Thursday 10 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 8

                                                                 ನೇತ್ರಾವತಿ ನದಿ
        
        ದೀಕ್ಷೆ ಕೊಡುವ ದಿನಬಂದೇ ಬಿಟ್ಟಿತು. ಹಿಂದಿನ ದಿನ ರಾತ್ರಿ ಏನೋ ಪುಳಕ. ಮಾನಸ ಲೋಕದ ಹೊಸ ಪಯಣಕ್ಕೆ ಹಾತೊರೆಯುತ್ತಿದ್ದೆ. ಎಲ್ಲ ತಯಾರಿಗಳೂ ಮುಗಿದಿದ್ದವು. ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಮಧ್ಯರಾತ್ರಿಯ ಹೊತ್ತಿಗೆ ಕಿವಿಯ ಒಳಗೆ ಬಿಸಿ ಗಾಳಿ ನುಗ್ಗುತ್ತಿದ್ದ ಅನುಭವ. ನಿಧಾನವಾಗಿ ಆ ಬಿಸಿಗಾಳಿ ಕಿವಿಯಲ್ಲಿ ಮೂರು ಬಾರಿ 'ಓಂ ಸಿದ್ಧ ಗುರವೇ ನಮಃ' ಎಂದು ಹೇಳುತ್ತಿರುವಂತೇ ಭಾಸವಾಯಿತು. ಆಗ ಎಚ್ಚರಗೊಂಡೆ. ತಕ್ಷಣ ನಿದ್ದೆಗಣ್ಣಲ್ಲಿಯೇ ಪಕ್ಕದಲ್ಲಿದ್ದ ಪುಸ್ತಕದಲ್ಲಿ ಈ ಮಂತ್ರವನ್ನು ಬರೆದುಕೊಂಡು ಮಲಗಿದೆ. 
        ಅಲಾರಾಂ ಹೊಡೆಯುವ ಮೊದಲೇ  ಸುಮಾರು ಎರಡೂ ನಲವತ್ತಕ್ಕೆ ಎಚ್ಚರಗೊಂಡೆ. ಎಲ್ಲ ಸಾಮಗ್ರಿಗಳ ಸಮೇತ ನೇತ್ರಾವತಿ ತೀರದಲ್ಲಿ ಗುರುಗಳು ಹೇಳಿದ ಸ್ಥಳಕ್ಕೆ ಬಂದೆ. ಆ ಹೊತ್ತಿಗಾಗಲೇ ಅವರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಯಂತ್ರವೊಂದನ್ನು ಬರೆದಿದ್ದರು, ದೀಪವೊಂದನ್ನು ಹಚ್ಚಿಟ್ಟಿದ್ದರು. ಅವರ ಮುಖ ಅತ್ಯಂತ ಗಂಭೀರವಾಗಿತ್ತು. ನನ್ನನ್ನು ಕಂಡೊಡನೆ ನದಿಗೆ ಹೋಗಿ ಸ್ನಾನ ಮಾಡಿ ಬರಲು ಹೇಳಿದರು ಹಾಗೂ ನನ್ನ ದೇವಿಯ ಮೂರ್ತಿಯನ್ನು ನನ್ನಿಂದ ಪಡೆದುಕೊಂಡರು. ನಾನು ಸ್ನಾನ ಮಾಡುತ್ತಿದ್ದಾಗ ಅವರು ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಧ್ಯಾನಿಸುತ್ತಿದ್ದರು. ನಂತರ ನನ್ನ ಬಳಿ ಬಂದು ಮೂರ್ತಿಯನ್ನು ನನ್ನ ಕೈಗೆ ನೀಡುತ್ತಾ 'ಇದನ್ನು ತಲೆಯ ಮೇಲಿಟ್ಟುಕೊಂಡು ನೀರಿನಲ್ಲಿ ಮೂರುಬಾರಿ ಮುಳುಗಿ ಮೇಲೆ ಬಾ' ಎಂದು ಹೇಳಿದರು. 
        ಅಂತೆಯೇ ಮಾಡಿ ನಾನು ಒದ್ದೆ ಬಟ್ಟೆಯಲ್ಲಿಯೇ ಮೇಲೆ ಬಂದಾಗ ಮೂರ್ತಿಯನ್ನು ನನ್ನಿಂದ ಪಡೆದುಕೊಂಡು ಯಂತ್ರದ ಮೇಲೆ ಸ್ಥಾಪಿಸಿದರು. ನಂತರ ಕೆಲ ವಿಧಿವಿಧಾನಗಳು ನಡೆದವು. ಫಲತಾಂಬೂಲಗಳನ್ನು ಗುರುಗಳಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದೆ. ನನ್ನನ್ನು ಆಶೀರ್ವದಿಸುವಾಗ ಅವರ ಗಂಭೀರ ಮುಖ ಅಪಾರ ಕರುಣೆಯಿಂದ ಕೂಡಿದ್ದನ್ನು ನೋಡಿದೆ. ಮತ್ತೆ ಮುದ್ರೆಯಾದಿ ಕೆಲ ವಿಧಿ ವಿಧಾನಗಳನ್ನು ಮಾಡಿದ ನಂತರ ನಾನು ಕಾತುರದಿಂದ ಕಾಯುತ್ತಿದ್ದ,
ಮಂತ್ರೋಪದೇಶ ನೀಡುವ ಸಮಯ ಬಂದಿತು. 
        'ಈಗ ಬೀಜಾಕ್ಷರಸಹಿತ ಚಾಮುಂಡಿದೇವಿಯ ಮಂತ್ರವನ್ನು ನಿನಗೆ ಉಪದೇಶಿಸುತ್ತೇನೆ' ಎಂದು ಹೇಳಿ ಒಂದು ಬಿಳಿಯ ವಸ್ತ್ರವನ್ನು ನಮ್ಮಿಬ್ಬರ ತಲೆಯ ಮೇಲೆ ಹೊದಿಸಿ, ಮಂತ್ರೋಪದೇಶ ಮಾಡಿದರು. ಅದು ಅತ್ಯಂತ ಜನಪ್ರಿಯವಾದ ಚಾಮುಂಡಿಯ 'ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ' ಎಂಬ ಮಂತ್ರವಾಗಿತ್ತು. ಆದರೆ ಅದರೊಂದಿಗೆ ಇನ್ನೊಂದು ಬೀಜಾಕ್ಷರವನ್ನು ಸೇರಿಸಿ ನನಗೆ ಉಪದೇಶ ನೀಡಿದ್ದರು. ಆ ಬೀಜಾಕ್ಷರವನ್ನು ಗೋಪ್ಯವಾಗಿಡಲು ಹೇಳಿದರು. 
        ನಂತರ ದೇವಿಯ ವಿಗ್ರಹವನ್ನು ನನಗೆ ಕೊಡುತ್ತಾ 'ಇಂದು ನಾನು ಪ್ರಾಣಪ್ರತಿಷ್ಠೆ ಮಾಡಿದ್ದೇನೆ. ನಿನ್ನ ಪೂಜೆಯನ್ನು ಈ ಕ್ಷಣದಿಂದಲೇ ಶುರು ಮಾಡಬೇಕು' ಎಂದು ಪ್ರೀತಿಯಿಂದ ಹರಸಿದರು. ಪೂಜಾ ವಿಧಿವಿಧಾನವನ್ನು ಈ ಮೊದಲೇ ನನಗೆ ಹೇಳಿಕೊಟ್ಟಿದ್ದರು. ಹೆಮ್ಮೆಯಿಂದ ಹಾಗೂ ಪ್ರೀತಿಯಿಂದ ಆ ಮೂರ್ತಿಯನ್ನು ಎದೆಗವಚಿಕೊಂಡು ನಮ್ಮ ದೇಗುಲದತ್ತ ಹೆಜ್ಜೆ ಹಾಕಿದೆ. 

     
ನಮ್ಮ ಮಹಾಮಾಯಿ ದೇವಸ್ಥಾನದ ಒಂದು ಭಾಗದಲ್ಲಿ 'ಕೂಡಿ' ಎಂದು ಕರೆಯಲ್ಪಡುವ ಒಂದು ಪುಟ್ಟ ಕೋಣೆ ಇತ್ತು. ನಾನು ಅಲ್ಲಿಯೇ ತಂಗಿದ್ದೆ. ಚಿಕ್ಕದೊಂದು ಪೀಠವನ್ನು ಮೊದಲೇ ತಂದಿಟ್ಟಿದ್ದೆ. ಆ ಪೀಠದಲ್ಲಿ ಮೂರ್ತಿಯನ್ನು ಅಲಂಕರಿಸಿದೆ. ಪೂಜಾ ವಿಧಿವಿಧಾನಗಳನ್ನೆಲ್ಲ ಮುಗಿಸಿ ದೇವಿಯ ಮಂತ್ರವನ್ನು ಜಪಿಸಲು ಪ್ರಾರಂಭಿಸಿದೆ. ಕುಳಿತ ಮೇಲೆ ಒಟ್ಟು ಹತ್ತು ಸಾವಿರ ಬಾರಿ ಮಂತ್ರವನ್ನು ಪಠಿಸಬೇಕಿತ್ತು. ನಾನು  ಜಪಮಾಲೆಯನ್ನು ಕೆಳಗಿಟ್ಟಾಗ ಘಂಟೆ ಸಂಜೆ ನಾಲ್ಕಾಗಿತ್ತು. ಕಾಲುಗಳು ಮರಗಟ್ಟಿದಂತೆ ಭಾಸವಾಗಿತ್ತು. ಈ ದೇವೀ ಸಾಧನೆಯಲ್ಲಿ ಮುಂದುವರೆದಾಗ ಆದ ಒಂದು ಅದ್ಭುತ, ಅಪೂರ್ವ ಅನುಭವವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.




       

No comments:

Post a Comment