Monday, 14 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 11

        ಈ ಅನುಭವಗಳು ನನಗೆ ಅತ್ಯಂತ ಹಿತವಾದ, ನವಿರಾದ, ಹಾಗೂ ಮುದವಾದ ಅನುಭವವನ್ನು ನೀಡಿ ನಾನು ಭಾವುಕನಾಗಿದ್ದು ಮಾತ್ರ ಸತ್ಯ. ಗುರುಗಳು ಹೇಳಿದಷ್ಟು ದಿನ ದೇವಿ ಉಪಾಸನೆಯನ್ನು ಮಾಡಿ ಮುಗಿಸಿದ್ದೆ. ಕಠಿಣ ಅನುಷ್ಠಾನಕ್ಕೆ ಕೊಂಚ ಬಿಡುವು ಸಿಕ್ಕಿತ್ತು. ಗುರುಗಳ ಬರುವಿಕೆಗೆ ಕಾಯುತ್ತಿದ್ದೆ.  
        ಮನೋವಿಜ್ಞಾನದ ದೃಷ್ಟಿಯಿಂದ ನನ್ನ ಅನುಭವವನ್ನು ತುಲನೆ ಮಾಡಿದೆ. ಮನೋವಿಜ್ಞಾನ ಇಂತಹ ಅನುಭವಗಳನ್ನು ಸಾಧಾರಣವಾಗಿ ಭ್ರಮೆ (hallucination) ಎಂದು ಕರೆಯುತ್ತದೆ. ಭ್ರಮೆ ಅಥವಾ ಭ್ರಾಂತಿಯಲ್ಲಿರುವುದು ಒಂದು ಮಾನಸಿಕ ಕಾಯಿಲೆಯ ಲಕ್ಷಣ. ಭ್ರಮೆ ಅಥವಾ ಭ್ರಾಂತಿ ನಾವು ಬಯಸಿ ಸಿಗುವ ಅನುಭವವಲ್ಲ, ಬಯಸಿದ್ದನ್ನು ಕೊಡುವ ಅನುಭವವೂ ಅಲ್ಲ. ಅದು ನಮಗೆ ಬೇಡದ, ಅಥವಾ ನಾವು ಇಷ್ಟಪಡದ ಅನುಭವವನ್ನು ಕೊಡುವ ಗುಣವನ್ನು ಹೊಂದಿರುತ್ತದೆ. 
        ನಾವು ಇಷ್ಟಪಟ್ಟು ಪದೇ ಪದೇ ಚಿಂತಿಸಿ ಅರೆಪ್ರಜ್ಞಾ ಮನಸ್ಸಿನ ಸಹಾಯದಿಂದ ಅನುಭವವನ್ನು ಪಡೆಯುವ ವಿಧಾನಕ್ಕೆ ಮನೋವಿಜ್ಞಾನ 'ದೃಶ್ಯೀಕರಣ ತಂತ್ರ' (visualization technique) ಎನ್ನುತ್ತದೆ.  ಇದು ಮನಸ್ಸಿನ ಶಕ್ತಿಯನ್ನು ಉಪಯೋಗಿಸಲು ಇರುವ ಒಂದು ಶಕ್ತಿಶಾಲೀ ತಂತ್ರ. ತಾಂತ್ರಿಕ ವಿದ್ಯೆಯಲ್ಲಿರುವ ದೃಶ್ಯೀಕರಣ ತಂತ್ರದಲ್ಲಿ ನಾ ಕಂಡ ಒಂದೇ ಒಂದು ವ್ಯತ್ಯಾಸವೆಂದರೆ  'ಭಾವ'. ಅದು ಅದ್ಭುತ ಹಾಗೂ ಅಲೌಕಿಕ ಅನುಭವವನ್ನು ನೀಡುತ್ತದೆ. 
        ನಾನು ಕಂಡುಕೊಂಡ  ಇನ್ನೊಂದು ಸತ್ಯವೇನೆಂದರೆ ಯಾವುದೇ ಆಧ್ಯಾತ್ಮಿಕ ಸಾಧನೆಯ ಅನುಷ್ಠಾನದಲ್ಲಿ ನಾವು ತೊಡಗಿಕೊಂಡಿರುವಾಗ, ನಮ್ಮ ಅನುಭವಗಳ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡದಿರುವುದೇ ಒಳಿತು. ಅವರ ನಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮನಸ್ಸಿನಲ್ಲಿ ಸಂದೇಹದ ಬೀಜಗಳನ್ನು ಬಿತ್ತಬಹುದು. ನಿಮ್ಮ ಅನುಭವಗಳು ನಿಮ್ಮವು. ಅದು ಯಾರ ಅನುಭವಕ್ಕೂ ತಾಳೆಯಾಗಬೇಕಿಲ್ಲ. ಹಾಗೆಯೇ ಬೇರೆಯವರಿಗೆ ಆದಂತಹದ್ದೇ ಅನುಭವ ನಮಗೂ ಆಗಬೇಕಿಲ್ಲ.              ದೈವಸಾಕ್ಷಾತ್ಕಾರವೆಂದೊಡನೆ ದೇವರು ಎದುರಿಗೆ ಪ್ರತ್ಯಕ್ಷನಾಗಿ ನಿಂತು 'ಭಕ್ತಾ, ನಿನಗೇನೂ ಬೇಕು?' ಎಂದು ಕೇಳಬೇಕಾಗಿಲ್ಲ. ಆ ಸಹಜವಾದ ಪ್ರಕೃತಿಶಕ್ತಿಯೊಡನೆ ಯಾವುದೇ ಅನುಭವ, ಅನುಭಾವಗಳು ಸಾಕ್ಷಾತ್ಕಾರದ ರೂಪವೇ. 
        ಅದು ದೊರೆತ ಮಾತ್ರಕ್ಕೆ ಯಾರೂ ದೇವಮಾನವರಾಗುವುದೂ ಇಲ್ಲ. ನಮ್ಮ ಎಲ್ಲಾ ದೌರ್ಬಲ್ಯಗಳು ನಮ್ಮಲ್ಲಿಯೇ ಇರುತ್ತವೆ. ಆದರೆ ಈ ಅನುಭವಗಳು ಆಗುತ್ತಿದ್ದಂತೇ ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ದೌರ್ಬಲ್ಯಗಳನ್ನು, ದೌರ್ಬಲ್ಯಗಳು ಎಂದು ತಿಳಿಯುವ ಮಟ್ಟಕ್ಕೆ ಹೋಗುತ್ತೇವೆ. ಇಲ್ಲಿ ಹೊಸ ರೀತಿಯ ಬದುಕನ್ನು ರೂಪಿಸಿಕೊಳ್ಳುವ ಒಂದು ಅವಕಾಶವನ್ನು ಅದು ಕಲ್ಪಿಸಿಕೊಡುತ್ತದೆ. ಬದಲಾಗುವುದು, ಬಿಡುವುದು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ತೀರ್ಮಾನ ತೆಗೆದುಕೊಳ್ಳಬೇಕಾದವರು ನೀವೇ ಆಗಿರುತ್ತೀರಿ. 
        ಯಾವುದೇ ಸಾಧನೆಯ ಪಥವನ್ನು ನೀವು ಆರಿಸುವ ಮೊದಲು ಹತ್ತು ಬಾರಿ ಯೋಚಿಸಿ,ಆದರೆ ಆರಿಸಿಕೊಂಡಾದ ಮೇಲೆ ಮುನ್ನುಗ್ಗುತ್ತಿರಿ. ಸಾಧನೆಯ ಪಥದಲ್ಲಿದ್ದಾಗ ತುಂಬಾ ಯೋಚಿಸುವುದು, ಅದಕ್ಕೆ ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಓದುವುದು, ಕಂಡ ಕಂಡವರೊಂದಿಗೆ ಚರ್ಚಿಸುವುದು ಮುಂತಾದ ವಿಚಾರಗಳಿಂದ ದೂರವಿರಿ. ಇವೆಲ್ಲಾ ನಿಮ್ಮ ಸಾಧನೆಯ ಮಾರ್ಗವನ್ನು ಧೀರ್ಘ ಮಾಡುತ್ತವೆ. 
        ಆಧ್ಯಾತ್ಮಿಕ ಸಾಧನೆ ಒತ್ತಟ್ಟಿಗಿರಲಿ, ಈ ಎಲ್ಲಾ ವಿಷಯಗಳು ಲೌಕಿಕ ವಿಷಯಗಳ ಸಾಧನೆ ಮಾಡುವಾಗಲೂ ಅನ್ವಯವಾಗುತ್ತವೆ. ನನ್ನದೇ ಒಂದು ಅನುಭವದಿಂದ ನಾನು ಇದನ್ನು ಕಲಿತೆ.
ಅದೇನೆಂದರೆ 

        ಹಿಂದೊಮ್ಮ ನಾನು ಹಾಗೂ ನನ್ನ ಸಂಬಂಧಿಕ ಸುನೀಲ (ಇಂದಕ್ಕಳ ಮಗ), ಈಜು ಕಲಿಯಲು ನೇತ್ರಾವತೀ ನದಿಯಲ್ಲಿ ಇಳಿದಿದ್ದೆವು. ಇಳಿದ ಮೇಲೆ ಗೊತ್ತಾಗಿದ್ದು, ಈಜುವುದು ಅಷ್ಟು ಸುಲಭವಲ್ಲ ಎಂಬ ಕಠೋರ ಸತ್ಯ. ಈಜಲು ಹೋಗಿ ಸಾಕಷ್ಟು ನೀರು ಕುಡಿಡಿದ್ದೆವು. ನಂತರ ಬುದ್ಧಿವಂತನಾದ ನಾನು ನಮ್ಮ ಊರಿನ ಗ್ರಂಥಾಲಯಕ್ಕೆ ಹೋಗಿ ಈಜಿನ ಬಗ್ಗೆ ಕೆಲವು ಪುಸ್ತಕಗಳನ್ನು ಓದಿದೆ. ಈಜುವುದರಲ್ಲಿ ನಿಷ್ಣಾತರಾದ ಗೋವಿಂದ ಎನ್ನುವವರ ಬಳಿ ಹೋಗಿ ಈಜಿನ ಬಗ್ಗೆ ಚರ್ಚಿಸಿದೆ. ಸುಲಿಯದ 'ಪೊಟ್ಟು' ತೆಂಗಿನಕಾಯಿಯನ್ನು ಕಂಕಳಿಗೆ ಸಿಕ್ಕಿಸಿಕೊಂಡರೆ ಮುಳುಗುವುದಿಲ್ಲ ಎಂದು ಆ ಪ್ರಯೋಗವನ್ನೂ ಮಾಡಿ ನೋಡಿದೆ. ನಾನೊಂದೆಡೆ ಮುಳುಗಿ ನೀರು ಕುಡಿಯುತ್ತಿದ್ದರೆ, ತೆಂಗಿನ ಕಾಯಿ ಇನ್ನೊಂದೆಡೆ ತೇಲಿ ಹೋಗುತ್ತಿತ್ತು. ಹೀಗೆ ಸುಮಾರು ಹದನೈದಿಪ್ಪತ್ತು ದಿನಗಳನ್ನು ಈಜಿನ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಕಳೆದೆ.
        ಒಮ್ಮೆ ನದೀ ತೀರದೆಡೆ ಹೋದಾಗ ನನಗೆ ಆಘಾತ ಕಾದಿತ್ತು. ಸುನೀಲ ಆರಾಮಾಗಿ ಈಜುತ್ತಿದ್ದ ! 
'ಹೇಗೆ ಕಲಿತೆಯೋ?' ಅಚ್ಚರಿಯಿಂದ ಕೇಳಿದೆ. 
ನನ್ನ ಗೆಳೆಯ 'ಗುಂಡಿ ಇರುವ ಜಾಗ ನೋಡಿ ಸುಮ್ಮನೆ ನೀರಿಗೆ ಎಗರು,ಕೈ ಕಾಲು ಬಡಿಯುತ್ತಾ ಈಜಲು ಕಲಿಯುವೆ' ಎಂದು ಹೇಳಿದನಲ್ಲದೇ  'ನಾನು ಹಾಗೆಯೇ ಮಾಡಿದೆ' ಎನ್ನುತ್ತಾ ರಿವರ್ಸ್ ಸ್ಟ್ರೋಕ್ ಹೊಡೆಯುತ್ತಾ ಹೋದ !!  
ಆಗ ನಾನೊಂದು ನಿಶ್ಚಯ ಮಾಡಿದೆ 'ನಾಳೆ ನಾನು ಬಂದು ನೀರಿಗೆ ಧುಮುಕಿ ಈಜುವುದೇ!' ಸುನೀಲನಿಗೆ ಕೂಗಿ ಹೇಳಿದೆ ' ನಾಳೆ ಬೆಳಿಗ್ಗೆ ಎಂಟು ಘಂಟೆಗೆ ನನ್ನ ಜೊತೆ ಬಾ, ನಾನು ಈಜಿ ತೋರಿಸುತ್ತೇನೆ'   
        ಮಾರನೇ ದಿನ ಸುನೀಲನ ಜೊತೆ ನೇತ್ರಾವತಿ ತೀರಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಅಂದು ಪ್ರವಾಹ ಬಂದು ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. 
'ಬಾ ವಾಪಸ್ ಹೋಗೋಣ, ಇಂದು ನಿನ್ನ ಗ್ರಹಚಾರಕ್ಕೆ ಪ್ರವಾಹ. ನಾಳೆ ಬಂದರಾಯಿತು ಬಿಡು' ಎಂದು ಹಿಂದಿರುಗಲು ಸಿದ್ಧನಾದ ಸುನೀಲ.
'ಇಲ್ಲ, ನಾನು ಇಂದು ನೀರಿಗೆ ಬೀಳಲು ಹಾಗೂ ಈಜಲು ನಿರ್ಧಾರ ಮಾಡಿದ್ದೇನೆ. ಬೀಳುವುದೇ, ಬಿದ್ದು ಈಜುವುದೇ!' ಎಂದು ಹೇಳಿದೆ. 
        ಸುನೀಲ 'ಹೋ ಹೋ..' ಎಂದು ಬೊಬ್ಬೆ ಹಾಕುತ್ತಿದ್ದರೂ ನಾನು ನೀರಿಗೆ ಧುಮುಕಿದ್ದೆ. ಪ್ರವಾಹದ ಸೆಳೆತದಲ್ಲಿ ಹಾಗೂ ಹೀಗೂ ಕೈಕಾಲು ಬಡಿದು ಒಂದಷ್ಟು ಪ್ರವಾಹದ ದಿಕ್ಕಿನಲ್ಲೇ ಹೋಗಿ, ಎಲ್ಲೋ ಮುಳುಗುತ್ತಾ, ಎಲ್ಲೋ ತೇಲುತ್ತಾ, ಆ ಬದಿ ಈ ಬದಿ ಈಜುತ್ತಾ, ಅಂತೂ ಇಂತೂ ನದೀ ತೀರ ತಲುಪಿದೆ. ಬಂಡೆಕಲ್ಲು, ರೆಂಬೆಕೊಂಬೆಗಳಿಗೆ ತಾಗಿ ಕೈಕಾಲು, ಮೈ ಹಲವೆಡೆ ರಚಿತ್ತು. ಮನಸ್ಸು ಮಾತ್ರ ಗೆದ್ದೇ ಎಂದು ಬೀಗುತ್ತಿತ್ತು. ಪ್ರವಾಹದಲ್ಲೇ ಈಜಿದವನಿಗೆ ನಂತರದ ದಿನಗಳಲ್ಲಿ ಈಜುವುದು ಸಲೀಸಾಗಿ ಹೋಯಿತು. ಜೀವನದ ಒಂದು ಅದ್ಭುತ ಪಾಠವನ್ನು ಈ ಅನುಭವ ನನಗೆ ಕಲಿಸಿತ್ತು.  
        ತಂತ್ರ ಎಂದರೆ ಏನು? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದೊಮ್ಮೆ ಬರೆಯುತ್ತೇನೆ. 

No comments:

Post a Comment