Monday, 30 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 3

        ನಂದಳಿಕೆಗೆ ಹೋಗಿ ನಮ್ಮ ಮೂಲವಿಗ್ರಹವನ್ನು ನೋಡಬೇಕೆಂಬ ಆಸೆ ಬಾಲ್ಯದಿಂದಲೇ ಚಿಗುರತೊಡಗಿತ್ತು. ಒಬ್ಬನೇ ಬಸ್ಸು ಹತ್ತಿ ನಂದಳಿಕೆಗೆ ಹೋದೆ. ಅಲ್ಲಿ ಒಬ್ಬ ಅಂಗಡಿಯಾತನನ್ನು 'ಇಲ್ಲಿ ಮಹಾಮಾಯಿದೇವಿ ದೇವಸ್ಥಾನ ಎಲ್ಲಿದೆ?' ಎಂದು ಕೇಳಿದೆ. ಆತ 'ಇಲ್ಲಿ ಮಹಾಮಾಯಿ ದೇವಸ್ಥಾನ ಯಾವುದೂ ಇಲ್ಲ. ಆದರೆ ದೇವಿಯ ಎರಡು ದೇವಸ್ಥಾನಗಳಿವೆ' ಎಂದ. 'ಪ್ರಾಣಿಬಲಿ ಎಲ್ಲಿ ನೀಡುತ್ತಾರೆ?' ಎಂದು ಮರುಪ್ರಶ್ನಿಸಿದೆ. ಅದಕ್ಕೆ ಆತ 'ಎರಡು ಕಡೆಯೂ ಕೊಡುತ್ತಾರೆ' ಎಂದು ಉತ್ತರಿಸಿದ. ನಾನು ಕೊಂಚ ತಬ್ಬಿಬ್ಬಾದೆ. ಎರಡೂ ದೇವಸ್ಥಾನಗಳನ್ನು ನೋಡಿಯೇ ಬಿಡುವುದು ಎಂದು ತೀರ್ಮಾನಿಸಿದೆ. 
        ಮೊದಲು ಹತ್ತಿರವಿದ್ದ  ದೇವೀ ದೇವಸ್ಥಾನಕ್ಕೆ ಹೋದೆ. ಅಲ್ಲಿದ್ದ ಪೂಜಾರಿಯ ಬಳಿ ಹೋಗಿ 'ಇಲ್ಲಿ ನವರಾತ್ರಿಯಂದು ಬಲಿ ಕೊಡುವ ಪದ್ಧತಿಯಿದೆಯೇ?' ಎಂದು ಕೇಳಿದೆ. ಅದಕ್ಕೆ ಅವರು 'ಹೌದು, ಪಾತ್ರಿಗೆ ಆವೇಶ ಬಂದಾಗ ರಸ್ತೆಯುದ್ದಕ್ಕೂ ಕೋಳಿಯ ಬಲಿ ಕೊಡುತ್ತಾರೆ' ಎಂದು ನಗುತ್ತಾ ಹೇಳಿದರು. 'ಈ ಮೂರ್ತಿ ನಿಮಗೆ ಸಿಕ್ಕಿದ್ದು ಎಲ್ಲಿಂದ?' ಎಂದು ಕುತೂಹಲದಿಂದ ಕೇಳಿದೆ.  'ಈ ವಿಗ್ರಹ ನಾವೇ ಮಾಡಿಸಿದ್ದು' ಎಂದು ಅವರು ಹೇಳಿದಾಗ ನಿರಾಸೆಯಾಯಿತು. 'ಇನ್ನೊಂದು ದೇವೀ ದೇವಸ್ಥಾನ ಇದೆಯಂತಲ್ಲ, ಅದು ಎಲ್ಲಿದೆ?' ಎಂದೆ. ಅವರು ತೋರಿಸಿದ ದಾರಿಯಲ್ಲಿ ಇನ್ನೊಂದು ದೇವಸ್ಥಾನವನ್ನು ಹುಡುಕಿ ಹೊರಟೆ.  


        ನಗರ ಪ್ರದೇಶದಿಂದ ತುಸು ಒಳಗಿತ್ತು ಆ ಇನ್ನೊಂದು ದೇಗುಲ. ಆ ಭಾಗವನ್ನು ಕಲ್ಯಾಗ್ರಾಮದ 'ಕೈರಬೆಟ್ಟು' ಎಂದು ಕರೆಯುತ್ತಾರೆ. ಮತ್ತೆ ಪೂಜಾರಿಯವರನ್ನು ಭೇಟಿ ಮಾಡಿ ಅದೇ ಪ್ರಶ್ನೆಯನ್ನು ಕೇಳಿದೆ. 'ಯಾರೋ ಕೊಂಕಣಿಯವರಿಂದ ನಮಗೆ ಸಿಕ್ಕಿದ ಮೂರ್ತಿಯಂತೆ ಇದು' ಎಂದು ಅವರು ಹೇಳಿದಾಗ ಮೈಯೆಲ್ಲಾ ರೋಮಾಂಚನವಾಯಿತು. 'ಆ ಕೊಂಕಣಿಯವರು ನಾವೇ. ನಮ್ಮ ಪೂರ್ವಜರು ನೀಡಿದ ಮೂರ್ತಿ ಇದು' ಎಂದು ಸವಿಸ್ತಾರವಾಗಿ ಮೂರ್ತಿಯ ಕಥೆಯನ್ನು ಅವರಿಗೆ ಅರುಹಿದೆ. ಪೂಜಾರಿಯವರಿಗೂ ಬಹಳ ಸಂತೋಷವಾಯಿತು.  
        ದೇವಿಗೆ ಮಂಗಳಾರತಿ ಮಾಡಿ ನನಗೆ ಆರತಿ ನೀಡಿದರು. ಮತ್ತೆ ಒಳಗೆ ಹೋದವರು ದೇವೀ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ನಾನು ಆವಾಕ್ಕಾದೆ. ನಮ್ಮಲ್ಲಿ ವಿಪರೀತ ಮಡಿ ಮೈಲಿಗೆ, ಅಲ್ಲದೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಮೇಲೆ  ಅಲ್ಲಿಂದ ಕದಲಿಸಲು ಸಾಧ್ಯವಿರುವುದಿಲ್ಲ. ದೇವಿಯ ಮೈಮೇಲಿದ್ದ ಹೂವೊಂದನ್ನು ಕೊಟ್ಟು 'ತೆಗೆದುಕೊಳ್ಳಿ, ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಕಣ್ತುಂಬಿಕೊಳ್ಳಿ' ಎಂದು ಹೇಳುತ್ತಾ ಮೂರ್ತಿಯನ್ನು ನನ್ನ ಕೈಗೆ ವರ್ಗಾಯಿಸಿದರು. ಭಾವುಕನಾಗಿ ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ತದೇಕಚಿತ್ತನಾಗಿ ನೋಡಿದೆ. ನುಣುಪಾದ ಪುಟ್ಟ ವಿಗ್ರಹ. ನದಿಯ ನೀರಿನಲ್ಲಿ ಬಹುಕಾಲ  ಇದ್ದುದರಿಂದಲೋ ಏನೋ, ತಣ್ಣಗೆ ಸವೆದಿತ್ತು. ಕಾಲಿನಡಿಯಲ್ಲಿ ಬೆಳ್ಳಿ ಪೀಠ. ಬಲದ ಕೈ ತುಂಡಾಗಿದ್ದುದರಿಂದ ಒಂದು ಬೆಳ್ಳಿಯ ಕಟ್ಟನ್ನು ಹಾಕಲಾಗಿತ್ತು. ಮೂರ್ತಿಯನ್ನು ನೋಡುತ್ತಾ ಕಣ್ಣಾಲಿಗಳು ಮಂಜಾದವು. ಇಡೀ ಇತಿಹಾಸ ಮನಸ್ಸಿನಲ್ಲಿ ಮೂಡಿತ್ತು. ಅದನ್ನೊಮ್ಮೆ ಎದೆಗೆ ಅಪ್ಪಿಕೊಂಡು ಅವರಿಗೆ ಹಿಂದಿರುಗಿಸಿದೆ. 
        ಈ ಮರೆಯಲಾಗದ ಜೀವನಾನುಭವವನ್ನು ನನ್ನ ಮಡದಿಯೂ ಅನುಭವಿಸಲಿ ಎಂಬ ಉದ್ದೇಶದಿಂದ ಮದುವೆಯಾದೊಡನೆ ಮಡದಿಯನ್ನು ಕರೆದುಕೊಂಡು ಆ ದೇಗುಲಕ್ಕೆ ಮತ್ತೆ ಭೇಟಿ ನೀಡಿದೆ. ಕೈಯಾರೆ ಮೂರ್ತಿಯನ್ನು ಹಿಡಿದು ಭಾವುಕರಾದ ಇಬ್ಬರಿಗೂ ಅದೊಂದು ಮನದಾಳದ ಆನಂದದ ಅಪೂರ್ವ ಅನುಭವ.   
                                                              ನಂದಳಿಕೆಯಲ್ಲಿರುವ ಮುದ್ದಣ ಕವಿಯ ಸ್ಮಾರಕ ಭವನ

         ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದೆ ಬರೆಯುತ್ತೇನೆ. 

Sunday, 29 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 2


        ನಮ್ಮ ಅಂದಿನ ಪುರೋಹಿತರು ತಾವು ಮಧ್ವಾಚಾರ್ಯರ ಪರಂಪರೆಯ ಅನುಯಾಯಿಗಳಾಗಿರುವುದರಿಂದ, ಪ್ರಾಣಿಹತ್ಯೆ ಮಾಡುವುದು ನಿಷಿದ್ಧ ಎಂದು ಖಡಾ ಖಂಡಿತವಾಗಿ ಹೇಳಿದಾಗ 'ಅವೇಶ'ದಿಂದೊಡಗೂಡಿದ ಪಾತ್ರಿ 'ಹಾಗಾದರೆ ನಾನು ಇಲ್ಲಿರಲು ಸಾಧ್ಯವಿಲ್ಲ. ನನ್ನ ವಿಗ್ರಹವನ್ನು ಕೇಳಿಕೊಂಡು ಬಂದವರೊಬ್ಬರಿಗೆ ಅದನ್ನು ನೀಡಿ, ನಿಮಗೆ ಬೇಕಾದ ಹಾಗೆ ಮತ್ತೊಂದು ವಿಗ್ರಹವನ್ನು ಕೆತ್ತಿಸಿಕೊಂಡು ನಿಮ್ಮ ವಿಧಿವಿಧಾನಗಳನ್ನು ನಡೆಸಬಹುದು. ನವರಾತ್ರಿಯ ಒಂಭತ್ತು ದಿನಗಳು ನಾನು ಸಾತ್ವಿಕ ರೂಪದಲ್ಲಿ ಇಲ್ಲಿ ಇರುತ್ತೇನೆ, ತಾಮಸ ರೂಪದಲ್ಲಿ ಅಲ್ಲಿಯೂ ಇರುತ್ತೇನೆ' ಎಂದು ಫರ್ಮಾನು ಹೊರಡಿಸಿದರಂತೆ. ನಮ್ಮ ಕುಟುಂಬ ಮೂಲಸ್ಥರೊಡನೆ ಮಾತನಾಡಿ, ಪುರೋಹಿತರು ಅದಕ್ಕೆ ಸಮ್ಮತಿಸಿದರಂತೆ. 
        ಇದಾದ ಕೆಲವು ದಿನಗಳಲ್ಲಿ ನಂದಳಿಕೆ(ಮುದ್ದಣ ಕವಿಯ ಊರು)ಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕನಸಿನಲ್ಲಿ ದೇವಿ ಕಾಣಿಸಿಕೊಂಡು ಇಂತಹ ದಿಕ್ಕಿನಲ್ಲಿ ಕಾಣಸಿಗುವ ದೇವೀ ದೇವಸ್ಥಾನದಲ್ಲಿರುವ ತನ್ನನ್ನು ಅಲ್ಲಿಂದ ಕರೆತಂದು ನಂದಳಿಕೆಯಲ್ಲಿ ದೇಗುಲ ಕಟ್ಟಲು ಆದೇಶ ನೀಡಿರುವುದಾಗಿ ಹೇಳಿಕೊಂಡಾಗ ನಮ್ಮ ಹಿರಿಯರಿಗೆ ಅಚ್ಚರಿ ಆಯಿತಂತೆ. 
        ಆ ವ್ಯಕ್ತಿಯ ಪೂರ್ವಾಪರಗಳನ್ನು ವಿಚಾರಿಸಿದ ಮೇಲೆ ಒಲ್ಲದ ಮನಸ್ಸಿನಿಂದ ಅವರಿಗೆ ವಿಗ್ರಹವನ್ನು ಹಾಗೂ ಅದರ ಚಿನ್ನಾಭರಣವನ್ನು ನೀಡುತ್ತಾರೆ. ಆದರೆ ಪ್ರತಿ ನವರಾತ್ರಿಯಂದು ಆ ಚಿನ್ನಾಭರಣವನ್ನು ಹೊಸದಾಗಿ ನಿರ್ಮಿಸಲಿರುವ ವಿಗ್ರಹವನ್ನು ಅಲಂಕರಿಸಲು ತರತಕ್ಕದ್ದು ಎಂಬ ಒಂದು ಕರಾರನ್ನು ಅವರ ಮುಂದಿಡುತ್ತಾರೆ. ಅದಕ್ಕೆ ಆ ವ್ಯಕ್ತಿಯು ಒಪ್ಪಿ ಮುಂದೆ ಅಂತೆಯೇ ನಡೆಯುತ್ತಾರೆ. ಕಾಲ ಕಳೆದಂತೇ ಒಂದು ವರ್ಷ ಅಲ್ಲಿಂದ ಆಭರಣಗಳನ್ನು ಅವರು ತರದೇ ಹೋದಾಗ ನಮ್ಮ ಹಿರಿಯರು ಪ್ರಶ್ನಿಸಿದರಂತೆ. ಆಗ ಅವರು ಉಡಾಫೆಯ ಉತ್ತರವನ್ನು ನೀಡಿದ ಪ್ರಸಂಗವೂ ನಡೆಯಿತಂತೆ. 
        ಈ ವಿಚಾರವನ್ನು ನವರಾತ್ರಿಯ ಕೊನೆಯ ದಿನ ಆವೇಶದ ಪಾತ್ರಿಯ ಬಳಿ ಹೇಳಿಕೊಂಡಾಗ 'ಅದನ್ನು ಇಲ್ಲಿ ತರಿಸುತ್ತೇನೆ' ಎಂದು ಹೇಳಿದರಂತೆ. ಇದಾದ ಮಾರನೆಯ ದಿನವೇ ನಂದಳಿಕೆಯ ದೇವಸ್ಥಾನದ ಕಡೆಯವರು ಎಲ್ಲಾ ಚಿನ್ನಾಭರಣಗಳನ್ನು ತಂದು ಒಪ್ಪಿಸಿ 'ಇನ್ನು ಈ ಆಭರಣಗಳು  ಇಲ್ಲಿಯೇ ಇರಲಿ, ನಾವಂತೂ ಇನ್ನು ಮುಂದೆ ಅಲ್ಲಿಗೆ ಕೊಂಡೊಯ್ಯುವುದಿಲ್ಲ' ಎಂದು ಹೇಳಿ ಆಭರಣವೆಲ್ಲವನ್ನೂ ಒಪ್ಪಿಸಿ ಹೊರಟು ಹೋದರಂತೆ. ಈಗಲೂ ಆ ಆಭರಣಗಳು ನಮ್ಮ ದೇಗುಲದ ವಶದಲ್ಲಿಯೇ ಇವೆ. ನವರಾತ್ರಿಯ ದಿನಗಳಂದು ಮಾತ್ರ ಅವುಗಳಿಂದ ದೇವಿಯನ್ನು ಅಲಂಕರಿಸುತ್ತಾರೆ. 
        ಹೊಸ ವಿಗ್ರಹದ ಬಗ್ಗೆ ಕೆಲವು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಅದನ್ನು ಕೆತ್ತಿದ ಶಿಲ್ಪಿ ಕಾರ್ಕಳದ ರಂಜಾಳ ಶೆಣೈ ವಂಶದವರು. ಈ ವಿಗ್ರಹದ ವೈಶಿಷ್ಟ್ಯವೇನೆಂದರೆ ದೇವಿಗೆ ನಾಲ್ಕು ಕೈಗಳಿವೆ. ಅವುಗಳಲ್ಲಿ ಬಲಗಡೆಯ ಎರಡು ಕೈಗಳಲ್ಲಿ ವಿಷ್ಣುವಿನ ಶಕ್ತಿಯ ಸಂಕೇತವಾಗಿ 'ಗದೆ' ಹಾಗೂ 'ಚಕ್ರ'ವಿದೆ. ಎಡಗಡೆಯ ಎರಡು ಕೈಗಳಲ್ಲಿ ಶಿವನ ಸಂಕೇತವಾಗಿ 'ತ್ರಿಶೂಲ' ಹಾಗೂ 'ಡಮರು' ಇದೆ. ಹೀಗೆ ಈ ಮೂರ್ತಿಗೆ ಹರಿ ಹಾಗೂ ಹರನ ಭಕ್ತರನ್ನು ಭೇದ ಭಾವವಿಲ್ಲದೇ ಸೆಳೆಯುವ ಆಕರ್ಷಣೆಯಿದೆ. 

        ದೇವಿಯ ಪ್ರತಿಷ್ಠೆ, ಮಾಧ್ವ ಮತದ ಸಂಪ್ರದಾಯದಂತೇ ನಡೆಯಲ್ಪಟ್ಟಿದೆ. ಸಾಲಿಗ್ರಾಮದ ಪೂಜೆಯ ನಂತರವೇ ದೇವಿಗೆ ಪೂಜೆ ಸಲ್ಲುವುದು. ಈ ಎಲ್ಲಾ ವಿವರಗಳನ್ನು ನನಗೆ ಹೇಳಿದ್ದು ಸುಮಾರು ನೂರಾ ಹನ್ನೆರಡು ವರ್ಷ ಬದುಕಿ ಬಾಳಿದ ನನ್ನ ತಂದೆಯ ಅಜ್ಜಿ 'ಅಪ್ಪಿಮಾಯಿ'. 
        ನಾನು ನಂದಳಿಕೆಗೆ ಹೋಗಿ ಮೂಲ ವಿಗ್ರಹವನ್ನು ನೋಡಿದ್ದು ಹಾಗೂ ಒಬ್ಬ ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದಿನ  ಕಂತಿನಲ್ಲಿ ಬರೆಯುತ್ತೇನೆ. 

Saturday, 28 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 1

        
                                                                                                 Pic courtesy : Ashok Nayak 

ನಾಳೆಯಿಂದ ನವರಾತ್ರಿ ಉತ್ಸವದ ಆರಂಭ. ನಮ್ಮ ಊರು ಬಂಟವಾಳದಲ್ಲಿ ನಮ್ಮದೇ ಆದ ಮಹಾಮಾಯಿ ದೇವಸ್ಥಾನದಲ್ಲಿ ವೈಭವದ ಆಚರಣೆಗಳು. ಬಾಲ್ಯದಿಂದ ಅನುಭವಿಸಿದ ದೈವ ಸಾನ್ನಿಧ್ಯದ ಕ್ಷಣಗಳು. 
        ದೇಶದ ಯಾವ ಮೂಲೆಯಲ್ಲಿದ್ದರೂ ನವರಾತ್ರಿಯ ಆ ಒಂಭತ್ತು ದಿನಗಳು ಮಹಮಾಯಿ ದೇವಸ್ಥಾನದಲ್ಲಿ ಹಾಜರು. ಬಾಲ್ಯದಲ್ಲಿ ಆಡಿದ ಆಟಗಳು, ದೇಗುಲದ ಬಗ್ಗೆ ಭಯಮಿಶ್ರಿತ ಪ್ರೀತಿ, ಆವೇಶ ಧರಿಸಿದ ಪಾತ್ರಿಯೊಡನೆ  ಭಾವನಾತ್ಮಕ ಸಂಬಂಧಗಳು... ಎಲ್ಲವೂ ನೆನಪಾಗಿ ಕಾಡುತ್ತವೆ. ಮುಂದೆ ಅದೇ ದೇಗುಲ, ನನ್ನ ತಾಂತ್ರಿಕ ಸಾಧನೆಗೆ ವೇದಿಕೆಯಾಗುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ತಾಂತ್ರಿಕ ಸಾಧನೆಯ ಕುರಿತಾಗಿ ಬರೆಯುವ ಮೊದಲು ನಮ್ಮ ದೇವಸ್ಥಾನದ ಬಗ್ಗೆ ಕೆಲವು ಐತಿಹಾಸಿಕ ವಿಚಾರಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ. 
         ಸುಮಾರು ನಾನ್ನೂರು ವರ್ಷಗಳ ಹಿಂದಿನ ಮಾತು. ನಮ್ಮದು ಪಾಳೇಗಾರರ ವಂಶ. ಅಣ್ಣ ತಮ್ಮಂದಿರಾದ ರಾಮ ನಾಯಕ್ ಹಾಗೂ ಕೃಷ್ಣ ನಾಯಕ್ ಅವರು ಅಂದು ಪಾಳೆಗಾರಿಕೆ ನಡೆಸುತ್ತಿದ್ದರು. ಕನ್ನಡದ ರಾಜ (ಹೆಸರು ತಿಳಿದಿಲ್ಲ, ತಿಳಿದಿದ್ದ ಒಬ್ಬರೇ 'ಅಪ್ಪಿ ಮಾಯಿ' ಇಂದು ನಮ್ಮೊಂದಿಗಿಲ್ಲ. ಸುಮಾರು ನೂರಾ ಹನ್ನೆರಡು ವರ್ಷ ಆಕೆ ಬದುಕಿದ್ದರು.) ಒಬ್ಬನಿಗೆ ಸಹಾಯಹಸ್ತ ಚಾಚಿ, ಮರಾಠಿಗರ ಮೇಲೆ ತಮ್ಮ ಸೈನ್ಯದೊಂದಿಗೆ ದಂಡೆತ್ತಿ ಹೋಗಿ ಗೆದ್ದು ಬರುವಾಗ ನದಿಯೊಂದನ್ನು ದಾಟುವಾಗ ಸಿಕ್ಕಿದ ಮೂರ್ತಿಯೇ ನಮ್ಮ 'ಮಹಾಮಾಯಿ'. ಅಂದು ಸಹಕಾರ ನೀಡಿದ್ದಕ್ಕೆ ಬಂಟವಾಳದ ಸಮೀಪ ಇರುವ 'ಕೊಳ್ ಕೆರೆ' ಎಂಬ ಊರನ್ನು ತಾಮ್ರಶಾಸನದ ಮೂಲಕ ನಮ್ಮ ಪೂರ್ವಜರಿಗೆ ಕಾಣಿಕೆಯಾಗಿ ಕನ್ನಡದ ಅರಸರು ನೀಡಿದ್ದರು. ಅಲ್ಲಿಂದ ಮುಂದೆ ತಮ್ಮ ಆಳ್ವಿಕೆಯನ್ನು ನಾಯಕ್ ವಂಶಸ್ಥರು ಕೊಳ್ ಕೆರೆಯಿಂದ ಮುಂದುವರೆಸುತ್ತಾರೆ. 
        ಇಂದಿಗೂ ಕೆ. ಪ್ರವೀಣ್ ನಾಯಕ್ ಎಂಬ ನನ್ನ ಹೆಸರಿನಲ್ಲಿರುವ 'ಕೆ '  ಕೊಳ್ ಕೆರೆಯನ್ನು ಪ್ರತಿನಿಧಿಸುತ್ತದೆ. ಮೊಮ್ಮಕ್ಕಳಿಗೆ ಅಜ್ಜನ ಹೆಸರು ಇಡುವುದು ವಾಡಿಕೆಯಾಗಿದ್ದುದರಿಂದ ತಲೆತಲಾಂತರದಿಂದ ರಾಮ ನಾಯಕನ ಮೊದಲ ಮೊಮ್ಮಗನಿಗೆ ರಾಮ ನಾಯಕನೆಂದೇ ಹೆಸರಿಡಲಾಯಿತು. ಎರಡನೇ ಮೊಮ್ಮಗನಿಗೆ ಕೃಷ್ಣ ನಾಯಕನೆಂದೇ ಹೆಸರಿಡಲಾಯಿತು. ಹೀಗೆ ಮುಂದುವರೆದ ಪರಂಪರೆ ನನ್ನ ದೊಡ್ಡಪ್ಪ ರಾಮ ನಾಯಕ ಹಾಗೂ ನನ್ನ ತಂದೆ ಕೃಷ್ಣ ನಾಯಕ ಅವರವರೆಗೂ ಮುಂದುವರೆಯಿತು. ಪ್ರತಿ ತಲೆಮಾರಿನಲ್ಲೂ ಇಬ್ಬರು ಗಂಡು ಮಕ್ಕಳು ಖಾಯಂ ಆಗಿ ಇರುತ್ತಿದ್ದರು. ರಾಮ ನಾಯಕ ಹಾಗೂ ಕೃಷ್ಣ ನಾಯಕರ ಪರಂಪರೆ ಹೀಗೆ ಮುಂದುವರೆಯಿತು. 
        ಈಗ ಮೂರ್ತಿಯ ವಿಷಯಕ್ಕೆ ಬರೋಣ, ನದಿಯಲ್ಲಿ ಸಿಕ್ಕಿದ ಮೂರ್ತಿಯನ್ನು ನೋಡಿ, ಅದರ ಸೌಂದರ್ಯಕ್ಕೆ ಮರುಳಾಗಿ ನಮ್ಮ ಪೂರ್ವಜರು ಆಗಿನ ಅವರ ಆಳ್ವಿಕೆಯ ಸ್ಥಾನವಾದ ಬಂಟವಾಳಕ್ಕೆ ಕರೆತಂದರು. ಅಲ್ಲಿ ತಮ್ಮ ದೇವರ ಮನೆಯಲ್ಲಿ ಇಟ್ಟು ದಿನಂಪ್ರತಿ ಪೂಜೆ ಮಾಡುತ್ತಿದ್ದರು. ನವರಾತ್ರಿಯ ದಿನ ಬಂದಾಗ ಅಂದಿನ ಕೃಷ್ಣ ನಾಯಕ್ ಅವರಿಗೆ ಮೈ ಮೇಲೆ ದೇವಿಯ ಆವಾಹನೆ ಆಯಿತಂತೆ. ತನಗೆ ರಕ್ತಬಲಿ ಬೇಕೆಂದು ಕೇಳಿದಾಗ ಎಲ್ಲರೂ ತಬ್ಬಿಬ್ಬಾಗಿ ಅಂದಿನ ಪುರೋಹಿತ ಆಚಾರ್ಯ ಅವರನ್ನು ಕರೆಸಿದರು. ಆಚಾರ್ಯರು ' ತಾವು ಮಾಧ್ವ ಪಂಥವನ್ನು ಸ್ವೀಕಾರ ಮಾಡಿರುವುದರಿಂದ ಬಲಿ ಕೊಡುವುದು ಅಸಾಧ್ಯ ಎಂದು ಅದರ ಬದಲು ಕುಂಬಳಕಾಯಿಯನ್ನು ಹೊಡೆದು ಕುಂಕುಮವನ್ನು ಸವರಿ 'ಇದನ್ನೇ ಬಲಿ ಎಂದು ಸ್ವೀಕರಿಸು ತಾಯಿ' ಎಂದು ಬೇಡಿ ಕೊಂಡರಂತೆ. ಅಂದು ಅದನ್ನು ಒಪ್ಪಿಕೊಂಡ ಆವೇಶದ ಪಾತ್ರಧಾರಿ ಮುಂದಿನ ವರ್ಷದಲ್ಲಿ ಇದಕ್ಕೆ ಸೂಕ್ತವಾದ ಪರಿಹಾರ ಬೇಕೇ ಬೇಕು ಎಂದು ಹೇಳಿದರಂತೆ. ಅಲ್ಲದೇ ಬಲಿ ಕೇಳಲು ಕಾರಣವಾಗಿ 'ವಿಗ್ರಹದ ಒಂದು ಭಾಗ ಭಿನ್ನವಾಗಿದ್ದುದರಿಂದ ಪ್ರಾಣಿಬಲಿ ಅನಿವಾರ್ಯ' ಎಂದೂ ಹೇಳಿದರಂತೆ.
        ಪ್ರಾಣಿಬಲಿಯನ್ನು ಸಾರಾಸಗಟಾಗಿ ನಿರಾಕರಿಸಿದ ಆಚಾರ್ಯರಿಗೆ ಆವೇಶಕ್ಕೆ ಒಳಗಾದ ವ್ಯಕ್ತಿ ಹೇಳಿದ್ದೇನು ? ಆ ವಿಗ್ರಹ ಈಗ ಎಲ್ಲಿದೆ ? ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Monday, 26 August 2019

ನಾನೊಂದು ಬೆಕ್ಕು - 3

          ಹಾಯ್ ಫ್ರೆಂಡ್ಸ್, ನೆನ್ನೆ ನಾನು ಮಾತು ಕೊಟ್ಟಂತೆ ನನ್ನ ಬಾಲ್ಯದ  ಸಂತಸದ ಕ್ಷಣಗಳ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 


          ನೋಡಿದಿರಾ? ಎಲ್ಲರೂ ನನ್ನನ್ನು ಮುದ್ದಿಸುವವರೇ. ನಾನು ಕನ್ಯಾವಸ್ಥೆಗೆ ಕಾಲಿಟ್ಟೆ. ಕಾಲಿಟ್ಟೆ ಅಷ್ಟೇ.. ಅದು ಹೇಗೋ ಏನೋ ನನ್ನ ಜಾಡು ಹಿಡಿದು ಹಲವಾರು ಗಂಡು ಗಡವ ಬೆಕ್ಕುಗಳು ನನ್ನ ಬೆನ್ನು ಹತ್ತಿದವು. ನಾನಿನ್ನೂ ಬಾಲ್ಯದ ತುಂಟಾಟಗಳ ಗುಂಗಿನಲ್ಲೇ ಇದ್ದೆ. ನನಗೆ ಇಷ್ಟು ಬೇಗ ತಾಯಿಯಾಗುವುದು ಬೇಕಿರಲಿಲ್ಲ. ಆದರೆ ಈ ದುಷ್ಟ ಪುರುಷರ ಕಪಿಮುಷ್ಠಿಯಿಂದ ಪಾರಾಗುವುದು ಸುಲಭದ ಮಾತಾಗಿರಲಿಲ್ಲ. ಅವು ಹತ್ತಿರ ಬಂದಾಗ ಕೆಲವೊಮ್ಮೆ ಪರಚಿಬಿಡುತ್ತಿದ್ದೆ. ತಪ್ಪಿಸಿಕೊಂಡು ಓಡುತ್ತಿದ್ದೆ. ಸಣ್ಣ ಸಣ್ಣ ಜಾಗಗಳಲ್ಲಿ ಅವಿತುಕೊಳ್ಳುತ್ತಿದ್ದೆ. ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ರಾತ್ರಿ ನಿದ್ದೆ ಮಾಡಲು ಹೆದರುತ್ತಿದ್ದೆ. ಯಾವ ಕ್ಷಣದಲ್ಲಿ ಯಾವ ಗಂಡು ಬೆಕ್ಕು ದಾಳಿ ಮಾಡುವುದೋ ಎಂಬ ಭಯ. ನಿಮ್ಮಗಳ ಹಾಗೆ ಬಾಗಿಲು ಮುಚ್ಚಿ ಮಲಗಲು ನನಗೆ ನನ್ನದೇ ಆದ ಮನೆ ಇರಲಿಲ್ಲವೇ!  ಒಮ್ಮೆ ಬೀದಿಯಲ್ಲಿ ಹೆಣ್ಣೊಬ್ಬರು 'ಈ ಇಪ್ಪತ್ತೊಂದನೇ ಶತಮಾನದಲ್ಲಿ ಮಹಿಳೆಯರು ಅಬಲೆಯರಲ್ಲ. ಸಬಲೆಯರು. ಸರಿಸಮಾನರು' ಎಂದೆಲ್ಲಾ ಭಾಷಣ ಬಿಗಿಯುತ್ತಿದ್ದರು. ನನಗನ್ನಿಸಿದ್ದು  ಇಪ್ಪತ್ತೊಂದಲ್ಲ, ಇನ್ನೂರು ಶತಮಾನಗಳು ಕಳೆದರೂ ಮಹಿಳೆಯರನ್ನು ಅಬಲೆಯರಾಗಿಯೇ ಇಡಲು ಪ್ರಯತ್ನಿಸುತ್ತದೆ ಈ ಪುರುಷ ಪ್ರಧಾನ ಸಮಾಜ.     

          ಅದೊಂದು ರಾತ್ರಿ ಸುಸ್ತಾಗಿ ಮಲಗಿದ್ದೆ. ಕಣ್ಣುರೆಪ್ಪೆಗಳು ಅದಾವಾಗ ಮುಚ್ಚಿದವೋ ತಿಳಿಯದು. ಗಂಡುಬೆಕ್ಕೊಂದು ಎರಗಿರುವುದು ಅರಿವಾದಾಗ ತಡವಾಗಿತ್ತು. ಹೌದು. ನಾನು ತಾಯಿಯಾಗಲೇ ಬೇಕಾಯಿತು. ಈಗ ಮತ್ತೊಂದು ಸಮಸ್ಯೆ ಕಾಡತೊಡಗಿತು. ಈ ಮರಿಗಳನ್ನು ಹೆರುವುದು, ಜೋಪಾನ ಮಾಡುವುದು ಎಲ್ಲಿ? ಈ ಅನಾಗರೀಕ ಪ್ರಪಂಚದಲ್ಲಿ ನನ್ನ ಮರಿಗಳನ್ನು ಸಂರಕ್ಷಿಸಲು ಸುರಕ್ಷಿತವಾದ ಸ್ಥಳ ಯಾವುದು?  ಕಣ್ಣಿಗೆ ಬಿದ್ದ ಸ್ಥಳಗಳನ್ನೆಲ್ಲಾ ತಡಕಾಡಿದೆ. ಸಜ್ಜಾ ಮೇಲೆ, ಬಟ್ಟೆ ಒಗೆಯುವ ಕಲ್ಲಿನ ಹಿಂದೆ, ಗಿಡಗಳ ಮರೆಯಲ್ಲಿ.. ಊಹೂಂ ಯಾವುದು ಸುರಕ್ಷಿತವಲ್ಲ ಎಂದೇ ಅನಿಸುತ್ತಿತ್ತು. 'ಆ' ಮನೆಯಲ್ಲಿ ಹೇಗಾದರೂ ನುಸುಳೋಣವೆಂದು ಶತಪ್ರಯತ್ನ ಪಟ್ಟೆ, ಎಲ್ಲವೂ ವ್ಯರ್ಥವಾದವು. 
          ಪುಣ್ಯವಶಾತ್  'ಆ'  ಮನೆಯ ಪಕ್ಕದ ಮನೆಯವರು ನಾನು ಮನೆಯೊಳಗೆ ನುಗ್ಗಿದಾಗ ನನ್ನ ಪರಿಸ್ಥಿತಿಯನ್ನು ನೋಡಿ ಆಶ್ರಯ ಕೊಟ್ಟರು. ಅಂತೂ ಮುದ್ದಾದ ಮೂರು ಮರಿಗಳಿಗೆ ಜನ್ಮ ನೀಡಿದೆ. ಅಷ್ಟು ದಿನಗಳ ಪ್ರಯಾಸ ಹಾಗೂ ಆಯಾಸ ಎಲ್ಲವೂ ಮಂಜಿನಂತೆ ಕರಗಿದವು. ತಾಯ್ತನದ ಸುಖವನ್ನು ಅನುಭವಿಸಿದೆ. ಮಕ್ಕಳಿಗೆ ಹಾಲುಣಿಸುವುದು, ಮುದ್ದಾಡುವುದು, ಜೀವನೋಪಾಯಕ್ಕೆ ಬೇಕಾದ ವಿಧವಿಧದ ಶಿಕ್ಷಣ ನೀಡುವುದರಲ್ಲಿ ದಿನಗಳೆದದ್ದೇ ಗೊತ್ತಾಗಲಿಲ್ಲ. ಅವುಗಳಿಗೂ ಹಲ್ಲು ಬಲಿತು ಕರಂ ಕುರುಂ ಎಂದು ಮನೆಯವರು ನೀಡಿದ ತಿಂಡಿಯನ್ನು ನನ್ನ ಜೊತೆಯೇ ತಿನ್ನುತ್ತಿದ್ದವು. ಇವೆಲ್ಲವೂ ನನ್ನ ಪಾಲಿನ ಸ್ವರ್ಗವಾಗಿತ್ತು. ನಾನೂ ನನ್ನ ಮರಿಗಳು ಆಹಾ! 


          ಕೆಲದಿನಗಳಲ್ಲಿ  ಅವರ ಸಂಬಂಧಿಕರೊಬ್ಬರು ಬಂದರು. ' ಒಹ್ ಮರಿಗಳು ಎಷ್ಟು ಮುದ್ದಾಗಿವೆ' ಎಂದು ಅವರು ಹೇಳಿದಾಗ ನನಗೂ ಹೆಮ್ಮೆಯೆನಿಸಿತ್ತು. ಆದರೆ ಮುಂದಿನ ಮಾತುಗಳು ನನ್ನ ಕಿವಿಗೆ ಕಾದ ಸೀಸ ಹುಯ್ದಂತಾಗಿತ್ತು. 'ಒಂದು ಮರೀನಾ ನಾವು ತೆಗೆದುಕೊಂಡು ಹೋಗ್ತೀವಿ' ಎಂದಾಗ ಮನೆಯವರು 'ಆಯಿತು, ಚೆನ್ನಾಗಿ ನೋಡಿಕೊಳ್ಳಿ'  ಎಂದು ನನ್ನ ಬಳಿಯಿದ್ದ ಮರಿಯನ್ನು ಎತ್ತಿಕೊಂಡು ಅವರ ಕೈವಶ ಮಾಡಿದರು. ನಾನು ನನ್ನ ಕೈಲಾದ ಮಟ್ಟಿಗೆ ಪ್ರತಿರೋಧಿಸಿದೆ. ಆದರೆ ಬೆಕ್ಕಾದ ನಾನೆಲ್ಲಿ? ಬಲಿಷ್ಠ ಮಾನವರೆಲ್ಲಿ? ನೋಡನೋಡುತ್ತಿದ್ದಂತೆ ನನ್ನ ಪುಟ್ಟ ಕಂದನೊಬ್ಬ ನನ್ನಿಂದ ಮರೆಯಾದ. 

          ಉಳಿದ ಎರಡುಮರಿಗಳನ್ನು ಜೀವದಂತೆ ಕಾಪಾಡುತ್ತಿದ್ದೆ. ಆ ದುರ್ದಿನ ಬಂದೇಬಿಟ್ಟಿತು. ನನ್ನ ಬಾಳಿಗೆ ಬರಸಿಡಿಲು ಬಡಿದ ದಿನ. ನಾನು ಎಂದಿನಂತೆ ಹೊರ ಹೋಗಿ ಮನೆಗೆ ಬರುವುದರೊಳಗೆ ನನ್ನ ಉಳಿದೆರಡು ಕಂದಮ್ಮಗಳು  ಕಾಣೆಯಾಗಿದ್ದವು. ಮನೆಯೆಲ್ಲಾ ಹುಡುಕಾಡಿದೆ. ಕಂಡ ಕಂಡ ಸ್ಥಳಗಳನ್ನೆಲ್ಲ ತಡಕಾಡಿದೆ. ಸುಸ್ತಾಗಿ ದಣಿದು ಬಳಲಿ ಬೆಂಡಾಗಿ ಮನೆಗೆ ಬಂದಾಗ ಮನೆಯಾಕೆ ನನ್ನನ್ನು ಮುದ್ದಿಸುತ್ತಾ 'ಏನೂ ಯೋಚನೆ ಮಾಡಬೇಡ. ನಿನ್ನ ಎರಡು ಮರಿಗಳನ್ನು ತೆಗೆದುಕೊಂಡು ಹೋದವರು ತುಂಬಾ ಒಳ್ಳೆಯ ಜನ. ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ' ಎಂದರು. ನನಗೆಷ್ಟು ಕೋಪ ಬಂದರೇನು ಪ್ರಯೋಜನ?  'ಬಡವನ ಕೋಪ ದವಡೆಗೆ ಮೂಲ' ಎಂಬ ಗಾದೆ ಮಾತು ನೆನಪಾಗಿ 'ಬಡವಾ ನೀನು ಮಡಗ್ದಂಗಿರು' ಎಂದು ಅಸಹಾಯಕಳಾಗಿ ಮೂಲೆ ಸೇರಿದೆ. ದುಃಖ ಉಮ್ಮಳಿಸಿ ಬರುತ್ತಿತ್ತು. ಇನ್ನೆಲ್ಲಿ ನಾನು ಮುದ್ದು ಮಾಡುತ್ತಿದ್ದ ಆ ಕಂದಮ್ಮಗಳು? ಎಲ್ಲಿರುವವೋ? ಎಷ್ಟು ಅಪಾಯಗಳನ್ನು ಎದುರಿಸುತ್ತಿರುವವೋ? ಏನೂ ಅರಿಯದ ಪುಟ್ಟ ಕಂದಮ್ಮಗಳು. ಅದು ಹೇಗೆ ನಿಭಾಯಿಸುತ್ತವೋ? ಈ ಚಿಂತೆಗಳಲ್ಲೇ ಮನಸ್ಸು ಮೂಕವಾಯಿತು. ಕೇವಲ ಕೆಲಕಾಲಗಳ ಹಿಂದಿದ್ದ ಉತ್ಸಾಹಕ್ಕೆ ಮಂಕು ಬಡಿಯಿತು. 
          ಮತ್ತೆ 'ಆ' ಮನೆಯ ನೆನಪಾಯಿತು. ಅಲ್ಲಿ ನನಗಾಗಿ ಮನೆಯ ಹಿಂದೆ ಹಳೆಯ ಕುರ್ಚಿಯೊಂದನ್ನು ಇಟ್ಟಿದ್ದರು. ಅಲ್ಲಿ ಒಬ್ಬಳೇ ಹೋಗಿ ಕುಳಿತುಕೊಳ್ಳುತ್ತೇನೆ. ನೂರೊಂದು ನೆನಪು ಅಂತರಾಳದಲ್ಲಿ ಮಿಡಿಯುತ್ತಾ ಇರುತ್ತದೆ. ಅರಿವು ಮೂಡುವ ವೇಳೆಗೆ ನಾನು ತಬ್ಬಲಿಯಾಗಿದ್ದೆ. ಮಕ್ಕಳಲ್ಲಿ ಅರಿವು ಮೂಡಿಸುವ ಮೊದಲೇ ಅವರನ್ನು ತಬ್ಬಲಿಗಳನ್ನಾಗಿ ಮಾಡಿದ ಅಸಹಾಯಕ ಪಾಪಿ ನಾನು. ಆದರೂ ಮನದ ಮೂಲೆಯಲ್ಲೊಂದಾಸೆ. ಮತ್ತೆ ನನ್ನ ಕಂದಮ್ಮಗಳು ನನ್ನನ್ನು ಹುಡುಕಿ ಬಂದೆ ಬರುತ್ತವೆ. ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ. 


Sunday, 25 August 2019

ನಾನೊಂದು ಬೆಕ್ಕು - 2

         .. ನಂತರದ ದಿನಗಳು ನನ್ನ ಜೀವನದ ಸುವರ್ಣ ದಿನಗಳು. ನಾನು ಹೇಗಿದ್ದೇನೆಂಬ ಅರಿವು ನನಗಿರದಿದ್ದರೂ 'ಎಷ್ಟು ಮುದ್ದಾಗಿದೆ ನೋಡು' 'ಪುಟಾಣಿ ಪುಟ್ಟು' 'ಮುದ್ದು ಬಿಲ್ಲಿ' ಎಂದೆಲ್ಲಾ ಕರೆಯುತ್ತಿದ್ದುದರಿಂದ  ನಾನೊಂದು ಚೆಂದವಾದ ಬೆಕ್ಕಿನಮರಿಯಾಗಿರಬಹುದೇನೋ ಎಂದೆನಿಸುತ್ತಿತ್ತು. 



         'ಆ' ಮನೆಯವರು ನನ್ನನ್ನು 'ಬಿಲ್ಲಿ ಬಿಲ್ಲಿ' ಎಂದು ಕರೆಯುತ್ತಿದ್ದರು. ಪಕ್ಕದಮನೆಗೆ ಹೋದಾಗ ಅವರು ನನ್ನನ್ನು 'ರೋಜಿ' ಎಂದು ಕರೆಯುತ್ತಿದ್ದರು. ಸುತ್ತಮುತ್ತಲಿನ ಮನೆಗಳಲ್ಲಿ ನಾನೊಂದು ಆಕರ್ಷಣೆಯ ಬಿಂದುವಾಗಿದ್ದೆ. ಇದನ್ನು ಗರ್ವದಿಂದಲ್ಲ, ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಎಲ್ಲ ಮನೆಯವರು ನನಗೆ ವಿಧವಿಧದ ತಿಂಡಿತೀರ್ಥಗಳನ್ನು ಕೊಡುತ್ತಿದ್ದರು. 



          ಆದರೆ ನಾನು ಬೆಳಗಿನ ಬ್ರೇಕ್ ಫಾಸ್ಟ್ ಮಾಡಲು 'ಆ' ಮನೆಯ ಬಳಿಯೇ ಕಾಯುತ್ತಿದ್ದೆ. ಅವರು ಮಂಗಳೂರಿಗರಾಗಿದ್ದರಿಂದ ಒಣಮೀನನ್ನು ನೀರಿನಲ್ಲಿ ನೆನೆಸಿ ಮೃದುವಾಗಿಸಿ ಕೊಡುತ್ತಿದ್ದರು. ನಂತರ ಹಾಲು ಕುಡಿಯಲು ಕೊಡುತ್ತಿದ್ದರು. ಅವರು ಕೊಡದಿದ್ದರೆ ನಾನು ಹಠ ಮಾಡುತ್ತಿದ್ದೆ. ಮನೆಯ ಮುಂದೆ ಧರಣಿ ಕೂತು 'ಮ್ಯಾವ್.. ಮ್ಯಾವ್' ಎಂದು ಕಿರುಚುತ್ತಲೇ ಇರುತ್ತಿದ್ದೆ. 



          ಗಂಡ ಅಥವಾ ಹೆಂಡತಿ ಅಥವಾ ಇಬ್ಬರೂ ಬಂದು ನನಗೆ ಅತಿಥಿ ಸೇವೆ ಮಾಡುತ್ತಿದ್ದರು. ಒಮ್ಮೊಮ್ಮೆ ತಿಂಡಿ ಕೊಡಲು ಆಟವಾಡಿಸುತ್ತಿದ್ದರು. ವಾರಾಂತ್ಯದಲ್ಲಿ ಅವರ ಮಗಳೂ ಬಂದು ಸೇರುತ್ತಿದ್ದಳು. ಅವಳು ಯಾವುದೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅದೆಂತದೋ ಸೈಕಾಲಜಿಸ್ಟ್ ಎಂದು ಕೇಳಿದ ನೆನಪು. ಅವಳೂ ನನ್ನನ್ನು ಚೆನ್ನಾಗಿ  ಗೋಳುಹುಯ್ಯುತ್ತಾ ಆಟವಾಡಿಸುತ್ತಿದ್ದಳು. 
          ನಾನೂ ಕೂಡಾ ನನ್ನದೇ ರೀತಿಯಲ್ಲಿ ಅವರೆಲ್ಲರನ್ನೂ ಆಟವಾಡಿಸುತ್ತಿದ್ದೆ. ನನ್ನ ಹಲ್ಲು ಹಾಗೂ ಉಗುರುಗಳು  ಬೆಳೆಯತೊಡಗಿದ್ದವು. ಅದರ ಸದವಕಾಶವನ್ನು ಪಡೆದುಕೊಂಡ ನಾನು ಗಂಡನ ಸ್ಕೂಟರನ್ನು ಹತ್ತಿ ಸೀಟನ್ನು ಪರಪರನೆ ಕೆರೆಯುತ್ತಿದ್ದೆ.  ನನ್ನನ್ನು ಹಿಡಿಯಲು ಬಂದಾಗ ಚಕ್ರದಡಿಯಿಂದ ನುಸುಳಿ, ಸೀಟಿನ ಮೇಲೆ ಎಗರಿ, ಕೆಳಗೆ ಹಾರಿ, ಸ್ಕೂಟರ್ ಸುತ್ತು ಹೊಡೆದು ಸುಸ್ತು ಹೊಡೆಸುತ್ತಿದ್ದೆ. ನಂತರ  ಸ್ಕೂಟರಿನ ಮೇಲೆ ಮಹಾರಾಜನಂತೆ ಕುಳಿತುಕೊಳ್ಳುತ್ತಿದ್ದೆ. ರಾಜ್ಯವೊಂದನ್ನು ಗೆದ್ದಷ್ಟು ತೃಪ್ತಿ ನನಗಾಗ. 



          ನನಗೆ ತಿಂಡಿ ಕೊಡುತ್ತಾರೆ, ಹಾಲು ಕೊಡುತ್ತಾರೆ, ಮುದ್ದು ಮಾಡುತ್ತಾರೆ, ಆದರೂ ಮನೆಯ ಒಳಗೆ ಜಾಗ ಕೊಡಲು ಮಾತ್ರ ಸಿದ್ಧರಿರಲಿಲ್ಲ. ನನ್ನಿಂದ ಅವರು ಖುಷಿ ಪಟ್ಟುಕೊಳ್ಳುತ್ತಿದ್ದರೂ ಸಾಕಲು ಸಿದ್ಧರಿರಲಿಲ್ಲ. ಎಷ್ಟೇ ಆದರೂ ಸ್ವಾರ್ಥಿ ಮಾನವರು. ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡೋ ಏನೋ ಅವರ ಮಗಳೊಮ್ಮೆ 'ನಾವಿದನ್ನು ಮನೆಯಲ್ಲಿಟ್ಟುಕೊಂಡು ಸಾಕೋಣವಾ ಅಪ್ಪಾ?' ಎಂದು ಕೇಳಿದಳು. ಅವಳನ್ನೊಮ್ಮೆ ತಬ್ಬಿ ಮುದ್ದಾಡಲೇ ಎನ್ನುವಷ್ಟು ಖುಷಿಯಾಯಿತು. ಅಪ್ಪನ ಉತ್ತರಕ್ಕೆ ಕಾಯುತ್ತಿದ್ದೆ. ಅವಳ ಅಪ್ಪ 'ನೋಡಮ್ಮಾ.. ನೀನು ಬರೋದು ವಾರಕ್ಕೆ ಒಂದು ದಿನ ಮಾತ್ರ. ನಾವು ಇದನ್ನು ಮನೆಯಲ್ಲಿಟ್ಟುಕೊಂಡರೆ, ಅದರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳುವವರು ಯಾರು? ನಾವು ಬೆಳಿಗ್ಗೆ ಸ್ಟುಡಿಯೋಗೆ ಹೋದರೆ, ಮಧ್ಯಾಹ್ನ ಬಂದರೂ ಬರಬಹುದು ಅಥವಾ ರಾತ್ರಿಯೇ ಬರಬೇಕಾಗಬಹುದು. ಅಲ್ಲಿಯವರೆಗೆ ಈ ಬೆಕ್ಕನ್ನು ಮನೆಯಲ್ಲಿ ಕೂಡಿಟ್ಟು ಏನು ಮಾಡುವುದು? ಈಗಾದರೋ ಅದು ಸ್ವತಂತ್ರ ಜೀವಿ. ಎಲ್ಲಿ ಬೇಕಾದಲ್ಲಿ ಸುತ್ತಿಕೊಂಡು ಇರುತ್ತದೆ. ಆದ್ದರಿಂದ ಸಾಕುವುದು ಆಗದ ವಿಷಯ' ಎಂದು ಠರಾವು ಹೊರಡಿಸಿಬಿಟ್ಟರು. 
          ನನಗಾಗ ಆ ಮನುಷ್ಯ ವಿಲನ್ ಥರ ಕಂಡದ್ದಂತೂ ನಿಜ. ಆದರೆ ನಿಜವಾದ ಖಳನಾಯಕರ ಪರಿಚಯ ಮುಂದಿನ ದಿನಗಳಲ್ಲಿ ನನಗಾಯಿತು. ಅದನ್ನು ಮುಂದೊಮ್ಮೆ ಹೇಳುತ್ತೇನೆ.  ಅಂದ ಹಾಗೆ ನನ್ನ ಬಾಲ್ಯದ ದಿನಗಳ ವಿಡಿಯೋವನ್ನು ಇವರು ಮೊಬೈಲ್ನಲ್ಲಿ  ಸೆರೆಹಿಡಿದು ನನಗೆ ತೋರಿಸಿದ್ದರು. ನಾಳೆ ನಿಮಗೂ ತೋರಿಸಲು ಹೇಳುತ್ತೇನೆ. ಶುಭರಾತ್ರಿ.  

Saturday, 24 August 2019

ನಾನೊಂದು ಬೆಕ್ಕು.

          ನಾನೊಂದು ಬೆಕ್ಕು. ನೀವೆಲ್ಲಾ ಬೀದಿ ನಾಯಿ ಅಂತೀರಲ್ಲ ಆ ಥರ ನಾನು ಬೀದಿ ಬೆಕ್ಕು. ನನಗೆ ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ನಾನು ತಬ್ಬಲಿಯಾಗಿದ್ದೆ. ಮುದ್ದು ಮಾಡುತ್ತಿದ್ದ ಅಮ್ಮ ಒಬ್ಬಳು ಇದ್ದಳು ಅನ್ನೋ ನೆನಪು ಮನಸ್ಸಿನ ಯಾವುದೋ ಮೂಲೆಯಲ್ಲಿ ಹುದುಗಿ ಹೋಗಿದೆ. ಏಕೆಂದರೆ ಈ ನಾಗರೀಕ ಸಮಾಜ ನನ್ನನ್ನು ತಾಯಿಯಿಂದ ದೂರ ಮಾಡಿತ್ತು. ಯಾವುದೋ ಹೋಟೆಲಿನಲ್ಲಿ ಕೆಲದಿನ ಕಳೆದ ನೆನಪು. ನನ್ನನ್ನು ಚಿಕ್ಕಂದಿನಿಂದಲೇ ಸಾಕಿದರೆ ನಾನು ಅಲ್ಲೇ ಇರುವೆ ಎಂದು ಆ ಹೊಟೇಲಿಗರ ನಂಬಿಕೆಯಾಗಿತ್ತು. ಒಂದು ದಿನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋದೆ. ನನಗೆ ತಾಯಿ ಬೇಕು ಅನ್ನಿಸುತ್ತಿತ್ತು.                   
          ಎಲ್ಲೆಲ್ಲೋ ಹುಡುಕಿದೆ. ಎಲ್ಲಿ ಹೋದರೂ ನಿರಾಸೆಯೇ ಕಾದಿತ್ತು. ಒಮ್ಮೆ ಬೆಳಗಿನ ಜಾವ, ತಾಯಿಯ ನೆರಳೆಲ್ಲಾದರೂ ಕಾಣಬಹುದೇನೋ ಎಂಬ ಆಸೆಯಿಂದ ವಾಕಿಂಗ್ ಹೊರಟಿದ್ದೆ. 'ಬೌ.. ಬೌ'  ಎಂದು ಬೊಗಳುತ್ತಿದ್ದ ನಾಯಿಯ ಅಬ್ಬರಕ್ಕೆ ಹೆದರಿ ದಿಕ್ಕು ಪಾಲಾಗಿ ಓಡಿ ಮನೆಯೊಂದರ ಕಿಟಕಿಯ ಸಜ್ಜಾ ಮೇಲೆ ಅವಿತು ಕುಳಿತೆ. ನಾಯಿ ದೂರಾದ ಮೇಲೆ ಸಜ್ಜಾದಿಂದ ಕೆಳಗೆ ಧುಮುಕಲು ಸಜ್ಜಾದೆ. ಕೆಳಗೆ ನೋಡಿದೆ. ಮೈ ನಡುಗಿತು. ಪ್ರಾಣಭಯದಿಂದ ಬಹು ಎತ್ತರಕ್ಕೇನೋ  ಏರಿ ಬಿಟ್ಟಿದ್ದೆ. ಧುಮುಕಲು ಭಯ. ಏನು ಮಾಡುವುದೆಂದು ತೋಚದೆ 'ಮ್ಯಾವ್ ಮ್ಯಾವ್' ಎಂದು ಅರಚುತ್ತಲೇ ಇದ್ದೆ. 
          'ಆ' ಮನೆಯಲ್ಲಿದ್ದ ಗಂಡ ಹೆಂಡತಿ ಹೊರಗೆ ಬಂದರು. ಗಂಡ ನನ್ನನ್ನು ನೋಡಿದೊಡನೆ ಹೆಂಡತಿಯ ಬಳಿ ಏನೋ ಹೇಳಿ ಕುರ್ಚಿಯ ಮೇಲೆ ನಿಂತು ಸಜ್ಜಾ ಮೇಲಿದ್ದ  ನನ್ನನ್ನು ನೋಡುತ್ತಿದ್ದ. ಇವನೇನು ಮಿತ್ರನೋ ಶತ್ರುವೋ ಎಂದು ಯೋಚಿಸುವಷ್ಟರಲ್ಲಿ ಆತ ನನ್ನನ್ನು ದೊಣ್ಣೆಯೊಂದರಿಂದ ನೂಕುತ್ತಿದ್ದ. ಆ ರಾಕ್ಷಸನಿಗೆ ನಾನು ನನ್ನ ಕೈಲಾದಷ್ಟು ಪ್ರತಿರೋಧ ಮಾಡಿ ಸಜ್ಜಾಗೆ ಅಂಟಿಕೊಂಡೇ ಕುಳಿತಿದ್ದೆ. ಆದರೆ ಆತನೆಲ್ಲಿ? ನನ್ನಂತಹ ಸಣ್ಣ ಪ್ರಾಣಿ ಎಲ್ಲಿ? ಹಂತ ಹಂತವಾಗಿ ಆದರೆ ಬಲವಂತವಾಗಿ ಆತ ನನ್ನನ್ನು ನೂಕುತ್ತಿದ್ದ. ನೋಡ ನೋಡುತ್ತಿದ್ದಂತೆ ನಾನು ಸಜ್ಜಾದ ತುದಿಗೆ ಬಂದು ಬಿಟ್ಟಿದ್ದೆ. ಎದೆ ಬಾಯಿಗೆ ಬಂದಂತಾಗಿತ್ತು. ಕೊನೆಗೂ ಆತ ತಳ್ಳಿಯೇ ಬಿಟ್ಟ. 'ಆಯಿತು ನನ್ನ ಕಥೆ ಮುಗಿಯಿತು ಕೈಕಾಲು ಮುರಿಯುವುದೋ, ಪ್ರಾಣವೇ ಹೋಗುವುದೋ?'  ಎಂಬ ಪ್ರಶ್ನೆ ಕ್ಷಣಾರ್ಧದಲ್ಲಿ ಮೂಡಿ ಬಂತು. ಆದರೆ...  
          ನಾನು ಕೆಳಗೆ ಬೀಳಬಾರದೆಂದು ದೊಡ್ಡದೊಂದು ವಿಡಿಯೋಕಾನ್ 'ಡಿಶ್' ತಟ್ಟೆಯನ್ನು ಹಿಡಿದುಕೊಂಡು ಆತನ ಹೆಂಡತಿ ನಿಂತಿದ್ದಳು. ನಾನು ಅದರಲ್ಲಿ ಬಿದ್ದೆ. ಮೈಗೆ ಏಟಾಗದಿರಲೆಂದು ಒಂದೆರಡು ಬಟ್ಟೆಯನ್ನು ಮಡಿಸಿಟ್ಟಿದ್ದಳು. ನಿಧಾನವಾಗಿ ನೆಲಕ್ಕೆ ಇಳಿಸಿದಳು. 'ಬದುಕಿದೆಯಾ ಬಡಜೀವವೇ' ಎಂದು ಓಟಕಿತ್ತೆ. ಏದುಸಿರು ಸ್ಥಿಮಿತಕ್ಕೆ ಬಂದ ಮೇಲೆ ಒಂದು ಕ್ಷಣ ಯೋಚಿಸಿದೆ.  ನಾನು ಅವರನ್ನು ರಾಕ್ಷಸರೆಂದು ಅಂದುಕೊಂಡೆ, ಆದರೆ ಅವರು ಎಷ್ಟೊಂದು ಉಪಕಾರ ಮಾಡಿದರು. 'ಛೆ! ನನ್ನ ಜನ್ಮಕ್ಕಿಷ್ಟು' ಎಂದು ಪಶ್ಚಾತ್ತಾಪ ಪಟ್ಟೆ. 
          ಮರುದಿನ ಬೆಳಗ್ಗೆ ಸೂರ್ಯ ಮೂಡುವ ಮುನ್ನವೇ 'ಆ' ಮನೆಯ ಬಾಗಿಲು ಕಾಯುತ್ತಿದ್ದೆ. ರವಿಯು ಆಗಸದಲ್ಲಿ ಹೊಂಬಣ್ಣ ಮೂಡಿಸುತ್ತಿದ್ದಂತೆ ವಾಕ್ ಹೋರಾಡಲು ಸಿದ್ಧನಾಗಿ ಬಂದ ಗಂಡ ಹೊರಬಂದು ಮೆಟ್ಟಿಲ ಮೇಲೆ ಕುಳಿತುಕೊಂಡು ಹೆಂಡತಿಗಾಗಿ ಕಾಯುತ್ತಿದ್ದ. ನಾನು ನಿಧಾನವಾಗಿ ಆತನ ಬಳಿ ಹೋದೆ. ಸ್ವಲ್ಪ ಧೈರ್ಯ ಮಾಡಿ ಆತನ ತೊಡೆಯ ಮೇಲೆ ಹತ್ತಿ ಕುಳಿತೆ.


          ಅದ್ಯಾವ್ದೋ ಜೀನ್ಸ್ ಪ್ಯಾಂಟ್ ಇರಬೇಕು, ಚುಮುಚುಮು ಚಳಿಗೆ ಅದು ಹಿತವಾಗಿತ್ತು. ಆತ ನಿಧಾನವಾಗಿ ನನ್ನ ಮೈ ಸವರತೊಡಗಿದ. ನನಗೆ ಹಾಯೆನಿಸುತ್ತಿತ್ತು. ನಂತರ ಎರಡೂ ಕೈಗಳಿಂದ ಗಟ್ಟಿಯಾಗಿ ನನ್ನನ್ನು ಹಿಡಿದುಕೊಂಡ. ಗಡಗಡ ನಡುಗುತ್ತಿದ್ದ ನನ್ನ ಮೈ ಬೆಚ್ಚಗಾದ ಅನುಭವ. ನಂತರ ಹೊರಬಂದ ಆತನ ಹೆಂಡತಿಯೂ ಕೂಡ ನನ್ನನ್ನು ಮುದ್ದಾಡಿದಳು. ನನಗೆ ತಾಯ ನೆನಪನ್ನು  ಮೂಡಿಸಿದಳು. ಮುಂದೇನಾಯಿತು? 
ನಾಳೆ ಹೇಳುವೆ.       

Monday, 17 June 2019

ಎಲ್ಲರಂತಲ್ಲ ನನ್ನ ಅಪ್ಪ.


     ಎಲ್ಲ ಮಕ್ಕಳಿಗೂ ಅಪ್ಪನೇ ಆದರ್ಶ, ಅಪ್ಪನೇ ಹೀರೋ, ಅಪ್ಪನೇ ಸರ್ವಸ್ವ. ನೆನ್ನೆ ನನ್ನ ಮಗಳು ಬಂದು 'ಅಪ್ಪಾ ಐ ಲವ್ ಯು, ಹ್ಯಾಪಿ ಫಾದರ್ಸ್ ಡೇ' ಎಂದು ಹೇಳಿ 'ನಿನಗೇನು ಬೇಕು?' ಎಂದು ಕೇಳಿದಳು.
 'ನನಗಿನ್ನೇನು ಬೇಕು? ನಿನ್ನ ಬೆಳವಣಿಗೆ, ನಿನ್ನ ಸಾಧನೆ ನನಗೆ ಎಲ್ಲ ಖುಷಿಯನ್ನೂ ಕೊಟ್ಟಿದೆ ಅಷ್ಟು ಸಾಕು ಎಂದೆ.'
 'ಇಲ್ಲ, ಏನಾದರೂ ಕೇಳು ಅದೆಷ್ಟೇ ಖರ್ಚಾದರೂ, ಅದೇನೇ ಆದರೂ ನಾನು ತಂದುಕೊಡುತ್ತೇನೆ' ಎಂದಳು. 
ಹಾಗೆ ಅವಳು ಹೇಳಲು ಕಾರಣವೂ ಇತ್ತು. ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದವಳು ಈಗ ಹೊಸ ಜಾಗದಲ್ಲಿ ಸೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಳೆ. ಸ್ಥಾನವೂ ದೊಡ್ಡದು, ಸಂಬಳವೂ ದೊಡ್ಡದು ! ಇಷ್ಟು ಸಣ್ಣ ವಯಸ್ಸಿನಲ್ಲಿ ಆಕೆಯ ಸಾಧನೆ ಯಾವ ತಂದೆಗಾದರೂ ನಿಜಕ್ಕೂ ಹೆಮ್ಮೆ ತರುವಂತಹದು. ನಾನು ಏನನ್ನೂ ಕೇಳದಿದ್ದರೂ ಅಪ್ಪನಿಗೆ ಡ್ರೈ ಫ್ರೂಟ್ಸ್ ಇಷ್ಟ ಎಂದು ಅವಳೇ ತೀರ್ಮಾನಿಸಿ ಚಂದದ ಡ್ರೈ ಫ್ರೂಟ್ ಡಬ್ಬವೊಂದನ್ನು ಉಡುಗೊರೆಯಾಗಿ ಕೊಟ್ಟಳು. ನನಗೆ ಅತ್ಯಂತ ಖುಷಿ ಕೊಡುವ ವಿಷಯವೆಂದರೆ ನನ್ನ ಮಗಳು. ಅಪ್ಪನಾಗಿ ನಾನು ಅದನ್ನು ಮನಸಾರೆ ಅನುಭವಿಸುತ್ತಿದ್ದೇನೆ. ಈ ಸಂತಸದಲ್ಲಿ ತೇಲಾಡುತ್ತಿದ್ದಂತೇ ಮನಸ್ಸು ನನ್ನ ತಂದೆಯ ನೆನಪಲ್ಲಿ ಮುಳುಗಿತು. 

     ಎಲ್ಲರಂತಲ್ಲ ನನ್ನ ಅಪ್ಪ, ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದ ದೇವರು. ಅಪ್ಪನ ಮೇಲೆ ನನಗಿದ್ದ ಭಯ,ಪ್ರೀತಿ ನನಗೆ ದೇವರ ಮೇಲೂ ಇರಲಿಲ್ಲ. ಭಯಕ್ಕೆ ಕಾರಣ ಅಪ್ಪ ನೀಡುತ್ತಿದ್ದ ಶಿಕ್ಷೆ. ಪ್ರೀತಿ ಏಕೆಂದರೆ ಶಿಕ್ಷೆಯ ನಂತರ ಸಿಗುತ್ತಿದ್ದ ಭಕ್ಷೀಸು ! ಬಹುತೇಕ ಪ್ರತಿದಿನ ಏನಾದರೂ ಒಂದು ತಪ್ಪು ಮಾಡಿ ಅಪ್ಪನ ಕೈಯಲ್ಲಿ ಏಟು ತಿನ್ನುತ್ತಿದ್ದೆ. ನಂತರ ನಾನು ಅಳುತ್ತಿದ್ದಾಗ ಅಪ್ಪನಿಗೆ ನನ್ನ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿತ್ತು. ಪ್ರೀತಿಯಿಂದ ಕರೆದು 'ಯಾಕೋ ದಿನಾ ಹೀಗೆ ಏಟು ತಿಂತೀಯಾ?' ಎಂದು ಹೇಳಿ ಮುದ್ದಿಸಿ ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೆ ಬಜ್ಜಿ ಬೋಂಡ, ಮಸಾಲೆದೋಸೆ, ಸಿಹಿತಿನಿಸು...ಹೀಗೆ ಏನಾದರೂ ಒಂದು ಸಿಗುವುದು ಕಟ್ಟಿಟ್ಟ ಬುತ್ತಿಯಾಗಿತ್ತು. 
     ಗವೀಪುರಂನಲ್ಲಿ ನಮ್ಮ ಮನೆಯಿತ್ತು. ನನಗೆ ಲೋಕಲ್ ಆಟಗಳೆಂದರೆ ತುಂಬಾ ಒಲವಿತ್ತು. ಬುಗುರಿ, ಗೋಲಿ, ಚಿನ್ನಿದಾಂಡು, ಲಗೋರಿ, ಸೂರ್ ಚೆಂಡು .. ಇವೆಲ್ಲಾ ನನ್ನ ಮೆಚ್ಚಿನ ಆಟಗಳು. ಆದರೆ ನನ್ನೊಡನೆ ಆಡಲು ಬರುತ್ತಿದ್ದ ಹುಡುಗರೆಲ್ಲ ಗುಟ್ಟಳ್ಳಿಯವರೋ, ಸುಂಕೇನ ಹಳ್ಳಿಯವರೋ ಆಗಿರುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರೆಲ್ಲಾ ರೌಡಿ ಗೆಳೆಯರು. ಅವರ ಭಾಷೆಯೆಲ್ಲಾ ಲೋಕಲ್ ಭಾಷೆಯೇ ಆಗಿತ್ತು. '..ಮ್ಮನ್, ...ಕ್ಕನ್' ಪದಗಳೆಲ್ಲಾ ಧಾರಾಳವಾಗಿ ಬಳಕೆಯಾಗುತ್ತಿದ್ದವು.ನನಗೂ ಅದೇ ಅಭ್ಯಾಸ ಆಗಿತ್ತು (ಅರ್ಥ ಗೊತ್ತಿಲ್ಲದಿದ್ದರೂ). ಒಮ್ಮೆ ಮೈದಾನವೊಂದರಲ್ಲಿ ಲಗೋರಿ ಆಡುತ್ತಿರುವಾಗ ನನ್ನ ಚೆಂಡು ಗುರಿ ತಪ್ಪಿದಾಗ  '..ಮ್ಮನ್, ...ಕ್ಕನ್' ಪದಗಳು ಸಹಜವಾಗಿ ಉದುರುವ ಅಣಿಮುತ್ತಿನಂತೇ ನನ್ನ ಬಾಯಿಯಿಂದ ಉದುರಿದವು. ಹಿಂದಿನಿಂದ ಯಾರೋ ನನ್ನ ತಲೆಗೆ ಒಂದೇಟು ಹೊಡೆದು ನನ್ನ ಬಲಕಿವಿಯನ್ನು ಬಲವಾಗಿ ತಿರುಚಿ ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡರು. ಯಾರೆಂದು ತಿರುಗಿ ನೋಡಿದರೆ ಸಾಕ್ಷಾತ್ ನನ್ನ ಅಪ್ಪ ! 
        ಅಲ್ಲಿಂದ ಮನೆಯವರೆಗೆ ಕಿವಿ ಹಿಡಿದುಕೊಂಡೇ ದರ ದರನೆ ಎಳೆದುಕೊಂಡು ಬಂದರು. ಅಮ್ಮನ ಬಳಿ ಹೇಳಿದರು 'ಪ್ರವೀಣ ಹೀಗಾಗ್ತಾನೆ ಅಂದ್ಕೊಂಡಿರಲಿಲ್ಲ. ಪೋಲಿ ಹುಡುಗರ ಸಹವಾಸಕ್ಕೆ ಬಿದ್ದು ಪೂರ್ತಿ ಹಾಳಾಗಿ ಹೋಗಿದ್ದಾನೆ. ಹೀಗೇ ಬಿಟ್ಟರೆ ದೊಡ್ಡ ರೌಡಿಯಾಗುತ್ತಾನೆ.' 
'ಅವರೆಲ್ಲ ನನ್ನ ಫ್ರೆಂಡ್ಸ್ ಅಲ್ಲ, ಆಟ ಆಡೋಕೆ ಮಾತ್ರ ಸಿಗ್ತಾರೆ' ನನಗೆ ತೋಚಿದ ಸಮಜಾಯಿಷಿ ನೀಡಿದೆ. 
'ಇವನ ಮಾತು ಏನೂ ನಂಬಬೇಡ. ನಾಳೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ಇವನನ್ನು ವಿವೇಕಾನಂದ ಬಾಲಕ ಸಂಘಕ್ಕೆ ಸೇರಿಸಿಬಿಡೋಣ. ಇಲ್ಲಾಂದ್ರೆ ಇವ್ನು ಯಕ್ಕುಟ್ಟಿ ಹೋಗ್ತಾನೆ' ಅಂದರು. 
ಮರುದಿನವೇ ನಾನು ಸ್ವಾಮೀ ಪುರುಷೋತ್ತಮಾನಂದರ ಎದುರಿಗೆ ಕೈ ಕಟ್ಟಿ ನಿಂತಿದ್ದೆ. ಅಪ್ಪ ಅಮ್ಮ ಅದೇನೇನು ಹೇಳಿದರೋ ತಲೆಗೆ ಹೋಗಲಿಲ್ಲ. ಮನಸ್ಸೆಲ್ಲಾ ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರಲ್ಲ ಈ ಅಪ್ಪ, ಅಮ್ಮ ಎಂದೇ ಚಿಂತಿಸುತ್ತಿತ್ತು. ಅಲ್ಲಿಂದ ಮುಂದೆ ಶಾಲೆ ಬಿಟ್ಟೊಡನೆ ರಾಮಕೃಷ್ಣಾಶ್ರಮಕ್ಕೆ ಹೋಗುವುದು, ವಿವೇಕಾನಂದ ಬಾಲಕ ಸಂಘದಲ್ಲಿ ಆಡುತ್ತಿದ್ದ ಆಟಗಳು ಹಾಗೂ ಭಜನೆ ನನ್ನ ಅಂದಿನ ದಿನಗಳಲ್ಲಿ ಬಾಳಿನ ಅವಿಭಾಜ್ಯ ಅಂಗವಾಗಿ ಹೋದವು ! ಕ್ರಮೇಣ ನನ್ನ ತಂದೆ ಹೇಳುತ್ತಿದ್ದ ಒಂದೊಂದು ಮಾತೂ ಅರ್ಥವತ್ತಾಗಿ ಕಾಣಲು ಶುರುವಾಯಿತು. ತಂದೆಯವರು ನಡೆಸುತ್ತಿದ್ದ ಜೀವನ, ಅವರು ನಂಬಿದ್ದ ಮಾನವೀಯ ಮೌಲ್ಯಗಳು ನನ್ನ ಮನದಲ್ಲಿ ಆಳವಾಗಿ ಬೇರೂರಲಾರಂಭಿಸಿದವು. ಇಂದು ನಾನು ಮನುಷ್ಯನಾಗಿದ್ದೇನೆ ಎಂದರೆ ಅದಕ್ಕೆ ನೂರಕ್ಕೆ ನೂರು ಕಾರಣ ನನ್ನ ಅಪ್ಪ.  

     ನನ್ನ ಅಪ್ಪ ನನಗೆ ಆದರ್ಶಗಳನ್ನು ಬೋಧಿಸಲಿಲ್ಲ. ಮೌಲ್ಯಗಳ ಬಗ್ಗೆ ಭಾಷಣ ಬಿಗಿಯಲಿಲ್ಲ. ಹೀಗೆ ಬದುಕು ಎಂದು ತಿಳಿಹೇಳಲಿಲ್ಲ. ಅವರ ಬದುಕೇ ನನಗೆ ಅವೆಲ್ಲವನ್ನೂ ಕಲಿಸಿತು.
     ನನ್ನ ಅಪ್ಪನಷ್ಟು ಸರಳ, ಸಾತ್ವಿಕ, ಹೃದಯಶ್ರೀಮಂತಿಕೆಯ ಮತ್ತೊಬ್ಬ ಮನುಷ್ಯನನ್ನು ನಾನು ನೋಡಲಿಲ್ಲ. ನೋಡಿಯೇ ಇಲ್ಲ ಎಂದರೆ ತಪ್ಪಾದೀತು. ಅದೇ ಗುಣಗಳನ್ನು ನಾನು ನಮ್ಮ ವರನಟ ರಾಜ್ ಕುಮಾರ್ ಅವರಲ್ಲೂ ಕಂಡಿದ್ದೇನೆ. ಅಪ್ಪನೊಡನಾಟದ ಕೆಲವು ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. 
     ನಾನಾಗ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದೆ. ನನ್ನ ಗೆಳೆಯನೊಬ್ಬ 'ನೆನ್ನೆ ನಮ್ಮಪ್ಪ ಅಶೋಕ ಹೋಟೆಲ್ ಗೆ ಕರ್ಕೊಂಡ್ ಹೋಗಿ ಮಸಾಲೆ ದೋಸೆ ಕೊಡಿಸಿದ್ರು' ಎಂದು ಹೇಳಿ ನಮಗೆಲ್ಲಾ ಹೊಟ್ಟೆ ಉರಿಸಿದ್ದ. ಅವರಪ್ಪ ನಿಜಕ್ಕೂ ಸಾಹುಕಾರನಾಗಿದ್ದ. ಮನೆಗೆ ಬಂದಾಗ ಅಪ್ಪನ ಬಳಿ ಹೇಳಿದೆ 'ನೆನ್ನೆ ನನ್ನ ಫ್ರೆಂಡನ್ನ ಅವರಪ್ಪ ಅಶೋಕಾ ಹೋಟೆಲ್ ಗೆ ಕರ್ಕೊಂಡು ಹೋಗಿ ಮಸಾಲೆ ದೋಸೆ ತಿನ್ನಿಸಿದ್ರಂತೆ. ಸುಮ್ನೆ ದುಡ್ಡು ವೇಸ್ಟ್ ಆಲ್ವಾ ಅಪ್ಪಾ' ಎಂದು ಅಮಾಯಕನಂತೆ ಹೇಳಿದೆ. ನನ್ನ ಮನದಾಳದ ಆಸೆಯನ್ನು ಅರ್ಥ ಮಾಡಿಕೊಂಡ ನನ್ನಪ್ಪ ತಕ್ಷಣ ರೆಡಿಯಾಗಲು ಹೇಳಿ ಅಶೋಕಾ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಸಾಲೆ ದೋಸೆಯನ್ನು ಕೊಡಿಸಿದರು. ಆಗ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆಗೆ ಆರುವತ್ತು ಪೈಸೆ ಇತ್ತು, ಅಶೋಕಾ ಹೋಟೆಲ್ ನಲ್ಲಿ ಹತ್ತು ರೂಪಾಯಿ ! ನನಗೆ ಯಾವುದೇ ಕೀಳರಿಮೆ ಬಾರದಿರಲು ಅಶೋಕಾ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಸಾಲೆ ದೋಸೆ ಕೊಡಿಸಿದ್ದರು ನನ್ನ ಅಪ್ಪ !   
     ಒಮ್ಮೆ ನಾನು, ನನ್ನ ಅಪ್ಪ ತರಕಾರಿ ತರಲು ಹೊರಟೆವು. ಅಪ್ಪ ಒಂದೊಂದೇ ತರಕಾರಿಯ ಬೆಲೆಯನ್ನು ವಿಚಾರಿಸುತ್ತಿದ್ದರು. 'ಕ್ಯಾರೆಟ್ ಎಷ್ಟು ?' ಅಂದಾಗ ಆ ಅಂಗಡಿಯಾತ ಹೇಳಿದ.  ಮತ್ತೆ ಬೇರೆ ಒಂದೆರಡು ತರಕಾರಿಯ ಬೆಲೆ ಕೇಳಿದ ಮೇಲೆ 'ಕ್ಯಾರೆಟ್ ಎಷ್ಟು ಹೇಳಿದ್ರಿ?' ಎಂದು ಮತ್ತೆ ಕೇಳಿದರು. 'ಎಷ್ಟು ಸಲಾರೀ ಕೇಳ್ತೀರಾ.. ಹೇಳಿದ್ನಲ್ಲ ಎಂಟು ರುಪಾಯ್ ಕೆ. ಜಿ. ಗೆ ಅಂತ' ಎಂದು ತುಸು ಜೋರುಧ್ವನಿಯಲ್ಲೇ ಹೇಳಿದ. ನನ್ನ ಅಪ್ಪ 'ನಾನ್ಯಾಕೆ ಬಂದೆ ಇಲ್ಲಿ ?' ಎಂದು ಕೇಳಿದರು. ಎಲ್ಲೋ ಅರಿವು ಮರೆವಿನ ಗಿರಾಕಿ ಇರಬೇಕು ಎಂದುಕೊಂಡ ಅಂಗಡಿಯಾತ 'ಅದನ್ನೂ ಮರೆತುಬಿಟ್ರಾ? ತರಕಾರಿ ತಗೋಳ್ಳೋಕೆ ಬಂದಿದೀರಾ' ಅಂದ. ಅದಕ್ಕೆ ನಸುನಕ್ಕು ನನ್ನ ಅಪ್ಪ ಹೇಳಿದರು 'ಹೌದಲ್ವಾ? ನಾನು ತರಕಾರಿ ತಗೋಳ್ಳೋಕೆ ತಾನೇ ಬಂದಿದ್ದು, ನಿನ್ನ ಜತೆ ಜಗಳ ಆಡೋಕೆ ಅಲ್ಲವಲ್ಲಾ?' ಅಂದರು. ಮಾತು ಮುಂದುವರೆಸುತ್ತಾ 'ನೋಡಪ್ಪ ನನಗೂ ವಯಸ್ಸಾಗ್ತಾ ಬಂತು, ಒಮ್ಮೊಮ್ಮೆ ಮರೆತು ಹೋಗ್ತೀನಿ. ಇನ್ನೊಂದು ಸಲ ಹೇಳು, ನಷ್ಟ ಏನಿದೆ? ವ್ಯಾಪಾರ ಮಾಡೋಕೆ ತಾನೇ ನೀನು ಕೂತಿರೋದು ?' ಅಂದರು. ಆತ 'ಸಾರಿ ಸಾರ್' ಅಂದ. ತುಂಬಾ ಮುತುವರ್ಜಿ ವಹಿಸಿ ತರಕಾರಿ ಬ್ಯಾಗನ್ನು ಸ್ಕೂಟರ್ ವರೆಗೂ ಅವನೇ ತಂದುಕೊಟ್ಟ. 'ಒಳ್ಳೇದಾಗಲಪ್ಪಾ ನಿನಗೆ' ಎಂದು ಹೇಳಿ ಸ್ಕೂಟರ್ ಸ್ಟಾರ್ಟ್ ಮಾಡಿದರು ನನ್ನ ಅಪ್ಪ. 
     ಸಿಂಡಿಕೇಟ್ ಬ್ಯಾಂಕ್ ನಲ್ಲಿ ನನ್ನ ಅಪ್ಪ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದರು. ಒಮ್ಮೆ ಊಟ ಮಾಡುತ್ತಿರುವಾಗ ಬ್ಯಾಂಕಿನ ಅಟೆಂಡರ್ ಸಂಪಂಗಿ ಅನ್ನುವವರು ಮನೆಗೆ ಬಂದರು. 'ಏನಪ್ಪಾ ಸಂಪಂಗಿ ?' ಕೇಳಿದರು ಅಪ್ಪ. 
'ಇಲ್ಲೊಂದು ಸಹಿ ಹಾಕಬೇಕಂತೆ ಸಾರ್, ಸ್ವಲ್ಪ ಅರ್ಜೆಂಟ್ ಇದೆ ಅಂತ ನನ್ನ ಕಳಿಸಿದ್ದಾರೆ ಬ್ಯಾಂಕಿಂದ , ನೀವು ಊಟ ಮುಗಿಸ್ಕೊಂಡು ಬನ್ನಿ ಸಾರ್, ನಾನು ಹೊರಗಡೆ ಕೂತಿರ್ತೀನಿ' ಅಂದ ಆತ. 
'ನಿನ್ನ ಊಟ ಆಯ್ತಾ? ಇಲ್ಲಾಂದ್ರೆ ಬಾ ಕೂತ್ಕೋ' ಎಂದು ಕರೆದರು ಅಪ್ಪ.
 'ಇಲ್ಲ ಸಾರ್ ಬೇಡ' ಎಂದು ತುಂಬಾ ಸಂಕೋಚ ಪಟ್ಟುಕೊಂಡು ಆತ ಹೇಳಿದಾಗ 'ಯಾಕೆ ಅಷ್ಟೊಂದು ಸಂಕೋಚ ಪಡ್ತಿದೀಯಾ ಪರವಾಗಿಲ್ಲ ಬಾ ಕೂತ್ಕೋ' ಎಂದು ಬಲವಂತ ಮಾಡಿದರು ಅಪ್ಪ. 
'ಇಲ್ಲ ಸಾರ್ ನಾನು ಎಸ್.ಸೀ, ನಿಮ್ಮ ಜತೆ ಊಟ ಮಾಡೋದು ಬೇಡ ಸಾರ್' ಅಂದ. 
 'ಅಕ್ಕಿಕಾಳಿಗೆ ಗೊತ್ತೇನಪ್ಪಾ ಯಾರ ಹೊಟ್ಟೆಗೆ ಹೋಗ್ತೀನಿ ಅಂತ ಅದಕ್ಕಿಲ್ಲದಿರೋ ಭೇದ ನಮಗ್ಯಾಕೆ?' ಎಂದು ಒತ್ತಾಯ ಮಾಡಿ ಊಟಕ್ಕೆ ಕೂರಿಸಿದರು ನನ್ನ ಅಪ್ಪ. 
     ಬಾಲ್ಯಾವಸ್ಥೆ ದಾಟಿ ಮದುವೆಗೆ ಸಿದ್ಧನಾಗಿದ್ದೇನೆ ಎಂದು ನನಗೆ ತಿಳಿದದ್ದು ಹಲವಾರು ಹೆಣ್ಣುಮಕ್ಕಳ ಫೋಟೋಗಳು ನಮ್ಮ ಮನೆಗೆ ದಾಳಿ ಇಡತೊಡಗಿದಾಗ. ಯಾವ ಫೋಟೋ ನೋಡಿದರೂ 'ಇವಳು ನನ್ನ ಹೆಂಡತಿ ಅಲ್ಲ' ಎಂದೇ ಅನ್ನಿಸುತ್ತಿತ್ತು. ಆದರೂ 'ಒಮ್ಮೆ ನೋಡಲು ಹೇಳಿ, ಆಮೇಲೆ ಬೇಡ ಎಂದರೂ ಪರವಾಗಿಲ್ಲ' ಎಂದು ಹುಡುಗಿ ಕಡೆಯವರು ಹೇಳುತ್ತಿದ್ದರಂತೆ. 
     ನನಗೋ ಅವರ ಮನೆಗೆ ಹೋಗಿ ಉಪ್ಪಿಟ್ಟು ತಿಂದು 'ಬೇಡ' ಎನ್ನುವುದು ಅಸಾಧ್ಯದ ಕೆಲಸವಾಗಿತ್ತು. ಏಕೆಂದರೆ ಅದಾಗಲೇ ನಾನು ಫೋಟೋ ಸ್ಟುಡಿಯೋ ಒಂದರ ಮಾಲೀಕನಾಗಿದ್ದೆ. ಗಂಡಿಗೆ ತೋರಿಸಲು ಫೋಟೋ ತೆಗೆಸಿಕೊಳ್ಳಲು ಬರುವ ಹುಡುಗಿಯರ ಸಂಕಟ ನೋಡಿದ್ದೆ. 'ಹೀಗೆ ನಿಂತ್ಕೋ, ಹಾಗೆ ನಿಂತ್ಕೋ .. ವಾಚು ಕಾಣ್ತಿಲ್ಲ, ನೆರಿಗೆ ಸರಿಯಾಗಿಲ್ಲ ...' ಹೀಗೆಲ್ಲಾ ಹೇಳಿ ಹುಡುಗಿಯನ್ನು ಬೊಂಬೆಯಂತೆ ನಿಲ್ಲಿಸಿ ಫೋಟೋ ತೆಗೆಸುತ್ತಿದ್ದರು ಹೆತ್ತವರು. ನಾನೂ ಮನೆಗೆ ಹೋಗಿ 'ಬೇಡ' ಎಂದು ಹೇಳಿ ಅವರನ್ನು ಮತ್ತಷ್ಟು ನೋಯಿಸಲು ನಾನು ಸುತರಾಂ  ಸಿದ್ಧನಿರಲಿಲ್ಲ. ಒಮ್ಮೆ ನೋಡಲು ಹೋದರೆ 'ಯಸ್' ಅಂತ ಹೇಳಿನೇ ಬರೋದು ಎಂದು ತೀರ್ಮಾನಿಸಿದ್ದೆ. ಆದ್ದರಿಂದ ಫೋಟೋ ನೋಡಿಯೇ ತೀರ್ಮಾನ ಮಾಡುತ್ತಿದ್ದೆ, 'ಇವ್ಳು ಯಾಕೋ ನನ್ನವಳೆಂದು ಅನ್ನಿಸುತ್ತಿಲ್ಲ' ಎಂದು. 
     ನನ್ನ ಅಪ್ಪ ಒಮ್ಮೆ ನನ್ನನ್ನು ಕರೆದು 'ಬಾರೋ ಕಾಫಿ ಕುಡ್ಕೊಂಡು ಬರೋಣ' ಎಂದು ಕರೆದು ಕೊಂಡು ಹೋದರು. 'ಪ್ರವೀಣಾ, ನೀನು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಧೈರ್ಯವಾಗಿ ಹೇಳು. ನಾನೇ ನಿಂತು ಮಾಡುವೆ ಮಾಡಿಸುತ್ತೇನೆ. ಸಂಕೋಚ ಪಡಬೇಡ' ಎಂದು ನೇರವಾಗಿ ಹೇಳಿದರು.
ನಾನು 'ಆ ತರಹ ಏನೂ ಇಲ್ಲಪ್ಪಾ' ಎಂದಾಗ 'ಮತ್ತೆ ಯಾಕೆ ಯಾವ ಫೋಟೋ ನೋಡಿದ್ರೂ ಬೇಡ ಅಂತೀದೀಯಾ?' ಅಂದರು. 
ನಾನು ನನ್ನ ಅನಿಸಿಕೆಯನ್ನು ಹೇಳಿದೆ. 'ಐ ಲೈಕ್ ದಟ್ ' ಎಂದರು ನನ್ನ ಅಪ್ಪ. 
ಕಾಲಚಕ್ರ ಉರುಳುತ್ತಿತ್ತು......
     ನಾನು ಕೋರಮಂಗಲದಲ್ಲಿ ಸ್ಟುಡಿಯೋ ಹಾಗೂ ಮನೆಯನ್ನು ಮಾಡಿಕೊಂಡಿದ್ದೆ. ಅಪ್ಪನಿಗೆ ಒಮ್ಮೆ ಹುಷಾರಿರಲಿಲ್ಲ. ತಂದೆ ತಾಯಿಯನ್ನು ಕೋರಮಂಗಲಕ್ಕೆ ಕೆಲದಿನಗಳ ಮಟ್ಟಿಗಾದರೂ ಬನ್ನಿ ಎಂದು ಕರೆದೆ. ಅಮ್ಮನ ಕಡೆಯ ಸಂಬಂಧಿಕರು ಅತಿಥಿಗಳಾಗಿ ಬಂದಿದ್ದರಿಂದ ಅಮ್ಮ 'ಅಪ್ಪನ್ನ ಕರ್ಕೊಂಡು ಹೋಗು, ನಾನು ಎರಡು ಮೂರು ದಿನ ಬಿಟ್ಟು ಬರ್ತೀನಿ' ಅಂದರು. ಅಪ್ಪನನ್ನು ಕರೆದುಕೊಂಡು ಮನೆಗೆ ಬಂದೆ. ನಮ್ಮಲ್ಲಿ ಸ್ವಾಮೀಜಿಯವರು ಬಂದಾಗ ಹೇಗೆ ಗೌರವಿಸುತ್ತಾರೋ ಹಾಗೆ ಗೌರವಿಸಿದೆ. ಅಪ್ಪನ ಸೇವೆ ಮಾಡುವ ಎಲ್ಲಾ ಸೌಭಾಗ್ಯಗಳು ನನಗೆ, ನನ್ನ ಮಡದಿ ಪುಷ್ಪಾಳಿಗೆ, ನನ್ನ ಮಗಳು ಸುಶ್ಮಿತಾಳಿಗೆ ದೊರಕಿದವು. ರುಚಿ ರುಚಿಯಾದ ಅಡುಗೆ ಹಾಗೂ ತಿಂಡಿಗಳನ್ನು ಬಹಳ ಆಸ್ಥೆಯಿಂದ ಪುಷ್ಪಾ ಮಾಡಿಕೊಡುತ್ತಿದ್ದಳು. ಸುಶ್ಮಿತಾಳಂತೂ ಅಪ್ಪನನ್ನು ಖುಷಿಯಾಗಿಡಲು ಎಲ್ಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಳು, ಅಪ್ಪನನ್ನು ನಗಿಸುತ್ತಿದ್ದಳು. ನಾನಂತೂ ಅಪ್ಪನಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಅವರು ಮಲಗುವವರೆಗೆ ಎಲ್ಲ ಸೇವೆಯನ್ನೂ ಮಾಡುತ್ತಿದ್ದೆ. ಮಲಗುವಾಗ ಅವರ ಕಾಲೊತ್ತಿ ಎಳೆಯ ಮಗುವಿನಂತೆ ಮಲಗಿಸುತ್ತಿದ್ದುದು ನನಗೆ ದೊರೆತ ಸ್ವರ್ಗ. ಮೂರು ದಿನಗಳ ನಂತರ ಅಪ್ಪ ಮತ್ತೆ ತಮ್ಮ ಮನೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದರು. ಕರೆದುಕೊಂಡು ಹೋದೆ. 'ಪ್ರವೀಣನ ಮನೆಯಲ್ಲಿ ಎಲ್ಲವೂ ಪ್ರೀತಿಯಿಂದ ಮಾಡಿದರು ಕಣೇ, ಊಟ ತಿಂಡಿಯಂತೂ ಅದ್ಭುತ, ಎಲ್ಲವೂ 'ಹಾರ್ಟ್ ಮೇಡ್', ತುಂಬಾ ಚೆನ್ನಾಗಿತ್ತು' ಎಂದು ಅಮ್ಮನ ಬಳಿ ಬಹಳ ಹೆಮ್ಮೆಯಿಂದ ಹೇಳಿದರು ನನ್ನ ಅಪ್ಪ. 
     ಇದಾಗಿ ನಾಲ್ಕೇ ದಿನಗಳಲ್ಲಿ ಬರಸಿಡಿಲು ಬಡಿದ ಅನುಭವ. 'ಪ್ರವೀಣಾ ಬೇಗ ಬಂದು ಬಿಡು' ಅಮ್ಮ ದೂರವಾಣಿ ಮೂಲಕ ಹೇಳಿದರು. ಗಾಬರಿಯಿಂದಲೇ ಹೋದೆ.  'ಊಟ ಮಾಡಿದ್ರು, ಟಿ.ವಿ. ನೋಡ್ತಾ ಇದ್ರು, ಯಾವುದೋ ಭಜನೆ ಕೇಳ್ತಾ ಇದ್ರು. ಮಲಗೋಣಾ ಅಂತ ಹಾಸಿಗೆವರೆಗೂ ಬಂದ್ರು, ಅಲ್ಲೇ ಕುಸಿದು .... 'ಅಮ್ಮನ ಬಾಯಲ್ಲಿ ಮುಂದೆ ಮಾತು ಹೊರಡಲಿಲ್ಲ. ಡಾಕ್ಟರ್ ಆಗಿರುವ ನನ್ನ ಅಕ್ಕನಂತೂ ಇದ್ದ ಬದ್ದ ಆಸ್ಪತ್ರೆಗೆಲ್ಲಾ ಕರೆದುಕೊಂಡು ಹೋಗಿ ಹೇಗಾದರೂ ಬದುಕಿಸಲು ಸಾಧ್ಯವೇ ಎಂದು ಶತಪ್ರಯತ್ನ ಮಾಡಿದಳು.  
     ನಾನು ಮೂಕನಾಗಿ ಎಲ್ಲವನ್ನೂ ಗಮನಿಸುತ್ತಿದ್ದೆ. ಆದರೆ ಆಡಿಸುವಾತ ತನ್ನ ಆಟ ಮುಗಿಸಿದ್ದ. 
     ಜೀವನದಲ್ಲಿ 'ನೋವು' ಎಂದರೆ ಏನೆಂದು ಮೊದಲ ಬಾರಿಗೆ ಅನುಭವಿಸಿದೆ. ಈ ಶೂನ್ಯವನ್ನು ಯಾರಿಂದಲೂ, ಯಾವುದರಿಂದಲೂ ತುಂಬಲಾಗುವುದಿಲ್ಲ. ಅಪ್ಪನನ್ನು ನೆನೆಸಿಕೊಂಡಾಗಲೆಲ್ಲಾ ಎದೆಯಲ್ಲಿ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಮನಸ್ಸಲ್ಲಿ ಇಷ್ಟೆಲ್ಲಾ ಸಂಕಟಗಳು ಹುದುಗಿದ್ದರೂ ಹೆಮ್ಮೆಯಿಂದ ಹೇಳುತ್ತೇನೆ, 'ಎಲ್ಲರಂತಲ್ಲ ನನ್ನ ಅಪ್ಪ.'