Monday 30 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 3

        ನಂದಳಿಕೆಗೆ ಹೋಗಿ ನಮ್ಮ ಮೂಲವಿಗ್ರಹವನ್ನು ನೋಡಬೇಕೆಂಬ ಆಸೆ ಬಾಲ್ಯದಿಂದಲೇ ಚಿಗುರತೊಡಗಿತ್ತು. ಒಬ್ಬನೇ ಬಸ್ಸು ಹತ್ತಿ ನಂದಳಿಕೆಗೆ ಹೋದೆ. ಅಲ್ಲಿ ಒಬ್ಬ ಅಂಗಡಿಯಾತನನ್ನು 'ಇಲ್ಲಿ ಮಹಾಮಾಯಿದೇವಿ ದೇವಸ್ಥಾನ ಎಲ್ಲಿದೆ?' ಎಂದು ಕೇಳಿದೆ. ಆತ 'ಇಲ್ಲಿ ಮಹಾಮಾಯಿ ದೇವಸ್ಥಾನ ಯಾವುದೂ ಇಲ್ಲ. ಆದರೆ ದೇವಿಯ ಎರಡು ದೇವಸ್ಥಾನಗಳಿವೆ' ಎಂದ. 'ಪ್ರಾಣಿಬಲಿ ಎಲ್ಲಿ ನೀಡುತ್ತಾರೆ?' ಎಂದು ಮರುಪ್ರಶ್ನಿಸಿದೆ. ಅದಕ್ಕೆ ಆತ 'ಎರಡು ಕಡೆಯೂ ಕೊಡುತ್ತಾರೆ' ಎಂದು ಉತ್ತರಿಸಿದ. ನಾನು ಕೊಂಚ ತಬ್ಬಿಬ್ಬಾದೆ. ಎರಡೂ ದೇವಸ್ಥಾನಗಳನ್ನು ನೋಡಿಯೇ ಬಿಡುವುದು ಎಂದು ತೀರ್ಮಾನಿಸಿದೆ. 
        ಮೊದಲು ಹತ್ತಿರವಿದ್ದ  ದೇವೀ ದೇವಸ್ಥಾನಕ್ಕೆ ಹೋದೆ. ಅಲ್ಲಿದ್ದ ಪೂಜಾರಿಯ ಬಳಿ ಹೋಗಿ 'ಇಲ್ಲಿ ನವರಾತ್ರಿಯಂದು ಬಲಿ ಕೊಡುವ ಪದ್ಧತಿಯಿದೆಯೇ?' ಎಂದು ಕೇಳಿದೆ. ಅದಕ್ಕೆ ಅವರು 'ಹೌದು, ಪಾತ್ರಿಗೆ ಆವೇಶ ಬಂದಾಗ ರಸ್ತೆಯುದ್ದಕ್ಕೂ ಕೋಳಿಯ ಬಲಿ ಕೊಡುತ್ತಾರೆ' ಎಂದು ನಗುತ್ತಾ ಹೇಳಿದರು. 'ಈ ಮೂರ್ತಿ ನಿಮಗೆ ಸಿಕ್ಕಿದ್ದು ಎಲ್ಲಿಂದ?' ಎಂದು ಕುತೂಹಲದಿಂದ ಕೇಳಿದೆ.  'ಈ ವಿಗ್ರಹ ನಾವೇ ಮಾಡಿಸಿದ್ದು' ಎಂದು ಅವರು ಹೇಳಿದಾಗ ನಿರಾಸೆಯಾಯಿತು. 'ಇನ್ನೊಂದು ದೇವೀ ದೇವಸ್ಥಾನ ಇದೆಯಂತಲ್ಲ, ಅದು ಎಲ್ಲಿದೆ?' ಎಂದೆ. ಅವರು ತೋರಿಸಿದ ದಾರಿಯಲ್ಲಿ ಇನ್ನೊಂದು ದೇವಸ್ಥಾನವನ್ನು ಹುಡುಕಿ ಹೊರಟೆ.  


        ನಗರ ಪ್ರದೇಶದಿಂದ ತುಸು ಒಳಗಿತ್ತು ಆ ಇನ್ನೊಂದು ದೇಗುಲ. ಆ ಭಾಗವನ್ನು ಕಲ್ಯಾಗ್ರಾಮದ 'ಕೈರಬೆಟ್ಟು' ಎಂದು ಕರೆಯುತ್ತಾರೆ. ಮತ್ತೆ ಪೂಜಾರಿಯವರನ್ನು ಭೇಟಿ ಮಾಡಿ ಅದೇ ಪ್ರಶ್ನೆಯನ್ನು ಕೇಳಿದೆ. 'ಯಾರೋ ಕೊಂಕಣಿಯವರಿಂದ ನಮಗೆ ಸಿಕ್ಕಿದ ಮೂರ್ತಿಯಂತೆ ಇದು' ಎಂದು ಅವರು ಹೇಳಿದಾಗ ಮೈಯೆಲ್ಲಾ ರೋಮಾಂಚನವಾಯಿತು. 'ಆ ಕೊಂಕಣಿಯವರು ನಾವೇ. ನಮ್ಮ ಪೂರ್ವಜರು ನೀಡಿದ ಮೂರ್ತಿ ಇದು' ಎಂದು ಸವಿಸ್ತಾರವಾಗಿ ಮೂರ್ತಿಯ ಕಥೆಯನ್ನು ಅವರಿಗೆ ಅರುಹಿದೆ. ಪೂಜಾರಿಯವರಿಗೂ ಬಹಳ ಸಂತೋಷವಾಯಿತು.  
        ದೇವಿಗೆ ಮಂಗಳಾರತಿ ಮಾಡಿ ನನಗೆ ಆರತಿ ನೀಡಿದರು. ಮತ್ತೆ ಒಳಗೆ ಹೋದವರು ದೇವೀ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ನಾನು ಆವಾಕ್ಕಾದೆ. ನಮ್ಮಲ್ಲಿ ವಿಪರೀತ ಮಡಿ ಮೈಲಿಗೆ, ಅಲ್ಲದೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಮೇಲೆ  ಅಲ್ಲಿಂದ ಕದಲಿಸಲು ಸಾಧ್ಯವಿರುವುದಿಲ್ಲ. ದೇವಿಯ ಮೈಮೇಲಿದ್ದ ಹೂವೊಂದನ್ನು ಕೊಟ್ಟು 'ತೆಗೆದುಕೊಳ್ಳಿ, ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಕಣ್ತುಂಬಿಕೊಳ್ಳಿ' ಎಂದು ಹೇಳುತ್ತಾ ಮೂರ್ತಿಯನ್ನು ನನ್ನ ಕೈಗೆ ವರ್ಗಾಯಿಸಿದರು. ಭಾವುಕನಾಗಿ ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ತದೇಕಚಿತ್ತನಾಗಿ ನೋಡಿದೆ. ನುಣುಪಾದ ಪುಟ್ಟ ವಿಗ್ರಹ. ನದಿಯ ನೀರಿನಲ್ಲಿ ಬಹುಕಾಲ  ದ್ದುದರಿಂದಲೋ ಏನೋ, ತಣ್ಣಗೆ ಸವೆದಿತ್ತು. ಕಾಲಿನಡಿಯಲ್ಲಿ ಬೆಳ್ಳಿ ಪೀಠ. ಬಲದ ಕೈ ತುಂಡಾಗಿದ್ದುದರಿಂದ ಒಂದು ಬೆಳ್ಳಿಯ ಕಟ್ಟನ್ನು ಹಾಕಲಾಗಿತ್ತು. ಮೂರ್ತಿಯನ್ನು ನೋಡುತ್ತಾ ಕಣ್ಣಾಲಿಗಳು ಮಂಜಾದವು. ಇಡೀ ಇತಿಹಾಸ ಮನಸ್ಸಿನಲ್ಲಿ ಮೂಡಿತ್ತು. ಅದನ್ನೊಮ್ಮೆ ಎದೆಗೆ ಅಪ್ಪಿಕೊಂಡು ಅವರಿಗೆ ಹಿಂದಿರುಗಿಸಿದೆ. 
        ಈ ಮರೆಯಲಾಗದ ಜೀವನಾನುಭವವನ್ನು ನನ್ನ ಮಡದಿಯೂ ಅನುಭವಿಸಲಿ ಎಂಬ ಉದ್ದೇಶದಿಂದ ಮದುವೆಯಾದೊಡನೆ ಮಡದಿಯನ್ನು ಕರೆದುಕೊಂಡು ಆ ದೇಗುಲಕ್ಕೆ ಮತ್ತೆ ಭೇಟಿ ನೀಡಿದೆ. ಕೈಯಾರೆ ಮೂರ್ತಿಯನ್ನು ಹಿಡಿದು ಭಾವುಕರಾದ ಇಬ್ಬರಿಗೂ ಅದೊಂದು ಮನದಾಳದ ಆನಂದದ ಅಪೂರ್ವ ಅನುಭವ.   
                                                              ನಂದಳಿಕೆಯಲ್ಲಿರುವ ಮುದ್ದಣ ಕವಿಯ ಸ್ಮಾರಕ ಭವನ

         ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದೆ ಬರೆಯುತ್ತೇನೆ. 

Sunday 29 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 2


        ನಮ್ಮ ಅಂದಿನ ಪುರೋಹಿತರು ತಾವು ಮಧ್ವಾಚಾರ್ಯರ ಪರಂಪರೆಯ ಅನುಯಾಯಿಗಳಾಗಿರುವುದರಿಂದ, ಪ್ರಾಣಿಹತ್ಯೆ ಮಾಡುವುದು ನಿಷಿದ್ಧ ಎಂದು ಖಡಾ ಖಂಡಿತವಾಗಿ ಹೇಳಿದಾಗ 'ಅವೇಶ'ದಿಂದೊಡಗೂಡಿದ ಪಾತ್ರಿ 'ಹಾಗಾದರೆ ನಾನು ಇಲ್ಲಿರಲು ಸಾಧ್ಯವಿಲ್ಲ. ನನ್ನ ವಿಗ್ರಹವನ್ನು ಕೇಳಿಕೊಂಡು ಬಂದವರೊಬ್ಬರಿಗೆ ಅದನ್ನು ನೀಡಿ, ನಿಮಗೆ ಬೇಕಾದ ಹಾಗೆ ಮತ್ತೊಂದು ವಿಗ್ರಹವನ್ನು ಕೆತ್ತಿಸಿಕೊಂಡು ನಿಮ್ಮ ವಿಧಿವಿಧಾನಗಳನ್ನು ನಡೆಸಬಹುದು. ನವರಾತ್ರಿಯ ಒಂಭತ್ತು ದಿನಗಳು ನಾನು ಸಾತ್ವಿಕ ರೂಪದಲ್ಲಿ ಇಲ್ಲಿ ಇರುತ್ತೇನೆ, ತಾಮಸ ರೂಪದಲ್ಲಿ ಅಲ್ಲಿಯೂ ಇರುತ್ತೇನೆ' ಎಂದು ಫರ್ಮಾನು ಹೊರಡಿಸಿದರಂತೆ. ನಮ್ಮ ಕುಟುಂಬ ಮೂಲಸ್ಥರೊಡನೆ ಮಾತನಾಡಿ, ಪುರೋಹಿತರು ಅದಕ್ಕೆ ಸಮ್ಮತಿಸಿದರಂತೆ. 
        ಇದಾದ ಕೆಲವು ದಿನಗಳಲ್ಲಿ ನಂದಳಿಕೆ(ಮುದ್ದಣ ಕವಿಯ ಊರು)ಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕನಸಿನಲ್ಲಿ ದೇವಿ ಕಾಣಿಸಿಕೊಂಡು ಇಂತಹ ದಿಕ್ಕಿನಲ್ಲಿ ಕಾಣಸಿಗುವ ದೇವೀ ದೇವಸ್ಥಾನದಲ್ಲಿರುವ ತನ್ನನ್ನು ಅಲ್ಲಿಂದ ಕರೆತಂದು ನಂದಳಿಕೆಯಲ್ಲಿ ದೇಗುಲ ಕಟ್ಟಲು ಆದೇಶ ನೀಡಿರುವುದಾಗಿ ಹೇಳಿಕೊಂಡಾಗ ನಮ್ಮ ಹಿರಿಯರಿಗೆ ಅಚ್ಚರಿ ಆಯಿತಂತೆ. 
        ಆ ವ್ಯಕ್ತಿಯ ಪೂರ್ವಾಪರಗಳನ್ನು ವಿಚಾರಿಸಿದ ಮೇಲೆ ಒಲ್ಲದ ಮನಸ್ಸಿನಿಂದ ಅವರಿಗೆ ವಿಗ್ರಹವನ್ನು ಹಾಗೂ ಅದರ ಚಿನ್ನಾಭರಣವನ್ನು ನೀಡುತ್ತಾರೆ. ಆದರೆ ಪ್ರತಿ ನವರಾತ್ರಿಯಂದು ಆ ಚಿನ್ನಾಭರಣವನ್ನು ಹೊಸದಾಗಿ ನಿರ್ಮಿಸಲಿರುವ ವಿಗ್ರಹವನ್ನು ಅಲಂಕರಿಸಲು ತರತಕ್ಕದ್ದು ಎಂಬ ಒಂದು ಕರಾರನ್ನು ಅವರ ಮುಂದಿಡುತ್ತಾರೆ. ಅದಕ್ಕೆ ಆ ವ್ಯಕ್ತಿಯು ಒಪ್ಪಿ ಮುಂದೆ ಅಂತೆಯೇ ನಡೆಯುತ್ತಾರೆ. ಕಾಲ ಕಳೆದಂತೇ ಒಂದು ವರ್ಷ ಅಲ್ಲಿಂದ ಆಭರಣಗಳನ್ನು ಅವರು ತರದೇ ಹೋದಾಗ ನಮ್ಮ ಹಿರಿಯರು ಪ್ರಶ್ನಿಸಿದರಂತೆ. ಆಗ ಅವರು ಉಡಾಫೆಯ ಉತ್ತರವನ್ನು ನೀಡಿದ ಪ್ರಸಂಗವೂ ನಡೆಯಿತಂತೆ. 
        ಈ ವಿಚಾರವನ್ನು ನವರಾತ್ರಿಯ ಕೊನೆಯ ದಿನ ಆವೇಶದ ಪಾತ್ರಿಯ ಬಳಿ ಹೇಳಿಕೊಂಡಾಗ 'ಅದನ್ನು ಇಲ್ಲಿ ತರಿಸುತ್ತೇನೆ' ಎಂದು ಹೇಳಿದರಂತೆ. ಇದಾದ ಮಾರನೆಯ ದಿನವೇ ನಂದಳಿಕೆಯ ದೇವಸ್ಥಾನದ ಕಡೆಯವರು ಎಲ್ಲಾ ಚಿನ್ನಾಭರಣಗಳನ್ನು ತಂದು ಒಪ್ಪಿಸಿ 'ಇನ್ನು ಈ ಆಭರಣಗಳು  ಇಲ್ಲಿಯೇ ಇರಲಿ, ನಾವಂತೂ ಇನ್ನು ಮುಂದೆ ಅಲ್ಲಿಗೆ ಕೊಂಡೊಯ್ಯುವುದಿಲ್ಲ' ಎಂದು ಹೇಳಿ ಆಭರಣವೆಲ್ಲವನ್ನೂ ಒಪ್ಪಿಸಿ ಹೊರಟು ಹೋದರಂತೆ. ಈಗಲೂ ಆ ಆಭರಣಗಳು ನಮ್ಮ ದೇಗುಲದ ವಶದಲ್ಲಿಯೇ ಇವೆ. ನವರಾತ್ರಿಯ ದಿನಗಳಂದು ಮಾತ್ರ ಅವುಗಳಿಂದ ದೇವಿಯನ್ನು ಅಲಂಕರಿಸುತ್ತಾರೆ. 
        ಹೊಸ ವಿಗ್ರಹದ ಬಗ್ಗೆ ಕೆಲವು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಅದನ್ನು ಕೆತ್ತಿದ ಶಿಲ್ಪಿ ಕಾರ್ಕಳದ ರಂಜಾಳ ಶೆಣೈ ವಂಶದವರು. ಈ ವಿಗ್ರಹದ ವೈಶಿಷ್ಟ್ಯವೇನೆಂದರೆ ದೇವಿಗೆ ನಾಲ್ಕು ಕೈಗಳಿವೆ. ಅವುಗಳಲ್ಲಿ ಬಲಗಡೆಯ ಎರಡು ಕೈಗಳಲ್ಲಿ ವಿಷ್ಣುವಿನ ಶಕ್ತಿಯ ಸಂಕೇತವಾಗಿ 'ಗದೆ' ಹಾಗೂ 'ಚಕ್ರ'ವಿದೆ. ಎಡಗಡೆಯ ಎರಡು ಕೈಗಳಲ್ಲಿ ಶಿವನ ಸಂಕೇತವಾಗಿ 'ತ್ರಿಶೂಲ' ಹಾಗೂ 'ಡಮರು' ಇದೆ. ಹೀಗೆ ಈ ಮೂರ್ತಿಗೆ ಹರಿ ಹಾಗೂ ಹರನ ಭಕ್ತರನ್ನು ಭೇದ ಭಾವವಿಲ್ಲದೇ ಸೆಳೆಯುವ ಆಕರ್ಷಣೆಯಿದೆ. 

        ದೇವಿಯ ಪ್ರತಿಷ್ಠೆ, ಮಾಧ್ವ ಮತದ ಸಂಪ್ರದಾಯದಂತೇ ನಡೆಯಲ್ಪಟ್ಟಿದೆ. ಸಾಲಿಗ್ರಾಮದ ಪೂಜೆಯ ನಂತರವೇ ದೇವಿಗೆ ಪೂಜೆ ಸಲ್ಲುವುದು. ಈ ಎಲ್ಲಾ ವಿವರಗಳನ್ನು ನನಗೆ ಹೇಳಿದ್ದು ಸುಮಾರು ನೂರಾ ಹನ್ನೆರಡು ವರ್ಷ ಬದುಕಿ ಬಾಳಿದ ನನ್ನ ತಂದೆಯ ಅಜ್ಜಿ 'ಅಪ್ಪಿಮಾಯಿ'. 
        ನಾನು ನಂದಳಿಕೆಗೆ ಹೋಗಿ ಮೂಲ ವಿಗ್ರಹವನ್ನು ನೋಡಿದ್ದು ಹಾಗೂ ಒಬ್ಬ ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದಿನ  ಕಂತಿನಲ್ಲಿ ಬರೆಯುತ್ತೇನೆ. 

Saturday 28 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 1

        
                                                                                                 Pic courtesy : Ashok Nayak 

ನಾಳೆಯಿಂದ ನವರಾತ್ರಿ ಉತ್ಸವದ ಆರಂಭ. ನಮ್ಮ ಊರು ಬಂಟವಾಳದಲ್ಲಿ ನಮ್ಮದೇ ಆದ ಮಹಾಮಾಯಿ ದೇವಸ್ಥಾನದಲ್ಲಿ ವೈಭವದ ಆಚರಣೆಗಳು. ಬಾಲ್ಯದಿಂದ ಅನುಭವಿಸಿದ ದೈವ ಸಾನ್ನಿಧ್ಯದ ಕ್ಷಣಗಳು. 
        ದೇಶದ ಯಾವ ಮೂಲೆಯಲ್ಲಿದ್ದರೂ ನವರಾತ್ರಿಯ ಆ ಒಂಭತ್ತು ದಿನಗಳು ಮಹಮಾಯಿ ದೇವಸ್ಥಾನದಲ್ಲಿ ಹಾಜರು. ಬಾಲ್ಯದಲ್ಲಿ ಆಡಿದ ಆಟಗಳು, ದೇಗುಲದ ಬಗ್ಗೆ ಭಯಮಿಶ್ರಿತ ಪ್ರೀತಿ, ಆವೇಶ ಧರಿಸಿದ ಪಾತ್ರಿಯೊಡನೆ  ಭಾವನಾತ್ಮಕ ಸಂಬಂಧಗಳು... ಎಲ್ಲವೂ ನೆನಪಾಗಿ ಕಾಡುತ್ತವೆ. ಮುಂದೆ ಅದೇ ದೇಗುಲ, ನನ್ನ ತಾಂತ್ರಿಕ ಸಾಧನೆಗೆ ವೇದಿಕೆಯಾಗುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ತಾಂತ್ರಿಕ ಸಾಧನೆಯ ಕುರಿತಾಗಿ ಬರೆಯುವ ಮೊದಲು ನಮ್ಮ ದೇವಸ್ಥಾನದ ಬಗ್ಗೆ ಕೆಲವು ಐತಿಹಾಸಿಕ ವಿಚಾರಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ. 
         ಸುಮಾರು ನಾನ್ನೂರು ವರ್ಷಗಳ ಹಿಂದಿನ ಮಾತು. ನಮ್ಮದು ಪಾಳೇಗಾರರ ವಂಶ. ಅಣ್ಣ ತಮ್ಮಂದಿರಾದ ರಾಮ ನಾಯಕ್ ಹಾಗೂ ಕೃಷ್ಣ ನಾಯಕ್ ಅವರು ಅಂದು ಪಾಳೆಗಾರಿಕೆ ನಡೆಸುತ್ತಿದ್ದರು. ಕನ್ನಡದ ರಾಜ (ಹೆಸರು ತಿಳಿದಿಲ್ಲ, ತಿಳಿದಿದ್ದ ಒಬ್ಬರೇ 'ಅಪ್ಪಿ ಮಾಯಿ' ಇಂದು ನಮ್ಮೊಂದಿಗಿಲ್ಲ. ಸುಮಾರು ನೂರಾ ಹನ್ನೆರಡು ವರ್ಷ ಆಕೆ ಬದುಕಿದ್ದರು.) ಒಬ್ಬನಿಗೆ ಸಹಾಯಹಸ್ತ ಚಾಚಿ, ಮರಾಠಿಗರ ಮೇಲೆ ತಮ್ಮ ಸೈನ್ಯದೊಂದಿಗೆ ದಂಡೆತ್ತಿ ಹೋಗಿ ಗೆದ್ದು ಬರುವಾಗ ನದಿಯೊಂದನ್ನು ದಾಟುವಾಗ ಸಿಕ್ಕಿದ ಮೂರ್ತಿಯೇ ನಮ್ಮ 'ಮಹಾಮಾಯಿ'. ಅಂದು ಸಹಕಾರ ನೀಡಿದ್ದಕ್ಕೆ ಬಂಟವಾಳದ ಸಮೀಪ ಇರುವ 'ಕೊಳ್ ಕೆರೆ' ಎಂಬ ಊರನ್ನು ತಾಮ್ರಶಾಸನದ ಮೂಲಕ ನಮ್ಮ ಪೂರ್ವಜರಿಗೆ ಕಾಣಿಕೆಯಾಗಿ ಕನ್ನಡದ ಅರಸರು ನೀಡಿದ್ದರು. ಅಲ್ಲಿಂದ ಮುಂದೆ ತಮ್ಮ ಆಳ್ವಿಕೆಯನ್ನು ನಾಯಕ್ ವಂಶಸ್ಥರು ಕೊಳ್ ಕೆರೆಯಿಂದ ಮುಂದುವರೆಸುತ್ತಾರೆ. 
        ಇಂದಿಗೂ ಕೆ. ಪ್ರವೀಣ್ ನಾಯಕ್ ಎಂಬ ನನ್ನ ಹೆಸರಿನಲ್ಲಿರುವ 'ಕೆ '  ಕೊಳ್ ಕೆರೆಯನ್ನು ಪ್ರತಿನಿಧಿಸುತ್ತದೆ. ಮೊಮ್ಮಕ್ಕಳಿಗೆ ಅಜ್ಜನ ಹೆಸರು ಇಡುವುದು ವಾಡಿಕೆಯಾಗಿದ್ದುದರಿಂದ ತಲೆತಲಾಂತರದಿಂದ ರಾಮ ನಾಯಕನ ಮೊದಲ ಮೊಮ್ಮಗನಿಗೆ ರಾಮ ನಾಯಕನೆಂದೇ ಹೆಸರಿಡಲಾಯಿತು. ಎರಡನೇ ಮೊಮ್ಮಗನಿಗೆ ಕೃಷ್ಣ ನಾಯಕನೆಂದೇ ಹೆಸರಿಡಲಾಯಿತು. ಹೀಗೆ ಮುಂದುವರೆದ ಪರಂಪರೆ ನನ್ನ ದೊಡ್ಡಪ್ಪ ರಾಮ ನಾಯಕ ಹಾಗೂ ನನ್ನ ತಂದೆ ಕೃಷ್ಣ ನಾಯಕ ಅವರವರೆಗೂ ಮುಂದುವರೆಯಿತು. ಪ್ರತಿ ತಲೆಮಾರಿನಲ್ಲೂ ಇಬ್ಬರು ಗಂಡು ಮಕ್ಕಳು ಖಾಯಂ ಆಗಿ ಇರುತ್ತಿದ್ದರು. ರಾಮ ನಾಯಕ ಹಾಗೂ ಕೃಷ್ಣ ನಾಯಕರ ಪರಂಪರೆ ಹೀಗೆ ಮುಂದುವರೆಯಿತು. 
        ಈಗ ಮೂರ್ತಿಯ ವಿಷಯಕ್ಕೆ ಬರೋಣ, ನದಿಯಲ್ಲಿ ಸಿಕ್ಕಿದ ಮೂರ್ತಿಯನ್ನು ನೋಡಿ, ಅದರ ಸೌಂದರ್ಯಕ್ಕೆ ಮರುಳಾಗಿ ನಮ್ಮ ಪೂರ್ವಜರು ಆಗಿನ ಅವರ ಆಳ್ವಿಕೆಯ ಸ್ಥಾನವಾದ ಬಂಟವಾಳಕ್ಕೆ ಕರೆತಂದರು. ಅಲ್ಲಿ ತಮ್ಮ ದೇವರ ಮನೆಯಲ್ಲಿ ಇಟ್ಟು ದಿನಂಪ್ರತಿ ಪೂಜೆ ಮಾಡುತ್ತಿದ್ದರು. ನವರಾತ್ರಿಯ ದಿನ ಬಂದಾಗ ಅಂದಿನ ಕೃಷ್ಣ ನಾಯಕ್ ಅವರಿಗೆ ಮೈ ಮೇಲೆ ದೇವಿಯ ಆವಾಹನೆ ಆಯಿತಂತೆ. ತನಗೆ ರಕ್ತಬಲಿ ಬೇಕೆಂದು ಕೇಳಿದಾಗ ಎಲ್ಲರೂ ತಬ್ಬಿಬ್ಬಾಗಿ ಅಂದಿನ ಪುರೋಹಿತ ಆಚಾರ್ಯ ಅವರನ್ನು ಕರೆಸಿದರು. ಆಚಾರ್ಯರು ' ತಾವು ಮಾಧ್ವ ಪಂಥವನ್ನು ಸ್ವೀಕಾರ ಮಾಡಿರುವುದರಿಂದ ಬಲಿ ಕೊಡುವುದು ಅಸಾಧ್ಯ ಎಂದು ಅದರ ಬದಲು ಕುಂಬಳಕಾಯಿಯನ್ನು ಹೊಡೆದು ಕುಂಕುಮವನ್ನು ಸವರಿ 'ಇದನ್ನೇ ಬಲಿ ಎಂದು ಸ್ವೀಕರಿಸು ತಾಯಿ' ಎಂದು ಬೇಡಿ ಕೊಂಡರಂತೆ. ಅಂದು ಅದನ್ನು ಒಪ್ಪಿಕೊಂಡ ಆವೇಶದ ಪಾತ್ರಧಾರಿ ಮುಂದಿನ ವರ್ಷದಲ್ಲಿ ಇದಕ್ಕೆ ಸೂಕ್ತವಾದ ಪರಿಹಾರ ಬೇಕೇ ಬೇಕು ಎಂದು ಹೇಳಿದರಂತೆ. ಅಲ್ಲದೇ ಬಲಿ ಕೇಳಲು ಕಾರಣವಾಗಿ 'ವಿಗ್ರಹದ ಒಂದು ಭಾಗ ಭಿನ್ನವಾಗಿದ್ದುದರಿಂದ ಪ್ರಾಣಿಬಲಿ ಅನಿವಾರ್ಯ' ಎಂದೂ ಹೇಳಿದರಂತೆ.
        ಪ್ರಾಣಿಬಲಿಯನ್ನು ಸಾರಾಸಗಟಾಗಿ ನಿರಾಕರಿಸಿದ ಆಚಾರ್ಯರಿಗೆ ಆವೇಶಕ್ಕೆ ಒಳಗಾದ ವ್ಯಕ್ತಿ ಹೇಳಿದ್ದೇನು ? ಆ ವಿಗ್ರಹ ಈಗ ಎಲ್ಲಿದೆ ? ಮುಂದಿನ ಕಂತಿನಲ್ಲಿ ಬರೆಯುತ್ತೇನೆ