Wednesday, 16 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 13

        ಶಿವನ ಆರಾಧನೆಗೆ ಮುನ್ನ ಗುರುಗಳು ಶಿವನ ಕುರಿತಾದ ಕೆಲವು ವಿಚಾರಗಳನ್ನು ನನ್ನೊಡನೆ ಹಂಚಿಕೊಂಡರು.
        'ಶಿವ ಪೌರಾಣಿಕ ವ್ಯಕ್ತಿಯಲ್ಲ, ಈ ಭೂಮಿಯಲ್ಲಿ ಅವತರಿಸಿದ ಮಹಾದೇವ. ಸ್ಮಶಾನವಾಸಿಯಾದ ಅವನು ಜನರ ಮಧ್ಯೆ, ಜನರಿಂದ ಬೆಳೆದ. ತನ್ನನ್ನು ಬೆಳೆಸಿದ ಸಮಾಜಕ್ಕಾಗಿ ಅದ್ಭುತ ಕೊಡುಗೆಗಳನ್ನು ನೀಡಿದ. ಪಶು,ಪ್ರಾಣಿಗಳ ಧ್ವನಿಯ ಏರಿಳಿತಗಳನ್ನು ಗಮನಿಸಿ ಸಪ್ತಸ್ವರಗಳನ್ನು ಕಂಡು ಹಿಡಿದು ಸಂಗೀತಕ್ಕೊಂದು ಹೊಸ ಆಯಾಮ ನೀಡಿದ್ದು ನಮ್ಮ ಶಿವ. ಸ್ಮಶಾನದಲ್ಲಿದ್ದುಕೊಂಡೇ ತನ್ನದೇ ಆದ ನಾಟ್ಯಪ್ರಕಾರವನ್ನು ಕಂಡು ಹಿಡಿದು ಅದಕ್ಕೆ 'ತಾಂಡವ' ಎಂದು ಹೆಸರಿಸಿದ. ಅಲೆಮಾರಿ ಜನಾಂಗವಾಗಿ ಅಲೆಯುತ್ತಿದ್ದ ಜನರಿಗೆ ಕುಟುಂಬದ ಕಲ್ಪನೆ ನೀಡಿದ. ವಿವಾಹ ಪದ್ಧತಿಯನ್ನು ಆಚರಣೆಗೆ ತಂದದ್ದು ಮಹಾದೇವ ಶಿವನೇ. ದಕ್ಷಿಣ ಭಾರತದಲ್ಲಿ ವಾಸವಾಗಿದ್ದ ಶಿವನ ಸಂಗಾತಿಯಾಗಿದ್ದವಳು ಕಾಳಿ. ಆಕೆ ಕಪ್ಪಗಿರುವುದರಿಂದ ಕಾಳಿ ಎಂದು ಕರೆದರು. ಸಾಮರಸ್ಯ ಉಳಿಸಲು ಉತ್ತರದ ಹಿಮಾಲಯ ಭಾಗದ ರಾಜನೊಬ್ಬನ ಮಗಳನ್ನು ವಿವಾಹವಾದ. ಆಕೆಯ ಹೆಸರೂ ದಾಖಲೆಯಲ್ಲಿ ಸಿಗದಿರುವುದರಿಂದ, ಪರ್ವತ ಪ್ರದೇಶದ ರಾಜನ ಮಗಳಾಗಿದ್ದುದರಿಂದ ಪಾರ್ವತಿ ಎಂದು ಮುಂದೆ ಕರೆಯಲಾಯಿತು. ಇದೇ ಪ್ರಪಂಚದ ಮೊದಲ ಮದುವೆ. ಈಗಲೂ ಮದುವೆಯ ಮಂಟಪದಲ್ಲಿ ಒಳ್ಳೆಯ ಜೋಡಿಯನ್ನು ನೋಡಿದಾಗ ಶಿವ-ಪಾರ್ವತಿಯರಂತೇ ಕಾಣುತ್ತಾರೆ ಎನ್ನುವುದು ವಾಡಿಕೆಯಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಶಿವನು ಬಿಡಿ ಬಿಡಿಯಾಗಿ ದಿಕ್ಕು ದೆಸೆಯಿಲ್ಲದೇ ನಡೆಯುತ್ತಿದ್ದ ದೇವಪೂಜೆಗೆ ಶಿಸ್ತುಬದ್ಧವಾದ ವೈಜ್ಞಾನಿಕ ರೂಪಕೊಟ್ಟ. ತಾನು ಮೊದಲು ಅಭ್ಯಸಿಸಿ, ಸಾಧನೆ ಮಾಡಿ ನಂತರ ಪಾರ್ವತಿಗೆ ಅದನ್ನು ಬೋಧಿಸಿದ. ಅದೇ ತಂತ್ರ ಶಾಸ್ತ್ರ. ನಾನು ಹೇಳಿದ ಈ ವಿಷಯಗಳು ಜನಸಾಮಾನ್ಯರ ನಂಬಿಕೆಗಳಿಗೆ ವಿರುದ್ಧವಾಗಿರಬಹುದು. ಆದರೆ ನನ್ನಲ್ಲಿ ಕೆಲವು ಪುರಾವೆಗಳಿವೆ' ಎಂದು ಹೇಳುತ್ತಾ ಕೆಲವು ತಾಳೇಗರಿಗಳನ್ನು ತೋರಿಸಿ ಅದರಲ್ಲಿರುವ ವಿವರಗಳನ್ನು ಬಿಡಿಸಿ ಹೇಳಿದರು. ಈಗಲೂ ಅವರು ನೀಡಿದ ಹಾಗೂ ಮುಂದೆ ನಾನು ಸಂಗ್ರಹಿಸಿದ ಶಿವನ ಕುರಿತಾದ ಕೆಲವು ತಾಳೇಗರಿಗಳು ನನ್ನಲ್ಲಿವೆ. 
        ನಂತರ ಕೆಲದಿನಗಳಲ್ಲೇ ನನಗೆ ಶಿವನ ಆರಾಧನೆಯ ತರಬೇತಿ ಆರಂಭವಾಯಿತು. 'ಊರ ಹೊರಗಿನ ಸ್ಮಶಾನದಲ್ಲಿ ರಾತ್ರಿ ಹೋಗಿ ಮಲಗಿ ಬರುವ ಧೈರ್ಯವಿದೆಯೇ?' ಎಂದೊಮ್ಮೆ ಕೇಳಿದರು. ನನಗೆ ಸ್ಮಶಾನದ ಬಗ್ಗೆ, ದೆವ್ವಪಿಶಾಚಿಗಳ ಬಗ್ಗೆ ಯಾವ ಭಯವೂ ಇರಲಿಲ್ಲ. ನಾನು ಕೂಡಲೇ ಒಪ್ಪಿಕೊಂಡೆ. ಅಂದಿನಿಂದ ಐದು ದಿನ ನಾನು ಸ್ಮಶಾನಕ್ಕೆ ಹೋಗಿ ಮೂಲೆಯೊಂದೆಡೆ ಮಲಗಿ ಬೆಳಿಗ್ಗೆ ಬರುತ್ತಿದ್ದೆ. ಮೊದಲ ದಿನ ಸ್ವಲ್ಪ ಭಯವಾಯಿತು. ದೆವ್ವಗಳ ಬಗ್ಗೆ ಅಲ್ಲ, ಅಲ್ಲಿರಬಹುದಾದ ಹಾವು ಚೇಳುಗಳ ಬಗ್ಗೆ. ಅಕಸ್ಮಾತ್ ಮಲಗಿರುವಾಗ ಬಂದು ಕಚ್ಚಿದರೆ? ಎಂಬ ಭಯವಿತ್ತು. ಒಂದೇ ದಿನ, ನಂತರ ನಮ್ಮ ಅಜ್ಜನ ಆಸ್ತಿಯೇನೋ ಎಂಬಂತೆ ಹೋಗಿ ಮಲಗುತ್ತಿದ್ದೆ. ಅಷ್ಟರಲ್ಲಿ ಅಲ್ಲಿ ಸಣ್ಣ ಮನೆಯಲ್ಲಿದ್ದ ಕಾವಲುಗಾರನ ಗೆಳೆತನವನ್ನೂ  ಮಾಡಿಕೊಂಡು ಬಿಟ್ಟಿದ್ದೆ. 
ಗುರುಗಳು ಕೇಳಿದರು 'ಭಯವಾಗಲಿಲ್ಲವೇ? 
'ಒಂದೆರಡು ದಿನ ಈ ಹಾವು ಚೇಳುಗಳ ಬಗ್ಗೆ ಭಯ ಇತ್ತು, ಆಮೇಲೆ ಸರಾಗವಾಗಿ ಹೋಯಿತು' ನಗುತ್ತಾ ಹೇಳಿದೆ. 
'ಶಿವನ ಅನುಷ್ಠಾನ ಮಾಡುವಾಗ ಭಯಕ್ಕೆ ಆಸ್ಪದವಿಲ್ಲ, ಅದಕ್ಕಾಗಿ ಈ ಸಣ್ಣ ಪ್ರಯೋಗ ಮಾಡಿದ್ದು. ನಾಳೆ ನಿನಗೆ ಶಿವನ ಮಂತ್ರೋಪದೇಶ ಮಾಡುತ್ತೇನೆ' ಎಂದು ಹೇಳಿ ಹೊರಟರು. ನಾನು 'ನಾಳೆ'ಗೆ ಕಾಯುತ್ತಿದ್ದೆ. 
        ಮರುದಿನ ಮಂತ್ರ ದೀಕ್ಷೆ ನೀಡುವ ಮೊದಲು ಗುರುಗಳು ನನಗೆ ಈ ಸಾಧನೆಯ ಬಗ್ಗೆ ಕೆಲ ಮಾತುಗಳನ್ನು ಹೇಳಿದರು. "ಶಿವನು ಹಿಮಾಲಯದಲ್ಲಿ ಕುಳಿತರೂ ಆತನ ಧ್ಯಾನದ ಉತ್ಕಟತೆಗೆ ಮೈ ಹೋಮಕುಂಡದಂತೆ ಸುಡುತ್ತಿರುತ್ತದೆ. ಆದ್ದರಿಂದ ಆತನಿಗೆ ಚಳಿ ಸೋಕುವುದಿಲ್ಲ. ಶಿವನ ಮಂತ್ರದೊಂದಿಗೆ ಅಗ್ನಿಮಂತ್ರವನ್ನು ಸೇರಿಸಿ 'ಹ್ರೀಂ ಓಂ ನಮಃ ಶಿವಾಯ ಹ್ರೀಂ' ಎಂದು ಚಿನ್ಮುದ್ರೆಯಲ್ಲಿ ಜಪ ಮಾಡು, ತೋರುಬೆರಳ ತುದಿಯಲ್ಲಿ ಅಗ್ನಿಯ ಸಾನ್ನಿಧ್ಯ ಇರುತ್ತದೆ. ನಾನು ನಿನಗೆ ಗೋಪ್ಯವಾಗಿ ಕೊಟ್ಟ ಬೀಜಾಕ್ಷರವನ್ನು ಆದಿಯಲ್ಲಿ ಸೇರಿಸು. ನೀನು ಶಿವನ ಅನುಷ್ಠಾನ ಮಾಡಬೇಕಾದರೆ ಮೊದಲು ನಿನ್ನ ನಾಲ್ಕೂ ಬದಿಯಲ್ಲಿ ಧಗ ಧಗ ಉರಿಯುವ ನಾಲ್ಕು ಹೋಮಕುಂಡಗಳಿವೆಯೆಂದು ಭಾವಿಸು. ನೀನೇ ಸ್ವತಃ ಒಂದು ಹೋಮಕುಂಡದಲ್ಲಿ ಕುಳಿತು ಕೊಂಡಿರುವುದಾಗಿ ಕಲ್ಪಿಸಿಕೋ. ಮಿಕ್ಕೆಲ್ಲ ವಿಧಿ ವಿಧಾನಗಳನ್ನು ನಾನು ನಿನಗೆ ತಿಳಿಸಿಕೊಟ್ಟ ರೀತಿಯಲ್ಲಿಯೇ ಮಾಡು. ನಾಳೆ ನಾನು ಮತ್ತೆ ಹೊರಡುತ್ತಿದ್ದೇನೆ. ಇಂದು ನಿನಗಾದ ಅನುಭವವನ್ನು ನಾಳೆ ನನಗೆ ಹೇಳು" ಎಂದು ಹೇಳಿ ಆಶೀರ್ವದಿಸಿ ಹೊರಟರು. ಹೊಸದಾದ ಮತ್ತೊಂದು ಅನುಭವಕ್ಕೆ ಮನಸ್ಸು ಅಣಿಯಾಗಿತ್ತು. ಮೊದಲ ದಿನ ವಿಶೇಷ ಅನುಭವವೇನೂ ಆಗಲಿಲ್ಲ. ಅದನ್ನೇ ಗುರುಗಳ ಬಳಿ ಹೇಳಿಕೊಂಡೆ. 
       ಮುಂದಿನ ದಿನಗಳಲ್ಲಿ ಶಿವನ ಉತ್ಕಟತೆ ಪಡೆಯಲು ತೀಕ್ಷ್ಣವಾದ ಬೆಂಕಿಯಲ್ಲಿ ನಾನೇ ಸುಟ್ಟುಹೋಗುತ್ತಿರುವಂತೆ ಭಾವಿಸಿಕೊಳ್ಳುತ್ತಿದ್ದೆ. ಹೀಗೆ ಸುಮಾರು ಹತ್ತು ದಿನಗಳ ಕಾಲ ಅನುಷ್ಠಾನ ಮಾಡುತ್ತಿದ್ದಂತೇ, ಪೂಜೆ ಮುಗಿಸಿದ ಮೇಲೆ ನನ್ನ ಕೈಗಳಲ್ಲಿ, ಭುಜಗಳಲ್ಲಿ, ಚರ್ಮದ ಮೇಲೆ ಸಣ್ಣದಾಗಿ ಬಿಳಿಯ ಬೂದಿಯ ಪದರವಿರುವುದನ್ನು ಗಮನಿಸಿದೆ. ಹಿತವಾಗಿ ಅದನ್ನು ಸವರಿಕೊಂಡೆ. ಅದರ ಬಗ್ಗೆಯೇ ಚಿಂತಿಸುತ್ತಿದ್ದೆ. ಶಿವನು ವಿಭೂತಿಧಾರಿ ಅನ್ನುವುದರ ಅರ್ಥ ನನಗೆ ಬೇರೆ ತರಹವಾಗಿ ಕಾಣ ಸಿಕ್ಕಿತು. ಶಿವನ ತಪಸ್ಸಿನ ತೀವ್ರತೆಗೆ ಆತನ ಮೈಯ್ಯೆಲ್ಲಾ ಸುಡುತ್ತಿತ್ತೇನೋ ಎಂದು ಅನ್ನಿಸಿತ್ತು. 
        ಮುಂದೆ ನನ್ನ ಭಾವವನ್ನು ತೀವ್ರಗೊಳಿಸಿದೆ. 'ಭಾವವಿಲ್ಲದ ಪೂಜೆಗೆ ಬೆಲೆಯಿಲ್ಲ' ಎಂದು ಪದೇ ಪದೇ ಗುರುಗಳು ಹೇಳುತ್ತಿದ್ದರು. ನನ್ನ ಮನಃಸ್ಥಿತಿ ಅಂದಿನ ದಿನಗಳಲ್ಲಿ ಗಂಭೀರವಾಗಿತ್ತು. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮನಸ್ಸು ಶಾಂತವಾಗಿರುತ್ತಿತ್ತು.
        ಇದಾಗಿ ಕೆಲವು ದಿನಗಳಲ್ಲಿ ಒಮ್ಮೆ ಅನುಷ್ಠಾನಕ್ಕೆ ಕುಳಿತಾಗ ನನ್ನ ಮುಂದಿಟ್ಟಿದ್ದ ಹರಿವಾಣದಲ್ಲಿ ಏನೋ ಬಿದ್ದಂತೇ ಭಾಸವಾಯಿತು. ಕಣ್ಣು ಮುಚ್ಚಿ ಜಪ ಮಾಡುತ್ತಿದ್ದ ನನಗೆ ಕಣ್ಣು ತೆರೆದು ನೋಡುವ ಕುತೂಹಲ. 'ಇರಲಿ' ಎಂದು ನನಗೆ ನಾನೇ ಹೇಳಿಕೊಂಡು ಜಪವನ್ನು ಮುಂದುವರೆಸಿದೆ. ಮತ್ತೆ ಏನೋ ಶಬ್ದ! 'ಕುಳಿತ ಸ್ಥಳದಿಂದ ಏಳಬಾರದು ಎಂದು ಹೇಳಿದ್ದರಲ್ಲದೇ ಕಣ್ಣು ಬಿಡಬಾರದು ಎಂದೇನೂ ಹೇಳಲಿಲ್ಲವಲ್ಲ' ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಕಣ್ಣು ಬಿಟ್ಟೆ.  ನನ್ನ ಮುಖದಿಂದ ಒಂದು ಅರ್ಧ ಅಡಿ ದೂರದಲ್ಲಿ ನನ್ನ ಎದುರಿಗಿದ್ದ ಹರಿವಾಣದಲ್ಲಿ ಹೆಡೆ ಎತ್ತಿ ಕುಳಿತ ನಾಗರ ಹಾವೊಂದು ನನ್ನನ್ನೇ ನೋಡುತ್ತಿತ್ತು! 
        ಮುಂದೇನಾಯ್ತು? ಮುಂದಿನ ಕಂತಿನಲ್ಲಿ... 

No comments:

Post a Comment