Friday 25 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 19

        ನಾನು ಬಂಟವಾಳದಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಉಪಾಸನೆಯಿಂದ ಇನ್ನೊಂದು ಉಪಾಸನೆಯ ನಡುವೆ ನನಗೆ ಸಾಕಷ್ಟು ಬಿಡುವು ಸಿಗುತ್ತಿತ್ತು. ಅನುಷ್ಠಾನ ಮಾಡುತ್ತಿರುವಾಗಲೂ ಸಂಜೆಯ ವೇಳೆ ನನಗೆ ಬಿಡುವು ಸಿಗುತ್ತಿತ್ತು. 'ಈ ಉಪಾಸನೆಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಹುದೇ? ಹೋಟೆಲ್ ತಿಂಡಿ ಕಾಫಿ ಕುಡಿಯಬಹುದೇ?'  ಗುರುಗಳ ಬಳಿ ಕೇಳಿದ್ದೆ. 'ದೇವರಿಗೆ ಅರ್ಪಿಸುವ ನೈವೇದ್ಯವನ್ನುಮಾತ್ರ ನೀನೇ ಮಾಡು. ಏಕೆಂದರೆ ಹೊರಗಿನ ತಿಂಡಿಯ ಶುದ್ಧತೆಯ ಬಗ್ಗೆ ನನಗೆ ಅನುಮಾನಗಳಿವೆ. ಅದು ನಿನ್ನನ್ನು ಮುಂದೆ ಪ್ರಶ್ನೆಯಾಗಿ ಕಾಡಬಾರದು. ನೀನು ಏನು ಬೇಕಾದರೂ ತಿನ್ನಬಹುದು, ತಂತ್ರಶಾಸ್ತ್ರದಲ್ಲಿ ತಿನ್ನುವುದಕ್ಕೆ ಕಡಿವಾಣವಿಲ್ಲ. ಆರೋಗ್ಯಕ್ಕೆ ಒಳ್ಳೆಯದನ್ನು ನೋಡಿ ತಿನ್ನು. ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ರಾಜಸಿಕ ಸ್ವಭಾವ ಬೆಳೆಸುತ್ತದೆ ಎಂದೆಲ್ಲಾ ಹೇಳುತ್ತಾರೆ. ಮನಸ್ಸನ್ನು ಗಟ್ಟಿ ಮಾಡಿದರೆ ಇವೆಲ್ಲಾ ಏನೂ ಲೆಕ್ಕಕ್ಕಿಲ್ಲ' ಎಂದು ಉತ್ತರಿಸಿ ನನಗೆ ಮಹದುಪಕಾರವನ್ನು ಮಾಡಿದರು. ಏಕೆಂದರೆ ನಾನು ರುಚಿರುಚಿಯಾಗಿ ತಿಂಡಿ ತಿನ್ನುತ್ತಿದ್ದ ಮನುಷ್ಯ. ನಾನು ನನಗಾಗಿ ಕೇವಲ ಅನ್ನ ಸಾರು ಮಾಡಿಕೊಂಡರೂ ತುಪ್ಪ ಹಾಗೂ ಅಪ್ಪೆಮಿಡಿ ಉಪ್ಪಿನಕಾಯಿ ಜೊತೆಯಲ್ಲಿರುತ್ತಿತ್ತು. ಅಲ್ಲದೇ 'ವಿಷ್ಣು ವಿಲಾಸ' ಹೋಟೆಲಿನ ಬಿಸ್ಕುಟ್ ರೊಟ್ಟಿ, ಬಿಸ್ಕುಟ್ ಆಂಬೊಡೆ, ಮಿಕ್ಸ್ಚರ್ ರೊಟ್ಟಿ, ತುಪ್ಪದ ದೋಸೆ ಮುಂತಾದವು ನನ್ನ ಮೆಚ್ಚಿನ ತಿನಿಸುಗಳಾಗಿದ್ದವು. ಅದಲ್ಲದೇ ಸಂಜೆಯ ವೇಳೆಯಲ್ಲಿ 'ಪೋಡಿ ದಾಮ್ಮ'ನ ಅಂಗಡಿಯ ಬಜೆ (ಬಜ್ಜಿ), ಅಂಬಡೆಗಳು, 'ಅರ್ಲಾ ಸುಬ್ಬ'ನ ಅಂಗಡಿಯ ಸಿಹಿತಿನಿಸುಗಳು, 'ಮುಕುಂದ'ನ ಅಂಗಡಿಯ ಚುರುಮುರಿ... ಇವೆಲ್ಲವೂ ತಿನ್ನುತ್ತಿದ್ದೆ. ಒಂದೇ ದಿನ ಅಲ್ಲ, ಬೇರೆ ಬೇರೆ ದಿನ ! 
        ಸಂಜೆಯಾದಮೇಲೆ ಯಶವಂತ ವ್ಯಾಯಾಮ ಶಾಲೆಯಲ್ಲಿ ಪ್ರತಿ ದಿನ ಎನ್ನುವಂತೇ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ್ ಬಾಳಿಗಾ ಸಿಗುತ್ತಿದ್ದರು. ಭಾಮೀ ಸುಧಾಕರ್, ಸುಬ್ರಾಯ ಬಾಳಿಗಾ, ಗುರು ಮುಂತಾದವರಲ್ಲದೇ ಹಲವು ಗೆಳೆಯರು ಅಲ್ಲಿ ಸಿಗುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ರೀತಿ ನನಗೆ ನೆರವಾದವರೇ. ಭವಾನಿ ಅಕ್ಕನ ಮನೆಗೆ ಹೋದರೆ ಏನಾದರೂ ತಿನ್ನಿಸದೇ ಬಿಡುತ್ತಿರಲಿಲ್ಲ. ದೇವಸ್ಥಾನದ ಎದುರಿಗಿರುವ ಶ್ರೀ ಕೃಷ್ಣ ಮಠಕ್ಕೆ ಹೋದರೆ ಜನ್ನ ಭಟ್ಟರ ಶ್ರೀಮತಿಯವರೂ ಪ್ರೀತಿಯಿಂದ ಏನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ದೊಡ್ಡಪ್ಪ ರಾಮ್ ನಾಯಕ್ ಹಾಗೂ ದೊಡ್ಡಮ್ಮ ಪ್ರೇಮಾ ನಾಯಕ್ ಅವರು ತುಂಬಾ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದರು. ಇವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶವೆಂದು ಭಾವಿಸಿ, ಈ ಮೂಲಕ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ. 
        ನಾನು ಏನು ಮಾಡುತ್ತಿದ್ದೇನೆಂದು ಯಾರ ಬಳಿಯೂ ವಿವರವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳಿಗಾಗಿ ಮಾತ್ರ ಬರುತ್ತಿದ್ದ ನನ್ನ ಗುರುಗಳಂತೂ ಯಾರನ್ನೂ ಭೇಟಿಯಾಗಲು ಸಿದ್ಧರಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು, ಬಂದದ್ದು ಹೋಗಿದ್ದು ಎರಡೂ ಗೊತ್ತಾಗದಂತೆ ಇರುತ್ತಿದ್ದರು. 
        ನಾನು ಮೊದಲಿನಿಂದಲೂ ಸಾಮಾನ್ಯ ಮನುಷ್ಯನ ಹಾಗೆ ನನಗೆ ಬೇಕಾದ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಿದ್ದೆ. ನಾನು ಯಾರಿಗೂ ಯಾವ ಗುಟ್ಟು ಬಿಟ್ಟುಕೊಡದಿದ್ದರೂ, ನಮ್ಮ ಓಣಿಯಲ್ಲಿಯೇ ಇದ್ದ ಹರಿಭಟ್ಟರು ಒಮ್ಮೆ ಬೆಳಗಿನ ಜಾವ ನದಿಯ ಬಳಿ ಹೋಗುತ್ತಿದ್ದಾಗ ಗಮನಿಸಿದರು. ಆನಂತರ ಹಲವಾರು ಬಾರಿ ನನ್ನನ್ನು ಗಮನಿಸಿ ನಾನು ಏನು ಮಾಡುತ್ತಿದ್ದೇನೆಂದು ಅವರಾಗಿಯೇ ತಿಳಿದುಕೊಂಡರು. ಅವರ ಬಳಿ ಮಾತ್ರ ನಾನು ಮುಕ್ತವಾಗಿ ನನ್ನ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಕೂಡಾ ದೇವರ ಉಪಾಸನೆಯ ಬಗ್ಗೆ ಒಲವಿತ್ತು. ವೇದಗಳಲ್ಲಿ ಪರಿಣಿತರು. ನನ್ನ ಹಲವು ಸಮಸ್ಯೆಗಳಿಗೆ ವೇದಸೂಕ್ತಗಳಿಂದ ಉತ್ತರ ಕೊಡುತ್ತಿದ್ದರು. ಅವರಿಗೂ ನನ್ನದೊಂದು ಹೃತ್ಪೂರ್ವಕ ನಮನ. 'ಮಾಣೂರು ಅಚ್ಚು' ನನಗೆ ಅಚ್ಚುಮೆಚ್ಚಾಗಿದ್ದರು. ನಾನು ಏನು ಕೇಳಿದರೂ ಅದು ಎಷ್ಟೇ ಕಷ್ಟವಾದರೂ ಅವರು ಅದನ್ನು ಪೂರೈಸುತ್ತಿದ್ದರು. ಇಂದು ಆತ ನಮ್ಮೊಡನೆ ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. 
        ಕೆಲವೊಮ್ಮೆ ನನಗೆ ಕೆಲವು ಸಮಸ್ಯೆಗಳನ್ನು ನಿವಾರಿಸುವ ಕೆಲಸ ಬಂದೊದಗುತ್ತಿತ್ತು. ಉದಾಹರಣೆಗೆ 'ಒಂದು ಹುಡುಗಿಯ ಮೈಮೇಲೆ ದೆವ್ವವೊಂದು ಬಂದು ಕಾಡುತ್ತಿದೆ, ನೀವು ಸರಿ ಮಾಡಲು ಸಾಧ್ಯವೇ?' ಎಂದು ಕೇಳಿದಾಗ ನಾನು ಒಪ್ಪಿಕೊಂಡು ಹೋಗಿ (ಸಮ್ಮೋಹಿನೀ ವಿದ್ಯೆಯಿಂದ) ಆಕೆಯ ಮನಃಸ್ವಾಸ್ಥ್ಯವನ್ನು ಸರಿಪಡಿಸಿ ಬರುತ್ತಿದ್ದೆ. ಇಂತಹ ಹತ್ತು ಹಲವು ಕೆಲಸಗಳಿಂದ ಒಂದಷ್ಟು ಜನರಿಗೆ ಹತ್ತಿರವಾಗಿದ್ದೆ. 
        ನಾನು ಹೊರಡುವ ದಿನ ಹತ್ತಿರ ಬರುತ್ತಿದ್ದಂತೇ ಒಂದು ದಿನ ಮಾಣೂರು ಅಚ್ಚು ನನ್ನ ಬಳಿ ಬಂದು, ಒಂದು ಪಂಚೆ, ಒಂದು ಚೌಕ ನನಗೆ ಕೊಟ್ಟು 'ಇದು ನನ್ನ ಕಡೆಯಿಂದ'  ಎಂದು ಹೇಳಿ ಒಂದು ಶಾಲನ್ನು ಹೊದೆಸಿದ. 'ನೀನು ಇಲ್ಲಿಯೇ ಇರುವ ಹಾಗಿದ್ದರೆ ಒಂದು ಸಣ್ಣ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿ ಕೊಟ್ಟು, ಒಂದಷ್ಟು ಹಣವನ್ನು ನಿನ್ನ ಹೆಸರಲ್ಲಿ ಬ್ಯಾಂಕಲ್ಲಿ ಹಾಕಿಡಲು ನನ್ನ ಕೆಲವು ಗೆಳೆಯರು ಹಾಗೂ ಸಂಬಂಧಿಕರು ಸಿದ್ಧರಿದ್ದಾರೆ' ಎಂದು ಆತ ಹೇಳಿದಾಗ ನಂಗೆ ಅಚ್ಚರಿ ಹಾಗೂ ನಗು!
'ಅಂತೂ ನನಗೆ ಗುರುವಿನ ಪಟ್ಟ ಕಟ್ಟಿ ಇಲ್ಲಿಯೇ ಕೂರಿಸುವ ಇರಾದೆ ನಿಮಗೆ, ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ನಾನು ಮನೆಯಲ್ಲಿ ಎರಡು ವರ್ಷಗಳ ನಂತರ ಹಿಂತಿರುಗಿ ಬರುತ್ತೇನೆಂದು ಮಾತುಕೊಟ್ಟು ಬಂದಿದ್ದೇನೆ' ಎಂದು ಹೇಳಿದೆ. ಆತನ ಪ್ರೀತಿಯನ್ನು ನಾನೆಂದೂ ಮರೆಯಲಾರೆ. 
        ಬೆಂಗಳೂರಿಗೆ ಬಂದ ಮೇಲೆ ನಾನು ನನ್ನ ಹವ್ಯಾಸವಾಗಿದ್ದ
ಛಾಯಾಚಿತ್ರಗಾರಿಕೆಯನ್ನು ನನ್ನ ಕಸುಬಾಗಿ ಮಾಡಿಕೊಂಡೆ.
'ಗುರು'ವಾಗುವ ಬದಲು ಸಿನೆಮಾ ಪತ್ರಿಕೆಗಳ 'ಗ್ಲಾಮರ್' ಛಾಯಾಗ್ರಾಹಕನಾದೆ. 


ಬೆಂಗಳೂರಿಗೆ ಬಂದು ಒಂದೆರಡು ವರ್ಷಗಳ ನಂತರ ಬೀರುವಿನಲ್ಲಿ ಇಟ್ಟಿದ್ದ 'ಅಚ್ಚು' ನೀಡಿದ್ದ ಬಟ್ಟೆಗಳನ್ನು ಒಮ್ಮೆ ಕಂಡೆ. ಗಡ್ಡವನ್ನು ಹೇಗೂ ಬಿಟ್ಟಿದ್ದೆ. 'ಗುರುವಾಗಿದ್ದರೆ ಹೇಗಿರುತ್ತಿದ್ದೆ' ಎಂದು ಯೋಚಿಸಿ ಆ ಚೌಕವನ್ನು ತಲೆಗೆ ಸುತ್ತಿಕೊಂಡು ಆ ಶಾಲನ್ನು ಹೊದ್ದುಕೊಂಡು ಒಂದೆರಡು ಚಿತ್ರಗಳನ್ನು ತೆಗೆಸಿಕೊಂಡೆ. 



        ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ. ಅದರಲ್ಲಿರುವ ಸಾಧಕ ಬಾಧಕಗಳೇನು?  'ತಂತ್ರ'ವನ್ನು ಮನೋವಿಜ್ಞಾನದ ದೃಷ್ಠಿಯಲ್ಲಿ ನೋಡುವುದು ಹೇಗೆ ?       
....ಮುಂದಿನ ಸಂಚಿಕೆಯಲ್ಲಿ.                                  

No comments:

Post a Comment