Friday, 11 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 5 - ಮುದ್ರೆ, ಬಂಧತ್ರಯ ಹಾಗೂ ಷಟ್ಕರ್ಮಗಳು


          ಕೆಲವು ಮಿತ್ರರು ಹಾಗೂ ಹಿತೈಷಿಗಳು ಪ್ರಾಣಾಯಾಮದ ಬಗ್ಗೆ ಬರೆದ ಹಿಂದಿನ ಕಂತನ್ನು ಕುರಿತು ಮಾತಿಗಿಳಿದರು.
'ಗುರುಮುಖೇನ ಕಲಿಯಬೇಕು ಎಂದಿದ್ದೀರಿ, ಆದರೆ ಅವುಗಳನ್ನು ಆಚರಿಸುವ ವಿಧಿ-ವಿಧಾನಗಳನ್ನು, ಆಚರಿಸುವ ಬಗೆಯನ್ನು ಹೇಳುತ್ತಿದ್ದೀರಿ. ಇದನ್ನು ಓದಿಯೇ ಕೆಲವರು ಪ್ರಯೋಗ ಮಾಡಲು ಹೋರಾಡುವುದಿಲ್ಲವೇ?'
'ಈ ಪ್ರಯೋಗಗಳನ್ನು ಯಾರೂ ಗುರುಗಳ ಸಹಾಯವಿಲ್ಲದೇ ಪ್ರಯೋಗಿಸಬೇಡಿ ಎಂದು ಸ್ಪಷ್ಟವಾಗಿ ಹೇಳುತ್ತೇನೆ' ಎಂದೆ.
'ಹಾಗಂದಾಗಲೇ ಕುತೂಹಲ ಜಾಸ್ತಿಯಾಗಿ ಪ್ರಯೋಗಿಸಲು ಹೋಗುವವರೇ ಹೆಚ್ಚು' ಎಂದರು ಟ್ವಿಟ್ಟರ್ ಗೆಳೆಯ ಕಿರಣ್.
'ಯಾವ ರೀತಿ ಆಚರಿಸಬೇಕು ಎಂದು ಹೇಳದಿದ್ದರೆ ಒಳಿತೇನೋ' ಎಂದು ಹೇಳಿದ್ದು ಅರುಣ್ ಮೇಷ್ಟ್ರು. 
         ನಾನು ಬರೆಯುವುದನ್ನು ಮುಂದೂಡಿ ಸ್ವಲ್ಪ ಯೋಚಿಸಿದೆ. ನನ್ನ ಉಪನಯನದ ಸಮಯದಲ್ಲಿ ಆಚಾರ್ಯರು 'ಯಾರಾದರೂ ನುರಿತ ಗುರುಮುಖೇನ ಕಲಿಯುವುದೊಳಿತು' ಎಂದು ಹೇಳಿದ್ದೂ ನೆನಪಿಗೆ ಬಂತು. ಆರಂಭದಲ್ಲಿ ನನಗಾದ ತೊಂದರೆಗಳು ಹಾಗೂ ನನ್ನ ಗುರುಗಳು ಅದರ ಬಗ್ಗೆ ಕಾಳಜಿ ವಹಿಸಿ ಅದನ್ನು ನಿವಾರಿಸಿದ ಬಗೆ ನೆನಪಿಗೆ ಬಂತು. ಆದ್ದರಿಂದ ಸದ್ಯಕ್ಕೆ ನಾನೇನು ಮಾಡಿದೆ ಎಂದು ಸ್ಥೂಲವಾಗಿ ವಿವರಿಸಿ, ಪ್ರಾಣಾಯಾಮ ಹಾಗೂ ಪ್ರಕೃತಿ ಶಕ್ತಿಯ ಸಂಬಂಧದ ಕುರಿತಾಗಿ ಹೇಳಲು ಬಯಸುತ್ತೇನೆ.
         'ನಾಡಿಶೋಧನ' ಮುಂತಾದ ಪ್ರಾಣಾಯಾಮದ ನಂತರ ನನಗೆ 'ಭಸ್ತ್ರಿಕ' ಪ್ರಾಣಾಯಾಮದ ವೇಳೆ ಸ್ವಲ್ಪ ತೊಂದರೆ ಎದುರಾಯಿತು. ಕಮ್ಮಾರನ ತಿದಿಯಿಂದ ಗಾಳಿ ಹೊರಸೂಸುವ ಹಾಗೆ ಮೂಗಿನ ಹೊಳ್ಳೆಗಳಿಂದ ಶ್ವಾಸವನ್ನು ವೇಗವಾಗಿ ಹೊರತಳ್ಳುತ್ತಾ ಇರುವುದು. ಹೀಗೆ ಮಾಡುತ್ತಿರುವಾಗ ಅಷ್ಟೇ ವೇಗವಾಗಿ ಶ್ವಾಸವು ಒಳಗೆ ಹೋಗುತ್ತಿರುತ್ತದೆ.ಇಪ್ಪತ್ತು ಸಲ ಶ್ವಾಸವನ್ನು ಹೊರಗೆಡವಿದ ನಂತರ ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಂಡು ಉಸಿರುಗಟ್ಟಿ ಕೂರುವುದು. ಇದು 'ಒಂದು ಮಂಡಲ'ವೆನಿಸಿಕೊಳ್ಳುತ್ತದೆ. ಗುರುಗಳು ಮೊದಲು ಕೆಲವು ದಿನ ಎರಡು ಮಂಡಲಗಳನ್ನು ಮಾತ್ರ ಮಾಡಲು ಹೇಳಿದ್ದರು. ಅತ್ಯಂತ ಉತ್ಸಾಹದಿಂದ ನಾನು ಐದು, ಕೆಲವೊಮ್ಮೆ ಹತ್ತು ಮಂಡಲಗಳವರೆಗೂ ಮಾಡುತ್ತಿದ್ದೆ. ಪರಿಣಾಮವಾಗಿ ಒಂದು ದಿನ ತಲೆಸುತ್ತು ಬಂದು ನೆಲಕ್ಕೆ ಜಾರಿದೆ. ವಿಷಯ ತಿಳಿದ ಗುರುಗಳು ಎದೆಯನ್ನು ನಿಧಾನವಾಗಿ ನೇವರಿಸಿ, ಹಣೆಯಿಂದ  ತಲೆಯ ಹಿಂಭಾಗದವರೆಗೂ ನೇವರಿಸುತ್ತಾ ಒಂದು ಮಂತ್ರವನ್ನು ಪಠಿಸುತ್ತಾ ಯಥಾಸ್ಥಿತಿಗೆ ನನ್ನನ್ನು ತಂದರು. ಹಾಗೂ ಹೇಳಿದ ಸೂಚನೆ ಮೀರಿ ಅತಿರೇಕದ ಪ್ರಯೋಗಗಳು ಮಾಡುವುದು ಬೇಕಿಲ್ಲ ಎಂದು ನಯವಾಗಿ ಬೆದರಿಸಿದರು. ಮುಂದೆ ಹಲವು ಕ್ಲಿಷ್ಟಕರವಾದ ಪ್ರಾಣಾಯಾಮಗಳನ್ನು ಕೂಡಾ ಮಾಡಿದೆನು.
          ನಂತರ ಮಹಾಮುದ್ರೆ, ಮಹಾವೇಧ, ಯೋಗ ಮುದ್ರೆ, ಖೇಚರೀ ಮುದ್ರೆ ಮುಂತಾದ  ಮುದ್ರೆಗಳು ಹಾಗೂ ಮೂಲಬಂಧ, ಜಾಲಂಧರ ಬಂಧ ಹಾಗೂ ಉಡ್ಡಿಯಾನ ಬಂಧ ಹೀಗೆ ಬಂಧತ್ರಯಗಳ ಬಗ್ಗೆ ವಿವರಿಸಿ ಹೇಳಿ ತರಬೇತಿ ನೀಡಲಾಯಿತು. ಇದಲ್ಲದೇ ಧೌತಿ, ಬಸ್ತಿ, ನೇತಿ, ನೌಲಿ, ತ್ರಾಟಕ, ಕಪಾಲಭಾಟಿ ಮುಂತಾದ ಷಟ್ಕರ್ಮಗಳನ್ನು ವಿಧಿವತ್ತಾಗಿ ಕಲಿತೆ. ಇಲ್ಲಿಯೂ ನನಗೆ ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿ ಸಿಲುಕಿಸಿದ್ದು ತಾಡನ ಕ್ರಿಯೆ ಹಾಗೂ ಕಪಾಲಭಾಟಿ.
ತಾಡನ ಕ್ರಿಯೆ ಅಭ್ಯಸಿಸುವುದು ಹೇಗೆ ಎಂದು ವಿವರಿಸುವ ಬದಲಿಗೆ ನನಗೇನಾಯಿತು ಎಂದು ಹೇಳಲು ಇಚ್ಛಿಸುತ್ತೇನೆ. ಮೂಲಾಧಾರದಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಲು ಈ ಕ್ರಿಯೆಯನ್ನು ಮಾಡಲಾಗುತ್ತದೆ. ಮೂಲಾಧಾರದ ಮೇಲಿನ ಬಲವಾದ ಬಡಿತದಿಂದಾಗಿ ಮೈಯ್ಯೆಲ್ಲಾ ಬಿಸಿಯಾಗಿ ರಕ್ತವೆಲ್ಲಾ ತಲೆಯತ್ತ ಚಿಮ್ಮುತ್ತಿರುವ ಅನುಭವವಾಗಿತ್ತು. ಮತ್ತೆ ನನ್ನ ಗುರುಗಳು ಅದನ್ನು ಒಂದು ತಹಬಂದಿಗೆ ತಂದರು. ಇದೆ ರೀತಿಯ ಅನುಭವ ಕಪಾಲಭಾಟಿಯಲ್ಲೂ ನನಗಾಯಿತು.
         ಕಣ್ಣುಗಳಿಗೆ ಬಲ ನೀಡುವ, ಏಕಾಗ್ರತೆಯನ್ನು ಹೆಚ್ಚಿಸುವ, ಷಟ್ಕರ್ಮಗಳಲ್ಲಿ ಒಂದಾದ 'ತ್ರಾಟಕ'  ಎಂಬ ಕರ್ಮದ ಬಗ್ಗೆ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. 







   

No comments:

Post a Comment