Saturday, 24 August 2019

ನಾನೊಂದು ಬೆಕ್ಕು.

          ನಾನೊಂದು ಬೆಕ್ಕು. ನೀವೆಲ್ಲಾ ಬೀದಿ ನಾಯಿ ಅಂತೀರಲ್ಲ ಆ ಥರ ನಾನು ಬೀದಿ ಬೆಕ್ಕು. ನನಗೆ ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ನಾನು ತಬ್ಬಲಿಯಾಗಿದ್ದೆ. ಮುದ್ದು ಮಾಡುತ್ತಿದ್ದ ಅಮ್ಮ ಒಬ್ಬಳು ಇದ್ದಳು ಅನ್ನೋ ನೆನಪು ಮನಸ್ಸಿನ ಯಾವುದೋ ಮೂಲೆಯಲ್ಲಿ ಹುದುಗಿ ಹೋಗಿದೆ. ಏಕೆಂದರೆ ಈ ನಾಗರೀಕ ಸಮಾಜ ನನ್ನನ್ನು ತಾಯಿಯಿಂದ ದೂರ ಮಾಡಿತ್ತು. ಯಾವುದೋ ಹೋಟೆಲಿನಲ್ಲಿ ಕೆಲದಿನ ಕಳೆದ ನೆನಪು. ನನ್ನನ್ನು ಚಿಕ್ಕಂದಿನಿಂದಲೇ ಸಾಕಿದರೆ ನಾನು ಅಲ್ಲೇ ಇರುವೆ ಎಂದು ಆ ಹೊಟೇಲಿಗರ ನಂಬಿಕೆಯಾಗಿತ್ತು. ಒಂದು ದಿನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋದೆ. ನನಗೆ ತಾಯಿ ಬೇಕು ಅನ್ನಿಸುತ್ತಿತ್ತು.                   
          ಎಲ್ಲೆಲ್ಲೋ ಹುಡುಕಿದೆ. ಎಲ್ಲಿ ಹೋದರೂ ನಿರಾಸೆಯೇ ಕಾದಿತ್ತು. ಒಮ್ಮೆ ಬೆಳಗಿನ ಜಾವ, ತಾಯಿಯ ನೆರಳೆಲ್ಲಾದರೂ ಕಾಣಬಹುದೇನೋ ಎಂಬ ಆಸೆಯಿಂದ ವಾಕಿಂಗ್ ಹೊರಟಿದ್ದೆ. 'ಬೌ.. ಬೌ'  ಎಂದು ಬೊಗಳುತ್ತಿದ್ದ ನಾಯಿಯ ಅಬ್ಬರಕ್ಕೆ ಹೆದರಿ ದಿಕ್ಕು ಪಾಲಾಗಿ ಓಡಿ ಮನೆಯೊಂದರ ಕಿಟಕಿಯ ಸಜ್ಜಾ ಮೇಲೆ ಅವಿತು ಕುಳಿತೆ. ನಾಯಿ ದೂರಾದ ಮೇಲೆ ಸಜ್ಜಾದಿಂದ ಕೆಳಗೆ ಧುಮುಕಲು ಸಜ್ಜಾದೆ. ಕೆಳಗೆ ನೋಡಿದೆ. ಮೈ ನಡುಗಿತು. ಪ್ರಾಣಭಯದಿಂದ ಬಹು ಎತ್ತರಕ್ಕೇನೋ  ಏರಿ ಬಿಟ್ಟಿದ್ದೆ. ಧುಮುಕಲು ಭಯ. ಏನು ಮಾಡುವುದೆಂದು ತೋಚದೆ 'ಮ್ಯಾವ್ ಮ್ಯಾವ್' ಎಂದು ಅರಚುತ್ತಲೇ ಇದ್ದೆ. 
          'ಆ' ಮನೆಯಲ್ಲಿದ್ದ ಗಂಡ ಹೆಂಡತಿ ಹೊರಗೆ ಬಂದರು. ಗಂಡ ನನ್ನನ್ನು ನೋಡಿದೊಡನೆ ಹೆಂಡತಿಯ ಬಳಿ ಏನೋ ಹೇಳಿ ಕುರ್ಚಿಯ ಮೇಲೆ ನಿಂತು ಸಜ್ಜಾ ಮೇಲಿದ್ದ  ನನ್ನನ್ನು ನೋಡುತ್ತಿದ್ದ. ಇವನೇನು ಮಿತ್ರನೋ ಶತ್ರುವೋ ಎಂದು ಯೋಚಿಸುವಷ್ಟರಲ್ಲಿ ಆತ ನನ್ನನ್ನು ದೊಣ್ಣೆಯೊಂದರಿಂದ ನೂಕುತ್ತಿದ್ದ. ಆ ರಾಕ್ಷಸನಿಗೆ ನಾನು ನನ್ನ ಕೈಲಾದಷ್ಟು ಪ್ರತಿರೋಧ ಮಾಡಿ ಸಜ್ಜಾಗೆ ಅಂಟಿಕೊಂಡೇ ಕುಳಿತಿದ್ದೆ. ಆದರೆ ಆತನೆಲ್ಲಿ? ನನ್ನಂತಹ ಸಣ್ಣ ಪ್ರಾಣಿ ಎಲ್ಲಿ? ಹಂತ ಹಂತವಾಗಿ ಆದರೆ ಬಲವಂತವಾಗಿ ಆತ ನನ್ನನ್ನು ನೂಕುತ್ತಿದ್ದ. ನೋಡ ನೋಡುತ್ತಿದ್ದಂತೆ ನಾನು ಸಜ್ಜಾದ ತುದಿಗೆ ಬಂದು ಬಿಟ್ಟಿದ್ದೆ. ಎದೆ ಬಾಯಿಗೆ ಬಂದಂತಾಗಿತ್ತು. ಕೊನೆಗೂ ಆತ ತಳ್ಳಿಯೇ ಬಿಟ್ಟ. 'ಆಯಿತು ನನ್ನ ಕಥೆ ಮುಗಿಯಿತು ಕೈಕಾಲು ಮುರಿಯುವುದೋ, ಪ್ರಾಣವೇ ಹೋಗುವುದೋ?'  ಎಂಬ ಪ್ರಶ್ನೆ ಕ್ಷಣಾರ್ಧದಲ್ಲಿ ಮೂಡಿ ಬಂತು. ಆದರೆ...  
          ನಾನು ಕೆಳಗೆ ಬೀಳಬಾರದೆಂದು ದೊಡ್ಡದೊಂದು ವಿಡಿಯೋಕಾನ್ 'ಡಿಶ್' ತಟ್ಟೆಯನ್ನು ಹಿಡಿದುಕೊಂಡು ಆತನ ಹೆಂಡತಿ ನಿಂತಿದ್ದಳು. ನಾನು ಅದರಲ್ಲಿ ಬಿದ್ದೆ. ಮೈಗೆ ಏಟಾಗದಿರಲೆಂದು ಒಂದೆರಡು ಬಟ್ಟೆಯನ್ನು ಮಡಿಸಿಟ್ಟಿದ್ದಳು. ನಿಧಾನವಾಗಿ ನೆಲಕ್ಕೆ ಇಳಿಸಿದಳು. 'ಬದುಕಿದೆಯಾ ಬಡಜೀವವೇ' ಎಂದು ಓಟಕಿತ್ತೆ. ಏದುಸಿರು ಸ್ಥಿಮಿತಕ್ಕೆ ಬಂದ ಮೇಲೆ ಒಂದು ಕ್ಷಣ ಯೋಚಿಸಿದೆ.  ನಾನು ಅವರನ್ನು ರಾಕ್ಷಸರೆಂದು ಅಂದುಕೊಂಡೆ, ಆದರೆ ಅವರು ಎಷ್ಟೊಂದು ಉಪಕಾರ ಮಾಡಿದರು. 'ಛೆ! ನನ್ನ ಜನ್ಮಕ್ಕಿಷ್ಟು' ಎಂದು ಪಶ್ಚಾತ್ತಾಪ ಪಟ್ಟೆ. 
          ಮರುದಿನ ಬೆಳಗ್ಗೆ ಸೂರ್ಯ ಮೂಡುವ ಮುನ್ನವೇ 'ಆ' ಮನೆಯ ಬಾಗಿಲು ಕಾಯುತ್ತಿದ್ದೆ. ರವಿಯು ಆಗಸದಲ್ಲಿ ಹೊಂಬಣ್ಣ ಮೂಡಿಸುತ್ತಿದ್ದಂತೆ ವಾಕ್ ಹೋರಾಡಲು ಸಿದ್ಧನಾಗಿ ಬಂದ ಗಂಡ ಹೊರಬಂದು ಮೆಟ್ಟಿಲ ಮೇಲೆ ಕುಳಿತುಕೊಂಡು ಹೆಂಡತಿಗಾಗಿ ಕಾಯುತ್ತಿದ್ದ. ನಾನು ನಿಧಾನವಾಗಿ ಆತನ ಬಳಿ ಹೋದೆ. ಸ್ವಲ್ಪ ಧೈರ್ಯ ಮಾಡಿ ಆತನ ತೊಡೆಯ ಮೇಲೆ ಹತ್ತಿ ಕುಳಿತೆ.


          ಅದ್ಯಾವ್ದೋ ಜೀನ್ಸ್ ಪ್ಯಾಂಟ್ ಇರಬೇಕು, ಚುಮುಚುಮು ಚಳಿಗೆ ಅದು ಹಿತವಾಗಿತ್ತು. ಆತ ನಿಧಾನವಾಗಿ ನನ್ನ ಮೈ ಸವರತೊಡಗಿದ. ನನಗೆ ಹಾಯೆನಿಸುತ್ತಿತ್ತು. ನಂತರ ಎರಡೂ ಕೈಗಳಿಂದ ಗಟ್ಟಿಯಾಗಿ ನನ್ನನ್ನು ಹಿಡಿದುಕೊಂಡ. ಗಡಗಡ ನಡುಗುತ್ತಿದ್ದ ನನ್ನ ಮೈ ಬೆಚ್ಚಗಾದ ಅನುಭವ. ನಂತರ ಹೊರಬಂದ ಆತನ ಹೆಂಡತಿಯೂ ಕೂಡ ನನ್ನನ್ನು ಮುದ್ದಾಡಿದಳು. ನನಗೆ ತಾಯ ನೆನಪನ್ನು  ಮೂಡಿಸಿದಳು. ಮುಂದೇನಾಯಿತು? 
ನಾಳೆ ಹೇಳುವೆ.       

No comments:

Post a Comment