Thursday 27 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1

             'ಪ್ರಶ್ನಿಸದೇ ಒಪ್ಪಬೇಡ' ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಚ್. ನರಸಿಂಹಯ್ಯನವರು (ಪ್ರೀತಿಯ 'ಎಚ್.ಎನ್.') ಹೇಳುತ್ತಿದ್ದ ಮಾತು. ಎಳೆಯ ವಯಸ್ಸಿನಲ್ಲಿ ಮನದಲ್ಲಿ ನಾಟಿದ ಮಾತು. ನನಗೆ ಉಪನಯನವಾದ ಮೇಲೆ ನದೀ ತೀರಕ್ಕೆ ಕರೆದುಕೊಂಡು ಹೋಗಿ ನಮ್ಮ ಆಚಾರ್ಯರು ಸಂಧ್ಯಾವಂದನೆ ಮಾಡುವ ಕ್ರಮವನ್ನು ಹೇಳಿಕೊಡುತ್ತಿದ್ದರು. ಎಚ್.ಎನ್. ಅವರಿಂದ ಪ್ರಭಾವಿತನಾದ ನಾನು ಪ್ರತಿಯೊಂದು ಆಚಾರ ವಿಚಾರಗಳ ಕುರಿತಾಗಿ ಆಚಾರ್ಯರನ್ನು ಪ್ರಶ್ನಿಸುತ್ತಿದ್ದೆ. ಅವರೂ ತಾಳ್ಮೆಯಿಂದ ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ಸಂಧ್ಯಾವಂದನೆಯಲ್ಲಿ 'ಪ್ರಾಣಾಯಾಮ'ವೂ ಒಂದು ಭಾಗ. ಆಚಾರ್ಯರು ನನಗೆ ಮೂಗು ಹಿಡಿದುಕೊಂಡು  'ಓಂಭೂಃ, ಓಂಭುವಃ, ಓಂಸ್ವವಃ, ಓಂಮಹಃ, ಓಂಜನಃ, ಓಂ ತಪಃ ,ಓಂಸತ್ಯಂ ಓಂ ತತ್ಸವಿತುರ್ವರೇಣ್ಯಂ । ಭರ್ಗೋದೇವಸ್ಯ ಧೀಮಹಿ। ಧಿಯೋ ಯೋ ನಃ ಪ್ರಚೋದಯಾತ್।' ಎಂಬ ಮಂತ್ರವನ್ನು ಹೇಳಿ, ನೀರನ್ನು ಕೈ ಮೂಲಕ ಕೆಳಗೆ ತಟ್ಟೆಯಲ್ಲಿ ಬಿಟ್ಟು ಒಂದೇ ಬೆರಳನ್ನು ಕಣ್ಣಿಗೆ ಒತ್ತಿ 'ಓಂ ಆಪೋಜ್ಯೋತಿರಸೋsಮೃತಂ ಬ್ರಹ್ಮ ಭೂರ್ಭುವಸ್ವರೋಂ' ಎಂಬ ಮಂತ್ರವನ್ನು ಪಠಿಸಲು ಹೇಳಿದ್ದರು. 
ನಾನು ಅವರನ್ನು ಕೇಳಿದೆ 'ಪ್ರಾಣಾಯಾಮವೆಂದರೆ ಉಸಿರಾಟದ ನಿಯಂತ್ರಣ ಎಂದು ಎಲ್ಲೋ ಓದಿದ್ದೆ, ಹೀಗಿರುವಾಗ ಬರೀ ಮೂಗು ಹಿಡಿದುಕೊಂಡರೆ ಸಾಕೆ ?'
' ನಿಜ ಕಣಪ್ಪಾ ನೀನು ಹೇಳುವುದು, ಆದರೆ ಪ್ರಾಣಾಯಾಮ, ಹಠಯೋಗ ಮುಂತಾದವುಗಳನ್ನು ನುರಿತ ಗುರುಮುಖೇನ ಕಲಿಯಬೇಕು. ನಾವು ವೈದಿಕರು, ಅದರ ಬಗ್ಗೆ ತರಬೇತಿ ನೀಡುವಷ್ಟು ನಾನು ಅಭ್ಯಾಸ ಮಾಡಿಲ್ಲ, ಆದ್ದರಿಂದ ಸದ್ಯಕ್ಕೆ ನೀನು ಮೂಗು ಹಿಡಿದು ಮಂತ್ರ ಹೇಳಿದರೆ ಸಾಕು' ಎಂದರು. ಅಲ್ಲಿಂದ ಮುಂದೆ ನನ್ನ ದೃಷ್ಟಿಯೆಲ್ಲಾ ಪ್ರಾಣಾಯಾಮ ಕಲಿಸುವ ಸೂಕ್ತ ಗುರುವನ್ನು ಅರಸುತ್ತಿತ್ತು.
            ಇದು ಒಂದೆಡೆಯಾದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ  ಮಂಗಳೂರಿನಲ್ಲಿ ಒಮ್ಮೆ ಖ್ಯಾತ ಸಂಮೋಹಿನಿಕಾರರಾದ 'ದಿನ್ ಕೋಲಿ' ಅವರಿಂದ 'ಸಂಮೋಹಿನಿ ಪ್ರದರ್ಶನ' ಎಂಬ ಜಾಹಿರಾತು ನೋಡಿದೆ. ಸಂಮೋಹಿನಿಯ ಬಗ್ಗೆ ಒಂದಷ್ಟು ಕೇಳಿದ್ದೆ ಅಷ್ಟೇ. ಅಪ್ಪನ ಬಳಿ ಹೋಗಿ ಈ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ಕೇಳಿದೆ. ಅಂದೇ ಸಂಜೆ ಆ ಪ್ರದರ್ಶನಕ್ಕೆ ಕರೆದುಕೊಂಡು ಹೋದರು ಅಪ್ಪ. ಅಲ್ಲಿ ಆತ ಒಂದಷ್ಟು ಜನರನ್ನು ಸಂಮೋಹನಕ್ಕೆ ಒಳಪಡಿಸಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಿದ್ದರು. ನನಗೆ ನಂಬಲು ಕಷ್ಟವಾಗುತ್ತಿತ್ತು. 'ನೀವೆಲ್ಲಾ ನಿಮ್ಮ ಇಷ್ಟವಾದ ದೇವಸ್ಥಾನದಲ್ಲಿರುವಿರಿ' ಎಂದು ಆತ ಅಂದೊಡನೆ ಎಲ್ಲರೂ ದೇವಸ್ಥಾನದಲ್ಲಿ ಇರುವಂತೇ ಓಡಾಡುತ್ತಿದ್ದರು. ತೀರ್ಥ ತೆಗೆದುಕೊಳ್ಳುವುದು, ಪ್ರದಕ್ಷಿಣೆ ಮಾಡುವುದು, ನಮಸ್ಕರಿಸುವುದು... ಹೀಗೆ ತಾವು ದೇವಸ್ಥಾನದಲ್ಲೇ ಇರುವಂತೆ ಅನುಭವಿಸುತ್ತಿದ್ದರು ಹಾಗೂ ಹಾಗೆಯೇ ಓಡಾಡುತ್ತಿದ್ದರು. ನಾನು ತಂದೆಯವರನ್ನು 'ಇದೆಲ್ಲಾ ನಿಜವೇ ಅಥವಾ ಎಲ್ಲರೂ ಆಕ್ಟಿಂಗ್ ಮಾಡ್ತಿದ್ದಾರಾ?' ಎಂದು ಕೇಳಿದೆ. ಅದಕ್ಕೆ ಅಪ್ಪ ' ಅದು ನಟನೆ ಅಲ್ಲ ಅವರೆಲ್ಲಾ ಸಂಮೋಹನಕ್ಕೆ ಒಳಗಾಗಿದ್ದಾರೆ, ಆದ್ದರಿಂದ ಅವರಿಗೆ ಅದು ನಿಜವಾಗಿರುತ್ತದೆ.' ಅಂದರು. 
            ನಾನು ಪ್ರದರ್ಶನ ಮುಗಿದ ಮೇಲೆ ಸಭಾಂಗಣದ ಹಿಂಭಾಗಕ್ಕೆ ಹೋಗಿ ದಿನ್ ಕೋಲಿ ಅವರನ್ನು ಭೇಟಿಯಾಗಿ 'ಈ ವಿದ್ಯೆ ನನಗೂ ಕಲಿಯಲು ಆಸೆಯಿದೆ, ಕಲಿಸುವಿರಾ?' ಎಂದು ಕೇಳಿದೆ. ಆಗ ನನಗೆ ಸುಮಾರು ಹನ್ನೊಂದರ ಪ್ರಾಯ. ನನ್ನನ್ನು ನೋಡಿ ನಕ್ಕ ಅವರು 'ದಿನಾ ಮನಸ್ಸಿನಲ್ಲಿ ಒಂದು ಚುಕ್ಕೆಯನ್ನು ನೆನೆಸಿಕೊಂಡು ಧ್ಯಾನ ಮಾಡು, ನಿನಗೆ ಈ ವಿದ್ಯೆ ಒಲಿಯುತ್ತದೆ' ಎಂದು ಹೇಳಿದರು. ನಾನು ಅಂದಿನಿಂದ ದಿನಾ ಅಂತೆಯೇ ಧ್ಯಾನ ಮಾಡುತ್ತಿದ್ದೆ.
'ಅವ್ನು ನಿನ್ನ ಹತ್ರ ಬಂಡಲ್ ಬಿಟ್ಟಿದ್ದಾನೆ, ನೀನು ಹೀಗೆ ಮಾಡೋದು ವೇಸ್ಟು' ಅಂತ ಉಮಕ್ಕನ ಮಗ ವೆಂಕಟೇಶ ಹೇಳುವ ಹೊತ್ತಿಗೆ ನನಗೂ ಹಾಗನ್ನಿಸಲು ಶುರುವಾಗಿತ್ತು. ಆದ್ದರಿಂದ ಹಾಗೆ ಧ್ಯಾನ ಮಾಡುವುದನ್ನು ಬಿಟ್ಟುಬಿಟ್ಟೆ !
             ತಂದೆಯವರಿಗೆ ಬೆಂಗಳೂರಿಗೆ ವರ್ಗವಾದಾಗ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ಸೇರಿಕೊಂಡೆ (೧೯೭೪). ಬೆಂಗಳೂರಿಗೆ ಬಂದಮೇಲೆ ನಾನು ಅರಸುತ್ತಿದ್ದುದು ಸಂಮೋಹಿನಿ ವಿದ್ಯೆ ಕಲಿಸುವ ಗುರುಗಳು, ಯೋಗ - ಪ್ರಾಣಾಯಾಮ ಕಲಿಸುವ ಗುರುಗಳು ಹಾಗೂ ಚಿತ್ರಕಲೆ ಕಲಿಸುವ ಗುರುಗಳು. ಸತತ ಹುಡುಕಾಟದಿಂದ ನಾಲ್ಕೈದು ವರ್ಷಗಳೊಳಗೆ ಎಲ್ಲರೂ ದೊರೆತರು. ಸಂಮೋಹಿನಿ ವಿದ್ಯೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಬಳಿ ಕಲಿತೆ. ಶ್ರೀ ರಮೇಶ್ ಕಾಮತ್ ಅವರು ನೀಡಿದ 'Clinical study of Hypnosis' ಎನ್ನುವ ಪುಸ್ತಕ ನನಗೆ ತುಂಬಾ ಸಹಕಾರಿಯಾಯಿತು.
             ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ನನ್ನ ಯೋಗ ಶಾಲೆಯಾಯಿತು. ಗುರುಗಳಾದ ಶ್ರೀ ಚಿ. ವಿಶ್ವೇಶ್ವರಯ್ಯ (ಚಿ. ಸದಾಶಿವಯ್ಯನವರ ತಮ್ಮ ) ಅವರು ನನ್ನ ಗುರುಗಳು. ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದ ಗುರುರಾಜ ತಂತ್ರಿಯವರನ್ನೂ ಮರೆಯಲಾರೆ. 
            ನನಗೆ ಆಸಕ್ತಿಯಿದ್ದ ಚಿತ್ರಕಲೆಯನ್ನು ಅಭ್ಯಸಿಸಲು ಶ್ರೀ ಹಡಪದ್ ಅವರ 'Ken school of arts' ಸೇರಿಕೊಂಡರೂ ನಂತರ ನನ್ನ ಕಲಾಭ್ಯಾಸ ನಡೆದದ್ದು ಶ್ರೀ ಎಂ. ಟಿ. ವಿ. ಆಚಾರ್ಯ ಅವರ 'ಆಚಾರ್ಯ ಚಿತ್ರಕಲಾ'ಭವನ'ದಲ್ಲಿ.
            ಐದಾರು ವರ್ಷಗಳಲ್ಲಿ ನಾನೇನು ಕಂಡೆ, ಏನೇನು ಕಲಿತೆ ಎನ್ನುವುದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ. 


No comments:

Post a Comment