Sunday 29 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 2


        ನಮ್ಮ ಅಂದಿನ ಪುರೋಹಿತರು ತಾವು ಮಧ್ವಾಚಾರ್ಯರ ಪರಂಪರೆಯ ಅನುಯಾಯಿಗಳಾಗಿರುವುದರಿಂದ, ಪ್ರಾಣಿಹತ್ಯೆ ಮಾಡುವುದು ನಿಷಿದ್ಧ ಎಂದು ಖಡಾ ಖಂಡಿತವಾಗಿ ಹೇಳಿದಾಗ 'ಅವೇಶ'ದಿಂದೊಡಗೂಡಿದ ಪಾತ್ರಿ 'ಹಾಗಾದರೆ ನಾನು ಇಲ್ಲಿರಲು ಸಾಧ್ಯವಿಲ್ಲ. ನನ್ನ ವಿಗ್ರಹವನ್ನು ಕೇಳಿಕೊಂಡು ಬಂದವರೊಬ್ಬರಿಗೆ ಅದನ್ನು ನೀಡಿ, ನಿಮಗೆ ಬೇಕಾದ ಹಾಗೆ ಮತ್ತೊಂದು ವಿಗ್ರಹವನ್ನು ಕೆತ್ತಿಸಿಕೊಂಡು ನಿಮ್ಮ ವಿಧಿವಿಧಾನಗಳನ್ನು ನಡೆಸಬಹುದು. ನವರಾತ್ರಿಯ ಒಂಭತ್ತು ದಿನಗಳು ನಾನು ಸಾತ್ವಿಕ ರೂಪದಲ್ಲಿ ಇಲ್ಲಿ ಇರುತ್ತೇನೆ, ತಾಮಸ ರೂಪದಲ್ಲಿ ಅಲ್ಲಿಯೂ ಇರುತ್ತೇನೆ' ಎಂದು ಫರ್ಮಾನು ಹೊರಡಿಸಿದರಂತೆ. ನಮ್ಮ ಕುಟುಂಬ ಮೂಲಸ್ಥರೊಡನೆ ಮಾತನಾಡಿ, ಪುರೋಹಿತರು ಅದಕ್ಕೆ ಸಮ್ಮತಿಸಿದರಂತೆ. 
        ಇದಾದ ಕೆಲವು ದಿನಗಳಲ್ಲಿ ನಂದಳಿಕೆ(ಮುದ್ದಣ ಕವಿಯ ಊರು)ಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕನಸಿನಲ್ಲಿ ದೇವಿ ಕಾಣಿಸಿಕೊಂಡು ಇಂತಹ ದಿಕ್ಕಿನಲ್ಲಿ ಕಾಣಸಿಗುವ ದೇವೀ ದೇವಸ್ಥಾನದಲ್ಲಿರುವ ತನ್ನನ್ನು ಅಲ್ಲಿಂದ ಕರೆತಂದು ನಂದಳಿಕೆಯಲ್ಲಿ ದೇಗುಲ ಕಟ್ಟಲು ಆದೇಶ ನೀಡಿರುವುದಾಗಿ ಹೇಳಿಕೊಂಡಾಗ ನಮ್ಮ ಹಿರಿಯರಿಗೆ ಅಚ್ಚರಿ ಆಯಿತಂತೆ. 
        ಆ ವ್ಯಕ್ತಿಯ ಪೂರ್ವಾಪರಗಳನ್ನು ವಿಚಾರಿಸಿದ ಮೇಲೆ ಒಲ್ಲದ ಮನಸ್ಸಿನಿಂದ ಅವರಿಗೆ ವಿಗ್ರಹವನ್ನು ಹಾಗೂ ಅದರ ಚಿನ್ನಾಭರಣವನ್ನು ನೀಡುತ್ತಾರೆ. ಆದರೆ ಪ್ರತಿ ನವರಾತ್ರಿಯಂದು ಆ ಚಿನ್ನಾಭರಣವನ್ನು ಹೊಸದಾಗಿ ನಿರ್ಮಿಸಲಿರುವ ವಿಗ್ರಹವನ್ನು ಅಲಂಕರಿಸಲು ತರತಕ್ಕದ್ದು ಎಂಬ ಒಂದು ಕರಾರನ್ನು ಅವರ ಮುಂದಿಡುತ್ತಾರೆ. ಅದಕ್ಕೆ ಆ ವ್ಯಕ್ತಿಯು ಒಪ್ಪಿ ಮುಂದೆ ಅಂತೆಯೇ ನಡೆಯುತ್ತಾರೆ. ಕಾಲ ಕಳೆದಂತೇ ಒಂದು ವರ್ಷ ಅಲ್ಲಿಂದ ಆಭರಣಗಳನ್ನು ಅವರು ತರದೇ ಹೋದಾಗ ನಮ್ಮ ಹಿರಿಯರು ಪ್ರಶ್ನಿಸಿದರಂತೆ. ಆಗ ಅವರು ಉಡಾಫೆಯ ಉತ್ತರವನ್ನು ನೀಡಿದ ಪ್ರಸಂಗವೂ ನಡೆಯಿತಂತೆ. 
        ಈ ವಿಚಾರವನ್ನು ನವರಾತ್ರಿಯ ಕೊನೆಯ ದಿನ ಆವೇಶದ ಪಾತ್ರಿಯ ಬಳಿ ಹೇಳಿಕೊಂಡಾಗ 'ಅದನ್ನು ಇಲ್ಲಿ ತರಿಸುತ್ತೇನೆ' ಎಂದು ಹೇಳಿದರಂತೆ. ಇದಾದ ಮಾರನೆಯ ದಿನವೇ ನಂದಳಿಕೆಯ ದೇವಸ್ಥಾನದ ಕಡೆಯವರು ಎಲ್ಲಾ ಚಿನ್ನಾಭರಣಗಳನ್ನು ತಂದು ಒಪ್ಪಿಸಿ 'ಇನ್ನು ಈ ಆಭರಣಗಳು  ಇಲ್ಲಿಯೇ ಇರಲಿ, ನಾವಂತೂ ಇನ್ನು ಮುಂದೆ ಅಲ್ಲಿಗೆ ಕೊಂಡೊಯ್ಯುವುದಿಲ್ಲ' ಎಂದು ಹೇಳಿ ಆಭರಣವೆಲ್ಲವನ್ನೂ ಒಪ್ಪಿಸಿ ಹೊರಟು ಹೋದರಂತೆ. ಈಗಲೂ ಆ ಆಭರಣಗಳು ನಮ್ಮ ದೇಗುಲದ ವಶದಲ್ಲಿಯೇ ಇವೆ. ನವರಾತ್ರಿಯ ದಿನಗಳಂದು ಮಾತ್ರ ಅವುಗಳಿಂದ ದೇವಿಯನ್ನು ಅಲಂಕರಿಸುತ್ತಾರೆ. 
        ಹೊಸ ವಿಗ್ರಹದ ಬಗ್ಗೆ ಕೆಲವು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಅದನ್ನು ಕೆತ್ತಿದ ಶಿಲ್ಪಿ ಕಾರ್ಕಳದ ರಂಜಾಳ ಶೆಣೈ ವಂಶದವರು. ಈ ವಿಗ್ರಹದ ವೈಶಿಷ್ಟ್ಯವೇನೆಂದರೆ ದೇವಿಗೆ ನಾಲ್ಕು ಕೈಗಳಿವೆ. ಅವುಗಳಲ್ಲಿ ಬಲಗಡೆಯ ಎರಡು ಕೈಗಳಲ್ಲಿ ವಿಷ್ಣುವಿನ ಶಕ್ತಿಯ ಸಂಕೇತವಾಗಿ 'ಗದೆ' ಹಾಗೂ 'ಚಕ್ರ'ವಿದೆ. ಎಡಗಡೆಯ ಎರಡು ಕೈಗಳಲ್ಲಿ ಶಿವನ ಸಂಕೇತವಾಗಿ 'ತ್ರಿಶೂಲ' ಹಾಗೂ 'ಡಮರು' ಇದೆ. ಹೀಗೆ ಈ ಮೂರ್ತಿಗೆ ಹರಿ ಹಾಗೂ ಹರನ ಭಕ್ತರನ್ನು ಭೇದ ಭಾವವಿಲ್ಲದೇ ಸೆಳೆಯುವ ಆಕರ್ಷಣೆಯಿದೆ. 

        ದೇವಿಯ ಪ್ರತಿಷ್ಠೆ, ಮಾಧ್ವ ಮತದ ಸಂಪ್ರದಾಯದಂತೇ ನಡೆಯಲ್ಪಟ್ಟಿದೆ. ಸಾಲಿಗ್ರಾಮದ ಪೂಜೆಯ ನಂತರವೇ ದೇವಿಗೆ ಪೂಜೆ ಸಲ್ಲುವುದು. ಈ ಎಲ್ಲಾ ವಿವರಗಳನ್ನು ನನಗೆ ಹೇಳಿದ್ದು ಸುಮಾರು ನೂರಾ ಹನ್ನೆರಡು ವರ್ಷ ಬದುಕಿ ಬಾಳಿದ ನನ್ನ ತಂದೆಯ ಅಜ್ಜಿ 'ಅಪ್ಪಿಮಾಯಿ'. 
        ನಾನು ನಂದಳಿಕೆಗೆ ಹೋಗಿ ಮೂಲ ವಿಗ್ರಹವನ್ನು ನೋಡಿದ್ದು ಹಾಗೂ ಒಬ್ಬ ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದಿನ  ಕಂತಿನಲ್ಲಿ ಬರೆಯುತ್ತೇನೆ. 

No comments:

Post a Comment