಮನೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದರು. ಕರೆದುಕೊಂಡು ಹೋದೆ. 'ಪ್ರವೀಣನ ಮನೆಯಲ್ಲಿ ಎಲ್ಲವೂ ಪ್ರೀತಿಯಿಂದ ಮಾಡಿದರು ಕಣೇ, ಊಟ ತಿಂಡಿಯಂತೂ ಅದ್ಭುತ, ಎಲ್ಲವೂ 'ಹಾರ್ಟ್ ಮೇಡ್', ತುಂಬಾ ಚೆನ್ನಾಗಿತ್ತು' ಎಂದು ಅಮ್ಮನ ಬಳಿ ಬಹಳ ಹೆಮ್ಮೆಯಿಂದ ಹೇಳಿದರು ನನ್ನ ಅಪ್ಪ
     ಇದಾಗಿ ನಾಲ್ಕೇ ದಿನಗಳಲ್ಲಿ ಬರಸಿಡಿಲು ಬಡಿದ ಅನುಭವ. 'ಪ್ರವೀಣಾ ಬೇಗ ಬಂದು ಬಿಡು' ಅಮ್ಮ ದೂರವಾಣಿ ಮೂಲಕ ಹೇಳಿದರು. ಗಾಬರಿಯಿಂದಲೇ ಹೋದೆ.  'ಊಟ ಮಾಡಿದ್ರು, ಟಿ.ವಿ. ನೋಡ್ತಾ ಇದ್ರು, ಯಾವುದೋ ಭಜನೆ ಕೇಳ್ತಾ ಇದ್ರು. ಮಲಗೋಣಾ ಅಂತ ಹಾಸಿಗೆವರೆಗೂ ಬಂದ್ರು, ಅಲ್ಲೇ ಕುಸಿದು .... 'ಅಮ್ಮನ ಬಾಯಲ್ಲಿ ಮುಂದೆ ಮಾತು ಹೊರಡಲಿಲ್ಲ. ಡಾಕ್ಟರ್ ಆಗಿರುವ ನನ್ನ ಅಕ್ಕನಂತೂ ಇದ್ದ ಬದ್ದ ಆಸ್ಪತ್ರೆಗೆಲ್ಲಾ ಕರೆದುಕೊಂಡು ಹೋಗಿ ಹೇಗಾದರೂ ಬದುಕಿಸಲು ಸಾಧ್ಯವೇ ಎಂದು ಶತಪ್ರಯತ್ನ ಮಾಡಿದಳು.  
     ನಾನು ಮೂಕನಾಗಿ ಎಲ್ಲವನ್ನೂ ಗಮನಿಸುತ್ತಿದ್ದೆ. ಆದರೆ ಆಡಿಸುವಾತ ತನ್ನ ಆಟ ಮುಗಿಸಿದ್ದ. 
     ಜೀವನದಲ್ಲಿ 'ನೋವು' ಎಂದರೆ ಏನೆಂದು ಮೊದಲ ಬಾರಿಗೆ ಅನುಭವಿಸಿದೆ. ಈ ಶೂನ್ಯವನ್ನು ಯಾರಿಂದಲೂ, ಯಾವುದರಿಂದಲೂ ತುಂಬಲಾಗುವುದಿಲ್ಲ. ಅಪ್ಪನನ್ನು ನೆನೆಸಿಕೊಂಡಾಗಲೆಲ್ಲಾ ಎದೆಯಲ್ಲಿ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಮನಸ್ಸಲ್ಲಿ ಇಷ್ಟೆಲ್ಲಾ ಸಂಕಟಗಳು ಹುದುಗಿದ್ದರೂ ಹೆಮ್ಮೆಯಿಂದ ಹೇಳುತ್ತೇನೆ, 'ಎಲ್ಲರಂತಲ್ಲ ನನ್ನ ಅಪ್ಪ.'