Monday 26 August 2019

ನಾನೊಂದು ಬೆಕ್ಕು - 3

          ಹಾಯ್ ಫ್ರೆಂಡ್ಸ್, ನೆನ್ನೆ ನಾನು ಮಾತು ಕೊಟ್ಟಂತೆ ನನ್ನ ಬಾಲ್ಯದ  ಸಂತಸದ ಕ್ಷಣಗಳ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 


          ನೋಡಿದಿರಾ? ಎಲ್ಲರೂ ನನ್ನನ್ನು ಮುದ್ದಿಸುವವರೇ. ನಾನು ಕನ್ಯಾವಸ್ಥೆಗೆ ಕಾಲಿಟ್ಟೆ. ಕಾಲಿಟ್ಟೆ ಅಷ್ಟೇ.. ಅದು ಹೇಗೋ ಏನೋ ನನ್ನ ಜಾಡು ಹಿಡಿದು ಹಲವಾರು ಗಂಡು ಗಡವ ಬೆಕ್ಕುಗಳು ನನ್ನ ಬೆನ್ನು ಹತ್ತಿದವು. ನಾನಿನ್ನೂ ಬಾಲ್ಯದ ತುಂಟಾಟಗಳ ಗುಂಗಿನಲ್ಲೇ ಇದ್ದೆ. ನನಗೆ ಇಷ್ಟು ಬೇಗ ತಾಯಿಯಾಗುವುದು ಬೇಕಿರಲಿಲ್ಲ. ಆದರೆ ಈ ದುಷ್ಟ ಪುರುಷರ ಕಪಿಮುಷ್ಠಿಯಿಂದ ಪಾರಾಗುವುದು ಸುಲಭದ ಮಾತಾಗಿರಲಿಲ್ಲ. ಅವು ಹತ್ತಿರ ಬಂದಾಗ ಕೆಲವೊಮ್ಮೆ ಪರಚಿಬಿಡುತ್ತಿದ್ದೆ. ತಪ್ಪಿಸಿಕೊಂಡು ಓಡುತ್ತಿದ್ದೆ. ಸಣ್ಣ ಸಣ್ಣ ಜಾಗಗಳಲ್ಲಿ ಅವಿತುಕೊಳ್ಳುತ್ತಿದ್ದೆ. ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ರಾತ್ರಿ ನಿದ್ದೆ ಮಾಡಲು ಹೆದರುತ್ತಿದ್ದೆ. ಯಾವ ಕ್ಷಣದಲ್ಲಿ ಯಾವ ಗಂಡು ಬೆಕ್ಕು ದಾಳಿ ಮಾಡುವುದೋ ಎಂಬ ಭಯ. ನಿಮ್ಮಗಳ ಹಾಗೆ ಬಾಗಿಲು ಮುಚ್ಚಿ ಮಲಗಲು ನನಗೆ ನನ್ನದೇ ಆದ ಮನೆ ಇರಲಿಲ್ಲವೇ!  ಒಮ್ಮೆ ಬೀದಿಯಲ್ಲಿ ಹೆಣ್ಣೊಬ್ಬರು 'ಈ ಇಪ್ಪತ್ತೊಂದನೇ ಶತಮಾನದಲ್ಲಿ ಮಹಿಳೆಯರು ಅಬಲೆಯರಲ್ಲ. ಸಬಲೆಯರು. ಸರಿಸಮಾನರು' ಎಂದೆಲ್ಲಾ ಭಾಷಣ ಬಿಗಿಯುತ್ತಿದ್ದರು. ನನಗನ್ನಿಸಿದ್ದು  ಇಪ್ಪತ್ತೊಂದಲ್ಲ, ಇನ್ನೂರು ಶತಮಾನಗಳು ಕಳೆದರೂ ಮಹಿಳೆಯರನ್ನು ಅಬಲೆಯರಾಗಿಯೇ ಇಡಲು ಪ್ರಯತ್ನಿಸುತ್ತದೆ ಈ ಪುರುಷ ಪ್ರಧಾನ ಸಮಾಜ.     

          ಅದೊಂದು ರಾತ್ರಿ ಸುಸ್ತಾಗಿ ಮಲಗಿದ್ದೆ. ಕಣ್ಣುರೆಪ್ಪೆಗಳು ಅದಾವಾಗ ಮುಚ್ಚಿದವೋ ತಿಳಿಯದು. ಗಂಡುಬೆಕ್ಕೊಂದು ಎರಗಿರುವುದು ಅರಿವಾದಾಗ ತಡವಾಗಿತ್ತು. ಹೌದು. ನಾನು ತಾಯಿಯಾಗಲೇ ಬೇಕಾಯಿತು. ಈಗ ಮತ್ತೊಂದು ಸಮಸ್ಯೆ ಕಾಡತೊಡಗಿತು. ಈ ಮರಿಗಳನ್ನು ಹೆರುವುದು, ಜೋಪಾನ ಮಾಡುವುದು ಎಲ್ಲಿ? ಈ ಅನಾಗರೀಕ ಪ್ರಪಂಚದಲ್ಲಿ ನನ್ನ ಮರಿಗಳನ್ನು ಸಂರಕ್ಷಿಸಲು ಸುರಕ್ಷಿತವಾದ ಸ್ಥಳ ಯಾವುದು?  ಕಣ್ಣಿಗೆ ಬಿದ್ದ ಸ್ಥಳಗಳನ್ನೆಲ್ಲಾ ತಡಕಾಡಿದೆ. ಸಜ್ಜಾ ಮೇಲೆ, ಬಟ್ಟೆ ಒಗೆಯುವ ಕಲ್ಲಿನ ಹಿಂದೆ, ಗಿಡಗಳ ಮರೆಯಲ್ಲಿ.. ಊಹೂಂ ಯಾವುದು ಸುರಕ್ಷಿತವಲ್ಲ ಎಂದೇ ಅನಿಸುತ್ತಿತ್ತು. 'ಆ' ಮನೆಯಲ್ಲಿ ಹೇಗಾದರೂ ನುಸುಳೋಣವೆಂದು ಶತಪ್ರಯತ್ನ ಪಟ್ಟೆ, ಎಲ್ಲವೂ ವ್ಯರ್ಥವಾದವು. 
          ಪುಣ್ಯವಶಾತ್  'ಆ'  ಮನೆಯ ಪಕ್ಕದ ಮನೆಯವರು ನಾನು ಮನೆಯೊಳಗೆ ನುಗ್ಗಿದಾಗ ನನ್ನ ಪರಿಸ್ಥಿತಿಯನ್ನು ನೋಡಿ ಆಶ್ರಯ ಕೊಟ್ಟರು. ಅಂತೂ ಮುದ್ದಾದ ಮೂರು ಮರಿಗಳಿಗೆ ಜನ್ಮ ನೀಡಿದೆ. ಅಷ್ಟು ದಿನಗಳ ಪ್ರಯಾಸ ಹಾಗೂ ಆಯಾಸ ಎಲ್ಲವೂ ಮಂಜಿನಂತೆ ಕರಗಿದವು. ತಾಯ್ತನದ ಸುಖವನ್ನು ಅನುಭವಿಸಿದೆ. ಮಕ್ಕಳಿಗೆ ಹಾಲುಣಿಸುವುದು, ಮುದ್ದಾಡುವುದು, ಜೀವನೋಪಾಯಕ್ಕೆ ಬೇಕಾದ ವಿಧವಿಧದ ಶಿಕ್ಷಣ ನೀಡುವುದರಲ್ಲಿ ದಿನಗಳೆದದ್ದೇ ಗೊತ್ತಾಗಲಿಲ್ಲ. ಅವುಗಳಿಗೂ ಹಲ್ಲು ಬಲಿತು ಕರಂ ಕುರುಂ ಎಂದು ಮನೆಯವರು ನೀಡಿದ ತಿಂಡಿಯನ್ನು ನನ್ನ ಜೊತೆಯೇ ತಿನ್ನುತ್ತಿದ್ದವು. ಇವೆಲ್ಲವೂ ನನ್ನ ಪಾಲಿನ ಸ್ವರ್ಗವಾಗಿತ್ತು. ನಾನೂ ನನ್ನ ಮರಿಗಳು ಆಹಾ! 


          ಕೆಲದಿನಗಳಲ್ಲಿ  ಅವರ ಸಂಬಂಧಿಕರೊಬ್ಬರು ಬಂದರು. ' ಒಹ್ ಮರಿಗಳು ಎಷ್ಟು ಮುದ್ದಾಗಿವೆ' ಎಂದು ಅವರು ಹೇಳಿದಾಗ ನನಗೂ ಹೆಮ್ಮೆಯೆನಿಸಿತ್ತು. ಆದರೆ ಮುಂದಿನ ಮಾತುಗಳು ನನ್ನ ಕಿವಿಗೆ ಕಾದ ಸೀಸ ಹುಯ್ದಂತಾಗಿತ್ತು. 'ಒಂದು ಮರೀನಾ ನಾವು ತೆಗೆದುಕೊಂಡು ಹೋಗ್ತೀವಿ' ಎಂದಾಗ ಮನೆಯವರು 'ಆಯಿತು, ಚೆನ್ನಾಗಿ ನೋಡಿಕೊಳ್ಳಿ'  ಎಂದು ನನ್ನ ಬಳಿಯಿದ್ದ ಮರಿಯನ್ನು ಎತ್ತಿಕೊಂಡು ಅವರ ಕೈವಶ ಮಾಡಿದರು. ನಾನು ನನ್ನ ಕೈಲಾದ ಮಟ್ಟಿಗೆ ಪ್ರತಿರೋಧಿಸಿದೆ. ಆದರೆ ಬೆಕ್ಕಾದ ನಾನೆಲ್ಲಿ? ಬಲಿಷ್ಠ ಮಾನವರೆಲ್ಲಿ? ನೋಡನೋಡುತ್ತಿದ್ದಂತೆ ನನ್ನ ಪುಟ್ಟ ಕಂದನೊಬ್ಬ ನನ್ನಿಂದ ಮರೆಯಾದ. 

          ಉಳಿದ ಎರಡುಮರಿಗಳನ್ನು ಜೀವದಂತೆ ಕಾಪಾಡುತ್ತಿದ್ದೆ. ಆ ದುರ್ದಿನ ಬಂದೇಬಿಟ್ಟಿತು. ನನ್ನ ಬಾಳಿಗೆ ಬರಸಿಡಿಲು ಬಡಿದ ದಿನ. ನಾನು ಎಂದಿನಂತೆ ಹೊರ ಹೋಗಿ ಮನೆಗೆ ಬರುವುದರೊಳಗೆ ನನ್ನ ಉಳಿದೆರಡು ಕಂದಮ್ಮಗಳು  ಕಾಣೆಯಾಗಿದ್ದವು. ಮನೆಯೆಲ್ಲಾ ಹುಡುಕಾಡಿದೆ. ಕಂಡ ಕಂಡ ಸ್ಥಳಗಳನ್ನೆಲ್ಲ ತಡಕಾಡಿದೆ. ಸುಸ್ತಾಗಿ ದಣಿದು ಬಳಲಿ ಬೆಂಡಾಗಿ ಮನೆಗೆ ಬಂದಾಗ ಮನೆಯಾಕೆ ನನ್ನನ್ನು ಮುದ್ದಿಸುತ್ತಾ 'ಏನೂ ಯೋಚನೆ ಮಾಡಬೇಡ. ನಿನ್ನ ಎರಡು ಮರಿಗಳನ್ನು ತೆಗೆದುಕೊಂಡು ಹೋದವರು ತುಂಬಾ ಒಳ್ಳೆಯ ಜನ. ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ' ಎಂದರು. ನನಗೆಷ್ಟು ಕೋಪ ಬಂದರೇನು ಪ್ರಯೋಜನ?  'ಬಡವನ ಕೋಪ ದವಡೆಗೆ ಮೂಲ' ಎಂಬ ಗಾದೆ ಮಾತು ನೆನಪಾಗಿ 'ಬಡವಾ ನೀನು ಮಡಗ್ದಂಗಿರು' ಎಂದು ಅಸಹಾಯಕಳಾಗಿ ಮೂಲೆ ಸೇರಿದೆ. ದುಃಖ ಉಮ್ಮಳಿಸಿ ಬರುತ್ತಿತ್ತು. ಇನ್ನೆಲ್ಲಿ ನಾನು ಮುದ್ದು ಮಾಡುತ್ತಿದ್ದ ಆ ಕಂದಮ್ಮಗಳು? ಎಲ್ಲಿರುವವೋ? ಎಷ್ಟು ಅಪಾಯಗಳನ್ನು ಎದುರಿಸುತ್ತಿರುವವೋ? ಏನೂ ಅರಿಯದ ಪುಟ್ಟ ಕಂದಮ್ಮಗಳು. ಅದು ಹೇಗೆ ನಿಭಾಯಿಸುತ್ತವೋ? ಈ ಚಿಂತೆಗಳಲ್ಲೇ ಮನಸ್ಸು ಮೂಕವಾಯಿತು. ಕೇವಲ ಕೆಲಕಾಲಗಳ ಹಿಂದಿದ್ದ ಉತ್ಸಾಹಕ್ಕೆ ಮಂಕು ಬಡಿಯಿತು. 
          ಮತ್ತೆ 'ಆ' ಮನೆಯ ನೆನಪಾಯಿತು. ಅಲ್ಲಿ ನನಗಾಗಿ ಮನೆಯ ಹಿಂದೆ ಹಳೆಯ ಕುರ್ಚಿಯೊಂದನ್ನು ಇಟ್ಟಿದ್ದರು. ಅಲ್ಲಿ ಒಬ್ಬಳೇ ಹೋಗಿ ಕುಳಿತುಕೊಳ್ಳುತ್ತೇನೆ. ನೂರೊಂದು ನೆನಪು ಅಂತರಾಳದಲ್ಲಿ ಮಿಡಿಯುತ್ತಾ ಇರುತ್ತದೆ. ಅರಿವು ಮೂಡುವ ವೇಳೆಗೆ ನಾನು ತಬ್ಬಲಿಯಾಗಿದ್ದೆ. ಮಕ್ಕಳಲ್ಲಿ ಅರಿವು ಮೂಡಿಸುವ ಮೊದಲೇ ಅವರನ್ನು ತಬ್ಬಲಿಗಳನ್ನಾಗಿ ಮಾಡಿದ ಅಸಹಾಯಕ ಪಾಪಿ ನಾನು. ಆದರೂ ಮನದ ಮೂಲೆಯಲ್ಲೊಂದಾಸೆ. ಮತ್ತೆ ನನ್ನ ಕಂದಮ್ಮಗಳು ನನ್ನನ್ನು ಹುಡುಕಿ ಬಂದೆ ಬರುತ್ತವೆ. ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ. 


Sunday 25 August 2019

ನಾನೊಂದು ಬೆಕ್ಕು - 2

         .. ನಂತರದ ದಿನಗಳು ನನ್ನ ಜೀವನದ ಸುವರ್ಣ ದಿನಗಳು. ನಾನು ಹೇಗಿದ್ದೇನೆಂಬ ಅರಿವು ನನಗಿರದಿದ್ದರೂ 'ಎಷ್ಟು ಮುದ್ದಾಗಿದೆ ನೋಡು' 'ಪುಟಾಣಿ ಪುಟ್ಟು' 'ಮುದ್ದು ಬಿಲ್ಲಿ' ಎಂದೆಲ್ಲಾ ಕರೆಯುತ್ತಿದ್ದುದರಿಂದ  ನಾನೊಂದು ಚೆಂದವಾದ ಬೆಕ್ಕಿನಮರಿಯಾಗಿರಬಹುದೇನೋ ಎಂದೆನಿಸುತ್ತಿತ್ತು. 



         'ಆ' ಮನೆಯವರು ನನ್ನನ್ನು 'ಬಿಲ್ಲಿ ಬಿಲ್ಲಿ' ಎಂದು ಕರೆಯುತ್ತಿದ್ದರು. ಪಕ್ಕದಮನೆಗೆ ಹೋದಾಗ ಅವರು ನನ್ನನ್ನು 'ರೋಜಿ' ಎಂದು ಕರೆಯುತ್ತಿದ್ದರು. ಸುತ್ತಮುತ್ತಲಿನ ಮನೆಗಳಲ್ಲಿ ನಾನೊಂದು ಆಕರ್ಷಣೆಯ ಬಿಂದುವಾಗಿದ್ದೆ. ಇದನ್ನು ಗರ್ವದಿಂದಲ್ಲ, ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಎಲ್ಲ ಮನೆಯವರು ನನಗೆ ವಿಧವಿಧದ ತಿಂಡಿತೀರ್ಥಗಳನ್ನು ಕೊಡುತ್ತಿದ್ದರು. 



          ಆದರೆ ನಾನು ಬೆಳಗಿನ ಬ್ರೇಕ್ ಫಾಸ್ಟ್ ಮಾಡಲು 'ಆ' ಮನೆಯ ಬಳಿಯೇ ಕಾಯುತ್ತಿದ್ದೆ. ಅವರು ಮಂಗಳೂರಿಗರಾಗಿದ್ದರಿಂದ ಒಣಮೀನನ್ನು ನೀರಿನಲ್ಲಿ ನೆನೆಸಿ ಮೃದುವಾಗಿಸಿ ಕೊಡುತ್ತಿದ್ದರು. ನಂತರ ಹಾಲು ಕುಡಿಯಲು ಕೊಡುತ್ತಿದ್ದರು. ಅವರು ಕೊಡದಿದ್ದರೆ ನಾನು ಹಠ ಮಾಡುತ್ತಿದ್ದೆ. ಮನೆಯ ಮುಂದೆ ಧರಣಿ ಕೂತು 'ಮ್ಯಾವ್.. ಮ್ಯಾವ್' ಎಂದು ಕಿರುಚುತ್ತಲೇ ಇರುತ್ತಿದ್ದೆ. 



          ಗಂಡ ಅಥವಾ ಹೆಂಡತಿ ಅಥವಾ ಇಬ್ಬರೂ ಬಂದು ನನಗೆ ಅತಿಥಿ ಸೇವೆ ಮಾಡುತ್ತಿದ್ದರು. ಒಮ್ಮೊಮ್ಮೆ ತಿಂಡಿ ಕೊಡಲು ಆಟವಾಡಿಸುತ್ತಿದ್ದರು. ವಾರಾಂತ್ಯದಲ್ಲಿ ಅವರ ಮಗಳೂ ಬಂದು ಸೇರುತ್ತಿದ್ದಳು. ಅವಳು ಯಾವುದೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅದೆಂತದೋ ಸೈಕಾಲಜಿಸ್ಟ್ ಎಂದು ಕೇಳಿದ ನೆನಪು. ಅವಳೂ ನನ್ನನ್ನು ಚೆನ್ನಾಗಿ  ಗೋಳುಹುಯ್ಯುತ್ತಾ ಆಟವಾಡಿಸುತ್ತಿದ್ದಳು. 
          ನಾನೂ ಕೂಡಾ ನನ್ನದೇ ರೀತಿಯಲ್ಲಿ ಅವರೆಲ್ಲರನ್ನೂ ಆಟವಾಡಿಸುತ್ತಿದ್ದೆ. ನನ್ನ ಹಲ್ಲು ಹಾಗೂ ಉಗುರುಗಳು  ಬೆಳೆಯತೊಡಗಿದ್ದವು. ಅದರ ಸದವಕಾಶವನ್ನು ಪಡೆದುಕೊಂಡ ನಾನು ಗಂಡನ ಸ್ಕೂಟರನ್ನು ಹತ್ತಿ ಸೀಟನ್ನು ಪರಪರನೆ ಕೆರೆಯುತ್ತಿದ್ದೆ.  ನನ್ನನ್ನು ಹಿಡಿಯಲು ಬಂದಾಗ ಚಕ್ರದಡಿಯಿಂದ ನುಸುಳಿ, ಸೀಟಿನ ಮೇಲೆ ಎಗರಿ, ಕೆಳಗೆ ಹಾರಿ, ಸ್ಕೂಟರ್ ಸುತ್ತು ಹೊಡೆದು ಸುಸ್ತು ಹೊಡೆಸುತ್ತಿದ್ದೆ. ನಂತರ  ಸ್ಕೂಟರಿನ ಮೇಲೆ ಮಹಾರಾಜನಂತೆ ಕುಳಿತುಕೊಳ್ಳುತ್ತಿದ್ದೆ. ರಾಜ್ಯವೊಂದನ್ನು ಗೆದ್ದಷ್ಟು ತೃಪ್ತಿ ನನಗಾಗ. 



          ನನಗೆ ತಿಂಡಿ ಕೊಡುತ್ತಾರೆ, ಹಾಲು ಕೊಡುತ್ತಾರೆ, ಮುದ್ದು ಮಾಡುತ್ತಾರೆ, ಆದರೂ ಮನೆಯ ಒಳಗೆ ಜಾಗ ಕೊಡಲು ಮಾತ್ರ ಸಿದ್ಧರಿರಲಿಲ್ಲ. ನನ್ನಿಂದ ಅವರು ಖುಷಿ ಪಟ್ಟುಕೊಳ್ಳುತ್ತಿದ್ದರೂ ಸಾಕಲು ಸಿದ್ಧರಿರಲಿಲ್ಲ. ಎಷ್ಟೇ ಆದರೂ ಸ್ವಾರ್ಥಿ ಮಾನವರು. ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡೋ ಏನೋ ಅವರ ಮಗಳೊಮ್ಮೆ 'ನಾವಿದನ್ನು ಮನೆಯಲ್ಲಿಟ್ಟುಕೊಂಡು ಸಾಕೋಣವಾ ಅಪ್ಪಾ?' ಎಂದು ಕೇಳಿದಳು. ಅವಳನ್ನೊಮ್ಮೆ ತಬ್ಬಿ ಮುದ್ದಾಡಲೇ ಎನ್ನುವಷ್ಟು ಖುಷಿಯಾಯಿತು. ಅಪ್ಪನ ಉತ್ತರಕ್ಕೆ ಕಾಯುತ್ತಿದ್ದೆ. ಅವಳ ಅಪ್ಪ 'ನೋಡಮ್ಮಾ.. ನೀನು ಬರೋದು ವಾರಕ್ಕೆ ಒಂದು ದಿನ ಮಾತ್ರ. ನಾವು ಇದನ್ನು ಮನೆಯಲ್ಲಿಟ್ಟುಕೊಂಡರೆ, ಅದರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳುವವರು ಯಾರು? ನಾವು ಬೆಳಿಗ್ಗೆ ಸ್ಟುಡಿಯೋಗೆ ಹೋದರೆ, ಮಧ್ಯಾಹ್ನ ಬಂದರೂ ಬರಬಹುದು ಅಥವಾ ರಾತ್ರಿಯೇ ಬರಬೇಕಾಗಬಹುದು. ಅಲ್ಲಿಯವರೆಗೆ ಈ ಬೆಕ್ಕನ್ನು ಮನೆಯಲ್ಲಿ ಕೂಡಿಟ್ಟು ಏನು ಮಾಡುವುದು? ಈಗಾದರೋ ಅದು ಸ್ವತಂತ್ರ ಜೀವಿ. ಎಲ್ಲಿ ಬೇಕಾದಲ್ಲಿ ಸುತ್ತಿಕೊಂಡು ಇರುತ್ತದೆ. ಆದ್ದರಿಂದ ಸಾಕುವುದು ಆಗದ ವಿಷಯ' ಎಂದು ಠರಾವು ಹೊರಡಿಸಿಬಿಟ್ಟರು. 
          ನನಗಾಗ ಆ ಮನುಷ್ಯ ವಿಲನ್ ಥರ ಕಂಡದ್ದಂತೂ ನಿಜ. ಆದರೆ ನಿಜವಾದ ಖಳನಾಯಕರ ಪರಿಚಯ ಮುಂದಿನ ದಿನಗಳಲ್ಲಿ ನನಗಾಯಿತು. ಅದನ್ನು ಮುಂದೊಮ್ಮೆ ಹೇಳುತ್ತೇನೆ.  ಅಂದ ಹಾಗೆ ನನ್ನ ಬಾಲ್ಯದ ದಿನಗಳ ವಿಡಿಯೋವನ್ನು ಇವರು ಮೊಬೈಲ್ನಲ್ಲಿ  ಸೆರೆಹಿಡಿದು ನನಗೆ ತೋರಿಸಿದ್ದರು. ನಾಳೆ ನಿಮಗೂ ತೋರಿಸಲು ಹೇಳುತ್ತೇನೆ. ಶುಭರಾತ್ರಿ.  

Saturday 24 August 2019

ನಾನೊಂದು ಬೆಕ್ಕು.

          ನಾನೊಂದು ಬೆಕ್ಕು. ನೀವೆಲ್ಲಾ ಬೀದಿ ನಾಯಿ ಅಂತೀರಲ್ಲ ಆ ಥರ ನಾನು ಬೀದಿ ಬೆಕ್ಕು. ನನಗೆ ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ನಾನು ತಬ್ಬಲಿಯಾಗಿದ್ದೆ. ಮುದ್ದು ಮಾಡುತ್ತಿದ್ದ ಅಮ್ಮ ಒಬ್ಬಳು ಇದ್ದಳು ಅನ್ನೋ ನೆನಪು ಮನಸ್ಸಿನ ಯಾವುದೋ ಮೂಲೆಯಲ್ಲಿ ಹುದುಗಿ ಹೋಗಿದೆ. ಏಕೆಂದರೆ ಈ ನಾಗರೀಕ ಸಮಾಜ ನನ್ನನ್ನು ತಾಯಿಯಿಂದ ದೂರ ಮಾಡಿತ್ತು. ಯಾವುದೋ ಹೋಟೆಲಿನಲ್ಲಿ ಕೆಲದಿನ ಕಳೆದ ನೆನಪು. ನನ್ನನ್ನು ಚಿಕ್ಕಂದಿನಿಂದಲೇ ಸಾಕಿದರೆ ನಾನು ಅಲ್ಲೇ ಇರುವೆ ಎಂದು ಆ ಹೊಟೇಲಿಗರ ನಂಬಿಕೆಯಾಗಿತ್ತು. ಒಂದು ದಿನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋದೆ. ನನಗೆ ತಾಯಿ ಬೇಕು ಅನ್ನಿಸುತ್ತಿತ್ತು.                   
          ಎಲ್ಲೆಲ್ಲೋ ಹುಡುಕಿದೆ. ಎಲ್ಲಿ ಹೋದರೂ ನಿರಾಸೆಯೇ ಕಾದಿತ್ತು. ಒಮ್ಮೆ ಬೆಳಗಿನ ಜಾವ, ತಾಯಿಯ ನೆರಳೆಲ್ಲಾದರೂ ಕಾಣಬಹುದೇನೋ ಎಂಬ ಆಸೆಯಿಂದ ವಾಕಿಂಗ್ ಹೊರಟಿದ್ದೆ. 'ಬೌ.. ಬೌ'  ಎಂದು ಬೊಗಳುತ್ತಿದ್ದ ನಾಯಿಯ ಅಬ್ಬರಕ್ಕೆ ಹೆದರಿ ದಿಕ್ಕು ಪಾಲಾಗಿ ಓಡಿ ಮನೆಯೊಂದರ ಕಿಟಕಿಯ ಸಜ್ಜಾ ಮೇಲೆ ಅವಿತು ಕುಳಿತೆ. ನಾಯಿ ದೂರಾದ ಮೇಲೆ ಸಜ್ಜಾದಿಂದ ಕೆಳಗೆ ಧುಮುಕಲು ಸಜ್ಜಾದೆ. ಕೆಳಗೆ ನೋಡಿದೆ. ಮೈ ನಡುಗಿತು. ಪ್ರಾಣಭಯದಿಂದ ಬಹು ಎತ್ತರಕ್ಕೇನೋ  ಏರಿ ಬಿಟ್ಟಿದ್ದೆ. ಧುಮುಕಲು ಭಯ. ಏನು ಮಾಡುವುದೆಂದು ತೋಚದೆ 'ಮ್ಯಾವ್ ಮ್ಯಾವ್' ಎಂದು ಅರಚುತ್ತಲೇ ಇದ್ದೆ. 
          'ಆ' ಮನೆಯಲ್ಲಿದ್ದ ಗಂಡ ಹೆಂಡತಿ ಹೊರಗೆ ಬಂದರು. ಗಂಡ ನನ್ನನ್ನು ನೋಡಿದೊಡನೆ ಹೆಂಡತಿಯ ಬಳಿ ಏನೋ ಹೇಳಿ ಕುರ್ಚಿಯ ಮೇಲೆ ನಿಂತು ಸಜ್ಜಾ ಮೇಲಿದ್ದ  ನನ್ನನ್ನು ನೋಡುತ್ತಿದ್ದ. ಇವನೇನು ಮಿತ್ರನೋ ಶತ್ರುವೋ ಎಂದು ಯೋಚಿಸುವಷ್ಟರಲ್ಲಿ ಆತ ನನ್ನನ್ನು ದೊಣ್ಣೆಯೊಂದರಿಂದ ನೂಕುತ್ತಿದ್ದ. ಆ ರಾಕ್ಷಸನಿಗೆ ನಾನು ನನ್ನ ಕೈಲಾದಷ್ಟು ಪ್ರತಿರೋಧ ಮಾಡಿ ಸಜ್ಜಾಗೆ ಅಂಟಿಕೊಂಡೇ ಕುಳಿತಿದ್ದೆ. ಆದರೆ ಆತನೆಲ್ಲಿ? ನನ್ನಂತಹ ಸಣ್ಣ ಪ್ರಾಣಿ ಎಲ್ಲಿ? ಹಂತ ಹಂತವಾಗಿ ಆದರೆ ಬಲವಂತವಾಗಿ ಆತ ನನ್ನನ್ನು ನೂಕುತ್ತಿದ್ದ. ನೋಡ ನೋಡುತ್ತಿದ್ದಂತೆ ನಾನು ಸಜ್ಜಾದ ತುದಿಗೆ ಬಂದು ಬಿಟ್ಟಿದ್ದೆ. ಎದೆ ಬಾಯಿಗೆ ಬಂದಂತಾಗಿತ್ತು. ಕೊನೆಗೂ ಆತ ತಳ್ಳಿಯೇ ಬಿಟ್ಟ. 'ಆಯಿತು ನನ್ನ ಕಥೆ ಮುಗಿಯಿತು ಕೈಕಾಲು ಮುರಿಯುವುದೋ, ಪ್ರಾಣವೇ ಹೋಗುವುದೋ?'  ಎಂಬ ಪ್ರಶ್ನೆ ಕ್ಷಣಾರ್ಧದಲ್ಲಿ ಮೂಡಿ ಬಂತು. ಆದರೆ...  
          ನಾನು ಕೆಳಗೆ ಬೀಳಬಾರದೆಂದು ದೊಡ್ಡದೊಂದು ವಿಡಿಯೋಕಾನ್ 'ಡಿಶ್' ತಟ್ಟೆಯನ್ನು ಹಿಡಿದುಕೊಂಡು ಆತನ ಹೆಂಡತಿ ನಿಂತಿದ್ದಳು. ನಾನು ಅದರಲ್ಲಿ ಬಿದ್ದೆ. ಮೈಗೆ ಏಟಾಗದಿರಲೆಂದು ಒಂದೆರಡು ಬಟ್ಟೆಯನ್ನು ಮಡಿಸಿಟ್ಟಿದ್ದಳು. ನಿಧಾನವಾಗಿ ನೆಲಕ್ಕೆ ಇಳಿಸಿದಳು. 'ಬದುಕಿದೆಯಾ ಬಡಜೀವವೇ' ಎಂದು ಓಟಕಿತ್ತೆ. ಏದುಸಿರು ಸ್ಥಿಮಿತಕ್ಕೆ ಬಂದ ಮೇಲೆ ಒಂದು ಕ್ಷಣ ಯೋಚಿಸಿದೆ.  ನಾನು ಅವರನ್ನು ರಾಕ್ಷಸರೆಂದು ಅಂದುಕೊಂಡೆ, ಆದರೆ ಅವರು ಎಷ್ಟೊಂದು ಉಪಕಾರ ಮಾಡಿದರು. 'ಛೆ! ನನ್ನ ಜನ್ಮಕ್ಕಿಷ್ಟು' ಎಂದು ಪಶ್ಚಾತ್ತಾಪ ಪಟ್ಟೆ. 
          ಮರುದಿನ ಬೆಳಗ್ಗೆ ಸೂರ್ಯ ಮೂಡುವ ಮುನ್ನವೇ 'ಆ' ಮನೆಯ ಬಾಗಿಲು ಕಾಯುತ್ತಿದ್ದೆ. ರವಿಯು ಆಗಸದಲ್ಲಿ ಹೊಂಬಣ್ಣ ಮೂಡಿಸುತ್ತಿದ್ದಂತೆ ವಾಕ್ ಹೋರಾಡಲು ಸಿದ್ಧನಾಗಿ ಬಂದ ಗಂಡ ಹೊರಬಂದು ಮೆಟ್ಟಿಲ ಮೇಲೆ ಕುಳಿತುಕೊಂಡು ಹೆಂಡತಿಗಾಗಿ ಕಾಯುತ್ತಿದ್ದ. ನಾನು ನಿಧಾನವಾಗಿ ಆತನ ಬಳಿ ಹೋದೆ. ಸ್ವಲ್ಪ ಧೈರ್ಯ ಮಾಡಿ ಆತನ ತೊಡೆಯ ಮೇಲೆ ಹತ್ತಿ ಕುಳಿತೆ.


          ಅದ್ಯಾವ್ದೋ ಜೀನ್ಸ್ ಪ್ಯಾಂಟ್ ಇರಬೇಕು, ಚುಮುಚುಮು ಚಳಿಗೆ ಅದು ಹಿತವಾಗಿತ್ತು. ಆತ ನಿಧಾನವಾಗಿ ನನ್ನ ಮೈ ಸವರತೊಡಗಿದ. ನನಗೆ ಹಾಯೆನಿಸುತ್ತಿತ್ತು. ನಂತರ ಎರಡೂ ಕೈಗಳಿಂದ ಗಟ್ಟಿಯಾಗಿ ನನ್ನನ್ನು ಹಿಡಿದುಕೊಂಡ. ಗಡಗಡ ನಡುಗುತ್ತಿದ್ದ ನನ್ನ ಮೈ ಬೆಚ್ಚಗಾದ ಅನುಭವ. ನಂತರ ಹೊರಬಂದ ಆತನ ಹೆಂಡತಿಯೂ ಕೂಡ ನನ್ನನ್ನು ಮುದ್ದಾಡಿದಳು. ನನಗೆ ತಾಯ ನೆನಪನ್ನು  ಮೂಡಿಸಿದಳು. ಮುಂದೇನಾಯಿತು? 
ನಾಳೆ ಹೇಳುವೆ.