Tuesday, 12 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 5

   ಮನಸ್ಸಿನ ಶಕ್ತಿಯನ್ನು ಉಪಯೋಗಿಸುವುದು ಹೇಗೆ?
        ಮನಸ್ಸಿಗೆ ಅಪಾರ ಶಕ್ತಿ ಇರುವುದು ನಿಜವಾದರೂ ಅದನ್ನು ಪಳಗಿಸಿ ಉಪಯೋಗಿಸುವುದು ಹೇಗೆ? ಮನಸ್ಸೆಂಬ ಚಿನ್ನದ ಗಣಿಯಿಂದ ಚಿನ್ನವನ್ನು ತೆಗೆದು ಅಪರಂಜಿ ಮಾಡುವುದು ಹೇಗೆ? ಈ ಮೂಲಕ ಜೀವನದಲ್ಲಿ ಗೆಲುವು ಸಾಧಿಸುವುದು ಹೇಗೆ?
        ಕೆಲವು ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅರೆಪ್ರಜ್ಞಾಮನಸ್ಸು ನಿಮ್ಮ ಗೆಲುವಿಗೆ ಸದಾ ನಿಮ್ಮ ಸಂಗಾತಿಯಾಗಿರುತ್ತದೆ. ಅರೆಪ್ರಜ್ಞಾಮನಸ್ಸಿನ ಶಕ್ತಿಯ ಬಗ್ಗೆ ನಿಮ್ಮ ಪ್ರಜ್ಞಾಮನಸ್ಸಿಗೆ ಅರಿವು ಮೂಡಿದರೆ ಅದು ನಿಮ್ಮ ಮೊದಲ ಗೆಲುವು. ನಿಮ್ಮ ಜೀವನದ ಸಾಧನೆಯ ಅಥವಾ ಗುರಿಯ ಬಗ್ಗೆ ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಂಡು, ಅದನ್ನು ದೃಶ್ಯೀಕರಿಸಲು ನೀವು
ಸಮರ್ಥರಾದರೆ, ಅದು ನಿಮ್ಮ ಎರಡನೆಯ ಗೆಲುವು. ಗುರಿ ತಲುಪುವವರೆಗೂ ಅವಿರತವಾಗಿ ಮುನ್ನಡೆಯುವುದು ನಿಮ್ಮ ಅಂತಿಮ ಗೆಲುವು. ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಮನಸ್ಸುಗಳನ್ನು ಜತೆಗೂಡಿಸಿ ಕೆಲಸ ಮಾಡುವುದು ನಿಮ್ಮ ಯಶಸ್ಸಿನ ಏಣಿ.
        ನಿಮ್ಮ ಕನಸುಗಳನ್ನು ನಿಜವಾಗಿಸುವ ಶಕ್ತಿ ಅರೆಪ್ರಜ್ಞಾಮನಸ್ಸಿಗೆ ಇದೆ. ಅದಕ್ಕೆ ತರ್ಕ, ಚರ್ಚೆ, ವಾದ ಹಾಗೂ ವಿಶ್ಲೇಷಣೆಗಳು ಬೇಕಿಲ್ಲ. ನಿಮ್ಮನ್ನು ನಿಮ್ಮ ಗುರಿಯತ್ತ ಕರೆದೊಯ್ಯುವುದು ಅದರ ಕೆಲಸ. ನಿಮ್ಮ ಅನಿಸಿಕೆ ಬಲವಾಗಿದ್ದು ನಿಮ್ಮ ಕನಸುಗಳ ಮೇಲೆ ನಿಮ್ಮ ನಂಬಿಕೆ ಬಲವಾಗಿದ್ದರೆ, ಅರೆಪ್ರಜ್ಞಾಮನಸ್ಸು ಅದನ್ನು ಅಕ್ಷರಶಃ ನಂಬಿ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದು.
        ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನೂ ಸುಲಭವಾಗಿ ನಂಬುವುದಿಲ್ಲ. ಪ್ರಜ್ಞಾಮನಸ್ಸಿನ ಒಪ್ಪಿಗೆ ದೊರಕದಿದ್ದರೆ ಅದು ಅರೆಪ್ರಜ್ಞಾಮನಸ್ಸಿಗೆ ತಲುಪದು.
ಪ್ರಜ್ಞಾಮನಸ್ಸು ಅರೆಪ್ರಜ್ಞಾಮನಸ್ಸಿಗೆ ಬಾಗಿಲಿದ್ದಂತೆ. ಪ್ರಜ್ಞಾಮನಸ್ಸು ಎಲ್ಲವನ್ನೂ ಅಳೆದು ತೂಗಿ ಅರೆಪ್ರಜ್ಞಾಮನಸ್ಸಿಗೆ ತಲುಪಿಸುತ್ತದೆ. ನಿಮ್ಮ ಸಾಧನೆ, ನಿಮ್ಮ ಗುರಿ ತಲುಪುವ ಶಕ್ತಿ ಹಾಗೂ ನಿಮ್ಮ ಸಮಸ್ಯೆಗಳ ಪರಿಹಾರ ನಿಮ್ಮಲ್ಲೇ ಇದೆ ಎನ್ನುವುದನ್ನು ಪ್ರಜ್ಞಾಮನಸ್ಸು ನಂಬಿ ಮುಂದುವರೆದರೆ ನಿಮ್ಮ ಗೆಲುವು ಖಚಿತ.
ಆದರೆ...
        ಸಮಸ್ಯೆ ಇರುವುದು ಇಲ್ಲಿಯೇ. ನಿಮ್ಮ ಪ್ರಜ್ಞಾಮನಸ್ಸನ್ನು ನಂಬಿಸುವುದೇ ಕಷ್ಟದ ಕೆಲಸ. ನಂಬದಿದ್ದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದೇ ಇಲ್ಲ. ಪ್ರಜ್ಞಾಮನಸ್ಸು ಪಂಚೇಂದ್ರಿಯಗಳು ಅನುಮೋದಿಸಿದ್ದನ್ನು ಒಪ್ಪುತ್ತದೆ. ಉದಾಹರಣೆಗೆ 'ನನ್ನ ಕೈಯ್ಯಲ್ಲೊಂದು ಮಾವಿನ ಹಣ್ಣಿದೆ' ಅಂದಾಗ ಕಣ್ಣಿನಿಂದ ನೋಡಿ ಅಥವಾ ಕೈಯ್ಯಿಂದ ಮುಟ್ಟಿ ನೋಡಿ ಅಥವಾ ಮೂಗಿನಿಂದ ಮೂಸಿ ನೋಡಿ
ಅಥವಾ ಅದನ್ನು ಕಚ್ಚಿ ರುಚಿ ನೋಡಿದಾಗ ಮಾತ್ರ ಪ್ರಜ್ಞಾಮನಸ್ಸು ಅಲ್ಲೊಂದು ಮಾವಿನ ಹಣ್ಣು ಇದೆಯೆಂದು ಒಪ್ಪುತ್ತದೆ. ಇಂತಹ ಯಾವ ಅನುಭವವೂ ಆಗದಿದ್ದಾಗ ಮಾವಿನ ಹಣ್ಣು ಅಲ್ಲಿಲ್ಲ ಎಂದು ಕೂಡಾ ನಂಬುತ್ತದೆ.
        ಚಿಕ್ಕ ವಯಸ್ಸಿನಿಂದ ಒದಗಿ ಬಂದ ಸಂಸ್ಕಾರಕ್ಕೆ ತಕ್ಕ ಹಾಗೆ ತನ್ನ ಭಾವನೆಗಳನ್ನು ಹಾಗೂ ನಂಬಿಕೆಗಳನ್ನು ಅದು ಬೆಳೆಸಿಕೊಂಡು ಬಂದಿರುತ್ತದೆ. ಉದಾಹರಣೆಗೆ 'ಶಿವನೇ ಅತ್ಯಂತ ಬಲಿಷ್ಟ ದೇವರು' ಎಂದು ಚಿಕ್ಕಂದಿನಿಂದ ನಂಬಿರುವ ಮನಸ್ಸಿಗೆ, ಶಿವನಿಗಿಂತ ಬೇರೊಬ್ಬ ದೇವರು ಬಲಿಷ್ಟನಾಗಿರುವನು ಎಂದು ಸುಲಭವಾಗಿ ಒಪ್ಪಿಸಲಾಗದು. ಏಕೆಂದರೆ ಆತನ ಪ್ರಜ್ಞಾಮನಸ್ಸು ಅದಕ್ಕೆ ವಿರುದ್ಧವಾಗಿ ತರ್ಕ ನೀಡಿ ತನ್ನ ಹಳೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ. ಇದೇ ರೀತಿ ಇನ್ನು ಐದು ವರ್ಷಗಳಲ್ಲಿ ನಾನೊಂದು ಮನೆ ಕಟ್ಟುತ್ತೇನೆ ಎಂದು ನೀವು ಆಸೆ ಪಟ್ಟರೆ ಪ್ರಜ್ಞಾಮನಸ್ಸು ಅದು ಸಾಧ್ಯವಿಲ್ಲ ಎಂದು ಯೋಚನೆ ಮಾಡುತ್ತದೆ. ಅದರ ನಕಾರಾತ್ಮಕ ಗುಣ, 'ಏಕೆ ಸಾಧ್ಯವಿಲ್ಲ' ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತದೆ. 'ಅದು ಹೇಗೆ ಸಾಧ್ಯ? ದೂರದಲ್ಲೆಲ್ಲೋ ಜಾಗ ಖರೀದಿ ಮಾಡಬೇಕೆಂದರೂ ಲಕ್ಷಗಟ್ಟಲೆ ಹಣ ಬೇಕು. ಅದಲ್ಲದೇ ಮನೆ ನಿರ್ಮಾಣದ ವೆಚ್ಚ ಗಗನಕ್ಕೇರಿದೆ. ಕಡಿಮೆ ಎಂದರೂ ಒಂದೈವತ್ತು ಲಕ್ಷ ಬೇಕು. ನನ್ನ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಷ್ಟು ಲಾಭ ಮಾಡಲು ಐದಾರು ವರ್ಷಗಳಲ್ಲಿ ಅಸಾಧ್ಯ' 
ಎಂದೆಲ್ಲಾ ಪ್ರಜ್ಞಾಮನಸ್ಸು ನಿರ್ಧರಿಸಿಬಿಡುತ್ತದೆ. ಹೀಗಿರುವಾಗ ಒಂದು ಸಕಾರಾತ್ಮಕ ಸಂದೇಶ ನಿಮ್ಮ ಅರೆಪ್ರಜ್ಞಾಮನಸ್ಸನ್ನು ತಲುಪಲು ಸಾಧ್ಯವಾಗುವುದೇ ಇಲ್ಲ. ತತ್ಪರಿಣಾಮವಾಗಿ ಅರೆಪ್ರಜ್ಞಾಮನಸ್ಸು ಕೂಡಾ ನಕಾರಾತ್ಮಕವಾಗಿಯೇ ಉಳಿದು ಬಿಡುತ್ತದೆ.
        ಇದೇ ರೀತಿ 'ನಾನೊಬ್ಬ ಯಶಸ್ವೀ ವ್ಯಾಪಾರಿಯಾಗಬೇಕು' ಎಂದು ಬಯಸಿದೊಡನೆ ಪ್ರಜ್ಞಾಮನಸ್ಸು ಮತ್ತದೇ ನಕಾರಾತ್ಮಕ ಕಾರಣಗಳನ್ನು ನೀಡುತ್ತದೆ. 'ಎಷ್ಟೊಂದು ಜನ ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರದಲ್ಲಿ ಸಾಕಷ್ಟು ಪೈಪೋಟಿ ಇದೆ. ವಾಣಿಜ್ಯಸ್ಥಳಗಳ ಬಾಡಿಗೆಯೂ ಹೆಚ್ಚು. ಹೇಗೋ ಕಷ್ಟ ಪಟ್ಟು  ಹಣ ಹೊಂದಿಸಿದರೂ ವ್ಯಾಪಾರವಾಗದಿದ್ದರೆ ಏನು ಮಾಡುವುದು? ಕಣ್ಣ ಮುಂದೆಯೇ ಹಲವಾರು ಅಂಗಡಿಗಳು ವ್ಯಾಪಾರವಿಲ್ಲದೆ ನಷ್ಟವಾಗಿ ಮುಚ್ಚಿ ಹೋಗುತ್ತಿವೆ. ಇದ್ದಬದ್ದ ಹಣವೆಲ್ಲವೂ ಕೊಚ್ಚಿ ಹೋಗಿ ಸಾಲದ ಸುಳಿಗೆ ಸಿಲುಕಿ ನಿರ್ನಾಮವಾದರೆ?' ಇಂತಹ ಯೋಚನೆಗಳು ಮೂಡಿ, ನಕಾರಾತ್ಮಕ ಸಂದೇಶಗಳು ಅರೆಪ್ರಜ್ಞಾಮನಸ್ಸಿಗೆ
ತಲುಪಿ ಆತ ಪ್ರಯತ್ನ ಪಡಲು ಕೂಡಾ ಹೋಗುವುದಿಲ್ಲ. ಪ್ರಜ್ಞಾಮನಸ್ಸು ನಂಬದೇ ಹೋದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದಿಲ್ಲ. ಅರೆಪ್ರಜ್ಞಾಮನಸ್ಸು ನಂಬದಿದ್ದರೆ ನಮ್ಮಉದ್ದೇಶದ ಫಲ ಸಿಗುವುದಿಲ್ಲ. 'ಮದುವೆಯಾಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗುವುದಿಲ್ಲ' ಎಂಬಂತಹ ಎಡಬಿಡಂಗಿ ಸ್ಥಿತಿಯಲ್ಲಿ ಸಫಲತೆ ಕಾಣುವುದು ಹೇಗೆ? ಅದಕ್ಕಾಗಿ ಮನಸ್ಸಿಗೆ ತರಬೇತಿ ನೀಡುವ ಕೆಲಸವನ್ನು ನೀವು ಮಾಡಬೇಕಾಗುತ್ತದೆ.
       ಅದಕ್ಕೇನು ಮಾಡುವುದು? ನನ್ನ ಜೀವನದ ಉದಾಹರಣೆಯೊಂದಿಗೆ, ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.  

Saturday, 9 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 4

'ನಾನು' ನಾನಾಗಿ ರೂಪಗೊಂಡಿರುವುದು ಹೇಗೆ ?
ಮಗು ಕಣ್ಣು ಬಿಟ್ಟ ಕ್ಷಣದಿಂದ ಪ್ರಜ್ಞಾಮನಸ್ಸು ತಾನು ಹೊಸದಾಗಿ ಅನುಭವಿಸುತ್ತಿರುವುದನ್ನು ಅರೆಪ್ರಜ್ಞಾಮನಸ್ಸಿಗೆ ರವಾನೆ ಮಾಡುತ್ತಿರುತ್ತದೆ. ಆದರೆ ಪ್ರಜ್ಞಾಮನಸ್ಸಿಗೆ ಸುತ್ತಮುತ್ತ ನಡೆಯುತ್ತಿರುವುದು ಏನೆಂಬುದರ ಅರಿವಿರುವುದಿಲ್ಲ. ಅದು ಹೊಸದಾಗಿ ಎಲ್ಲವನ್ನೂ ಗಮನಿಸುತಿರುತ್ತದೆ. ಸರಿತಪ್ಪುಗಳ ಗ್ರಹಿಕೆ ಅದಕ್ಕಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೈನಂದಿನ ವ್ಯವಹಾರಗಳನ್ನು ಅರೆಪ್ರಜ್ಞಾಮನಸ್ಸು ದಾಖಲಿಸುತ್ತಾ ಹೋಗುತ್ತದೆ. 
        'ತಾನು ಅತ್ತರೆ ಗಮನ ಸೆಳೆಯಬಹುದು' 'ಅಮ್ಮನ ಎದೆಹಾಲು ಅಥವಾ ಹಾಲಿನ ಬಾಟಲಿ ತನ್ನ ಆಹಾರ' ಎಂದು ಅರೆಪ್ರಜ್ಞಾಮನಸ್ಸಿನಲ್ಲಿ ಗುರುತಿಸಲು ಪ್ರಾರಂಭಿಸುತ್ತದೆ. ತೊಟ್ಟಿಲಲ್ಲಿ ತೂಗಿ ಲಾಲಿ ಹಾಡು ಕೇಳುತ್ತಿದ್ದಂತೆ ನಿಧಾನವಾಗಿ ನಿದ್ದೆಗೆ ಜಾರುವುದು, ಪದೇ ಪದೇ ಕಣ್ಣಿಗೆ ಕಾಣುವ ಮುಖಗಳು ಹಾಗೂ ಅವರ ಪ್ರೀತಿಯ ಆರೈಕೆಯಿಂದ ಇವರು ನನ್ನವರು ಎಂದು ಗುರುತಿಸುವುದು, 
ಹೀಗೆ ಹತ್ತು ಹಲವು ವಿವರಗಳು ಅರೆಪ್ರಜ್ಞಾಮನಸ್ಸಿನಲ್ಲಿ ದಾಖಲಾಗುತ್ತ ಹೋಗುತ್ತವೆ. ಇಲ್ಲಿಂದ ಮುಂದೆ ಭಾವನೆಗಳು, ಹವ್ಯಾಸಗಳು, ನಂಬಿಕೆಗಳು ನಿರ್ಧಾರಗಳು ಬಲವಾಗುತ್ತಾ ಹೋಗುತ್ತವೆ. 
        ಮುಂದೆ ದಿನಕಳೆದಂತೆ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ನಿಮ್ಮ ಅರೆಪ್ರಜ್ಞಾಮನಸ್ಸು ಬಹಳಷ್ಟು ಅನುವು ಮಾಡಿಕೊಡುತ್ತದೆ. ಅದು ಪ್ರಜ್ಞಾಮನಸ್ಸಿನ ಜೊತೆ ಸೇರಿ ಕೆಲಸ ಮಾಡುತ್ತದೆ. ಉದಾಹರಣೆಗೆ : ನೆನಪಿಸುವುದು. ಯಾವುದೋ ಒಂದು ಸಮಯದಲ್ಲಿ ಥಟ್ಟನೆ ಮರೆತುಹೋದ ಒಂದು ಕೆಲಸ ನೆನಪಾಗುವುದು. ಮರುದಿನ ಬೇಗ ಎದ್ದು ಕೆಲಸಕ್ಕೆ ಹೋಗುವ ಪ್ರಮೇಯವಿದ್ದಾಗ 
ಬೆಳಿಗ್ಗೆ ಥಟ್ಟನೆ ಎಚ್ಚರವಾಗುವುದು ಇತ್ಯಾದಿ. 
        ನಿಮ್ಮ ಜೀವನಾನುಭವದಿಂದ ಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತಿರುವ ನಂಬಿಕೆ ಹಾಗೂ ಮೌಲ್ಯಗಳನ್ನೂ ಎತ್ತಿ ಹಿಡಿಯುವ ಕೆಲಸವನ್ನು ಅದು ಮಾಡುತ್ತದೆ. ನಿಮ್ಮ ಪಂಚೇಂದ್ರಿಯಗಳು ಆ ಕ್ಷಣ ಏನನ್ನು ಅನುಭವಿಸುತ್ತಿವೆ ಎಂಬ ಅರಿವು ಅರೆಪ್ರಜ್ಞಾಮನಸ್ಸಿಗೆ ಇರುತ್ತದೆ. 
        ಅರೆಪ್ರಜ್ಞಾಮನಸ್ಸಿನ ಕೆಲಸ ನಿರಂತರ. ಆಯಾ ಕ್ಷಣಕ್ಕೆ ನಿಮಗೆ ಬೇಕಾಗುವ ಮಾಹಿತಿಯನ್ನು ನೀಡುತ್ತಾ ಅನವಶ್ಯಕ ಮಾಹಿತಿಯನ್ನು ಹಿಂದೆ ಸರಿಸುತ್ತದೆ. ಉದಾಹರಣೆಗೆ ಪರೀಕ್ಷೆಗೆ ಕುಳಿತಾಗ ಪ್ರಶ್ನೆಯನ್ನು ನೋಡುತ್ತಿದ್ದಂತೆ ಓದಿದ ಇತರ ಎಲ್ಲಾ ವಿಷಯಗಳನ್ನು ಹಿಂದಿಕ್ಕಿ, ಆ ಪ್ರಶ್ನೆಯ ಉತ್ತರಕ್ಕೆ ಮಹತ್ವವನ್ನು ನೀಡುತ್ತದೆ.
        ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಸಂಬಂಧ ಹಾಗೂ ವಿಚಾರ ವಿನಿಮಯ ಮಾತುಗಳಲ್ಲಿ ಇರುವುದಿಲ್ಲ. ಅದು ಭಾವನೆ, ಅನುಭವದ ಸಂವೇದನೆ, ಚಿತ್ರಣ, ಕನಸು ಮುಂತಾದವುಗಳ ಮೂಲಕ ವ್ಯಕ್ತ ಪಡಿಸುತ್ತವೆ. ಅರೆಪ್ರಜ್ಞಾಮನಸ್ಸಿನ ಮುಖ್ಯ ಗುಣವೆಂದರೆ ಅದು ಪ್ರಜ್ಞಾಮನಸ್ಸಿನ ಆಜ್ಞೆಗಳಿಗೆ/ಅಭಿಪ್ರಾಯಗಳಿಗೆ ತಲೆ ಬಾಗುವುದು. ಆದರೆ ನಿಮ್ಮ ಪ್ರಜ್ಞಾಮನಸ್ಸಿನ ಮೂಲಕ ಯಾವ ವಿಚಾರಗಳ ಬೀಜ ಬಿತ್ತುವಿರೋ ಅದು ಹೆಮ್ಮರವಾದಂತೆ ನಿಮ್ಮ ಪ್ರಜ್ಞಾಮನಸ್ಸು ಅದರ ವಶವಾಗಿ ಬಿಡುತ್ತದೆ. 
        ನೀವು ಬಿತ್ತುವ ನಕಾರಾತ್ಮಕ ವಿಷಯಗಳಾಗಲೀ, ಸಕಾರಾತ್ಮಕ ವಿಷಯಗಳಾಗಲೀ, ದಿನಗಳೆದಂತೇ ಪ್ರಜ್ಞಾಮನಸ್ಸು ಆ ವಿಷಯಗಳಿಗೆ ಬಲವಾಗಿ ಸ್ಪಂದಿಸುತ್ತದೆ. ಉದಾಹರಣೆಗೆ ದುಡ್ಡು ಕದಿಯಲು ಪ್ರಾರಂಭಿಸಿದರೆ, ಮುಂದೊಮ್ಮೆ ನಿಮ್ಮ ಪ್ರಜ್ಞಾಮನಸ್ಸಿಗೆ ಬೇಡವೆನಿಸಿದರೂ ಅರೆಪ್ರಜ್ಞಾ ಮನಸ್ಸು ಒತ್ತಡ ಹೇರಿ ಮತ್ತೆ ಕದಿಯಲು ಪ್ರೇರೇಪಿಸುತ್ತದೆ.  ನಾವೇ ಕಟ್ಟಿಕೊಟ್ಟಿರುವ ಕೋಟೆಯಲ್ಲಿ ವಿಹರಿಸುತ್ತಿರುವ ಅರೆಪ್ರಜ್ಞಾಮನಸ್ಸನ್ನು ಮತ್ತೆ ಬದಲಿಸುವುದು ಕಷ್ಟಾಸಾಧ್ಯ.
        ಅರೆಪ್ರಜ್ಞಾಮನಸ್ಸಿನ ಉಗ್ರಾಣವೇ ಸುಪ್ತಮನಸ್ಸು.ಇಲ್ಲಿ ನಿಮ್ಮ ಜೀವನದಲ್ಲಿ ಹುಟ್ಟಿದ ಕ್ಷಣದಿಂದ ನಡೆದ ಎಲ್ಲಾ ಘಟನೆಗಳು ದಾಖಲಾಗಿರುತ್ತವೆ.
ಅರೆಪ್ರಜ್ಞಾಮನಸ್ಸು ಮರೆತಿರುವ ವಿಷಯಗಳು ಕೂಡಾ ಇಲ್ಲಿ ಜಮೆಯಾಗಿರುತ್ತವೆ.
ಈ ಭಾಗ ಸ್ವಲ್ಪ ನಿಗೂಢ ಹಾಗೂ ಕೆಲವೊಮ್ಮೆ ವಿವರಿಸಲು ಆಗದ ಕಾರ್ಯಗಳನ್ನು
ಅದು ನಿರ್ವಹಿಸುತ್ತದೆ. ಇಲ್ಲಿ ಹುದುಗಿರುವ ಒಂದು ನೆನಪು ಅಥವಾ ಒಂದು ಘಟನೆ ಭುಗಿಲೆದ್ದಾಗ ಆತನ ವಿಚಿತ್ರ ನಡವಳಿಕೆಗೆ ಕಾರಣವಾಗಬಹುದು. ಸಾಧಾರಣವಾಗಿ ಪ್ರಜ್ಞಾಮನಸ್ಸಿಗೆ ಸಿಗದ  ಮನಸ್ಸಿನ ಈ ಭಾಗವನ್ನು ಸಮ್ಮೋಹಿನಿಯಿಂದ ಹೊರತರಬಹುದಾಗಿದೆ. 
        ಅರೆಪ್ರಜ್ಞಾ ಮನಸ್ಸು ನಮ್ಮ ಜೀವನದ ಹಲವಾರು ನೆನಪುಗಳು, ಅನುಭವಗಳು, ಸಂಸ್ಕಾರ, ಕಲಿಕೆ, ಗ್ರಹಿಕೆ ಎಲ್ಲವೂ ಸೇರಿ ಅವುಗಳನ್ನೆಲ್ಲಾ ನಮ್ಮ ಅರಿವಿಲ್ಲದೇ ವಿಶ್ಲೇಷಿಸಿ ಇಂದಿನ ನನ್ನನ್ನು `ನಾನು' ಆಗಿ ರೂಪಿಸಿರುತ್ತದೆ. ಹಲವಾರು ವಿಷಯಗಳನ್ನು ನಾವು ಮರೆತಿದ್ದರೂ ಅದರ ಪ್ರಭಾವ 'ನಮ್ಮ' ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುತ್ತದೆ. ಇದರ ಆಧಾರದ ಮೇಲೆ ನಮ್ಮ ನಂಬಿಕೆಗಳು ಯೋಚನಾಲಹರಿ, ನಡವಳಿಕೆ, ವೈಚಾರಿಕತೆ, ವಿಶ್ಲೇಷಣೆ ಮುಂತಾದವು ನಮ್ಮೊಂದಿಗೆ ಬೆಸೆದುಕೊಂಡಿರುತ್ತವೆ. 
        ನೆನಪಿಗೆ ಬಾರದಿರುವ ಮನಸ್ಸಿನ ಭಾಗವನ್ನು, ಸುಪ್ತ ಮನಸ್ಸು ಅಥವಾ ಪ್ರಜ್ಞಾರಹಿತಮನಸ್ಸುಎಂದು ಕರೆಯಬಹುದು. ಅರೆಪ್ರಜ್ಞಾಮನಸ್ಸಿನಲ್ಲಿ ನೆನಪುಗಳು, 
ಚಿಂತನೆಗಳು ಹಾಗೂ ಚಟುವಟಿಕೆಗಳು ತಾನೇ ತಾನಾಗಿ ಹಸಿರಾಗಿರುತ್ತವೆ. ನಿಮಗೆ ಪ್ರಶ್ನೆ ಕೇಳಿದೊಡನೆ ನೆನಪಿಗೆ ಬರುವ ಉತ್ತರಗಳು ಅರೆಪ್ರಜ್ಞಾಮನಸ್ಸಿನಲ್ಲಿರುತ್ತವೆ. ಬಯಸಿದರೂ, ಹುಡುಕಿದರೂ, ತಿಣುಕಾಡಿದರೂ ನೆನಪಿಗೆ ಬಾರದಿರುವ ಅಂಶಗಳು 
ಸುಪ್ತ ಮನಸ್ಸಿನಲ್ಲಿರುತ್ತವೆ. 
        ಸುಪ್ತ ಮನಸ್ಸು ದೊಡ್ಡದೊಂದು ಉಗ್ರಾಣವಿದ್ದಂತೆ. ಅದರ ಸಂಗ್ರಹಣಾ ಸಾಮರ್ಥ್ಯಕ್ಕೆ ಮಿತಿಯಿಲ್ಲ. ನಿಮ್ಮ ಜೀವನದ ಎಲ್ಲಾ ವಿವರಗಳು ಅಲ್ಲಿ ಜಮೆಯಾಗಿರುತ್ತವೆ. ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಮೂಲಕ ಹರಿದು ಬರುವ ಅಪಾರ ವಿಷಯಗಳನ್ನು ನಿರಂತರ ಸಂಪರ್ಕವಿಟ್ಟುಕೊಂಡು ಸುಪ್ತ ಮನಸ್ಸು ದಾಖಲಿಸುತ್ತಾ ಇರುತ್ತದೆ.

Friday, 8 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 3

ಅರೆಪ್ರಜ್ಞಾಮನಸ್ಸಿನ ಗುಣ ಹಾಗೂ ಶಕ್ತಿ 

        ದಿನಂಪ್ರತಿ ಮನಸ್ಸಿನಲ್ಲಿ ಏಳುವ ಸಾವಿರಾರು ಯೋಚನೆಗಳಿಂದ ಮನಸ್ಸು ಬಳಲುತ್ತದೆ. ಬೇಡದೇ ಇರುವ ವಿಷಯಗಳನ್ನು ಯೋಚಿಸಿ, ಯೋಚಿಸಬೇಕಾದ ವಿಷಯಗಳನ್ನು ಆತ ಯೋಚಿಸುವುದಿಲ್ಲ. ಅರೆಪ್ರಜ್ಞಾಮನಸ್ಸನ್ನು ಹತೋಟಿಗೆ ತಂದರೆ, ಈ ಅಡಚಣೆಗಳನ್ನು ತಡೆದು, ನಮ್ಮ ಲಾಭಕ್ಕೆ ಮಾರ್ಗಗಳನ್ನು ಕಂಡು ಹಿಡಿಯಬಹುದು ಹಾಗೂ ಒಳಗಿನ ಶಾಂತಿಯನ್ನು ಕಾಣಬಹುದು. ಕೆಲವರಿಗೆ ಇದಕ್ಕೆ ಧ್ಯಾನವೇ ಪರಮೋಚ್ಛ ದಾರಿ ಎನಿಸಿದರೆ ಹಲವರಿಗೆ ಧ್ಯಾನ ಕಷ್ಟದ ಕೆಲಸ ಎನ್ನಿಸಬಹುದು. ಅಂತಹವರಿಗೆ ಸಮ್ಮೋಹಿನಿ ಅಥವಾ ಸ್ವಸಮ್ಮೋಹಿನಿ ಸಹಾಯ ಮಾಡಬಲ್ಲದು. 
         ಅರೆಪ್ರಜ್ಞಾಮನಸ್ಸಿಗೆ, ನೀವು ಕಲ್ಪನೆಯಲ್ಲಿ ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ನಿಜವನ್ನಾಗಿ ಮಾಡುವ ಶಕ್ತಿ ಇದೆ. ಅರೆ ಪ್ರಜ್ಞಾಮನಸ್ಸಿನ ಶಕ್ತಿ ಅಪಾರವಾದದ್ದು, ಆದರೂ ಅದು ನೀವು ಹೇಳಿದ್ದನ್ನು ಕೇಳುತ್ತದೆ. ನೀವು ಪದೇ ಪದೇ ಹೇಳುವುದನ್ನು ಅರೆಪ್ರಜ್ಞಾಮನಸ್ಸು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ಸತ್ಯ ಹಾಗೂ ಸುಳ್ಳು ಇವುಗಳ ಅರಿವಿಲ್ಲ.
ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ನಂಬುತ್ತದೆಯೋ ಅದನ್ನು ಅರೆಪ್ರಜ್ಞಾಮನಸ್ಸು ಕೂಡಾ ಸಂಪೂರ್ಣವಾಗಿ ನಂಬುತ್ತದೆ. ಆದುದರಿಂದ ಹಗಲುಕನಸು ಕಾಣುವುದು, ನಂಬುವುದು ಹಾಗೂ ನಿಮ್ಮ ನಂಬಿಕೆಯನ್ನು ಪುನರಾವರ್ತಿಸುವುದು ಅತ್ಯಂತ ಪರಿಣಾಮಕಾರಿ ಫಲಿತಾಂಶವನ್ನು ಕೊಡುತ್ತವೆ. 
        ನಾವು ಬಯಸದಿದ್ದರೂ ಮಾಡುವ ಕೆಲಸಗಳನ್ನು ಅರೆಪ್ರಜ್ಞಾಮನಸ್ಸು ನಿರ್ವಹಿಸುತ್ತದೆ. ಈ ದೇಹ ಮಲಗಿದ್ದಾಗ ಪ್ರಜ್ಞಾಮನಸ್ಸು ವಿಶ್ರಮಿಸಿದರೂ, ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ. ಭಾವನೆಗಳನ್ನು ಅರೆಪ್ರಜ್ಞಾಮನಸ್ಸು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ನಮ್ಮ ನೆನಪು ಹಾಗೂ ನಂಬಿಕೆಗಳ ಆಧಾರದಿಂದ ಹುಟ್ಟಿರುವ ಭಯ, ಆತಂಕ, ಖಿನ್ನತೆ ಮುಂತಾದವುಗಳನ್ನೂ ಅರೆಪ್ರಜ್ಞಾಮನಸ್ಸು ಉದ್ದೀಪನಗೊಳಿಸುತ್ತದೆ. ವಿರುದ್ಧ ದಿಕ್ಕಿಗೆ ತಯಾರು ಮಾಡಿದಲ್ಲಿ 
ಅರೆಪ್ರಜ್ಞಾಮನಸ್ಸು ಎಲ್ಲವನ್ನು ಶಮನಗೊಳಿಸಲೂಬಲ್ಲದು. ನಾವು ಯಾವುದೇ ಆಲೋಚನೆಯಲ್ಲಿ ಮುಳುಗಿದ್ದರೂ, ಅರೆಪ್ರಜ್ಞಾಮನಸ್ಸು ತಾನು ನಿರ್ವಹಿಸಬೇಕಾದ ಕಾರ್ಯಗಳನ್ನು ಕರಾರುವಾಕ್ಕಾಗಿ ಮಾಡುತ್ತಿರುತ್ತದೆ. ಉದಾ: ಕಛೇರಿಯಿಂದ ಮನೆಗೆ ಹೊರಡುವಾಗ ಆತ ಹಲವಾರು ರೀತಿ ಯೋಚನೆಗಳಲ್ಲಿ ಮುಳುಗಿದ್ದರೂ, ತನಗೇ ಅರಿವಿಲ್ಲದಂತೆ ಎಡಬಲಗಳನ್ನು ಬಳಸಿ ಕರಾರುವಾಕ್ಕಾಗಿ ತನ್ನ ಮನೆ ಬಾಗಿಲಿಗೆ ಬಂದಿರುತ್ತಾನೆ. ಇಲ್ಲಿ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ.                    ದಿನಂಪ್ರತಿ ಮನಸ್ಸಿನಲ್ಲೇಳುವ ಯೋಚನಾ ತರಂಗಗಳಿಂದ ಮನಸ್ಸು ದಣಿಯುತ್ತದೆ. ನಮ್ಮ ಯೋಚನೆಗಳು ಭಾವನೆಗಳ ಬೀಜರೂಪಗಳು. ಪದೇ ಪದೇ ಯೋಚಿಸುವಾಗ ಭಾವನೆಗಳು ಗಾಢವಾಗುತ್ತ ಹೋಗುತ್ತವೆ. ನಿಮಗೆ ಬೇಡವಾದ ಭಾವನೆಗಳನ್ನು ನಿಯಂತ್ರಿಸಬೇಕಾದರೆ ಆಲೋಚನೆಗಳನ್ನು ನಿಯಂತ್ರಿಸುವುದನ್ನು ಕಲಿಯಬೇಕಾಗುತ್ತದೆ. ಅರೆಪ್ರಜ್ಞಾಮನಸ್ಸು ನಿಮ್ಮ ಜೀವನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತಿರುತ್ತದೆ. ಹಳೆಯ ಅಥವಾ ಪ್ರಾಮುಖ್ಯತೆ ಇಲ್ಲದ ಘಟನೆಗಳು ಸುಪ್ತ ಮನಸ್ಸಿನಲ್ಲಿ ಹುದುಗಿ ಹೋಗುತ್ತೇವೆ. ನಿಮ್ಮ ಸಂಸ್ಕಾರಕ್ಕೆ ತಕ್ಕ ಹಾಗೆ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತದೆ. 'ನೀವು' ಅಂದರೆ ಏನು ಎನ್ನುವುದು ಅರೆಪ್ರಜ್ಞಾಮನಸ್ಸಿಗೆ ಕರಾರುವಾಕ್ಕಾಗಿ ಗೊತ್ತಿರುತ್ತದೆ. ಅರೆಪ್ರಜ್ಞಾಮನಸ್ಸು ತಾನೇ ತಾನಾಗಿ ಯಾವ ಯೋಚನೆಗಳನ್ನು ಅಥವಾ ಕಾರಣಗಳನ್ನು ಹುಡುಕುವುದಿಲ್ಲ. ಪ್ರಜ್ಞಾಮನಸ್ಸಿನಿಂದ ಬಂದಿರುವ ಸಂದೇಶಗಳನ್ನು ಅದು ದಾಖಲಿಸುತ್ತದೆ ಹಾಗೂ ನಂಬುತ್ತದೆ. ನಿಮ್ಮ ಪ್ರಜ್ಞಾಮನಸ್ಸು ಬಿತ್ತಿದ ಆಲೋಚನೆ ಎಂಬ ಬೀಜಗಳನ್ನು ಅರೆಪ್ರಜ್ಞಾಮನಸ್ಸು ಫಲವತ್ತಾಗಿ ಬೆಳೆದುಕೊಡುತ್ತದೆ. ನಿಮ್ಮ ಆಲೋಚನೆಗಳು ಹೇಗಿರಬೇಕೆಂಬ ಆಯ್ಕೆ ನಿಮ್ಮದು. ಹೂವು ಬೇಕಾದರೆ ಹೂವು, ಹಾವು ಬೇಕಾದರೆ ಹಾವು. ಪ್ರಜ್ಞಾಮನಸ್ಸು ನೀಡಿದ ಆದೇಶಗಳನ್ನು ಅರೆಪ್ರಜ್ಞಾಮನಸ್ಸು ಪಾಲಿಸುತ್ತದೆ. ನಿಮ್ಮ ಅರೆಪ್ರಜ್ಞಾಮನಸ್ಸು ನಿಮಗಾಗಿ ಹಗಲಿರುಳು ಕೆಲಸ ಮಾಡುತ್ತಿರುತ್ತದೆ. 
ನಿಮ್ಮ ಭಾವನೆಗಳಿಗೆ, ಚಿಂತನೆಗಳಿಗೆ, ಆಸೆಗಳಿಗೆ ಹಾಗೂ ನಿಮ್ಮ ಬಯಕೆಗಳಿಗೆ ಶಕ್ತಿ ತುಂಬುವ ಸಾಮರ್ಥ್ಯ ಅದಕ್ಕೆ ಇದೆ. ಆದ್ದರಿಂದ ನಿಮ್ಮ ಚಿಂತನೆಗಳು ಹಾಗೂ ಸಾಧನೆಗಳ ಗುರಿ ಅತ್ಯುನ್ನತ ಮಟ್ಟದಲ್ಲಿರಲಿ. 
        ಅರೆಪ್ರಜ್ಞಾಮನಸ್ಸು ನಿಮ್ಮನ್ನು ಸದಾಕಾಲ ಆರಾಮಾವಾಗಿಡಲು ಅದು ಬಯಸುತ್ತದೆ. ಅದು ನಿಮ್ಮ ಹಾಗೂ ನಿಮ್ಮ ದೇಹದ ಸುಖದ ಪರ. ಉದಾಹರಣೆಗೆ ಅಲಾರಂ ಬೆಳಿಗ್ಗೆ ಹೊಡೆದುಕೊಂಡಾಗ 'ಇನ್ನೈದು ನಿಮಿಷ ಮಲಗೋಣ' ಎಂದು ಅದು ಉತ್ತೇಜನ ನೀಡುತ್ತದೆ. ಯಾವುದಾದರೂ ಚಟದಿಂದ ನಿಮಗೆ ಸುಖ ಸಿಗುತ್ತಿದ್ದರೆ ಅದು ಅದರ ಕಡೆ ವಾಲುತ್ತದೆ. ಅದು ಚಟವಾಗಿ ಬೆಳೆಯಲು ನೀವು ಪದೇ ಪದೇ ಆ ಸುಖವನ್ನು ಅನುಭವಿಸಿ ಅರೆಪ್ರಜ್ಞಾಮನಸ್ಸಿಗೆ ಆ ಅನುಭವವನ್ನು 'ಸುಖ' ಎಂದು ರವಾನೆ ಮಾಡಿರುತ್ತೀರಿ. 
        ಅರೆಪ್ರಜ್ಞಾಮನಸ್ಸು ಸರಿತಪ್ಪುಗಳ ಆಲೋಚನೆ ಮಾಡುವುದಿಲ್ಲ. 
ಪ್ರಜ್ಞಾಮನಸ್ಸು ರವಾನಿಸಿದ ಸಂದೇಶವನ್ನು ಅದು ನಂಬುತ್ತದೆ. ನೀವು ಜೀವನವನ್ನು ಬದಲಿಸಬೇಕೆಂದು ಬಯಸಿದರೆ ನಿಮ್ಮ ಪ್ರಜ್ಞಾಮನಸ್ಸನ್ನು ಮೊದಲು ಬದಲಿಸಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳಬೇಕಾಗುತ್ತದೆ. ಮನಸ್ಸನ್ನು ಬದಲಾಯಿಸುವ ಮೊದಲು ಮನಸ್ಸು ಹಾಗೂ ಮನಸ್ಸಿನ ಕಾರ್ಯಾಚರಣೆಯ ಬಗ್ಗೆ ಅರ್ಥ ಮಾಡಿಕೊಳ್ಳುವುದು ಅವಶ್ಯ. 
        ನಿಮ್ಮ ಜೀವನದಲ್ಲಿ ಬದಲಾವಣೆ ತರಲು ಹೊರಟಾಗ ನೀವು ಹೊಸ ಆಲೋಚನೆಗಳಿಗೆ, ಹೊಸ ವಿಚಾರಗಳಿಗೆ, ಹೊಸ ಪ್ರಯೋಗಗಳಿಗೆ ಒಳ ಪಡ 
ಬೇಕಾಗುತ್ತದೆ. ಇದು ಸ್ವಾಭಾವಿಕವಾಗಿ ಈಗಾಗಲೇ ತನ್ನದೇ ಆದ ಕೋಟೆಯನ್ನು ಕಟ್ಟಿಕೊಂಡಿರುವ ಅರೆಪ್ರಜ್ಞಾಮನಸ್ಸಿಗೆ ಕಿರಿಕಿರಿ ನೀಡುತ್ತದೆ. 'ಈಗೇನಾಗಿದೆ? ಚೆನ್ನಾಗೇ ಇದೀನಿ.. ಇದೇ ಆರಾಮಾಗಿದೆ. ಈ ಹೊಸ ದಾರಿಯೆಲ್ಲ ಬೇಕಾ? ಎಷ್ಟು ಕಷ್ಟಾನೋ ಏನೋ.. ' ಎಂದು ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡುವ ಯೋಚನೆಗೆ ಬಲವಾಗಿ ಹಾಗೂ ಸಕಾರಾತ್ಮಕವಾಗಿ ಅದು ಸ್ಪಂದಿಸುತ್ತದೆ. ನಿಮ್ಮ 
ನಂಬಿಕೆಗೆ ವಿರುದ್ಧವಾಗಿ ಏನಾದರೂ ಕೆಲಸ ಮಾಡಲು ಹೋದಾಗಲೂ ಇದೇ ರೀತಿಯ ಮಾನಸಿಕ ಪ್ರತಿರೋಧವನ್ನು ಕಾಣಬಹುದಾಗಿದೆ. 
        ನೀವು ಬೆಳೆಯಬೇಕಾದರೆ ಅಥವಾ ಏನನ್ನಾದರೂ ಸಾಧಿಸಬೇಕಾದರೆ ನಿಮ್ಮ ಸುಖದ ಕೋಟೆಯ ಕಟ್ಟೆಯನ್ನು ದಾಟಿ ಹೊರಬರಬೇಕಾಗುತ್ತದೆ. ಮಾನಸಿಕ ಕಿರಿಕಿರಿ ಅನುಭವಿಸಲು ಸಿದ್ಧರಾಗಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸು ತೆರೆದ ಮನಸ್ಸಾಗಿರಬೇಕಾಗುತ್ತದೆ. ನಿಮ್ಮ ಸಾಧನೆ ಅಥವಾ ಗುರಿಯನ್ನು ತಲುಪಿದಾಗ ಅದು ನಿಮ್ಮ ಹೊಸ ಸುಖದ ಕೋಟೆಯಾಗಿ ರೂಪುಗೊಳ್ಳುತ್ತದೆ.

Thursday, 7 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 2


       ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಸಿಗ್ಮಂಡ್ ಫ್ರಾಯ್ಡ್

         ಸಿಗ್ಮಂಡ್ ಫ್ರಾಯ್ಡ್, ಮನಸ್ಸಿನ ವಿಭಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿದ ಮನೋವಿಜ್ಞಾನಿ. ಮನಸ್ಸಿನ ಸ್ಥಿತಿಯನ್ನು ಆತ ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಹೀನಮನಸ್ಸುಗಳೆಂದು ವಿಂಗಡಿಸಿದ್ದಾನೆ. 

ಏನಿದು ಮನಸ್ಸಿನ ವಿಂಗಡಣೆ? ಆದಷ್ಟು ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

1. ಪ್ರಜ್ಞಾಮನಸ್ಸು 

         ಇದು ಸಾಧಾರಣವಾಗಿ ನಾವು ಎಚ್ಚರದಿಂದಿರುವಾಗ ಜಾಗೃತವಾಗಿರುವ ಮನಸ್ಸು. ಇದು `ನಾನು' ಎಂಬ ಅರಿವನ್ನು ಮೂಡಿಸುತ್ತದೆ. `ನನ್ನ' ಸುತ್ತಲೂ  ನಡೆಯುವುದನ್ನು ಗಮನಿಸುತ್ತದೆ. ಮನಸ್ಸಿನಲ್ಲಿ ಆಲೋಚನಾ ತರಂಗಗಳನ್ನು 
ಹಬ್ಬಿಸುತ್ತದೆ. ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು ಈ ರೀತಿಯ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಪ್ರಜ್ಞಾಮನಸ್ಸು ನಮ್ಮಲ್ಲಿ ಅಂತರ್ಗತವಾಗಿರುವ ತಾತ್ವಿಕ ಹಾಗೂ ತಾರ್ಕಿಕ ಅರಿವುಗಳ ಹೊಣೆಗಾರನಾಗಿ ಕೆಲಸ ಮಾಡುತ್ತಿರುತ್ತದೆ. 
ಸರಳ ಉದಾಹರಣೆಗಳು  
'ನೀರು ಕೆಳಗೇ ಹರಿಯಬೇಕು'
'ಬೆಣ್ಣೆ ಕಾಯಿಸುವುದರಿಂದ ಅದು ತುಪ್ಪವಾಗುತ್ತದೆ'
ಹೀಗೆ ಅದು ತಾರ್ಕಿಕವಾಗಿ ವಿಶ್ಲೇಷಣೆ ಮಾಡುತ್ತದೆ. ತಾತ್ವಿಕವಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಹಾಗೂ ನಂಬಿಕೆಗಳನ್ನು ಕೂಡಾ ಅದು ಈ ವಿಶ್ಲೇಷಣೆಗೆ ಒಳಪಡಿಸುತ್ತದೆ. ಕಾಲಕ್ರಮೇಣ ಅದು ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತದೆ. ಪ್ರಜ್ಞಾಮನಸ್ಸು ಬಾಹ್ಯವಸ್ತುಗಳನ್ನು ಒಪ್ಪಬೇಕಾದರೆ, ಅದು ಪಂಚೇಂದ್ರಿಯಗಳ ಸಹಾಯವನ್ನು ಪಡೆದುಕೊಳ್ಳುತ್ತದೆ. ಅದು ಪಂಚೇಂದ್ರಿಯಗಳು ಅನುಮೋದನೆ ನೀಡಿದ ವಿವರಗಳನ್ನು ಮಾತ್ರ ಒಪ್ಪಿ ಅರೆಪ್ರಜ್ಞಾಮನಸ್ಸಿಗೆ ರವಾನಿಸುತ್ತದೆ. ಅದಲ್ಲದೇ ಪುನರಾವರ್ತನೆಯಾದ ವಿಷಯಗಳು ಹಾಗೂ 
ವಿವರಗಳು ಕೂಡಾ ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತವೆ. ತನ್ನ ನಂಬಿಕೆಗೆ ವಿರುದ್ಧವಾದ ವಿಷಯ ಅಥವಾ ಯೋಚನೆ ಅಥವಾ ಮಾಹಿತಿ ಬಂದಾಗ ಅದು
ಅರೆಪ್ರಜ್ಞಾಮನಸ್ಸಿನ ಕಾವಲುಗಾರನ ಕಾರ್ಯ ನಿರ್ವಹಿಸಿ ಅಂತಹ
ಯೋಚನೆಗಳನ್ನು ತಿರಸ್ಕರಿಸಿ ಅವು ಅರೆಪ್ರಜ್ಞಾಮನಸ್ಸಿಗೆ ತಲುಪುವುದನ್ನು ತಡೆಯುತ್ತದೆ. ನಾವು ಅಂತರ್ಗತವಾಗಿ ಬಯಸಿದ ಕೆಲಸಗಳನ್ನು ಮಾತ್ರ ಇದು ನಿರ್ವಹಿಸುತ್ತದೆ.
         ಪ್ರಜ್ಞಾಮನಸ್ಸು ತನ್ನನ್ನು ತಾನೇ ಗುರುತಿಸಿಕೊಂಡರೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಎಲ್ಲಾ ಮಾನಸಿಕ ತೀರ್ಮಾನಗಳು ಅಲ್ಲಿಯೇ  ಆಗುವುದಿಲ್ಲ! 
        ಪ್ರಜ್ಞಾಮನಸ್ಸು ನಿಮ್ಮ ಹೊರಗಿನ ಹಾಗೂ ಒಳಗಿನ ಪ್ರಪಂಚಕ್ಕೆ ತನ್ನನ್ನು ತಾನೇ ಕೊಂಡಿಯಾಗಿ ಹಂಚಿಕೊಂಡಿರುತ್ತದೆ ಹಾಗೂ ಸಂಪರ್ಕಸಾಧನವಾಗಿ ಕೆಲಸ ಮಾಡುತ್ತದೆ. ಪ್ರಜ್ಞಾಮನಸ್ಸು ಮಾಡಬಹುದಾದ ಎರಡು ಶಕ್ತಿಶಾಲಿ ಕೆಲಸಗಳಲ್ಲಿ ಮೊದಲನೆಯದು, ಯಾವುದೇ ವಿಷಯದ ಮೇಲೆ ಕೇಂದ್ರೀಕರಿಸುವ ಅದರ ಗುಣ. ಎರಡನೆಯದು ನಿಮ್ಮ ಯೋಚನೆಗಳನ್ನು ಅಥವಾ ಭಾವನೆಗಳನ್ನು ಕಣ್ಣೇದುರಿಗಿಲ್ಲದಿದ್ದರೂ ಕಲ್ಪಿಸಿ ಕಣ್ಣಿಗೆ ಕಾಣುವಂತೆ ಜೋಡಿಸುವ ಅದರ ಶಕ್ತಿ. 
ನಿಮ್ಮ ಜೀವನದ ಬದಲಾವಣೆಗೆ ಈ ಶಕ್ತಿಯೇ ಓಂಕಾರ. ಆದರೆ ನಮಗೆ ಬೇಕಾದ ಹಾಗೆ ನಮ್ಮ ನಂಬಿಕೆಯನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಬದಲಾಯಿಸಬೇಕಾದರೆ, ಪ್ರಜ್ಞಾಮನಸ್ಸನ್ನು ತಾರ್ಕಿಕವಾಗಿ ಒಪ್ಪಿಸಿ, ಆ ನಂಬಿಕೆ ಸರಿ ಎಂದು ನಂಬಿಸುವಂತಾದಲ್ಲಿ ಅದು ಅರೆಪ್ರಜ್ಞಾಮನಸ್ಸಿಗೆ ತಲುಪುತ್ತದೆ.

2. ಅರೆಪ್ರಜ್ಞಾಮನಸ್ಸು

         ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡಿದ, ಕಂಡು ಕೇಳಿದ, ಅನುಮೋದಿಸಿದ, ಅನುಭವಿಸಿದ ಎಲ್ಲಾ ವಿಚಾರಗಳು ಅರೆಪ್ರಜ್ಞಾಮನಸ್ಸಿನಲ್ಲಿ ಸಂಗ್ರಹವಾಗುತ್ತವೆ. ನೀವು ಬೇಕೆಂದಾಗ ನೆನಪಿಸಿಕೊಳ್ಳಬಹುದಾದ ವಿಷಯಗಳೆಲ್ಲಾ ಇಲ್ಲಿ ಜಮೆಯಾಗಿರುತ್ತವೆ. ಪ್ರಾಮುಖ್ಯತೆ ಇಲ್ಲದೇ ನಿಮಗೆ ಸಾಧಾರಣವಾಗಿ ನೆನಪಿಗೆ ಬಾರದ ವಿಷಯಗಳೆಲ್ಲಾ ಸುಪ್ತಮನಸ್ಸಿನ ಮೂಲೆಯಲ್ಲಿ ಶೇಖರವಾಗಿರುತ್ತವೆ. ಹಿಂದೆ ನಡೆದ ಮರೆತುಹೋದ ಘಟನೆ ಅಥವಾ ಮಾತುಗಳು ಅಥವಾ ವಿಚಾರಗಳನ್ನು  ಅರೆಪ್ರಜ್ಞಾಮನಸ್ಸಿನಿಂದ ಹೊರತರಲು ಸಾಧ್ಯ. ಅವುಗಳನ್ನು ನೆನಪಿಗೆ ಅಥವಾ 
ಸ್ಮೃತಿಪಟಲದಲ್ಲಿ ತರುವವು. 
         ಪ್ರಜ್ಞಾಮನಸ್ಸಿನಿಂದ ಬಂದ ವಿಷಯಗಳು ಪುನರಾವರ್ತನೆಯಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಘನೀಕೃತವಾಗುತ್ತ ಹೋಗುತ್ತದೆ. ಒಮ್ಮೆ ಅರೆಪ್ರಜ್ಞಾಮನಸ್ಸಿನಲ್ಲಿ ಅದು ಘನೀಕೃತವಾದರೆ ನಂತರ ಪ್ರಜ್ಞಾಮನಸ್ಸಿನ ಅರಿವು ಬೇರೆಡೆ ಇದ್ದರೂ ಅರೆಪ್ರಜ್ಞಾಮನಸ್ಸು ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಉದಾಹರಣೆಗೆ ಬೆರಳಚ್ಚು ಕಲಿಯುವ ವ್ಯಕ್ತಿ, ಮೊದಮೊದಲು ಪ್ರಜ್ಞಾಪೂರ್ವಕವಾಗಿ ಒಂದೊಂದು ಅಕ್ಷರ ಅಂಕಿಗಳನ್ನು ನೋಡಿ ಬೆರಳನ್ನು ಒತ್ತುತ್ತಿರುತ್ತಾನೆ. ಅಭ್ಯಾಸವಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ
ಘನೀಕೃತವಾಗುತ್ತದೆ. ನಂತರ ಎಲ್ಲೇ ನೋಡುತ್ತಿದ್ದರೂ, ಆತ ಸರಾಗವಾಗಿ
ಬೆರಳುಗಳನ್ನು ಕರಾರುವಾಕ್ಕಾದ ಸ್ಥಳಗಳಲ್ಲಿ ಒತ್ತುತ್ತಿರುತ್ತಾನೆ. 
         ಅರೆಪ್ರಜ್ಞಾಮನಸ್ಸು ನೀವು ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ಮಾಡಿ ತೋರಿಸುತ್ತದೆ. ನೀವು ಅದಕ್ಕೆ ಪದೇ ಪದೇ ಆದೇಶ ನೀಡಿದರೆ,
ಅದು ತಕ್ಕದಾದ ದಾರಿಯನ್ನು ಹುಡುಕುತ್ತದೆ ಹಾಗೂ ನಿಮ್ಮ ಅಪೇಕ್ಷೆಯನ್ನು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ನಿಜ ಯಾವುದು? ಸುಳ್ಳು ಯಾವುದು?
ಗೊತ್ತಾಗುವುದಿಲ್ಲ. ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ಭಾವಿಸುತ್ತದೋ ಅದನ್ನು ಅದು ನಿಜವೆಂದು ನಂಬುತ್ತದೆ.

Wednesday, 6 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 1

        ಮನಸ್ಸು ಇರುವುದರಿಂದ ನಾವು ಮನುಷ್ಯರಾಗಿದ್ದೇವೆ. ನಮ್ಮ ಮನಸ್ಸು ಹಾಗೂ ನಮ್ಮ ಮನಸ್ಸಿನ ಶಕ್ತಿಯಿಂದ ನಾವು ಬೇರೆ ಎಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದೇವೆ. ಚಿಂಪಾಂಜಿಯ ಮೆದುಳಿಗೂ ಮನುಷ್ಯನ ಮೆದುಳಿಗೂ ಸಾಕಷ್ಟು ಹೋಲಿಕೆ ಇದ್ದರೂ ಮನುಷ್ಯನ ಮನಸ್ಸಿನ ಶಕ್ತಿ ಆತನನ್ನು ಬೇರೆಲ್ಲಾ ಪ್ರಾಣಿಗಳಿಗಿಂತ ಉನ್ನತ ಮಟ್ಟದಲ್ಲಿರಿಸಿದೆ. ಮನುಷ್ಯನ ಮನಸ್ಸಿನ ಗ್ರಹಿಕೆಯ ಬಲದಿಂದ ಭಾಷಾ ಜ್ಞಾನ ಬೆಳವಣಿಗೆಯಾಯಿತು.
        ಮನುಷ್ಯನೊಬ್ಬನಿಗೆ ಮಾತ್ರ ತನ್ನ ಭಾವನೆಗಳನ್ನು ಹಲವಾರು ಶಬ್ದಗಳ
(ಭಾಷೆಯ) ಮೂಲಕ ಕರಾರುವಾಕ್ಕಾಗಿ ವ್ಯಕ್ತ ಪಡಿಸಲು ಸಾಧ್ಯವಾಗಿದೆ. ಮನುಷ್ಯನಿಗೆ ಮಾತ್ರ ತನ್ನ ಅನುಭವಗಳ ಆಧಾರದ ಮೇಲೆ ನಾನಾ ಪ್ರಯೋಗಗಳನ್ನು ಮಾಡುವ ಶಕ್ತಿ ಇರುವುದು.ಮನುಷ್ಯನಿಗೆ ಮಾತ್ರ ತನ್ನ ಗ್ರಹಿಕೆಯಿಂದ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳುವ ಹಾಗೂ ತಾಂತ್ರಿಕತೆಯನ್ನು ಬೆಳೆಸಿಕೊಳ್ಳುವ ಶಕ್ತಿ ಇರುವುದು. ಮನುಷ್ಯನಿಗೆ ತನ್ನ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. ಆತ ಯೋಚಿಸಬಲ್ಲ, ಕಾರಣಗಳನ್ನು ಹುಡುಕಬಲ್ಲ, ಉಪಾಯಗಳನ್ನು ಹೂಡಬಲ್ಲ, ಮುಂದೆ ತನ್ನ ಬದುಕು ಹೇಗೆ ಎಂದು ರೂಪಿಸಿಕೊಳ್ಳಬಲ್ಲ. ಸಂಕಷ್ಟದ ಸಮಯದಲ್ಲಿ ನಿಖರವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲ. ಇದಕ್ಕೆಲ್ಲವೂ ಕಾರಣಕಾರಕವಾಗಿರುವುದು ಮನಸ್ಸು.
        ಮೆದುಳು ಹಾಗೂ ಮನಸ್ಸು ಒಂದನ್ನು ಬಿಟ್ಟು ಇನ್ನೊಂದು ಇರಲಾರವು. ಮೆದುಳಿಗೆ ಒಂದು ಆಕಾರವಿದೆ, ಒಂದು ರೂಪವಿದೆ, ಅದು ಒಂದು ವಸ್ತು. ಅದನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬಹುದು. ಮನಸ್ಸು ಕಣ್ಣಿಗೆ ಕಾಣದ, ಆಕಾರವಿಲ್ಲದ, ಕೈಗೆ ಸಿಗದ ಹಾಗೂ ವೈದ್ಯಕೀಯ ತಪಾಸಣೆಗೆ ಒಳಪಡದ ವಸ್ತು.
        ಮನಸ್ಸಿನ ಶಕ್ತಿಯ ಬಗ್ಗೆ ಅನಾದಿಕಾಲದಿಂದಲೂ ಮನುಷ್ಯನಿಗೆ ಅರಿವಿದೆ. 
ಎಲ್ಲ ಧಾರ್ಮಿಕಗ್ರಂಥಗಳಲ್ಲೂ ಮನಸ್ಸಿನ ಬಗ್ಗೆ ಉಲ್ಲೇಖಗಳನ್ನು ಕಾಣುತ್ತೇವೆ. ಮನಸ್ಸಿನ ಶಕ್ತಿಯೇನು? ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ಬಹು ಪ್ರಾಚೀನ
ಕಾಲದಿಂದಲೂ ಪ್ರಯೋಗಗಳಾಗಿವೆ. ಬಹುತೇಕ ಪ್ರಯೋಗಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಒಳಗೊಂಡಿವೆ. 
        ಬೌದ್ಧಧರ್ಮದ ಪ್ರಕಾರ ದೇಹ ಮನೆ ಇದ್ದಂತೆ. ಮನಸ್ಸು ಆ ಮನೆಯಲ್ಲಿ ನೆಲೆಸಿರುವ ಅತಿಥಿಯಂತೆ. ಕಾಲಧರ್ಮಕ್ಕೆ ಅನುಗುಣವಾಗಿ ಅದು ಸತ್ತ ಮನೆಯನ್ನು ಬಿಟ್ಟು ಹೋಗುತ್ತದೆ. ಹಿಂದೂಧರ್ಮದ ಉದಾಹರಣೆಯನ್ನು ಕೊಡುವುದಾದರೆ
ತೈತ್ತೆರೀಯ ಉಪನಿಷತ್ತಿನಲ್ಲಿ ಪಂಚಕೋಶಗಳ ಉದಾಹರಣೆಯನ್ನು ನೀಡಲಾಗಿದೆ. ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಇತ್ಯಾದಿ
ವಿಷಯಗಳ ವಿವರಣೆಗಳು ಇವೆ. ಮನಸ್ಸಿನ ಇಂದಿನ ವೈಜ್ಞಾನಿಕ ವಿವರಣೆಗೆ ಇದು ಬಹಳ ಹತ್ತಿರವಾಗಿದೆ. 
        ತೈತ್ತೆರೀಯ ಉಪನಿಷತ್ತಿನಲ್ಲಿ  ಆತ್ಮ (ಸೆಲ್ಫ್), ಪಂಚಕೋಶಗಳನ್ನು ಮೀರಿ ಇದೆ ಎಂದು ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಸ್ಥೂಲವಾಗಿ ಹೀಗೆ ವಿವರಿಸಬಹುದು. ಮೊದಲನೆಯದು ಅನ್ನಮಯಕೋಶ. ಅದು ಆಹಾರಕ್ಕೆ ಹಾಗೂ ಶರೀರಕ್ಕೆ ಸಂಬಂಧ ಪಟ್ಟದ್ದು. ಎರಡನೆಯದು ಪ್ರಾಣಮಯಕೋಶ ಅಂದರೆ ವಾಯು (ಅನ್ನಮಯಕೋಶಕ್ಕೆ ಜೀವ ನೀಡುವುದು). ಮೂರನೆಯದು ಮನೋನ್ಮಯಕೋಶ. (`ನಾನು' ಎಂಬ ಅರಿವು ಮೂಡಿಸುವ ಪ್ರಜ್ಞಾಮನಸ್ಸು). ಇದು ಮನಸ್ಸು ಹಾಗೂ ಕಲಿತ ವಿದ್ಯೆಯ ಒಂದು ಭಾಗ. ಇದು ಬಹಳ ಶಕ್ತಿಶಾಲಿಯಾಗಿರುವುದರಿಂದ ನಿಮ್ಮ ಬಂಧನಕ್ಕೆ ಅಥವಾ ಮುಕ್ತಿಗೆ ಇದೇ ಕಾರಣವಾಗುವುದು. ನಾಲ್ಕನೆಯದು ವಿಜ್ಞಾನಮಯಕೋಶ. ಇಲ್ಲಿ ಜ್ಞಾನದ ಬೆಳಕಿದೆ. ಇದು ನಿಮ್ಮ ಎಚ್ಚರ ಹಾಗೂ ನಿದ್ರಾಸ್ಥಿತಿಯ ಮೇಲೆ ಹಿಡಿತ ಹೊಂದಿದೆ. ಸುಖ ಹಾಗೂ ದುಃಖಗಳನ್ನು ಅನುಭವಿಸುತ್ತದೆ. ಇದು ಆತ್ಮಕ್ಕೆ ಬಹಳ ಹತ್ತಿರವಾಗಿರುವ ಕೋಶ. ಐದನೆಯದು ಆನಂದಮಯಕೋಶ. ಇಲ್ಲಿ ಸಚ್ಚಿದಾನಂದಭಾವವು ಇದೆ. ಆದರೆ ಅದು ತಮಸ್ಸು ಹಾಗೂ ಅಜ್ಞಾನದಿಂದ ಕೂಡಿರುವ ಮನಸ್ಸಿನ ಭಾವನೆಗಳಿಂದ ಕಲುಷಿತಗೊಳ್ಳುತ್ತದೆ. ಕನಸುಗಳಿಲ್ಲದ ನಿದ್ರೆಯಲ್ಲಿ ಅದು ಸ್ಥಿರವಾಗಿರುತ್ತದೆ.

Saturday, 2 November 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 20

        ಮಾನಸ ಲೋಕದಲ್ಲಿ ವಿಹರಿಸಲು ಹಾಗೂ ಮನಸ್ಸಿನ ಶಕ್ತಿಯನ್ನು
ತಿಳಿದುಕೊಳ್ಳಲು ಇರುವ ಒಂದು ಆದ್ಭುತವಾದ ವಿದ್ಯೆ, ತಂತ್ರ ವಿದ್ಯೆ. ಜನಸಾಮಾನ್ಯರಿಗೆ ತಂತ್ರದ ಬಗ್ಗೆ ಹಲವಾರು ತಪ್ಪು ಭಾವನೆಗಳಿವೆ. ಅದು ಕೇವಲ ತಪ್ಪು ಭಾವನೆಯೇ ಆಗಿದೆ. ಅಣುಶಕ್ತಿಯನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ಅಣುಶಕ್ತಿಯ ಮೇಲೆ ಆಪಾದನೆಯನ್ನು ಹೊರಿಸಲು ಬರುವುದಿಲ್ಲ. ಹಾಗಾಗಿ ಕೆಲವರು ಮನಸ್ಸಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ನೀವು ಮನಸ್ಸಿನ ಶಕ್ತಿಯನ್ನು ದೂರುವಂತಿಲ್ಲ. 
       'ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ' ಎಂದು ಹಿಂದಿನ ಬರಹದಲ್ಲಿ ಹೇಳಿದ್ದೆ.
ಯಾಕೆ ಎಲ್ಲರಿಗೂ ಅಲ್ಲ ಅಂದರೆ ಮೊದಲನೆಯದಾಗಿ ಇದು ಕೆಲವು ಕಠಿಣ ಅನುಷ್ಠಾನ ಕ್ರಮಗಳನ್ನು ಒಳಗೊಂಡಿರುತ್ತದೆ. ಮನಸ್ಸನ್ನು ಹೊಸ ಸ್ತರಕ್ಕೆ ಇದು ನಿಮ್ಮನ್ನು
ಕೊಂಡೊಯ್ಯುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಹಲವರಿಗೆ ಕಷ್ಟದ ವಿಷಯ. ಒಬ್ಬ ನುರಿತ ಗುರು ಬಳಿಯಲ್ಲಿದ್ದರೆ ಆತ ಹಂತ,ಹಂತವಾಗಿ ಹಾಗೂ ಸಹಜವಾಗಿ ಮುಂದುವರೆಯಲು ಸಹಾಯ ಮಾಡುತ್ತಾನೆ. 
        ಎರಡನೆಯದಾಗಿ ಮನಸ್ಸಿನ ಶಕ್ತಿ ತೆರೆದುಕೊಳ್ಳುತ್ತಿದ್ದಂತೇ, ಹಲವಾರು ಪ್ರಯೋಗಗಳನ್ನು ಮಾಡಿ ನೋಡಲು ಮನಸ್ಸು ಹಾತೊರೆಯುತ್ತದೆ. ಅದರಿಂದಾಗಿ ಮನಸ್ಸಿನಲ್ಲಿ 'ಅಹಂ' ಭಾವ ಮೂಡುವ ಅವಕಾಶ ಹೆಚ್ಚು. ಕೆಲವು ಪ್ರಯೋಗಗಳು ಮತ್ತೆ ಹಿಂತೆಗೆದುಕೊಳ್ಳಲಾಗದವಾಗಿರುತ್ತವೆ. ಆದ್ದರಿಂದ ಸಾಧಕನು ಬಹಳ ಎಚ್ಚರಿಕೆಯಿಂದ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಕೆಲವು ಸತ್ಯಗಳನ್ನು ತಿಳಿದುಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ. ಪ್ರಕೃತಿಯ ಹಾಗೂ ಜೀವಿಗಳ ಗುಟ್ಟು ಗುಟ್ಟಾಗಿದ್ದರೇನೇ ಚಂದ. 
        ಮನಸ್ಸಿನ ಭಾವಲೋಕದಲ್ಲಿ ವಿಹರಿಸಲು ತಂತ್ರವಿದ್ಯೆ ಅತ್ಯಂತ
ಸಹಾಯಕಾರಿ. ಅಂತೆಯೇ  ಮನಸ್ಸಿನ ಶಕ್ತಿಯನ್ನು ಜನರ ಏಳಿಗೆಗಾಗಿ ಉಪಯೋಗಿಸಿಕೊಳ್ಳುವುದಾದರೆ ತಂತ್ರವಿದ್ಯೆ ನಿಸ್ಸಂದೇಹವಾಗಿಯೂ ಅತ್ಯಂತ ಉನ್ನತ ಸ್ಥಾನದಲ್ಲಿರುವ ವಿದ್ಯೆ. 
        ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದುದರಿಂದ ಎಲ್ಲವನ್ನೂ ಮನೋವಿಜ್ಞಾನದ ದೃಷ್ಟಿಯಲ್ಲಿಯೇ ನೋಡಲು ಇಚ್ಚಿಸುತ್ತೇನೆ. ಹಾಗೆ ನೋಡಿದರೆ ತಾಂತ್ರಿಕ ವಿದ್ಯೆ ಅತ್ಯಂತ ಸುಂದರವಾಗಿ, ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಹೇಳಲ್ಪಟ್ಟ ಮನೋವಿಜ್ಞಾನವೇ. ಜೊತೆಗೆ ಶಿಸ್ತುಬದ್ಧ ಜೀವನವನ್ನೂ ಅದು ಕಲಿಸಿಕೊಡುತ್ತದೆ. 
        ತಂತ್ರದ ಬಗ್ಗೆ ನನ್ನ ವಿಶ್ಲೇಷಣೆಯನ್ನು ಚುಟುಕಾಗಿ ಹೇಳುತ್ತೇನೆ. 
ಜೀವನದಲ್ಲಿ ಯಾವುದೇ ಕೆಲಸದಲ್ಲಿ ನೀವು ಏಳಿಗೆಯನ್ನು ಪಡೆಯಬೇಕಾದರೆ, ನಿಮ್ಮಲ್ಲಿ ನಿಮಗಿರುವ ನಂಬಿಕೆ ಅತಿಮುಖ್ಯವಾಗಿರುತ್ತದೆ. ಅದು ನಿಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ಸಾಧಿಸುವ ಛಲವನ್ನು ಕೊಡುತ್ತದೆ. ಅಧ್ಯಾತ್ಮದ ವಿಚಾರ ಬಂದಾಗಲೂ ನಂಬಿಕೆಗೆ ಪ್ರಥಮ ಆದ್ಯತೆ.
        ತಂತ್ರಶಾಸ್ತ್ರವನ್ನು ಬೋಧಿಸುವಾಗ 'ಇದು ಶಿವನು ಪಾರ್ವತಿಗೆ ಹೇಳಿದ ವಿದ್ಯೆ. ದೇವಾನುದೇವತೆಗಳಿಗೆ ಇದು ದುರ್ಲಭ' ಎಂದೆಲ್ಲಾ ಹೇಳುವುದರ ಉದ್ದೇಶ, ನಿಮಗೆ ಆ ವಿದ್ಯೆಯಲ್ಲಿ ನಂಬಿಕೆ ತರಿಸುವುದೇ ಆಗಿದೆ. ಬೆಳಗಿನ ಜಾವದಲ್ಲಿ, ಕೆಲವೊಮ್ಮೆ ಸರಿರಾತ್ರಿಯಲ್ಲಿ ಇದರ ಅನುಷ್ಠಾನವನ್ನು ಮಾಡಬೇಕಾಗುತ್ತದೆ. ಎರಡೂ ಪ್ರಶಾಂತವಾಗಿರುವ ವೇಳೆಗಳಾಗಿವೆ. ಪ್ರತಿದಿನ ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುವುದರಿಂದ ನಿಮ್ಮ ಮನಸ್ಸು ನಿಮಗೇ ಅರಿವಿಲ್ಲದಂತೆ ಆ ವೇಳೆಯಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿರುವುದು
'ಭಾವ' ಹಾಗೂ ಆಯಾ ದೇವರ ಭಾವದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು. 
ಆ ಭಾವದಲ್ಲಿ ಮುಳುಗುತ್ತಿದ್ದಂತೇ, ನಿಮ್ಮ ಮನಸ್ಸು ಮಾನಸಲೋಕದಲ್ಲಿ ವಿಹರಿಸಲು ತೊಡಗಿಕೊಳ್ಳುತ್ತದೆ. ನಿಮ್ಮ ಭಾವ ಹಾಗೂ ನಿಮ್ಮ ನಂಬಿಕೆ, ಅರೆಪ್ರಜ್ಞಾಮನಸ್ಸಿಗೂ ಸರ್ವಶಕ್ತ ಪ್ರಜ್ಞಾಮನಸ್ಸಿಗೂ ಒಂದು ಏಣಿಯನ್ನು ಕಟ್ಟಿಕೊಡುತ್ತದೆ. 
        ನಾನು ಮನೋವಿಜ್ಞಾನವನ್ನು ಸಾಕಷ್ಟು ತಿಳಿದುಕೊಂಡಿದ್ದುದರಿಂದ ಆರಂಭಿಕ ದಿನಗಳಲ್ಲಿ ನನ್ನಲ್ಲಿ ಹಲವಾರು ದ್ವಂದ್ವಗಳಿದ್ದವು. ತಾರ್ಕಿಕವಾಗಿ ತಿಳಿಯಲು ಪ್ರಯತ್ನ ಪಡುತ್ತಿದ್ದೆ. ಕೊನೆಗೊಮ್ಮೆ ಈಜು ಕಲಿಯಲು ಧುಮುಕುವುದು ಮುಖ್ಯ ಎಂದು ಮನಗಂಡಂತೇ ನನ್ನ ತರ್ಕ, ದ್ವಂದ್ವಗಳನ್ನೆಲ್ಲಾ ಮೂಟೆಕಟ್ಟಿ ಈ ವಿದ್ಯೆಯ ಸಾಗರಕ್ಕೆ ಧುಮುಕಿ ಬಿಟ್ಟೆ.
       ಏನನ್ನಾದರೂ ನಂಬುವ ಮುನ್ನ ಪ್ರಶ್ನೆ ಮಾಡಿ, ಪರೀಕ್ಷಿಸಿ.. ಏನು ಬೇಕಾದರೂ ಮಾಡಿ. ಎಲ್ಲವನ್ನು ಮನನಗೊಂಡು, ಮಥನಗೊಂಡು ನಂಬಿದಮೇಲೆ ಅದನ್ನು ಸಾಧಿಸುವವರೆಗೂ ಬಿಡಬೇಡಿ. 
ನಂಬಿ ಕೆಟ್ಟವರಿಲ್ಲ... 

Friday, 25 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 19

        ನಾನು ಬಂಟವಾಳದಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಉಪಾಸನೆಯಿಂದ ಇನ್ನೊಂದು ಉಪಾಸನೆಯ ನಡುವೆ ನನಗೆ ಸಾಕಷ್ಟು ಬಿಡುವು ಸಿಗುತ್ತಿತ್ತು. ಅನುಷ್ಠಾನ ಮಾಡುತ್ತಿರುವಾಗಲೂ ಸಂಜೆಯ ವೇಳೆ ನನಗೆ ಬಿಡುವು ಸಿಗುತ್ತಿತ್ತು. 'ಈ ಉಪಾಸನೆಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಹುದೇ? ಹೋಟೆಲ್ ತಿಂಡಿ ಕಾಫಿ ಕುಡಿಯಬಹುದೇ?'  ಗುರುಗಳ ಬಳಿ ಕೇಳಿದ್ದೆ. 'ದೇವರಿಗೆ ಅರ್ಪಿಸುವ ನೈವೇದ್ಯವನ್ನುಮಾತ್ರ ನೀನೇ ಮಾಡು. ಏಕೆಂದರೆ ಹೊರಗಿನ ತಿಂಡಿಯ ಶುದ್ಧತೆಯ ಬಗ್ಗೆ ನನಗೆ ಅನುಮಾನಗಳಿವೆ. ಅದು ನಿನ್ನನ್ನು ಮುಂದೆ ಪ್ರಶ್ನೆಯಾಗಿ ಕಾಡಬಾರದು. ನೀನು ಏನು ಬೇಕಾದರೂ ತಿನ್ನಬಹುದು, ತಂತ್ರಶಾಸ್ತ್ರದಲ್ಲಿ ತಿನ್ನುವುದಕ್ಕೆ ಕಡಿವಾಣವಿಲ್ಲ. ಆರೋಗ್ಯಕ್ಕೆ ಒಳ್ಳೆಯದನ್ನು ನೋಡಿ ತಿನ್ನು. ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ರಾಜಸಿಕ ಸ್ವಭಾವ ಬೆಳೆಸುತ್ತದೆ ಎಂದೆಲ್ಲಾ ಹೇಳುತ್ತಾರೆ. ಮನಸ್ಸನ್ನು ಗಟ್ಟಿ ಮಾಡಿದರೆ ಇವೆಲ್ಲಾ ಏನೂ ಲೆಕ್ಕಕ್ಕಿಲ್ಲ' ಎಂದು ಉತ್ತರಿಸಿ ನನಗೆ ಮಹದುಪಕಾರವನ್ನು ಮಾಡಿದರು. ಏಕೆಂದರೆ ನಾನು ರುಚಿರುಚಿಯಾಗಿ ತಿಂಡಿ ತಿನ್ನುತ್ತಿದ್ದ ಮನುಷ್ಯ. ನಾನು ನನಗಾಗಿ ಕೇವಲ ಅನ್ನ ಸಾರು ಮಾಡಿಕೊಂಡರೂ ತುಪ್ಪ ಹಾಗೂ ಅಪ್ಪೆಮಿಡಿ ಉಪ್ಪಿನಕಾಯಿ ಜೊತೆಯಲ್ಲಿರುತ್ತಿತ್ತು. ಅಲ್ಲದೇ 'ವಿಷ್ಣು ವಿಲಾಸ' ಹೋಟೆಲಿನ ಬಿಸ್ಕುಟ್ ರೊಟ್ಟಿ, ಬಿಸ್ಕುಟ್ ಆಂಬೊಡೆ, ಮಿಕ್ಸ್ಚರ್ ರೊಟ್ಟಿ, ತುಪ್ಪದ ದೋಸೆ ಮುಂತಾದವು ನನ್ನ ಮೆಚ್ಚಿನ ತಿನಿಸುಗಳಾಗಿದ್ದವು. ಅದಲ್ಲದೇ ಸಂಜೆಯ ವೇಳೆಯಲ್ಲಿ 'ಪೋಡಿ ದಾಮ್ಮ'ನ ಅಂಗಡಿಯ ಬಜೆ (ಬಜ್ಜಿ), ಅಂಬಡೆಗಳು, 'ಅರ್ಲಾ ಸುಬ್ಬ'ನ ಅಂಗಡಿಯ ಸಿಹಿತಿನಿಸುಗಳು, 'ಮುಕುಂದ'ನ ಅಂಗಡಿಯ ಚುರುಮುರಿ... ಇವೆಲ್ಲವೂ ತಿನ್ನುತ್ತಿದ್ದೆ. ಒಂದೇ ದಿನ ಅಲ್ಲ, ಬೇರೆ ಬೇರೆ ದಿನ ! 
        ಸಂಜೆಯಾದಮೇಲೆ ಯಶವಂತ ವ್ಯಾಯಾಮ ಶಾಲೆಯಲ್ಲಿ ಪ್ರತಿ ದಿನ ಎನ್ನುವಂತೇ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ್ ಬಾಳಿಗಾ ಸಿಗುತ್ತಿದ್ದರು. ಭಾಮೀ ಸುಧಾಕರ್, ಸುಬ್ರಾಯ ಬಾಳಿಗಾ, ಗುರು ಮುಂತಾದವರಲ್ಲದೇ ಹಲವು ಗೆಳೆಯರು ಅಲ್ಲಿ ಸಿಗುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ರೀತಿ ನನಗೆ ನೆರವಾದವರೇ. ಭವಾನಿ ಅಕ್ಕನ ಮನೆಗೆ ಹೋದರೆ ಏನಾದರೂ ತಿನ್ನಿಸದೇ ಬಿಡುತ್ತಿರಲಿಲ್ಲ. ದೇವಸ್ಥಾನದ ಎದುರಿಗಿರುವ ಶ್ರೀ ಕೃಷ್ಣ ಮಠಕ್ಕೆ ಹೋದರೆ ಜನ್ನ ಭಟ್ಟರ ಶ್ರೀಮತಿಯವರೂ ಪ್ರೀತಿಯಿಂದ ಏನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ದೊಡ್ಡಪ್ಪ ರಾಮ್ ನಾಯಕ್ ಹಾಗೂ ದೊಡ್ಡಮ್ಮ ಪ್ರೇಮಾ ನಾಯಕ್ ಅವರು ತುಂಬಾ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದರು. ಇವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶವೆಂದು ಭಾವಿಸಿ, ಈ ಮೂಲಕ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ. 
        ನಾನು ಏನು ಮಾಡುತ್ತಿದ್ದೇನೆಂದು ಯಾರ ಬಳಿಯೂ ವಿವರವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳಿಗಾಗಿ ಮಾತ್ರ ಬರುತ್ತಿದ್ದ ನನ್ನ ಗುರುಗಳಂತೂ ಯಾರನ್ನೂ ಭೇಟಿಯಾಗಲು ಸಿದ್ಧರಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು, ಬಂದದ್ದು ಹೋಗಿದ್ದು ಎರಡೂ ಗೊತ್ತಾಗದಂತೆ ಇರುತ್ತಿದ್ದರು. 
        ನಾನು ಮೊದಲಿನಿಂದಲೂ ಸಾಮಾನ್ಯ ಮನುಷ್ಯನ ಹಾಗೆ ನನಗೆ ಬೇಕಾದ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಿದ್ದೆ. ನಾನು ಯಾರಿಗೂ ಯಾವ ಗುಟ್ಟು ಬಿಟ್ಟುಕೊಡದಿದ್ದರೂ, ನಮ್ಮ ಓಣಿಯಲ್ಲಿಯೇ ಇದ್ದ ಹರಿಭಟ್ಟರು ಒಮ್ಮೆ ಬೆಳಗಿನ ಜಾವ ನದಿಯ ಬಳಿ ಹೋಗುತ್ತಿದ್ದಾಗ ಗಮನಿಸಿದರು. ಆನಂತರ ಹಲವಾರು ಬಾರಿ ನನ್ನನ್ನು ಗಮನಿಸಿ ನಾನು ಏನು ಮಾಡುತ್ತಿದ್ದೇನೆಂದು ಅವರಾಗಿಯೇ ತಿಳಿದುಕೊಂಡರು. ಅವರ ಬಳಿ ಮಾತ್ರ ನಾನು ಮುಕ್ತವಾಗಿ ನನ್ನ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಕೂಡಾ ದೇವರ ಉಪಾಸನೆಯ ಬಗ್ಗೆ ಒಲವಿತ್ತು. ವೇದಗಳಲ್ಲಿ ಪರಿಣಿತರು. ನನ್ನ ಹಲವು ಸಮಸ್ಯೆಗಳಿಗೆ ವೇದಸೂಕ್ತಗಳಿಂದ ಉತ್ತರ ಕೊಡುತ್ತಿದ್ದರು. ಅವರಿಗೂ ನನ್ನದೊಂದು ಹೃತ್ಪೂರ್ವಕ ನಮನ. 'ಮಾಣೂರು ಅಚ್ಚು' ನನಗೆ ಅಚ್ಚುಮೆಚ್ಚಾಗಿದ್ದರು. ನಾನು ಏನು ಕೇಳಿದರೂ ಅದು ಎಷ್ಟೇ ಕಷ್ಟವಾದರೂ ಅವರು ಅದನ್ನು ಪೂರೈಸುತ್ತಿದ್ದರು. ಇಂದು ಆತ ನಮ್ಮೊಡನೆ ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. 
        ಕೆಲವೊಮ್ಮೆ ನನಗೆ ಕೆಲವು ಸಮಸ್ಯೆಗಳನ್ನು ನಿವಾರಿಸುವ ಕೆಲಸ ಬಂದೊದಗುತ್ತಿತ್ತು. ಉದಾಹರಣೆಗೆ 'ಒಂದು ಹುಡುಗಿಯ ಮೈಮೇಲೆ ದೆವ್ವವೊಂದು ಬಂದು ಕಾಡುತ್ತಿದೆ, ನೀವು ಸರಿ ಮಾಡಲು ಸಾಧ್ಯವೇ?' ಎಂದು ಕೇಳಿದಾಗ ನಾನು ಒಪ್ಪಿಕೊಂಡು ಹೋಗಿ (ಸಮ್ಮೋಹಿನೀ ವಿದ್ಯೆಯಿಂದ) ಆಕೆಯ ಮನಃಸ್ವಾಸ್ಥ್ಯವನ್ನು ಸರಿಪಡಿಸಿ ಬರುತ್ತಿದ್ದೆ. ಇಂತಹ ಹತ್ತು ಹಲವು ಕೆಲಸಗಳಿಂದ ಒಂದಷ್ಟು ಜನರಿಗೆ ಹತ್ತಿರವಾಗಿದ್ದೆ. 
        ನಾನು ಹೊರಡುವ ದಿನ ಹತ್ತಿರ ಬರುತ್ತಿದ್ದಂತೇ ಒಂದು ದಿನ ಮಾಣೂರು ಅಚ್ಚು ನನ್ನ ಬಳಿ ಬಂದು, ಒಂದು ಪಂಚೆ, ಒಂದು ಚೌಕ ನನಗೆ ಕೊಟ್ಟು 'ಇದು ನನ್ನ ಕಡೆಯಿಂದ'  ಎಂದು ಹೇಳಿ ಒಂದು ಶಾಲನ್ನು ಹೊದೆಸಿದ. 'ನೀನು ಇಲ್ಲಿಯೇ ಇರುವ ಹಾಗಿದ್ದರೆ ಒಂದು ಸಣ್ಣ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿ ಕೊಟ್ಟು, ಒಂದಷ್ಟು ಹಣವನ್ನು ನಿನ್ನ ಹೆಸರಲ್ಲಿ ಬ್ಯಾಂಕಲ್ಲಿ ಹಾಕಿಡಲು ನನ್ನ ಕೆಲವು ಗೆಳೆಯರು ಹಾಗೂ ಸಂಬಂಧಿಕರು ಸಿದ್ಧರಿದ್ದಾರೆ' ಎಂದು ಆತ ಹೇಳಿದಾಗ ನಂಗೆ ಅಚ್ಚರಿ ಹಾಗೂ ನಗು!
'ಅಂತೂ ನನಗೆ ಗುರುವಿನ ಪಟ್ಟ ಕಟ್ಟಿ ಇಲ್ಲಿಯೇ ಕೂರಿಸುವ ಇರಾದೆ ನಿಮಗೆ, ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ನಾನು ಮನೆಯಲ್ಲಿ ಎರಡು ವರ್ಷಗಳ ನಂತರ ಹಿಂತಿರುಗಿ ಬರುತ್ತೇನೆಂದು ಮಾತುಕೊಟ್ಟು ಬಂದಿದ್ದೇನೆ' ಎಂದು ಹೇಳಿದೆ. ಆತನ ಪ್ರೀತಿಯನ್ನು ನಾನೆಂದೂ ಮರೆಯಲಾರೆ. 
        ಬೆಂಗಳೂರಿಗೆ ಬಂದ ಮೇಲೆ ನಾನು ನನ್ನ ಹವ್ಯಾಸವಾಗಿದ್ದ
ಛಾಯಾಚಿತ್ರಗಾರಿಕೆಯನ್ನು ನನ್ನ ಕಸುಬಾಗಿ ಮಾಡಿಕೊಂಡೆ.
'ಗುರು'ವಾಗುವ ಬದಲು ಸಿನೆಮಾ ಪತ್ರಿಕೆಗಳ 'ಗ್ಲಾಮರ್' ಛಾಯಾಗ್ರಾಹಕನಾದೆ. 


ಬೆಂಗಳೂರಿಗೆ ಬಂದು ಒಂದೆರಡು ವರ್ಷಗಳ ನಂತರ ಬೀರುವಿನಲ್ಲಿ ಇಟ್ಟಿದ್ದ 'ಅಚ್ಚು' ನೀಡಿದ್ದ ಬಟ್ಟೆಗಳನ್ನು ಒಮ್ಮೆ ಕಂಡೆ. ಗಡ್ಡವನ್ನು ಹೇಗೂ ಬಿಟ್ಟಿದ್ದೆ. 'ಗುರುವಾಗಿದ್ದರೆ ಹೇಗಿರುತ್ತಿದ್ದೆ' ಎಂದು ಯೋಚಿಸಿ ಆ ಚೌಕವನ್ನು ತಲೆಗೆ ಸುತ್ತಿಕೊಂಡು ಆ ಶಾಲನ್ನು ಹೊದ್ದುಕೊಂಡು ಒಂದೆರಡು ಚಿತ್ರಗಳನ್ನು ತೆಗೆಸಿಕೊಂಡೆ. 



        ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ. ಅದರಲ್ಲಿರುವ ಸಾಧಕ ಬಾಧಕಗಳೇನು?  'ತಂತ್ರ'ವನ್ನು ಮನೋವಿಜ್ಞಾನದ ದೃಷ್ಠಿಯಲ್ಲಿ ನೋಡುವುದು ಹೇಗೆ ?       
....ಮುಂದಿನ ಸಂಚಿಕೆಯಲ್ಲಿ.