Tuesday, 15 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 12


        ತಂತ್ರ ಎಂದೊಡನೆ ಜನರಲ್ಲಿ ಭಯಾನಕ ಕಲ್ಪನೆಗಳಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದಾಗಿ ಅದರಲ್ಲಿರುವ ದಕ್ಷಿಣಮಾರ್ಗ ಹಾಗೂ ವಾಮಮಾರ್ಗ ಪೂಜಾಪದ್ಧತಿಗಳು. ಜನಸಾಮಾನ್ಯರಿಗೆ ತಂತ್ರ ಅಥವಾ ತಾಂತ್ರಿಕ ಎಂದೊಡನೆ ಮನಸ್ಸಲ್ಲಿ ಮೂಡುವುದು ವಾಮಮಾರ್ಗ ಒಂದೇ! ವಾಮಮಾರ್ಗದಲ್ಲಿ ಕೆಲವು 'ಕ್ಷುದ್ರದೇವತೆ'ಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ (ನಾನಂತೂ 'ಕ್ಷುದ್ರ ದೇವತೆ' ಎಂದು ಕರೆಯಲಾರೆ). ಇವು ನಕಾರಾತ್ಮಕ ಶಕ್ತಿಯನ್ನು/ಆಲೋಚನೆಗಳನ್ನು ಉಪಯೋಗಿಸುವ ವಿಧಾನಗಳು
        ಇದಲ್ಲದೇ 'ಪಂಚಮಕಾರ'ಗಳ ಅನುಷ್ಠಾನದ ತರಬೇತಿಯಿದೆ. ಈ ಪಂಚಮಕಾರಗಳು ಮದ್ಯ,ಮಾಂಸ,ಮತ್ಸ್ಯ,ಮುದ್ರಾ, ಮಿಥುನಗಳನ್ನು ಒಳಗೊಂಡಿವೆ. ಮೇಲ್ನೋಟಕ್ಕೆ ಮಡಿವಂತರ ಮನಸ್ಸಿಗೆ ಇದು ಅಪಥ್ಯದಂತೆ ಕಂಡರೂ, ಅದರ ಅರ್ಥ ಬೇರೆಯೇ ಇದೆ. ಪಶುಭಾವದಿಂದ ವೀರಭಾವಕ್ಕೆ ಕರೆದೊಯ್ದು, ದಿವ್ಯ ಭಾವದಲ್ಲಿ ನೆಲೆಗೊಳಿಸುವುದು ತಂತ್ರ ವಿದ್ಯೆಯ ಪರಮಗುರಿ. ಇದರ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.
        ಈಗ ನನ್ನ ತಾಂತ್ರಿಕ ಪಯಣದ ಹಾದಿಯನ್ನು ವಿವರಿಸುತ್ತೇನೆ. ನನಗೆ ಗುರುಗಳು ಹೇಳಿದ ದೇವಿ ಅನುಷ್ಠಾನದ ಅವಧಿ ಮುಗಿಸಿದ್ದುದರಿಂದ, ಅವರು ಮತ್ತೆ ಬರುವವರೆಗೂ  ದೈನಂದಿನ ಸಾಧಾರಣ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಆಗ ಸಾಕಷ್ಟು ಸಮಯ ಸಿಗುತ್ತಿತ್ತು. ಒಮ್ಮೆ ಗೆಳೆಯ ಭಾಮಿ ಸುಧಾಕರ ಶೆಣೈ ವ್ಯಾಯಾಮ ಶಾಲೆಯಲ್ಲಿ ನನಗೆ ಸಿಕ್ಕಿದಾಗ 'ನಾಳೆಯಿಂದ ವೆಂಕಟರಮಣ ದೇವಸ್ಥಾನದಲ್ಲಿ ವೇದಸೂಕ್ತಗಳ ಬಗ್ಗೆ ವಿವರಣೆ ಅವುಗಳನ್ನು ಕ್ರಮವಾಗಿ ಉಚ್ಚರಿಸುವ ಹಾಗೂ ಅಭ್ಯಸಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಸಕ್ತಿ ಇದ್ದರೆ ನೀನೂ ಸೇರಿಕೊಳ್ಳಬಹುದು' ಎಂದು ಹೇಳಿದ. ಎಲ್ಲವೂ ಅದಾಗಿ ಹುಡುಕಿ ಬಂದಂತೇ ಭಾಸವಾಗಿತ್ತು. ಬಿಡುವಾಗಿಯೂ ಇದ್ದೆ, ಹುಡುಕಿ ಹೋದರೂ ಸಿಗದಂತಹ ಅವಕಾಶ ತಾನಾಗಿಯೇ ಒದಗಿತ್ತು!
        ಮಾರನೇ ದಿನದಿಂದಲೇ ಬೆಳಿಗ್ಗೆ ವೆಂಕಟರಮಣ ದೇವಸ್ಥಾನಕ್ಕೆ ತರಬೇತಿಗಾಗಿ ಹೋಗಲಾರಂಭಿಸಿದೆ. ಋಗ್ವೇದದ ಪ್ರಾತಃಸೂಕ್ತದಿಂದ ನನ್ನ ಕಲಿಕೆ ಆರಂಭವಾಯಿತು. ನಂತರ ಶ್ರೀಸೂಕ್ತ, ಪುರುಷಸೂಕ್ತ, ವಾಗಾಂಭ್ರಣೀ ಸೂಕ್ತ ಮುಂತಾದ ಮುಖ್ಯ ಸೂಕ್ತಗಳನ್ನು ಇಷ್ಟಪಟ್ಟು ಕಲಿತೆ. ಆಗ ನನಗೆ ನೆರವಾದ ವೇದಮೂರ್ತಿ ಶ್ರೀ ಹರಿಭಟ್ಟರ ಸಹಾಯ, ಸಹಕಾರವನ್ನು ಎಂದಿಗೂ ಮರೆಯಲಾರೆ.          ನನಗೆ ಪ್ರೋತ್ಸಾಹ ನೀಡುತ್ತಿದ್ದ ಗೆಳೆಯರಾದ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ ಬಾಳಿಗಾ ಅವರೆಲ್ಲರೊಡನೆ ಸಂಜೆ ಬೆರೆಯುತ್ತಿದ್ದೆ. ಯಶವಂತ ವ್ಯಾಯಾಮ ಶಾಲೆ, ನಮ್ಮ ಮಾತುಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಇನ್ನೊಬ್ಬ ಗೆಳೆಯ 'ಮಾಣೂರು ಅಚ್ಚು'. ನಾನು ಏನು ಕೇಳಿದರೂ ಇಲ್ಲವೆನ್ನದೇ ಒದಗಿಸುತ್ತಿದ್ದ. ಆರಂಭದ ದಿನಗಳಲ್ಲಿ ನನಗೆ ಕುಳಿತುಕೊಂಡು ಧ್ಯಾನ ಮಾಡಲು ಜಿಂಕೆಯ ಚರ್ಮವೊಂದು ಬೇಕಾಗಿತ್ತು. ಯಾರೂ ಸಾಯಿಸದೇ, ತಾನಾಗಿ ಸತ್ತ ಚರ್ಮವೇ ಬೇಕಾಗಿತ್ತು. 'ಅಚ್ಚು' ಯಾವುದೋ ಮಠಕ್ಕೆ ಹೋಗಿ ಅವರ ಮನವೊಲಿಸಿ ಜಿಂಕೆಯ ಚರ್ಮವೊಂದನ್ನು ಎರಡು ದಿನಗಳಲ್ಲಿ ಒದಗಿಸಿ ಕೊಟ್ಟಿದ್ದ. ನಾನು ಮತ್ತೆ ಹಿಂದಿರುಗಿ ಬರುವಾಗ, ಅದನ್ನು ಮತ್ತೆ ಅದೇ ಮಠಕ್ಕೆ ನೀಡುವಂತೆ ಹೇಳಿ ಆತನಿಗೆ ವಾಪಸ್ಸು ಕೊಟ್ಟೆ.
        ನನ್ನ ಗುರುಗಳು ಹಿಂದಿರುಗಿ ಬಂದರು. ನನ್ನನ್ನು ಅವರದ್ದೇ ಆದ ರೀತಿಯಲ್ಲಿ ಪರೀಕ್ಷಿಸಿದರು. ನನ್ನ ಕಣ್ಣುಗಳನ್ನು ಎವೆಯಿಕ್ಕದೇ ಕ್ಷಣಕಾಲ ನೋಡಿದರು. ಬಲ ಕೈಯ್ಯನ್ನು ತಮ್ಮ ಕೈಯ್ಯಲ್ಲಿ ಹಿಡಿದು ಕೆಲಕಾಲ ತೂಗುತ್ತಾ ಇದ್ದರು. ದೇವೀ ಮಂತ್ರದ ಸಣ್ಣ ಪ್ರಯೋಗವೊಂದನ್ನು ನನ್ನ ಕೈಯ್ಯಲ್ಲಿ ಮಾಡಿಸಿ ನೋಡಿದರು. ಅದನ್ನು ಕಣ್ಣಾರೆ ಕಂಡಾಗ ನನಗೇ ಅಚ್ಚರಿಯಾಯಿತು. ಅದೇನೆಂಬುದು ಇಲ್ಲಿ ಅಪ್ರಸ್ತುತ.
        'ನಿನಗೆ ದೇವೀ ಮಂತ್ರವು ಒಲಿದಿದೆ, ಈಗ ಆ ಮಂತ್ರ ನಿನಗೆ 'ಸಿದ್ಧಿ'ಯಾಗಲು ಆ ಮಂತ್ರದ ಕೆಲವು ಜಪ ಸಂಸ್ಕಾರಗಳನ್ನು ಮಾಡುತ್ತೇನೆ ' ಎಂದು ಹೇಳಿ ಕೆಲವಾರು ಸಂಸ್ಕಾರಗಳನ್ನು ಮಾಡಿದರು. ಹಲವಾರು ಸಂಸ್ಕಾರಗಳನ್ನು ಮುಗಿಸಿ 'ಇಲ್ಲಿಗೆ ಈ ದೇವೀ ಮಂತ್ರ ನಿನಗೆ ಸಿದ್ಧಿಯಾಗಿದೆ, ವಿವೇಕ ಹಾಗೂ ವಿವೇಚನೆಯಿಂದ ಬಳಸು' ಎಂದು ಹೇಳಿ ಆಶೀರ್ವದಿಸಿದರು. 



        ಜಪದ ಬಗ್ಗೆ ವಿವರವಾಗಿ, ನಾನು ಅಲ್ಲಿದ್ದಾಗ ಬರೆದ 'ಜಪ, ನನ್ನ ಅನುಭವದಲ್ಲಿ' ಪುಸ್ತಕದಲ್ಲಿ ಬರೆದಿದ್ದೇನೆ. ಅದನ್ನು ಶ್ರೀ ಹರಿಭಟ್ಟರು ಹೊಸದಿಗಂತ ಪತ್ರಿಕೆಯ 'ದಿಗಂತ ಪ್ರಕಾಶನ'ದ  ಮೂಲಕ ಪ್ರಕಟಿಸಿದ್ದರು. ಈಗ ಅದರ ಪ್ರತಿಗಳು ಬಹುಶಃ ಲಭ್ಯವಿಲ್ಲವೇನೋ.
        ಮುಂದಿನ ಅನುಷ್ಠಾನಕ್ಕೆ ನನ್ನನ್ನು ಅಣಿಗೊಳಿಸಿದರು ನನ್ನ ಗುರುಗಳು. ಶಕ್ತಿಯ ಆರಾಧನೆಯ ನಂತರ ಶಿವನ ಆರಾಧನೆ. ತಾಂತ್ರಿಕ ಆರಾಧಕರನ್ನು 'ಶಾಕ್ತೇಯರು' ಎಂದೂ ಕರೆಯುತ್ತಾರೆ.ಶಕ್ತಿ ಹಾಗೂ ಶಿವನ ಆರಾಧನೆ ಇಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ.
       ಶಿವನ ಆರಾಧನೆಗೆ ನನ್ನನ್ನು ಗುರುಗಳು ಅನುಗೊಳಿಸಿದ್ದು ಹೇಗೆ? ಶಿವ ಮಂತ್ರದ ಅನುಷ್ಠಾನದಲ್ಲಿ ನನಗಾದ ವಿಶೇಷ ಅನುಭವಗಳೇನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

No comments:

Post a Comment