ನಂತರ ಅದೇ ಗುಂಗಿನಲ್ಲಿ, ಒಂದು ರೀತಿಯ ಮತ್ತಿನಲ್ಲಿ ನನ್ನ ಪೂಜೆ ಮುಂದುವರೆಯುತ್ತಿತ್ತು. ಕೆಲವು ದಿನ ಕಳೆಯುವುದರೊಳಗೆ ನನ್ನ ಗುರುಗಳು ನಮ್ಮೂರಿಗೆ ಬಂದರು. ಅವರೊಂದಿಗೆ ನನ್ನೆಲ್ಲಾ ಅನುಭವಗಳನ್ನು ಚಾಚೂ ತಪ್ಪದೇ ಹಂಚಿಕೊಂಡೆ. ಅವರ ಮುಖದಲ್ಲಿ ತೃಪ್ತಿಯ ನಗುವೊಂದನ್ನು ಕಂಡೆ. 'ಇದು ಒಂದು ಸಣ್ಣ ಅನುಭವ, ಮುಂದೆ ಸಾಗಬೇಕಾದ ದಾರಿ ಬಹಳಷ್ಟಿದೆ. ಇನ್ನೂ ಸ್ವಲ್ಪ ಕಠಿಣ ಸಾಧನೆಗೆ ಮೈಯ್ಯೊಡ್ಡಬೇಕಾಗಬಹುದು' ಎಂದರು.
'ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ' ಧೈರ್ಯವಾಗಿ ಹೇಳಿದೆ. ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ಎಂಬಂತೆ ಇತ್ತು ನನ್ನ ಪರಿಸ್ಥಿತಿ. ಎರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಸಾಧಿಸಬೇಕು ಎಂದು ಹಾತೊರೆಯುತ್ತಿದ್ದೆ. 'ಆದರೆ....' ಎಂದು ನಿಲ್ಲಿಸಿದೆ.
ಏನು? ಎನ್ನುವಂತೆ ನನ್ನೆಡೆಗೆ ನೋಡಿದರು.
'ದೇವಿಯ ಮುಖ ನೋಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ...' ದೈನ್ಯವಾಗಿ ಕೇಳಿದೆ.
'ಚಿಂತಿಸಬೇಡ. ಅದೂ ಕೂಡಾ ಆಗಬಹುದು, ಆದರೆ ಅದು ಆಕೆಯ ಇಚ್ಛೆ' ಎಂದರು ಗುರುಗಳು.
ನನ್ನ ಗುರುಗಳು ಒಂದೆಡೆ ಬಹಳ ದಿನ ನಿಲ್ಲುತ್ತಿರಲಿಲ್ಲ. ಅದೇನು ಕೆಲಸವೋ ಏನೋ, ದೇಶಾದ್ಯಂತ ಸುತ್ತುತ್ತಿದ್ದರು. ಹರಿದ್ವಾರ, ಹೃಷಿಕೇಶದಲ್ಲಿ ಬಹುಕಾಲ ನೆಲೆಸುತ್ತಿದ್ದರು. ನನಗೆ 'ಇಂತಿಷ್ಟು ಕಾಲ ಇದನ್ನು ಮುಂದುವರೆಸು' ಎಂದು ಹೇಳಿ ಮತ್ತೆ ಹೊರಡಲು ಸಿದ್ಧರಾಗಿದ್ದರು. ಅವರು ಜೊತೆಯಲ್ಲಿದ್ದರೆ ಚೆನ್ನ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಆದರೆ ಕೇಳಲು ಒಂದು ರೀತಿಯ ಸಂಕೋಚವಾಗುತ್ತಿತ್ತು. ಅವರು ಹೊರಟ ಮೇಲೆ ನನ್ನ ಪೂಜೆಯನ್ನು ಮುಂದುವರೆಸುತ್ತಿದ್ದೆ. ದೇವಿಯ ಮುಖ ನೋಡಲು ದಿನಾ ಹಾತೊರೆಯುತ್ತಿದ್ದೆ. ಮಂತ್ರ ಸಿದ್ಧಿಗೆ ಅವರು ಹೇಳಿದ ಗಡುವು ಹತ್ತಿರ ಬರುತ್ತಿತ್ತು.
ಅಂದು..
ಯಥಾಪ್ರಕಾರ ಪೂಜೆ ಮಾಡಲು ಆರಂಭಿಸಿದೆ. ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಜಪದ ಅನುಷ್ಠಾನಕ್ಕೆ ಕುಳಿತುಕೊಂಡಿದ್ದೆ. ಜಪ ಮುಂದುವರೆಯುತ್ತಿದ್ದಂತೇ, ಮನಸ್ಸಿಗೆ ಜಪದ ಸಂಖ್ಯೆಯ ಮೇಲೆ ಹತೋಟಿ ತಪ್ಪಿದಂತೇ ಭಾಸವಾಯಿತು. ಜಪವು ಅಭ್ಯಾಸವಾದಂತೇ ಒಂದು ಕೈಯ್ಯಲ್ಲಿ ಜಪಮಾಲೆ ಚಲಿಸುತ್ತಿದ್ದರೆ, ಇನ್ನೊಂದು ಕೈ ಬೆರಳು ಗಂಟುಗಳ ಮಧ್ಯೆ ಚಲಿಸುತ್ತಾ ಜಪದ ಸಂಖ್ಯೆಯನ್ನು ನನಗೇ ಅರಿವಿಲ್ಲದಂತೆ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕುತ್ತಿತ್ತು. ಅಂದು ಈ ಲೆಕ್ಕ ಮಧ್ಯದಲ್ಲೆಲ್ಲೋ ತಪ್ಪಿ ಹೋಯಿತು. ಮನಸ್ಸು ಇನ್ನೆಲ್ಲೋ ಜಾರುತ್ತಿದ್ದ ಅನುಭವ. ಆದರೆ ಅದು ನಿದ್ದೆಯಂತೂ ಆಗಿರಲಿಲ್ಲ. ಒಂದು ಕತ್ತಲ ಲೋಕ.
ಆ ಕತ್ತಲಲ್ಲಿ ಒಂದು ಯುದ್ಧದಂತಹ ಸನ್ನಿವೇಶ. ದೇವಿ ಬರುತ್ತಿದ್ದಾಳೆ ಎಂದಂತೂ ನನಗೆ ಅದು ಹೇಗೋ ಮನದಟ್ಟಾಗಿತ್ತು. ಮಹಿಷಾಸುರ ಹಾಗೂ ಚಾಮುಂಡೇಶ್ವರಿ ನಡುವಿನ ಯುದ್ಧದಂತೇ ಕಾಣುತ್ತಿತ್ತು. ನಾನು ದೇವಿಯ ಮುಖವನ್ನು ನೋಡಲು ಹಂಬಲಿಸುತ್ತಿದ್ದುದರಿಂದ ಬೇರೆ ವಿವರಗಳಿಗೆ ಮನಸ್ಸು ಹೋಗಲಿಲ್ಲ. ಆ ಕತ್ತಲಲ್ಲಿ ಹಲವು ಮಂದಿಯ ನಡುವೆ ಝಗ್ಗನೆ ದೇವಿಯ ಪ್ರವೇಶವಾಯಿತು. ಹುಣ್ಣಿಮೆಯ ದಿನ ಕತ್ತಲಲ್ಲಿ ಹೊಳೆಯುವ ಚಂದ್ರನನ್ನು ನೋಡಿದ ಅನುಭವ. ಆ ಚಂದ್ರ ಅದೇ ಶಾಂತತೆಯನ್ನು ಇಟ್ಟುಕೊಂಡು ನೂರು ಪಟ್ಟು ಹೊಳೆಯುತ್ತಿದ್ದರೆ ಹೇಗಿರಬಹುದು ಎಂದು ಊಹಿಸಿದರೆ ಬಹುಶಃ ಆಕೆಯ ವರ್ಚಸ್ಸು ಅಥವಾ ಪ್ರಭೆ ಅರ್ಥವಾಗಬಹುದೇನೋ! ನಾನು ಯಾವ ಚಿತ್ರ ಪಟದಲ್ಲೂ ನೋಡದಿರುವ, ಯಾವ ಕಲ್ಪನೆಗೂ ನಿಲುಕದಿರುವ ಅನುಪಮ ಸೌಂದರ್ಯವದು. ಆಕೆಯನ್ನು ನೋಡುತ್ತಿದ್ದಂತೇ ನನಗನ್ನಿಸಿದ್ದಿಷ್ಟೇ 'ಇಂತಹ ಅನುರಾಗ ತುಂಬಿದ, ತಾಯಿ ಹೃದಯದ ಕರುಣಾಮಯಿಯೊಂದಿಗೆ ಯುದ್ಧ ಮಾಡಲು ಯಾರಿಗಾದರೂ ಹೇಗೆ ಮನಸ್ಸು ಬಂದೀತು? ಬಹುಶಃ ಆಕೆ ಮಹಿಷನಿಗೆ ಶರಣಾಗಲು ನೀಡುತ್ತಿರುವ ಕೊನೆಯ ಅವಕಾಶ ಇದಾಗಿರಬಹುದೋ ಏನೋ'.
ಇದೊಂದು ದೃಶ್ಯವನ್ನು ಶಬ್ದಗಳಲ್ಲಿ ವಿವರಿಸಲು ನನಗೆ ಕಷ್ಟವಾಗುತ್ತದೆ. ಅದೊಂದು ಅಪೂರ್ವ ಅನುಭವ ಎಂದಷ್ಟೇ ಹೇಳಬಯಸುತ್ತೇನೆ. ಈ ಅನುಭವವಾದ ಮೇಲೆ ಅದೆಷ್ಟು ಹೊತ್ತು ಅಲ್ಲಿ ಹಾಗೆಯೇ ಕುಳಿತಿದ್ದೆನೋ ನನಗೆ ಅರಿವಿಲ್ಲ. ನಿಧಾನವಾಗಿ ಕಣ್ಣು ಬಿಟ್ಟಾಗ ದೇವಿಯ ಮೂರ್ತಿ ಕಣ್ಣ ಮುಂದೆ ಕಾಣಿಸಿತು. 'ಇದೇನು ಕನಸೇ' ಎಂದು ನನ್ನನ್ನು ನಾನೇ ಪ್ರಶ್ನಿಸುವಂತಾಯಿತು. ಆದರೆ ಪದ್ಮಾಸನದಲ್ಲಿ ಕುಳಿತಿದ್ದ ನಾನು ಹಾಗೆಯೇ ಕುಳಿತಿದ್ದೆ. ಜಾಗೃತನಾಗಿದ್ದದ್ದು ಸ್ಪಷ್ಟವಾಗಿ ಅರಿವಿನಲ್ಲಿತ್ತು. ಪ್ರಥಮ ಬಾರಿಗೆ 'ಭಾವ'ಲೋಕದ ಯಾನದ ಉತ್ಕಟತೆಯನ್ನು ಅನುಭವಿಸಿದೆ.
ಇದೇನಿದು? ಈ ಅನುಭವಗಳ ಮರ್ಮವೇನು? ನಾನು ಇವುಗಳನ್ನು ಮನೋವಿಜ್ಞಾನದ ದೃಷ್ಟಿಯಿಂದ ಅರಿಯಲು ಹೋಗಿ ಕೊನೆಗೆ ಏನು ಮಾಡಿದೆ? ಅಸಲಿಗೆ ತಂತ್ರ ವಿದ್ಯೆ ಎಂದರೇನು? ತಂತ್ರವೆಂದರೆ ಮಾಟ,ಮಂತ್ರಗಳ ಆಟವೇ? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.
No comments:
Post a Comment