Wednesday 13 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 6

ನಮ್ಮ ಸುತ್ತಲೂ ಇರುವ ನಕಾರಾತ್ಮಕ ಸಲಹೆ ನೀಡುವ ಜನರು. 
        ನನ್ನ ಜೀವನದ ಉದಾಹರಣೆಯೊಂದಿಗೆ ಹೇಳಬೇಕಾದರೆ ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಕೆಲವಾರು ಕಡೆ ಕೆಲಸ ಮಾಡಿದೆ. ಸ್ವತಂತ್ರವಾಗಿ ಬದುಕುವ ಮನೋಭಾವ ರೂಢಿಸಿಕೊಂಡದ್ದರಿಂದ ಯಾರ ಕೈಕೆಳಗೂ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಕೊನೆಗೆ ಸ್ವತಂತ್ರವಾಗಿ ವ್ಯಾಪಾರದಲ್ಲಿ ತೊಡಗುವ ಬಗ್ಗೆ ನಿರ್ಧರಿಸಿದೆ. ಹವ್ಯಾಸವಾಗಿದ್ದ ಫೋಟೋಗ್ರಫಿಯನ್ನು ನನ್ನ ವೃತ್ತಿಯಾಗಿ ಆಯ್ದುಕೊಂಡೆ. ಫೋಟೋ ಸ್ಟುಡಿಯೋಗಾಗಿ ಒಂದು ಜಾಗವನ್ನು ಹುಡುಕಿದೆ. ಹನುಮಂತನಗರದ ಮುಖ್ಯರಸ್ತೆಯೊಂದರಲ್ಲಿ ಒಂದು ಕಟ್ಟಡದ ಮೊದಲನೇ ಮಹಡಿಯಲ್ಲಿ ಒಂದು ದೊಡ್ಡ ಜಾಗ ಖಾಲಿ ಇತ್ತು. ವೃತ್ತಿಪರ ಸ್ಟುಡಿಯೋ ಮಾಡಲು 
ಎಲ್ಲ ಅನುಕೂಲಗಳು ಅಲ್ಲಿದ್ದವು. ಹನುಮಂತನಗರದ ಕೆಲವು ಗೆಳೆಯರ ಬಳಿ ಈ ಬಗ್ಗೆ ಪ್ರಸ್ತಾಪಿಸಿದೆ. 
        'ನೋಡು ಗುರು, ಇಲ್ಲಿ ಆ ಕಡೆ ಗುರುದತ್ ಸ್ಟುಡಿಯೋ ಇದೆ. ಪಾಸ್‍ಪೋರ್ಟ್ ಫೋಟೋಸ್‍ಗೆ ಅದು ಫೇಮಸ್ಸು. ಅಲ್ಲಿಂದ ಸ್ವಲ್ಪ ಮುಂದೆ ಛಾಯಾ ಸ್ಟುಡಿಯೋ ಇದೆ. ಅದು ಹಳೇ ಫೋಟೋಗಳನ್ನು ನವೀಕರಿಸುವ ಕೆಲಸಕ್ಕೆ ಫೇಮಸ್ಸು. ಆ ಕಡೆ ಹೋದ್ರೆ ಅಜಂತ ಸ್ಟುಡಿಯೋ, ಅಲ್ಲಿಂದ ಮುಂದೆ ಎಸ್ ಜೆ ಎನ್ ಸ್ಟುಡಿಯೋ. ಇವರೆಲ್ಲಾ ಸುಮಾರು ನಲವತ್ತು ವರ್ಷಗಳಿಂದ ಫೇಮಸ್ ಆಗಿದ್ದಾರೆ. ಇವರ ಮಧ್ಯೆ ನೀನು ಹೊಸ ಸ್ಟುಡಿಯೋ ಶುರು ಮಾಡಿದರೆ ಬದುಕೋಕಾಗುತ್ತಾ ಯೋಚ್ನೆ ಮಾಡು' ಅಂದ ಒಬ್ಬ. ಇನ್ನೊಬ್ಬ 'ಅದಲ್ದೇ ಇನ್ನೂ ಏಳೆಂಟು ಸಣ್ಣ ಪುಟ್ಟ ಸ್ಟುಡಿಯೋಗಳು ಸುತ್ತಮುತ್ತ ಇದ್ದಾವೆ' ಎಂದು ಮಾತು ಸೇರಿಸಿಬಿಟ್ಟ. ಮತ್ತೊಬ್ಬ 'ಈ ಎಲ್ಲಾ ಸ್ಟುಡಿಯೋಗಳು ಗ್ರೌಂಡ್‍ಫ್ಲೋರ್ ನಲ್ಲಿ ಇವೆ. ನೀನು ನೋಡಿದ ಜಾಗ ಫಸ್ಟ್ ಫ್ಲೋರ್. ಒಂದು ಫೋಟೋಗೋಸ್ಕರ ಜನ ಮೇಲೆ ಹತ್ತಿ ಬರ್ತಾರಾ ಯೋಚ್ನೆ ಮಾಡು' ಅಂದ. ಮಗದೊಬ್ಬ 'ಸುಮ್ನೆ ಎಲ್ಲೋ ಕೆಲ್ಸಕ್ಕೆ ಹೋಗೋದು ಬೆಟ್ರು ಗುರು. ಬಿಸಿನೆಸ್ಸು ನಿಂಗೆ ಮೊದ್ಲೇ ಹೊಸ್ದು. ಬೇಕಾ ನೋಡು' ಅಂದ. 
        ಒಮ್ಮೆ ಕೂತು ಯೋಚಿಸಿದೆ. ಎಲ್ಲರ ಮಾತುಗಳಲ್ಲಿ ಸತ್ಯಾಂಶವಿತ್ತು. ಆದರೆ ಹೆದರುತ್ತಾ  ಕುಳಿತರೆ ನಾನು ಜೀವನದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಎಲ್ಲಾ ವ್ಯಾಪಾರದಲ್ಲೂ ರಿಸ್ಕ್ ಅನ್ನೋದು ಇದ್ದೇ ಇರುತ್ತೆ. ರಿಸ್ಕ್ ತೆಗೆದುಕೊಂಡು ಗೆದ್ದವರೂ ಇದ್ದಾರೆ, ಸೋತವರೂ ಇದ್ದಾರೆ. ಗೆದ್ದವರು ಹೇಗೆ ಗೆದ್ದರು ಎಂದು ಯೋಚಿಸಿದೆ. ನಾನು ಗೆಲ್ಲಲೇಬೇಕು ಎಂದು ತೀರ್ಮಾನಿಸಿಕೊಂಡು ಮನಸ್ಸಿನಲ್ಲೇ ಒಂದು ಸಂಕಲ್ಪ ಮಾಡಿಕೊಂಡೆ. ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ನಾನು ಜನಪ್ರಿಯ ಛಾಯಾಗ್ರಾಹಕನಾಗುತ್ತೇನೆ ಎಂದು ನಂಬಿದೆ ಅಥವಾ ನನ್ನ ಮನಸ್ಸನ್ನು ನಂಬಿಸಿದೆ ಎಂದು ಹೇಳಬಹುದು.
        ನಾನೊಬ್ಬ ಭಿನ್ನ ಛಾಯಾಗ್ರಾಹಕನಾಗಲು ಏನು ಮಾಡಬೇಕೆಂದು ಯೋಚಿಸಿದೆ. ಆಗ ತಾನೇ ಮಾರುಕಟ್ಟೆಗೆ ಬಂದಿದ್ದ `ಅಂಬ್ರೆಲ್ಲಾಲೈಟ್ಸ್'ಗಳನ್ನು ಮುಂಬೈಗೆ ಹೋಗಿ ಖರೀದಿಸಿ ತಂದೆ. ಜನಪ್ರಿಯನಾಗಲು ಪತ್ರಿಕಾ ಛಾಯಾಗ್ರಾಹಕನಾದರೆ ಹಾದಿ ಸುಗಮವಾಗಬಹುದು ಎಂದು ಸಿನೆಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಗಳಿಗೆ ಹೋಗಿ ಅಲ್ಲಿದ್ದ ನಟನಟಿಯರ ಚಿತ್ರಗಳನ್ನು ತೆಗೆದೆ. ಆ ಚಿತ್ರಗಳನ್ನು ತೆಗೆದುಕೊಂಡು ಪತ್ರಿಕಾಕಛೇರಿಗಳಿಗೆ ಅಲೆದೆ. ಎಲ್ಲಾ ಕಡೆ ನಿರಾಸೆಯಾದರೂ
 'ವಾರದ ರಾಜಕೀಯ' ಪತ್ರಿಕೆಯ ಸಂಪಾದಕರಾದ ಶ್ರೀ.ಚಂದ್ರಶೇಖರ್ ತೌಡೂರು ಅವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಅವುಗಳನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಲ್ಲದೇ 'ಹೇಗೂ ಚಿತ್ರಗಳನ್ನು ತೆಗೆಯುತ್ತೀರ. ಹಾಗೆಯೇ  ಅವರ ಸಂದರ್ಶನವನ್ನೂ ಮಾಡಿಕೊಟ್ಟರೆ ನಮಗೆ ಇನ್ನೂ ಅನುಕೂಲ' ಎಂದರು. ಹೀಗೆ ಪತ್ರಿಕಾಛಾಯಾಗ್ರಾಹಕ ಹಾಗೂ ಪತ್ರಕರ್ತನಾಗುವ ಅವಕಾಶ ಲಭಿಸಿತು. ಕ್ರಮೇಣ ಸ್ಟುಡಿಯೋದಲ್ಲಿ ಕೂಡಾ ನಟನಟಿಯರ ಚಿತ್ರಗಳನ್ನು ಕ್ಲಿಕ್ಕಿಸತೊಡಗಿದೆ. ಇದರಿಂದಾಗಿ  ಸ್ಟುಡಿಯೋ ಜನಪ್ರಿಯವಾಗತೊಡಗಿತು. ಬಹುತೇಕ ನವ ನಟನಟಿಯರು ನನ್ನ ಸ್ಟುಡಿಯೋಗೆ ಬಂದು ಪೋರ್ಟ್ ಫೋಲಿಯೋ (ಚಿತ್ರಗಳ ಆಲ್ಬಮ್) ಮಾಡಿಸಿಕೊಳ್ಳುತ್ತಿದ್ದರು. ಇತ್ತ ಬೇರೆ ಬೇರೆ ಪತ್ರಿಕೆಗಳಿಂದಲೂ ನನ್ನ ಚಿತ್ರಗಳಿಗಾಗಿ ಬೇಡಿಕೆ ಬರತೊಡಗಿತು. ಹೀಗಾಗಿ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದೆ. ಇದಲ್ಲದೇ 'ಟೈಮ್ಸ್ ಆಫ್ ಇಂಡಿಯ', 'ಸ್ಟಾರ್ ಡಸ್ಟ್' ಮುಂತಾದ ಇಂಗ್ಲೀಷ್ ಪತ್ರಿಕೆಗಳಿಗೂ ಕೆಲಸ ಮಾಡಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕಾರಂಗದಲ್ಲಿ ಕಳೆದೆ. ಇಂದಿಗೂ ನನಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೃಪ್ತಿ ನೀಡುತ್ತಿರುವುದು ನನ್ನ ಫೋಟೋಸ್ಟುಡಿಯೋ. 
        ಇದು ನನ್ನ ಕಥೆಯಾದರೂ ಬಹುತೇಕ ಜನರ ಕಥೆ ಬೇರೆಯದೇ ಆಗಿರುತ್ತದೆ. ಸಾಮಾನ್ಯವಾಗಿ ಬಹುತೇಕ ಜನರು ಇತರರು ನೀಡುವ ನಕಾರಾತ್ಮಕ 
ಸಲಹೆಗಳನ್ನು ಒಪ್ಪುತ್ತಾರೆ. 'ಹೌದಲ್ಲ. ನಷ್ಟವಾದರೆ ಏನು ಮಾಡುವುದು? ನನಗೆ ಅನುಭವವಿಲ್ಲ. ವ್ಯಾಪಾರ ತುಂಬಾ ಕಷ್ಟವೇ ಸರಿ. ಆದ್ದರಿಂದ ಇದಕ್ಕೆ ಕೈ ಹಾಕದಿರುವುದೇ ಒಳಿತೇನೋ ಎನ್ನಿಸದಿರದು'. ಹೀಗೆ ಪ್ರಜ್ಞಾಮನಸ್ಸು ನಮ್ಮ ಗುರಿ ಅಥವಾ ಆಕಾಂಕ್ಷೆಗಳಿಗೆ ತಣ್ಣೀರೆರೆಚುತ್ತಾ ಹೋದರೆ ಜೀವನದಲ್ಲಿ ಏನನ್ನಾದರೂ ಸಾಧಿಸುವುದಾದರೂ ಹೇಗೆ? ಅದು ಅಸಾಧ್ಯವಾದುದಂತೂ ಅಲ್ಲ. ಆದರೆ ಅದಕ್ಕೆ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ.
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ಮುಂದಿನ ಸಂಚಿಕೆಯಲ್ಲಿ... 

No comments:

Post a Comment