Friday, 27 December 2019

'ಯಾರಿಗೆ ಯಾರುಂಟು ?' ಜೀವನದ ಕಟುಸತ್ಯಗಳು - 9

'ಯಾರಿಗೆ ಯಾರುಂಟು, ರವಿನ ಸಂಸಾರ, ನೀರ ಮೇಲಣ ಗುಳ್ಳೆ, ನಿಜವಲ್ಲ ಹರಿಯೇ..'
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...'
ಮೊದಲ ಸಾಲು ದಾಸರ ಪದದಿಂದ ಆಯ್ದುಕೊಂಡರೆ, ಎರಡನೆಯ ಸಾಲು ನಾಣ್ಣುಡಿ ಹಾಗೂ ಚಲನ ಚಿತ್ರ ಗೀತೆಯೊಂದರ ಸಾಲು.
         ಹಾಗೇನಿಲ್ಲ, ನನಗೆ ಸಾಕಷ್ಟುಆಪ್ತರಿದ್ದಾರೆ, ಜೀವ ಕೊಡುವ ಹೆಂಡತಿ/ಗಂಡ ಇದ್ದಾರೆ, ಅಸಂಖ್ಯಾತ ಅಭಿಮಾನಿಗಳಿದ್ದಾರೆ... ಹೀಗೆ ಬಹುಜನರಿಗೆ ಅನ್ನಿಸಬಹುದು. ನಿಜ. ಇದ್ದಾರೆ, ಎಲ್ಲಿಯ ತನಕ ಹಾಗೂ ಯಾವ್ಯಾವ ಸಂದರ್ಭದಲ್ಲಿ ಇರುತ್ತಾರೆ ಅನ್ನುವುದು ಮುಖ್ಯ. ನಾನು ಜೀವನದಲ್ಲಿ ಅನುಭವಿಸಿಲ್ಲವಾದರೂ, ಬೇರೆ ಬೇರೆ ರೀತಿಯಲ್ಲಿ ಅನುಭವಿಸಿದ ಜನರನ್ನು ನೋಡಿದ್ದೇನೆ, ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ. 
         ಮೊದಲನೆಯದಾಗಿ ಮನುಷ್ಯನಿಗೆ ಈ ಭಾವನೆ ಬರುವುದು ತಾನು ಅಧಿಕಾರ ಅಥವಾ ಪದವಿಯನ್ನು ಕಳೆದುಕೊಂಡಾಗ. ನಿಮ್ಮಲ್ಲಿ ಅಧಿಕಾರವಿದ್ದು ಅಥವಾ ನೀವೊಂದು ಸಶಕ್ತ ಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಲಸ ಮಾಡಿಕೊಳ್ಳಲು ಜನರ ಪಡೆಯೇ ನಿಮ್ಮ ಸುತ್ತ ತುಂಬಿರುತ್ತದೆ. ಅದೇ ನೀವು ಅಧಿಕಾರವನ್ನು ಕಳೆದುಕೊಂಡ ಮರುಕ್ಷಣದಿಂದ ನಿಮ್ಮ ಸುತ್ತಲಿದ್ದ ಜನರು ನಿಧಾನವಾಗಿ ಕರಗುತ್ತಾರೆ. ಅಂತೆಯೇ ಚಲನಚಿತ್ರ ನಟ-ನಟಿಯರು, ಕ್ರಿಕೆಟ್ ತಾರೆಯರು, ಸಾಂಸ್ಕ್ರತಿಕ ವಲಯದ ಜನಪ್ರಿಯ ವ್ಯಕ್ತಿಗಳು ಮುಂತಾದವರು ಚಲಾವಣೆಯಲ್ಲಿ ಇರುವವರೆಗೂ ಅವರ ಹಿಂದೆ ಜನರ ಸಂತೆಯೇ ನೆರೆಯುತ್ತಿರುತ್ತದೆ. ಜನಪ್ರಿಯತೆ ಕಳೆದುಕೊಂಡ ಮೇಲೆ ಕ್ರಮೇಣ ಜನರು ದೂರಾಗುತ್ತಾರೆ. 
         'ಅದರಲ್ಲಿ ತಪ್ಪೇನಿದೆ? ಚಲಾವಣೆಯಲ್ಲಿ ಇರುವವರೆಗೂ ನಾಣ್ಯ' ಎಂದು ನಿಮಗೆ ಅನ್ನಿಸಬಹುದು. ಆದರೆ ಎತ್ತರಕ್ಕೇರಿ ಕುಸಿದ ವ್ಯಕ್ತಿಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅವರ ಭ್ರಮಾಲೋಕದಿಂದ ಹೊರಬರಲಾಗದೇ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗುತ್ತಾರೆ. 
         ಎರಡನೆಯದಾಗಿ ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ನಿಮ್ಮ ಸುತ್ತ ಮಂದಿ ಮಾಗಧರು ಇದ್ದೇ ಇರುತ್ತಾರೆ. ನೀವು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಂತೇ ನಿಮ್ಮ ಬಂಧು ಬಳಗದವರು ನಿಧಾನವಾಗಿ ಕರಗುತ್ತಾರೆ. ನಿಮ್ಮ ಕುಟುಂಬದವರೂ, ನಿಮ್ಮಿಂದ ಸಹಾಯ ಪಡೆದ ಗೆಳೆಯರೂ ನಿಮ್ಮಿಂದ ದೂರವಾಗುತ್ತಾರೆ. ಇಂತಹ ವ್ಯಕ್ತಿಗಳಿಗೆ 'ನನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ' ಎಂದು ನಂಬುವುದು ಕಷ್ಟವಾಗಿ, ಕೊನೆಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.  
         ಮೂರನೆಯದಾಗಿ ಹಾಗೂ ಅತಿಮುಖ್ಯವಾಗಿ ನೀವು ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದಾದರೂ ಕಾಯಿಲೆಗೆ ಒಳಗಾದಾಗ 'ನಿಮ್ಮವರು' ನಿಮ್ಮಿಂದ ದೂರಾಗುತ್ತಾರೆ. ಕೆಲಕಾಲ ಅವರು ನಿಮ್ಮೊಂದಿಗೆ ಇರಬಹುದು ಆದರೆ ನೀವು ಕಾಯಿಲೆಯಿಂದ ಗುಣಮುಖರಾಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದ್ದರೆ ನೀವಂದುಕೊಂಡ 'ನಿಮ್ಮವರೇ' ನಿಮ್ಮಿಂದ ನಿಧಾನವಾಗಿ ದೂರಾಗುತ್ತಾರೆ. 
         ನನ್ನ ಜೀವದ ಗೆಳೆಯ/ಗೆಳತಿ, ನನ್ನ ಪ್ರೀತಿಯ ಗಂಡ/ಹೆಂಡತಿ ನನ್ನಿಂದ ದೂರವಾಗುತ್ತಿದ್ದಾರೆ ಎನ್ನುವ ಸತ್ಯ ಅರಿವಾಗುತ್ತಿದ್ದಂತೇ ಆ ರೋಗಗ್ರಸ್ಥನಿಗೆ ಮಾನಸಿಕವಾಗಿ ದೊಡ್ಡ ಆಘಾತವೇ ಆಗುತ್ತದೆ.  
'ಯಾರಿಗೆ ಯಾರುಂಟು,ಇರವಿನ ಸಂಸಾರ, ನೀರ ಮೇಲಣ ಗುಳ್ಳೆ,ನಿಜವಲ್ಲ ಹರಿಯೇ' 
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...' 
ಈ ಮಾತುಗಳ ನಿಜ ಅರ್ಥದ ಸಾಕ್ಷಾತ್ಕಾರ ಮೇಲೆ ಹೇಳಿದ ಎಲ್ಲರಿಗೂ ಆಗುತ್ತದೆ. 

         ನಾವು ಕೆಲವು ಸತ್ಯಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು. ಈ ಜಗತ್ತಿನಲ್ಲಿ ಬಹುತೇಕ ಎಲ್ಲರೂ ಸ್ವಾರ್ಥಿಗಳೇ. ಅದನ್ನು ತಪ್ಪು ಎಂದು ಹೇಳಲೂ ಆಗುವುದಿಲ್ಲ, ಪ್ರತಿಯೊಬ್ಬರೂ ತಮ್ಮ ತಮ್ಮ  ಏಳಿಗೆಯನ್ನು ಬಯಸುವುದರಿಂದ ಆತ  ಸ್ವಾರ್ಥಿಯಾಗುತ್ತಾನೆ. ಆದ್ದರಿಂದ ಜನರೊಡನೆ ವ್ಯವಹರಿಸುವಾಗ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳ್ಳೆಯದು. 
         ಜನಪ್ರಿಯತೆ ಎನ್ನುವುದು ಶಾಶ್ವತವಲ್ಲ. 'ಎಲ್ಲೋ ಇದ್ದ ನನಗೆ ಇಷ್ಟೊಂದು ಜನಪ್ರಿಯತೆ ಸಿಕ್ಕಿತಲ್ಲ' ಎಂದು ವಿನಮ್ರವಾಗಿ ಒಪ್ಪಿಕೊಂಡವನಿಗೆ ಅದನ್ನು ಕಳೆದುಕೊಂಡಾಗ ಅಷ್ಟೊಂದು ನೋವಾಗುವುದಿಲ್ಲ. ನಾವು ಬಡವರಾಗಿರಲಿ, ಸಿರಿವಂತರಾಗಿರಲಿ ಒಂದಷ್ಟು ಉಳಿತಾಯವನ್ನು ನಮಗಾಗಿ... ಕೇವಲ ನಮಗಾಗಿ ಎಂದೇ ಮಾಡಿಕೊಳ್ಳಬೇಕು. ಅದೇ ಆಪತ್ಕಾಲದಲ್ಲಿ ನೆರವಾಗುವ ನಿಮ್ಮ ಆಪದ್ಧನ. ಎಲ್ಲಾ ಖರ್ಚುಗಳಂತೇ ಉಳಿತಾಯವನ್ನೂ ಒಂದು ಖರ್ಚೆಂದೇ ಭಾವಿಸಿ ಉಳಿತಾಯ ಮಾಡಿಕೊಳ್ಳಬೇಕು. ನಿಮ್ಮ ಗೆಳೆಯರು, ನೆಂಟರು ಅಷ್ಟೇಕೆ ನಿಮ್ಮ ಕುಟುಂಬದವರೇ ನಿಮಗೆ ಸಹಾಯ ಮಾಡದೇ ಇರಬಹುದು. ನಿಮ್ಮದೇ ಆದ ಹಣ ಸಾಯುವವರೆಗೂ ನಿಮ್ಮಲ್ಲಿರಲಿ. 
        ನಾನು ಹೇಳಿದ ಎಲ್ಲಾ ಉದಾಹರಣೆಗಳಿಗೆ ಅಪವಾದವೆಂಬಂತೆ ಕೆಲವು  ವ್ಯಕ್ತಿಗಳು ಇದ್ದೇ ಇರುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಬೆರಳೆಣಿಕೆಯಷ್ಟು. 

No comments:

Post a Comment