Pic courtesy : Ashok Nayak
ನಾಳೆಯಿಂದ ನವರಾತ್ರಿ ಉತ್ಸವದ ಆರಂಭ. ನಮ್ಮ ಊರು ಬಂಟವಾಳದಲ್ಲಿ ನಮ್ಮದೇ ಆದ ಮಹಾಮಾಯಿ ದೇವಸ್ಥಾನದಲ್ಲಿ ವೈಭವದ ಆಚರಣೆಗಳು. ಬಾಲ್ಯದಿಂದ ಅನುಭವಿಸಿದ ದೈವ ಸಾನ್ನಿಧ್ಯದ ಕ್ಷಣಗಳು.
ದೇಶದ ಯಾವ ಮೂಲೆಯಲ್ಲಿದ್ದರೂ ನವರಾತ್ರಿಯ ಆ ಒಂಭತ್ತು ದಿನಗಳು ಮಹಮಾಯಿ ದೇವಸ್ಥಾನದಲ್ಲಿ ಹಾಜರು. ಬಾಲ್ಯದಲ್ಲಿ ಆಡಿದ ಆಟಗಳು, ದೇಗುಲದ ಬಗ್ಗೆ ಭಯಮಿಶ್ರಿತ ಪ್ರೀತಿ, ಆವೇಶ ಧರಿಸಿದ ಪಾತ್ರಿಯೊಡನೆ ಭಾವನಾತ್ಮಕ ಸಂಬಂಧಗಳು... ಎಲ್ಲವೂ ನೆನಪಾಗಿ ಕಾಡುತ್ತವೆ. ಮುಂದೆ ಅದೇ ದೇಗುಲ, ನನ್ನ ತಾಂತ್ರಿಕ ಸಾಧನೆಗೆ ವೇದಿಕೆಯಾಗುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ತಾಂತ್ರಿಕ ಸಾಧನೆಯ ಕುರಿತಾಗಿ ಬರೆಯುವ ಮೊದಲು ನಮ್ಮ ದೇವಸ್ಥಾನದ ಬಗ್ಗೆ ಕೆಲವು ಐತಿಹಾಸಿಕ ವಿಚಾರಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ಸುಮಾರು ನಾನ್ನೂರು ವರ್ಷಗಳ ಹಿಂದಿನ ಮಾತು. ನಮ್ಮದು ಪಾಳೇಗಾರರ ವಂಶ. ಅಣ್ಣ ತಮ್ಮಂದಿರಾದ ರಾಮ ನಾಯಕ್ ಹಾಗೂ ಕೃಷ್ಣ ನಾಯಕ್ ಅವರು ಅಂದು ಪಾಳೆಗಾರಿಕೆ ನಡೆಸುತ್ತಿದ್ದರು. ಕನ್ನಡದ ರಾಜ (ಹೆಸರು ತಿಳಿದಿಲ್ಲ, ತಿಳಿದಿದ್ದ ಒಬ್ಬರೇ 'ಅಪ್ಪಿ ಮಾಯಿ' ಇಂದು ನಮ್ಮೊಂದಿಗಿಲ್ಲ. ಸುಮಾರು ನೂರಾ ಹನ್ನೆರಡು ವರ್ಷ ಆಕೆ ಬದುಕಿದ್ದರು.) ಒಬ್ಬನಿಗೆ ಸಹಾಯಹಸ್ತ ಚಾಚಿ, ಮರಾಠಿಗರ ಮೇಲೆ ತಮ್ಮ ಸೈನ್ಯದೊಂದಿಗೆ ದಂಡೆತ್ತಿ ಹೋಗಿ ಗೆದ್ದು ಬರುವಾಗ ನದಿಯೊಂದನ್ನು ದಾಟುವಾಗ ಸಿಕ್ಕಿದ ಮೂರ್ತಿಯೇ ನಮ್ಮ 'ಮಹಾಮಾಯಿ'. ಅಂದು ಸಹಕಾರ ನೀಡಿದ್ದಕ್ಕೆ ಬಂಟವಾಳದ ಸಮೀಪ ಇರುವ 'ಕೊಳ್ ಕೆರೆ' ಎಂಬ ಊರನ್ನು ತಾಮ್ರಶಾಸನದ ಮೂಲಕ ನಮ್ಮ ಪೂರ್ವಜರಿಗೆ ಕಾಣಿಕೆಯಾಗಿ ಕನ್ನಡದ ಅರಸರು ನೀಡಿದ್ದರು. ಅಲ್ಲಿಂದ ಮುಂದೆ ತಮ್ಮ ಆಳ್ವಿಕೆಯನ್ನು ನಾಯಕ್ ವಂಶಸ್ಥರು ಕೊಳ್ ಕೆರೆಯಿಂದ ಮುಂದುವರೆಸುತ್ತಾರೆ.
ಇಂದಿಗೂ ಕೆ. ಪ್ರವೀಣ್ ನಾಯಕ್ ಎಂಬ ನನ್ನ ಹೆಸರಿನಲ್ಲಿರುವ 'ಕೆ ' ಕೊಳ್ ಕೆರೆಯನ್ನು ಪ್ರತಿನಿಧಿಸುತ್ತದೆ. ಮೊಮ್ಮಕ್ಕಳಿಗೆ ಅಜ್ಜನ ಹೆಸರು ಇಡುವುದು ವಾಡಿಕೆಯಾಗಿದ್ದುದರಿಂದ ತಲೆತಲಾಂತರದಿಂದ ರಾಮ ನಾಯಕನ ಮೊದಲ ಮೊಮ್ಮಗನಿಗೆ ರಾಮ ನಾಯಕನೆಂದೇ ಹೆಸರಿಡಲಾಯಿತು. ಎರಡನೇ ಮೊಮ್ಮಗನಿಗೆ ಕೃಷ್ಣ ನಾಯಕನೆಂದೇ ಹೆಸರಿಡಲಾಯಿತು. ಹೀಗೆ ಮುಂದುವರೆದ ಪರಂಪರೆ ನನ್ನ ದೊಡ್ಡಪ್ಪ ರಾಮ ನಾಯಕ ಹಾಗೂ ನನ್ನ ತಂದೆ ಕೃಷ್ಣ ನಾಯಕ ಅವರವರೆಗೂ ಮುಂದುವರೆಯಿತು. ಪ್ರತಿ ತಲೆಮಾರಿನಲ್ಲೂ ಇಬ್ಬರು ಗಂಡು ಮಕ್ಕಳು ಖಾಯಂ ಆಗಿ ಇರುತ್ತಿದ್ದರು. ರಾಮ ನಾಯಕ ಹಾಗೂ ಕೃಷ್ಣ ನಾಯಕರ ಪರಂಪರೆ ಹೀಗೆ ಮುಂದುವರೆಯಿತು.
ಈಗ ಮೂರ್ತಿಯ ವಿಷಯಕ್ಕೆ ಬರೋಣ, ನದಿಯಲ್ಲಿ ಸಿಕ್ಕಿದ ಮೂರ್ತಿಯನ್ನು ನೋಡಿ, ಅದರ ಸೌಂದರ್ಯಕ್ಕೆ ಮರುಳಾಗಿ ನಮ್ಮ ಪೂರ್ವಜರು ಆಗಿನ ಅವರ ಆಳ್ವಿಕೆಯ ಸ್ಥಾನವಾದ ಬಂಟವಾಳಕ್ಕೆ ಕರೆತಂದರು. ಅಲ್ಲಿ ತಮ್ಮ ದೇವರ ಮನೆಯಲ್ಲಿ ಇಟ್ಟು ದಿನಂಪ್ರತಿ ಪೂಜೆ ಮಾಡುತ್ತಿದ್ದರು. ನವರಾತ್ರಿಯ ದಿನ ಬಂದಾಗ ಅಂದಿನ ಕೃಷ್ಣ ನಾಯಕ್ ಅವರಿಗೆ ಮೈ ಮೇಲೆ ದೇವಿಯ ಆವಾಹನೆ ಆಯಿತಂತೆ. ತನಗೆ ರಕ್ತಬಲಿ ಬೇಕೆಂದು ಕೇಳಿದಾಗ ಎಲ್ಲರೂ ತಬ್ಬಿಬ್ಬಾಗಿ ಅಂದಿನ ಪುರೋಹಿತ ಆಚಾರ್ಯ ಅವರನ್ನು ಕರೆಸಿದರು. ಆಚಾರ್ಯರು ' ತಾವು ಮಾಧ್ವ ಪಂಥವನ್ನು ಸ್ವೀಕಾರ ಮಾಡಿರುವುದರಿಂದ ಬಲಿ ಕೊಡುವುದು ಅಸಾಧ್ಯ ಎಂದು ಅದರ ಬದಲು ಕುಂಬಳಕಾಯಿಯನ್ನು ಹೊಡೆದು ಕುಂಕುಮವನ್ನು ಸವರಿ 'ಇದನ್ನೇ ಬಲಿ ಎಂದು ಸ್ವೀಕರಿಸು ತಾಯಿ' ಎಂದು ಬೇಡಿ ಕೊಂಡರಂತೆ. ಅಂದು ಅದನ್ನು ಒಪ್ಪಿಕೊಂಡ ಆವೇಶದ ಪಾತ್ರಧಾರಿ ಮುಂದಿನ ವರ್ಷದಲ್ಲಿ ಇದಕ್ಕೆ ಸೂಕ್ತವಾದ ಪರಿಹಾರ ಬೇಕೇ ಬೇಕು ಎಂದು ಹೇಳಿದರಂತೆ. ಅಲ್ಲದೇ ಬಲಿ ಕೇಳಲು ಕಾರಣವಾಗಿ 'ವಿಗ್ರಹದ ಒಂದು ಭಾಗ ಭಿನ್ನವಾಗಿದ್ದುದರಿಂದ ಪ್ರಾಣಿಬಲಿ ಅನಿವಾರ್ಯ' ಎಂದೂ ಹೇಳಿದರಂತೆ.
ಪ್ರಾಣಿಬಲಿಯನ್ನು ಸಾರಾಸಗಟಾಗಿ ನಿರಾಕರಿಸಿದ ಆಚಾರ್ಯರಿಗೆ ಆವೇಶಕ್ಕೆ ಒಳಗಾದ ವ್ಯಕ್ತಿ ಹೇಳಿದ್ದೇನು ? ಆ ವಿಗ್ರಹ ಈಗ ಎಲ್ಲಿದೆ ? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.
No comments:
Post a Comment