Tuesday, 15 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 7 - ಯೋಗಶಾಲೆಯ ಸವಿನೆನಪುಗಳು

ಯೋಗಾಸನ ಹಾಗೂ ಪ್ರಾಣಾಯಾಮದ ಬಗ್ಗೆ ಬರೆಯುತ್ತಿದ್ದ ಹಾಗೆ ನನಗೆ ಒಮ್ಮೆ ನನ್ನ ಯೋಗಶಾಲೆಗೆ ಹೋಗುವ ಬಯಕೆ ಉಂಟಾಯಿತು. ಇಂದು ಭೇಟಿ ನೀಡಿದೆ. ಮನಸ್ಸಿಗೆ ಒಂದು ತಂಪು ಅನುಭವವನ್ನು ಅದು ನೀಡಿತು. ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. It was Nostalgic! 

ನನ್ನ ಯೋಗಶಾಲೆ, ಲಲಿತಾ ವಿದ್ಯಾಮಂದಿರ.


ನನ್ನ ಗುರುಗಳಾದ ಶ್ರೀ ಚಿ.ವಿ. ಅಯ್ಯನವರು. 




ಗೋಡೆಯ ಮೇಲೆ ರಾರಾಜಿಸುತ್ತಿರುವ ಪಾತಂಜಲಿ ಅಷ್ಟಾಂಗ ಯೋಗ ಸೂತ್ರದ ಫಲಕಗಳು. 














ಗುರುಗಳು ಕಲಿಸಿಕೊಟ್ಟ ಯೋಗಮುದ್ರೆಗಳು.






ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು ಹಲವಾರು ಬಾರಿ ಭೇಟಿಯಿತ್ತು, ಸೂಕ್ಷ್ಮವಿಕಾರಗಳನ್ನು ಕಲಿಸಿ ಸ್ಪೂರ್ತಿ ನೀಡುತ್ತಿದ್ದರು.

ಭುಜಂಗಾಸನ 

ಸೂರ್ಯನಮಸ್ಕಾರ 

ಯೋಗಚಕ್ರ 

ಯೋಗಮಂದಿರದಲ್ಲೊಂದು ರಾಮಮಂದಿರ.


ತಾರಸಿಯ ಮೇಲೊಂದು ಯಾಗಶಾಲೆ.

ತ್ರಾಟಕ ಹಾಗೂ ಧ್ಯಾನ ಮಾಡಲು ಅನುಕೂಲವಾಗುವ ನೆಲಮಾಳಿಗೆಯಲ್ಲಿರುವ ಕತ್ತಲಕೋಣೆಗೆ ಪ್ರವೇಶ ಇಲ್ಲಿಂದ.


ಅಂದು ಯೋಗಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ತೆಗೆದ ಕೆಲಚಿತ್ರಗಳು ಹಾಗೂ ಇಂದಿನ ಕೆಲಚಿತ್ರಗಳು.






Saturday, 12 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 6 - ತ್ರಾಟಕ

         ಯಾವುದೇ ವಸ್ತುವನ್ನು ಎವೆಯಿಕ್ಕದೆ ನೋಡುವುದಕ್ಕೆ 'ತ್ರಾಟಕ' ಎಂದು ಕರೆಯುತ್ತಾರೆ. ಯೋಗಾಭ್ಯಾಸ ಸಾಧನೆಯಲ್ಲಿ ಓಂಕಾರದ ಚಿತ್ರ, ಕೆಲವು ಯಂತ್ರಗಳ ಚಿತ್ರ ಹಾಗೂ ಬೆಂಕಿಯ ಚಿಕ್ಕ ಜ್ಯೋತಿಯನ್ನು ಏಕಾಗ್ರತೆಯಿಂದ ನೋಡುವುದು ಹೇಗೆ? ಎಂದು  ಬಹುತೇಕವಾಗಿ ಕಲಿಸಲಾಗುತ್ತದೆ. ಓಂಕಾರದ ಚಿತ್ರ ಎವೆಯಿಕ್ಕದೇ ಸಾಧ್ಯವಾದಷ್ಟು ಹೊತ್ತು ನೋಡಿ ನಂತರ ಕಣ್ಣು ಮುಚ್ಚಿ ಅದನ್ನು ಒಳಗಣ್ಣುಗಳಿಂದ ನೋಡಲು ಪ್ರಯತ್ನಿಸುವುದು. ಓಂಕಾರದ ಚಿತ್ರವನ್ನು ನೋಡುವಾಗ, ಓಂಕಾರವನ್ನು ಬರೆಯುವಾಗ ಹೇಗೆ ಬರೆಯುತ್ತೇವೆಯೋ ಅದೇ ಮಾರ್ಗವನ್ನು ಕಣ್ಣುಗಳಿಂದ ಅನುಸರಿಸುವುದು. ನಂತರ ಕಣ್ಣು ಮುಚ್ಚಿಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸುವುದು. ಅಂತೆಯೇ ಯಂತ್ರಗಳನ್ನು ಹೇಗೆ, ಎಲ್ಲಿಂದ ಎಲ್ಲಿಗೆ ಅನುಸರಿಸುತ್ತಾ ನೋಡುವುದು ಎಂಬ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುತ್ತದೆ. ಬಹಳ ಉಪಯುಕ್ತವಾಗಿ ನೆರವಾಗುವುದು ಜ್ಯೋತಿಯನ್ನು ನೋಡಿ ಅದನ್ನು ಸಾಕ್ಷಾತ್ಕರಿಸುವುದು. 
         ನಮ್ಮ ಯೋಗಶಾಲೆಯಲ್ಲಿ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕೊಠಡಿಯನ್ನು ನಿರ್ಮಿಸಲಾಗಿತ್ತು. ಪೂರ್ತಿ ಕತ್ತಲು ತುಂಬಿದ ಕೋಣೆ. ಅಲ್ಲಿ ಹೊಂಗೇ ಎಣ್ಣೆ ತುಂಬಿದ ದೀಪವನ್ನು ಇಡಲಾಗುತ್ತದೆ. ಅದರ ಹಳದಿ ಬಣ್ಣದ ಜ್ಯೋತಿಯನ್ನು ನೀಲಿ ಬಣ್ಣ ಕಾಣುವಷ್ಟು ಸಣ್ಣದಾಗಿ ಮಾಡಲಾಗುತ್ತದೆ. ನಂತರ ಅದರ ಎದುರಿಗೆ ಕುಳಿತು ಎವೆಯಿಕ್ಕದೇ ನೋಡುತ್ತಾ ಕುಳಿತುಕೊಳ್ಳಬೇಕು. ಕಣ್ಣಿಂದ ನೀರು ಹರಿಯುತ್ತಿದ್ದರೂ ತಡೆದು ಕೈಲಾದಷ್ಟು ಹೊತ್ತು ರೆಪ್ಪೆ ಮುಚ್ಚದೇ ಜ್ಯೋತಿಯನ್ನು ಗಮನಿಸುತ್ತಿರಬೇಕು. ಕಣ್ಣು ರೆಪ್ಪೆಗಳು ಒಂದಾದ ಮೇಲೆ ಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸಬೇಕು. ಅಭ್ಯಾಸ ಮಾಡಿದಂತೇ, ಕಣ್ಣು ತೆರೆದಾಗ ಕಂಡಷ್ಟೇ ಸ್ಪುಟವಾಗಿ ಜ್ಯೋತಿ ಕಾಣಿಸಲಾರಂಭಿಸುತ್ತದೆ. ನಾ ಕಂಡ ಇನ್ನೂ ಒಂದು ಅಚ್ಚರಿ ಏನೆಂದರೆ, ಕಣ್ಣು ಮುಚ್ಚಿ ಧ್ಯಾನಿಸುತ್ತಿರುವಾಗ ಜ್ಯೋತಿ ನಂದಿ ಹೋಗಿದ್ದು ಕಂಡು ಕಣ್ಣು ಬಿಟ್ಟರೆ ಅಲ್ಲಿ ಎದುರುಗಡೆ ಇರುವ ದೀಪದ ಜ್ಯೋತಿಯೂ ಆಗತಾನೇ ನಂದಿರುವುದು ಗೊತ್ತಾಗುತ್ತಿತ್ತು. 
         ಇಲ್ಲಿ ಹೊಂಗೇ ಎಣ್ಣೆ ಉಪಯೋಗಿಸುವುದು ಹಾಗೂ ಬತ್ತಿಯನ್ನು ನೀಲಿ ಬಣ್ಣದ ಜ್ಯೋತಿ ಬರುವವರೆಗೂ ಇಳಿಸುವುದರ ಉದ್ದೇಶ ಕಣ್ಣಿಗೆ ತಂಪು ನೀಡುವುದು. ಇದನ್ನು ಅಭ್ಯಸಿಸುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಹಾಗೂ ಕಣ್ಣಿನ ಸಂಬಂಧ ರೋಗಗಳು ನಿಯಂತ್ರಣಗೊಳ್ಳುತ್ತವೆ. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಹಾಗೂ 'ಧ್ಯಾನ' ಮಾಡಲು ಇದು ಬಹಳಷ್ಟು ಸಹಾಯವಾಗುತ್ತದೆ.  
         ಕಣ್ಣಿಗೆ ಸಂಬಂಧ ಪಟ್ಟ ಹಾಗೆ ನಾನು ಅಭ್ಯಸಿಸಿದ ಇನ್ನೊಂದು ವಿದ್ಯೆ 'ಚಾಕ್ಷುಮತೀ ವಿದ್ಯೆ'. ಇದರ ಸಾಧನೆ ಸ್ವಲ್ಪ ಕಷ್ಟಕರವಾಗಿದೆ. ಈ ಸಾಧನೆಯಲ್ಲಿರುವಾಗ ಕೇವಲ ಗೋಧಿ ಹಿಟ್ಟಿನ ಪದಾರ್ಥಗಳನ್ನೇ ಸೇವಿಸಬೇಕಿತ್ತು. ಒಂದಷ್ಟು ಮಂತ್ರಗಳ ಅನುಷ್ಠಾನ ಕ್ರಮವಿದೆ. ಅದಲ್ಲದೇ ಸೂರ್ಯನ ಏಳು ಬಣ್ಣಗಳಲ್ಲಿ ಒಂದೊಂದೇ ಬಣ್ಣದ ನೀರಿನಲ್ಲಿ ಹಂತ ಹಂತವಾಗಿ ಸೂರ್ಯನ ಕಿರಣಗಳ ಪ್ರತಿಫಲವನ್ನು ನೋಡಬೇಕಾಗುತ್ತದೆ. (ಇಲ್ಲೂ ಕೂಡಾ ಮಂತ್ರ ಹಾಗೂ ಏಕಾಗ್ರತೆಗೆ ಮಹತ್ವವಿದೆ.) ಇದರ ಅಭ್ಯಾಸದ ನಂತರ ಉದಯಿಸುತ್ತಿರುವ ಹಾಗೂ ಅಸ್ತಮಿಸುತ್ತಿರುವ ಸೂರ್ಯನನ್ನು ಏಕಾಗ್ರತೆಯಿಂದ ನೋಡಬೇಕಾಗುತ್ತದೆ. ಕೊನೆಯದಾಗಿ ಮಧ್ಯಾಹ್ನದ ಸೂರ್ಯನನ್ನು ಕೆಲ ಕಾಲ ನೋಡುವ ಪಾಠವೂ ಇದೆ. ಈ ಪ್ರಯೋಗವನ್ನು ಸೂಕ್ತ ಗುರು ಪಕ್ಕದಲ್ಲಿಲ್ಲದೇ ಯಾರೂ ಪ್ರಯತ್ನಿಸಬೇಡಿ. ಈ ವಿದ್ಯೆಯನ್ನು ಕರಗತ ಮಾಡಿದ ಮೇಲೆ ಗುರುಗಳು 'ನಿನಗೆ ಬಹುತೇಕ ಜನರ ಹಾಗೆ ನಲವತ್ತು ವರ್ಷಕ್ಕೆ ಕನ್ನಡಕ ಹಾಕುವ ಅವಶ್ಯಕತೆ ಬರುವುದಿಲ್ಲ, ಅಂತೆಯೇ ಕಣ್ಣಿಗೆ ಸಂಬಂಧಿಸಿದ ಬೇನೆಗಳು ಬರುವುದಿಲ್ಲ' ಎಂದರು. ನಾನು reading glass ಕೈಗೆತ್ತಿಕೊಂಡದ್ದು ನನ್ನ ಐವತ್ತೈದನೇ ವಯಸ್ಸಿಗೆ. ಮನೆಯಲ್ಲಿ ಎಲ್ಲರಿಗೂ conjunctivitis ( ಮದ್ರಾಸ್ ಐ ) ಬಂದು, ಎಲ್ಲರ ಕಣ್ಣೂ ಕೆಂಪಾಗಿತ್ತು. ಆಗ ನನಗೆ ಗುರುಗಳ ಹೇಳಿದ ಮಾತು ನೆನಪಾಗಿ ನನಗೆ ಬರಬಹುದೇನೋ ನೋಡೋಣ ಎಂದು ಕುತೂಹಲದಿಂದ ಕಾಯುತ್ತಿದ್ದೆ. ಆದರೆ ಬರಲಿಲ್ಲ, ಖುದ್ದಾಗಿ ನನ್ನ ತಮ್ಮನ ಕೆಂಪು ಕಣ್ಣುಗಳ ಮೇಲೆ ನನ್ನ ಕಣ್ಣುಗಳನ್ನು ಇಟ್ಟು ಉಜ್ಜಿ ನೋಡಿದರೂ ಆ ರೋಗ ನನಗೆ ಬರಲಿಲ್ಲ !

Friday, 11 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 5 - ಮುದ್ರೆ, ಬಂಧತ್ರಯ ಹಾಗೂ ಷಟ್ಕರ್ಮಗಳು


          ಕೆಲವು ಮಿತ್ರರು ಹಾಗೂ ಹಿತೈಷಿಗಳು ಪ್ರಾಣಾಯಾಮದ ಬಗ್ಗೆ ಬರೆದ ಹಿಂದಿನ ಕಂತನ್ನು ಕುರಿತು ಮಾತಿಗಿಳಿದರು.
'ಗುರುಮುಖೇನ ಕಲಿಯಬೇಕು ಎಂದಿದ್ದೀರಿ, ಆದರೆ ಅವುಗಳನ್ನು ಆಚರಿಸುವ ವಿಧಿ-ವಿಧಾನಗಳನ್ನು, ಆಚರಿಸುವ ಬಗೆಯನ್ನು ಹೇಳುತ್ತಿದ್ದೀರಿ. ಇದನ್ನು ಓದಿಯೇ ಕೆಲವರು ಪ್ರಯೋಗ ಮಾಡಲು ಹೋರಾಡುವುದಿಲ್ಲವೇ?'
'ಈ ಪ್ರಯೋಗಗಳನ್ನು ಯಾರೂ ಗುರುಗಳ ಸಹಾಯವಿಲ್ಲದೇ ಪ್ರಯೋಗಿಸಬೇಡಿ ಎಂದು ಸ್ಪಷ್ಟವಾಗಿ ಹೇಳುತ್ತೇನೆ' ಎಂದೆ.
'ಹಾಗಂದಾಗಲೇ ಕುತೂಹಲ ಜಾಸ್ತಿಯಾಗಿ ಪ್ರಯೋಗಿಸಲು ಹೋಗುವವರೇ ಹೆಚ್ಚು' ಎಂದರು ಟ್ವಿಟ್ಟರ್ ಗೆಳೆಯ ಕಿರಣ್.
'ಯಾವ ರೀತಿ ಆಚರಿಸಬೇಕು ಎಂದು ಹೇಳದಿದ್ದರೆ ಒಳಿತೇನೋ' ಎಂದು ಹೇಳಿದ್ದು ಅರುಣ್ ಮೇಷ್ಟ್ರು. 
         ನಾನು ಬರೆಯುವುದನ್ನು ಮುಂದೂಡಿ ಸ್ವಲ್ಪ ಯೋಚಿಸಿದೆ. ನನ್ನ ಉಪನಯನದ ಸಮಯದಲ್ಲಿ ಆಚಾರ್ಯರು 'ಯಾರಾದರೂ ನುರಿತ ಗುರುಮುಖೇನ ಕಲಿಯುವುದೊಳಿತು' ಎಂದು ಹೇಳಿದ್ದೂ ನೆನಪಿಗೆ ಬಂತು. ಆರಂಭದಲ್ಲಿ ನನಗಾದ ತೊಂದರೆಗಳು ಹಾಗೂ ನನ್ನ ಗುರುಗಳು ಅದರ ಬಗ್ಗೆ ಕಾಳಜಿ ವಹಿಸಿ ಅದನ್ನು ನಿವಾರಿಸಿದ ಬಗೆ ನೆನಪಿಗೆ ಬಂತು. ಆದ್ದರಿಂದ ಸದ್ಯಕ್ಕೆ ನಾನೇನು ಮಾಡಿದೆ ಎಂದು ಸ್ಥೂಲವಾಗಿ ವಿವರಿಸಿ, ಪ್ರಾಣಾಯಾಮ ಹಾಗೂ ಪ್ರಕೃತಿ ಶಕ್ತಿಯ ಸಂಬಂಧದ ಕುರಿತಾಗಿ ಹೇಳಲು ಬಯಸುತ್ತೇನೆ.
         'ನಾಡಿಶೋಧನ' ಮುಂತಾದ ಪ್ರಾಣಾಯಾಮದ ನಂತರ ನನಗೆ 'ಭಸ್ತ್ರಿಕ' ಪ್ರಾಣಾಯಾಮದ ವೇಳೆ ಸ್ವಲ್ಪ ತೊಂದರೆ ಎದುರಾಯಿತು. ಕಮ್ಮಾರನ ತಿದಿಯಿಂದ ಗಾಳಿ ಹೊರಸೂಸುವ ಹಾಗೆ ಮೂಗಿನ ಹೊಳ್ಳೆಗಳಿಂದ ಶ್ವಾಸವನ್ನು ವೇಗವಾಗಿ ಹೊರತಳ್ಳುತ್ತಾ ಇರುವುದು. ಹೀಗೆ ಮಾಡುತ್ತಿರುವಾಗ ಅಷ್ಟೇ ವೇಗವಾಗಿ ಶ್ವಾಸವು ಒಳಗೆ ಹೋಗುತ್ತಿರುತ್ತದೆ.ಇಪ್ಪತ್ತು ಸಲ ಶ್ವಾಸವನ್ನು ಹೊರಗೆಡವಿದ ನಂತರ ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಂಡು ಉಸಿರುಗಟ್ಟಿ ಕೂರುವುದು. ಇದು 'ಒಂದು ಮಂಡಲ'ವೆನಿಸಿಕೊಳ್ಳುತ್ತದೆ. ಗುರುಗಳು ಮೊದಲು ಕೆಲವು ದಿನ ಎರಡು ಮಂಡಲಗಳನ್ನು ಮಾತ್ರ ಮಾಡಲು ಹೇಳಿದ್ದರು. ಅತ್ಯಂತ ಉತ್ಸಾಹದಿಂದ ನಾನು ಐದು, ಕೆಲವೊಮ್ಮೆ ಹತ್ತು ಮಂಡಲಗಳವರೆಗೂ ಮಾಡುತ್ತಿದ್ದೆ. ಪರಿಣಾಮವಾಗಿ ಒಂದು ದಿನ ತಲೆಸುತ್ತು ಬಂದು ನೆಲಕ್ಕೆ ಜಾರಿದೆ. ವಿಷಯ ತಿಳಿದ ಗುರುಗಳು ಎದೆಯನ್ನು ನಿಧಾನವಾಗಿ ನೇವರಿಸಿ, ಹಣೆಯಿಂದ  ತಲೆಯ ಹಿಂಭಾಗದವರೆಗೂ ನೇವರಿಸುತ್ತಾ ಒಂದು ಮಂತ್ರವನ್ನು ಪಠಿಸುತ್ತಾ ಯಥಾಸ್ಥಿತಿಗೆ ನನ್ನನ್ನು ತಂದರು. ಹಾಗೂ ಹೇಳಿದ ಸೂಚನೆ ಮೀರಿ ಅತಿರೇಕದ ಪ್ರಯೋಗಗಳು ಮಾಡುವುದು ಬೇಕಿಲ್ಲ ಎಂದು ನಯವಾಗಿ ಬೆದರಿಸಿದರು. ಮುಂದೆ ಹಲವು ಕ್ಲಿಷ್ಟಕರವಾದ ಪ್ರಾಣಾಯಾಮಗಳನ್ನು ಕೂಡಾ ಮಾಡಿದೆನು.
          ನಂತರ ಮಹಾಮುದ್ರೆ, ಮಹಾವೇಧ, ಯೋಗ ಮುದ್ರೆ, ಖೇಚರೀ ಮುದ್ರೆ ಮುಂತಾದ  ಮುದ್ರೆಗಳು ಹಾಗೂ ಮೂಲಬಂಧ, ಜಾಲಂಧರ ಬಂಧ ಹಾಗೂ ಉಡ್ಡಿಯಾನ ಬಂಧ ಹೀಗೆ ಬಂಧತ್ರಯಗಳ ಬಗ್ಗೆ ವಿವರಿಸಿ ಹೇಳಿ ತರಬೇತಿ ನೀಡಲಾಯಿತು. ಇದಲ್ಲದೇ ಧೌತಿ, ಬಸ್ತಿ, ನೇತಿ, ನೌಲಿ, ತ್ರಾಟಕ, ಕಪಾಲಭಾಟಿ ಮುಂತಾದ ಷಟ್ಕರ್ಮಗಳನ್ನು ವಿಧಿವತ್ತಾಗಿ ಕಲಿತೆ. ಇಲ್ಲಿಯೂ ನನಗೆ ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿ ಸಿಲುಕಿಸಿದ್ದು ತಾಡನ ಕ್ರಿಯೆ ಹಾಗೂ ಕಪಾಲಭಾಟಿ.
ತಾಡನ ಕ್ರಿಯೆ ಅಭ್ಯಸಿಸುವುದು ಹೇಗೆ ಎಂದು ವಿವರಿಸುವ ಬದಲಿಗೆ ನನಗೇನಾಯಿತು ಎಂದು ಹೇಳಲು ಇಚ್ಛಿಸುತ್ತೇನೆ. ಮೂಲಾಧಾರದಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಲು ಈ ಕ್ರಿಯೆಯನ್ನು ಮಾಡಲಾಗುತ್ತದೆ. ಮೂಲಾಧಾರದ ಮೇಲಿನ ಬಲವಾದ ಬಡಿತದಿಂದಾಗಿ ಮೈಯ್ಯೆಲ್ಲಾ ಬಿಸಿಯಾಗಿ ರಕ್ತವೆಲ್ಲಾ ತಲೆಯತ್ತ ಚಿಮ್ಮುತ್ತಿರುವ ಅನುಭವವಾಗಿತ್ತು. ಮತ್ತೆ ನನ್ನ ಗುರುಗಳು ಅದನ್ನು ಒಂದು ತಹಬಂದಿಗೆ ತಂದರು. ಇದೆ ರೀತಿಯ ಅನುಭವ ಕಪಾಲಭಾಟಿಯಲ್ಲೂ ನನಗಾಯಿತು.
         ಕಣ್ಣುಗಳಿಗೆ ಬಲ ನೀಡುವ, ಏಕಾಗ್ರತೆಯನ್ನು ಹೆಚ್ಚಿಸುವ, ಷಟ್ಕರ್ಮಗಳಲ್ಲಿ ಒಂದಾದ 'ತ್ರಾಟಕ'  ಎಂಬ ಕರ್ಮದ ಬಗ್ಗೆ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. 







   

Wednesday, 9 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 4 - ಪ್ರಾಣಾಯಾಮ

ಪ್ರಾಣಾಯಾಮ 
          ಯೋಗದ ಪ್ರಕಾರ ಪ್ರಾಣಾಯಾಮ ಎಂದರೆ ಉಸಿರಾಟದ ಮೇಲೆ ಹಿಡಿತ ಸಾಧಿಸುವುದು. ಪ್ರಾಣದ ಉಳಿವಿಗೆ ಉಸಿರಾಡುವುದು ಅತ್ಯಗತ್ಯ. ಉಸಿರಾಟ ನಮ್ಮ ಅರಿವಿಲ್ಲದೇ ನಡೆಯುವ ಒಂದು ನಿರಂತರ ಕ್ರಿಯೆ. ಪ್ರಾಣಾಯಾಮದ ಪ್ರಥಮ ಪಾಠವೆಂದರೆ ಅದನ್ನು ಅರಿವಿಗೆ ತರುವುದು ಅಥವಾ ಗಮನಿಸುವುದು. ನಮ್ಮ ಉಸಿರಾಟವನ್ನು ಗಮನಿಸುತ್ತಾ ಕುಳಿತಾಗಲೇ ಮನಸ್ಸು ಏಕಾಗ್ರತೆಯತ್ತ ಜಾರುತ್ತದೆ. ಅನುಲೋಮ-ವಿಲೋಮ ಒಂದು ಸರಳವಾದ  ಪ್ರಾಣಾಯಾಮ. ಪದ್ಮಾಸನ ಅಥವಾ ಇನ್ನಾವುದೇ ನಮಗೆ ಒಂದಷ್ಟು ಕಾಲ ಹಿತವಾಗಿ ಕುಳಿತುಕೊಳ್ಳಬಹುದಾದ ಆಸನದಲ್ಲಿ ಕುಳಿತು ಒಂದೈದು ನಿಮಿಷ ಕೇವಲ ಉಸಿರಾಟವನ್ನು ಗಮನಿಸುತ್ತಾ ಕುಳಿತುಕೊಳ್ಳುವುದು. ನಂತರ ಬೆನ್ನು ಮೂಳೆಯನ್ನು ನೇರವಾಗಿರಿಸಿ, ಸಂಪೂರ್ಣವಾಗಿ ಉಸಿರನ್ನು ಹೊರಹಾಕುವುದು (ರೇಚಕ).
 ಈ ಸಮಯದಲ್ಲಿ ಎದೆ ಹಾಗೂ ಹೊಟ್ಟೆಯನ್ನು ಆದಷ್ಟು ಒಳಗೆ ಎಳೆದುಕೊಂಡು ಉಸಿರನ್ನು ಮೂಗಿನ ಹೊಳ್ಳೆಗಳ ಮೂಲಕ ಸಾಧ್ಯವಾದಷ್ಟು ಹೊರಹಾಕಲು ಪ್ರಯತ್ನಪಡಬೇಕು. ನಂತರ ಉಸಿರನ್ನು ಮೂಗಿನ ಹೊಳ್ಳೆಗಳ ಮೂಲಕ ಸಾಧ್ಯವಾದಷ್ಟು ತುಂಬಿಕೊಳ್ಳಲು ಪ್ರಯತ್ನ ಪಡುವುದು (ಪೂರಕ). ಈ ಸಮಯದಲ್ಲಿ ಎದೆ ಹಾಗೂ ಹೊಟ್ಟೆಯಲ್ಲಿ ಆದಷ್ಟು ಗಾಳಿಯನ್ನು ತುಂಬಿಕೊಳ್ಳುತ್ತಿದ್ದೇನೆ ಎಂಬ ಭಾವನೆಯನ್ನು ಇಟ್ಟುಕೊಂಡು ಎದೆ ಹಾಗೂ ಹೊಟ್ಟೆ ಉಬ್ಬಿಕೊಳ್ಳುವವರೆಗೂ ತುಂಬಬೇಕು. ಆಸನ ಅಥವಾ ಪ್ರಾಣಾಯಾಮ ಮಾಡುವ ಮೊದಲು ಹೊಟ್ಟೆಯನ್ನು ಖಾಲಿ ಇಟ್ಟುಕೊಳ್ಳುವುದು ಮುಖ್ಯ. ಇದು ಅಭ್ಯಾಸವಾದಂತೇ ಎಳೆದುಕೊಂಡ ಪ್ರಾಣವಾಯುವನ್ನು ಒಳಗೆ ಹಿಡಿದಿಟ್ಟುಕೊಳ್ಳುವ ವಿಧಾನವನ್ನು (ಕುಂಭಕ) ಹೇಳಿಕೊಡಲಾಗುತ್ತದೆ. 
          ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ ರೇಚಕ ಹಾಗೂ ಪೂರಕವನ್ನು ಅತ್ಯಂತ ನಿಧಾನವಾಗಿ ಮಾಡಬೇಕಾಗುತ್ತದೆ. ಅಂದರೆ ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಂಡು, ನಿಧಾನವಾಗಿ ಹೊರಗೆ ಬಿಡಬೇಕಾಗುತ್ತದೆ. ದಿನಕಳೆದಂತೇ ಉಸಿರನ್ನು ಒಳಗೆ ಹಿಡಿದಿಟ್ಟುಕೊಳ್ಳುವ ಅವಧಿ ವಿಸ್ತರಿಸುತ್ತಾ ಹೋಗುತ್ತದೆ. ಕುಂಭಕದ ಅವಧಿಯ ಎರಡರಷ್ಟು ಅವಧಿಯಲ್ಲಿ ಪೂರಕ ಹಾಗೂ ರೇಚಕವನ್ನು ವಿಸ್ತರಿಸಬೇಕಾಗುತ್ತದೆ. ಉದಾಹರಣೆಗೆ ಮುವ್ವತ್ತು ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿದರೆ ಉಸಿರನ್ನು ತೆಗೆದುಕೊಳ್ಳುವ ಕಾಲ ಹಾಗೂ ಉಸಿರನ್ನು ಬಿಡುವ ಕಾಲ ಒಂದು ನಿಮಿಷದವರೆಗೆ ವಿಸ್ತರಿಸಬೇಕಾಗುತ್ತದೆ. 
          ಈ ಆರಂಭಿಕ ಪ್ರಾಣಾಯಾಮ, ಉಸಿರಾಟದ ಮೇಲೆ ನಮಗೆ ನಿಯಂತ್ರಣವನ್ನು ತಂದುಕೊಡುತ್ತದೆ. ಪ್ರಾಣಾಯಾಮದಿಂದ ಏನು ಲಾಭ? ಕೆಲವು ಸಂಕೀರ್ಣ ಪ್ರಾಣಾಯಾಮಗಳನ್ನು ಗುರುಮುಖೇನ ಏಕೆ ಕಲಿಯಬೇಕು? ಇದರ ಗುಟ್ಟೇನು? ಆಗ ಆಗುವ ಅನುಭವಗಳೇನು? ಮುಂದಿನ ಭಾಗದಲ್ಲಿ ಬರೆಯುತ್ತೇನೆ. 

Monday, 31 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು 3 - ಅಷ್ಟಾಂಗಯೋಗ

          ಮೊತ್ತ ಮೊದಲು ಪಾತಂಜಲಿ (ಪತಂಜಲಿ) ಯೋಗಸೂತ್ರವನ್ನು ನನಗೆ ಬೋಧಿಸಲಾಯಿತು. ಪಾತಂಜಲಿ ಮಹರ್ಷಿಗಳ ಅಷ್ಟಾಂಗಯೋಗವನ್ನು ಸರಳವಾಗಿ ವಿವರಿಸಲು ಇಚ್ಛಿಸುತ್ತೇನೆ. ಇದು ದೇಹ, ಮನಸ್ಸು ಹಾಗೂ ಜ್ಞಾನಕ್ಕೆ 
ಸಂಬಂಧಪಟ್ಟಿರುವಂತಹದ್ದು. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಿದರೆ ಜ್ಞಾನ ಪ್ರಾಪ್ತವಾಗುವುದು. 
          ಏನಿದು ಜ್ಞಾನ ? ಈ ಜ್ಞಾನ ಸಾಮಾನ್ಯವಾದದ್ದಲ್ಲ. ಆದರೆ ಇದನ್ನು ವಿವರಿಸಿ ಹೇಳುವುದೂ ಸುಲಭವಲ್ಲ. ಇದೊಂದು ರೀತಿಯಲ್ಲಿ ಸಮಗ್ರ ಅರಿವು ಎಂದು ಹೇಳಬಹುದು. ಪ್ರಪಂಚದ ಅರಿವು, ಜೀವನದ ಅರಿವು, ಜೀವದ ಅರಿವು, ಆತ್ಮದ ಅರಿವು, ಪರಮಾತ್ಮನ ಅರಿವು... ಹೀಗೆ. ಯಮ ನಿಯಮದ ಎಂಟು ಅಂಗಗಳಲ್ಲಿ ಮನಸ್ಸಿಗೆ ಅತ್ಯಂತ ಪ್ರಾಮುಖ್ಯತೆ ಉಂಟು. ಮೊದಲ ನಾಲ್ಕು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಮಗಳು ದೇಹ ಹಾಗೂ ಅದರ ಆರೋಗ್ಯಕ್ಕೂ ಸಂಬಂಧ ಪಟ್ಟಿವೆ. 'ಶರೀರಮಾದ್ಯಮ್ ಖಲು ಧರ್ಮ ಸಾಧನಂ'  ಎಂದು ಹೇಳಿದಂತೆ ಯಾವುದೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಆರೋಗ್ಯಕರವಾಗಿ ಇರಲೇ ಬೇಕು.
          ಏನಿದು ಯಮ ನಿಯಮಾದಿಗಳು ?

೧. ಯಮ - ಇಲ್ಲಿ ಬದುಕಬೇಕಾದ ರೀತಿಯ ಬಗ್ಗೆ ತಿಳಿಹೇಳಲಾಗುತ್ತದೆ. ನೆಮ್ಮದಿಯಿಂದ, ಮರ್ಯಾದೆಯಿಂದ ಬದುಕಬೇಕಾದರೆ ನಾವು ಒಂದಷ್ಟು ಆದರ್ಶಗಳನ್ನು ರೂಢಿಸಿಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಯಾರನ್ನೂ ಅಥವಾ ಯಾವುದನ್ನೂ ಹಿಂಸೆ ಮಾಡದಿರುವುದು, ಪರರ ಸ್ವತ್ತಿಗೆ ಆಸೆ ಪಡದಿರುವುದು, ಪರರ ವಸ್ತುವನ್ನು ಕದಿಯದಿರುವುದು,  ಸತ್ಯವನ್ನೇ ಹೇಳುವುದು, ಬ್ರಹ್ಮಚರ್ಯವನ್ನು ಪಾಲಿಸುವುದು.. ಹೀಗೆ ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ಇಲ್ಲಿ ಸಾಧಕನನ್ನು ತಯಾರು ಮಾಡಲಾಗುತ್ತದೆ.

೨. ನಿಯಮ - ಮೌಲ್ಯಗಳನ್ನು ನೀವು ಎಷ್ಟರ ಮಟ್ಟಿಗೆ ಪಾಲಿಸುತ್ತೀರೋ ಅದು ನಿಮಗೆ ಬಿಟ್ಟದ್ದು. ನೀವು ಇಹಲೋಕದಲ್ಲಿ ನೆಮ್ಮದಿಯಿಂದ ಬದುಕಲು ಹಾಗೂ ಮುಕ್ತಿ ಪಡೆಯಲು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಶುಚಿತ್ವ - ಇಲ್ಲಿ ಬಹಿರಂಗ ಶುದ್ಧಿಯೂ ಮುಖ್ಯ, ಅಂತರಂಗ ಶುದ್ಧಿಯೂ ಮುಖ್ಯವಾಗುತ್ತದೆ.
ಸಂತೋಷ - ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಸಂತಸದಿಂದ ಬಾಳುವುದು ಹೇಗೆ ಎನ್ನುವುದನ್ನು ತಿಳಿಸಲಾಗುತ್ತದೆ. ನಮಗೆ ಸಿಕ್ಕಿದ್ದರಲ್ಲಿ ತೃಪ್ತಿ ಕಾಣುವುದು ಹೇಗೆ? ಎನ್ನುವುದನ್ನು ಮನದಟ್ಟು ಮಾಡಲಾಗುತ್ತದೆ.
ತಪಸ್ಸು- ಇಲ್ಲಿ ತಪಸ್ಸು ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಎಲ್ಲೋ ಹೋಗಿ ಧ್ಯಾನ ಮಾಡುವುದಲ್ಲ. ನಮ್ಮ ಮೌಲ್ಯಗಳಿಗೆ ನಾವು ತೋರುವ ನಿಷ್ಠೆ ಹಾಗೂ ನಮ್ಮ ಜೀವನವನ್ನು ಆದಷ್ಟು ಕಲ್ಮಶರಹಿತವಾಗಿಡುವುದಕ್ಕೆ ತೋರುವ ಶಿಸ್ತು.
          ಯಮ-ನಿಯಮಗಳನ್ನು ನೂರಕ್ಕೆ ನೂರು ಅನ್ನಲಾಗದಿದ್ದರೂ ಬಹುತೇಕ ನಾನು ಪಾಲಿಸುತ್ತಿದ್ದೆ. ನನ್ನ ಗುರಿ ಮುಂದಿನ ಆರು ಅಂಗಗಳಲ್ಲಿ ಕೇಂದ್ರೀಕೃತವಾಗಿತ್ತು. ಅಲ್ಲಿ ನನಗಾದ ಅನುಭವಗಳನ್ನು ಒಂದೊಂದಾಗಿ ಬಿಚ್ಚಿಡುತ್ತೇನೆ.

೩ . ಆಸನ - ಎಲ್ಲಾ ಆಸನಗಳನ್ನು ಕರತಲಾಮಲಕ ಮಾಡಿಕೊಳ್ಳಬೇಕೆಂದು ಅವಿರತ ಅಭ್ಯಾಸ ಮಾಡುತ್ತಿದ್ದೆ. ಮೈಕೈ ನೋವಾದರೂ ಲೆಕ್ಕಿಸದೇ ಮುಂದುವರೆಯುತ್ತಿದ್ದೆ. ಯಾವುದೇ ಆಸನದಲ್ಲಿ ಎರಡು ಗಂಟೆಗಳ ಕಾಲ ನೋವಿಲ್ಲದೇ ಇರಲು ಸಾಧ್ಯವಾದರೆ ಆ ಆಸನ ನಮಗೆ ಸಿದ್ಧಿಸಿದೆ ಎಂದರ್ಥ. ಹೀಗೆ ಹಲವಾರು ಆಸನಗಳನ್ನು ಸಿದ್ಧಿಸಿಕೊಂಡ ಮೇಲೆ ಒಮ್ಮೆ ಯೋಚಿಸಿದೆ. ನನಗೆ, ನನ್ನ ದೇಹಕ್ಕೆ ಬೇಕಾದ ಆಯ್ದ ಆಸನಗಳ ಪಟ್ಟಿ ಮಾಡಿಕೊಂಡೆ. ಬೆನ್ನುಹುರಿಗೆ ಅನುವಾಗಲು ಚಕ್ರಾಸನ, ಭುಜಂಗಾಸನ, ಪಶ್ಚಿಮೋತ್ತಾನಾಸನ ಹಾಗೂ ಅರ್ಧ ಮತ್ಸ್ಯೇ೦ದ್ರಾಸನ (ಎರಡೂ ಬದಿಯಲ್ಲಿ), ರಕ್ತಸಂಚಾರಕ್ಕಾಗಿ ಶೀರ್ಷಾಸನ , ಧ್ಯಾನಕ್ಕೆ ಅನುಕೂಲವಾಗಲು ಪದ್ಮಾಸನ, ಮನಸ್ಸಿನ, ಮೆದುಳಿನ ಬೆಳವಣಿಗೆಗೆ ಗೋಮುಖಾಸನ, ಕೊನೆಗೆ ಶವಾಸನ, ಇವುಗಳನ್ನು ಆಯ್ದುಕೊಂಡು ಮಿಕ್ಕ ಆಸನಗಳನ್ನೆಲ್ಲ ಬದಿಗಿರಿಸಿದೆ. 
          ಆಸನಗಳನ್ನು ಅಭ್ಯಸಿಸುವಾಗ ಗುರುಮುಖೇನ ಏಕೆ ಕಲಿಯಬೇಕು ಎನ್ನುವುದೂ ಅರಿವಾಯಿತು. ಉಸಿರಾಟದ ಕ್ರಮವನ್ನು (ಯಾವಾಗ ಉಸಿರು ತೆಗೆದುಕೊಳ್ಳಬೇಕು, ಯಾವಾಗ ಬಿಡಬೇಕು) ನನ್ನ ಗುರುಗಳು ಸಕಾರಣವಾಗಿ ವಿವರಿಸಿದರು. ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಂಡಾಗ ಎಲ್ಲಿ ತಪ್ಪು ಆಗುತ್ತಿದೆಯೆಂದು ತೋರಿಸಿದರು. ಎಲ್ಲಕ್ಕೂ ಮಿಗಿಲಾಗಿ ಎಷ್ಟು ನಿಧಾನವಾಗಿ ಕ್ರಿಯೆಗಳನ್ನು ನಡೆಸಬೇಕೆಂದು ಹಂತ ಹಂತವಾಗಿ ತೋರಿಸಿದರು. 'ಷಣ್ಮುಖೀ ಮುದ್ರೆ' ಅಭ್ಯಸಿಸುವಾಗ ಅನಾಹತ ಧ್ವನಿಯನ್ನು ಕಿವಿಯಾರೆ ಕೇಳುವಂತೆ ಮಾಡಿದರು.
          ಪ್ರಾಣಾಯಾಮ ಹಾಗೂ  ಧ್ಯಾನದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡುತ್ತೇನೆ ಹಾಗೂ ಪವಾಡದಂತೆ ಕಂಡ ಗುರುಗಳ ಒಂದು ಕೃತ್ಯದ ಬಗ್ಗೆ ಬರೆಯುತ್ತೇನೆ. 

Saturday, 29 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 2

          ಯೋಗಾಭ್ಯಾಸಕ್ಕಾಗಿ ಗುರುಗಳ ಹುಡುಕಾಟದಲ್ಲಿದ್ದೆ. ನ್ಯಾಷನಲ್ ಶಾಲೆಯ ನನ್ನ 'ಸಂಸ್ಕೃತ' ಗುರುಗಳಾದ ಕೆ.ಟಿ.ಎಸ್ ಅವರು ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ಯೋಗಾಭ್ಯಾಸ ಮಾಡಲು ಉತ್ತಮ ಶಾಲೆ ಎಂದು ಸೂಚಿಸಿದರು. 'ಅಲ್ಲಿ ಗುರುಗಳಾಗಿರುವ ಚಿ.ವಿಶ್ವೇಶ್ವರಯ್ಯನವರಲ್ಲದೇ ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಕೂಡ ಆಗಾಗ ಬರುತ್ತಿರುತ್ತಾರೆ. ಅವರ ಬಳಿಯೂ ಕಲಿಯುವುದು ಸಾಕಷ್ಟಿದೆ' ಎಂದು ಹೇಳಿ ಅಲ್ಲೇ ಸೇರುವಂತೆ ಉತ್ತೇಜಿಸಿದರು. ನಾನು ಹೋಗಿ ಶ್ರೀ ವಿಶ್ವೇಶ್ವರಯ್ಯನವರನ್ನು ಭೇಟಿಯಾಗಿ ನನ್ನ ಮನದ ಇಂಗಿತವನ್ನು ಹೇಳಿಕೊಂಡೆ. 'ಯೋಗಾಭ್ಯಾಸ, ಪ್ರಾಣಾಯಾಮವಲ್ಲದೇ ಇನ್ನಾವುದೇ ರೀತಿಯ ಸಾಧನೆಗಳನ್ನಾದರೂ ಮಾಡುವುದು ನನಗೆ ಇಷ್ಟ' ಎಂದು ಹೇಳಿದೆ. ವಿಶ್ವೇಶ್ವರಯ್ಯನವರು "ಒಂದೆರಡು ತಿಂಗಳು ಯೋಗಾಭ್ಯಾಸ ಹಾಗೂ ಪ್ರಾಣಾಯಾಮದ ತರಬೇತಿ ಪಡೆಯಿರಿ. ನಂತರ ನಿಮಗೆ 'ತ್ರಾಟಕ' ಎಂಬ ಕಣ್ಣಿಗೆ ಹಾಗೂ ಮನಸ್ಸಿಗೆ ಪ್ರಯೋಗ ಒಡ್ಡುವ ವಿದ್ಯೆಯನ್ನು ಹೇಳಿಕೊಡುತ್ತೇನೆ, ನಾಳೆ ಬೆಳಿಗ್ಗೆ ಆರು ಗಂಟೆಗೆ ಮಂದಿರಕ್ಕೆ ಬನ್ನಿ" ಎಂದರು. 'ಸರಿ' ಎಂದು ನಾನು ಹೊರಡುವಾಗ "ಬೆಳಿಗ್ಗೆ ಬೇಗ ಎದ್ದು ಅಭ್ಯಾಸವಿದೆಯೋ? ಇಲ್ಲದಿದ್ದರೂ ಪರವಾಗಿಲ್ಲ, ಒಂದು ಗುಟ್ಟು ಹೇಳುತ್ತೇನೆ. 'ನಾನು ಆರು ಗಂಟೆಗೆ ಅಲ್ಲಿ ಇದ್ದೇ ಇರುತ್ತೇನೆ' ಎಂದು ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ನೀವು ಆಗ ಎದ್ದೇ ಏಳುವಿರಿ, ಬಂದೇ ಬರುತ್ತೀರಿ" ಎಂದು ಹೇಳಿ ನಕ್ಕರು. ಯೋಗದ ಪ್ರಥಮ ಪಾಠವನ್ನು, ಸೇರುವ ಮುನ್ನವೇ ಹೇಳಿಕೊಟ್ಟಿದ್ದರು. 
          ಮರುದಿನ ಬೆಳಿಗ್ಗೆ ಐದೂ ಮೂವತ್ತಕ್ಕೆ ಅಲಾರಾಂ ಇಟ್ಟಿದ್ದೆ. ಅಲಾರಾಂ ಹೊಡೆಯುವ ಮುನ್ನವೇ ಐದೂ ಇಪ್ಪತ್ತೊಂಭತ್ತಕ್ಕೇ ಎಚ್ಚರವಾಗಿತ್ತು. ಹೊರಗೆ ಬಂದಾಗ ಕೊರೆಯುವ ಚಳಿ. ಯೋಗಶಾಲೆ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದುದರಿಂದ ಆರಾಮಾಗಿ ಆರು ಗಂಟೆಗೆ ಮೊದಲೇ ತಲುಪಿದೆ. ಕಟ್ಟಡದ ಟೆರೇಸಿನ ಮೇಲೆ ಉಳಿದ ವಿದ್ಯಾರ್ಥಿಗಳೊಂದಿಗೆ ಹೋದೆ. ತುಂಡುಬಟ್ಟೆಯನ್ನುಟ್ಟುಕೊಂಡು ನಿಂತಿದ್ದ ಗುರುಗಳು ಹಿಂದೂ ಧ್ವಜವನ್ನು ಏರಿಸಿ, ಸೂರ್ಯನ ಮಂತ್ರವನ್ನು ಹೇಳುತ್ತಾ, ಸೂರ್ಯನಮಸ್ಕಾರವನ್ನು ಮಾಡಿದರು. ನಂತರ ಎಲ್ಲರೂ ಯೋಗಶಾಲೆಗೆ ಬಂದೆವು. ಮೊದಲ ದಿನ ಬಹಳ ಸುಲಭವಾದ ಎರಡು ಆಸನಗಳನ್ನು ಮಾಡಿಸಿದರು. ನಂತರ ಕೊನೆಗೆ ಸುಲಭಾತಿಸುಲಭವೆಂದು ನನಗನ್ನಿಸಿದ 'ಶವಾಸನ'ವನ್ನು ಮಾಡಿಸಿದರು. ನಾನಂತೂ 'ಯೋಗಾಸನವೆಂದರೆ ಇಷ್ಟೇನೇ, ತಿಂಗಳೆರಡುತಿಂಗಳೊಳಗೆ ಎಲ್ಲಾ ಆಸನಗಳನ್ನೂ ಅರೆದು ಕುಡಿಯುತ್ತೇನೆ' ಎಂದಂದುಕೊಂಡು ಗರ್ವಿಷ್ಠನಾದೆ. 
          ಹಂತಹಂತವಾಗಿ ಮೈಯ್ಯನ್ನು ಹಿಂಡಿ, ತಿರುಚಿ, ತಲೆಕೆಳಗಾಗಿ, ಕೈಕಾಲುಗಳನ್ನೆಳೆದು, ಸೆಳೆದು ಕಷ್ಟಾತಿಕಷ್ಟವಾದ ಆಸನಗಳನ್ನೆಲ್ಲಾ ಕಲಿಸಿದರು. ಜೊತೆಯಲ್ಲಿಯೇ ಪ್ರಾಣಾಯಾಮದ ಪಾಠವೂ ಆರಂಭವಾಗಿತ್ತು. ಅದೂ ಹಾಗೆಯೇ! ಅನುಲೋಮ, ವಿಲೋಮದಂತಹ ಸರಳ ಪ್ರಾಣಾಯಾಮದೊಂದಿಗೆ ಪ್ರಾರಂಭವಾದಾಗ 'ಪ್ರಾಣಾಯಾಮವೆಂದರೆ ಇಷ್ಟೇನೇ' ಎಂದೂ ಅನ್ನಿಸಿತ್ತು. ಆಮೇಲೆ ಗೊತ್ತಲ್ಲ! ಹೌದು, ಉಸಿರು ಬಿಗಿ ಹಿಡಿಯುವುದರಿಂದ ಪ್ರಾರಂಭವಾಗಿ ಮೂಲಬಂಧ, ಜಾಲಂಧರಬಂಧ ಹಾಗೂ ಉಡ್ಯಾನಬಂಧಗಳನ್ನು ಶಾಸ್ತ್ರಬದ್ಧವಾಗಿ, ಕರಾರುವಕ್ಕಾಗಿ ಮಾಡುವ ವೇಳೆಗೆ ಪ್ರಾಣಾಯಾಮಕ್ಕೂ, ಪ್ರಾಣ ಹಾಗೂ ಯಮನಿಗೂ ಇರುವ ಸಂಬಂಧ ಒಂದಷ್ಟು ಅರ್ಥವಾಗಿತ್ತು.             
ಇನ್ನಷ್ಟು ವಿವರಗಳು ಮುಂದಿನ ಬರಹದಲ್ಲಿ.. 

Thursday, 27 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1

             'ಪ್ರಶ್ನಿಸದೇ ಒಪ್ಪಬೇಡ' ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಚ್. ನರಸಿಂಹಯ್ಯನವರು (ಪ್ರೀತಿಯ 'ಎಚ್.ಎನ್.') ಹೇಳುತ್ತಿದ್ದ ಮಾತು. ಎಳೆಯ ವಯಸ್ಸಿನಲ್ಲಿ ಮನದಲ್ಲಿ ನಾಟಿದ ಮಾತು. ನನಗೆ ಉಪನಯನವಾದ ಮೇಲೆ ನದೀ ತೀರಕ್ಕೆ ಕರೆದುಕೊಂಡು ಹೋಗಿ ನಮ್ಮ ಆಚಾರ್ಯರು ಸಂಧ್ಯಾವಂದನೆ ಮಾಡುವ ಕ್ರಮವನ್ನು ಹೇಳಿಕೊಡುತ್ತಿದ್ದರು. ಎಚ್.ಎನ್. ಅವರಿಂದ ಪ್ರಭಾವಿತನಾದ ನಾನು ಪ್ರತಿಯೊಂದು ಆಚಾರ ವಿಚಾರಗಳ ಕುರಿತಾಗಿ ಆಚಾರ್ಯರನ್ನು ಪ್ರಶ್ನಿಸುತ್ತಿದ್ದೆ. ಅವರೂ ತಾಳ್ಮೆಯಿಂದ ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ಸಂಧ್ಯಾವಂದನೆಯಲ್ಲಿ 'ಪ್ರಾಣಾಯಾಮ'ವೂ ಒಂದು ಭಾಗ. ಆಚಾರ್ಯರು ನನಗೆ ಮೂಗು ಹಿಡಿದುಕೊಂಡು  'ಓಂಭೂಃ, ಓಂಭುವಃ, ಓಂಸ್ವವಃ, ಓಂಮಹಃ, ಓಂಜನಃ, ಓಂ ತಪಃ ,ಓಂಸತ್ಯಂ ಓಂ ತತ್ಸವಿತುರ್ವರೇಣ್ಯಂ । ಭರ್ಗೋದೇವಸ್ಯ ಧೀಮಹಿ। ಧಿಯೋ ಯೋ ನಃ ಪ್ರಚೋದಯಾತ್।' ಎಂಬ ಮಂತ್ರವನ್ನು ಹೇಳಿ, ನೀರನ್ನು ಕೈ ಮೂಲಕ ಕೆಳಗೆ ತಟ್ಟೆಯಲ್ಲಿ ಬಿಟ್ಟು ಒಂದೇ ಬೆರಳನ್ನು ಕಣ್ಣಿಗೆ ಒತ್ತಿ 'ಓಂ ಆಪೋಜ್ಯೋತಿರಸೋsಮೃತಂ ಬ್ರಹ್ಮ ಭೂರ್ಭುವಸ್ವರೋಂ' ಎಂಬ ಮಂತ್ರವನ್ನು ಪಠಿಸಲು ಹೇಳಿದ್ದರು. 
ನಾನು ಅವರನ್ನು ಕೇಳಿದೆ 'ಪ್ರಾಣಾಯಾಮವೆಂದರೆ ಉಸಿರಾಟದ ನಿಯಂತ್ರಣ ಎಂದು ಎಲ್ಲೋ ಓದಿದ್ದೆ, ಹೀಗಿರುವಾಗ ಬರೀ ಮೂಗು ಹಿಡಿದುಕೊಂಡರೆ ಸಾಕೆ ?'
' ನಿಜ ಕಣಪ್ಪಾ ನೀನು ಹೇಳುವುದು, ಆದರೆ ಪ್ರಾಣಾಯಾಮ, ಹಠಯೋಗ ಮುಂತಾದವುಗಳನ್ನು ನುರಿತ ಗುರುಮುಖೇನ ಕಲಿಯಬೇಕು. ನಾವು ವೈದಿಕರು, ಅದರ ಬಗ್ಗೆ ತರಬೇತಿ ನೀಡುವಷ್ಟು ನಾನು ಅಭ್ಯಾಸ ಮಾಡಿಲ್ಲ, ಆದ್ದರಿಂದ ಸದ್ಯಕ್ಕೆ ನೀನು ಮೂಗು ಹಿಡಿದು ಮಂತ್ರ ಹೇಳಿದರೆ ಸಾಕು' ಎಂದರು. ಅಲ್ಲಿಂದ ಮುಂದೆ ನನ್ನ ದೃಷ್ಟಿಯೆಲ್ಲಾ ಪ್ರಾಣಾಯಾಮ ಕಲಿಸುವ ಸೂಕ್ತ ಗುರುವನ್ನು ಅರಸುತ್ತಿತ್ತು.
            ಇದು ಒಂದೆಡೆಯಾದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ  ಮಂಗಳೂರಿನಲ್ಲಿ ಒಮ್ಮೆ ಖ್ಯಾತ ಸಂಮೋಹಿನಿಕಾರರಾದ 'ದಿನ್ ಕೋಲಿ' ಅವರಿಂದ 'ಸಂಮೋಹಿನಿ ಪ್ರದರ್ಶನ' ಎಂಬ ಜಾಹಿರಾತು ನೋಡಿದೆ. ಸಂಮೋಹಿನಿಯ ಬಗ್ಗೆ ಒಂದಷ್ಟು ಕೇಳಿದ್ದೆ ಅಷ್ಟೇ. ಅಪ್ಪನ ಬಳಿ ಹೋಗಿ ಈ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ಕೇಳಿದೆ. ಅಂದೇ ಸಂಜೆ ಆ ಪ್ರದರ್ಶನಕ್ಕೆ ಕರೆದುಕೊಂಡು ಹೋದರು ಅಪ್ಪ. ಅಲ್ಲಿ ಆತ ಒಂದಷ್ಟು ಜನರನ್ನು ಸಂಮೋಹನಕ್ಕೆ ಒಳಪಡಿಸಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಿದ್ದರು. ನನಗೆ ನಂಬಲು ಕಷ್ಟವಾಗುತ್ತಿತ್ತು. 'ನೀವೆಲ್ಲಾ ನಿಮ್ಮ ಇಷ್ಟವಾದ ದೇವಸ್ಥಾನದಲ್ಲಿರುವಿರಿ' ಎಂದು ಆತ ಅಂದೊಡನೆ ಎಲ್ಲರೂ ದೇವಸ್ಥಾನದಲ್ಲಿ ಇರುವಂತೇ ಓಡಾಡುತ್ತಿದ್ದರು. ತೀರ್ಥ ತೆಗೆದುಕೊಳ್ಳುವುದು, ಪ್ರದಕ್ಷಿಣೆ ಮಾಡುವುದು, ನಮಸ್ಕರಿಸುವುದು... ಹೀಗೆ ತಾವು ದೇವಸ್ಥಾನದಲ್ಲೇ ಇರುವಂತೆ ಅನುಭವಿಸುತ್ತಿದ್ದರು ಹಾಗೂ ಹಾಗೆಯೇ ಓಡಾಡುತ್ತಿದ್ದರು. ನಾನು ತಂದೆಯವರನ್ನು 'ಇದೆಲ್ಲಾ ನಿಜವೇ ಅಥವಾ ಎಲ್ಲರೂ ಆಕ್ಟಿಂಗ್ ಮಾಡ್ತಿದ್ದಾರಾ?' ಎಂದು ಕೇಳಿದೆ. ಅದಕ್ಕೆ ಅಪ್ಪ ' ಅದು ನಟನೆ ಅಲ್ಲ ಅವರೆಲ್ಲಾ ಸಂಮೋಹನಕ್ಕೆ ಒಳಗಾಗಿದ್ದಾರೆ, ಆದ್ದರಿಂದ ಅವರಿಗೆ ಅದು ನಿಜವಾಗಿರುತ್ತದೆ.' ಅಂದರು. 
            ನಾನು ಪ್ರದರ್ಶನ ಮುಗಿದ ಮೇಲೆ ಸಭಾಂಗಣದ ಹಿಂಭಾಗಕ್ಕೆ ಹೋಗಿ ದಿನ್ ಕೋಲಿ ಅವರನ್ನು ಭೇಟಿಯಾಗಿ 'ಈ ವಿದ್ಯೆ ನನಗೂ ಕಲಿಯಲು ಆಸೆಯಿದೆ, ಕಲಿಸುವಿರಾ?' ಎಂದು ಕೇಳಿದೆ. ಆಗ ನನಗೆ ಸುಮಾರು ಹನ್ನೊಂದರ ಪ್ರಾಯ. ನನ್ನನ್ನು ನೋಡಿ ನಕ್ಕ ಅವರು 'ದಿನಾ ಮನಸ್ಸಿನಲ್ಲಿ ಒಂದು ಚುಕ್ಕೆಯನ್ನು ನೆನೆಸಿಕೊಂಡು ಧ್ಯಾನ ಮಾಡು, ನಿನಗೆ ಈ ವಿದ್ಯೆ ಒಲಿಯುತ್ತದೆ' ಎಂದು ಹೇಳಿದರು. ನಾನು ಅಂದಿನಿಂದ ದಿನಾ ಅಂತೆಯೇ ಧ್ಯಾನ ಮಾಡುತ್ತಿದ್ದೆ.
'ಅವ್ನು ನಿನ್ನ ಹತ್ರ ಬಂಡಲ್ ಬಿಟ್ಟಿದ್ದಾನೆ, ನೀನು ಹೀಗೆ ಮಾಡೋದು ವೇಸ್ಟು' ಅಂತ ಉಮಕ್ಕನ ಮಗ ವೆಂಕಟೇಶ ಹೇಳುವ ಹೊತ್ತಿಗೆ ನನಗೂ ಹಾಗನ್ನಿಸಲು ಶುರುವಾಗಿತ್ತು. ಆದ್ದರಿಂದ ಹಾಗೆ ಧ್ಯಾನ ಮಾಡುವುದನ್ನು ಬಿಟ್ಟುಬಿಟ್ಟೆ !
             ತಂದೆಯವರಿಗೆ ಬೆಂಗಳೂರಿಗೆ ವರ್ಗವಾದಾಗ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ಸೇರಿಕೊಂಡೆ (೧೯೭೪). ಬೆಂಗಳೂರಿಗೆ ಬಂದಮೇಲೆ ನಾನು ಅರಸುತ್ತಿದ್ದುದು ಸಂಮೋಹಿನಿ ವಿದ್ಯೆ ಕಲಿಸುವ ಗುರುಗಳು, ಯೋಗ - ಪ್ರಾಣಾಯಾಮ ಕಲಿಸುವ ಗುರುಗಳು ಹಾಗೂ ಚಿತ್ರಕಲೆ ಕಲಿಸುವ ಗುರುಗಳು. ಸತತ ಹುಡುಕಾಟದಿಂದ ನಾಲ್ಕೈದು ವರ್ಷಗಳೊಳಗೆ ಎಲ್ಲರೂ ದೊರೆತರು. ಸಂಮೋಹಿನಿ ವಿದ್ಯೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಬಳಿ ಕಲಿತೆ. ಶ್ರೀ ರಮೇಶ್ ಕಾಮತ್ ಅವರು ನೀಡಿದ 'Clinical study of Hypnosis' ಎನ್ನುವ ಪುಸ್ತಕ ನನಗೆ ತುಂಬಾ ಸಹಕಾರಿಯಾಯಿತು.
             ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ನನ್ನ ಯೋಗ ಶಾಲೆಯಾಯಿತು. ಗುರುಗಳಾದ ಶ್ರೀ ಚಿ. ವಿಶ್ವೇಶ್ವರಯ್ಯ (ಚಿ. ಸದಾಶಿವಯ್ಯನವರ ತಮ್ಮ ) ಅವರು ನನ್ನ ಗುರುಗಳು. ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದ ಗುರುರಾಜ ತಂತ್ರಿಯವರನ್ನೂ ಮರೆಯಲಾರೆ. 
            ನನಗೆ ಆಸಕ್ತಿಯಿದ್ದ ಚಿತ್ರಕಲೆಯನ್ನು ಅಭ್ಯಸಿಸಲು ಶ್ರೀ ಹಡಪದ್ ಅವರ 'Ken school of arts' ಸೇರಿಕೊಂಡರೂ ನಂತರ ನನ್ನ ಕಲಾಭ್ಯಾಸ ನಡೆದದ್ದು ಶ್ರೀ ಎಂ. ಟಿ. ವಿ. ಆಚಾರ್ಯ ಅವರ 'ಆಚಾರ್ಯ ಚಿತ್ರಕಲಾ'ಭವನ'ದಲ್ಲಿ.
            ಐದಾರು ವರ್ಷಗಳಲ್ಲಿ ನಾನೇನು ಕಂಡೆ, ಏನೇನು ಕಲಿತೆ ಎನ್ನುವುದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ.