Monday 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 15

        ಗುರುಗಳು ಬಂದರು. ನನ್ನೆಲ್ಲಾ ಅನುಭವಗಳನ್ನು ಹಂಚಿಕೊಂಡೆ. 'ಶಿವನನ್ನಾಗಲೀ ಶಿವನ ಮುಖವನ್ನಾಗಲೀ ನೋಡಲಿಲ್ಲ'ಎಂದೆ. 
'ಅಡ್ಡಿಯಿಲ್ಲ, ಈ ಅನುಭವಗಳೇ ಮುಖ್ಯ. ಭಾವ, ಭಾವದಿಂದ ಅನುಭವ' ಎಂದು ಹೇಳಿ ಸಮಾಧಾನ ಮಾಡಿದರು. 
        ಅಂದು ಗುರುಗಳಿಗೆ ನನ್ನ ಅಡುಗೆ ರುಚಿ ತೋರಿಸಿದೆ. 'ಅಡ್ಡಿಯಿಲ್ಲಪ್ಪಾ, ಪಾಕ ಶಾಸ್ತ್ರದಲ್ಲೂ ಪ್ರವೀಣನೇ' ಮೊದಲ ಬಾರಿಗೆ ಸ್ವಲ್ಪ ತಮಾಷೆಯ ಧ್ವನಿಯಲ್ಲಿ ಮಾತನಾಡಿದ್ದರು ಅವರು. ನಂತರ ಸಂಜೆ ಮಾತನಾಡುತ್ತಾ ಕುಳಿತಿದ್ದೆವು. 'ತಂತ್ರ ಸಾಧನೆಯ ಪೂರ್ತಿ ವಿವರಗಳನ್ನು ಬರೆದಿಡಲೇ' ಕೇಳಿದೆ ನಾನು. 'ಏಕೆ?' ತಕ್ಷಣ ಬಂತು ಪ್ರಶ್ನೆ.
 'ಇದು ನಶಿಸಿಹೋಗದಂತೆ ಮುಂದಿನ ಸಂತತಿಗೂ ಉಳಿಸಲು...' 
'ನೀನ್ಯಾರು ಇದನ್ನು ಉಳಿಸಲು? ಇದನ್ನು ಯಾರೂ ಉಳಿಸಬೇಕೆಲ್ಲ, ಅಳಿಸಲೂ ಆಗುವುದಿಲ್ಲ' ಎಂದು ಹೇಳಿ, ನನ್ನ ಮುಖ ಸಪ್ಪೆಯಾಗಿದ್ದುದನ್ನು ಗಮನಿಸಿ ' ಇದು ಅನಾದಿಕಾಲದಿಂದ ಉಳಿದು ಬಂದಿದೆ. ಯಾರಿಗೆ ಬೇಕು ಎನ್ನುವ ತವಕವಿದೆಯೋ, ಅವರಿಗೆ ಹೇಗಾದರೂ ಸಿಗುತ್ತದೆ. ಬೇಕು ಅನ್ನುವವರು ಇರುವ ತನಕ ಅದು ಇರುತ್ತದೆ, ಯಾರಿಗೂ ಬೇಡವಾದಾಗ ಅದು ಇದ್ದೇನು ಪ್ರಯೋಜನ? ಆದರೆ ಅಂತಹ ಕಾಲ ಬಾರದು. ಈ ವಿದ್ಯೆಯ ತಾಕತ್ತು ಅಂತಹದ್ದು... ಚಿಂತಿಸಬೇಡ' ಎಂದು ಮೃದುವಾಗಿ ಹೇಳಿದರು. (ಆ ಕಾರಣಕ್ಕಾಗಿಯೇ ನಾನು ಈ ನನ್ನಬ್ಲಾಗ್ ನಲ್ಲಿ ವಿಧಿ ವಿಧಾನಗಳ ಬಗ್ಗೆ ವಿವರವಾಗಿ ಬರೆಯಲಿಲ್ಲ. ನನ್ನ ಅನುಭವಗಳ ಬಗ್ಗೆ ಹೇಳಲು ಅವಶ್ಯವಿರುವಷ್ಟೇ ಬರೆದಿದ್ದೇನೆ) 
        ಇದಾಗಿ ಕೆಲ ದಿನಗಳಲ್ಲಿ 'ಏನಪ್ಪಾ ವೈಷ್ಣವಾ? ರಾಮ,ಕೃಷ್ಣ, ಹನುಮಂತ ಇತ್ಯಾದಿ ದೇವರ ಆರಾಧನೆಯ ಮೇಲೆ ಒಲವಿದೆಯೇ?' ಎಂದು ತಮಾಷೆಯಾಗಿ ಕೇಳಿದರು.  ತಂತ್ರ ವಿದ್ಯೆ ಕೇವಲ ಶಿವ ಶಕ್ತಿಯರಿಗೆ ಸಂಬಂಧ ಪಟ್ಟಿದ್ದೆಂದು ಭಾವಿಸಿದ್ದೆ. 'ತಂತ್ರದಲ್ಲಿ ವಿಷ್ಣುವಿನ ಆರಾಧನೆಯೂ ಉಂಟೇ?' ಅಚ್ಚರಿಯಿಂದ ಕೇಳಿದೆ. 'ತಂತ್ರ ವಿದ್ಯೆ, ದೇವರನ್ನು ಆರಾಧಿಸುವ ಒಂದು ವಿಶೇಷ ತಂತ್ರವನ್ನು ಒಳಗೊಂಡಿರುವ ಸಾಧನಾಕ್ರಮ. ಯಾವ ದೇವರನ್ನಾದರೂ ಆರಾಧಿಸಲು ಇದರಲ್ಲಿ ತನ್ನದೇ ಆದ ಕ್ರಮಗಳಿವೆ. ನಿನಗೆ ಆಸಕ್ತಿ ಉಂಟೋ, ಇಲ್ಲವೋ? ಅದನ್ನು ಮೊದಲು ಹೇಳು' ಎಂದರು. 'ಖಂಡಿತ ಉಂಟು' ಎಂದು ಖಡಾ ಖಂಡಿತವಾಗಿ ಹೇಳಿದೆ.
         ಹನುಮಂತನ ಉಪಾಸನೆಯೊಂದಿಗೆ ನನ್ನ ಸಾಧನೆಯ ಎರಡನೆಯ ಘಟ್ಟ ಪ್ರಾರಂಭವಾಯಿತು. ಹನುಮಂತನ ಉಪಾಸನೆ ಹನ್ನೊಂದು ದಿನಗಳ ಉಪಾಸನೆ. ಇದರಲ್ಲಿ ಕೆಲವು ಕಟ್ಟಳೆಗಳಿವೆ. ಚಿಕ್ಕದೊಂದು ಗಂಧದ ತುಂಡಿನಲ್ಲಿ ನಾನೇ ನನ್ನ ಕೈಯ್ಯಾರೆ ನನಗೆ ತಿಳಿದಂತೆ ಆಂಜನೇಯನ ಮೂರ್ತಿಯನ್ನು ಕೆತ್ತಬೇಕಾಗಿತ್ತು. ಹನ್ನೊಂದು ದಿನಗಳು ಕೇವಲ ಕೆಂಪು ಬಟ್ಟೆಯನ್ನೇ ಉಟ್ಟುಕೊಳ್ಳಬೇಕಾಗಿತ್ತು. ನೆಲದ ಮೇಲೆ ಮಲುಗುವಾಗಲೂ ಕೆಂಪು ಬಟ್ಟೆಯನ್ನೇ ಹಾಸಬೇಕಾಗುತ್ತಿತ್ತು. ನಾನು ಮನೆಯಿಂದ ಹೊರಗೆ ಓಡಾಡುವುದು ನಿಷಿದ್ಧವಾಗಿತ್ತು. ಎಲ್ಲವನ್ನೂ ಗುರುಗಳೇ ಪೂರೈಸುತ್ತಿದ್ದರು. ವೀಳ್ಯದ ಎಲೆಯೊಂದಕ್ಕೆ ಕಾಡಿಗೆ(ಅಂಜನ)ಹಚ್ಚಿ ಅದನ್ನು ನೋಡುತ್ತಾ ಆಂಜನೇಯನ ಧ್ಯಾನ ಮಾಡಬೇಕು. 
        ಅಂದು ನನಗಾದ ಅನುಭವವನ್ನು ಹಂಚಿಕೊಳ್ಳುತ್ತೇನೆ. ಮೊದಲಿಗೆ ಆಂಜನೇಯನ ಉಪಾಸನೆ ಮಾಡುವ ಸಮಯದಲ್ಲಿ ಇಡೀ ದಿನ ಆಂಜನೇಯನ ಕುರಿತಾಗಿಯೇ ಯೋಚಿಸುತ್ತಿರಬೇಕು. ಆತನ ಬಾಲ್ಯ, ತುಂಟಾಟ, 
ಆತನಗರಿವಿಲ್ಲದಿದ್ದರೂ ಆತನಲ್ಲಿರುವ ಅತ್ಯದ್ಭುತ ಶಕ್ತಿ... ಹೀಗೆ ಆತನ ಬಗ್ಗೆಯೇ ಯೋಚಿಸುತ್ತಾ ಆಂಜನೇಯನ ಭಾವವನ್ನು ಮೈತುಂಬಿಕೊಳ್ಳಬೇಕು. ಈ ಸಾಧನೆ  ಮಾಡುತ್ತಿರುವಾಗ ನಮ್ಮಲ್ಲಿಯೂ ಪರಿವರ್ತನೆಗಳು ಕಾಣುತ್ತವೆ. ಒಂದಷ್ಟು ತುಂಟಾಟ, ಚೇಷ್ಟೆಯ ಸ್ವಭಾವ ಮುಂತಾದವು ತನ್ನಂತೆ ತಾನೇ ನಮ್ಮನ್ನು ಆವರಿಸಿಕೊಳ್ಳುತ್ತದೆ. 
        ಒಂಭತ್ತು ದಿನಗಳು ಕಳೆದವು. ಹತ್ತನೇ ದಿನ, ಎಲೆಯನ್ನು ನೋಡುತ್ತಾ ಕುಳಿತಾಗ ಕಪ್ಪು ಅಂಜನ ಕೆಂಪಾಗಿ ಮಾರ್ಪಟ್ಟು ಧಗಧಗಿಸುವ ಬೆಂಕಿಯಂತೇ ಕಾಣುತ್ತಿತ್ತು. 
        ಹನ್ನೊಂದನೆಯ ದಿನ, ಸಾಧನೆಯ ಅಂತಿಮ ದಿನ. ಹನುಮಂತನ ಸಾಕ್ಷಾತ್ಕಾರವಾಗುವ ದಿನ. ಹನುಮಂತ ಹೇಗಿರಬಹುದು ಎಂಬ ಚಿಂತನೆಯಲ್ಲಿಯೇ ಮನಸ್ಸು ಮುಳುಗಿತ್ತು. ಪರ್ವತ ಕೈಯಲ್ಲಿ ಹಿಡಿದ ವಾಯುಪುತ್ರ, ಎದೆ ಸೀಳಿ ರಾಮನನ್ನು ತೋರಿಸಿದ ರಾಮಭಕ್ತ, ಗದೆಯನ್ನು ಹಿಡಿದು ನಿಂತ ಗಟ್ಟಿಮುಟ್ಟಾದ ಅಂಗಸೌಷ್ಠವದ ಹನುಮ... ಹೀಗೆ ನನಗೆ ನೆನಪಿದ್ದ ಎಲ್ಲಾ ರೂಪಗಳನ್ನು ಮನಸ್ಸಿನಲ್ಲಿಯೇ ಮೂಡಿಸುತ್ತಿದ್ದೆ. ನಾನು ಮಂತ್ರವನ್ನು ಜಪಿಸುತ್ತಾ ಆ ಸಾಕ್ಷಾತ್ಕಾರದ ಕ್ಷಣಕ್ಕೆ ಕಾಯುತ್ತಿದ್ದೆ. ಜಪದ ಸಂಖ್ಯೆ ಮುಗಿಯುವ ಮುನ್ನವೇ ಮಹಡಿ ಮೆಟ್ಟಲ ಬಳಿಯಿಂದ ಯಾರೋ ಕರೆದಂತಾಯಿತು. ತಿರುಗಿ ನೋಡಿದೆ. 
        ಒಂದು ಕ್ಷಣ ಗುಂಡಿಗೆ ನಿಂತ ಅನುಭವ! ಮಹಡಿಯ ಮೆಟ್ಟಲ ಬಳಿ ಕುಳಿತಿದ್ದದ್ದು ಸಾಕ್ಷಾತ್ ಹನುಮಂತ! ನಾನಂದುಕೊಂಡ ಯಾವ ರೂಪದಲ್ಲೂ ಆತನಿರಲಿಲ್ಲ. ಮೈತುಂಬಾ ಮೃದುವಾದ ಬಿಳೀ ರೋಮವನ್ನು ಹೊಂದಿದ್ದ, ಇಳಿವಯಸ್ಸಿನ ಹನುಮ. ವಯಸ್ಸಾಗಿದ್ದರೂ ಆ ಕೆಂಪು ಮುಖದಲ್ಲಿ ಪ್ರಜ್ವಲಿಸುವ ಕಳೆ. ಇದನ್ನು ಬರೆಯುತ್ತಿರುವಾಗಲೇ ನನಗೆ ರೋಮಾಂಚನವಾಗುತ್ತಿದೆ. 'ಇದನ್ನೆಲ್ಲಾ ಅನುಭವಿಸಿದ್ದು ನಾನೇ ಅಲ್ಲವೇ?' ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೇನೆ. ನಿಜವಾಗಿ ಭಾವುಕನಾಗಿದ್ದೇನೆ. 

'ನಾ ಕಂಡ ಹನುಮಂತ' ಹೀಗಿದ್ದ ಎನ್ನಬಹುದು. (ಫೋಟೋಷಾಪ್ ನಲ್ಲಿ ನಾನು ಆದಷ್ಟು ಹತ್ತಿರವಾಗಿ ಮೂಡಿಸಲು ಪ್ರಯತ್ನಿಸಿದ್ದೇನೆ) 

No comments:

Post a Comment