Wednesday, 23 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 18

        'ಕುಲಕುಂಡಲಿನೀ ಯೋಗ' ತಾಂತ್ರಿಕ ಸಾಧನೆಯ ಅಂತಿಮ ಗುರಿ. ಇದರ ಬಗ್ಗೆ ಸಣ್ಣ ವಿವರಣೆ ಕೊಡುತ್ತೇನೆ. ಮೂಲಾಧಾರದಲ್ಲಿರುವ ಶಕ್ತಿಯನ್ನು, ಷಟ್ ಚಕ್ರಗಳನ್ನು ಬೇಧಿಸಿ ಸಹಸ್ರಾರದಲ್ಲಿರುವ ಶಿವನಲ್ಲಿ ಒಂದಾಗಿಸುವ ಕ್ರಿಯೆಯೇ ಕುಲಕುಂಡಲಿನೀ ಯೋಗ. ಇದಕ್ಕೂ ಮುಂಚೆ ಯೋಗ ಶಾಲೆಯಲ್ಲಿ ನನಗೆ ಕುಂಡಲಿನೀ ಶಕ್ತಿಯ ಕುರಿತಾದ ಕೆಲವು ಪ್ರಯೋಗಗಳನ್ನು ಮಾಡಿಸಿದ್ದರು. ಹಠಯೋಗದ 'ತಾಡನ' ಕ್ರಿಯೆ ಕುಂಡಲಿನೀ ಶಕ್ತಿಯನ್ನು ಉದ್ದೀಪನಗೊಳಿಸುವ ಅಂತಹ ಒಂದು ಕ್ರಿಯೆ.ಈ ಶಕ್ತಿಯ ಬಗ್ಗೆ ವಿವರಗಳನ್ನು ಒತ್ತಟ್ಟಿಗಿಟ್ಟು ಹೇಳಬಹುದಾದ ನನ್ನ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತೇನೆ. 
        ಸಾಧಾರಣವಾಗಿ ತಂತ್ರವಿದ್ಯೆಯ ಸಾಧನೆಯನ್ನು ಮೂರು ಭಾವಗಳಲ್ಲಿ ಕಲಿಸಲಾಗುತ್ತದೆ. ಅವುಗಳಲ್ಲಿ ಪಶುಭಾವ ಘೋರವಾಗಿರುವಂತೆ ಭಾಸವಾಗುತ್ತದೆ. ವೀರಭಾವ ಕಠೋರವಾಗಿದ್ದು, ದಿವ್ಯಭಾವ ಮನಸ್ಸಿನ ಉತ್ಕಟಸ್ಥಿತಿಗೆ ಸಾಕ್ಷಿಯಾಗುತ್ತದೆ. 
           ತಂತ್ರದ ಪಂಚಮಕಾರಗಳನ್ನೊಳಗೊಂಡ  ಸಾಧನೆಯಲ್ಲಿ `ಮೈಥುನ'ದ ಪ್ರಶ್ನೆ ಬಂದಾಗ ನಾನು ಗುರುಗಳ ಬಳಿ ಆ ಬಗ್ಗೆ ನನ್ನ ವಿರೋಧ ವ್ಯಕ್ತ ಪಡಿಸಿದ್ದೆ. `ಮೈಥುನ'ವೆಂದರೆ ಹೆಣ್ಣೊಬ್ಬಳೊಂದಿಗೆ ಲೈಂಗಿಕ ಸಂಪರ್ಕ. ಅದು ಸುತರಾಂ ನನ್ನ ಮನಸ್ಸಿಗೆ ಒಪ್ಪಿಗೆಯಾಗಿರಲಿಲ್ಲ. 
        'ಮಿಥುನ'ದ  ತಾತ್ಪರ್ಯವನ್ನು ಗುರುಗಳು ಆಗ ನನಗೆ ವಿವರಿಸಿ ಹೇಳಿದರು. ಪಶುಭಾವದ 'ಮಿಥುನ' ಸಾಧಾರಣ ಜನರು ಅನುಭವಿಸುವ ಸುಖ. ಅಲ್ಲಿ ನಾನು ಸುಖ ಪಡಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ತನ್ನ ಸಂಗಾತಿಯ ಬೇಕು ಬೇಡಗಳ ಬಗ್ಗೆ ಆತ ಯೋಚಿಸುವುದೇ ಇಲ್ಲ. ವೀರಭಾವದ ಮಿಥುನದಲ್ಲಿ ತಾನು ಸುಖ ಪಡುವುದಕ್ಕಿಂತ ತನ್ನ ಸಂಗಾತಿ ಸುಖದ ಚರಮಾವಸ್ಥೆ ಪಡೆಯಲಿ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ತಾನೂ ಸುಖದಲ್ಲಿ ಭಾಗಿಯಾಗಿಯೇ ಇರುತ್ತಾನೆ. ದಿವ್ಯಭಾವದಲ್ಲಿ ದೈಹಿಕ ಸುಖಕ್ಕಾಗಿ ಸಂಗಾತಿಯನ್ನು ಸೇರುವ ಪ್ರಶ್ನೆಯೇ ಇರುವುದಿಲ್ಲ. (ಈ ಭಾವಗಳ ಕ್ರಿಯೆ ಗಂಡು, ಹೆಣ್ಣು ಇಬ್ಬರಿಗೂ ಸಮಾನವಾಗಿಯೇ ಅನ್ವಯವಾಗುತ್ತದೆ)
        ದಿವ್ಯಭಾವದಲ್ಲಿಯೂ ಕೂಡ ಪಂಚಮಕಾರದ ಭಾಗವಾದ 'ಮಿಥುನ'ದಲ್ಲಿ  ಹೆಣ್ಣನ್ನು ಸೇರುವ ಮೊದಲು ಆಕೆಯನ್ನು (ಆಕೆಯೂ ತಂತ್ರಸಾಧಕಿ ಆಗಿರುತ್ತಾಳೆ) ದೇವಿಯಂತೆ ಪೂಜಿಸಲಾಗುತ್ತದೆ. ದೇವಿಯನ್ನು ಸ್ಮರಿಸುತ್ತಾ ಸಾಧಕಿಯನ್ನು ಸಾಧಕ ಸೇರಬೇಕಾಗುತ್ತದೆ. ಇಲ್ಲಿ ಸಾಧಕ ದೈಹಿಕವಾಗಿ ಆಕೆಯನ್ನು ಸೇರಿದರೂ ಮನಸ್ಸನ್ನು ದೇವಿಯ ಪಾದಗಳಲ್ಲಿ ಸ್ಥಿರವಾಗಿರಿಸಬೇಕೇ ವಿನಃ ದೈಹಿಕ ಆನಂದದಲ್ಲಿ ಒಂದು ಕ್ಷಣವೂ ಮೈಮರೆಯುವಂತಿಲ್ಲ. ಕೇಳಲೇ ಘೋರವಾಗಿರುವ ಈ ಸಾಧನೆಯನ್ನು ನಾನು ನಿರಾಕರಿಸಿದೆ. ಮದುವೆಯಾಗುವ ಮುನ್ನ ಹೆಣ್ಣೊಬ್ಬಳೊಡನೆ ಲೈಂಗಿಕ ಸಂಪರ್ಕವಾಗುವುದು ನನಗಿಷ್ಟವಿರಲಿಲ್ಲ. 
          ನನ್ನ ನಿಲುವನ್ನು ಬದಲಿಸಲು ನನ್ನ ಗುರುಗಳು ಬಹಳ ಪ್ರಯತ್ನ ಪಟ್ಟರು. ಈ 'ದಿವ್ಯಮಿಥುನ' ನಿನಗೆ ಕುಲಕುಂಡಲಿನೀ ಯೋಗದ ಸಚ್ಚಿದಾನಂದ ಸ್ಥಿತಿಗೆ ತಲುಪಲು ಬಹು ಮುಖ್ಯ ಸಾಧನವಾಗುತ್ತದೆ ಎಂದು ಹೇಳಿದರಲ್ಲದೇ, ಕೊನೆಗೊಮ್ಮೆ 'ನೀನು ಪಂಚಮಕಾರದಲ್ಲಿ ಈ ಹಂತವನ್ನು ದಾಟುವುದು ಖಚಿತ' ಎಂದು ಭವಿಷ್ಯವನ್ನೂ ಕೂಡ ಹೇಳಿಬಿಟ್ಟರು! 
         ಮುಂದೊಂದು ದಿನ ಪ್ರತಿನಿತ್ಯದಂತೆ ನಾನು ಬೆಳಿಗ್ಗೆ ಮೂರುಗಂಟೆಗೆ ಎದ್ದು ಸ್ನಾನ ಮಾಡಲು ನದೀತೀರಕ್ಕೆ ಹೋದಾಗ ಅಂದು ನದಿಯಲ್ಲಿ ತುಂಬಾ ಸೆಳೆತವಿತ್ತು. ಹಾಗಾಗಿ ನಾನು ಸ್ವಲ್ಪ ಮುಂದಿರುವ ಲಿಂಗದೇವಸ್ಥಾನದ ತಟದ ಬಳಿ ಸ್ನಾನ ಮಾಡಲು ಹೋದೆ. ಏಕೆಂದರೆ ಅಲ್ಲಿ ದೊಡ್ಡ ಕಲ್ಲುಗಳು ನದಿಗೆ ಅಡ್ಡವಿರುವುದರಿಂದ, ಆ ಕಲ್ಲಿನ ಬಳಿ ನದಿಯ ನೀರು ಹೆಚ್ಚಿನ ಸೆಳೆತವಿಲ್ಲದೇ ಸ್ವಲ್ಪ ಮಟ್ಟಿಗೆ ಶಾಂತವಾಗಿರುತ್ತಿತ್ತು. 



        ಆ ದೊಡ್ಡ ಕಲ್ಲುಗಳ ಮುಂದೆ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಲ್ಲೂ ನೀರಿನ ಸೆಳೆತ ಆರಂಭವಾಯಿತು. ನಾನು ಅದರಲ್ಲಿ ಕೊಚ್ಚಿಕೊಂಡು ಹೋಗದಂತೆ ಎದುರಿಗಿದ್ದ ಎರಡು ಕಲ್ಲಿನ ತುದಿಗಳನ್ನು ನನ್ನ ಕೈಗಳಿಂದ ಹಿಡಿದುಕೊಂಡೆ. ಆದರೂ ಆ ಕಲ್ಲುಗಳ ಮಧ್ಯದಿಂದ ಬಂದ ನೀರಿನ ಹೊಡೆತಕ್ಕೆ ನನ್ನ ಇಡೀ ದೇಹ ಮೇಲೆದ್ದಿತು. ಆದರೂ ಕಲ್ಲುಗಳನ್ನು ಆಧಾರವಾಗಿ ಬಲವಾಗಿ ಕೈಗಳಿಂದ ಹಿಡಿದುಕೊಂಡಿದ್ದರಿಂದ ದೇಹ ನದಿಯಲ್ಲಿ ತೇಲುತ್ತಿತ್ತು. ನದಿಯ ನೀರಿನ ಹೊಡೆತಕ್ಕೆ ದೇಹ ಮೇಲೆ ಕೆಳಗೆ ಹೊಯ್ದಾಡುತ್ತಿತ್ತು. ಅದೇನು ಭಾವ ಮೂಡಿತ್ತೋ ಏನೋ, ಆ ಕ್ಷಣದಲ್ಲಿ ನದಿ ಒಂದು ಹುಡುಗಿಯಂತೆ, ನಾನು ಕೈಯಿಟ್ಟ ಕಲ್ಲುಗಳು ವಕ್ಷಸ್ಥಳದಂತೆ ಮೃದುವಾಗಿ ಭಾಸವಾಗಿ, ಪದೇ ಪದೇ ದೇಹದ ಹೊಯ್ದಾಟದ ಪರಿಣಾಮವಾಗಿ ಅಲ್ಲಿ ವೀರ್ಯಸ್ಖಲನವಾಗಿ ಹೋಯಿತು. 
        ಅದಾದ ಒಡನೆಯೇ  ನನ್ನಲ್ಲಿ ಅಪರಾಧೀ ಮನೋಭಾವ ಮೂಡಿತು. ಸ್ನಾನ ಮಾಡುವ ಮುನ್ನ ನದಿಯನ್ನು ದೇವರೆಂದು ಭಾವಿಸಿ ಸ್ತೋತ್ರ ಹೇಳಿ ಸ್ನಾನ ಮಾಡುತ್ತೇವೆ. ಇಂತಹ ದೈವಸಮಾನವಾದ ನದಿಯನ್ನು ಮಲಿನಗೊಳಿಸಿ ತಪ್ಪು ಮಾಡಿದೆ ಎಂಬ ಪಶ್ಚಾತಾಪ ಭಾವನೆ ಮೂಡಿತು.
        ಈ ಘಟನೆಯನ್ನು ಗುರುಗಳ ಬಳಿ ನೋವಿನಿಂದ ಹೇಳಿಕೊಂಡೆ. ಆಗ ಅವರು `ಆಯಿತು.. ಮಿಥುನವೂ ಆಯಿತು..ನೋಡು ನೀನು ದೈವೀಭಾವದಿಂದ ಹುಡುಗಿಯನ್ನು ಸೇರಲು ನಿರಾಕರಿಸಿದೆ. ಈಗ ನೋಡು ನದಿಯ ಬಗ್ಗೆ ನಿನಗೆ ಸಹಜವಾಗಿಯೇ ದೈವೀಭಾವನೆ ಇದೆ. ಅಲ್ಲಿಯೇ ಮಿಥುನವೂ ಆಗಿದೆ. ಇಂದಿನಿಂದ ನಿನಗೆ ದೈವ ಭಾವದ ಕುಲಕುಂಡಲಿನೀ ಯೋಗದ ಶಿಕ್ಷಣ' ಎಂದು ಹೇಳಿಬಿಟ್ಟರು
        'ದಿವ್ಯಭಾವ' ಎಂದು ಕರೆಯಲ್ಪಡುವ ದೈವ ಸಾಕ್ಷಾತ್ಕಾರದ ಹಾದಿ (ಜಡಶಿವನನ್ನು ಶಕ್ತಿಯು ಸೇರುವ ಕುಲಕುಂಡಲಿನೀ ಯೋಗ)ಯನ್ನು ನನಗೆ ನಂತರ ಭೋಧಿಸಲಾಯಿತು. ನಿರ್ವಿಕಲ್ಪ ಸಮಾಧಿ ಎನ್ನುವ ಅಂತಿಮಸ್ಥಿತಿಯನ್ನು ತಲುಪಲು ಗುರುಗಳು ನನ್ನನ್ನು ಅನುವುಗೊಳಿಸಿದರು. 
        ಕೆಲವು ದಿನಗಳು ಕಳೆದವು. ನನ್ನ ಸಾಧನೆ ಮುಂದುವರೆಯುತ್ತಲೇ ಇತ್ತು. ಈ ಸಾಧನೆ ಮುಂದುವರೆಯುತ್ತಿದ್ದಂತೇ ಒಂದು ಹಂತದಲ್ಲಿ ನಾನು ನನ್ನ ತಾಂತ್ರಿಕ ಸಾಧನೆಯನ್ನೇ ನಿಲ್ಲಿಸಿಬಿಟ್ಟೆ.
        ನಿರ್ವಿಕಲ್ಪ ಸಮಾಧಿಯ ಸಾಧನೆ ಮುಂದುವರಿಸುತ್ತಿದ್ದಾಗ ಆ ಪ್ರಚಂಡ ಪ್ರಕೃತೀ ಶಕ್ತಿಯಲ್ಲಿ ಲೀನವಾದರೆ ನಾನು ನನ್ನನ್ನೇ ಮರೆತುಬಿಡುವೆನೇನೋ ಎನ್ನುವಂತಹ ಭಾವನೆ ಅಂದು ನನಗೆ ಬಲವಾಗುತ್ತಾ ಹೋಯಿತು. ನಾನು ಸತ್ತರೂ ಸಾಯಬಹುದು ಎಂದೂ ಅನ್ನಿಸಿತ್ತು. ಅದಲ್ಲದೇ ನನ್ನ ತಂದೆ ತಾಯಿಗೆ 'ಎರಡು ವರ್ಷಗಳ ಬಳಿಕ ಖಂಡಿತ ಬರುತ್ತೇನೆ ಹಾಗೂ ನಿಮ್ಮೊಂದಿಗಿರುತ್ತೇನೆ' ಎಂದು ಮಾತು ಕೊಟ್ಟಿದ್ದೆ. ಗುರುಗಳನ್ನು ಭೇಟಿಯಾಗಲು ಮಂಗಳೂರಿಗೆ ಹೋದಾಗ, ನನ್ನ ಗುರುಗಳು ಬೇರೊಂದು ಕಾರ್ಯನಿಮಿತ್ತ ಉತ್ತರ ಭಾರತಕ್ಕೆ ತೆರಳಿದ್ದಾರೆಂದು ತಿಳಿಯಿತು. 
        ಆಗ ನನಗೆ ನನ್ನ ಗುರುಗಳು ಹೇಳಿದ ಮಾತುಗಳು ನೆನಪಾದವು. 'ನಾನಿಲ್ಲದಿರುವಾಗ ಯಾವುದಾದರೂ ಸಂಧಿಗ್ಧ ಪರಿಸ್ಥಿತಿ ಉಂಟಾದರೆ ನಿಮ್ಮ ಸಮಾಜದ ಗುರುಗಳಲ್ಲಿ ಸಂದೇಹ ಪರಿಹರಿಸಿಕೊಳ್ಳಬಹುದು' 
        ನಮ್ಮ ಸಮಾಜದ ಗುರುಗಳಾದ ಕಾಶೀಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ. ನಮ್ಮ ದೇಗುಲದ ಸನಿಹವಿದ್ದ ಶ್ರೀ ಹರಿಭಟ್ಟರಿಗೆ ಮಾತ್ರ ನಾನು ಮಾಡುತ್ತಿದ್ದ ಸಾಧನೆಗಳ ಬಗ್ಗೆ ತಿಳಿದಿತ್ತು. ಆದ್ದರಿಂದ ಅವರೊಂದಿಗೆ ಚಾತುರ್ಮಾಸದಲ್ಲಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ಹೊರಟೆ. ಹೊರಡುವ ಮುನ್ನ ನನ್ನೆಲ್ಲಾ ವಿವರಗಳನ್ನು ಪತ್ರಮುಖೇನ ಸ್ವಾಮೀಜಿಯವರಿಗೆ ಬರೆದು ತಿಳಿಸಿದ್ದೆ.       

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು

  ನನ್ನನ್ನು ಕಂಡೊಡನೆ ಪ್ರೀತಿಯಿಂದ ಬರ ಮಾಡಿಕೊಂಡ ಸ್ವಾಮೀಜಿಯವರು ನನ್ನೊಡನೆ ಸುಮಾರು ಮೂರು ಗಂಟೆಗಳ ಕಾಲ ಕಳೆದರು. ನನ್ನಿಂದ ಪ್ರತಿಯೊಂದು ವಿವರ ಪಡೆದುಕೊಂಡ ಸ್ವಾಮೀಜಿಯವರು ಪ್ರಶ್ನೆಯೊಂದನ್ನು ಕೇಳಿದರು. 
'ನಿಮಗೆ ಸಾಂಸಾರಿಕ ಜೀವನದ ಸುಖಗಳಲ್ಲಿ ಆಸಕ್ತಿಯಿದೆಯೇ ?'
'ಆಸಕ್ತಿಯೇನೋ ಬಹಳಷ್ಟಿದೆ. ಬೇಕೆಂದಾದಲ್ಲಿ ನಾನದನ್ನು ನಿಗ್ರಹಿಸಿಕೊಳ್ಳಬಲ್ಲೆ' ಎಂದು ನನಗನ್ನಿಸಿದ್ದನ್ನು ನಾನು ಹೇಳಿದೆ. 
'ನಿಗ್ರಹಿಸುವುದೇ ಬೇರೇ.. ಆಸಕ್ತಿಯೇ ಬೇರೆ, ನಮ್ಮ ಉದಾಹರಣೆಯನ್ನು ತೆಗೆದುಕೊಳ್ಳಿ. ನಮಗೆ ಆಸಕ್ತಿಯೇ ಇರಲಿಲ್ಲ. ಆಸಕ್ತಿಯಿದ್ದೂ ನಿಗ್ರಹಿಸಿಕೊಂಡರೆ ಕೆಲಕಾಲ ಅದು ಸಫಲವಾಗಬಹುದು. ಆದರೆ ಗುಪ್ತವಾಗಿರುವ ಆ ಆಸಕ್ತಿ ಒಮ್ಮೆ ಹೆಡೆಯೆತ್ತಿದರೆ ಅದು ಮನೋರೋಗಕ್ಕೆ ಎಡೆ ಮಾಡಿಕೊಡಬಹುದು. ಆದ್ದರಿಂದ ಸಾಂಸಾರಿಕ ಜೀವನವೇ ನಿಮಗೆ ಒಳಿತು. ಸಂಸಾರದಲ್ಲಿದ್ದೂ ಸಾಧನೆ ಮಾಡಬಾರದೆಂಬ ಯಾವ ನಿಯಮವೂ ಇಲ್ಲ. ಸಂಸಾರಿಗಳಿಗೆ ತಪ್ಪು ಮಾಡಿದರೆ ಕ್ಷಮೆಯಿದೆ. ಸಾಧಕರು, ಸನ್ಯಾಸಿಗಳು ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ಈಗ ನಿಲ್ಲಿಸಿದರೂ ಮುಂದೆ ಸಾಧನೆಯನ್ನು ಮುಂದುವರೆಸಬಹುದು. ಹಾಗೆ  ನೋಡಿದರೆ ಸನ್ಯಾಸಿಗಳಿಗಿಂತ ಹೆಚ್ಚು ಸಂಸಾರಿಗಳಿಗೇ ದೇವರ ಸಾಕ್ಷಾತ್ಕಾರವಾಗಿರುವುದು' ಎಂದು ಹೇಳಿ ಮುಗುಳ್ನಗುತ್ತಾ 'ಮುಂದಿನ ತೀರ್ಮಾನ ನಿಮ್ಮದು' ಎಂದು ಹೇಳಿ ಫಲ-ತಾಂಬೂಲ ಕೊಟ್ಟು 'ನಿಮಗೆ ಒಳ್ಳೆಯದಾಗಲಿ' ಎಂದು ಹರಸಿ ಕಳಿಸಿದರು.  
       ಎರಡು ವರ್ಷಗಳ ಕಾಲ ಅಂದಿನ ನನ್ನ ಜೀವನಶೈಲಿ, ನನ್ನ ಗೆಳೆಯರು, ನನಗೆ ನೆರವಾದವರು ಈ ಬಗ್ಗೆ ಮುಂದೆ ಬರೆಯುತ್ತೇನೆ. ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದಾಗ ಗೆಳೆಯ ಮಾಣೂರು ಅಚ್ಚು ಹೇಳಿದ ಮಾತೇನು?
 .... ಮುಂದಿನ ಸಂಚಿಕೆಯಲ್ಲಿ.  

Monday, 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 17

        ನಂತರ ನಿಗದಿತ ದಿನದಂದು ಗುರುಗಳು ಬಂದರು. ಈ ಬಾರಿ ನಿನ್ನೊಡನೆಯೇ ಇರುತ್ತೇನೆ.  'ವಾಮಮಾರ್ಗವನ್ನು ಇಣುಕಿ ನೋಡುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ಸುಮ್ಮನೆ ತಲೆ ಆಡಿಸಿದ್ದೆ. 'ಆದರೆ ಅದಕ್ಕಾಗಿ ನೀನು ನನ್ನೊಡನೆ ಕಾಶಿಗೆ ಬರಬೇಕಾಗುತ್ತದೆ' ಎಂದೂ ಹೇಳಿದರು. ಹಿಂದೆ ಮುಂದೆ ನೋಡದೇ ಒಪ್ಪಿದೆ. 
        ಈ ವಿಷಯದ ಬಗ್ಗೆ ಗೋಪ್ಯತೆ ಕಾಪಾಡುವಂತೆ ಗುರುಗಳು ಹೇಳಿದ್ದರಿಂದ, ಗೆಳೆಯರ ಬಳಿ ಕಾಶಿಗೆ ಹೋಗುವುದಾಗಿ ಹೇಳಲಿಲ್ಲ. ಬದಲಿಗೆ ಬೆಂಗಳೂರಿಗೆ ಕೆಲ ದಿನಗಳ ಮಟ್ಟಿಗೆ ಹೋಗುವುದಾಗಿ ತಿಳಿಸಿದ್ದೆ.
        ಈ ಸಾಧನೆಯ ಬಗ್ಗೆಯೂ ನಾನು ವಿವರವಾಗಿ ಬರೆಯಲು ಹೋಗುವುದಿಲ್ಲ, ಮಂತ್ರಗಳ ಬಗ್ಗೆಯೂ ಬರೆಯಲು ಹೋಗುವುದಿಲ್ಲ. 'ಏನದು?' ಎಂದು ಮಾತ್ರ ಸೂಕ್ಷ್ಮವಾಗಿ ಹೇಳಲು ಬಯಸುತ್ತೇನೆ.
        ವಾಮಮಾರ್ಗದಲ್ಲಿ ತಾಂತ್ರಿಕ ದೇವತೆಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ. ಶಾಕಿನಿ,ಢಾಕಿನಿ, ಭೈರವ, ಕರ್ಣ ಪಿಶಾಚಿ.. ಇತ್ಯಾದಿ. ಈ ಸಾಧನೆಗಳು ತುಸು ಘೋರವಾಗಿರುವಂತೆಯೇ ಭಾಸವಾಗುತ್ತದೆ.                                ಪಂಚಮಕಾರಗಳನ್ನು ಇವು ಒಳಗೊಂಡಿರುತ್ತವೆ. ಎಚ್ಚರ ತಪ್ಪಿದರೆ ಬೇರೆ ರೀತಿಯ ಅನಾಹುತ ಸಂಭವಿಸಬಹುದಾದಂತಹ ಹಾದಿ. 'ಪಂಚಮಕಾರಗಳಲ್ಲಿ ನಿನಗೆ ಪಶುಭಾವದ ಅಗತ್ಯವಿಲ್ಲ, ಈಗಾಗಲೇ ನೀನು ವೀರಭಾವವನ್ನು ಅನುಭವಿಸಿರುವುದರಿಂದ ವೀರಭಾವದ ಹಾದಿಯಲ್ಲಿ ಮುನ್ನಡೆಯಬಹುದು' ಎಂದು ಗುರುಗಳು ತಿಳಿಸಿದ್ದರು. ನನಗೆ 'ಮೈಥುನ' ಒಂದನ್ನು ಬಿಟ್ಟರೆ ಪಂಚಮಕಾರಗಳ ಬಗ್ಗೆ ಯಾವ ತಕರಾರೂ ಇರಲಿಲ್ಲ. ಅದರ ಬಗ್ಗೆ ನನಗೂ ಗುರುಗಳಿಗೂ ಸಾಕಷ್ಟು ಚರ್ಚೆಯಾಯಿತು. ಏನೇ ಆದರೂ ನಾನು 'ಒಲ್ಲೆ' ಎಂದೇ ಪಟ್ಟು ಹಿಡಿದು ಕೂತಿದ್ದೆ. ಗುರುಗಳ ಬಳಿ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದುದರಿಂದ ಹೀಗೆ ಮಾತನಾಡಲು ಧೈರ್ಯ ಮಾಡಿದ್ದೆ. ಅಲ್ಲದೇ ಅದು ನನ್ನ ಮನಸ್ಸಿಗೆ ವಿರುದ್ಧವಾಗಿತ್ತು.
        ಅಂತೂ ವಾಮಮಾರ್ಗದಲ್ಲಿ ನನ್ನ ಪಯಣವನ್ನು ಮುಂದುವರೆಸಿದ್ದಾಯಿತು. 'ಈ ಮಂತ್ರಗಳನ್ನು ಅನಾವಶ್ಯಕವಾಗಿ ಉಪಯೋಗಿಸಬೇಡ' ಎಂದು ಗುರುಗಳು ಹೇಳಿದ್ದರು. ಅವರು ಹೇಳುವ ಮೊದಲೇ 'ಅವಶ್ಯಕತೆ ಇದ್ದರೂ ನಾನು ಉಪಯೋಗಿಸುವುದಿಲ್ಲ' ಎಂದು ಮನಸ್ಸಿನಲ್ಲಿಯೇ ಸ್ಥಿರವಾಗಿ ಅಂದುಕೊಂಡಿದ್ದೆ' 
        ನನ್ನ ತಾಂತ್ರಿಕ ಸಾಧನೆಯ ಕೊನೆಯ ಭಾಗವಾದ 'ಕುಲಕುಂಡಲಿನೀ ಯೋಗ'ದ ಬಗ್ಗೆ ಮುಂದೆ ಬರೆಯುತ್ತೇನೆ.

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 16

       ನಾನು ಮಾಡಿದ ನಾಲ್ಕು ಮುಖ್ಯ ದೇವೋಪಾಸನೆಯಲ್ಲಿ ಕೊನೆಯ ಉಪಾಸನೆ ಶ್ರೀ ಕೃಷ್ಣನದು. ಕೃಷ್ಣನ ಭಾವ ಅತ್ಯಂತ ಸುಂದರ ಭಾವ. ಕೃಷ್ಣನ ರಸಿಕತೆ, ಚಾಣಾಕ್ಷತನ, ಕಳ್ಳಾಟಗಳು, ಆತನ ಮೋಹಕ ರೂಪ, ಕೊಳಲ ಗಾನ, ಗೋಪಿಕಾ ವಲ್ಲಭನೆಂಬ ಬಿರುದು... ಹೀಗೆ ಒಂದೇ ಎರಡೇ?   
         ಕೃಷ್ಣನನ್ನು ಒಬ್ಬ ದೇವರಾಗಿ ಅನುಭವಿಸುವುದಕ್ಕಿಂತ ಇಡಿಯಾಗಿ
ಅನುಭವಿಸಲು ಮನಸ್ಸಾಗಿತ್ತು. ಈ ಸಾಧನೆಗೆ ಕುಳಿತಾಗ ಅವನೇ ಇಡೀ ಪ್ರಕೃತಿ ಎಂದೆನಿಸಿ, ಪ್ರಕೃತಿಯೊಡನೆ ಒಂದಾದ ಭಾವವನ್ನು ಅನುಭವಿಸಿದೆ. ಆ ಭಾವವನ್ನು ಅನುಭವಿಸಿದಾಗ, 'ಇದು ನನ್ನ ದೇಹದ, ಮನಸ್ಸಿನ ಅಳತೆಗೆ ಮೀರಿದ್ದು' ಎಂದು ಅನ್ನಿಸಿ ಒಮ್ಮೆ ತತ್ತರಿಸಿ ಹೋಗಿದ್ದೂ ನಿಜ. ಪ್ರಕೃತಿಶಕ್ತಿಯನ್ನು ಇಡಿಯಾಗಿ
ಅನುಭವಿಸುವುದು ನನಗೆ ನಿಜಕ್ಕೂ ಸವಾಲಾಗಿತ್ತು. ದೇಹವಿಡೀ ಅದರ ಪಾಡಿಗೆ ನಡುಗುತ್ತಿತ್ತು. ಆ ಶಕ್ತಿಯನ್ನು ತುಂಬಾ ಹೊತ್ತು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಕೆಲಸವಾಗಿತ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡೆ.
         ನಂತರ ಕೃಷ್ಣನನ್ನು ಪೂರ್ತಿಯಾಗಿ ಅನುಭವಿಸುವ ಬದಲು ಆತನ ಯಾವುದಾದರೊಂದು ಗುಣದ ಭಾವದಲ್ಲಿರುವುದು ಒಳಿತು ಎಂದನ್ನಿಸಿತ್ತು. ಕೃಷ್ಣನ ಭಾವ ಎಂದೊಡನೆ ಹಲವಾರು ಭಾವಗಳ ಸಂಗಮವೇ ಆಗಿರುತ್ತದೆ. ನನಗೇ ಅರಿವಿಲ್ಲದಂತೆ ಕೃಷ್ಣನ ಮೋಹಕ ರೂಪ ಹಾಗೂ ರಸಿಕತೆಯ ಕಡೆ ಮನಸ್ಸು ವಾಲತೊಡಗಿತು. ಈ ಭಾವ ಅತ್ಯಂತ ಅಪ್ಯಾಯಮಾನವಾಗಿತ್ತು. ಬಹುಶಃ ಕಠಿಣವಾದ ಪ್ರಯೋಗಗಳನ್ನು ಮಾಡಿದ ದೇಹ ಹಾಗೂ ಮನಸ್ಸು ಒಂದಷ್ಟು ಪರಿಹಾರ ಬಯಸುತ್ತಿತ್ತೋ ಏನೋ! ಈ ಭಾವದಲ್ಲಿಯೇ ಕೃಷ್ಣನ ಉಪಾಸನೆ ಮಾಡುತ್ತಿದ್ದೆ. 
        ನನ್ನಲ್ಲಿ ಆದ ಬದಲಾವಣೆಗಳನ್ನು ಇಲ್ಲಿ ಹೇಳಬಯಸುತ್ತೇನೆ. ನನಗೆ ನಾನೇ ಅತ್ಯಂತ ಸುಂದರನಾಗಿ ಕಾಣುತ್ತಿದ್ದೆ. ಅಪ್ಪಿ ತಪ್ಪಿ ಕನ್ನಡಿಯ ಮುಂದೆ ಸಾಗುವಾಗ ನನ್ನನ್ನು ನಾನೇ ನೋಡಿ ಹೆಮ್ಮೆ ಪಡುತ್ತಿದ್ದೆ. ದೇವಸ್ಥಾನಕ್ಕೆ ಬರುವ ಕೆಲವು ಹೆಣ್ಣು ಮಕ್ಕಳು ನನ್ನೊಡನೆ ಹೆಚ್ಚುಹೆಚ್ಚಾಗಿ ಮಾತನಾಡಲು ಕುಳಿತುಕೊಳ್ಳುತ್ತಿದ್ದರು. ಕೆಲವರೊಡನೆ ಮಾತನಾಡುವುದು ನನಗೂ ಹಿತವೆನ್ನಿಸುತ್ತಿತ್ತು. ಒಮ್ಮೊಮ್ಮೆ ಕಿರುಗೆಜ್ಜೆ ಧರಿಸಿದ ಗೋಪಿಕಾ ಸ್ತ್ರೀಯರೊಂದಿಗೆ ನಾನೂ ಕುಳಿತಂತೆ ಭಾಸವಾಗುತ್ತಿತ್ತು. ಕಿಟಕಿಯ ಮರೆಯಿಂದ ಯಾರಾದರೂ ಗೋಪಿಕಾ ಸ್ತ್ರೀಯರು ಕಿರುಗೆಜ್ಜೆ ಧರಿಸಿದ್ದಾರೋ ಎಂದು ಗಮನಿಸುತ್ತಿದ್ದೆ! ಯಾರೊಡನೆಯೂ ದೈಹಿಕವಾಗಿ ಒಂದು ಸಣ್ಣ ಸಲಿಗೆಯನ್ನು ತೆಗೆದುಕೊಳ್ಳಲೂ ಮನಸ್ಸು ಇಚ್ಚಿಸಲಿಲ್ಲ. ಒಟ್ಟಾರೆ ಆಹ್ಲಾದಕರ ವಾತಾವರಣವಿತ್ತು. 
        ಹಿಂದಿರುಗಿ ಬಂದ ಗುರುಗಳ ಬಳಿ ನನ್ನ ಕಷ್ಟವನ್ನು ತೋಡಿಕೊಂಡೆ. 'ಈ ಬಾರಿ ನಿನ್ನ ಮುಂದಿನ ಸಾಧನೆ ಮುಗಿಯುವವರೆಗೆ ನಿನ್ನೊಡನೆಯೇ ಇರುತ್ತೇನೆ' ಎಂದು ಭರವಸೆ ಇತ್ತರು. 'ನೀನು ಅನುಭವಿಸಿದ್ದು ವಿರಾಟ್ ಭಾವ. ಕೃಷ್ಣನ ವಿರಾಟ್ ಸ್ವರೂಪದ ಭಾವ ಸಿಗುವುದೇ ಕಷ್ಟ. ನೀನು
ಧೈರ್ಯ ಮಾಡಿ ಮುಂದುವರೆಯಬೇಕಿತ್ತು, ಹಲವಾರು ಹಂತಗಳನ್ನು ಒಮ್ಮೆಯೇ ದಾಟಬಹುದಿತ್ತು ' ಎಂದೆಲ್ಲಾ ಹೇಳಿದ ಗುರುಗಳು 'ನಾನು ಇಲ್ಲಿಯೇ ಇದ್ದರೆ ಚೆನ್ನಿತ್ತು. ಇರಲಿ, ನಿನ್ನ ಯಾವ ಸಾಧನೆಯೂ ವ್ಯರ್ಥವಾಗುವುದಿಲ್ಲ' ಎಂದು ಮೈದಡವಿದರು. ನಂತರ ಕೆಲ ದಿನಗಳು ನನಗೆ ವಿರಾಮ ಸಿಕ್ಕಿತ್ತು.  
        

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 15

        ಗುರುಗಳು ಬಂದರು. ನನ್ನೆಲ್ಲಾ ಅನುಭವಗಳನ್ನು ಹಂಚಿಕೊಂಡೆ. 'ಶಿವನನ್ನಾಗಲೀ ಶಿವನ ಮುಖವನ್ನಾಗಲೀ ನೋಡಲಿಲ್ಲ'ಎಂದೆ. 
'ಅಡ್ಡಿಯಿಲ್ಲ, ಈ ಅನುಭವಗಳೇ ಮುಖ್ಯ. ಭಾವ, ಭಾವದಿಂದ ಅನುಭವ' ಎಂದು ಹೇಳಿ ಸಮಾಧಾನ ಮಾಡಿದರು. 
        ಅಂದು ಗುರುಗಳಿಗೆ ನನ್ನ ಅಡುಗೆ ರುಚಿ ತೋರಿಸಿದೆ. 'ಅಡ್ಡಿಯಿಲ್ಲಪ್ಪಾ, ಪಾಕ ಶಾಸ್ತ್ರದಲ್ಲೂ ಪ್ರವೀಣನೇ' ಮೊದಲ ಬಾರಿಗೆ ಸ್ವಲ್ಪ ತಮಾಷೆಯ ಧ್ವನಿಯಲ್ಲಿ ಮಾತನಾಡಿದ್ದರು ಅವರು. ನಂತರ ಸಂಜೆ ಮಾತನಾಡುತ್ತಾ ಕುಳಿತಿದ್ದೆವು. 'ತಂತ್ರ ಸಾಧನೆಯ ಪೂರ್ತಿ ವಿವರಗಳನ್ನು ಬರೆದಿಡಲೇ' ಕೇಳಿದೆ ನಾನು. 'ಏಕೆ?' ತಕ್ಷಣ ಬಂತು ಪ್ರಶ್ನೆ.
 'ಇದು ನಶಿಸಿಹೋಗದಂತೆ ಮುಂದಿನ ಸಂತತಿಗೂ ಉಳಿಸಲು...' 
'ನೀನ್ಯಾರು ಇದನ್ನು ಉಳಿಸಲು? ಇದನ್ನು ಯಾರೂ ಉಳಿಸಬೇಕೆಲ್ಲ, ಅಳಿಸಲೂ ಆಗುವುದಿಲ್ಲ' ಎಂದು ಹೇಳಿ, ನನ್ನ ಮುಖ ಸಪ್ಪೆಯಾಗಿದ್ದುದನ್ನು ಗಮನಿಸಿ ' ಇದು ಅನಾದಿಕಾಲದಿಂದ ಉಳಿದು ಬಂದಿದೆ. ಯಾರಿಗೆ ಬೇಕು ಎನ್ನುವ ತವಕವಿದೆಯೋ, ಅವರಿಗೆ ಹೇಗಾದರೂ ಸಿಗುತ್ತದೆ. ಬೇಕು ಅನ್ನುವವರು ಇರುವ ತನಕ ಅದು ಇರುತ್ತದೆ, ಯಾರಿಗೂ ಬೇಡವಾದಾಗ ಅದು ಇದ್ದೇನು ಪ್ರಯೋಜನ? ಆದರೆ ಅಂತಹ ಕಾಲ ಬಾರದು. ಈ ವಿದ್ಯೆಯ ತಾಕತ್ತು ಅಂತಹದ್ದು... ಚಿಂತಿಸಬೇಡ' ಎಂದು ಮೃದುವಾಗಿ ಹೇಳಿದರು. (ಆ ಕಾರಣಕ್ಕಾಗಿಯೇ ನಾನು ಈ ನನ್ನಬ್ಲಾಗ್ ನಲ್ಲಿ ವಿಧಿ ವಿಧಾನಗಳ ಬಗ್ಗೆ ವಿವರವಾಗಿ ಬರೆಯಲಿಲ್ಲ. ನನ್ನ ಅನುಭವಗಳ ಬಗ್ಗೆ ಹೇಳಲು ಅವಶ್ಯವಿರುವಷ್ಟೇ ಬರೆದಿದ್ದೇನೆ) 
        ಇದಾಗಿ ಕೆಲ ದಿನಗಳಲ್ಲಿ 'ಏನಪ್ಪಾ ವೈಷ್ಣವಾ? ರಾಮ,ಕೃಷ್ಣ, ಹನುಮಂತ ಇತ್ಯಾದಿ ದೇವರ ಆರಾಧನೆಯ ಮೇಲೆ ಒಲವಿದೆಯೇ?' ಎಂದು ತಮಾಷೆಯಾಗಿ ಕೇಳಿದರು.  ತಂತ್ರ ವಿದ್ಯೆ ಕೇವಲ ಶಿವ ಶಕ್ತಿಯರಿಗೆ ಸಂಬಂಧ ಪಟ್ಟಿದ್ದೆಂದು ಭಾವಿಸಿದ್ದೆ. 'ತಂತ್ರದಲ್ಲಿ ವಿಷ್ಣುವಿನ ಆರಾಧನೆಯೂ ಉಂಟೇ?' ಅಚ್ಚರಿಯಿಂದ ಕೇಳಿದೆ. 'ತಂತ್ರ ವಿದ್ಯೆ, ದೇವರನ್ನು ಆರಾಧಿಸುವ ಒಂದು ವಿಶೇಷ ತಂತ್ರವನ್ನು ಒಳಗೊಂಡಿರುವ ಸಾಧನಾಕ್ರಮ. ಯಾವ ದೇವರನ್ನಾದರೂ ಆರಾಧಿಸಲು ಇದರಲ್ಲಿ ತನ್ನದೇ ಆದ ಕ್ರಮಗಳಿವೆ. ನಿನಗೆ ಆಸಕ್ತಿ ಉಂಟೋ, ಇಲ್ಲವೋ? ಅದನ್ನು ಮೊದಲು ಹೇಳು' ಎಂದರು. 'ಖಂಡಿತ ಉಂಟು' ಎಂದು ಖಡಾ ಖಂಡಿತವಾಗಿ ಹೇಳಿದೆ.
         ಹನುಮಂತನ ಉಪಾಸನೆಯೊಂದಿಗೆ ನನ್ನ ಸಾಧನೆಯ ಎರಡನೆಯ ಘಟ್ಟ ಪ್ರಾರಂಭವಾಯಿತು. ಹನುಮಂತನ ಉಪಾಸನೆ ಹನ್ನೊಂದು ದಿನಗಳ ಉಪಾಸನೆ. ಇದರಲ್ಲಿ ಕೆಲವು ಕಟ್ಟಳೆಗಳಿವೆ. ಚಿಕ್ಕದೊಂದು ಗಂಧದ ತುಂಡಿನಲ್ಲಿ ನಾನೇ ನನ್ನ ಕೈಯ್ಯಾರೆ ನನಗೆ ತಿಳಿದಂತೆ ಆಂಜನೇಯನ ಮೂರ್ತಿಯನ್ನು ಕೆತ್ತಬೇಕಾಗಿತ್ತು. ಹನ್ನೊಂದು ದಿನಗಳು ಕೇವಲ ಕೆಂಪು ಬಟ್ಟೆಯನ್ನೇ ಉಟ್ಟುಕೊಳ್ಳಬೇಕಾಗಿತ್ತು. ನೆಲದ ಮೇಲೆ ಮಲುಗುವಾಗಲೂ ಕೆಂಪು ಬಟ್ಟೆಯನ್ನೇ ಹಾಸಬೇಕಾಗುತ್ತಿತ್ತು. ನಾನು ಮನೆಯಿಂದ ಹೊರಗೆ ಓಡಾಡುವುದು ನಿಷಿದ್ಧವಾಗಿತ್ತು. ಎಲ್ಲವನ್ನೂ ಗುರುಗಳೇ ಪೂರೈಸುತ್ತಿದ್ದರು. ವೀಳ್ಯದ ಎಲೆಯೊಂದಕ್ಕೆ ಕಾಡಿಗೆ(ಅಂಜನ)ಹಚ್ಚಿ ಅದನ್ನು ನೋಡುತ್ತಾ ಆಂಜನೇಯನ ಧ್ಯಾನ ಮಾಡಬೇಕು. 
        ಅಂದು ನನಗಾದ ಅನುಭವವನ್ನು ಹಂಚಿಕೊಳ್ಳುತ್ತೇನೆ. ಮೊದಲಿಗೆ ಆಂಜನೇಯನ ಉಪಾಸನೆ ಮಾಡುವ ಸಮಯದಲ್ಲಿ ಇಡೀ ದಿನ ಆಂಜನೇಯನ ಕುರಿತಾಗಿಯೇ ಯೋಚಿಸುತ್ತಿರಬೇಕು. ಆತನ ಬಾಲ್ಯ, ತುಂಟಾಟ, 
ಆತನಗರಿವಿಲ್ಲದಿದ್ದರೂ ಆತನಲ್ಲಿರುವ ಅತ್ಯದ್ಭುತ ಶಕ್ತಿ... ಹೀಗೆ ಆತನ ಬಗ್ಗೆಯೇ ಯೋಚಿಸುತ್ತಾ ಆಂಜನೇಯನ ಭಾವವನ್ನು ಮೈತುಂಬಿಕೊಳ್ಳಬೇಕು. ಈ ಸಾಧನೆ  ಮಾಡುತ್ತಿರುವಾಗ ನಮ್ಮಲ್ಲಿಯೂ ಪರಿವರ್ತನೆಗಳು ಕಾಣುತ್ತವೆ. ಒಂದಷ್ಟು ತುಂಟಾಟ, ಚೇಷ್ಟೆಯ ಸ್ವಭಾವ ಮುಂತಾದವು ತನ್ನಂತೆ ತಾನೇ ನಮ್ಮನ್ನು ಆವರಿಸಿಕೊಳ್ಳುತ್ತದೆ. 
        ಒಂಭತ್ತು ದಿನಗಳು ಕಳೆದವು. ಹತ್ತನೇ ದಿನ, ಎಲೆಯನ್ನು ನೋಡುತ್ತಾ ಕುಳಿತಾಗ ಕಪ್ಪು ಅಂಜನ ಕೆಂಪಾಗಿ ಮಾರ್ಪಟ್ಟು ಧಗಧಗಿಸುವ ಬೆಂಕಿಯಂತೇ ಕಾಣುತ್ತಿತ್ತು. 
        ಹನ್ನೊಂದನೆಯ ದಿನ, ಸಾಧನೆಯ ಅಂತಿಮ ದಿನ. ಹನುಮಂತನ ಸಾಕ್ಷಾತ್ಕಾರವಾಗುವ ದಿನ. ಹನುಮಂತ ಹೇಗಿರಬಹುದು ಎಂಬ ಚಿಂತನೆಯಲ್ಲಿಯೇ ಮನಸ್ಸು ಮುಳುಗಿತ್ತು. ಪರ್ವತ ಕೈಯಲ್ಲಿ ಹಿಡಿದ ವಾಯುಪುತ್ರ, ಎದೆ ಸೀಳಿ ರಾಮನನ್ನು ತೋರಿಸಿದ ರಾಮಭಕ್ತ, ಗದೆಯನ್ನು ಹಿಡಿದು ನಿಂತ ಗಟ್ಟಿಮುಟ್ಟಾದ ಅಂಗಸೌಷ್ಠವದ ಹನುಮ... ಹೀಗೆ ನನಗೆ ನೆನಪಿದ್ದ ಎಲ್ಲಾ ರೂಪಗಳನ್ನು ಮನಸ್ಸಿನಲ್ಲಿಯೇ ಮೂಡಿಸುತ್ತಿದ್ದೆ. ನಾನು ಮಂತ್ರವನ್ನು ಜಪಿಸುತ್ತಾ ಆ ಸಾಕ್ಷಾತ್ಕಾರದ ಕ್ಷಣಕ್ಕೆ ಕಾಯುತ್ತಿದ್ದೆ. ಜಪದ ಸಂಖ್ಯೆ ಮುಗಿಯುವ ಮುನ್ನವೇ ಮಹಡಿ ಮೆಟ್ಟಲ ಬಳಿಯಿಂದ ಯಾರೋ ಕರೆದಂತಾಯಿತು. ತಿರುಗಿ ನೋಡಿದೆ. 
        ಒಂದು ಕ್ಷಣ ಗುಂಡಿಗೆ ನಿಂತ ಅನುಭವ! ಮಹಡಿಯ ಮೆಟ್ಟಲ ಬಳಿ ಕುಳಿತಿದ್ದದ್ದು ಸಾಕ್ಷಾತ್ ಹನುಮಂತ! ನಾನಂದುಕೊಂಡ ಯಾವ ರೂಪದಲ್ಲೂ ಆತನಿರಲಿಲ್ಲ. ಮೈತುಂಬಾ ಮೃದುವಾದ ಬಿಳೀ ರೋಮವನ್ನು ಹೊಂದಿದ್ದ, ಇಳಿವಯಸ್ಸಿನ ಹನುಮ. ವಯಸ್ಸಾಗಿದ್ದರೂ ಆ ಕೆಂಪು ಮುಖದಲ್ಲಿ ಪ್ರಜ್ವಲಿಸುವ ಕಳೆ. ಇದನ್ನು ಬರೆಯುತ್ತಿರುವಾಗಲೇ ನನಗೆ ರೋಮಾಂಚನವಾಗುತ್ತಿದೆ. 'ಇದನ್ನೆಲ್ಲಾ ಅನುಭವಿಸಿದ್ದು ನಾನೇ ಅಲ್ಲವೇ?' ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೇನೆ. ನಿಜವಾಗಿ ಭಾವುಕನಾಗಿದ್ದೇನೆ. 

'ನಾ ಕಂಡ ಹನುಮಂತ' ಹೀಗಿದ್ದ ಎನ್ನಬಹುದು. (ಫೋಟೋಷಾಪ್ ನಲ್ಲಿ ನಾನು ಆದಷ್ಟು ಹತ್ತಿರವಾಗಿ ಮೂಡಿಸಲು ಪ್ರಯತ್ನಿಸಿದ್ದೇನೆ) 

Thursday, 17 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 14

        ಅಷ್ಟು ಹತ್ತಿರದಿಂದ ನಾಗರಹಾವನ್ನು ನಾನು ನೋಡಿದ್ದು ಅದೇ ಮೊದಲು. ಮಿರ ಮಿರ ಮಿರುಗುವ ನಾಗರ ಹಾವು! ಅಲ್ಲಾಡದೇ ಹೆಡೆ ಎತ್ತಿ ನಿಂತಿದೆ. ನಾನಂತೂ ಉಸಿರು ಬಿಗಿ ಹಿಡಿದು ನೋಡುತ್ತಿದ್ದೆ!!
        ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು ತಲೆಯಲ್ಲಿ ಸುಳಿದವು. 'ಹತ್ತು ಸಾವಿರ ಬಾರಿ ಜಪ ಮಾಡುವವರೆಗೂ ಕುಳಿತ ಜಾಗದಿಂದ ಕದಲ ಬಾರದೆಂದು ಗುರುಗಳು ಹೇಳಿದ್ದಾರೆ. ಕೇವಲ ಅರ್ಧ ಅಡಿ ದೂರದಲ್ಲಿ ಹಾವು ಹೆಡೆ ಎತ್ತಿ ಕುಳಿತಿದೆ. ಕಣ್ಣು ಎವೆಯಿಕ್ಕುವಷ್ಟರಲ್ಲಿ ಬಡಿದರೆ ಏನು ಮಾಡುವುದು? ಜಪ,ತಪ,ಸಾಧನೆ ಇವೆಲ್ಲಾ ಬೇಕಾ? ಎದ್ದು ಓಡಿ  ಹೋಗಲೇ? ಅಥವಾ ಏನಾದರಾಗಲಿ ಎಂದು ಜಪವನ್ನು ಮುಂದುವರೆಸಲೇ? ಏನು ಸಾಧನೆ ಮಾಡಬೇಕಾದರೂ ಪ್ರಾಣವಿದ್ದರೆ ತಾನೇ? ಈ ಸಾಧನೆಗಳೆಲ್ಲಾ ಬಹಳ ಕಷ್ಟಕರವಾಗಿದೆ. ಕೊನೆಗೂ ಏನಾದರೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸುಮ್ಮನೆ ಸಿಕ್ಕಿಹಾಕಿಕೊಳ್ಳುವ ಬದಲು ಮೆಲ್ಲಗೆ ಹಿಂದೆ ಸರಿಯಲೇ?' ಹಲವಾರು ದ್ವಂದ್ವಗಳು, ಸಂದೇಹಗಳು. ಏನು ಮಾಡುವುದೆಂಬ ತೀರ್ಮಾನಕ್ಕೆ ಬಾರದಾದೆ. ನಂತರ ಒಂದು ಕ್ಷಣ ಯೋಚಿಸಿದೆ. 'ನಾನು ಕಣ್ಣು ಬಿಟ್ಟು ನೋಡಿದ್ದುದರಿಂದ ಹಾವಿರುವುದು ಗೊತ್ತಾಯಿತು. ಇಲ್ಲದಿದ್ದರೆ ಹಾಗೇ ಜಪವನ್ನು ಮುಂದುವರೆಸುತ್ತಿದ್ದೆ. ಏನಾದರಾಗಲಿ, ಸತ್ತರೂ ಯಾವುದೋ ಸಾಧನೆ ಮಾಡಿ ಸತ್ತ ಎಂದಾಗುತ್ತದೆ. ಅಷ್ಟೇ ತಾನೇ' ಎಂದು ಮನದಲ್ಲಿ ಧೈರ್ಯ ತಂದುಕೊಂಡು ಜಪವನ್ನು ಮುಂದುವರೆಸಿದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಹರಿವಾಣದ ತಟ್ಟೆಯ ಸದ್ದಾಯಿತು. ಈ ಬಾರಿ ನಾನು ಕಣ್ಣು ಬಿಡಲಿಲ್ಲ. ಕೆಲ ಕಾಲ ಕಳೆದ ಮೇಲೆ ಹೊರಗೆ ರಸ್ತೆಯಲ್ಲಿ ಗದ್ದಲ. ಕೆಲವರು ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. 'ಅಯ್ಯೋ ಹಾವು...  ಇರು ಇರು ಹೊಡೆಯಬೇಡ .. ಆ ಕೋಲಿನಿಂದ ತಳ್ಳು.. ಸೈಕಲ್ ಮೇಲೆ ಸುತ್ತಿಕೊಂಡು ಹೋಗುತ್ತಿದೆ..ದೂರ ನಿಲ್ಲು... ಬಿಡು..ಬಿಡು .. ಆ ತೋಡಿನ ಹತ್ತಿರ ಹೋಗುತ್ತಿದೆ.. ' ಎಂದೆಲ್ಲಾ ಕೂಗಾಡುತ್ತಿದ್ದರು.             ಸ್ವಲ್ಪ ಹೊತ್ತಿನ ಮೇಲೆ ಎಲ್ಲಾ ಶಾಂತವಾಯಿತು, ಬಹುಶಃ ಆ ಹಾವು ಅಲ್ಲಿಂದ ಹೋಗಿರಬೇಕು. ಎಷ್ಟು ಏಕಾಗ್ರತೆ ಸಾಧಿಸಿದ್ದೇನೆ  ಕೊಂಡಿದ್ದೆಲ್ಲಾ ಹುಸಿಯಾಗಿತ್ತು. ಅಷ್ಟೂ ಹೊತ್ತು ಮನಸ್ಸು ಹಾವಿನ ಸುತ್ತಲೇ ಸುತ್ತುತ್ತಿತ್ತು 
ಜಪದ ಸಂಖ್ಯೆ ಮುಗಿದ ಮೇಲೆ ಮತ್ತೆ ಕಣ್ಣು ಬಿಟ್ಟೆ. ಆ ಹಾವು ಎಲ್ಲಿಂದ ಬಂದಿರಬಹುದು ಎಂದು ಸುತ್ತೆಲ್ಲಾ ನೋಡಿದೆ. ನಂತರ ಮೇಲೆ ನೋಡಿದೆ. ಮೇಲೆ ತೇಗದ ಮರದಲ್ಲಿ ಮಾಡಿದ ಛಾವಣಿ ಇತ್ತು. ಅದಕ್ಕೆ ಅಡ್ಡಡ್ಡವಾಗಿ ಮರದ ತೊಲೆಗಳೂ ಇದ್ದವು. ಬಹುಶಃ ಅದರ ಸಂದಿಯಿಂದ ಬಂದಿರಬಹುದು ಎಂದು ಊಹಿಸಿದೆ. 
        ಮಾರನೇ ದಿನ ನನ್ನ ರಘುರಾಮ ಅಜ್ಜನ ಅಂಗಡಿಗೆ ಹೋಗಿ ಹೀಗೆ ಕೊಠಡಿಯಲ್ಲಿ ಹಾವು ಬಂದಿತ್ತು ಎಂದು ದೊಡ್ಡದಾಗಿ ಹೇಳಿದೆ. ಅದಕ್ಕೆ ಅವರು 'ಅದೆಲ್ಲಾ ಇಲ್ಲಿ ಸಾಮಾನ್ಯ, ಒಂದು ನಿಮಿಷ' ಎಂದು ಹೇಳಿ ಅವರ ಅಂಗಡಿಯ ಮಾಡಿನ ಬಳಿ ಕಣ್ಣಾಡಿಸುತ್ತಾ 'ಅಲ್ಲಿ ನೋಡು, ಅಲ್ಲೊಂದು ಹಾವು ಹೋಗುತ್ತಾ ಇದೆ. ಅವು ಇಲಿಯನ್ನು ತಿನ್ನಲು ಬರುತ್ತವೆ, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಅದಕ್ಕೆ ವಿಷವಿಲ್ಲ, ಅದನ್ನು 'ದೀವೊಡು' (ಕೊಂಕಣಿ ಭಾಷೆಯಲ್ಲಿ) ಅಂತ ಕರೀತಾರೆ' ಎಂದು ಆರಾಮವಾಗಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಾ ಹೇಳಿದರು. 'ಆದರೆ ನನ್ನ ಕೊಠಡಿಗೆ ಬಂದದ್ದು ನಾಗರ ಹಾವು' ಎಂದು ಮತ್ತೆ ನೆನಪಿಸಿದೆ. 'ಹೌದಾ' ಎಂದು ನಗುತ್ತಾ ಇನ್ನೊಬ್ಬ ಗಿರಾಕಿಗೆ ಪೊಟ್ಟಣ ಕಟ್ಟಿ ಕೊಟ್ಟು 'ಒಟ್ಟು ಹದಿನೆಂಟು ರೂಪಾಯಿ ಆಯಿತು' ಅಂದರು ಅವನಿಗೆ! 'ನಾನು ಬರುತ್ತೇನೆ' ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ. 
        ನಾಗರ ಹಾವಿಗೂ ನಮ್ಮ ದೇವಸ್ಥಾನಕ್ಕೂ ಇರುವ ಸಂಬಂಧದ ಕುರಿತಾಗಿ ಕೆಲವು ವಿಷಯಗಳನ್ನು ಹೇಳ ಬಯಸುತ್ತೇನೆ. ನಮ್ಮ ದೇಗುಲಕ್ಕೆ ಸಂಬಂಧ ಪಟ್ಟ ಆಸ್ತಿಯೊಂದಿದೆ. ಅದನ್ನು 'ಮಂಡಾಡಿ' ಎಂದು ಕರೆಯುತ್ತಾರೆ. ಅಲ್ಲಿ 'ನಾಗಬನ' ಎಂಬ ಜಾಗವಿದೆ. ನಾಗರಪಂಚಮಿಯಂದು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಾನು ಚಿಕ್ಕಂದಿನಿಂದಲೂ ಬಹು ದೂರ ನಿಂತೇ ಅದನ್ನೆಲ್ಲಾ ಗಮನಿಸುತ್ತಿದ್ದೆ. ಏಕೆಂದರೆ ಅಲ್ಲಿ ಜೀವಂತ ಹಾವುಗಳು ಓಡಾಡುತ್ತಿರುತ್ತವೆ ಎಂದು ನನಗೆ ಗೊತ್ತಿತ್ತು! 
        ನಮ್ಮ 'ಅಪ್ಪಿಮಾಯಿ' ನಾನು ಚಿಕ್ಕವನಿದ್ದಾಗ ಹಿಂದೆ ನಡೆದ ಒಂದು ಘಟನೆಯನ್ನು ಹೇಳಿದ್ದರು. ಅದೇನೆಂದರೆ ನವರಾತ್ರಿಯ ಸಮಯದಲ್ಲಿ ಒಮ್ಮೆ ಖೀರಿ (ಪಾಯಸ) ಮಾಡಿ ಒಲೆಯಿಂದ ಇಳಿಸುವಾಗ ಒಂದು ನಾಗರ ಹಾವಿನ ಮೇಲೆ ಬಿಸಿ 'ಕಟಾರ'ವನ್ನು ಗೊತ್ತಿಲ್ಲದೇ ಇಟ್ಟುಬಿಟ್ಟಿದ್ದರಂತೆ. ಆಗ ಎಲ್ಲರೂ ಗಾಭರಿಯಾಗಿ 'ದರ್ಶನ'ದ ಪಾತ್ರಿಯನ್ನು ಕೇಳಿದಾಗ 'ಚಿಂತಿಸುವ ಅಗತ್ಯವಿಲ್ಲ, ಆದರೆ ಇನ್ನು ಮುಂದೆ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ನಾಗರಾಜನಿಗೆ ಪೂಜೆ ಸಲ್ಲಿಸಿ, ಐದು ಜನ ಮುತ್ತೈದೆಯರಿಗೆ ಸುವಾಸಿನಿಯರಂತೆ ಸತ್ಕರಿಸಿ ಊಟ ಉಪಚಾರಗಳನ್ನು ನೀಡಿ ಸತ್ಕರಿಸಬೇಕು' ಎಂದು ಹೇಳಿದ್ದರಂತೆ. ಇಂದಿಗೂ ಆ ಪದ್ಧತಿ ಹಾಗೆಯೇ ನಡೆಯುತ್ತಿದೆ. 
        ನಾನು ಚಿಕ್ಕವನಿರುವಾಗ ಕಂಡ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ದೇವಸ್ಥಾನದ ಸುತ್ತಿನಲ್ಲಿ ಯಾವುದಾದರೂ ಹಾವು ಕಂಡಾಗ, ನಮ್ಮ ಅಪ್ಪಿ ಮಾಯಿ 'ನೀನು ಬಂದಿದೀಯಾ ಎಂದರೆ ಏನೋ ಅಪವಿತ್ರವಾಗಿದೆ, ಗೊತ್ತಿಲ್ಲದೇ ಏನಾದರೂ ತಪ್ಪಾಗಿರಬಹುದು .. ಒಟ್ಟಾರೆ ಕ್ಷಮಿಸಿಬಿಡು' ಎಂದು ಹೇಳಿ ಹರಿವಾಣವೊಂದರಲ್ಲಿ ಅರಶಿನದ ನೀರನ್ನು ತಂದು ಆ ಹಾವಿನ ಮುಂದೆ ಇಟ್ಟು ಕೈ ಮುಗಿಯುತ್ತಿದ್ದರು. ಆ ಹಾವು ಅದರಲ್ಲಿ ಹೊರಳಾಡಿ ಹೋಗುತ್ತಿತ್ತು. ಅಲ್ಲಿಗೆ ಎಲ್ಲವೂ ಪವಿತ್ರವಾಯಿತು ಎಂದು ಖುಷಿ ಪಡುತ್ತಿದ್ದರು ಅಪ್ಪಿ ಮಾಯಿ. ನಾನು ದೂರದಲ್ಲಿ ಕಂಬದ ಮರೆಯಲ್ಲಿ ನಿಂತು ಇದನ್ನೆಲ್ಲಾ ಭಯದಿಂದ ನೋಡುತ್ತಿದ್ದೆ. 
        ಇದೆಲ್ಲದರ ನಡುವೆ ಗುರುಗಳ ಬರುವಿಕೆಗೆ ಕಾಯುತ್ತಿದ್ದೆ, ಏಕೆಂದರೆ ಈ ಬಾರಿ ಬಂದಾಗ ಹೆಚ್ಚು ದಿನಗಳನ್ನು ನನ್ನೊಂದಿಗೆ ಕಳೆಯುವುದಾಗಿ ಗುರುಗಳು ಹೇಳಿದ್ದರು. ಕೊನೆಗೂ ಆ ದಿನ ಬಂದಿತು. 


Wednesday, 16 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 13

        ಶಿವನ ಆರಾಧನೆಗೆ ಮುನ್ನ ಗುರುಗಳು ಶಿವನ ಕುರಿತಾದ ಕೆಲವು ವಿಚಾರಗಳನ್ನು ನನ್ನೊಡನೆ ಹಂಚಿಕೊಂಡರು.
        'ಶಿವ ಪೌರಾಣಿಕ ವ್ಯಕ್ತಿಯಲ್ಲ, ಈ ಭೂಮಿಯಲ್ಲಿ ಅವತರಿಸಿದ ಮಹಾದೇವ. ಸ್ಮಶಾನವಾಸಿಯಾದ ಅವನು ಜನರ ಮಧ್ಯೆ, ಜನರಿಂದ ಬೆಳೆದ. ತನ್ನನ್ನು ಬೆಳೆಸಿದ ಸಮಾಜಕ್ಕಾಗಿ ಅದ್ಭುತ ಕೊಡುಗೆಗಳನ್ನು ನೀಡಿದ. ಪಶು,ಪ್ರಾಣಿಗಳ ಧ್ವನಿಯ ಏರಿಳಿತಗಳನ್ನು ಗಮನಿಸಿ ಸಪ್ತಸ್ವರಗಳನ್ನು ಕಂಡು ಹಿಡಿದು ಸಂಗೀತಕ್ಕೊಂದು ಹೊಸ ಆಯಾಮ ನೀಡಿದ್ದು ನಮ್ಮ ಶಿವ. ಸ್ಮಶಾನದಲ್ಲಿದ್ದುಕೊಂಡೇ ತನ್ನದೇ ಆದ ನಾಟ್ಯಪ್ರಕಾರವನ್ನು ಕಂಡು ಹಿಡಿದು ಅದಕ್ಕೆ 'ತಾಂಡವ' ಎಂದು ಹೆಸರಿಸಿದ. ಅಲೆಮಾರಿ ಜನಾಂಗವಾಗಿ ಅಲೆಯುತ್ತಿದ್ದ ಜನರಿಗೆ ಕುಟುಂಬದ ಕಲ್ಪನೆ ನೀಡಿದ. ವಿವಾಹ ಪದ್ಧತಿಯನ್ನು ಆಚರಣೆಗೆ ತಂದದ್ದು ಮಹಾದೇವ ಶಿವನೇ. ದಕ್ಷಿಣ ಭಾರತದಲ್ಲಿ ವಾಸವಾಗಿದ್ದ ಶಿವನ ಸಂಗಾತಿಯಾಗಿದ್ದವಳು ಕಾಳಿ. ಆಕೆ ಕಪ್ಪಗಿರುವುದರಿಂದ ಕಾಳಿ ಎಂದು ಕರೆದರು. ಸಾಮರಸ್ಯ ಉಳಿಸಲು ಉತ್ತರದ ಹಿಮಾಲಯ ಭಾಗದ ರಾಜನೊಬ್ಬನ ಮಗಳನ್ನು ವಿವಾಹವಾದ. ಆಕೆಯ ಹೆಸರೂ ದಾಖಲೆಯಲ್ಲಿ ಸಿಗದಿರುವುದರಿಂದ, ಪರ್ವತ ಪ್ರದೇಶದ ರಾಜನ ಮಗಳಾಗಿದ್ದುದರಿಂದ ಪಾರ್ವತಿ ಎಂದು ಮುಂದೆ ಕರೆಯಲಾಯಿತು. ಇದೇ ಪ್ರಪಂಚದ ಮೊದಲ ಮದುವೆ. ಈಗಲೂ ಮದುವೆಯ ಮಂಟಪದಲ್ಲಿ ಒಳ್ಳೆಯ ಜೋಡಿಯನ್ನು ನೋಡಿದಾಗ ಶಿವ-ಪಾರ್ವತಿಯರಂತೇ ಕಾಣುತ್ತಾರೆ ಎನ್ನುವುದು ವಾಡಿಕೆಯಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಶಿವನು ಬಿಡಿ ಬಿಡಿಯಾಗಿ ದಿಕ್ಕು ದೆಸೆಯಿಲ್ಲದೇ ನಡೆಯುತ್ತಿದ್ದ ದೇವಪೂಜೆಗೆ ಶಿಸ್ತುಬದ್ಧವಾದ ವೈಜ್ಞಾನಿಕ ರೂಪಕೊಟ್ಟ. ತಾನು ಮೊದಲು ಅಭ್ಯಸಿಸಿ, ಸಾಧನೆ ಮಾಡಿ ನಂತರ ಪಾರ್ವತಿಗೆ ಅದನ್ನು ಬೋಧಿಸಿದ. ಅದೇ ತಂತ್ರ ಶಾಸ್ತ್ರ. ನಾನು ಹೇಳಿದ ಈ ವಿಷಯಗಳು ಜನಸಾಮಾನ್ಯರ ನಂಬಿಕೆಗಳಿಗೆ ವಿರುದ್ಧವಾಗಿರಬಹುದು. ಆದರೆ ನನ್ನಲ್ಲಿ ಕೆಲವು ಪುರಾವೆಗಳಿವೆ' ಎಂದು ಹೇಳುತ್ತಾ ಕೆಲವು ತಾಳೇಗರಿಗಳನ್ನು ತೋರಿಸಿ ಅದರಲ್ಲಿರುವ ವಿವರಗಳನ್ನು ಬಿಡಿಸಿ ಹೇಳಿದರು. ಈಗಲೂ ಅವರು ನೀಡಿದ ಹಾಗೂ ಮುಂದೆ ನಾನು ಸಂಗ್ರಹಿಸಿದ ಶಿವನ ಕುರಿತಾದ ಕೆಲವು ತಾಳೇಗರಿಗಳು ನನ್ನಲ್ಲಿವೆ. 
        ನಂತರ ಕೆಲದಿನಗಳಲ್ಲೇ ನನಗೆ ಶಿವನ ಆರಾಧನೆಯ ತರಬೇತಿ ಆರಂಭವಾಯಿತು. 'ಊರ ಹೊರಗಿನ ಸ್ಮಶಾನದಲ್ಲಿ ರಾತ್ರಿ ಹೋಗಿ ಮಲಗಿ ಬರುವ ಧೈರ್ಯವಿದೆಯೇ?' ಎಂದೊಮ್ಮೆ ಕೇಳಿದರು. ನನಗೆ ಸ್ಮಶಾನದ ಬಗ್ಗೆ, ದೆವ್ವಪಿಶಾಚಿಗಳ ಬಗ್ಗೆ ಯಾವ ಭಯವೂ ಇರಲಿಲ್ಲ. ನಾನು ಕೂಡಲೇ ಒಪ್ಪಿಕೊಂಡೆ. ಅಂದಿನಿಂದ ಐದು ದಿನ ನಾನು ಸ್ಮಶಾನಕ್ಕೆ ಹೋಗಿ ಮೂಲೆಯೊಂದೆಡೆ ಮಲಗಿ ಬೆಳಿಗ್ಗೆ ಬರುತ್ತಿದ್ದೆ. ಮೊದಲ ದಿನ ಸ್ವಲ್ಪ ಭಯವಾಯಿತು. ದೆವ್ವಗಳ ಬಗ್ಗೆ ಅಲ್ಲ, ಅಲ್ಲಿರಬಹುದಾದ ಹಾವು ಚೇಳುಗಳ ಬಗ್ಗೆ. ಅಕಸ್ಮಾತ್ ಮಲಗಿರುವಾಗ ಬಂದು ಕಚ್ಚಿದರೆ? ಎಂಬ ಭಯವಿತ್ತು. ಒಂದೇ ದಿನ, ನಂತರ ನಮ್ಮ ಅಜ್ಜನ ಆಸ್ತಿಯೇನೋ ಎಂಬಂತೆ ಹೋಗಿ ಮಲಗುತ್ತಿದ್ದೆ. ಅಷ್ಟರಲ್ಲಿ ಅಲ್ಲಿ ಸಣ್ಣ ಮನೆಯಲ್ಲಿದ್ದ ಕಾವಲುಗಾರನ ಗೆಳೆತನವನ್ನೂ  ಮಾಡಿಕೊಂಡು ಬಿಟ್ಟಿದ್ದೆ. 
ಗುರುಗಳು ಕೇಳಿದರು 'ಭಯವಾಗಲಿಲ್ಲವೇ? 
'ಒಂದೆರಡು ದಿನ ಈ ಹಾವು ಚೇಳುಗಳ ಬಗ್ಗೆ ಭಯ ಇತ್ತು, ಆಮೇಲೆ ಸರಾಗವಾಗಿ ಹೋಯಿತು' ನಗುತ್ತಾ ಹೇಳಿದೆ. 
'ಶಿವನ ಅನುಷ್ಠಾನ ಮಾಡುವಾಗ ಭಯಕ್ಕೆ ಆಸ್ಪದವಿಲ್ಲ, ಅದಕ್ಕಾಗಿ ಈ ಸಣ್ಣ ಪ್ರಯೋಗ ಮಾಡಿದ್ದು. ನಾಳೆ ನಿನಗೆ ಶಿವನ ಮಂತ್ರೋಪದೇಶ ಮಾಡುತ್ತೇನೆ' ಎಂದು ಹೇಳಿ ಹೊರಟರು. ನಾನು 'ನಾಳೆ'ಗೆ ಕಾಯುತ್ತಿದ್ದೆ. 
        ಮರುದಿನ ಮಂತ್ರ ದೀಕ್ಷೆ ನೀಡುವ ಮೊದಲು ಗುರುಗಳು ನನಗೆ ಈ ಸಾಧನೆಯ ಬಗ್ಗೆ ಕೆಲ ಮಾತುಗಳನ್ನು ಹೇಳಿದರು. "ಶಿವನು ಹಿಮಾಲಯದಲ್ಲಿ ಕುಳಿತರೂ ಆತನ ಧ್ಯಾನದ ಉತ್ಕಟತೆಗೆ ಮೈ ಹೋಮಕುಂಡದಂತೆ ಸುಡುತ್ತಿರುತ್ತದೆ. ಆದ್ದರಿಂದ ಆತನಿಗೆ ಚಳಿ ಸೋಕುವುದಿಲ್ಲ. ಶಿವನ ಮಂತ್ರದೊಂದಿಗೆ ಅಗ್ನಿಮಂತ್ರವನ್ನು ಸೇರಿಸಿ 'ಹ್ರೀಂ ಓಂ ನಮಃ ಶಿವಾಯ ಹ್ರೀಂ' ಎಂದು ಚಿನ್ಮುದ್ರೆಯಲ್ಲಿ ಜಪ ಮಾಡು, ತೋರುಬೆರಳ ತುದಿಯಲ್ಲಿ ಅಗ್ನಿಯ ಸಾನ್ನಿಧ್ಯ ಇರುತ್ತದೆ. ನಾನು ನಿನಗೆ ಗೋಪ್ಯವಾಗಿ ಕೊಟ್ಟ ಬೀಜಾಕ್ಷರವನ್ನು ಆದಿಯಲ್ಲಿ ಸೇರಿಸು. ನೀನು ಶಿವನ ಅನುಷ್ಠಾನ ಮಾಡಬೇಕಾದರೆ ಮೊದಲು ನಿನ್ನ ನಾಲ್ಕೂ ಬದಿಯಲ್ಲಿ ಧಗ ಧಗ ಉರಿಯುವ ನಾಲ್ಕು ಹೋಮಕುಂಡಗಳಿವೆಯೆಂದು ಭಾವಿಸು. ನೀನೇ ಸ್ವತಃ ಒಂದು ಹೋಮಕುಂಡದಲ್ಲಿ ಕುಳಿತು ಕೊಂಡಿರುವುದಾಗಿ ಕಲ್ಪಿಸಿಕೋ. ಮಿಕ್ಕೆಲ್ಲ ವಿಧಿ ವಿಧಾನಗಳನ್ನು ನಾನು ನಿನಗೆ ತಿಳಿಸಿಕೊಟ್ಟ ರೀತಿಯಲ್ಲಿಯೇ ಮಾಡು. ನಾಳೆ ನಾನು ಮತ್ತೆ ಹೊರಡುತ್ತಿದ್ದೇನೆ. ಇಂದು ನಿನಗಾದ ಅನುಭವವನ್ನು ನಾಳೆ ನನಗೆ ಹೇಳು" ಎಂದು ಹೇಳಿ ಆಶೀರ್ವದಿಸಿ ಹೊರಟರು. ಹೊಸದಾದ ಮತ್ತೊಂದು ಅನುಭವಕ್ಕೆ ಮನಸ್ಸು ಅಣಿಯಾಗಿತ್ತು. ಮೊದಲ ದಿನ ವಿಶೇಷ ಅನುಭವವೇನೂ ಆಗಲಿಲ್ಲ. ಅದನ್ನೇ ಗುರುಗಳ ಬಳಿ ಹೇಳಿಕೊಂಡೆ. 
       ಮುಂದಿನ ದಿನಗಳಲ್ಲಿ ಶಿವನ ಉತ್ಕಟತೆ ಪಡೆಯಲು ತೀಕ್ಷ್ಣವಾದ ಬೆಂಕಿಯಲ್ಲಿ ನಾನೇ ಸುಟ್ಟುಹೋಗುತ್ತಿರುವಂತೆ ಭಾವಿಸಿಕೊಳ್ಳುತ್ತಿದ್ದೆ. ಹೀಗೆ ಸುಮಾರು ಹತ್ತು ದಿನಗಳ ಕಾಲ ಅನುಷ್ಠಾನ ಮಾಡುತ್ತಿದ್ದಂತೇ, ಪೂಜೆ ಮುಗಿಸಿದ ಮೇಲೆ ನನ್ನ ಕೈಗಳಲ್ಲಿ, ಭುಜಗಳಲ್ಲಿ, ಚರ್ಮದ ಮೇಲೆ ಸಣ್ಣದಾಗಿ ಬಿಳಿಯ ಬೂದಿಯ ಪದರವಿರುವುದನ್ನು ಗಮನಿಸಿದೆ. ಹಿತವಾಗಿ ಅದನ್ನು ಸವರಿಕೊಂಡೆ. ಅದರ ಬಗ್ಗೆಯೇ ಚಿಂತಿಸುತ್ತಿದ್ದೆ. ಶಿವನು ವಿಭೂತಿಧಾರಿ ಅನ್ನುವುದರ ಅರ್ಥ ನನಗೆ ಬೇರೆ ತರಹವಾಗಿ ಕಾಣ ಸಿಕ್ಕಿತು. ಶಿವನ ತಪಸ್ಸಿನ ತೀವ್ರತೆಗೆ ಆತನ ಮೈಯ್ಯೆಲ್ಲಾ ಸುಡುತ್ತಿತ್ತೇನೋ ಎಂದು ಅನ್ನಿಸಿತ್ತು. 
        ಮುಂದೆ ನನ್ನ ಭಾವವನ್ನು ತೀವ್ರಗೊಳಿಸಿದೆ. 'ಭಾವವಿಲ್ಲದ ಪೂಜೆಗೆ ಬೆಲೆಯಿಲ್ಲ' ಎಂದು ಪದೇ ಪದೇ ಗುರುಗಳು ಹೇಳುತ್ತಿದ್ದರು. ನನ್ನ ಮನಃಸ್ಥಿತಿ ಅಂದಿನ ದಿನಗಳಲ್ಲಿ ಗಂಭೀರವಾಗಿತ್ತು. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮನಸ್ಸು ಶಾಂತವಾಗಿರುತ್ತಿತ್ತು.
        ಇದಾಗಿ ಕೆಲವು ದಿನಗಳಲ್ಲಿ ಒಮ್ಮೆ ಅನುಷ್ಠಾನಕ್ಕೆ ಕುಳಿತಾಗ ನನ್ನ ಮುಂದಿಟ್ಟಿದ್ದ ಹರಿವಾಣದಲ್ಲಿ ಏನೋ ಬಿದ್ದಂತೇ ಭಾಸವಾಯಿತು. ಕಣ್ಣು ಮುಚ್ಚಿ ಜಪ ಮಾಡುತ್ತಿದ್ದ ನನಗೆ ಕಣ್ಣು ತೆರೆದು ನೋಡುವ ಕುತೂಹಲ. 'ಇರಲಿ' ಎಂದು ನನಗೆ ನಾನೇ ಹೇಳಿಕೊಂಡು ಜಪವನ್ನು ಮುಂದುವರೆಸಿದೆ. ಮತ್ತೆ ಏನೋ ಶಬ್ದ! 'ಕುಳಿತ ಸ್ಥಳದಿಂದ ಏಳಬಾರದು ಎಂದು ಹೇಳಿದ್ದರಲ್ಲದೇ ಕಣ್ಣು ಬಿಡಬಾರದು ಎಂದೇನೂ ಹೇಳಲಿಲ್ಲವಲ್ಲ' ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಕಣ್ಣು ಬಿಟ್ಟೆ.  ನನ್ನ ಮುಖದಿಂದ ಒಂದು ಅರ್ಧ ಅಡಿ ದೂರದಲ್ಲಿ ನನ್ನ ಎದುರಿಗಿದ್ದ ಹರಿವಾಣದಲ್ಲಿ ಹೆಡೆ ಎತ್ತಿ ಕುಳಿತ ನಾಗರ ಹಾವೊಂದು ನನ್ನನ್ನೇ ನೋಡುತ್ತಿತ್ತು! 
        ಮುಂದೇನಾಯ್ತು? ಮುಂದಿನ ಕಂತಿನಲ್ಲಿ... 

Tuesday, 15 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 12


        ತಂತ್ರ ಎಂದೊಡನೆ ಜನರಲ್ಲಿ ಭಯಾನಕ ಕಲ್ಪನೆಗಳಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದಾಗಿ ಅದರಲ್ಲಿರುವ ದಕ್ಷಿಣಮಾರ್ಗ ಹಾಗೂ ವಾಮಮಾರ್ಗ ಪೂಜಾಪದ್ಧತಿಗಳು. ಜನಸಾಮಾನ್ಯರಿಗೆ ತಂತ್ರ ಅಥವಾ ತಾಂತ್ರಿಕ ಎಂದೊಡನೆ ಮನಸ್ಸಲ್ಲಿ ಮೂಡುವುದು ವಾಮಮಾರ್ಗ ಒಂದೇ! ವಾಮಮಾರ್ಗದಲ್ಲಿ ಕೆಲವು 'ಕ್ಷುದ್ರದೇವತೆ'ಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ (ನಾನಂತೂ 'ಕ್ಷುದ್ರ ದೇವತೆ' ಎಂದು ಕರೆಯಲಾರೆ). ಇವು ನಕಾರಾತ್ಮಕ ಶಕ್ತಿಯನ್ನು/ಆಲೋಚನೆಗಳನ್ನು ಉಪಯೋಗಿಸುವ ವಿಧಾನಗಳು. 
        ಇದಲ್ಲದೇ 'ಪಂಚಮಕಾರ'ಗಳ ಅನುಷ್ಠಾನದ ತರಬೇತಿಯಿದೆ. ಈ ಪಂಚಮಕಾರಗಳು ಮದ್ಯ,ಮಾಂಸ,ಮತ್ಸ್ಯ,ಮುದ್ರಾ, ಮಿಥುನಗಳನ್ನು ಒಳಗೊಂಡಿವೆ. ಮೇಲ್ನೋಟಕ್ಕೆ ಮಡಿವಂತರ ಮನಸ್ಸಿಗೆ ಇದು ಅಪಥ್ಯದಂತೆ ಕಂಡರೂ, ಅದರ ಅರ್ಥ ಬೇರೆಯೇ ಇದೆ. ಪಶುಭಾವದಿಂದ ವೀರಭಾವಕ್ಕೆ ಕರೆದೊಯ್ದು, ದಿವ್ಯ ಭಾವದಲ್ಲಿ ನೆಲೆಗೊಳಿಸುವುದು ತಂತ್ರ ವಿದ್ಯೆಯ ಪರಮಗುರಿ. ಇದರ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.
        ಈಗ ನನ್ನ ತಾಂತ್ರಿಕ ಪಯಣದ ಹಾದಿಯನ್ನು ವಿವರಿಸುತ್ತೇನೆ. ನನಗೆ ಗುರುಗಳು ಹೇಳಿದ ದೇವಿ ಅನುಷ್ಠಾನದ ಅವಧಿ ಮುಗಿಸಿದ್ದುದರಿಂದ, ಅವರು ಮತ್ತೆ ಬರುವವರೆಗೂ  ದೈನಂದಿನ ಸಾಧಾರಣ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಆಗ ಸಾಕಷ್ಟು ಸಮಯ ಸಿಗುತ್ತಿತ್ತು. ಒಮ್ಮೆ ಗೆಳೆಯ ಭಾಮಿ ಸುಧಾಕರ ಶೆಣೈ ವ್ಯಾಯಾಮ ಶಾಲೆಯಲ್ಲಿ ನನಗೆ ಸಿಕ್ಕಿದಾಗ 'ನಾಳೆಯಿಂದ ವೆಂಕಟರಮಣ ದೇವಸ್ಥಾನದಲ್ಲಿ ವೇದಸೂಕ್ತಗಳ ಬಗ್ಗೆ ವಿವರಣೆ ಅವುಗಳನ್ನು ಕ್ರಮವಾಗಿ ಉಚ್ಚರಿಸುವ ಹಾಗೂ ಅಭ್ಯಸಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಸಕ್ತಿ ಇದ್ದರೆ ನೀನೂ ಸೇರಿಕೊಳ್ಳಬಹುದು' ಎಂದು ಹೇಳಿದ. ಎಲ್ಲವೂ ಅದಾಗಿ ಹುಡುಕಿ ಬಂದಂತೇ ಭಾಸವಾಗಿತ್ತು. ಬಿಡುವಾಗಿಯೂ ಇದ್ದೆ, ಹುಡುಕಿ ಹೋದರೂ ಸಿಗದಂತಹ ಅವಕಾಶ ತಾನಾಗಿಯೇ ಒದಗಿತ್ತು!
        ಮಾರನೇ ದಿನದಿಂದಲೇ ಬೆಳಿಗ್ಗೆ ವೆಂಕಟರಮಣ ದೇವಸ್ಥಾನಕ್ಕೆ ತರಬೇತಿಗಾಗಿ ಹೋಗಲಾರಂಭಿಸಿದೆ. ಋಗ್ವೇದದ ಪ್ರಾತಃಸೂಕ್ತದಿಂದ ನನ್ನ ಕಲಿಕೆ ಆರಂಭವಾಯಿತು. ನಂತರ ಶ್ರೀಸೂಕ್ತ, ಪುರುಷಸೂಕ್ತ, ವಾಗಾಂಭ್ರಣೀ ಸೂಕ್ತ ಮುಂತಾದ ಮುಖ್ಯ ಸೂಕ್ತಗಳನ್ನು ಇಷ್ಟಪಟ್ಟು ಕಲಿತೆ. ಆಗ ನನಗೆ ನೆರವಾದ ವೇದಮೂರ್ತಿ ಶ್ರೀ ಹರಿಭಟ್ಟರ ಸಹಾಯ, ಸಹಕಾರವನ್ನು ಎಂದಿಗೂ ಮರೆಯಲಾರೆ.          ನನಗೆ ಪ್ರೋತ್ಸಾಹ ನೀಡುತ್ತಿದ್ದ ಗೆಳೆಯರಾದ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ ಬಾಳಿಗಾ ಅವರೆಲ್ಲರೊಡನೆ ಸಂಜೆ ಬೆರೆಯುತ್ತಿದ್ದೆ. ಯಶವಂತ ವ್ಯಾಯಾಮ ಶಾಲೆ, ನಮ್ಮ ಮಾತುಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಇನ್ನೊಬ್ಬ ಗೆಳೆಯ 'ಮಾಣೂರು ಅಚ್ಚು'. ನಾನು ಏನು ಕೇಳಿದರೂ ಇಲ್ಲವೆನ್ನದೇ ಒದಗಿಸುತ್ತಿದ್ದ. ಆರಂಭದ ದಿನಗಳಲ್ಲಿ ನನಗೆ ಕುಳಿತುಕೊಂಡು ಧ್ಯಾನ ಮಾಡಲು ಜಿಂಕೆಯ ಚರ್ಮವೊಂದು ಬೇಕಾಗಿತ್ತು. ಯಾರೂ ಸಾಯಿಸದೇ, ತಾನಾಗಿ ಸತ್ತ ಚರ್ಮವೇ ಬೇಕಾಗಿತ್ತು. 'ಅಚ್ಚು' ಯಾವುದೋ ಮಠಕ್ಕೆ ಹೋಗಿ ಅವರ ಮನವೊಲಿಸಿ ಜಿಂಕೆಯ ಚರ್ಮವೊಂದನ್ನು ಎರಡು ದಿನಗಳಲ್ಲಿ ಒದಗಿಸಿ ಕೊಟ್ಟಿದ್ದ. ನಾನು ಮತ್ತೆ ಹಿಂದಿರುಗಿ ಬರುವಾಗ, ಅದನ್ನು ಮತ್ತೆ ಅದೇ ಮಠಕ್ಕೆ ನೀಡುವಂತೆ ಹೇಳಿ ಆತನಿಗೆ ವಾಪಸ್ಸು ಕೊಟ್ಟೆ.
        ನನ್ನ ಗುರುಗಳು ಹಿಂದಿರುಗಿ ಬಂದರು. ನನ್ನನ್ನು ಅವರದ್ದೇ ಆದ ರೀತಿಯಲ್ಲಿ ಪರೀಕ್ಷಿಸಿದರು. ನನ್ನ ಕಣ್ಣುಗಳನ್ನು ಎವೆಯಿಕ್ಕದೇ ಕ್ಷಣಕಾಲ ನೋಡಿದರು. ಬಲ ಕೈಯ್ಯನ್ನು ತಮ್ಮ ಕೈಯ್ಯಲ್ಲಿ ಹಿಡಿದು ಕೆಲಕಾಲ ತೂಗುತ್ತಾ ಇದ್ದರು. ದೇವೀ ಮಂತ್ರದ ಸಣ್ಣ ಪ್ರಯೋಗವೊಂದನ್ನು ನನ್ನ ಕೈಯ್ಯಲ್ಲಿ ಮಾಡಿಸಿ ನೋಡಿದರು. ಅದನ್ನು ಕಣ್ಣಾರೆ ಕಂಡಾಗ ನನಗೇ ಅಚ್ಚರಿಯಾಯಿತು. ಅದೇನೆಂಬುದು ಇಲ್ಲಿ ಅಪ್ರಸ್ತುತ.
        'ನಿನಗೆ ದೇವೀ ಮಂತ್ರವು ಒಲಿದಿದೆ, ಈಗ ಆ ಮಂತ್ರ ನಿನಗೆ 'ಸಿದ್ಧಿ'ಯಾಗಲು ಆ ಮಂತ್ರದ ಕೆಲವು ಜಪ ಸಂಸ್ಕಾರಗಳನ್ನು ಮಾಡುತ್ತೇನೆ ' ಎಂದು ಹೇಳಿ ಕೆಲವಾರು ಸಂಸ್ಕಾರಗಳನ್ನು ಮಾಡಿದರು. ಹಲವಾರು ಸಂಸ್ಕಾರಗಳನ್ನು ಮುಗಿಸಿ 'ಇಲ್ಲಿಗೆ ಈ ದೇವೀ ಮಂತ್ರ ನಿನಗೆ ಸಿದ್ಧಿಯಾಗಿದೆ, ವಿವೇಕ ಹಾಗೂ ವಿವೇಚನೆಯಿಂದ ಬಳಸು' ಎಂದು ಹೇಳಿ ಆಶೀರ್ವದಿಸಿದರು. 



        ಜಪದ ಬಗ್ಗೆ ವಿವರವಾಗಿ, ನಾನು ಅಲ್ಲಿದ್ದಾಗ ಬರೆದ 'ಜಪ, ನನ್ನ ಅನುಭವದಲ್ಲಿ' ಪುಸ್ತಕದಲ್ಲಿ ಬರೆದಿದ್ದೇನೆ. ಅದನ್ನು ಶ್ರೀ ಹರಿಭಟ್ಟರು ಹೊಸದಿಗಂತ ಪತ್ರಿಕೆಯ 'ದಿಗಂತ ಪ್ರಕಾಶನ'ದ  ಮೂಲಕ ಪ್ರಕಟಿಸಿದ್ದರು. ಈಗ ಅದರ ಪ್ರತಿಗಳು ಬಹುಶಃ ಲಭ್ಯವಿಲ್ಲವೇನೋ.
        ಮುಂದಿನ ಅನುಷ್ಠಾನಕ್ಕೆ ನನ್ನನ್ನು ಅಣಿಗೊಳಿಸಿದರು ನನ್ನ ಗುರುಗಳು. ಶಕ್ತಿಯ ಆರಾಧನೆಯ ನಂತರ ಶಿವನ ಆರಾಧನೆ. ತಾಂತ್ರಿಕ ಆರಾಧಕರನ್ನು 'ಶಾಕ್ತೇಯರು' ಎಂದೂ ಕರೆಯುತ್ತಾರೆ.ಶಕ್ತಿ ಹಾಗೂ ಶಿವನ ಆರಾಧನೆ ಇಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ.
       ಶಿವನ ಆರಾಧನೆಗೆ ನನ್ನನ್ನು ಗುರುಗಳು ಅನುಗೊಳಿಸಿದ್ದು ಹೇಗೆ? ಶಿವ ಮಂತ್ರದ ಅನುಷ್ಠಾನದಲ್ಲಿ ನನಗಾದ ವಿಶೇಷ ಅನುಭವಗಳೇನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.