ದೀಕ್ಷೆ ನೀಡುವ ಎರಡು ದಿನಗಳ ಮುಂಚೆ ನಾನು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಹೇಳಿದರು. ನಾನು ತರಬೇಕಾದ ವಸ್ತುಗಳ ಪಟ್ಟಿ ನೀಡಿದರು. ಕೌಪೀನ ಧರಿಸಿ ಬಿಳಿಯ ಪಂಚೆ ಹಾಗೂ ಬಿಳಿಯ ವಸ್ತ್ರವನ್ನು ತರಲೂ ಹೇಳಿದ್ದರು. ಕೊನೆಗೆ ಶಿಖೆ(ಜುಟ್ಟು)ಯನ್ನು ಬಿಟ್ಟು ಕೇಶಮುಂಡನ ಮಾಡಿ ಬೆಳಗಿನ ಝಾವ ಮೂರು ಘಂಟೆಯ ಹೊತ್ತಿಗೆ ನೇತ್ರಾವತಿ ನದೀ ತೀರದ ಬಳಿ ಬರಲು ಸೂಚಿಸಿದರು.
ಬೇರೆ ಎಲ್ಲಾದಕ್ಕೂ ನನ್ನ ಸಹಮತಿ ಇದ್ದರೂ, 'ಈ ಜುಟ್ಟು ಬೇಕೇ?' ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಲೇ ಇತ್ತು. ಕೇಳಲು ಸಂಕೋಚ ಹಾಗೂ ಭಯ. 'ಹಾಗಾದರೆ ಬೇಡ ಬಿಡು' ಎಂದು ಕೋಪಿಸಿಕೊಂಡರೆ? ಎಂಬ ಆತಂಕಕ್ಕೆ ಒಳಗಾಗಿದ್ದೆ. ಸಾಕಷ್ಟು ಯೋಚಿಸಿ ನಯವಾಗಿ ಕೇಳಿದೆ 'ನನಗೊಂದು ಕುತೂಹಲ, ತಪ್ಪು ತಿಳಿದು ಕೊಳ್ಳಬೇಡಿ. ಮೂರು ಘಂಟೆಗೆ ಎದ್ದು ಬರುವುದು.. ಜುಟ್ಟು ಬಿಡುವುದು.. ಮುಂತಾದುವುಗಳಿಗೂ, ಸಾಧನೆಗಳಿಗೂ ನಿಜವಾಗಿ ಏನಾದರೂ ಸಂಬಂಧವಿದೆಯೇ? ನಾನು ನೀವು ಹೇಳಿದ ಹಾಗೆಯೇ ಖಂಡಿತ ಮಾಡುತ್ತೇನೆ, ಆದರೆ ಒಂದು ಸಣ್ಣ ಕುತೂಹಲ ಅಷ್ಟೇ..'
'ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಪುಸ್ತಕ ಓದಿದರೆ ಸಾಕಲ್ಲವೇ? ಸಮವಸ್ತ್ರ, ಹಾಜರಾತಿ ಮುಂತಾದವು ಏಕೆ ಬೇಕು ಅನ್ನಿಸಬಹುದು ಅಲ್ಲವೇ? ವಿದ್ಯೆಯ ಜೊತೆಯಲ್ಲಿ ಶಿಸ್ತು, ಸಂಯಮ, ಸಮಾನತೆಗಳನ್ನು ಕಲಿಸಲು ಇದು ನೆರವಾಗುತ್ತದೆ. ಅದೇ ರೀತಿ ತಾಂತ್ರಿಕ ವಿದ್ಯೆಗೂ ಮೆರಗು ಕೊಡುವುದು ಶಿಸ್ತುಬದ್ಧ ಸಂಯಮದ ಜೀವನ ಕ್ರಮ. ಇದಲ್ಲದೇ ಬ್ರಾಹ್ಮೀ ಮುಹೂರ್ತದ ವೈಶಿಷ್ಟ್ಯಹಾಗೂ ಮನಸ್ಸಿನ ತರಬೇತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಮುಂದೆ ಇದರ ಗುಟ್ಟು ನಿನಗೇ ಅರಿವಾಗುತ್ತದೆ' ಎಂದು ಕಿವಿಹಿಂಡಿದ ಹಾಗೆ ಹೇಳಿದರು.
ತಾರ್ಕಿಕವಾಗಿ ನಾನದನ್ನು ಒಪ್ಪಿಕೊಳ್ಳಲೇಬೇಕಿತ್ತು. ಆದರೆ ನನ್ನ ಮನಸ್ಸಿನಲ್ಲಿದ್ದ ದುಗುಡ ಬೇರೆಯೇ ಇತ್ತು. ಜುಟ್ಟು ಬಿಟ್ಟು ಓಡಾಡಿದರೆ ಏನೋ ಕಪಟಿಯ ಮುಖವಾಡ ಧರಿಸಿದಂತಾಗುತ್ತದೆಯೇನೋ ಎಂಬ ಶಂಕೆ ಇತ್ತು. ಏಕೆಂದರೆ 'ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂಬ ಕನಕದಾಸರ ಸಾಹಿತ್ಯದ ಸಾಲುಗಳು ತಲೆಯಲ್ಲಿ ಗಟ್ಟಿಯಾಗಿ ಕುಳಿತಿದ್ದವು. ಆದರೂ ಸುಮ್ಮನೆ ತಲೆಯಾಡಿಸಿದೆ.
'ಈ ಜಪಮಾಲೆಯನ್ನು ತೆಗೆದು ಕೋ' ಎಂದು ಹೇಳುತ್ತಾ ತಮ್ಮ ಜೋಳಿಗೆಯಿಂದ ಒಂದು ಜಪಮಾಲೆಯನ್ನು ನೀಡಿದರು. ಅದರ ಜೊತೆಯಲ್ಲಿಯೇ ಒಂದು ವಿಶೇಷ ಪರಿಮಳವಿರುವ ನೀರಿನ ಒಂದು ತಂಬಿಗೆಯನ್ನು ನೀಡಿದರು. ಮಂತ್ರವನ್ನು ಹೇಳುತ್ತಾ ನಿನ್ನ ಜಪಮಾಲೆಯನ್ನು ಇದರಲ್ಲಿ ಅದ್ದಿಟ್ಟುಕೋ, ರಾತ್ರಿ ಮಲಗುವ ಮುನ್ನ ಜಪಮಾಲೆಯನ್ನು ಹೊರಗೆ ತೆಗೆದು ಒಂದೆಡೆ ತೂಗಿಹಾಕು. ಇದನ್ನು ಮರೆಯದೇ ದೀಕ್ಷೆಯ ದಿನ ತೆಗೆದುಕೊಂಡು ಬಾ' ಎಂದು ಹೇಳಿ, ಹೇಳಬೇಕಾದ ಮಂತ್ರವನ್ನು ಕಿವಿಯಲ್ಲಿ ಹೇಳಿದರು.
ಗುರುಗಳು ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಒಟ್ಟುಮಾಡಿದೆ. ಅವರ ಎಲ್ಲಾ ಆಣತಿಗಳನ್ನು ಪರಿಪಾಲಿಸಿದೆ. ಕೊನೆಯದಾಗಿ ಕೇಶಮುಂಡನ ! 'ಭೂತದ ಓಣಿ'(ಆ ಓಣಿಯಲ್ಲಿ ದೈವಸ್ಥಾನವೊಂದು ಇದ್ದುದರಿಂದ ಅದನ್ನು ಭೂತದ ಓಣಿ ಎಂದು ಕರೆಯುತ್ತಾರೆ)ಯಲ್ಲಿದ್ದ ಕ್ಷೌರಿಕನ ಬಳಿ ಹೋಗಿ, ಕೇಶರಾಶಿಯಿಂದ ಕಂಗೊಳಿಸುತ್ತಿದ್ದ ನನ್ನ ತಲೆಯನ್ನು ನೀಡಿದೆ. ತಲೆಯೆತ್ತಿ ನೋಡಿದಾಗ ನನ್ನದೇ ಬೋಳುತಲೆ ಕಾಣಿಸಿತು. ತಲೆಯ ಹಿಂದೆ ಒಂದು ಕನ್ನಡಿ ಹಿಡಿದು ಆತ ತೋರಿಸಿದ. ಪ್ರಥಮಬಾರಿಗೆ ನನ್ನ ತಲೆಯ ಹಿಂದೆ ಜುಟ್ಟೊಂದನ್ನು ನೋಡಿದೆ. ನನಗೇ ನಗು ಬಂತು. ಮನಸ್ಸಿನಲ್ಲಿಯೇ ನಕ್ಕೆ.
ವಾಪಸ್ ಹೋಗುವಾಗ ದಾರಿಯಲ್ಲಿ ಹಳೆಯ ಗೆಳೆಯನೊಬ್ಬ ಎದುರಾಗಿ ಕೇಳಿದ 'ಪ್ರವೀಣಾ, ಒಂದು ಮಾತು ಕೇಳ್ತೀನಿ. ಬೇಜಾರು ಮಾಡಿಕೋಬೇಡ. ನಿಜವಾಗಿ ಏನಾಯ್ತು? ಯಾವ ಹುಡುಗಿ ಕೈಕೊಟ್ಟಳು? ನನ್ನತ್ರ ಹೇಳು ಪರ್ವಾಗಿಲ್ಲ, ನಾನು ಯಾರ ಬಳಿಯೂ ಹೇಳುವುದಿಲ್ಲ'
ಇವನಿಗೆ ಏನೆಂದು ಉತ್ತರ ಕೊಡುವುದು? ಯಾರೂ ಕೈಕೊಟ್ಟಿಲ್ಲ ಎಂದರೆ ಈತ ನಂಬುವುದಿಲ್ಲ, ಏಕೆಂದರೆ ಆತನಾಗಲೇ ಅದನ್ನು ತೀರ್ಮಾನಿಸಿಬಿಟ್ಟಿದ್ದ. ನಂತರ ಹೇಳಿದ 'ನಾನು ಯಾರ ಬಳಿಯೂ ಹೇಳುವುದಿಲ್ಲ' ಎಂಬ ಮಾತು ಅಪ್ಪಟ ಸುಳ್ಳಾಗಿತ್ತು. ಏಕೆಂದರೆ ಆತ 'ಆಲ್ ಇಂಡಿಯಾ ರೇಡಿಯೋ' ಎಂದು ಪ್ರಖ್ಯಾತನಾಗಿದ್ದ. ಆದರೂ ಸೌಜನ್ಯಕ್ಕಾಗಿ ಹೇಳಿದೆ 'ಇಲ್ಲಪ್ಪ ಆ ಥರ ನಿಜವಾಗಿ ಏನೂ ಇಲ್ಲ'.
'ಒಂದಲ್ಲ ಒಂದು ದಿವಸ ನಿನ್ನ ಬಾಯಿ ಬಿಡಿಸ್ತೀನಿ' ಎಂದು ಹೇಳಿ ಹುಳ್ಳಗೆ ನಕ್ಕು ಹೋದ.
ನಾನು ನಮ್ಮ ದೇವಸ್ಥಾನ ತಲುಪುವವರೆಗೂ ಎಲ್ಲರೂ ಅಚ್ಚರಿಯಿಂದ ನನ್ನನ್ನು ನೋಡುವವರೇ! ಗುಸಗುಸ ಮಾತನಾಡುವವರೇ! ಇನ್ನು ಮುಂದೆ ನನ್ನ ದಾರಿ ನನ್ನದು ಎಂದುಕೊಂಡು ಸಾಗುತ್ತಿರುವುದು ಅಷ್ಟೇ ಎಂದು ಮನಸ್ಸಿನಲ್ಲೇ ಅಂದುಕೊಂಡು ರಪರಪನೆ ಹೆಜ್ಜೆ ಹಾಕಿದೆ.
No comments:
Post a Comment