Friday 11 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 9


        ದೀಕ್ಷೆ ನೀಡಿದ ನಂತರ ಎರಡು ದಿನಗಳು ನನ್ನೊಂದಿಗಿದ್ದ ಗುರುಗಳು ನಂತರ ತಮ್ಮ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗುವವರಿದ್ದರು. ಹೊರಡುವ ಮುನ್ನ ಒಮ್ಮೆ ನದೀ ತೀರದಲ್ಲಿ ಕುಳಿತು ತಂತ್ರ ವಿದ್ಯೆಯ ಮಹತ್ವ ಹಾಗೂ ಅನುಷ್ಠಾನದ  ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 'ತಂತ್ರ ವಿದ್ಯೆಯ ಪ್ರಥಮ ಗುರು ಶಿವ. ದೇವಾನುದೇವತೆಗಳಿಗೂ ದುರ್ಲಭ ಎನ್ನುವಂತಹ ಈ ವಿದ್ಯೆಯನ್ನು ಶಿವನು ಪ್ರಥಮ ಬಾರಿ ಪಾರ್ವತಿಗೆ ಬೋಧಿಸುತ್ತಾನೆ. ಈ ವಿದ್ಯೆಗೆ ಅರ್ಹರಾಗುವವರು ಅದೃಷ್ಟವಂತರು. ಇದನ್ನು ಪಡೆದ ಮೇಲೆ, ಈ ವಿದ್ಯೆಯ ಮರ್ಮವನ್ನು ಸಾಧಿಸಿಕೊಂಡ ಮೇಲೆ ನಿಜವಾಗಿಯೂ ಅರ್ಹರು ಎಂದು ಅನ್ನಿಸಿದರೆ ಮಾತ್ರ ಅವರಿಗೆ ಕಲಿಸಬಹುದು. ಅದನ್ನು ಆಸಕ್ತಿಯಿಂದ ಬೇಡಿಕೊಂಡು ಬಂದವರಿಗೆ ಮಾತ್ರ ನೀನು ಕಲಿಸು. ನೀನಾಗಿಯೇ ಯಾರ ಮೇಲೂ ಹೇರಲು ಹೋಗಬೇಡ. ಮಂತ್ರ ಸಿದ್ಧಿಯಾದ ಮೇಲೆ ಅನವಶ್ಯಕ ಪ್ರಯೋಗಗಳನ್ನು ಮಾಡಬೇಡ. ದೇವೀ ಪೂಜೆಯ ಆರಂಭದಲ್ಲಿ ಆಕೆಯ ಪರಿವಾರದೊಂದಿಗೆ, ಆಕೆಯ ವಾಹನದೊಂದಿಗೆ ಹೇಗೆ ದೇವಿಯನ್ನು ಆಹ್ವಾನಿಸುವೆಯೋ ಹಾಗೆಯೇ ಮುಗಿಸುವಾಗ ಅವಳನ್ನು ಆಕೆಯ ಸ್ವಸ್ಥಾನಕ್ಕೆ ಕಳಿಸಲು ಮರೆಯಬೇಡ. ಪ್ರತಿದಿನ ಒಮ್ಮೆ ಜಪ,ಧ್ಯಾನಕ್ಕೆ ಕುಳಿತರೆ ಹತ್ತುಸಾವಿರ ಜಪ ಮುಗಿಯುವವರೆಗೆ ಅಲ್ಲಿಂದ ಏಳಬೇಡ. ಪೂಜೆ ಮಾಡುವಾಗ ವಿಧಿವಿಧಾನಗಳು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದುದು 'ಭಾವ.' ತಾಯಿಯ ಭಾವ ಅತ್ಯಂತ ಕರುಣಾಭರಿತವಾದದ್ದು, ವಾತ್ಸಲ್ಯದಿಂದ ತುಂಬಿರುವಂತಹದ್ದು. 'ಅಮ್ಮಾ' ಎಂದು ಕರೆಯುವಾಗ ಹೃದಯ ತುಂಬಿ ಕರೆಯಬೇಕು. ಆಕೆಗೆ ಸಂಪೂರ್ಣವಾಗಿ ಶರಣಾಗಬೇಕು. ಸಮರ್ಪಣಾಭಾವ ಅತ್ಯಂತ ಮುಖ್ಯ. ಎಲ್ಲವನ್ನೂ ಆಕೆಗೆ ಅರ್ಪಿಸಿಕೊಳ್ಳಬೇಕು. ಗಮನ ಅತ್ತಿತ್ತ ಹೋದರೂ ಮತ್ತೆ ಎಳೆದು ತಂದು ಆಕೆಯ ಪಾದಕಮಲಗಳಲ್ಲಿ ಸ್ಥಿರವಾಗಿರಿಸು. ಯಾವ ಕಾರಣಕ್ಕೂ ನಿರಾಶನಾಗಬೇಡ. ನಿನ್ನ ಶ್ರದ್ಧೆಗೆ, ಉಪಾಸನೆಗೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ನಿನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಬೇಡ. ಹಣ್ಣುಹಂಪಲು ಅಥವಾ ಸ್ವಯಂಪಾಕವನ್ನೇ ಆಕೆಗೆ ನೈವೇದ್ಯವಾಗಿ ಅರ್ಪಿಸು. ನಾನು ಉತ್ತರಭಾರತದೆಡೆ ಹೊರಡುತ್ತಿದ್ದೇನೆ. ಸುಮಾರು ಇಪ್ಪತ್ತು ದಿನಗಳ ನಂತರ ಮತ್ತೆ ಬರುತ್ತೇನೆ. ಅಲ್ಲಿಯವರೆಗೂ ನಾನು ಹೇಳಿಕೊಟ್ಟ ವಿಧಿವಿಧಾನಗಳೊಂದಿಗೆ ನಿನ್ನ ಸಾಧನೆಯನ್ನು ಮುಂದುವರೆಸು. ನಿನಗೆ ಒಳ್ಳೆಯದಾಗಲಿ' ಎಂದು ಆಶೀರ್ವದಿಸಿ ಹೊರಟರು. ತಂದೆಯಂತೆ, ಗೆಳೆಯನಂತೆ ಜೊತೆಗಿದ್ದ ಗುರುಗಳು ಕೆಲದಿನಗಳ ಮಟ್ಟಿಗೆ ಹೊರಟಾಗ  ಒಮ್ಮೆಗೇ ಒಂಟಿತನ ನನ್ನನ್ನು ಕಾಡಿತು. ಇಲ್ಲಿಂದ ಮುಂದೆ ನನ್ನದು ಏಕಾಂಗಿ ಪಯಣ ! 

        ಪ್ರತಿದಿನ ಬೆಳಿಗ್ಗೆ ಮೂರು ಘಂಟೆಗೆ ಏಳುವುದು, ಪ್ರಾತಃಕ್ರಿಯೆಗಳನ್ನು ಮುಗಿಸಿ ದೇವಿಯ ಉಪಾಸನೆ ಮಾಡುವುದು. ಸಂಜೆಯ ನಂತರ ಒಂದಷ್ಟು ಕಾಲ ವ್ಯಾಯಾಮಶಾಲೆಗೆ ಹೋಗಿ ಗೆಳೆಯರೊಂದಿಗೆ ಕಳೆಯುವುದು.. ಇದು ನನ್ನ ದಿನಚರಿಯಾಗಿ ಹೋಯಿತು. ಒಂದು ವಾರ ಕಳೆಯುವುದರೊಳಗೆ ಒಂದಷ್ಟು ನಿರಾಸೆ, ಒಂದಷ್ಟು ಹತಾಶೆ ಮೂಡಲಾರಂಭಿಸಿದವು. 'ಏನಾಗುತ್ತಿದೆ? ಯಾವುದೇ ಅನುಭವಗಳು ಸಿಗುತ್ತಿಲ್ಲ. ಯಾಂತ್ರಿಕವಾಗಿ ಬದುಕು ಸಾಗುತ್ತಿದೆಯೇ? ಫಲಪ್ರಾಪ್ತಿಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸುಮ್ಮನೆ ಸಮಯ ಕಳೆಯುತ್ತಿದ್ದೇನೆಯೇ?' ಎಂಬೆಲ್ಲ ಪ್ರಶ್ನೆಗಳು ಮನಸ್ಸಿನೊಳಗೆ ನುಸುಳಲಾರಂಭಿಸಿದವು. ಹಾಗೆ ಅನಿಸಿದಾಗೆಲ್ಲ  ಮೈ ಕೊಡವಿ ಎಚ್ಚೆತ್ತುಕೊಳ್ಳುತ್ತಿದ್ದೆ. 'ಇಲ್ಲ, ನಾನಿದನ್ನು ಸಾಧಿಸಿಯೇ ತೀರುತ್ತೇನೆ' ಎಂದು ಹೇಳಿಕೊಂಡು ದೇಹಕ್ಕೆ ದಣಿವಾದರೂ ಛಲದಿಂದ ಮುಂದುವರೆಯುತ್ತಿದ್ದೆ. ಏನಾದರೂ ಸಲಹೆ ಕೇಳೋಣವೆಂದರೆ ಗುರುಗಳು ಬಳಿಯಲ್ಲಿಲ್ಲ. ಗೆಳೆಯರ ಬಳಿ ಚರ್ಚೆ ಮಾಡಲು ಮನಸ್ಸಿರಲಿಲ್ಲ. ಧೃಢನಿರ್ಧಾರದಿಂದ ಮುಂದೆ ನಡೆಯುತ್ತಿದ್ದೆ. ದಿನಗಳು ಕಳೆದಂತೆ ದೇವೀಮೂರ್ತಿಯೊಂದಿಗೆ ಒಂದು ಪವಿತ್ರ ಮಾತೃತ್ವದ ಅನುಬಂಧ ಬೆಳೆಯುತ್ತಿತ್ತು. 

        ಪೂಜಾವಿಧಾನದಲ್ಲಿ ಮೂರ್ತಿಯಲ್ಲಿ ದೇವಿಯನ್ನು ಆಕೆಯ ಪರಿವಾರಸಮೇತವಾಗಿ ಆವಾಹನೆ ಮಾಡಿ ಪಾದ್ಯ, ಅರ್ಘ್ಯ, ಘಂಟಾನಾದ, ಧೂಪ, ದೀಪ, ನೈವೇದ್ಯ ಇತ್ಯಾದಿಯಾಗಿ ಅರ್ಪಿಸುವುದು ವಾಡಿಕೆಯಾಗಿತ್ತು. ಆರಂಭದಲ್ಲಿ ವಿಧಿವಿಧಾನಗಳಂತೇ ಆಚರಿಸುತ್ತಿದ್ದರೂ ಕೆಲದಿನಗಳಲ್ಲೇ ಇವುಗಳನ್ನೆಲ್ಲಾ ಪ್ರೀತಿಯಿಂದ ಭಾವುಕನಾಗಿ ಅನುಭವಿಸುವಂತಾದೆ. 'ಅಮ್ಮಾ' ಎಂದು  ದೇವಿಯ ಮೂರ್ತಿಯನ್ನು ಎದೆಗಪ್ಪಿಕೊಂಡಾಗ ಕಣ್ಣಲ್ಲಿ ತಾನಾಗೇ ನೀರು ತುಂಬಿ ಬರುತ್ತಿತ್ತು. 

ಅದೊಂದು ದಿನ !
        ಶ್ರೀಚಕ್ರ ಯಂತ್ರವನ್ನು ಬರೆದಿರುವಂತಹ ತಾಮ್ರದ ಹಾಳೆಯ ಮೇಲೆ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾವಿಧಿಯನ್ನು ಪ್ರಾರಂಭಿಸಿದ್ದೆ. ದೇವಿಯ ಆವಾಹನೆಯನ್ನು ಮಾಡಿ ಆಕೆಗೆ ಅರ್ಘ್ಯಾದಿ ಉಪಚಾರಗಳನ್ನು ಮಾಡಲು ಸಿದ್ಧನಾಗಿದ್ದೆ. ಆರಂಭದಲ್ಲಿ ಪ್ರಾಣಪ್ರತಿಷ್ಠೆ ಮಾಡುವ ಮುನ್ನ ಒಂದು ವಿಚಿತ್ರ ಅನುಭವ ಘಟಿಸಿತು. ಪೂಜಾವಿಧಿಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಅಚ್ಚರಿ ಕಾದಿತ್ತು. 

       ಎದುರಿಗಿದ್ದ ಶ್ರೀಚಕ್ರ ಇದಕ್ಕಿದ್ದಂತೆ ಮಾಯವಾಗಿ ಹೋಯಿತು. ಆ ಜಾಗದಲ್ಲಿ ಹಲವಾರು ದೇವಾನುದೇವತೆಗಳು ಹಾಗೂ ಸಪ್ತರ್ಷಿಗಳು ಮುಂತಾದವರು ಕಾಣುತ್ತಿದ್ದರು. ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ಒಂದೆಡೆ ಸಮುದ್ರರಾಜನು ಗೋಚರಿಸಿದ. ಮಾರೀಚನೆಂಬ ಋಷಿಯ ಕಣ್ಣು ಕೆಂಪಾಗಿರುವುದನ್ನು ಗಮನಿಸಿದೆ. ಎಲ್ಲರೂ ಒಂದು ರೀತಿಯ ಚಡಪಡಿಕೆಯಲ್ಲಿದ್ದರು. ‘ಇವರೇಕೆ ಹೀಗಿದ್ದಾರೆ? ಏನಕ್ಕಾಗಿ ಕಾಯುತ್ತಿದ್ದಾರೆ?’ ಎಂದರೆ ಅವರೆಲ್ಲರೂ ನಾನು ಪ್ರಾಣಪ್ರತಿಷ್ಠೆ ಮಾಡಲಿರುವ ಘಳಿಗೆಗಾಗಿ ಕಾಯುತ್ತಿದ್ದಾರೆ ಎಂದು ಅದು ಹೇಗೋ ಮನವರಿಕೆಯಾಯಿತು. ಆಗ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸಿತು. ದೇವಾನುದೇವತೆಗಳು, ಋಷಿಮುನಿಗಳು ನನ್ನ ಬಾಯಿಂದ ಹೊರಬರುವ ಮಂತ್ರಕ್ಕಾಗಿ ಕಾಯುತ್ತಿದ್ದಾರೆ. (ಯಕಃಶ್ಚಿತ್ ನನ್ನ ಬಾಯಿಂದ!) 

        ನಾನು ಪ್ರಾಣಪ್ರತಿಷ್ಠೆಗೆ ಅನುವಾಗುತ್ತಿದ್ದಂತೆ ದೊಡ್ಡ ಘರ್ಜನೆಯೊಂದಿಗೆ ಸಿಂಹವೊಂದು ಅಂತರಿಕ್ಷದಿಂದೆಂಬಂತೆ ಬಂದು ಪ್ರತ್ಯಕ್ಷವಾಯಿತು. ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಸಡಗರ. ಇನ್ನೇನು ಸಾಕ್ಷಾತ್ ಜಗನ್ಮಾತೆ ಸಾಕಾರಗೊಳ್ಳುವ ಘಳಿಗೆಗಾಗಿ ಕ್ಷಣಗಣನೆ!! ಆ ಸಿಂಹದ ಗಾಂಭೀರ್ಯ, ಚೆಂದ ಹಾಗೂ ಮೃದುವಾದ ಕೇಶರಾಶಿಯನ್ನು ವರ್ಣಿಸುವುದು ಕಷ್ಟ. ಅಷ್ಟು ಮುದ್ದಾಗಿತ್ತು ಆ ಸಿಂಹ.

        ನನ್ನ ಬಾಯಿಂದ ಮಂತ್ರಗಳು ಯಾಂತ್ರಿಕವಾಗಿ ಹೊರಬೀಳುತ್ತಲೇ ಇದ್ದವು. ಪ್ರಾಣಪ್ರತಿಷ್ಠೆಯ ಮಂತ್ರವನ್ನು ಹೇಳಿದಾಗ ಭಗ್ಗನೆ ಬೆಳಕೊಂದು ಸಂಚರಿಸಿದಂತಾಯಿತು. ಆ ಬೆಳಕೇ ಕ್ರೋಢೀಕರಿಸಿ ಒಂದು ಸ್ನಿಗ್ಧ ಸೌಂದರ್ಯದ ಹೆಣ್ಣಾಗಿ, ನಂತರ ಚಾಮುಂಡಿಯಾಗಿ ಆ ಸಿಂಹದ ಮೇಲೆ ಆಸೀನವಾಯಿತು. ಆಕೆ ಕುಳಿತುಕೊಂಡಾಗ ಆಕೆಯ ಬಲಗಾಲು ಸ್ವಲ್ಪ ಬಾಗಿ ಕಾಲಿನ ತುದಿಬೆರಳುಗಳು ಮಾತ್ರ ನೆಲಕ್ಕೆ ತಾಗಿಕೊಂಡಿದ್ದನ್ನು ಗಮನಿಸಿದೆ. ನನ್ನ ಕಣ್ಣುಗಳು ಆ ಸುಂದರ ಹಾಗೂ ಮನೋಹರವಾದ ರಕ್ತವರ್ಣದಿಂದ ಮಿಳಿತಗೊಂಡತ್ತಿದ್ದ ಪಾದಗಳ ಮೇಲೆ ಕೇಂದ್ರಿಕೃತವಾಗಿದ್ದವು. ಒಬ್ಬ ಅತಿ ನಿಷ್ಣಾತ ಕಲಾವಿದ ಮಾತ್ರ ಆ ಕಾಲುಗಳ ಚಿತ್ರವನ್ನು ಕುಂಚದಲ್ಲಿ ಸೆರೆ ಹಿಡಿಯಬಲ್ಲನೇನೋ, ಅಂತಹ ಒಂದು ಮಧುರಭಾವ ಅಲ್ಲಿತ್ತು. ನನಗೆ ಆ ಕಾಲುಗಳ ಸೌಂದರ್ಯ ಎಷ್ಟು ಮಂತ್ರಮುಗ್ಧನನ್ನಾಗಿಸಿತ್ತೆಂದರೆ ಆಕೆಯ ಮುಖ ಹೇಗಿರುತ್ತದೆ ಎಂದು ನೋಡುವ ಬಯಕೆಯನ್ನೇ ಅದು ಮರೆಸಿತ್ತು.

        ಮಂತ್ರಗಳು ತನ್ನಂತಾನೇ ಬಾಯಿಂದ ಹೊರಬೀಳುತ್ತಲೇ ಇದ್ದವು. ನಾನು ಷೋಡಶೋಪಚಾರ ಮಾಡುವಾಗ ಅಲ್ಲಿದ್ದ ಪ್ರತಿಯೊಬ್ಬ ದೇವಾನುದೇವತೆಗಳು ಹಾಗೂ ಋಷಿಗಳು ಅದನ್ನು ಅನುಸರಿಸುತ್ತಿದ್ದರು. ಉದಾಹರಣೆಗೆ ನಾನು `ಪಾದ್ಯಂ ಸಮರ್ಪಯಾಮಿ' ಎಂದೊಡನೆ ಎಲ್ಲರೂ ದೇವಿಗೆ ಪಾದ್ಯವನ್ನು ಸಮರ್ಪಿಸುತ್ತಿದ್ದರು. ಈ ರೀತಿಯ ಎಲ್ಲ ವಿಧಿ ವಿಧಾನಗಳಿಗೂ ನಾನೇ ಕಾರಕನಾಗಿದ್ದೆ. ಕೆಲಕಾಲ ನಾನು ಈ ಗುಂಗಿನಲ್ಲಿಯೇ ಇದ್ದೆ. ಮತ್ತೆ ಒಮ್ಮೆ ಮೈಕೊಡವಿದಂತಾಗಿ ವಾಸ್ತವಕ್ಕೆ ಬಂದೆ.      

        ಅದೇ ಶ್ರೀಚಕ್ರ, ಅದೇ ಹೂಗಳು, ಅದೇ ಅಕ್ಷತೆ ಹೀಗೆ ಎಲ್ಲವೂ ಮತ್ತೆ ಕಣ್ಣ ಮುಂದೆ ಮೂಡಿದವು. ಮತ್ತೆ ಎಷ್ಟು ಪ್ರಯತ್ನ ಪಟ್ಟರೂ ಆ ದೃಶ್ಯ ಮರುಕಳಿಸಲಿಲ್ಲ. ನನ್ನನ್ನು ನಾನೇ ಹಳಿದುಕೊಂಡೆ 'ಅಯ್ಯೋ ಇಂತಹ ಮುಠ್ಠಾಳ ನಾನು ! ಒಮ್ಮೆಯಾದರೂ ಕತ್ತೆತ್ತಿ ಮುಖ ನೋಡಲಿಲ್ಲವೇ? ಯಾಕಮ್ಮಾ ನನಗೆ ಈ ಭಾಗ್ಯ ಕರುಣಿಸಲಿಲ್ಲ' ಎಂದು ಮೌನವಾಗಿ ರೋಧಿಸಿದೆ. ಬಹುಹೊತ್ತು ಕಾದಿದ್ದು ಒಲ್ಲದ ಮನಸ್ಸಿನಿಂದ ಅಂದಿನ ಪೂಜೆಯನ್ನು ಮುಗಿಸಿದ್ದೆ.            

1 comment: