Saturday 29 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 2

          ಯೋಗಾಭ್ಯಾಸಕ್ಕಾಗಿ ಗುರುಗಳ ಹುಡುಕಾಟದಲ್ಲಿದ್ದೆ. ನ್ಯಾಷನಲ್ ಶಾಲೆಯ ನನ್ನ 'ಸಂಸ್ಕೃತ' ಗುರುಗಳಾದ ಕೆ.ಟಿ.ಎಸ್ ಅವರು ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ಯೋಗಾಭ್ಯಾಸ ಮಾಡಲು ಉತ್ತಮ ಶಾಲೆ ಎಂದು ಸೂಚಿಸಿದರು. 'ಅಲ್ಲಿ ಗುರುಗಳಾಗಿರುವ ಚಿ.ವಿಶ್ವೇಶ್ವರಯ್ಯನವರಲ್ಲದೇ ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಕೂಡ ಆಗಾಗ ಬರುತ್ತಿರುತ್ತಾರೆ. ಅವರ ಬಳಿಯೂ ಕಲಿಯುವುದು ಸಾಕಷ್ಟಿದೆ' ಎಂದು ಹೇಳಿ ಅಲ್ಲೇ ಸೇರುವಂತೆ ಉತ್ತೇಜಿಸಿದರು. ನಾನು ಹೋಗಿ ಶ್ರೀ ವಿಶ್ವೇಶ್ವರಯ್ಯನವರನ್ನು ಭೇಟಿಯಾಗಿ ನನ್ನ ಮನದ ಇಂಗಿತವನ್ನು ಹೇಳಿಕೊಂಡೆ. 'ಯೋಗಾಭ್ಯಾಸ, ಪ್ರಾಣಾಯಾಮವಲ್ಲದೇ ಇನ್ನಾವುದೇ ರೀತಿಯ ಸಾಧನೆಗಳನ್ನಾದರೂ ಮಾಡುವುದು ನನಗೆ ಇಷ್ಟ' ಎಂದು ಹೇಳಿದೆ. ವಿಶ್ವೇಶ್ವರಯ್ಯನವರು "ಒಂದೆರಡು ತಿಂಗಳು ಯೋಗಾಭ್ಯಾಸ ಹಾಗೂ ಪ್ರಾಣಾಯಾಮದ ತರಬೇತಿ ಪಡೆಯಿರಿ. ನಂತರ ನಿಮಗೆ 'ತ್ರಾಟಕ' ಎಂಬ ಕಣ್ಣಿಗೆ ಹಾಗೂ ಮನಸ್ಸಿಗೆ ಪ್ರಯೋಗ ಒಡ್ಡುವ ವಿದ್ಯೆಯನ್ನು ಹೇಳಿಕೊಡುತ್ತೇನೆ, ನಾಳೆ ಬೆಳಿಗ್ಗೆ ಆರು ಗಂಟೆಗೆ ಮಂದಿರಕ್ಕೆ ಬನ್ನಿ" ಎಂದರು. 'ಸರಿ' ಎಂದು ನಾನು ಹೊರಡುವಾಗ "ಬೆಳಿಗ್ಗೆ ಬೇಗ ಎದ್ದು ಅಭ್ಯಾಸವಿದೆಯೋ? ಇಲ್ಲದಿದ್ದರೂ ಪರವಾಗಿಲ್ಲ, ಒಂದು ಗುಟ್ಟು ಹೇಳುತ್ತೇನೆ. 'ನಾನು ಆರು ಗಂಟೆಗೆ ಅಲ್ಲಿ ಇದ್ದೇ ಇರುತ್ತೇನೆ' ಎಂದು ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ನೀವು ಆಗ ಎದ್ದೇ ಏಳುವಿರಿ, ಬಂದೇ ಬರುತ್ತೀರಿ" ಎಂದು ಹೇಳಿ ನಕ್ಕರು. ಯೋಗದ ಪ್ರಥಮ ಪಾಠವನ್ನು, ಸೇರುವ ಮುನ್ನವೇ ಹೇಳಿಕೊಟ್ಟಿದ್ದರು. 
          ಮರುದಿನ ಬೆಳಿಗ್ಗೆ ಐದೂ ಮೂವತ್ತಕ್ಕೆ ಅಲಾರಾಂ ಇಟ್ಟಿದ್ದೆ. ಅಲಾರಾಂ ಹೊಡೆಯುವ ಮುನ್ನವೇ ಐದೂ ಇಪ್ಪತ್ತೊಂಭತ್ತಕ್ಕೇ ಎಚ್ಚರವಾಗಿತ್ತು. ಹೊರಗೆ ಬಂದಾಗ ಕೊರೆಯುವ ಚಳಿ. ಯೋಗಶಾಲೆ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದುದರಿಂದ ಆರಾಮಾಗಿ ಆರು ಗಂಟೆಗೆ ಮೊದಲೇ ತಲುಪಿದೆ. ಕಟ್ಟಡದ ಟೆರೇಸಿನ ಮೇಲೆ ಉಳಿದ ವಿದ್ಯಾರ್ಥಿಗಳೊಂದಿಗೆ ಹೋದೆ. ತುಂಡುಬಟ್ಟೆಯನ್ನುಟ್ಟುಕೊಂಡು ನಿಂತಿದ್ದ ಗುರುಗಳು ಹಿಂದೂ ಧ್ವಜವನ್ನು ಏರಿಸಿ, ಸೂರ್ಯನ ಮಂತ್ರವನ್ನು ಹೇಳುತ್ತಾ, ಸೂರ್ಯನಮಸ್ಕಾರವನ್ನು ಮಾಡಿದರು. ನಂತರ ಎಲ್ಲರೂ ಯೋಗಶಾಲೆಗೆ ಬಂದೆವು. ಮೊದಲ ದಿನ ಬಹಳ ಸುಲಭವಾದ ಎರಡು ಆಸನಗಳನ್ನು ಮಾಡಿಸಿದರು. ನಂತರ ಕೊನೆಗೆ ಸುಲಭಾತಿಸುಲಭವೆಂದು ನನಗನ್ನಿಸಿದ 'ಶವಾಸನ'ವನ್ನು ಮಾಡಿಸಿದರು. ನಾನಂತೂ 'ಯೋಗಾಸನವೆಂದರೆ ಇಷ್ಟೇನೇ, ತಿಂಗಳೆರಡುತಿಂಗಳೊಳಗೆ ಎಲ್ಲಾ ಆಸನಗಳನ್ನೂ ಅರೆದು ಕುಡಿಯುತ್ತೇನೆ' ಎಂದಂದುಕೊಂಡು ಗರ್ವಿಷ್ಠನಾದೆ. 
          ಹಂತಹಂತವಾಗಿ ಮೈಯ್ಯನ್ನು ಹಿಂಡಿ, ತಿರುಚಿ, ತಲೆಕೆಳಗಾಗಿ, ಕೈಕಾಲುಗಳನ್ನೆಳೆದು, ಸೆಳೆದು ಕಷ್ಟಾತಿಕಷ್ಟವಾದ ಆಸನಗಳನ್ನೆಲ್ಲಾ ಕಲಿಸಿದರು. ಜೊತೆಯಲ್ಲಿಯೇ ಪ್ರಾಣಾಯಾಮದ ಪಾಠವೂ ಆರಂಭವಾಗಿತ್ತು. ಅದೂ ಹಾಗೆಯೇ! ಅನುಲೋಮ, ವಿಲೋಮದಂತಹ ಸರಳ ಪ್ರಾಣಾಯಾಮದೊಂದಿಗೆ ಪ್ರಾರಂಭವಾದಾಗ 'ಪ್ರಾಣಾಯಾಮವೆಂದರೆ ಇಷ್ಟೇನೇ' ಎಂದೂ ಅನ್ನಿಸಿತ್ತು. ಆಮೇಲೆ ಗೊತ್ತಲ್ಲ! ಹೌದು, ಉಸಿರು ಬಿಗಿ ಹಿಡಿಯುವುದರಿಂದ ಪ್ರಾರಂಭವಾಗಿ ಮೂಲಬಂಧ, ಜಾಲಂಧರಬಂಧ ಹಾಗೂ ಉಡ್ಯಾನಬಂಧಗಳನ್ನು ಶಾಸ್ತ್ರಬದ್ಧವಾಗಿ, ಕರಾರುವಕ್ಕಾಗಿ ಮಾಡುವ ವೇಳೆಗೆ ಪ್ರಾಣಾಯಾಮಕ್ಕೂ, ಪ್ರಾಣ ಹಾಗೂ ಯಮನಿಗೂ ಇರುವ ಸಂಬಂಧ ಒಂದಷ್ಟು ಅರ್ಥವಾಗಿತ್ತು.             
ಇನ್ನಷ್ಟು ವಿವರಗಳು ಮುಂದಿನ ಬರಹದಲ್ಲಿ.. 

No comments:

Post a Comment