Tuesday, 12 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 5

   ಮನಸ್ಸಿನ ಶಕ್ತಿಯನ್ನು ಉಪಯೋಗಿಸುವುದು ಹೇಗೆ?
        ಮನಸ್ಸಿಗೆ ಅಪಾರ ಶಕ್ತಿ ಇರುವುದು ನಿಜವಾದರೂ ಅದನ್ನು ಪಳಗಿಸಿ ಉಪಯೋಗಿಸುವುದು ಹೇಗೆ? ಮನಸ್ಸೆಂಬ ಚಿನ್ನದ ಗಣಿಯಿಂದ ಚಿನ್ನವನ್ನು ತೆಗೆದು ಅಪರಂಜಿ ಮಾಡುವುದು ಹೇಗೆ? ಈ ಮೂಲಕ ಜೀವನದಲ್ಲಿ ಗೆಲುವು ಸಾಧಿಸುವುದು ಹೇಗೆ?
        ಕೆಲವು ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅರೆಪ್ರಜ್ಞಾಮನಸ್ಸು ನಿಮ್ಮ ಗೆಲುವಿಗೆ ಸದಾ ನಿಮ್ಮ ಸಂಗಾತಿಯಾಗಿರುತ್ತದೆ. ಅರೆಪ್ರಜ್ಞಾಮನಸ್ಸಿನ ಶಕ್ತಿಯ ಬಗ್ಗೆ ನಿಮ್ಮ ಪ್ರಜ್ಞಾಮನಸ್ಸಿಗೆ ಅರಿವು ಮೂಡಿದರೆ ಅದು ನಿಮ್ಮ ಮೊದಲ ಗೆಲುವು. ನಿಮ್ಮ ಜೀವನದ ಸಾಧನೆಯ ಅಥವಾ ಗುರಿಯ ಬಗ್ಗೆ ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಂಡು, ಅದನ್ನು ದೃಶ್ಯೀಕರಿಸಲು ನೀವು
ಸಮರ್ಥರಾದರೆ, ಅದು ನಿಮ್ಮ ಎರಡನೆಯ ಗೆಲುವು. ಗುರಿ ತಲುಪುವವರೆಗೂ ಅವಿರತವಾಗಿ ಮುನ್ನಡೆಯುವುದು ನಿಮ್ಮ ಅಂತಿಮ ಗೆಲುವು. ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಮನಸ್ಸುಗಳನ್ನು ಜತೆಗೂಡಿಸಿ ಕೆಲಸ ಮಾಡುವುದು ನಿಮ್ಮ ಯಶಸ್ಸಿನ ಏಣಿ.
        ನಿಮ್ಮ ಕನಸುಗಳನ್ನು ನಿಜವಾಗಿಸುವ ಶಕ್ತಿ ಅರೆಪ್ರಜ್ಞಾಮನಸ್ಸಿಗೆ ಇದೆ. ಅದಕ್ಕೆ ತರ್ಕ, ಚರ್ಚೆ, ವಾದ ಹಾಗೂ ವಿಶ್ಲೇಷಣೆಗಳು ಬೇಕಿಲ್ಲ. ನಿಮ್ಮನ್ನು ನಿಮ್ಮ ಗುರಿಯತ್ತ ಕರೆದೊಯ್ಯುವುದು ಅದರ ಕೆಲಸ. ನಿಮ್ಮ ಅನಿಸಿಕೆ ಬಲವಾಗಿದ್ದು ನಿಮ್ಮ ಕನಸುಗಳ ಮೇಲೆ ನಿಮ್ಮ ನಂಬಿಕೆ ಬಲವಾಗಿದ್ದರೆ, ಅರೆಪ್ರಜ್ಞಾಮನಸ್ಸು ಅದನ್ನು ಅಕ್ಷರಶಃ ನಂಬಿ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದು.
        ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನೂ ಸುಲಭವಾಗಿ ನಂಬುವುದಿಲ್ಲ. ಪ್ರಜ್ಞಾಮನಸ್ಸಿನ ಒಪ್ಪಿಗೆ ದೊರಕದಿದ್ದರೆ ಅದು ಅರೆಪ್ರಜ್ಞಾಮನಸ್ಸಿಗೆ ತಲುಪದು.
ಪ್ರಜ್ಞಾಮನಸ್ಸು ಅರೆಪ್ರಜ್ಞಾಮನಸ್ಸಿಗೆ ಬಾಗಿಲಿದ್ದಂತೆ. ಪ್ರಜ್ಞಾಮನಸ್ಸು ಎಲ್ಲವನ್ನೂ ಅಳೆದು ತೂಗಿ ಅರೆಪ್ರಜ್ಞಾಮನಸ್ಸಿಗೆ ತಲುಪಿಸುತ್ತದೆ. ನಿಮ್ಮ ಸಾಧನೆ, ನಿಮ್ಮ ಗುರಿ ತಲುಪುವ ಶಕ್ತಿ ಹಾಗೂ ನಿಮ್ಮ ಸಮಸ್ಯೆಗಳ ಪರಿಹಾರ ನಿಮ್ಮಲ್ಲೇ ಇದೆ ಎನ್ನುವುದನ್ನು ಪ್ರಜ್ಞಾಮನಸ್ಸು ನಂಬಿ ಮುಂದುವರೆದರೆ ನಿಮ್ಮ ಗೆಲುವು ಖಚಿತ.
ಆದರೆ...
        ಸಮಸ್ಯೆ ಇರುವುದು ಇಲ್ಲಿಯೇ. ನಿಮ್ಮ ಪ್ರಜ್ಞಾಮನಸ್ಸನ್ನು ನಂಬಿಸುವುದೇ ಕಷ್ಟದ ಕೆಲಸ. ನಂಬದಿದ್ದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದೇ ಇಲ್ಲ. ಪ್ರಜ್ಞಾಮನಸ್ಸು ಪಂಚೇಂದ್ರಿಯಗಳು ಅನುಮೋದಿಸಿದ್ದನ್ನು ಒಪ್ಪುತ್ತದೆ. ಉದಾಹರಣೆಗೆ 'ನನ್ನ ಕೈಯ್ಯಲ್ಲೊಂದು ಮಾವಿನ ಹಣ್ಣಿದೆ' ಅಂದಾಗ ಕಣ್ಣಿನಿಂದ ನೋಡಿ ಅಥವಾ ಕೈಯ್ಯಿಂದ ಮುಟ್ಟಿ ನೋಡಿ ಅಥವಾ ಮೂಗಿನಿಂದ ಮೂಸಿ ನೋಡಿ
ಅಥವಾ ಅದನ್ನು ಕಚ್ಚಿ ರುಚಿ ನೋಡಿದಾಗ ಮಾತ್ರ ಪ್ರಜ್ಞಾಮನಸ್ಸು ಅಲ್ಲೊಂದು ಮಾವಿನ ಹಣ್ಣು ಇದೆಯೆಂದು ಒಪ್ಪುತ್ತದೆ. ಇಂತಹ ಯಾವ ಅನುಭವವೂ ಆಗದಿದ್ದಾಗ ಮಾವಿನ ಹಣ್ಣು ಅಲ್ಲಿಲ್ಲ ಎಂದು ಕೂಡಾ ನಂಬುತ್ತದೆ.
        ಚಿಕ್ಕ ವಯಸ್ಸಿನಿಂದ ಒದಗಿ ಬಂದ ಸಂಸ್ಕಾರಕ್ಕೆ ತಕ್ಕ ಹಾಗೆ ತನ್ನ ಭಾವನೆಗಳನ್ನು ಹಾಗೂ ನಂಬಿಕೆಗಳನ್ನು ಅದು ಬೆಳೆಸಿಕೊಂಡು ಬಂದಿರುತ್ತದೆ. ಉದಾಹರಣೆಗೆ 'ಶಿವನೇ ಅತ್ಯಂತ ಬಲಿಷ್ಟ ದೇವರು' ಎಂದು ಚಿಕ್ಕಂದಿನಿಂದ ನಂಬಿರುವ ಮನಸ್ಸಿಗೆ, ಶಿವನಿಗಿಂತ ಬೇರೊಬ್ಬ ದೇವರು ಬಲಿಷ್ಟನಾಗಿರುವನು ಎಂದು ಸುಲಭವಾಗಿ ಒಪ್ಪಿಸಲಾಗದು. ಏಕೆಂದರೆ ಆತನ ಪ್ರಜ್ಞಾಮನಸ್ಸು ದಕ್ಕೆ ವಿರುದ್ಧವಾಗಿ ತರ್ಕ ನೀಡಿ ತನ್ನ ಹಳೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ. ಇದೇ ರೀತಿ ಇನ್ನು ಐದು ವರ್ಷಗಳಲ್ಲಿ ನಾನೊಂದು ಮನೆ ಕಟ್ಟುತ್ತೇನೆ ಎಂದು ನೀವು ಆಸೆ ಪಟ್ಟರೆ ಪ್ರಜ್ಞಾಮನಸ್ಸು ಅದು ಸಾಧ್ಯವಿಲ್ಲ ಎಂದು ಯೋಚನೆ ಮಾಡುತ್ತದೆ. ಅದರ ನಕಾರಾತ್ಮಕ ಗುಣ, 'ಏಕೆ ಸಾಧ್ಯವಿಲ್ಲ' ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತದೆ. 'ಅದು ಹೇಗೆ ಸಾಧ್ಯ? ದೂರದಲ್ಲೆಲ್ಲೋ ಜಾಗ ಖರೀದಿ ಮಾಡಬೇಕೆಂದರೂ ಲಕ್ಷಗಟ್ಟಲೆ ಹಣ ಬೇಕು. ಅದಲ್ಲದೇ ಮನೆ ನಿರ್ಮಾಣದ ವೆಚ್ಚ ಗಗನಕ್ಕೇರಿದೆ. ಕಡಿಮೆ ಎಂದರೂ ಒಂದೈವತ್ತು ಲಕ್ಷ ಬೇಕು. ನನ್ನ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಷ್ಟು ಲಾಭ ಮಾಡಲು ಐದಾರು ವರ್ಷಗಳಲ್ಲಿ ಅಸಾಧ್ಯ' 
ಎಂದೆಲ್ಲಾ ಪ್ರಜ್ಞಾಮನಸ್ಸು ನಿರ್ಧರಿಸಿಬಿಡುತ್ತದೆ. ಹೀಗಿರುವಾಗ ಒಂದು ಸಕಾರಾತ್ಮಕ ಸಂದೇಶ ನಿಮ್ಮ ಅರೆಪ್ರಜ್ಞಾಮನಸ್ಸನ್ನು ತಲುಪಲು ಸಾಧ್ಯವಾಗುವುದೇ ಇಲ್ಲ. ತತ್ಪರಿಣಾಮವಾಗಿ ಅರೆಪ್ರಜ್ಞಾಮನಸ್ಸು ಕೂಡಾ ನಕಾರಾತ್ಮಕವಾಗಿಯೇ ಉಳಿದು ಬಿಡುತ್ತದೆ.
        ಇದೇ ರೀತಿ 'ನಾನೊಬ್ಬ ಯಶಸ್ವೀ ವ್ಯಾಪಾರಿಯಾಗಬೇಕು' ಎಂದು ಬಯಸಿದೊಡನೆ ಪ್ರಜ್ಞಾಮನಸ್ಸು ಮತ್ತದೇ ನಕಾರಾತ್ಮಕ ಕಾರಣಗಳನ್ನು ನೀಡುತ್ತದೆ. 'ಎಷ್ಟೊಂದು ಜನ ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರದಲ್ಲಿ ಸಾಕಷ್ಟು ಪೈಪೋಟಿ ಇದೆ. ವಾಣಿಜ್ಯಸ್ಥಳಗಳ ಬಾಡಿಗೆಯೂ ಹೆಚ್ಚು. ಹೇಗೋ ಕಷ್ಟ ಪಟ್ಟು  ಹಣ ಹೊಂದಿಸಿದರೂ ವ್ಯಾಪಾರವಾಗದಿದ್ದರೆ ಏನು ಮಾಡುವುದು? ಕಣ್ಣ ಮುಂದೆಯೇ ಹಲವಾರು ಅಂಗಡಿಗಳು ವ್ಯಾಪಾರವಿಲ್ಲದೆ ನಷ್ಟವಾಗಿ ಮುಚ್ಚಿ ಹೋಗುತ್ತಿವೆ. ಇದ್ದಬದ್ದ ಹಣವೆಲ್ಲವೂ ಕೊಚ್ಚಿ ಹೋಗಿ ಸಾಲದ ಸುಳಿಗೆ ಸಿಲುಕಿ ನಿರ್ನಾಮವಾದರೆ?' ಇಂತಹ ಯೋಚನೆಗಳು ಮೂಡಿ, ನಕಾರಾತ್ಮಕ ಸಂದೇಶಗಳು ಅರೆಪ್ರಜ್ಞಾಮನಸ್ಸಿಗೆ
ತಲುಪಿ ಆತ ಪ್ರಯತ್ನ ಪಡಲು ಕೂಡಾ ಹೋಗುವುದಿಲ್ಲ. ಪ್ರಜ್ಞಾಮನಸ್ಸು ನಂಬದೇ ಹೋದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದಿಲ್ಲ. ಅರೆಪ್ರಜ್ಞಾಮನಸ್ಸು ನಂಬದಿದ್ದರೆ ನಮ್ಮಉದ್ದೇಶದ ಫಲ ಸಿಗುವುದಿಲ್ಲ. 'ಮದುವೆಯಾಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗುವುದಿಲ್ಲ' ಎಂಬಂತಹ ಎಡಬಿಡಂಗಿ ಸ್ಥಿತಿಯಲ್ಲಿ ಸಫಲತೆ ಕಾಣುವುದು ಹೇಗೆ? ಅದಕ್ಕಾಗಿ ಮನಸ್ಸಿಗೆ ತರಬೇತಿ ನೀಡುವ ಕೆಲಸವನ್ನು ನೀವು ಮಾಡಬೇಕಾಗುತ್ತದೆ.
       ಅದಕ್ಕೇನು ಮಾಡುವುದು? ನನ್ನ ಜೀವನದ ಉದಾಹರಣೆಯೊಂದಿಗೆ, ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.  

No comments:

Post a Comment