Monday, 14 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 11

        ಈ ಅನುಭವಗಳು ನನಗೆ ಅತ್ಯಂತ ಹಿತವಾದ, ನವಿರಾದ, ಹಾಗೂ ಮುದವಾದ ಅನುಭವವನ್ನು ನೀಡಿ ನಾನು ಭಾವುಕನಾಗಿದ್ದು ಮಾತ್ರ ಸತ್ಯ. ಗುರುಗಳು ಹೇಳಿದಷ್ಟು ದಿನ ದೇವಿ ಉಪಾಸನೆಯನ್ನು ಮಾಡಿ ಮುಗಿಸಿದ್ದೆ. ಕಠಿಣ ಅನುಷ್ಠಾನಕ್ಕೆ ಕೊಂಚ ಬಿಡುವು ಸಿಕ್ಕಿತ್ತು. ಗುರುಗಳ ಬರುವಿಕೆಗೆ ಕಾಯುತ್ತಿದ್ದೆ.  
        ಮನೋವಿಜ್ಞಾನದ ದೃಷ್ಟಿಯಿಂದ ನನ್ನ ಅನುಭವವನ್ನು ತುಲನೆ ಮಾಡಿದೆ. ಮನೋವಿಜ್ಞಾನ ಇಂತಹ ಅನುಭವಗಳನ್ನು ಸಾಧಾರಣವಾಗಿ ಭ್ರಮೆ (hallucination) ಎಂದು ಕರೆಯುತ್ತದೆ. ಭ್ರಮೆ ಅಥವಾ ಭ್ರಾಂತಿಯಲ್ಲಿರುವುದು ಒಂದು ಮಾನಸಿಕ ಕಾಯಿಲೆಯ ಲಕ್ಷಣ. ಭ್ರಮೆ ಅಥವಾ ಭ್ರಾಂತಿ ನಾವು ಬಯಸಿ ಸಿಗುವ ಅನುಭವವಲ್ಲ, ಬಯಸಿದ್ದನ್ನು ಕೊಡುವ ಅನುಭವವೂ ಅಲ್ಲ. ಅದು ನಮಗೆ ಬೇಡದ, ಅಥವಾ ನಾವು ಇಷ್ಟಪಡದ ಅನುಭವವನ್ನು ಕೊಡುವ ಗುಣವನ್ನು ಹೊಂದಿರುತ್ತದೆ. 
        ನಾವು ಇಷ್ಟಪಟ್ಟು ಪದೇ ಪದೇ ಚಿಂತಿಸಿ ಅರೆಪ್ರಜ್ಞಾ ಮನಸ್ಸಿನ ಸಹಾಯದಿಂದ ಅನುಭವವನ್ನು ಪಡೆಯುವ ವಿಧಾನಕ್ಕೆ ಮನೋವಿಜ್ಞಾನ 'ದೃಶ್ಯೀಕರಣ ತಂತ್ರ' (visualization technique) ಎನ್ನುತ್ತದೆ.  ಇದು ಮನಸ್ಸಿನ ಶಕ್ತಿಯನ್ನು ಉಪಯೋಗಿಸಲು ಇರುವ ಒಂದು ಶಕ್ತಿಶಾಲೀ ತಂತ್ರ. ತಾಂತ್ರಿಕ ವಿದ್ಯೆಯಲ್ಲಿರುವ ಈ ದೃಶ್ಯೀಕರಣ ತಂತ್ರದಲ್ಲಿ ನಾ ಕಂಡ ಒಂದೇ ಒಂದು ವ್ಯತ್ಯಾಸವೆಂದರೆ  'ಭಾವ'. ಅದು ಅದ್ಭುತ ಹಾಗೂ ಅಲೌಕಿಕ ಅನುಭವವನ್ನು ನೀಡುತ್ತದೆ. 
        ನಾನು ಕಂಡುಕೊಂಡ  ಇನ್ನೊಂದು ಸತ್ಯವೇನೆಂದರೆ ಯಾವುದೇ ಆಧ್ಯಾತ್ಮಿಕ ಸಾಧನೆಯ ಅನುಷ್ಠಾನದಲ್ಲಿ ನಾವು ತೊಡಗಿಕೊಂಡಿರುವಾಗ, ನಮ್ಮ ಅನುಭವಗಳ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡದಿರುವುದೇ ಒಳಿತು. ಅವರ ನಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮನಸ್ಸಿನಲ್ಲಿ ಸಂದೇಹದ ಬೀಜಗಳನ್ನು ಬಿತ್ತಬಹುದು. ನಿಮ್ಮ ಅನುಭವಗಳು ನಿಮ್ಮವು. ಅದು ಯಾರ ಅನುಭವಕ್ಕೂ ತಾಳೆಯಾಗಬೇಕಿಲ್ಲ. ಹಾಗೆಯೇ ಬೇರೆಯವರಿಗೆ ಆದಂತಹದ್ದೇ ಅನುಭವ ನಮಗೂ ಆಗಬೇಕಿಲ್ಲ.              ದೈವಸಾಕ್ಷಾತ್ಕಾರವೆಂದೊಡನೆ ದೇವರು ಎದುರಿಗೆ ಪ್ರತ್ಯಕ್ಷನಾಗಿ ನಿಂತು 'ಭಕ್ತಾ, ನಿನಗೇನೂ ಬೇಕು?' ಎಂದು ಕೇಳಬೇಕಾಗಿಲ್ಲ. ಆ ಸಹಜವಾದ ಪ್ರಕೃತಿಶಕ್ತಿಯೊಡನೆ ಯಾವುದೇ ಅನುಭವ, ಅನುಭಾವಗಳು ಸಾಕ್ಷಾತ್ಕಾರದ ರೂಪವೇ. 
        ಅದು ದೊರೆತ ಮಾತ್ರಕ್ಕೆ ಯಾರೂ ದೇವಮಾನವರಾಗುವುದೂ ಇಲ್ಲ. ನಮ್ಮ ಎಲ್ಲಾ ದೌರ್ಬಲ್ಯಗಳು ನಮ್ಮಲ್ಲಿಯೇ ಇರುತ್ತವೆ. ಆದರೆ ಈ ಅನುಭವಗಳು ಆಗುತ್ತಿದ್ದಂತೇ ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ದೌರ್ಬಲ್ಯಗಳನ್ನು, ದೌರ್ಬಲ್ಯಗಳು ಎಂದು ತಿಳಿಯುವ ಮಟ್ಟಕ್ಕೆ ಹೋಗುತ್ತೇವೆ. ಇಲ್ಲಿ ಹೊಸ ರೀತಿಯ ಬದುಕನ್ನು ರೂಪಿಸಿಕೊಳ್ಳುವ ಒಂದು ಅವಕಾಶವನ್ನು ಅದು ಕಲ್ಪಿಸಿಕೊಡುತ್ತದೆ. ಬದಲಾಗುವುದು, ಬಿಡುವುದು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ತೀರ್ಮಾನ ತೆಗೆದುಕೊಳ್ಳಬೇಕಾದವರು ನೀವೇ ಆಗಿರುತ್ತೀರಿ. 
        ಯಾವುದೇ ಸಾಧನೆಯ ಪಥವನ್ನು ನೀವು ಆರಿಸುವ ಮೊದಲು ಹತ್ತು ಬಾರಿ ಯೋಚಿಸಿ,ಆದರೆ ಆರಿಸಿಕೊಂಡಾದ ಮೇಲೆ ಮುನ್ನುಗ್ಗುತ್ತಿರಿ. ಸಾಧನೆಯ ಪಥದಲ್ಲಿದ್ದಾಗ ತುಂಬಾ ಯೋಚಿಸುವುದು, ಅದಕ್ಕೆ ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಓದುವುದು, ಕಂಡ ಕಂಡವರೊಂದಿಗೆ ಚರ್ಚಿಸುವುದು ಮುಂತಾದ ವಿಚಾರಗಳಿಂದ ದೂರವಿರಿ. ಇವೆಲ್ಲಾ ನಿಮ್ಮ ಸಾಧನೆಯ ಮಾರ್ಗವನ್ನು ಧೀರ್ಘ ಮಾಡುತ್ತವೆ. 
        ಆಧ್ಯಾತ್ಮಿಕ ಸಾಧನೆ ಒತ್ತಟ್ಟಿಗಿರಲಿ, ಈ ಎಲ್ಲಾ ವಿಷಯಗಳು ಲೌಕಿಕ ವಿಷಯಗಳ ಸಾಧನೆ ಮಾಡುವಾಗಲೂ ಅನ್ವಯವಾಗುತ್ತವೆ. ನನ್ನದೇ ಒಂದು ಅನುಭವದಿಂದ ನಾನು ಇದನ್ನು ಕಲಿತೆ.
ಅದೇನೆಂದರೆ 

        ಹಿಂದೊಮ್ಮ ನಾನು ಹಾಗೂ ನನ್ನ ಸಂಬಂಧಿಕ ಸುನೀಲ (ಇಂದಕ್ಕಳ ಮಗ), ಈಜು ಕಲಿಯಲು ನೇತ್ರಾವತೀ ನದಿಯಲ್ಲಿ ಇಳಿದಿದ್ದೆವು. ಇಳಿದ ಮೇಲೆ ಗೊತ್ತಾಗಿದ್ದು, ಈಜುವುದು ಅಷ್ಟು ಸುಲಭವಲ್ಲ ಎಂಬ ಕಠೋರ ಸತ್ಯ. ಈಜಲು ಹೋಗಿ ಸಾಕಷ್ಟು ನೀರು ಕುಡಿಡಿದ್ದೆವು. ನಂತರ ಬುದ್ಧಿವಂತನಾದ ನಾನು ನಮ್ಮ ಊರಿನ ಗ್ರಂಥಾಲಯಕ್ಕೆ ಹೋಗಿ ಈಜಿನ ಬಗ್ಗೆ ಕೆಲವು ಪುಸ್ತಕಗಳನ್ನು ಓದಿದೆ. ಈಜುವುದರಲ್ಲಿ ನಿಷ್ಣಾತರಾದ ಗೋವಿಂದ ಎನ್ನುವವರ ಬಳಿ ಹೋಗಿ ಈಜಿನ ಬಗ್ಗೆ ಚರ್ಚಿಸಿದೆ. ಸುಲಿಯದ 'ಪೊಟ್ಟು' ತೆಂಗಿನಕಾಯಿಯನ್ನು ಕಂಕಳಿಗೆ ಸಿಕ್ಕಿಸಿಕೊಂಡರೆ ಮುಳುಗುವುದಿಲ್ಲ ಎಂದು ಆ ಪ್ರಯೋಗವನ್ನೂ ಮಾಡಿ ನೋಡಿದೆ. ನಾನೊಂದೆಡೆ ಮುಳುಗಿ ನೀರು ಕುಡಿಯುತ್ತಿದ್ದರೆ, ತೆಂಗಿನ ಕಾಯಿ ಇನ್ನೊಂದೆಡೆ ತೇಲಿ ಹೋಗುತ್ತಿತ್ತು. ಹೀಗೆ ಸುಮಾರು ಹದನೈದಿಪ್ಪತ್ತು ದಿನಗಳನ್ನು ಈಜಿನ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಕಳೆದೆ.
        ಒಮ್ಮೆ ನದೀ ತೀರದೆಡೆ ಹೋದಾಗ ನನಗೆ ಆಘಾತ ಕಾದಿತ್ತು. ಸುನೀಲ ಆರಾಮಾಗಿ ಈಜುತ್ತಿದ್ದ ! 
'ಹೇಗೆ ಕಲಿತೆಯೋ?' ಅಚ್ಚರಿಯಿಂದ ಕೇಳಿದೆ. 
ನನ್ನ ಗೆಳೆಯ 'ಗುಂಡಿ ಇರುವ ಜಾಗ ನೋಡಿ ಸುಮ್ಮನೆ ನೀರಿಗೆ ಎಗರು,ಕೈ ಕಾಲು ಬಡಿಯುತ್ತಾ ಈಜಲು ಕಲಿಯುವೆ' ಎಂದು ಹೇಳಿದನಲ್ಲದೇ  'ನಾನು ಹಾಗೆಯೇ ಮಾಡಿದೆ' ಎನ್ನುತ್ತಾ ರಿವರ್ಸ್ ಸ್ಟ್ರೋಕ್ ಹೊಡೆಯುತ್ತಾ ಹೋದ !!  
ಆಗ ನಾನೊಂದು ನಿಶ್ಚಯ ಮಾಡಿದೆ 'ನಾಳೆ ನಾನು ಬಂದು ನೀರಿಗೆ ಧುಮುಕಿ ಈಜುವುದೇ!' ಸುನೀಲನಿಗೆ ಕೂಗಿ ಹೇಳಿದೆ ' ನಾಳೆ ಬೆಳಿಗ್ಗೆ ಎಂಟು ಘಂಟೆಗೆ ನನ್ನ ಜೊತೆ ಬಾ, ನಾನು ಈಜಿ ತೋರಿಸುತ್ತೇನೆ'   
        ಮಾರನೇ ದಿನ ಸುನೀಲನ ಜೊತೆ ನೇತ್ರಾವತಿ ತೀರಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಅಂದು ಪ್ರವಾಹ ಬಂದು ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. 
'ಬಾ ವಾಪಸ್ ಹೋಗೋಣ, ಇಂದು ನಿನ್ನ ಗ್ರಹಚಾರಕ್ಕೆ ಪ್ರವಾಹ. ನಾಳೆ ಬಂದರಾಯಿತು ಬಿಡು' ಎಂದು ಹಿಂದಿರುಗಲು ಸಿದ್ಧನಾದ ಸುನೀಲ.
'ಇಲ್ಲ, ನಾನು ಇಂದು ನೀರಿಗೆ ಬೀಳಲು ಹಾಗೂ ಈಜಲು ನಿರ್ಧಾರ ಮಾಡಿದ್ದೇನೆ. ಬೀಳುವುದೇ, ಬಿದ್ದು ಈಜುವುದೇ!' ಎಂದು ಹೇಳಿದೆ. 
        ಸುನೀಲ 'ಹೋ ಹೋ..' ಎಂದು ಬೊಬ್ಬೆ ಹಾಕುತ್ತಿದ್ದರೂ ನಾನು ನೀರಿಗೆ ಧುಮುಕಿದ್ದೆ. ಪ್ರವಾಹದ ಸೆಳೆತದಲ್ಲಿ ಹಾಗೂ ಹೀಗೂ ಕೈಕಾಲು ಬಡಿದು ಒಂದಷ್ಟು ಪ್ರವಾಹದ ದಿಕ್ಕಿನಲ್ಲೇ ಹೋಗಿ, ಎಲ್ಲೋ ಮುಳುಗುತ್ತಾ, ಎಲ್ಲೋ ತೇಲುತ್ತಾ, ಆ ಬದಿ ಈ ಬದಿ ಈಜುತ್ತಾ, ಅಂತೂ ಇಂತೂ ನದೀ ತೀರ ತಲುಪಿದೆ. ಬಂಡೆಕಲ್ಲು, ರೆಂಬೆಕೊಂಬೆಗಳಿಗೆ ತಾಗಿ ಕೈಕಾಲು, ಮೈ ಹಲವೆಡೆ ತರಚಿತ್ತು. ಮನಸ್ಸು ಮಾತ್ರ ಗೆದ್ದೇ ಎಂದು ಬೀಗುತ್ತಿತ್ತು. ಪ್ರವಾಹದಲ್ಲೇ ಈಜಿದವನಿಗೆ ನಂತರದ ದಿನಗಳಲ್ಲಿ ಈಜುವುದು ಸಲೀಸಾಗಿ ಹೋಯಿತು. ಜೀವನದ ಒಂದು ಅದ್ಭುತ ಪಾಠವನ್ನು ಈ ಅನುಭವ ನನಗೆ ಕಲಿಸಿತ್ತು.  
        ತಂತ್ರ ಎಂದರೆ ಏನು? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದೊಮ್ಮೆ ಬರೆಯುತ್ತೇನೆ. 

Saturday, 12 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 10


        ನಂತರ ಅದೇ ಗುಂಗಿನಲ್ಲಿ, ಒಂದು ರೀತಿಯ ಮತ್ತಿನಲ್ಲಿ ನನ್ನ ಪೂಜೆ ಮುಂದುವರೆಯುತ್ತಿತ್ತು. ಕೆಲವು ದಿನ ಕಳೆಯುವುದರೊಳಗೆ ನನ್ನ ಗುರುಗಳು ನಮ್ಮೂರಿಗೆ ಬಂದರು. ಅವರೊಂದಿಗೆ ನನ್ನೆಲ್ಲಾ ಅನುಭವಗಳನ್ನು ಚಾಚೂ ತಪ್ಪದೇ ಹಂಚಿಕೊಂಡೆ. ಅವರ ಮುಖದಲ್ಲಿ ತೃಪ್ತಿಯ ನಗುವೊಂದನ್ನು ಕಂಡೆ. 'ಇದು ಒಂದು ಸಣ್ಣ ಅನುಭವ, ಮುಂದೆ ಸಾಗಬೇಕಾದ ದಾರಿ ಬಹಳಷ್ಟಿದೆ. ಇನ್ನೂ ಸ್ವಲ್ಪ ಕಠಿಣ ಸಾಧನೆಗೆ ಮೈಯ್ಯೊಡ್ಡಬೇಕಾಗಬಹುದು' ಎಂದರು. 
'ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ' ಧೈರ್ಯವಾಗಿ ಹೇಳಿದೆ. ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ಎಂಬಂತೆ ಇತ್ತು ನನ್ನ ಪರಿಸ್ಥಿತಿ. ಎರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಸಾಧಿಸಬೇಕು ಎಂದು ಹಾತೊರೆಯುತ್ತಿದ್ದೆ. 'ಆದರೆ....' ಎಂದು ನಿಲ್ಲಿಸಿದೆ.
ಏನು? ಎನ್ನುವಂತೆ ನನ್ನೆಡೆಗೆ ನೋಡಿದರು.
'ದೇವಿಯ ಮುಖ ನೋಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ...' ದೈನ್ಯವಾಗಿ ಕೇಳಿದೆ.
'ಚಿಂತಿಸಬೇಡ. ಅದೂ ಕೂಡಾ ಆಗಬಹುದು, ಆದರೆ ಅದು ಆಕೆಯ ಇಚ್ಛೆ' ಎಂದರು  ಗುರುಗಳು.
        ನನ್ನ ಗುರುಗಳು ಒಂದೆಡೆ ಬಹಳ ದಿನ ನಿಲ್ಲುತ್ತಿರಲಿಲ್ಲ. ಅದೇನು ಕೆಲಸವೋ ಏನೋ, ದೇಶಾದ್ಯಂತ ಸುತ್ತುತ್ತಿದ್ದರು. ಹರಿದ್ವಾರ, ಹೃಷಿಕೇಶದಲ್ಲಿ ಬಹುಕಾಲ ನೆಲೆಸುತ್ತಿದ್ದರು. ನನಗೆ 'ಇಂತಿಷ್ಟು ಕಾಲ ಇದನ್ನು ಮುಂದುವರೆಸು' ಎಂದು ಹೇಳಿ ಮತ್ತೆ ಹೊರಡಲು ಸಿದ್ಧರಾಗಿದ್ದರು. ಅವರು ಜೊತೆಯಲ್ಲಿದ್ದರೆ ಚೆನ್ನ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಆದರೆ ಕೇಳಲು ಒಂದು ರೀತಿಯ ಸಂಕೋಚವಾಗುತ್ತಿತ್ತು. ಅವರು ಹೊರಟ ಮೇಲೆ ನನ್ನ ಪೂಜೆಯನ್ನು ಮುಂದುವರೆಸುತ್ತಿದ್ದೆ. ದೇವಿಯ ಮುಖ ನೋಡಲು ದಿನಾ ಹಾತೊರೆಯುತ್ತಿದ್ದೆ. ಮಂತ್ರ ಸಿದ್ಧಿಗೆ ಅವರು ಹೇಳಿದ ಗಡುವು ಹತ್ತಿರ ಬರುತ್ತಿತ್ತು.
ಅಂದು..
        ಯಥಾಪ್ರಕಾರ ಪೂಜೆ ಮಾಡಲು ಆರಂಭಿಸಿದೆ. ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಜಪದ ಅನುಷ್ಠಾನಕ್ಕೆ ಕುಳಿತುಕೊಂಡಿದ್ದೆ. ಜಪ ಮುಂದುವರೆಯುತ್ತಿದ್ದಂತೇ, ಮನಸ್ಸಿಗೆ  ಜಪದ ಸಂಖ್ಯೆಯ ಮೇಲೆ ಹತೋಟಿ ತಪ್ಪಿದಂತೇ ಭಾಸವಾಯಿತು. ಜಪವು ಅಭ್ಯಾಸವಾದಂತೇ ಒಂದು ಕೈಯ್ಯಲ್ಲಿ ಜಪಮಾಲೆ ಚಲಿಸುತ್ತಿದ್ದರೆ, ಇನ್ನೊಂದು ಕೈ ಬೆರಳು ಗಂಟುಗಳ ಮಧ್ಯೆ ಚಲಿಸುತ್ತಾ ಜಪದ ಸಂಖ್ಯೆಯನ್ನು ನನಗೇ ಅರಿವಿಲ್ಲದಂತೆ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕುತ್ತಿತ್ತು. ಅಂದು ಈ ಲೆಕ್ಕ ಮಧ್ಯದಲ್ಲೆಲ್ಲೋ ತಪ್ಪಿ ಹೋಯಿತು. ಮನಸ್ಸು ಇನ್ನೆಲ್ಲೋ ಜಾರುತ್ತಿದ್ದ ಅನುಭವ. ಆದರೆ ಅದು ನಿದ್ದೆಯಂತೂ ಆಗಿರಲಿಲ್ಲ. ಒಂದು ಕತ್ತಲ ಲೋಕ.  
        ಆ ಕತ್ತಲಲ್ಲಿ ಒಂದು ಯುದ್ಧದಂತಹ ಸನ್ನಿವೇಶ. ದೇವಿ ಬರುತ್ತಿದ್ದಾಳೆ ಎಂದಂತೂ ನನಗೆ ಅದು ಹೇಗೋ ಮನದಟ್ಟಾಗಿತ್ತು. ಮಹಿಷಾಸುರ ಹಾಗೂ ಚಾಮುಂಡೇಶ್ವರಿ ನಡುವಿನ ಯುದ್ಧದಂತೇ ಕಾಣುತ್ತಿತ್ತು. ನಾನು ದೇವಿಯ ಮುಖವನ್ನು ನೋಡಲು ಹಂಬಲಿಸುತ್ತಿದ್ದುದರಿಂದ ಬೇರೆ ವಿವರಗಳಿಗೆ ಮನಸ್ಸು ಹೋಗಲಿಲ್ಲ. ಆ ಕತ್ತಲಲ್ಲಿ ಹಲವು ಮಂದಿಯ ನಡುವೆ ಝಗ್ಗನೆ ದೇವಿಯ ಪ್ರವೇಶವಾಯಿತು. ಹುಣ್ಣಿಮೆಯ ದಿನ ಕತ್ತಲಲ್ಲಿ ಹೊಳೆಯುವ ಚಂದ್ರನನ್ನು ನೋಡಿದ ಅನುಭವ. ಆ ಚಂದ್ರ ಅದೇ ಶಾಂತತೆಯನ್ನು ಇಟ್ಟುಕೊಂಡು ನೂರು ಪಟ್ಟು ಹೊಳೆಯುತ್ತಿದ್ದರೆ ಹೇಗಿರಬಹುದು ಎಂದು ಊಹಿಸಿದರೆ ಬಹುಶಃ ಆಕೆಯ ವರ್ಚಸ್ಸು ಅಥವಾ ಪ್ರಭೆ ಅರ್ಥವಾಗಬಹುದೇನೋ! ನಾನು ಯಾವ ಚಿತ್ರ ಪಟದಲ್ಲೂ ನೋಡದಿರುವ, ಯಾವ ಕಲ್ಪನೆಗೂ ನಿಲುಕದಿರುವ ಅನುಪಮ ಸೌಂದರ್ಯವದು. ಆಕೆಯನ್ನು ನೋಡುತ್ತಿದ್ದಂತೇ ನನಗನ್ನಿಸಿದ್ದಿಷ್ಟೇ 'ಇಂತಹ ಅನುರಾಗ ತುಂಬಿದ, ತಾಯಿ ಹೃದಯದ ಕರುಣಾಮಯಿಯೊಂದಿಗೆ ಯುದ್ಧ ಮಾಡಲು ಯಾರಿಗಾದರೂ ಹೇಗೆ ಮನಸ್ಸು ಬಂದೀತು? ಬಹುಶಃ ಆಕೆ ಮಹಿಷನಿಗೆ ಶರಣಾಗಲು ನೀಡುತ್ತಿರುವ ಕೊನೆಯ ಅವಕಾಶ ಇದಾಗಿರಬಹುದೋ ಏನೋ'. 
        ಇದೊಂದು ದೃಶ್ಯವನ್ನು ಶಬ್ದಗಳಲ್ಲಿ ವಿವರಿಸಲು ನನಗೆ ಕಷ್ಟವಾಗುತ್ತದೆ. ಅದೊಂದು ಅಪೂರ್ವ ಅನುಭವ ಎಂದಷ್ಟೇ ಹೇಳಬಯಸುತ್ತೇನೆ. ಈ ಅನುಭವವಾದ ಮೇಲೆ ಅದೆಷ್ಟು ಹೊತ್ತು ಅಲ್ಲಿ ಹಾಗೆಯೇ ಕುಳಿತಿದ್ದೆನೋ ನನಗೆ ಅರಿವಿಲ್ಲ. ನಿಧಾನವಾಗಿ ಕಣ್ಣು ಬಿಟ್ಟಾಗ ದೇವಿಯ ಮೂರ್ತಿ ಕಣ್ಣ ಮುಂದೆ ಕಾಣಿಸಿತು. 'ಇದೇನು ಕನಸೇ' ಎಂದು ನನ್ನನ್ನು ನಾನೇ ಪ್ರಶ್ನಿಸುವಂತಾಯಿತು. ಆದರೆ ಪದ್ಮಾಸನದಲ್ಲಿ ಕುಳಿತಿದ್ದ ನಾನು ಹಾಗೆಯೇ ಕುಳಿತಿದ್ದೆ. ಜಾಗೃತನಾಗಿದ್ದದ್ದು ಸ್ಪಷ್ಟವಾಗಿ ಅರಿವಿನಲ್ಲಿತ್ತು. ಪ್ರಥಮ ಬಾರಿಗೆ 'ಭಾವ'ಲೋಕದ ಯಾನದ ಉತ್ಕಟತೆಯನ್ನು ಅನುಭವಿಸಿದೆ. 
        ಇದೇನಿದು? ಈ ಅನುಭವಗಳ ಮರ್ಮವೇನು? ನಾನು ಇವುಗಳನ್ನು ಮನೋವಿಜ್ಞಾನದ ದೃಷ್ಟಿಯಿಂದ ಅರಿಯಲು ಹೋಗಿ ಕೊನೆಗೆ ಏನು ಮಾಡಿದೆ? ಅಸಲಿಗೆ ತಂತ್ರ ವಿದ್ಯೆ ಎಂದರೇನು? ತಂತ್ರವೆಂದರೆ ಮಾಟ,ಮಂತ್ರಗಳ ಆಟವೇ? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Friday, 11 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 9


        ದೀಕ್ಷೆ ನೀಡಿದ ನಂತರ ಎರಡು ದಿನಗಳು ನನ್ನೊಂದಿಗಿದ್ದ ಗುರುಗಳು ನಂತರ ತಮ್ಮ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗುವವರಿದ್ದರು. ಹೊರಡುವ ಮುನ್ನ ಒಮ್ಮೆ ನದೀ ತೀರದಲ್ಲಿ ಕುಳಿತು ತಂತ್ರ ವಿದ್ಯೆಯ ಮಹತ್ವ ಹಾಗೂ ಅನುಷ್ಠಾನದ  ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 'ತಂತ್ರ ವಿದ್ಯೆಯ ಪ್ರಥಮ ಗುರು ಶಿವ. ದೇವಾನುದೇವತೆಗಳಿಗೂ ದುರ್ಲಭ ಎನ್ನುವಂತಹ ಈ ವಿದ್ಯೆಯನ್ನು ಶಿವನು ಪ್ರಥಮ ಬಾರಿ ಪಾರ್ವತಿಗೆ ಬೋಧಿಸುತ್ತಾನೆ. ಈ ವಿದ್ಯೆಗೆ ಅರ್ಹರಾಗುವವರು ಅದೃಷ್ಟವಂತರು. ಇದನ್ನು ಪಡೆದ ಮೇಲೆ, ಈ ವಿದ್ಯೆಯ ಮರ್ಮವನ್ನು ಸಾಧಿಸಿಕೊಂಡ ಮೇಲೆ ನಿಜವಾಗಿಯೂ ಅರ್ಹರು ಎಂದು ಅನ್ನಿಸಿದರೆ ಮಾತ್ರ ಅವರಿಗೆ ಕಲಿಸಬಹುದು. ಅದನ್ನು ಆಸಕ್ತಿಯಿಂದ ಬೇಡಿಕೊಂಡು ಬಂದವರಿಗೆ ಮಾತ್ರ ನೀನು ಕಲಿಸು. ನೀನಾಗಿಯೇ ಯಾರ ಮೇಲೂ ಹೇರಲು ಹೋಗಬೇಡ. ಮಂತ್ರ ಸಿದ್ಧಿಯಾದ ಮೇಲೆ ಅನವಶ್ಯಕ ಪ್ರಯೋಗಗಳನ್ನು ಮಾಡಬೇಡ. ದೇವೀ ಪೂಜೆಯ ಆರಂಭದಲ್ಲಿ ಆಕೆಯ ಪರಿವಾರದೊಂದಿಗೆ, ಆಕೆಯ ವಾಹನದೊಂದಿಗೆ ಹೇಗೆ ದೇವಿಯನ್ನು ಆಹ್ವಾನಿಸುವೆಯೋ ಹಾಗೆಯೇ ಮುಗಿಸುವಾಗ ಅವಳನ್ನು ಆಕೆಯ ಸ್ವಸ್ಥಾನಕ್ಕೆ ಕಳಿಸಲು ಮರೆಯಬೇಡ. ಪ್ರತಿದಿನ ಒಮ್ಮೆ ಜಪ,ಧ್ಯಾನಕ್ಕೆ ಕುಳಿತರೆ ಹತ್ತುಸಾವಿರ ಜಪ ಮುಗಿಯುವವರೆಗೆ ಅಲ್ಲಿಂದ ಏಳಬೇಡ. ಪೂಜೆ ಮಾಡುವಾಗ ವಿಧಿವಿಧಾನಗಳು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದುದು 'ಭಾವ.' ತಾಯಿಯ ಭಾವ ಅತ್ಯಂತ ಕರುಣಾಭರಿತವಾದದ್ದು, ವಾತ್ಸಲ್ಯದಿಂದ ತುಂಬಿರುವಂತಹದ್ದು. 'ಅಮ್ಮಾ' ಎಂದು ಕರೆಯುವಾಗ ಹೃದಯ ತುಂಬಿ ಕರೆಯಬೇಕು. ಆಕೆಗೆ ಸಂಪೂರ್ಣವಾಗಿ ಶರಣಾಗಬೇಕು. ಸಮರ್ಪಣಾಭಾವ ಅತ್ಯಂತ ಮುಖ್ಯ. ಎಲ್ಲವನ್ನೂ ಆಕೆಗೆ ಅರ್ಪಿಸಿಕೊಳ್ಳಬೇಕು. ಗಮನ ಅತ್ತಿತ್ತ ಹೋದರೂ ಮತ್ತೆ ಎಳೆದು ತಂದು ಆಕೆಯ ಪಾದಕಮಲಗಳಲ್ಲಿ ಸ್ಥಿರವಾಗಿರಿಸು. ಯಾವ ಕಾರಣಕ್ಕೂ ನಿರಾಶನಾಗಬೇಡ. ನಿನ್ನ ಶ್ರದ್ಧೆಗೆ, ಉಪಾಸನೆಗೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ನಿನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಬೇಡ. ಹಣ್ಣುಹಂಪಲು ಅಥವಾ ಸ್ವಯಂಪಾಕವನ್ನೇ ಆಕೆಗೆ ನೈವೇದ್ಯವಾಗಿ ಅರ್ಪಿಸು. ನಾನು ಉತ್ತರಭಾರತದೆಡೆ ಹೊರಡುತ್ತಿದ್ದೇನೆ. ಸುಮಾರು ಇಪ್ಪತ್ತು ದಿನಗಳ ನಂತರ ಮತ್ತೆ ಬರುತ್ತೇನೆ. ಅಲ್ಲಿಯವರೆಗೂ ನಾನು ಹೇಳಿಕೊಟ್ಟ ವಿಧಿವಿಧಾನಗಳೊಂದಿಗೆ ನಿನ್ನ ಸಾಧನೆಯನ್ನು ಮುಂದುವರೆಸು. ನಿನಗೆ ಒಳ್ಳೆಯದಾಗಲಿ' ಎಂದು ಆಶೀರ್ವದಿಸಿ ಹೊರಟರು. ತಂದೆಯಂತೆ, ಗೆಳೆಯನಂತೆ ಜೊತೆಗಿದ್ದ ಗುರುಗಳು ಕೆಲದಿನಗಳ ಮಟ್ಟಿಗೆ ಹೊರಟಾಗ  ಒಮ್ಮೆಗೇ ಒಂಟಿತನ ನನ್ನನ್ನು ಕಾಡಿತು. ಇಲ್ಲಿಂದ ಮುಂದೆ ನನ್ನದು ಏಕಾಂಗಿ ಪಯಣ ! 

        ಪ್ರತಿದಿನ ಬೆಳಿಗ್ಗೆ ಮೂರು ಘಂಟೆಗೆ ಏಳುವುದು, ಪ್ರಾತಃಕ್ರಿಯೆಗಳನ್ನು ಮುಗಿಸಿ ದೇವಿಯ ಉಪಾಸನೆ ಮಾಡುವುದು. ಸಂಜೆಯ ನಂತರ ಒಂದಷ್ಟು ಕಾಲ ವ್ಯಾಯಾಮಶಾಲೆಗೆ ಹೋಗಿ ಗೆಳೆಯರೊಂದಿಗೆ ಕಳೆಯುವುದು.. ಇದು ನನ್ನ ದಿನಚರಿಯಾಗಿ ಹೋಯಿತು. ಒಂದು ವಾರ ಕಳೆಯುವುದರೊಳಗೆ ಒಂದಷ್ಟು ನಿರಾಸೆ, ಒಂದಷ್ಟು ಹತಾಶೆ ಮೂಡಲಾರಂಭಿಸಿದವು. 'ಏನಾಗುತ್ತಿದೆ? ಯಾವುದೇ ಅನುಭವಗಳು ಸಿಗುತ್ತಿಲ್ಲ. ಯಾಂತ್ರಿಕವಾಗಿ ಬದುಕು ಸಾಗುತ್ತಿದೆಯೇ? ಫಲಪ್ರಾಪ್ತಿಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸುಮ್ಮನೆ ಸಮಯ ಕಳೆಯುತ್ತಿದ್ದೇನೆಯೇ?' ಎಂಬೆಲ್ಲ ಪ್ರಶ್ನೆಗಳು ಮನಸ್ಸಿನೊಳಗೆ ನುಸುಳಲಾರಂಭಿಸಿದವು. ಹಾಗೆ ಅನಿಸಿದಾಗೆಲ್ಲ  ಮೈ ಕೊಡವಿ ಎಚ್ಚೆತ್ತುಕೊಳ್ಳುತ್ತಿದ್ದೆ. 'ಇಲ್ಲ, ನಾನಿದನ್ನು ಸಾಧಿಸಿಯೇ ತೀರುತ್ತೇನೆ' ಎಂದು ಹೇಳಿಕೊಂಡು ದೇಹಕ್ಕೆ ದಣಿವಾದರೂ ಛಲದಿಂದ ಮುಂದುವರೆಯುತ್ತಿದ್ದೆ. ಏನಾದರೂ ಸಲಹೆ ಕೇಳೋಣವೆಂದರೆ ಗುರುಗಳು ಬಳಿಯಲ್ಲಿಲ್ಲ. ಗೆಳೆಯರ ಬಳಿ ಚರ್ಚೆ ಮಾಡಲು ಮನಸ್ಸಿರಲಿಲ್ಲ. ಧೃಢನಿರ್ಧಾರದಿಂದ ಮುಂದೆ ನಡೆಯುತ್ತಿದ್ದೆ. ದಿನಗಳು ಕಳೆದಂತೆ ದೇವೀಮೂರ್ತಿಯೊಂದಿಗೆ ಒಂದು ಪವಿತ್ರ ಮಾತೃತ್ವದ ಅನುಬಂಧ ಬೆಳೆಯುತ್ತಿತ್ತು. 

        ಪೂಜಾವಿಧಾನದಲ್ಲಿ ಮೂರ್ತಿಯಲ್ಲಿ ದೇವಿಯನ್ನು ಆಕೆಯ ಪರಿವಾರಸಮೇತವಾಗಿ ಆವಾಹನೆ ಮಾಡಿ ಪಾದ್ಯ, ಅರ್ಘ್ಯ, ಘಂಟಾನಾದ, ಧೂಪ, ದೀಪ, ನೈವೇದ್ಯ ಇತ್ಯಾದಿಯಾಗಿ ಅರ್ಪಿಸುವುದು ವಾಡಿಕೆಯಾಗಿತ್ತು. ಆರಂಭದಲ್ಲಿ ವಿಧಿವಿಧಾನಗಳಂತೇ ಆಚರಿಸುತ್ತಿದ್ದರೂ ಕೆಲದಿನಗಳಲ್ಲೇ ಇವುಗಳನ್ನೆಲ್ಲಾ ಪ್ರೀತಿಯಿಂದ ಭಾವುಕನಾಗಿ ಅನುಭವಿಸುವಂತಾದೆ. 'ಅಮ್ಮಾ' ಎಂದು  ದೇವಿಯ ಮೂರ್ತಿಯನ್ನು ಎದೆಗಪ್ಪಿಕೊಂಡಾಗ ಕಣ್ಣಲ್ಲಿ ತಾನಾಗೇ ನೀರು ತುಂಬಿ ಬರುತ್ತಿತ್ತು. 

ಅದೊಂದು ದಿನ !
        ಶ್ರೀಚಕ್ರ ಯಂತ್ರವನ್ನು ಬರೆದಿರುವಂತಹ ತಾಮ್ರದ ಹಾಳೆಯ ಮೇಲೆ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾವಿಧಿಯನ್ನು ಪ್ರಾರಂಭಿಸಿದ್ದೆ. ದೇವಿಯ ಆವಾಹನೆಯನ್ನು ಮಾಡಿ ಆಕೆಗೆ ಅರ್ಘ್ಯಾದಿ ಉಪಚಾರಗಳನ್ನು ಮಾಡಲು ಸಿದ್ಧನಾಗಿದ್ದೆ. ಆರಂಭದಲ್ಲಿ ಪ್ರಾಣಪ್ರತಿಷ್ಠೆ ಮಾಡುವ ಮುನ್ನ ಒಂದು ವಿಚಿತ್ರ ಅನುಭವ ಘಟಿಸಿತು. ಪೂಜಾವಿಧಿಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಅಚ್ಚರಿ ಕಾದಿತ್ತು. 

       ಎದುರಿಗಿದ್ದ ಶ್ರೀಚಕ್ರ ಇದಕ್ಕಿದ್ದಂತೆ ಮಾಯವಾಗಿ ಹೋಯಿತು. ಆ ಜಾಗದಲ್ಲಿ ಹಲವಾರು ದೇವಾನುದೇವತೆಗಳು ಹಾಗೂ ಸಪ್ತರ್ಷಿಗಳು ಮುಂತಾದವರು ಕಾಣುತ್ತಿದ್ದರು. ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ಒಂದೆಡೆ ಸಮುದ್ರರಾಜನು ಗೋಚರಿಸಿದ. ಮಾರೀಚನೆಂಬ ಋಷಿಯ ಕಣ್ಣು ಕೆಂಪಾಗಿರುವುದನ್ನು ಗಮನಿಸಿದೆ. ಎಲ್ಲರೂ ಒಂದು ರೀತಿಯ ಚಡಪಡಿಕೆಯಲ್ಲಿದ್ದರು. ‘ಇವರೇಕೆ ಹೀಗಿದ್ದಾರೆ? ಏನಕ್ಕಾಗಿ ಕಾಯುತ್ತಿದ್ದಾರೆ?’ ಎಂದರೆ ಅವರೆಲ್ಲರೂ ನಾನು ಪ್ರಾಣಪ್ರತಿಷ್ಠೆ ಮಾಡಲಿರುವ ಘಳಿಗೆಗಾಗಿ ಕಾಯುತ್ತಿದ್ದಾರೆ ಎಂದು ಅದು ಹೇಗೋ ಮನವರಿಕೆಯಾಯಿತು. ಆಗ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸಿತು. ದೇವಾನುದೇವತೆಗಳು, ಋಷಿಮುನಿಗಳು ನನ್ನ ಬಾಯಿಂದ ಹೊರಬರುವ ಮಂತ್ರಕ್ಕಾಗಿ ಕಾಯುತ್ತಿದ್ದಾರೆ. (ಯಕಃಶ್ಚಿತ್ ನನ್ನ ಬಾಯಿಂದ!) 

        ನಾನು ಪ್ರಾಣಪ್ರತಿಷ್ಠೆಗೆ ಅನುವಾಗುತ್ತಿದ್ದಂತೆ ದೊಡ್ಡ ಘರ್ಜನೆಯೊಂದಿಗೆ ಸಿಂಹವೊಂದು ಅಂತರಿಕ್ಷದಿಂದೆಂಬಂತೆ ಬಂದು ಪ್ರತ್ಯಕ್ಷವಾಯಿತು. ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಸಡಗರ. ಇನ್ನೇನು ಸಾಕ್ಷಾತ್ ಜಗನ್ಮಾತೆ ಸಾಕಾರಗೊಳ್ಳುವ ಘಳಿಗೆಗಾಗಿ ಕ್ಷಣಗಣನೆ!! ಆ ಸಿಂಹದ ಗಾಂಭೀರ್ಯ, ಚೆಂದ ಹಾಗೂ ಮೃದುವಾದ ಕೇಶರಾಶಿಯನ್ನು ವರ್ಣಿಸುವುದು ಕಷ್ಟ. ಅಷ್ಟು ಮುದ್ದಾಗಿತ್ತು ಆ ಸಿಂಹ.

        ನನ್ನ ಬಾಯಿಂದ ಮಂತ್ರಗಳು ಯಾಂತ್ರಿಕವಾಗಿ ಹೊರಬೀಳುತ್ತಲೇ ಇದ್ದವು. ಪ್ರಾಣಪ್ರತಿಷ್ಠೆಯ ಮಂತ್ರವನ್ನು ಹೇಳಿದಾಗ ಭಗ್ಗನೆ ಬೆಳಕೊಂದು ಸಂಚರಿಸಿದಂತಾಯಿತು. ಆ ಬೆಳಕೇ ಕ್ರೋಢೀಕರಿಸಿ ಒಂದು ಸ್ನಿಗ್ಧ ಸೌಂದರ್ಯದ ಹೆಣ್ಣಾಗಿ, ನಂತರ ಚಾಮುಂಡಿಯಾಗಿ ಆ ಸಿಂಹದ ಮೇಲೆ ಆಸೀನವಾಯಿತು. ಆಕೆ ಕುಳಿತುಕೊಂಡಾಗ ಆಕೆಯ ಬಲಗಾಲು ಸ್ವಲ್ಪ ಬಾಗಿ ಕಾಲಿನ ತುದಿಬೆರಳುಗಳು ಮಾತ್ರ ನೆಲಕ್ಕೆ ತಾಗಿಕೊಂಡಿದ್ದನ್ನು ಗಮನಿಸಿದೆ. ನನ್ನ ಕಣ್ಣುಗಳು ಆ ಸುಂದರ ಹಾಗೂ ಮನೋಹರವಾದ ರಕ್ತವರ್ಣದಿಂದ ಮಿಳಿತಗೊಂಡತ್ತಿದ್ದ ಪಾದಗಳ ಮೇಲೆ ಕೇಂದ್ರಿಕೃತವಾಗಿದ್ದವು. ಒಬ್ಬ ಅತಿ ನಿಷ್ಣಾತ ಕಲಾವಿದ ಮಾತ್ರ ಆ ಕಾಲುಗಳ ಚಿತ್ರವನ್ನು ಕುಂಚದಲ್ಲಿ ಸೆರೆ ಹಿಡಿಯಬಲ್ಲನೇನೋ, ಅಂತಹ ಒಂದು ಮಧುರಭಾವ ಅಲ್ಲಿತ್ತು. ನನಗೆ ಆ ಕಾಲುಗಳ ಸೌಂದರ್ಯ ಎಷ್ಟು ಮಂತ್ರಮುಗ್ಧನನ್ನಾಗಿಸಿತ್ತೆಂದರೆ ಆಕೆಯ ಮುಖ ಹೇಗಿರುತ್ತದೆ ಎಂದು ನೋಡುವ ಬಯಕೆಯನ್ನೇ ಅದು ಮರೆಸಿತ್ತು.

        ಮಂತ್ರಗಳು ತನ್ನಂತಾನೇ ಬಾಯಿಂದ ಹೊರಬೀಳುತ್ತಲೇ ಇದ್ದವು. ನಾನು ಷೋಡಶೋಪಚಾರ ಮಾಡುವಾಗ ಅಲ್ಲಿದ್ದ ಪ್ರತಿಯೊಬ್ಬ ದೇವಾನುದೇವತೆಗಳು ಹಾಗೂ ಋಷಿಗಳು ಅದನ್ನು ಅನುಸರಿಸುತ್ತಿದ್ದರು. ಉದಾಹರಣೆಗೆ ನಾನು `ಪಾದ್ಯಂ ಸಮರ್ಪಯಾಮಿ' ಎಂದೊಡನೆ ಎಲ್ಲರೂ ದೇವಿಗೆ ಪಾದ್ಯವನ್ನು ಸಮರ್ಪಿಸುತ್ತಿದ್ದರು. ಈ ರೀತಿಯ ಎಲ್ಲ ವಿಧಿ ವಿಧಾನಗಳಿಗೂ ನಾನೇ ಕಾರಕನಾಗಿದ್ದೆ. ಕೆಲಕಾಲ ನಾನು ಈ ಗುಂಗಿನಲ್ಲಿಯೇ ಇದ್ದೆ. ಮತ್ತೆ ಒಮ್ಮೆ ಮೈಕೊಡವಿದಂತಾಗಿ ವಾಸ್ತವಕ್ಕೆ ಬಂದೆ.      

        ಅದೇ ಶ್ರೀಚಕ್ರ, ಅದೇ ಹೂಗಳು, ಅದೇ ಅಕ್ಷತೆ ಹೀಗೆ ಎಲ್ಲವೂ ಮತ್ತೆ ಕಣ್ಣ ಮುಂದೆ ಮೂಡಿದವು. ಮತ್ತೆ ಎಷ್ಟು ಪ್ರಯತ್ನ ಪಟ್ಟರೂ ಆ ದೃಶ್ಯ ಮರುಕಳಿಸಲಿಲ್ಲ. ನನ್ನನ್ನು ನಾನೇ ಹಳಿದುಕೊಂಡೆ 'ಅಯ್ಯೋ ಇಂತಹ ಮುಠ್ಠಾಳ ನಾನು ! ಒಮ್ಮೆಯಾದರೂ ಕತ್ತೆತ್ತಿ ಮುಖ ನೋಡಲಿಲ್ಲವೇ? ಯಾಕಮ್ಮಾ ನನಗೆ ಈ ಭಾಗ್ಯ ಕರುಣಿಸಲಿಲ್ಲ' ಎಂದು ಮೌನವಾಗಿ ರೋಧಿಸಿದೆ. ಬಹುಹೊತ್ತು ಕಾದಿದ್ದು ಒಲ್ಲದ ಮನಸ್ಸಿನಿಂದ ಅಂದಿನ ಪೂಜೆಯನ್ನು ಮುಗಿಸಿದ್ದೆ.            

Thursday, 10 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 8

                                                                 ನೇತ್ರಾವತಿ ನದಿ
        
        ದೀಕ್ಷೆ ಕೊಡುವ ದಿನಬಂದೇ ಬಿಟ್ಟಿತು. ಹಿಂದಿನ ದಿನ ರಾತ್ರಿ ಏನೋ ಪುಳಕ. ಮಾನಸ ಲೋಕದ ಹೊಸ ಪಯಣಕ್ಕೆ ಹಾತೊರೆಯುತ್ತಿದ್ದೆ. ಎಲ್ಲ ತಯಾರಿಗಳೂ ಮುಗಿದಿದ್ದವು. ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಮಧ್ಯರಾತ್ರಿಯ ಹೊತ್ತಿಗೆ ಕಿವಿಯ ಒಳಗೆ ಬಿಸಿ ಗಾಳಿ ನುಗ್ಗುತ್ತಿದ್ದ ಅನುಭವ. ನಿಧಾನವಾಗಿ ಆ ಬಿಸಿಗಾಳಿ ಕಿವಿಯಲ್ಲಿ ಮೂರು ಬಾರಿ 'ಓಂ ಸಿದ್ಧ ಗುರವೇ ನಮಃ' ಎಂದು ಹೇಳುತ್ತಿರುವಂತೇ ಭಾಸವಾಯಿತು. ಆಗ ಎಚ್ಚರಗೊಂಡೆ. ತಕ್ಷಣ ನಿದ್ದೆಗಣ್ಣಲ್ಲಿಯೇ ಪಕ್ಕದಲ್ಲಿದ್ದ ಪುಸ್ತಕದಲ್ಲಿ ಈ ಮಂತ್ರವನ್ನು ಬರೆದುಕೊಂಡು ಮಲಗಿದೆ. 
        ಅಲಾರಾಂ ಹೊಡೆಯುವ ಮೊದಲೇ  ಸುಮಾರು ಎರಡೂ ನಲವತ್ತಕ್ಕೆ ಎಚ್ಚರಗೊಂಡೆ. ಎಲ್ಲ ಸಾಮಗ್ರಿಗಳ ಸಮೇತ ನೇತ್ರಾವತಿ ತೀರದಲ್ಲಿ ಗುರುಗಳು ಹೇಳಿದ ಸ್ಥಳಕ್ಕೆ ಬಂದೆ. ಆ ಹೊತ್ತಿಗಾಗಲೇ ಅವರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಯಂತ್ರವೊಂದನ್ನು ಬರೆದಿದ್ದರು, ದೀಪವೊಂದನ್ನು ಹಚ್ಚಿಟ್ಟಿದ್ದರು. ಅವರ ಮುಖ ಅತ್ಯಂತ ಗಂಭೀರವಾಗಿತ್ತು. ನನ್ನನ್ನು ಕಂಡೊಡನೆ ನದಿಗೆ ಹೋಗಿ ಸ್ನಾನ ಮಾಡಿ ಬರಲು ಹೇಳಿದರು ಹಾಗೂ ನನ್ನ ದೇವಿಯ ಮೂರ್ತಿಯನ್ನು ನನ್ನಿಂದ ಪಡೆದುಕೊಂಡರು. ನಾನು ಸ್ನಾನ ಮಾಡುತ್ತಿದ್ದಾಗ ಅವರು ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಧ್ಯಾನಿಸುತ್ತಿದ್ದರು. ನಂತರ ನನ್ನ ಬಳಿ ಬಂದು ಮೂರ್ತಿಯನ್ನು ನನ್ನ ಕೈಗೆ ನೀಡುತ್ತಾ 'ಇದನ್ನು ತಲೆಯ ಮೇಲಿಟ್ಟುಕೊಂಡು ನೀರಿನಲ್ಲಿ ಮೂರುಬಾರಿ ಮುಳುಗಿ ಮೇಲೆ ಬಾ' ಎಂದು ಹೇಳಿದರು. 
        ಅಂತೆಯೇ ಮಾಡಿ ನಾನು ಒದ್ದೆ ಬಟ್ಟೆಯಲ್ಲಿಯೇ ಮೇಲೆ ಬಂದಾಗ ಮೂರ್ತಿಯನ್ನು ನನ್ನಿಂದ ಪಡೆದುಕೊಂಡು ಯಂತ್ರದ ಮೇಲೆ ಸ್ಥಾಪಿಸಿದರು. ನಂತರ ಕೆಲ ವಿಧಿವಿಧಾನಗಳು ನಡೆದವು. ಫಲತಾಂಬೂಲಗಳನ್ನು ಗುರುಗಳಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದೆ. ನನ್ನನ್ನು ಆಶೀರ್ವದಿಸುವಾಗ ಅವರ ಗಂಭೀರ ಮುಖ ಅಪಾರ ಕರುಣೆಯಿಂದ ಕೂಡಿದ್ದನ್ನು ನೋಡಿದೆ. ಮತ್ತೆ ಮುದ್ರೆಯಾದಿ ಕೆಲ ವಿಧಿ ವಿಧಾನಗಳನ್ನು ಮಾಡಿದ ನಂತರ ನಾನು ಕಾತುರದಿಂದ ಕಾಯುತ್ತಿದ್ದ,
ಮಂತ್ರೋಪದೇಶ ನೀಡುವ ಸಮಯ ಬಂದಿತು. 
        'ಈಗ ಬೀಜಾಕ್ಷರಸಹಿತ ಚಾಮುಂಡಿದೇವಿಯ ಮಂತ್ರವನ್ನು ನಿನಗೆ ಉಪದೇಶಿಸುತ್ತೇನೆ' ಎಂದು ಹೇಳಿ ಒಂದು ಬಿಳಿಯ ವಸ್ತ್ರವನ್ನು ನಮ್ಮಿಬ್ಬರ ತಲೆಯ ಮೇಲೆ ಹೊದಿಸಿ, ಮಂತ್ರೋಪದೇಶ ಮಾಡಿದರು. ಅದು ಅತ್ಯಂತ ಜನಪ್ರಿಯವಾದ ಚಾಮುಂಡಿಯ 'ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ' ಎಂಬ ಮಂತ್ರವಾಗಿತ್ತು. ಆದರೆ ಅದರೊಂದಿಗೆ ಇನ್ನೊಂದು ಬೀಜಾಕ್ಷರವನ್ನು ಸೇರಿಸಿ ನನಗೆ ಉಪದೇಶ ನೀಡಿದ್ದರು. ಆ ಬೀಜಾಕ್ಷರವನ್ನು ಗೋಪ್ಯವಾಗಿಡಲು ಹೇಳಿದರು. 
        ನಂತರ ದೇವಿಯ ವಿಗ್ರಹವನ್ನು ನನಗೆ ಕೊಡುತ್ತಾ 'ಇಂದು ನಾನು ಪ್ರಾಣಪ್ರತಿಷ್ಠೆ ಮಾಡಿದ್ದೇನೆ. ನಿನ್ನ ಪೂಜೆಯನ್ನು ಈ ಕ್ಷಣದಿಂದಲೇ ಶುರು ಮಾಡಬೇಕು' ಎಂದು ಪ್ರೀತಿಯಿಂದ ಹರಸಿದರು. ಪೂಜಾ ವಿಧಿವಿಧಾನವನ್ನು ಈ ಮೊದಲೇ ನನಗೆ ಹೇಳಿಕೊಟ್ಟಿದ್ದರು. ಹೆಮ್ಮೆಯಿಂದ ಹಾಗೂ ಪ್ರೀತಿಯಿಂದ ಆ ಮೂರ್ತಿಯನ್ನು ಎದೆಗವಚಿಕೊಂಡು ನಮ್ಮ ದೇಗುಲದತ್ತ ಹೆಜ್ಜೆ ಹಾಕಿದೆ. 

     
ನಮ್ಮ ಮಹಾಮಾಯಿ ದೇವಸ್ಥಾನದ ಒಂದು ಭಾಗದಲ್ಲಿ 'ಕೂಡಿ' ಎಂದು ಕರೆಯಲ್ಪಡುವ ಒಂದು ಪುಟ್ಟ ಕೋಣೆ ಇತ್ತು. ನಾನು ಅಲ್ಲಿಯೇ ತಂಗಿದ್ದೆ. ಚಿಕ್ಕದೊಂದು ಪೀಠವನ್ನು ಮೊದಲೇ ತಂದಿಟ್ಟಿದ್ದೆ. ಆ ಪೀಠದಲ್ಲಿ ಮೂರ್ತಿಯನ್ನು ಅಲಂಕರಿಸಿದೆ. ಪೂಜಾ ವಿಧಿವಿಧಾನಗಳನ್ನೆಲ್ಲ ಮುಗಿಸಿ ದೇವಿಯ ಮಂತ್ರವನ್ನು ಜಪಿಸಲು ಪ್ರಾರಂಭಿಸಿದೆ. ಕುಳಿತ ಮೇಲೆ ಒಟ್ಟು ಹತ್ತು ಸಾವಿರ ಬಾರಿ ಮಂತ್ರವನ್ನು ಪಠಿಸಬೇಕಿತ್ತು. ನಾನು  ಜಪಮಾಲೆಯನ್ನು ಕೆಳಗಿಟ್ಟಾಗ ಘಂಟೆ ಸಂಜೆ ನಾಲ್ಕಾಗಿತ್ತು. ಕಾಲುಗಳು ಮರಗಟ್ಟಿದಂತೆ ಭಾಸವಾಗಿತ್ತು. ಈ ದೇವೀ ಸಾಧನೆಯಲ್ಲಿ ಮುಂದುವರೆದಾಗ ಆದ ಒಂದು ಅದ್ಭುತ, ಅಪೂರ್ವ ಅನುಭವವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.




       

Wednesday, 9 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 7


       


        ದೀಕ್ಷೆ ನೀಡುವ ಎರಡು ದಿನಗಳ ಮುಂಚೆ ನಾನು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಹೇಳಿದರು. ನಾನು ತರಬೇಕಾದ ವಸ್ತುಗಳ ಪಟ್ಟಿ ನೀಡಿದರು. ಕೌಪೀನ ಧರಿಸಿ ಬಿಳಿಯ ಪಂಚೆ ಹಾಗೂ ಬಿಳಿಯ ವಸ್ತ್ರವನ್ನು ತರಲೂ ಹೇಳಿದ್ದರು. ಕೊನೆಗೆ ಶಿಖೆ(ಜುಟ್ಟು)ಯನ್ನು ಬಿಟ್ಟು ಕೇಶಮುಂಡನ ಮಾಡಿ ಬೆಳಗಿನ ಝಾವ ಮೂರು ಘಂಟೆಯ ಹೊತ್ತಿಗೆ ನೇತ್ರಾವತಿ ನದೀ ತೀರದ ಬಳಿ ಬರಲು ಸೂಚಿಸಿದರು. 
        ಬೇರೆ ಎಲ್ಲಾದಕ್ಕೂ ನನ್ನ ಸಹಮತಿ ಇದ್ದರೂ, 'ಈ ಜುಟ್ಟು ಬೇಕೇ?' ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಲೇ ಇತ್ತು. ಕೇಳಲು ಸಂಕೋಚ ಹಾಗೂ ಭಯ. 'ಹಾಗಾದರೆ ಬೇಡ ಬಿಡು' ಎಂದು ಕೋಪಿಸಿಕೊಂಡರೆ? ಎಂಬ ಆತಂಕಕ್ಕೆ ಒಳಗಾಗಿದ್ದೆ. ಸಾಕಷ್ಟು ಯೋಚಿಸಿ ನಯವಾಗಿ ಕೇಳಿದೆ 'ನನಗೊಂದು ಕುತೂಹಲ, ತಪ್ಪು ತಿಳಿದು ಕೊಳ್ಳಬೇಡಿ. ಮೂರು ಘಂಟೆಗೆ ಎದ್ದು ಬರುವುದು.. ಜುಟ್ಟು ಬಿಡುವುದು.. ಮುಂತಾದುವುಗಳಿಗೂ, ಸಾಧನೆಗಳಿಗೂ ನಿಜವಾಗಿ ಏನಾದರೂ ಸಂಬಂಧವಿದೆಯೇ? ನಾನು ನೀವು ಹೇಳಿದ ಹಾಗೆಯೇ ಖಂಡಿತ ಮಾಡುತ್ತೇನೆ, ಆದರೆ ಒಂದು ಸಣ್ಣ ಕುತೂಹಲ ಅಷ್ಟೇ..' 
  'ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಪುಸ್ತಕ ಓದಿದರೆ ಸಾಕಲ್ಲವೇ? ಸಮವಸ್ತ್ರ, ಹಾಜರಾತಿ ಮುಂತಾದವು ಏಕೆ ಬೇಕು ಅನ್ನಿಸಬಹುದು ಅಲ್ಲವೇ? ವಿದ್ಯೆಯ ಜೊತೆಯಲ್ಲಿ ಶಿಸ್ತು, ಸಂಯಮ, ಸಮಾನತೆಗಳನ್ನು ಕಲಿಸಲು ಇದು ನೆರವಾಗುತ್ತದೆ. ಅದೇ ರೀತಿ ತಾಂತ್ರಿಕ ವಿದ್ಯೆಗೂ ಮೆರಗು ಕೊಡುವುದು ಶಿಸ್ತುಬದ್ಧ ಸಂಯಮದ ಜೀವನ ಕ್ರಮ. ಇದಲ್ಲದೇ ಬ್ರಾಹ್ಮೀ ಮುಹೂರ್ತದ ವೈಶಿಷ್ಟ್ಯಹಾಗೂ ಮನಸ್ಸಿನ ತರಬೇತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಮುಂದೆ ಇದರ ಗುಟ್ಟು ನಿನಗೇ ಅರಿವಾಗುತ್ತದೆ' ಎಂದು ಕಿವಿಹಿಂಡಿದ ಹಾಗೆ ಹೇಳಿದರು. 
  ತಾರ್ಕಿಕವಾಗಿ ನಾನದನ್ನು ಒಪ್ಪಿಕೊಳ್ಳಲೇಬೇಕಿತ್ತು. ಆದರೆ ನನ್ನ ಮನಸ್ಸಿನಲ್ಲಿದ್ದ ದುಗುಡ ಬೇರೆಯೇ ಇತ್ತು. ಜುಟ್ಟು ಬಿಟ್ಟು ಓಡಾಡಿದರೆ ಏನೋ ಕಪಟಿಯ ಮುಖವಾಡ ಧರಿಸಿದಂತಾಗುತ್ತದೆಯೇನೋ ಎಂಬ ಶಂಕೆ ಇತ್ತು. ಏಕೆಂದರೆ 'ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂಬ ಕನಕದಾಸರ ಸಾಹಿತ್ಯದ ಸಾಲುಗಳು ತಲೆಯಲ್ಲಿ ಗಟ್ಟಿಯಾಗಿ ಕುಳಿತಿದ್ದವು. ಆದರೂ ಸುಮ್ಮನೆ ತಲೆಯಾಡಿಸಿದೆ. 
        'ಈ ಜಪಮಾಲೆಯನ್ನು ತೆಗೆದು ಕೋ' ಎಂದು ಹೇಳುತ್ತಾ ತಮ್ಮ ಜೋಳಿಗೆಯಿಂದ ಒಂದು ಜಪಮಾಲೆಯನ್ನು ನೀಡಿದರು. ಅದರ ಜೊತೆಯಲ್ಲಿಯೇ ಒಂದು ವಿಶೇಷ ಪರಿಮಳವಿರುವ ನೀರಿನ ಒಂದು ತಂಬಿಗೆಯನ್ನು ನೀಡಿದರು. ಮಂತ್ರವನ್ನು ಹೇಳುತ್ತಾ ನಿನ್ನ ಜಪಮಾಲೆಯನ್ನು ಇದರಲ್ಲಿ ಅದ್ದಿಟ್ಟುಕೋ, ರಾತ್ರಿ ಮಲಗುವ ಮುನ್ನ ಜಪಮಾಲೆಯನ್ನು ಹೊರಗೆ ತೆಗೆದು ಒಂದೆಡೆ  ತೂಗಿಹಾಕು. ಇದನ್ನು ಮರೆಯದೇ ದೀಕ್ಷೆಯ ದಿನ ತೆಗೆದುಕೊಂಡು ಬಾ' ಎಂದು ಹೇಳಿ, ಹೇಳಬೇಕಾದ ಮಂತ್ರವನ್ನು ಕಿವಿಯಲ್ಲಿ ಹೇಳಿದರು.
        ಗುರುಗಳು ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಒಟ್ಟುಮಾಡಿದೆ. ಅವರ ಎಲ್ಲಾ ಆಣತಿಗಳನ್ನು ಪರಿಪಾಲಿಸಿದೆ. ಕೊನೆಯದಾಗಿ ಕೇಶಮುಂಡನ ! 'ಭೂತದ ಓಣಿ'(ಆ ಓಣಿಯಲ್ಲಿ ದೈವಸ್ಥಾನವೊಂದು ಇದ್ದುದರಿಂದ ಅದನ್ನು ಭೂತದ ಓಣಿ ಎಂದು ಕರೆಯುತ್ತಾರೆ)ಯಲ್ಲಿದ್ದ ಕ್ಷೌರಿಕನ ಬಳಿ ಹೋಗಿ, ಕೇಶರಾಶಿಯಿಂದ ಕಂಗೊಳಿಸುತ್ತಿದ್ದ ನನ್ನ ತಲೆಯನ್ನು ನೀಡಿದೆ. ತಲೆಯೆತ್ತಿ ನೋಡಿದಾಗ ನನ್ನದೇ ಬೋಳುತಲೆ ಕಾಣಿಸಿತು. ತಲೆಯ ಹಿಂದೆ ಒಂದು ಕನ್ನಡಿ ಹಿಡಿದು ಆತ ತೋರಿಸಿದ. ಪ್ರಥಮಬಾರಿಗೆ ನನ್ನ ತಲೆಯ ಹಿಂದೆ ಜುಟ್ಟೊಂದನ್ನು ನೋಡಿದೆ. ನನಗೇ ನಗು ಬಂತು. ಮನಸ್ಸಿನಲ್ಲಿಯೇ ನಕ್ಕೆ. 



         ವಾಪಸ್ ಹೋಗುವಾಗ ದಾರಿಯಲ್ಲಿ ಹಳೆಯ ಗೆಳೆಯನೊಬ್ಬ ಎದುರಾಗಿ ಕೇಳಿದ 'ಪ್ರವೀಣಾ, ಒಂದು ಮಾತು ಕೇಳ್ತೀನಿ.  ಬೇಜಾರು ಮಾಡಿಕೋಬೇಡ. ನಿಜವಾಗಿ ಏನಾಯ್ತು? ಯಾವ ಹುಡುಗಿ ಕೈಕೊಟ್ಟಳು? ನನ್ನತ್ರ ಹೇಳು ಪರ್ವಾಗಿಲ್ಲ, ನಾನು ಯಾರ ಬಳಿಯೂ ಹೇಳುವುದಿಲ್ಲ' 
 ಇವನಿಗೆ ಏನೆಂದು ಉತ್ತರ  ಕೊಡುವುದು? ಯಾರೂ ಕೈಕೊಟ್ಟಿಲ್ಲ ಎಂದರೆ ಈತ ನಂಬುವುದಿಲ್ಲ, ಏಕೆಂದರೆ ಆತನಾಗಲೇ ಅದನ್ನು ತೀರ್ಮಾನಿಸಿಬಿಟ್ಟಿದ್ದ. ನಂತರ ಹೇಳಿದ 'ನಾನು ಯಾರ ಬಳಿಯೂ ಹೇಳುವುದಿಲ್ಲ' ಎಂಬ ಮಾತು ಅಪ್ಪಟ ಸುಳ್ಳಾಗಿತ್ತು. ಏಕೆಂದರೆ ಆತ 'ಆಲ್ ಇಂಡಿಯಾ ರೇಡಿಯೋ' ಎಂದು ಪ್ರಖ್ಯಾತನಾಗಿದ್ದ. 
        ಆದರೂ ಸೌಜನ್ಯಕ್ಕಾಗಿ ಹೇಳಿದೆ 'ಇಲ್ಲಪ್ಪ ಆ ಥರ ನಿಜವಾಗಿ ಏನೂ ಇಲ್ಲ'. 
  'ಒಂದಲ್ಲ ಒಂದು ದಿವಸ ನಿನ್ನ ಬಾಯಿ ಬಿಡಿಸ್ತೀನಿ' ಎಂದು ಹೇಳಿ ಹುಳ್ಳಗೆ ನಕ್ಕು ಹೋದ. 
        ನಾನು ನಮ್ಮ ದೇವಸ್ಥಾನ ತಲುಪುವವರೆಗೂ ಎಲ್ಲರೂ ಅಚ್ಚರಿಯಿಂದ ನನ್ನನ್ನು ನೋಡುವವರೇ! ಗುಸಗುಸ  ಮಾತನಾಡುವವರೇ! ಇನ್ನು ಮುಂದೆ ನನ್ನ ದಾರಿ ನನ್ನದು ಎಂದುಕೊಂಡು ಸಾಗುತ್ತಿರುವುದು ಅಷ್ಟೇ ಎಂದು ಮನಸ್ಸಿನಲ್ಲೇ ಅಂದುಕೊಂಡು ರಪರಪನೆ ಹೆಜ್ಜೆ ಹಾಕಿದೆ. 

Friday, 4 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 6

      
   
                          ನಾನು ಮನಸಾರೆ ಆರಾಧಿಸಿ ಪೂಜಿಸಿದ ನನ್ನ ಪ್ರೀತಿಯ ದೇವಿ     

         ಮಾರನೇ ದಿನ ಮಹಾ ತಾಂತ್ರಿಕರಾದ ಆ ಗುರುಗಳನ್ನು ಭೇಟಿಯಾದೆ. ಅವರು ಅಜ್ಞಾತವಾಗಿ ಇರಬಯಸುತ್ತಿದ್ದುದರಿಂದ ಸದ್ಯಕ್ಕೆ ಅವರನ್ನು 'ಸಿದ್ಧ' ಗುರುಗಳೆಂದೇ ಕರೆಯುತ್ತೇನೆ. ಒಂದು ಫೋಟೋ ತೆಗೆಸಿಕೊಳ್ಳಲಿಲ್ಲ. ಪ್ರಚಾರವನ್ನು ಬಯಸಲಿಲ್ಲ. ತಮ್ಮ ಕೆಲಸಮುಗಿದೊಡನೆ ಹೃಷಿಕೇಶಕ್ಕೋ, ಹರಿದ್ವಾರಕ್ಕೋ ಮರಳುತ್ತಿದ್ದರು. ಅಲ್ಲಿ ಧ್ಯಾನಕ್ಕೆ ಕುಳಿತರೆ,ಕಣ್ಣು ಬಿಟ್ಟಾಗ ಯಾರಾದರೂ ಹಣ್ಣು ಹಂಪಲು ಮುಂದೆ ಇಟ್ಟಿದ್ದರೆ ಅದನ್ನು ತಿನ್ನುತ್ತಿದ್ದರು, ಇಲ್ಲವಾದಲ್ಲಿ ಅಂದು ಉಪವಾಸ. ಇಂತಹ ವ್ಯಕ್ತಿಗಳು ನೋಡಲು ಸಿಗುವುದೂ ದುರ್ಲಭ. 
        ನನಗೆ ತಾಂತ್ರಿಕ ದೀಕ್ಷೆ ನೀಡಲು ಕೇಳಿಕೊಂಡೆ. 'ಏನು ಕೆಲಸ ಮಾಡಿಕೊಂಡಿದ್ದೀಯಪ್ಪಾ?' ಎಂದು ಕೇಳಿದರು. 
       ಆಗ ನಾನು ನನ್ನದೇ ಆದ 'ಫ್ಯಾನ್ಸಿ ಸ್ಟೋರ್' ಇಟ್ಟುಕೊಂಡಿದ್ದೆ. ಅಲ್ಲದೇ ದೂರದರ್ಶನದಲ್ಲಿ ಅನೌನ್ಸರ್ ಆಗಿ ಕೆಲಸ ಮಾಡುತ್ತಿದ್ದೆ. ಕೆಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. 
 'ನಾನು ದೀಕ್ಷೆ ಕೊಟ್ಟರೆ ಈ ಕೆಲಸಗಳಿಗೆ ಏನು ಮಾಡುತ್ತೀ?' ಕೇಳಿದರು ಅವರು.  
  'ಕೆಲಸ ಹಾಗೂ ಸಾಧನೆ ಎರಡನ್ನೂ ನಾನು ಒಟ್ಟಿಗೆ ತೂಗಿಸಬಲ್ಲೆ' ಬಹಳ ಆತ್ಮವಿಶ್ವಾಸದಿಂದ ಹೇಳಿದೆ.
 'ಇಲ್ಲ,ಇಲ್ಲ... ಎರಡನ್ನೂ ತೂಗಿಸಲು ಸಾಧ್ಯವಿಲ್ಲ. ತಾಂತ್ರಿಕ ಸಾಧನೆ, ಕಠಿಣವಾದ ಸಾಧನೆ. ದಿನದ ಬಹುತೇಕ ಸಮಯವನ್ನು ಅದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ನೀನು ಇದನ್ನೆಲ್ಲಾ ಬಿಟ್ಟು ಬರಲು ಸಾಧ್ಯವೇ?' ನನ್ನ ಕಣ್ಣುಗಳನ್ನೇ ನೋಡುತ್ತಾ ಕೇಳಿದರು ಸಿದ್ಧ ಗುರುಗಳು. 
        ಒಂದು ಕ್ಷಣ ಯೋಚಿಸಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ, ದೂರದರ್ಶನದಿಂದಾಗಿ ಸಾಕಷ್ಟು ಜನಪ್ರಿಯನಾಗಿದ್ದೆ. ಒಂದು ಕ್ಷಣ ಯೋಚಿಸಿದೆ, ಅಷ್ಟೇ! ಇಂತಹ ಗುರುಗಳು, ಬಿಟ್ಟರೆ ಮತ್ತೆ ಸಿಗಲಾರರು ಎಂದುಕೊಂಡು 'ಎಲ್ಲವನ್ನೂ ಬಿಟ್ಟು ಬರುತ್ತೇನೆ' ಎಂದು ಹೇಳಿಬಿಟ್ಟೆ. ಆಗಿನ್ನೂ ಮದುವೆಯಾಗಿರದ ಕಾರಣ ಈ ತೀರ್ಮಾನವನ್ನು ದೃಢವಾಗಿ ತೆಗೆದುಕೊಂಡೆ, ಏಕೆಂದರೆ ಮದುವೆಯಾದ ಮೇಲೆ ಇದು ಸಾಧ್ಯವಾಗದಿದ್ದರೆ ನನ್ನ ಜೀವನದ ಬಹು ದೊಡ್ಡ ಆಸೆ ಹಾಗೂ ಕುತೂಹಲಗಳಿಗೆ ತಣ್ಣೀರು ಎರಚಬೇಕಾಗಬಹುದು ಎಂದು ಅನ್ನಿಸಿತ್ತು. 
        ಮನೆಯಲ್ಲಿ ಈ ವಿಚಾರವನ್ನು ತಿಳಿಸಿದಾಗ ಅಪ್ಪ ಅಮ್ಮನಿಗೆ ಅಚ್ಚರಿ !  ಅಷ್ಟು ಸುಲಭಕ್ಕೆ ಅವರು ಒಪ್ಪಲು ಸಿದ್ಧರಿರಲಿಲ್ಲ. 'ಕೇವಲ ಎರಡು ವರ್ಷ, ಮತ್ತೆ ಖಂಡಿತ ಹಿಂತಿರುಗಿ ಬರುತ್ತೇನೆ...' ಎಂದೆಲ್ಲಾ ಹೇಳಿ ಅಂತೂ ಇಂತೂ ಒಪ್ಪಿಸಿದೆ. ದೂರದರ್ಶನದ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಅಂಗಡಿಯನ್ನು ಮಾರಿದೆ. ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ  ರೂಪಾಯಿಗಳು ನಿವ್ವಳವಾಗಿ ದೊರೆತವು. ತಿಂಗಳಿಗೆ ಇನ್ನೂರಕ್ಕೂ ಹೆಚ್ಚು ರೂಪಾಯಿಗಳು ಬಡ್ಡಿಯಾಗಿ ಸಿಗುವಂತೆ ಅದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಟ್ಟೆ. 
        ಸಿದ್ಧ ಗುರುಗಳ ಬಳಿ ಹೋಗಿ ಎಲ್ಲವನ್ನೂ ವಿವರಿಸಿದೆ. ಅವರಿಗೂ ಅಚ್ಚರಿಯೇ ಆಯಿತು. ಬಹುಷಃ ನಾನು ಎಲ್ಲವನ್ನೂ ಬಿಟ್ಟು ಬರಬಹುದೆಂದು ಅವರು ಕೂಡಾ ಅಂದುಕೊಂಡಿರಲಿಕ್ಕಿಲ್ಲ. 'ಹೃಷಿಕೇಶಕ್ಕೆ ಬರುತ್ತೀಯಾ?' ಎಂದು ಅವರು ಕೇಳಿದಾಗ ನನ್ನ ಮನದಾಸೆಯನ್ನು ತೋಡಿಕೊಂಡೆ. 
'ನಮ್ಮದೇ ಆದ ಬಂಟವಾಳ ಮಹಾಮಾಯಿ ಸನ್ನಿಧಿಯಲ್ಲಿ ತಾವು ದೀಕ್ಷೆ ಕೊಟ್ಟರೆ ನನ್ನಂತಹ ಅದೃಷ್ಟವಂತ ಬೇರಿಲ್ಲ' ಎಂದು ಅಲವತ್ತುಕೊಂಡೆ. 
'ಎಲ್ಲಿಯಾದರೂ ಕೊಡಬಹುದು ಆದರೆ ನಾನು ಪೂರ್ಣ ಸಮಯ ನಿನ್ನೊಡನೆ ಇರಲು ಆಗುವುದಿಲ್ಲ.... ಚಿಂತೆಯಿಲ್ಲ, ನಾನು ದೀಕ್ಷೆ ಕೊಟ್ಟ ನಂತರ ಆಗಾಗ ಬಂದು ನಿನ್ನ ಸಾಧನೆಗೆ ಸಹಾಯ ಮಾಡುತ್ತಿರುತ್ತೇನೆ. ನಿನ್ನ ಆಸಕ್ತಿ ನನಗೆ ಇಷ್ಟವಾಯಿತು. ಮುಂದಿನ ಸೋಮವಾರದ ಹೊತ್ತಿಗೆ ನಾನು ನನ್ನ ಕೆಲವು ಜವಾಬ್ದಾರಿಗಳನ್ನು ಮುಗಿಸುತ್ತೇನೆ. ನಂತರ ನಿಮ್ಮ ಊರಿಗೆ ಹೋಗೋಣ' ಎಂದರು. 
        ಮಂಗಳೂರಿನಲ್ಲಿ ಅವರಿಗೆ ಗೊತ್ತಿರುವ ಒಂದು ಸ್ಥಳಕ್ಕೆ ಹೋಗಿ, ಅಲ್ಲಿ ಒಂದು ದೇವಿಯ ಮೂರ್ತಿಯನ್ನು ಆರಿಸಿಕೊಂಡು ಅದನ್ನು ನನ್ನ ಕೈಯ್ಯಲ್ಲಿತ್ತರು.' ತಾಂತ್ರಿಕ ಸಾಧನೆಯ ಸಮಯದಲ್ಲಿ ಇದು ನಿನ್ನ ಆರಾಧ್ಯದೈವವಾಗಲಿದೆ.ಇದು ನಿನಗೆ ನನ್ನ ಕಾಣಿಕೆ. ವಾರಾಂತ್ಯದೊಳಗೆ ನಿನಗೆ ದೀಕ್ಷೆ ನೀಡುತ್ತೇನೆ' ಎಂದು ಹೇಳಿ ಆಶೀರ್ವದಿಸಿದರು. ಮುಂದೇನಾಯಿತು? ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ. 
        ಅದಕ್ಕೂ ಮುನ್ನ ನಾನು ನನ್ನ 'ದೇವರು ಧರ್ಮ,ಏನಿದರ ಮರ್ಮ' ಪುಸ್ತಕದಲ್ಲಿ ಬರೆದ ಕೆಲವು ಸಾಲುಗಳನ್ನು ಇಲ್ಲಿಯೂ ಕಾಣಿಸಲು ಇಚ್ಚಿಸುತ್ತೇನೆ. ನಾನು ಸಾಧನೆ ಮಾಡಿದ್ದೇನೆ, ಆದರೆ 'ಸಾಧಕನ ಪಟ್ಟ' ನನಗೆ ಒಗ್ಗುವುದಿಲ್ಲ.ದೇವರ ಬಗ್ಗೆ ಅಧ್ಯಯನ ಮಾಡಿದ್ದೇನೆ, ಆದರೆ 'ಸಾಧು-ಸಂತ'ನಲ್ಲ. ಮನಃಶಾಸ್ತ್ರದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದೇನೆ, ಆದರೆ ಮನೋವಿಜ್ಞಾನದ ಡಿಗ್ರಿ ಸರ್ಟಿಫಿಕೇಟು ಪಡೆದವನಲ್ಲ. 'ಅರಿಷಡ್ವರ್ಗ'ಗಳೆಂದು ಕರೆಯಲ್ಪಡುವ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು 'ಅರಿ'ಗಳೆಂದು ಕರೆಯದೇ  'ಮಿತ್ರ'ರೆಂದು ಕರೆದು ಅವುಗಳನ್ನು ದೂರ ಮಾಡದೇ ಹಿತವಾಗಿ, ಮಿತವಾಗಿ ಅಪ್ಪಿಕೊಂಡು ಎಲ್ಲರಂತೇ ಬದುಕಬೇಕೆಂದು ಬಯಸಿ ಹಾಗೆಯೇ ಬದುಕುತ್ತಿರುವ ಶ್ರೀಸಾಮಾನ್ಯರಲ್ಲೊಬ್ಬ ಸಾಮಾನ್ಯ. 

Wednesday, 2 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 5

        ಸಮ್ಮೋಹಿನಿ ವಿದ್ಯೆ ಕಲಿತ ಮೇಲೆ ಮನಸ್ಸಿನ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದೆ ಹಾಗೂ ಮನಸ್ಸಿನ ಶಕ್ತಿಯ ಆಗಾಧತೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದೆ. ಹಲವಾರು ಮನೋವಿಜ್ಞಾನಿಗಳೊಡನೆ ಸತತ ಸಂಪರ್ಕ ಇಟ್ಟುಕೊಂಡಿದ್ದೆ. ಅದು ೧೯೮೦ರ ಸಮಯ. ಆ ವಯಸ್ಸಿನಲ್ಲಿ ನಾನು ಮಾಡುತ್ತಿದ್ದ ಪ್ರಯೋಗಗಳನ್ನು ಕಂಡು ಅವರು ನನ್ನ ಬೆನ್ನು ತಟ್ಟುತ್ತಿದ್ದರು.
    ಶ್ರೀ ಲಲಿತಾ ವಿದ್ಯಾಮಂದಿರ

        ಕ್ರಮೇಣ ಆಧ್ಯಾತ್ಮಿಕತೆಯತ್ತ ಮನಸ್ಸು ವಾಲತೊಡಗಿತು. ದೈವ ಸಾಕ್ಷಾತ್ಕಾರದ ದೃಷ್ಟಿಯಿಂದಲ್ಲ, ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ. ಮೊದಲು ನನ್ನನ್ನು ಸೆಳೆದದ್ದು 'ಯೋಗಾಭ್ಯಾಸ ಹಾಗೂ ಧ್ಯಾನ'. ತ್ಯಾಗರಾಜನಗರದ 'ಶ್ರೀ ಲಲಿತಾ ವಿದ್ಯಾಮಂದಿರ 'ವನ್ನು ಯೋಗ ಕಲಿಯುವ ದೃಷ್ಟಿಯಿಂದ ಸೇರಿಕೊಂಡಿದ್ದೆ. 

         ೧೯೮೩ರ ಹೊತ್ತಿಗೆ ಮನಸ್ಸಿಗೆ ಸಂಬಂಧ ಪಟ್ಟಂತೆ ಲೇಖನಗಳನ್ನು ಬರೆಯತೊಡಗಿದ್ದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿದ್ದವು.
        ಯೋಗಶಾಲೆಗೆ ಸೇರುವಾಗ ಗುರುಗಳಾದ ಚಿ. ವಿಶ್ವೇಶ್ವರಯ್ಯ ಅವರ ಬಳಿ ನನ್ನ ಮನದ ಆಸೆಯನ್ನು ವ್ಯಕ್ತ ಪಡಿಸಿದ್ದೆ. ಮನಸ್ಸಿನ ಬಗ್ಗೆ ಅಧ್ಯಯನ ಮಾಡುವ ಹಾಗೂ ಮನಸ್ಸಿನ ಶಕ್ತಿಯನ್ನು ಅರಿಯಲು ನೆರವಾಗುವ ಎಲ್ಲಾ ವಿದ್ಯೆಯನ್ನು ಕಲಿಯಲು ನನಗಿರುವ ಹಂಬಲವನ್ನು ಹೇಳಿಕೊಂಡೆ.

                   ಶ್ರೀ. ಚಿ. ವಿಶ್ವೇಶ್ವರಯ್ಯನವರು

         ಯೋಗ ಹಾಗೂ ಧ್ಯಾನದ ಬಗ್ಗೆ ನನಗೆ ತರಬೇತಿ ಆರಂಭವಾಯಿತು. ಧ್ಯಾನದ ಬಗ್ಗೆ ನನಗೆ ಅತೀವ ಆಸಕ್ತಿಯಿತ್ತು. ಸಗುಣ, ನಿರ್ಗುಣ ಧ್ಯಾನಗಳನ್ನು ಮನಸಾರೆ ಅನುಭವಿದೆ. ನಂತರ ತ್ರಾಟಕ ವಿದ್ಯೆ, ಕಣ್ಣಿನ ವ್ಯಾಯಾಮ ಹಾಗೂ ಮನಸ್ಸಿನ ಏಕಾಗ್ರತೆಯ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಸಹಕಾರಿಯಾಯಿತು. 
        ಈ ಬಗ್ಗೆ  'ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1' ರಿಂದ 'ಅಧ್ಯಾತ್ಮಿಕ ಸಾಧನೆಯ ಅನುಭವಗಳು 9 - ಸಾಕಾರ ಧ್ಯಾನ' ದವರೆಗೆ 'ಬ್ಲಾಗ್'ನಲ್ಲಿ ಸವಿವರವಾಗಿ ಬರೆದಿದ್ದೇನೆ.ಆಸಕ್ತರು ಓದಬಹುದು. 
        ನನ್ನ ಗುರುಗಳಿಗೆ ಬಹಳಷ್ಟು ಸಂತರ, ಸಾಧುಗಳ ಪರಿಚಯವಿದ್ದುದರಿಂದ ಹಲವಾರು ಸಾಧಕರು ಅವರನ್ನು ಭೇಟಿಯಾಗಲು ಬರುತ್ತಿದ್ದರು. ಅವರಲ್ಲಿ ಯಾರಾದರೂ ವಿಶೇಷ ಸಾಧಕರಿದ್ದರೆ ಗುರುಗಳು ನನಗೆ ಅವರ ಬಗ್ಗೆ ಹೇಳುತ್ತಿದ್ದರು ಹಾಗೂ ಕಲಿಯುವ ಆಸಕ್ತಿ ಇದ್ದರೆ ಅವರ ಬಳಿ ಕಲಿಯಬಹುದು ಎಂದೂ ಹೇಳುತ್ತಿದ್ದರು. ಒಮ್ಮೆ 'ಈವತ್ತು ಬಂದ ವ್ಯಕ್ತಿ ಸಾಮಾನ್ಯದವರಲ್ಲ, ಕಾಯಕಲ್ಪ ಚಿಕಿತ್ಸೆಯಲ್ಲಿ ಇವರನ್ನು ಮೀರಿದವರಲ್ಲ.ಅವರಿಗೆ ಸುಮಾರು ಎಪ್ಪತ್ತು ವರ್ಷಗಳಾದರೂ ಮುವ್ವತ್ತರ ಗಂಡಾಳಿನಂತೇ ಕಾಣುತ್ತಾರೆ' ಎಂದು ಹೇಳಿದರಲ್ಲದೇ 'ಕಾಯಕಲ್ಪ ಚಿಕಿತ್ಸೆಯನ್ನು ಕಲಿಯಲು ಕನಿಷ್ಠ ಎರಡು ವರ್ಷ ಅವರ ಬಳಿ ಇರಬೇಕಾಗುತ್ತದೆ. ಯೌವನ ಬಾಡದಿರಲು ಅಂಗಸಾಧನೆ, ಆಹಾರ, ಮನಸ್ಸಿನ ತರಬೇತಿ, ಮುಖ ಹಾಗೂ ದೇಹಕ್ಕೆ ಅಂಗಮರ್ದನ ಮಾಡುವ ವಿಶೇಷ ಪ್ರಕ್ರಿಯೆಯನ್ನು ಕಲಿಸುತ್ತಾರೆ. ಕಲಿಯುವ  ಆಸಕ್ತಿ ಇದ್ದರೆ ಅವರ ಬಳಿ ಮಾತನಾಡುತ್ತೇನೆ ' ಎಂದರು. 
        ಆ ವ್ಯಕ್ತಿ ನಮ್ಮ ಗುರುಗಳು ಹೇಳಿದಂತೇ ಕಟ್ಟುಮಸ್ತಾದ ಯುವಕನಂತೆಯೇ ಕಾಣುತ್ತಿದ್ದರು. ಎಪ್ಪತ್ತು ವರ್ಷವೆಂದು ಖಂಡಿತಾ ಹೇಳಲಾಗುತ್ತಿರಲಿಲ್ಲ. 'ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ' ಎಂದು ಹೇಳಿದೆ. ನನಗೆ ಮನಸ್ಸಿನ ಬಗ್ಗೆ ಎಲ್ಲವನ್ನೂ ತಿಳಿದು ಕೊಳ್ಳುವ ಆಸೆ ಇದ್ದುದರಿಂದ ಹಾಗೂ ಈ ವಿದ್ಯೆಯಲ್ಲಿ ಮನಸ್ಸಿಗಿಂತ ದೇಹದ ಬಗ್ಗೆ ಹೆಚ್ಚಿನ ಆದ್ಯತೆ ಇದೆ ಅನ್ನಿಸಿ, ಏಕೋ ಈ ವಿದ್ಯೆ ಕಲಿಯಲು ಮನಸ್ಸಾಗಲಿಲ್ಲ. ಬಹುಶಃ ಈಗ ಕೇಳಿದರೆ ಖಂಡಿತಾ ಹೌದು ಎನ್ನುತ್ತಿದ್ದೆನೋ ಏನೋ !
     ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಸೂರ್ಯನಮಸ್ಕಾರ

        ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ನಮ್ಮ ಯೋಗಶಾಲೆಗೆ ಬಂದಾಗ, ಇಳಿವಯಸ್ಸಿನಲ್ಲೂ ಅವರ ದೇಹಸೌಷ್ಠವ ಹಾಗೂ ಚುರುಕುತನವನ್ನು ಕಂಡು ಬೆರಗಾದೆ. ಇವರೂ ಕಾಯಕಲ್ಪ ಚಿಕಿತ್ಸೆ ಮಾಡಿಕೊಂಡಿರಬಹುದೇನೋ ಎಂದುಕೊಂಡು ಗುರುಗಳನ್ನು ಕೇಳಿದೆ. ಅದಕ್ಕೆ ಅವರು ನಗುತ್ತಾ 'ಅವರಿಗೆ ಯಾವ ಕಾಯಕಲ್ಪ ಚಿಕಿತ್ಸೆಯ ಅಗತ್ಯವೂ ಇಲ್ಲ. ಷಟ್ಕರ್ಮಗಳನ್ನು ಕಲಿಯುವ ಆಸಕ್ತಿ ಇದ್ದರೆ ಅವರಿಗಿಂತ ಗುರು ಬೇರೆ ಯಾರೂ ಇಲ್ಲ' ಎಂದು ಹೇಳಿದರು.    
        ರಾಘವೇಂದ್ರಸ್ವಾಮಿಗಳು ಷಟ್ಕರ್ಮದ ಬಗ್ಗೆ ವಿವರವಾದ ವಿವರಣೆ ನೀಡಿ ಕಲಿಯುವ ಆಸಕ್ತಿ ಇದ್ದರೆ ಮಲ್ಲಾಡಿಹಳ್ಳಿಗೆ ಬರುವಂತೆ ತಿಳಿಸಿದರು. ಆದರೆ ನಾನು ಮಲ್ಲಾಡಿಹಳ್ಳಿಗೆ ಹೋಗಿ ಕಲಿಯುವ ಪರಿಸ್ಥಿತಿ ಇಲ್ಲದಿದ್ದುದರಿಂದ ಅವರಿಂದ ಆಶೀರ್ವಾದ ಪಡೆದು ಅವರಿಂದಲೇ ತರಬೇತಿ ಪಡೆದ ಗುರುರಾಜ ತಂತ್ರಿ ಅವರಿಂದ ನೌಲಿ, ಧೌತಿ ಮುಂತಾದ ಷಟ್ಕರ್ಮಗಳ ತರಬೇತಿ ಪಡೆದೆ. 
        ಒಂದು ದಿನ ಗುರುಗಳು 'ತಾಂತ್ರಿಕ ವಿದ್ಯೆ ಕಲಿಯುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ನನ್ನ ಕಿವಿಗಳು ನೆಟ್ಟಗಾದವು. ಏಕೆಂದರೆ ತಂತ್ರ ವಿದ್ಯೆಯ ಬಗ್ಗೆ ಬಹಳಷ್ಟು ಓದಿ, ಕೇಳಿ ತಿಳಿದಿದ್ದೆ. ಮನಸ್ಸಿನ ಸುಪ್ತಶಕ್ತಿಯನ್ನು ತಂತ್ರ ವಿದ್ಯೆಯ ಮೂಲಕ ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯ ಎಂದು ತಾಂತ್ರಿಕರೊಬ್ಬರು ಹಿಂದೊಮ್ಮೆ ಹೇಳಿದ್ದರು. ಆದ್ದರಿಂದ ತಕ್ಷಣ 'ಹೌದು, ಆಸಕ್ತಿಯಿದೆ... ತುಂಬಾ ಆಸಕ್ತಿಯಿದೆ' ಎಂದು ಉತ್ಸುಕನಾಗಿ ಹೇಳಿದೆ. ಮಾರನೆಯ ದಿನ ಆ ನನ್ನ 'ತಂತ್ರ' ಗುರುಗಳನ್ನು ಭೇಟಿಯಾದೆ. ನನ್ನ ಜೀವನದ ಅತಿ ಮುಖ್ಯ ಆಧ್ಯಾಯ ಅಲ್ಲಿಂದ ಪ್ರಾರಂಭವಾಯಿತು. ಮುಂದಿನ ವಿಷಯ ಮುಂದಿನ ಕಂತಿನಲ್ಲಿ....