Monday, 25 November 2019

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. - ಜೀವನದ ಕಟುಸತ್ಯಗಳು - 2

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. 
        ಸಣ್ಣ ಪುಟ್ಟ ಸೋಲುಗಳನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಸೋಲಲ್ಲದೇ, ನಮ್ಮವರ ಸೋಲನ್ನು, ಬೇಸರವಾದರೂ ಸಹಿಸಿಕೊಳ್ಳುತ್ತೇವೆ. ಉದಾಹರಣೆಗೆ ನಾವು ಯಾವುದಾದರೂ ಕ್ರೀಡೆಗಳಲ್ಲಿ ಸೋತಾಗ 'ಛೆ! ಇನ್ನೊಂದು ಸ್ವಲ್ಪ ಚೆನ್ನಾಗಿ ಆಡಿದ್ರೆ ಗೆಲ್ತಿದ್ದೆ' ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಕ್ರಿಕೆಟ್ ಆಡುವಾಗ ನಮ್ಮ ತಂಡ ಇತರ ದೇಶದ ತಂಡಕ್ಕೆ ಸೋತಾಗ 'ನಮ್ಮವರೂ ಚೆನ್ನಾಗಿಯೇ ಆಡಿದ್ರು, ಅದೃಷ್ಟ ಕೈಕೊಡ್ತು' ಎಂದೆಲ್ಲಾ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇವೆ. ಅತಿರೇಕದ ಕೆಲವು ಉದಾಹರಣೆಗಳು ಕಾಣ ಸಿಗುವುದೂ ಉಂಟು. 
        ದೊಡ್ಡ ಮಟ್ಟದ ಸೋಲು,ಜೀವನದ ದೆಸೆಯನ್ನೇ ಬದಲಿಸುವಂತಹ ಸೋಲು, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ನೋವಿನ ಬೇಗುದಿಯನ್ನು ನೀಡುವಂತಹ ಸೋಲಿನಿಂದ ಹೊರಬರುವುದು ಹೇಗೆ? ಇಂತಹ ಸೋಲುಗಳ ಹಿಂದೆ ಅವಮಾನ, ಅನ್ಯಾಯ, ಮೋಸ, ತಪ್ಪಿತಸ್ಥ ಭಾವನೆ ಮುಂತಾದ ಕಾರಣಗಳಿರುತ್ತವೆ. ಅದರಲ್ಲೂ ತನ್ನದೇನೂ ತಪ್ಪಿಲ್ಲದಿರುವಾಗ ಈ ಸೋಲು ಗಾಢವಾದ ನೋವಿನ ತರಂಗಗಳನ್ನು ಎಬ್ಬಿಸುತ್ತವೆ. ಉದಾಹರಣೆಗೆ ಎಲ್ಲರ ಮುಂದೆ ಕೀಳಾಗಿ ಕಂಡು, ಎಲ್ಲರ ಗೇಲಿಗೆ ತುತ್ತಾಗುವಂತಹ ಅವಮಾನಗಳು. ನಂಬಿದ ಮಂದಿಯಿಂದಾಗಿ ಆರ್ಥಿಕ ನಷ್ಟವನ್ನು ಅನುಭವಿಸುವಂತಹ ಅನ್ಯಾಯ. ಮನಸ್ಸಿನೊಡನೆ ಆಟವಾಡಿ ಅಥವಾ ಪ್ರೀತಿಯ ನಾಟಕವಾಡಿ ಕೈ ಕೊಟ್ಟ ಮೋಸದ ಪ್ರಸಂಗಗಳು. ತಾವೇ ಯಾರಿಗಾದರೂ ಮೋಸ ಮಾಡಿ, ಅವರು ನರಳುವಂತೆ ಮಾಡಿದಾಗ ಮೂಡುವ ತಪ್ಪಿತಸ್ಥ ಭಾವನೆ. ಇಂತಹ ನೋವುಗಳು ಜೀವನದ ಕೊನೆಯ ಉಸಿರಿರುವವರೆಗೂ ಕಾಡುವುದುಂಟು. 

ನೀವು ಇಂತಹ ಯಾವುದಾದರೂ ನೋವಿನಿಂದಾಗಿ ಬಳಲುತ್ತಿದ್ದೀರಾ? 
       ನಿಲ್ಲಿ! ಒಂದು ಕ್ಷಣ ಯೋಚಿಸಿ. ಜೀವನ ಅಷ್ಟೇ ಅಲ್ಲ. ಅದು ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆ. ಮೋಸಗಾರರು ತುಂಬಿದ್ದರೂ, ಈ ಜಗತ್ತಿನಲ್ಲಿ 
ಒಳ್ಳೆಯವರೂ ಇದ್ದಾರೆ. ನಿಮ್ಮನ್ನು ಇಷ್ಟ ಪಡುವವರು, ನಿಮ್ಮ ಬಗ್ಗೆ ಕಾಳಜಿ ಇರುವವರು ನಿಮ್ಮ ಉನ್ನತಿಯನ್ನು ಬಯಸುವವರು ನಿಮಗೆ ಸಿಕ್ಕೇ ಸಿಗುತ್ತಾರೆ. ಆದ್ದರಿಂದ ಜಗತ್ತನ್ನು ಹಾಗೂ ಜೀವನವನ್ನು ದ್ವೇಷಿಸಬೇಡಿ. ಪ್ರಪಂಚ ವಿಶಾಲವಾಗಿದೆ. ನೀವು ಸೋಲುಂಡ ಎಲ್ಲ ಘಟನೆಗಳು ಕಳೆದು ಹೋದ ಕಾಲಘಟ್ಟದಲ್ಲಿರುತ್ತವೆ. ನಿಮ್ಮ ಇಂದಿನ ದುಃಸ್ಥಿತಿಗೆ ನೀವು ಕಳೆದುಹೋದ ಘಟನೆಗಳನ್ನು ಮೆಲುಕು ಹಾಕುತ್ತಿರುವುದೇ ಕಾರಣವಾಗಿರುತ್ತದೆ. ನಿಮ್ಮ ನಾಳೆ ಸಧೃಢವಾಗಿ ಉತ್ತಮವಾಗಿ ಇರಬೇಕೆಂದರೆ, ನೀವು ಈ ಯೋಚನೆಗಳಿಗೆ ಕಡಿವಾಣ ಹಾಕಲೇ ಬೇಕು. 

ಇನ್ನೆಷ್ಟು ಕೊರಗುವಿರಿ?
        ಸಾಕು ! ಸೋಲಿನಿಂದಾದ ನಷ್ಟವನ್ನು ಅನುಭವಿಸಿದ್ದು ಸಾಕು. ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆ ನಷ್ಟವನ್ನು ಹತ್ತು ಪಟ್ಟು, ನೂರು ಪಟ್ಟು ಮಾಡಿ ಕೊಳ್ಳುವುದು ಬೇಡ. ನೀವು ಸೋತ ಕ್ಷಣಗಳೇ ನಿಮ್ಮ ಸೋಲಲ್ಲ. ನೀವು ಅದನ್ನು ಮೆಲುಕು ಹಾಕುತ್ತಿರುವುದೇ ನಿಜವಾದ ಸೋಲು. ತಪ್ಪು ಮಾಡಿದ್ದು ಒಂದು ಸೋಲಾದರೆ, ತಪ್ಪಿತಸ್ಥ ಭಾವನೆಯಲ್ಲಿ ನರಳುವುದು ದೊಡ್ಡ ಸೋಲು. ಮನಸ್ಸನ್ನು ಕೆಡಿಸುವ ಇಂತಹ ನೋವಿನ ಹತಾಶ ಭಾವನೆಗಳು ನಿಮ್ಮನ್ನು ಮನೋವ್ಯಾಧಿಗೆ ತುತ್ತಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲೇ ಇದೆ. ನಿಮ್ಮ ಮನಸ್ಸು ಸರ್ವಶಕ್ತ. ಮನೆಯಲ್ಲಿ ತುಂಬಿರುವ ಕಸವನ್ನು ಗುಡಿಸಿ ಹೇಗೆ ಹೊರಗೆ ಹಾಕುವಿರೋ ಹಾಗೆಯೇ ಮನಸ್ಸಿನಲ್ಲಿ ತುಂಬಿರುವ ಆ ಕಸವನ್ನು ಹೊರಗೆ ಹಾಕಿ. 
         ನಿಮ್ಮ ಮನಸ್ಸಿನೊಡನೆ ಮಾತನಾಡಿ. 'ಓ ನನ್ನ ಸರ್ವಶಕ್ತ ಮನಸ್ಸೇ, ಈ ಕಸವು ನನಗೆ ಬೇಡ. ಇದರಿಂದ ನನಗೆ ವಿಮುಕ್ತಿ ಕೊಡು. ಹೊಸ ಹೊಸ ಉತ್ಸಾಹಭರಿತ, ಉಲ್ಲಾಸಭರಿತ ಯೋಚನಾಲಹರಿಯನ್ನು ನನ್ನಲ್ಲಿ ತುಂಬು' ಹೀಗೆ ಪದೇ ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತಲಿರಿ. ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಇದೇ ಮಾತನ್ನು ನೀವು ದೇವರ ಬಳಿಯೂ ಕೇಳಿಕೊಳ್ಳಬಹುದು. ನಂತರದ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಆಗುವ ಮಹತ್ತರ ಬದಲಾವಣೆಗಳಿಗೆ ಎದುರು ನೋಡುತ್ತಿರಿ ಹಾಗೂ ಚಂದದ ಜೀವನವನ್ನು ಅನುಭವಿಸಿ.  

ಸರ್ವೇಜನಾಃ ಸುಖಿನೋ ಭವಂತು. 





No comments:

Post a Comment