Friday, 27 December 2019

'ಯಾರಿಗೆ ಯಾರುಂಟು ?' ಜೀವನದ ಕಟುಸತ್ಯಗಳು - 9

'ಯಾರಿಗೆ ಯಾರುಂಟು, ರವಿನ ಸಂಸಾರ, ನೀರ ಮೇಲಣ ಗುಳ್ಳೆ, ನಿಜವಲ್ಲ ಹರಿಯೇ..'
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...'
ಮೊದಲ ಸಾಲು ದಾಸರ ಪದದಿಂದ ಆಯ್ದುಕೊಂಡರೆ, ಎರಡನೆಯ ಸಾಲು ನಾಣ್ಣುಡಿ ಹಾಗೂ ಚಲನ ಚಿತ್ರ ಗೀತೆಯೊಂದರ ಸಾಲು.
         ಹಾಗೇನಿಲ್ಲ, ನನಗೆ ಸಾಕಷ್ಟುಆಪ್ತರಿದ್ದಾರೆ, ಜೀವ ಕೊಡುವ ಹೆಂಡತಿ/ಗಂಡ ಇದ್ದಾರೆ, ಅಸಂಖ್ಯಾತ ಅಭಿಮಾನಿಗಳಿದ್ದಾರೆ... ಹೀಗೆ ಬಹುಜನರಿಗೆ ಅನ್ನಿಸಬಹುದು. ನಿಜ. ಇದ್ದಾರೆ, ಎಲ್ಲಿಯ ತನಕ ಹಾಗೂ ಯಾವ್ಯಾವ ಸಂದರ್ಭದಲ್ಲಿ ಇರುತ್ತಾರೆ ಅನ್ನುವುದು ಮುಖ್ಯ. ನಾನು ಜೀವನದಲ್ಲಿ ಅನುಭವಿಸಿಲ್ಲವಾದರೂ, ಬೇರೆ ಬೇರೆ ರೀತಿಯಲ್ಲಿ ಅನುಭವಿಸಿದ ಜನರನ್ನು ನೋಡಿದ್ದೇನೆ, ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ. 
         ಮೊದಲನೆಯದಾಗಿ ಮನುಷ್ಯನಿಗೆ ಈ ಭಾವನೆ ಬರುವುದು ತಾನು ಅಧಿಕಾರ ಅಥವಾ ಪದವಿಯನ್ನು ಕಳೆದುಕೊಂಡಾಗ. ನಿಮ್ಮಲ್ಲಿ ಅಧಿಕಾರವಿದ್ದು ಅಥವಾ ನೀವೊಂದು ಸಶಕ್ತ ಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಲಸ ಮಾಡಿಕೊಳ್ಳಲು ಜನರ ಪಡೆಯೇ ನಿಮ್ಮ ಸುತ್ತ ತುಂಬಿರುತ್ತದೆ. ಅದೇ ನೀವು ಅಧಿಕಾರವನ್ನು ಕಳೆದುಕೊಂಡ ಮರುಕ್ಷಣದಿಂದ ನಿಮ್ಮ ಸುತ್ತಲಿದ್ದ ಜನರು ನಿಧಾನವಾಗಿ ಕರಗುತ್ತಾರೆ. ಅಂತೆಯೇ ಚಲನಚಿತ್ರ ನಟ-ನಟಿಯರು, ಕ್ರಿಕೆಟ್ ತಾರೆಯರು, ಸಾಂಸ್ಕ್ರತಿಕ ವಲಯದ ಜನಪ್ರಿಯ ವ್ಯಕ್ತಿಗಳು ಮುಂತಾದವರು ಚಲಾವಣೆಯಲ್ಲಿ ಇರುವವರೆಗೂ ಅವರ ಹಿಂದೆ ಜನರ ಸಂತೆಯೇ ನೆರೆಯುತ್ತಿರುತ್ತದೆ. ಜನಪ್ರಿಯತೆ ಕಳೆದುಕೊಂಡ ಮೇಲೆ ಕ್ರಮೇಣ ಜನರು ದೂರಾಗುತ್ತಾರೆ. 
         'ಅದರಲ್ಲಿ ತಪ್ಪೇನಿದೆ? ಚಲಾವಣೆಯಲ್ಲಿ ಇರುವವರೆಗೂ ನಾಣ್ಯ' ಎಂದು ನಿಮಗೆ ಅನ್ನಿಸಬಹುದು. ಆದರೆ ಎತ್ತರಕ್ಕೇರಿ ಕುಸಿದ ವ್ಯಕ್ತಿಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅವರ ಭ್ರಮಾಲೋಕದಿಂದ ಹೊರಬರಲಾಗದೇ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗುತ್ತಾರೆ. 
         ಎರಡನೆಯದಾಗಿ ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ನಿಮ್ಮ ಸುತ್ತ ಮಂದಿ ಮಾಗಧರು ಇದ್ದೇ ಇರುತ್ತಾರೆ. ನೀವು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಂತೇ ನಿಮ್ಮ ಬಂಧು ಬಳಗದವರು ನಿಧಾನವಾಗಿ ಕರಗುತ್ತಾರೆ. ನಿಮ್ಮ ಕುಟುಂಬದವರೂ, ನಿಮ್ಮಿಂದ ಸಹಾಯ ಪಡೆದ ಗೆಳೆಯರೂ ನಿಮ್ಮಿಂದ ದೂರವಾಗುತ್ತಾರೆ. ಇಂತಹ ವ್ಯಕ್ತಿಗಳಿಗೆ 'ನನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ' ಎಂದು ನಂಬುವುದು ಕಷ್ಟವಾಗಿ, ಕೊನೆಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.  
         ಮೂರನೆಯದಾಗಿ ಹಾಗೂ ಅತಿಮುಖ್ಯವಾಗಿ ನೀವು ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದಾದರೂ ಕಾಯಿಲೆಗೆ ಒಳಗಾದಾಗ 'ನಿಮ್ಮವರು' ನಿಮ್ಮಿಂದ ದೂರಾಗುತ್ತಾರೆ. ಕೆಲಕಾಲ ಅವರು ನಿಮ್ಮೊಂದಿಗೆ ಇರಬಹುದು ಆದರೆ ನೀವು ಕಾಯಿಲೆಯಿಂದ ಗುಣಮುಖರಾಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದ್ದರೆ ನೀವಂದುಕೊಂಡ 'ನಿಮ್ಮವರೇ' ನಿಮ್ಮಿಂದ ನಿಧಾನವಾಗಿ ದೂರಾಗುತ್ತಾರೆ. 
         ನನ್ನ ಜೀವದ ಗೆಳೆಯ/ಗೆಳತಿ, ನನ್ನ ಪ್ರೀತಿಯ ಗಂಡ/ಹೆಂಡತಿ ನನ್ನಿಂದ ದೂರವಾಗುತ್ತಿದ್ದಾರೆ ಎನ್ನುವ ಸತ್ಯ ಅರಿವಾಗುತ್ತಿದ್ದಂತೇ ಆ ರೋಗಗ್ರಸ್ಥನಿಗೆ ಮಾನಸಿಕವಾಗಿ ದೊಡ್ಡ ಆಘಾತವೇ ಆಗುತ್ತದೆ.  
'ಯಾರಿಗೆ ಯಾರುಂಟು,ಇರವಿನ ಸಂಸಾರ, ನೀರ ಮೇಲಣ ಗುಳ್ಳೆ,ನಿಜವಲ್ಲ ಹರಿಯೇ' 
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...' 
ಈ ಮಾತುಗಳ ನಿಜ ಅರ್ಥದ ಸಾಕ್ಷಾತ್ಕಾರ ಮೇಲೆ ಹೇಳಿದ ಎಲ್ಲರಿಗೂ ಆಗುತ್ತದೆ. 

         ನಾವು ಕೆಲವು ಸತ್ಯಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು. ಈ ಜಗತ್ತಿನಲ್ಲಿ ಬಹುತೇಕ ಎಲ್ಲರೂ ಸ್ವಾರ್ಥಿಗಳೇ. ಅದನ್ನು ತಪ್ಪು ಎಂದು ಹೇಳಲೂ ಆಗುವುದಿಲ್ಲ, ಪ್ರತಿಯೊಬ್ಬರೂ ತಮ್ಮ ತಮ್ಮ  ಏಳಿಗೆಯನ್ನು ಬಯಸುವುದರಿಂದ ಆತ  ಸ್ವಾರ್ಥಿಯಾಗುತ್ತಾನೆ. ಆದ್ದರಿಂದ ಜನರೊಡನೆ ವ್ಯವಹರಿಸುವಾಗ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳ್ಳೆಯದು. 
         ಜನಪ್ರಿಯತೆ ಎನ್ನುವುದು ಶಾಶ್ವತವಲ್ಲ. 'ಎಲ್ಲೋ ಇದ್ದ ನನಗೆ ಇಷ್ಟೊಂದು ಜನಪ್ರಿಯತೆ ಸಿಕ್ಕಿತಲ್ಲ' ಎಂದು ವಿನಮ್ರವಾಗಿ ಒಪ್ಪಿಕೊಂಡವನಿಗೆ ಅದನ್ನು ಕಳೆದುಕೊಂಡಾಗ ಅಷ್ಟೊಂದು ನೋವಾಗುವುದಿಲ್ಲ. ನಾವು ಬಡವರಾಗಿರಲಿ, ಸಿರಿವಂತರಾಗಿರಲಿ ಒಂದಷ್ಟು ಉಳಿತಾಯವನ್ನು ನಮಗಾಗಿ... ಕೇವಲ ನಮಗಾಗಿ ಎಂದೇ ಮಾಡಿಕೊಳ್ಳಬೇಕು. ಅದೇ ಆಪತ್ಕಾಲದಲ್ಲಿ ನೆರವಾಗುವ ನಿಮ್ಮ ಆಪದ್ಧನ. ಎಲ್ಲಾ ಖರ್ಚುಗಳಂತೇ ಉಳಿತಾಯವನ್ನೂ ಒಂದು ಖರ್ಚೆಂದೇ ಭಾವಿಸಿ ಉಳಿತಾಯ ಮಾಡಿಕೊಳ್ಳಬೇಕು. ನಿಮ್ಮ ಗೆಳೆಯರು, ನೆಂಟರು ಅಷ್ಟೇಕೆ ನಿಮ್ಮ ಕುಟುಂಬದವರೇ ನಿಮಗೆ ಸಹಾಯ ಮಾಡದೇ ಇರಬಹುದು. ನಿಮ್ಮದೇ ಆದ ಹಣ ಸಾಯುವವರೆಗೂ ನಿಮ್ಮಲ್ಲಿರಲಿ. 
        ನಾನು ಹೇಳಿದ ಎಲ್ಲಾ ಉದಾಹರಣೆಗಳಿಗೆ ಅಪವಾದವೆಂಬಂತೆ ಕೆಲವು  ವ್ಯಕ್ತಿಗಳು ಇದ್ದೇ ಇರುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಬೆರಳೆಣಿಕೆಯಷ್ಟು. 

Wednesday, 18 December 2019

ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. - ಜೀವನದ ಕಟುಸತ್ಯಗಳು - 6

ಈ ಹಿಂದೆ ಕೇಳಿದ ಪ್ರಶ್ನೆಗಳಿಗೆ ನನ್ನ ಅನಿಸಿಕೆ/ಉತ್ತರವನ್ನು ಹೇಳಲು ಬಯಸುತ್ತೇನೆ.

ಕೇಸ್ ೧
ತನ್ನನ್ನು ನಂಬಿದ್ದ ಗೆಳೆಯನೊಬ್ಬನಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದ 'ಆತ'. ಅದರಲ್ಲಿ 'ಆತ'ನಿಗೂ ಸಿಂಹ ಪಾಲಿತ್ತು. ಆದರೆ ಗೆಳೆಯನಿಗೆ ಆ ವ್ಯವಹಾರದ ಸೂತ್ರಧಾರಿ 'ಆತ'ನೇ ಎಂದು ಗೊತ್ತಿಲ್ಲ. ಗೆಳೆಯ ಈಗಲೂ 'ಆತ'ನನ್ನು ನಂಬಿದ್ದಾನೆ, 'ಆತ'ನ ಕಷ್ಟಕಾಲದಲ್ಲಿ ಈಗಲೂ ನೆರವಾಗುತ್ತಾನೆ. 'ಆತ' ನನ್ನ ಬಳಿ ಬಂದು ಕೇಳಿದ. 'ಗೆಳೆಯ ನನಗೆ ನೆರವು ನೀಡುವಾಗೆಲ್ಲಾ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ. ನಿನಗಾದ ನಷ್ಟಕ್ಕೆ ಕಾರಣಕರ್ತನು ನಾನೇ ಎಂದು ಹೇಳಿಬಿಡಲೇ?'

ನನ್ನ ಅನಿಸಿಕೆ/ಉತ್ತರ
ನೀವು ಗೆಳೆಯನಿಗೆ ಮೋಸ ಮಾಡಿದ್ದರೂ ನಿಮ್ಮ ಗೆಳೆತನಕ್ಕೆ ಅದು ಅಡ್ಡಿಯಾಗಿಲ್ಲ. ಈಗ ಈ ಸತ್ಯವನ್ನು ಹೇಳಿದರೆ ಆತನಿಗೆ ನೋವಾಗಬಹುದು, ಬಹುತೇಕ ನೋವಾಗಿಯೇ ಆಗುತ್ತದೆ. ನೀವು ಮಾಡಿದ ತಪ್ಪಿನ ಅರಿವು ನಿಮಗಾಗಿದೆ. ಪಶ್ಚಾತ್ತಾಪವನ್ನೂ ಸಾಕಷ್ಟು ಪಟ್ಟಿದ್ದೀರಿ. ನೀವು ಆತನಿಗೆ ಮಾಡಿದ ಮೋಸಕ್ಕೆ ನೀವೂ ನೋವು ಪಟ್ಟಿದ್ದೀರಿ. ಆದ್ದರಿಂದ ಈ  ರಹಸ್ಯವನ್ನು ಹೇಳುವ ಅಗತ್ಯವಿಲ್ಲ. ನಿಮಗೆ ತಪ್ಪಿತಸ್ಥ ಭಾವನೆಯಿಂದ ಹೊರಬರಲೇ ಬೇಕೆಂದಿದ್ದರೆ, ಛಲದಿಂದ ನ್ಯಾಯವಾಗಿ ದುಡಿದು ಆತನಿಂದ ವಂಚನೆ ಮಾಡಿ ಪಡೆದ ಹಣಕ್ಕೆ ಬಡ್ಡಿಯನ್ನೂ ಸೇರಿಸಿ ಆತನಿಗೆ ತಿಳಿಯದಂತೆ ಬೇರೊಂದು ರೂಪದಲ್ಲಿ ನೀಡಬಹುದು. ಅಥವಾ ಹೇಳಲೇ ಬೇಕೆನಿಸಿದರೆ ಸ್ವಲ್ಪ ಸೌಮ್ಯವಾಗಿ 'ನನಗರಿವಿಲ್ಲದೇ ಒಂದು ತಪ್ಪು ಮಾಡಿದೆ. ಅದನ್ನು ಸರಿಪಡಿಸಲು ನಿನ್ನ ವಸ್ತುವನ್ನು ನಿನಗೇ ನೀಡಲು ಬಯಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು' ಎಂದು ಹೇಳಿ ಆತನನ್ನು ಒಪ್ಪಿಸುವುದು ಒಳಿತು. ಅನ್ಯಾಯವಾಗಿ ಕಳೆದುಕೊಂಡ ದುಡ್ಡು ಹಿಂದಿರುಗಿ ಬಂದಾಗ ಅದು ಎಂತಹವರಿಗೂ ಸಂತಸವನ್ನು ನೀಡುತ್ತದೆ. ಹಣವನ್ನು ಹಿಂದಿರುಗಿಸುವ ಸಾಮರ್ಥ್ಯ ಇಲ್ಲದಿದ್ದರೆ ಅಪ್ರಿಯವಾದ ಈ ಸತ್ಯವನ್ನು ಹೇಳುವ ಅವಶ್ಯಕತೆ ಇಲ್ಲ. ಅಂದ ಮಾತ್ರಕ್ಕೆ ಮೋಸ ಮಾಡುವುದನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ.    

ಕೇಸ್ ೨
'ನಾನು ಇಬ್ಬರು ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದೆ. ಈಗ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ. ಆಕೆಗೆ ಈ ವಿಷಯವನ್ನು ಮೊದಲೇ ಹೇಳಿದರೆ ಒಳಿತಲ್ಲವೇ?' ಒಬ್ಬಾತ ಕೇಳುತ್ತಾನೆ. ಇಂತಹದೇ ಪ್ರಶ್ನೆಯನ್ನು ಒಬ್ಬಾಕೆಯೂ ಕೇಳುತ್ತಾಳೆ. ಇನ್ನು ಕೆಲವರು ಮದುವೆಯಾದ ನಂತರ ಇಂತಹದೇ ಪ್ರಶ್ನೆಯನ್ನು ಕೇಳುತ್ತಾರೆ.
'ನಿಮಗೇನು ಲಾಭ ಇದರಿಂದ?' ಎಂದು ಕೇಳಿದರೆ 'ಮುಂದೆ ಎಂದಾದರೂ ಅವರಿಗೆ ತಿಳಿದಲ್ಲಿ ಇದನ್ನು ವಂಚನೆಯೆಂದು ತಿಳಿಯಬಹುದಲ್ಲವೇ?' ಎನ್ನುತ್ತಾರೆ.

ನನ್ನ ಅನಿಸಿಕೆ/ಉತ್ತರ
ಈ ಬಗ್ಗೆ ನಾನು, ನಡೆದ ಒಂದು ಘಟನೆಯನ್ನು ಹೇಳಲಿಚ್ಚಿಸುತ್ತೇನೆ. ಒಂದು ದಿನ ನಾನು ಹೋಟೆಲೊಂದರಲ್ಲಿ ದೋಸೆ ತಿನ್ನುತ್ತಾ ಕುಳಿತಿದ್ದೆ. ಎದುರಿಗೆ ಒಬ್ಬರು ಮಹಿಳೆ (ಆಕೆಗೆ ಸುಮಾರು ಐವತ್ತು ವರ್ಷಗಳು)ಹಾಗೂ ಅವರ ತಾಯಿ (ಅವರಿಗೆ ಸುಮಾರು ಎಪ್ಪತ್ತು ಪ್ಲಸ್ ವರ್ಷಗಳು) ತುಳು ಭಾಷೆಯಲ್ಲಿ ಮಾತನಾಡುತ್ತಾ ಕುಳಿತಿದ್ದರು. ನಾನು ಅವರನ್ನು ತುಳು ಭಾಷೆಯಲ್ಲಿಯೇ ಕೇಳಿದೆ 'ನಿಮ್ಮದು ಮಂಗಳೂರಾ?' ಹೌದೆಂದು ನುಡಿದ ಆಕೆ ಮಾತನಾಡಲು ಶುರು ಮಾಡಿದರು. ಎಷ್ಟೋ ವರ್ಷಗಳ ಪರಿಚಯದವರೇನೋ ಎಂಬಂತೆ ಮಾತನಾಡುತ್ತಿದ್ದೆವು. ಆಕೆಯ ತಾಯಿಯೂ ನಮ್ಮೊಡನೆ ಹರಟುತ್ತಿದ್ದರು. 'ನನ್ನ ಅಫೇರ್ ಬಗ್ಗೆ ಹೇಳಲೇ' ಎಂದು ಪ್ರೀತಿಸಿ ವಂಚನೆಗೊಳಗಾದವರು ಕೇಳುವ ಪ್ರಶ್ನೆಯ ಬಗ್ಗೆ ಮಾತು ಬಂತು. ಆ ಮಹಿಳೆ ಥಟ್ಟನೆ ಉತ್ತರಿಸಿದರು 'ಇಲ್ಲ, ಖಂಡಿತ ಹೇಳಬಾರದು' ಮಾತು ಮುಂದುವರೆಸುತ್ತಾ ಆಕೆ 'ನಾನೂ ಪ್ರಾಯದಲ್ಲಿ ಒಬ್ಬಾತನನ್ನು ಪ್ರೀತಿಸಿದ್ದೆ. ಆದರೆ ಆತ ನನ್ನನ್ನು ವಂಚಿಸಿದ. ನಾನು ತುಂಬಾ ನೊಂದು ಹೋಗಿದ್ದೆ. ನಂತರ ನನ್ನ ಮದುವೆಯ ಪ್ರಸ್ತಾಪ ಬಂದಾಗ ನನಗೆ ಅಳುಕಿತ್ತು.  ಮದುವೆಯ ಬಗ್ಗೆ ಒಬ್ಬರೊಡನೆ ಮಾತುಕತೆಯಾಗಿತ್ತು. ನನ್ನನ್ನು ಭೇಟಿಯಾದಾಗ ಎಲ್ಲ ವಿಷಯಗಳನ್ನು ಅವರ ಬಳಿ ಹೇಳಬೇಕೆಂದುಕೊಂಡಿದ್ದೆ. ನಂತರ ನನ್ನ ಅವರ ಭೇಟಿಯಾಯಿತು. ಅವರು ಎಷ್ಟು ಮುಗ್ಧರು ಹಾಗೂ ಒಳ್ಳೆಯವರಾಗಿದ್ದರೆಂದರೆ, ನನಗೆ ಬಾಯಿಯೇ ಕಟ್ಟಿ ಹೋಗಿತ್ತು. ಅವರು ನನ್ನನ್ನೇ ಮದುವೆಯಾಗಬೇಕೆಂದು ಬಹಳವಾಗಿ ಬಯಸಿದ್ದನ್ನು ನೇರವಾಗಿ  ಹೇಳಿದರು. ನನಗೆ  ಮಾತುಗಳೇ ಬರಲಿಲ್ಲ. ಮೌನವಾಗಿ ಒಪ್ಪಿಕೊಂಡೆ. ಇಷ್ಟು ವರ್ಷಗಳು ಬಹಳ ಪ್ರೀತಿಯಿಂದ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನನ್ನ ಜೀವನದಲ್ಲಿ ನಡೆದ ಆ ಕಹಿಘಟನೆಯನ್ನು ನಾನು disgusting part of my life ಅಂತ ಕಿತ್ತು ಬಿಸಾಡಿದ್ದೇನೆ. ಹಿಂದೆ ಕೆಲವೊಮ್ಮೆ 'ಹೇಳಿ ಬಿಡಲೇ' ಎಂದೆನ್ನಿಸುತ್ತಿತ್ತು. ಆದರೆ ಆ ಮುಗ್ಧ ಮುದ್ದು ಮನಸ್ಸಿನ ಮೇಲೆ ಯಾವ ರೀತಿಯಲ್ಲೂ ನೋವನುಂಟು ಮಾಡಲು ನನಗೆ ಮನಸ್ಸಾಗಲಿಲ್ಲ. ಈಗಂತೂ ನಾನು ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದೇನೆ. ನಾನು ಹೇಳದಿರುವುದೇ ಒಳ್ಳೆಯದಾಯಿತೆಂದು ಅನಿಸುತ್ತದೆ'
ಇದಿಷ್ಟನ್ನೂ ಅವರು ಅವರ ತಾಯಿಯ ಎದುರೇ ಹೇಳಿದರು, ಅವರ ತಾಯಿಯೂ ಅದಕ್ಕೆ ಸಹಮತ ಸೂಚಿಸಿದರು.
ಯಾರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆದಿದ್ದರೆ, ಯಾರಿಂದಾದರೂ ಮೋಸ ಹೋಗಿದ್ದರೆ ಆಕೆ ಹೇಳಿದ ಹಾಗೆ disgusting part of my life ಎಂದು ಅರ್ಥ ಮಾಡಿಕೊಂಡು ಕಿತ್ತು ಬಿಸಾಡಿದರೆ ಕ್ಷೇಮ. ಅದರ ಬದಲು ವಂಚನೆ ಮಾಡಿದ ವ್ಯಕ್ತಿಯ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡು ಇನ್ನೊಬ್ಬನ ಜೊತೆ ಜೀವನ ನಡೆಸುವುದು ನಿರರ್ಥಕ. ತನ್ನ ಗುಟ್ಟು ಬಿಟ್ಟು ಕೊಟ್ಟ ಮಾತ್ರಕ್ಕೆ ನಿಮ್ಮ ಸಂಗಾತಿ  ಕೂಡಾ ಎಲ್ಲ ಗುಟ್ಟನ್ನು ಬಿಟ್ಟು ಕೊಡುವರೆಂಬ ಭರವಸೆ ಇಲ್ಲ. ಅವರೂ ಕೆಲವು ರಹಸ್ಯಗಳನ್ನು ರಹಸ್ಯವಾಗಿಯೇ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ನೋವು ತರುವ ಅಥವಾ ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. 
ಅಂದ ಮಾತ್ರಕ್ಕೆ ತಮ್ಮ ಮೂಗಿನ ನೇರಕ್ಕೆ ಸ್ವೇಚ್ಛಾಚಾರದಿಂದ ಬದುಕನ್ನು ಕಟ್ಟಿಕೊಳ್ಳುವುದು ಸರಿಯಲ್ಲ. 

ಕೇಸ್ ೩
'ನನಗೊಂದು ವಿಲಕ್ಷಣ ಕಾಯಿಲೆ ಇದೆ. ಮದುವೆಗೆ ಮುನ್ನ ಇದನ್ನು ತಿಳಿಸುವುದು ಒಳಿತಲ್ಲವೇ?' ಗಂಡಾಗಲೀ, ಹೆಣ್ಣಾಗಲೀ ಕೆಲವೊಮ್ಮೆ ಕೇಳುವ ಪ್ರಶ್ನೆ. 

ನನ್ನ ಅನಿಸಿಕೆ/ಉತ್ತರ
ಈ ವಿಷಯವನ್ನು ಪರಸ್ಪರ ಚರ್ಚಿಸುವುದು ಒಳಿತೆಂದು ನನ್ನ ಅಭಿಪ್ರಾಯ. ನಂತರ ನಿಮ್ಮ ವಿವೇಚನೆಗೆ ಬಿಟ್ಟದ್ದು. 


Tuesday, 17 December 2019

ಎಂದೆಂದಿಗೂ ಸತ್ಯವನ್ನೇ ಹೇಳಬೇಕೇ ? - ಜೀವನದ ಕಟುಸತ್ಯಗಳು - 5

         ಹಿಂದಿನ ಸಂಚಿಕೆಯಲ್ಲಿ 'ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ?' ಎಂಬ ವಿಷಯಕ್ಕೆ ಸಂಬಂಧ ಪಟ್ಟಂತೆ ನಾನು ಕೆಲವು ಪ್ರಕರಣಗಳನ್ನು ವಿವರಿಸಿದ್ದೆ.
        ನಾನು ಅವರಿಗೆ ಯಾವ ರೀತಿಯಲ್ಲಿ ಉತ್ತರಿಸಿದೆ ಎಂದು ಹೇಳುವ ಮೊದಲು ಸಂಸ್ಕೃತದ ಒಂದು ಸುಭಾಷಿತವನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ.
    'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ.
    'ಪ್ರಿಯಂ ಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನಃ'
ಹಾಗೆಂದರೆ             
   'ಸತ್ಯವನ್ನೇ ಹೇಳಬೇಕು ಹಾಗೂ ಪ್ರಿಯವಾದುದನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗಿರುತ್ತದೆ ಎಂಬ ಕಾರಣಕ್ಕೆ ಸುಳ್ಳನ್ನೂ ಹೇಳಬಾರದು, ಇದೇ ಸನಾತನವಾದ ಧರ್ಮ' ಇಲ್ಲಿ 'ಧರ್ಮ'ವೆಂದರೆ 'ನಡೆದುಕೊಳ್ಳಬೇಕಾದ ರೀತಿ.'
        ಈ ಸುಭಾಷಿತ ಅತ್ಯಂತ ಅರ್ಥಪೂರ್ಣವಾದ ಸುಭಾಷಿತ. ಸತ್ಯವನ್ನು ಹೇಳುವ ಭರದಲ್ಲಿ ಮನಸ್ಸಿಗೆ ನೋವು ಕೊಡುವ ಅಥವಾ ಹಿತವಲ್ಲದ ಸತ್ಯವನ್ನು ಮೈ ಮೇಲೆ ಬಿದ್ದು ಹೇಳುವ    ಅಗತ್ಯವಿಲ್ಲ. ಇತರರಿಗೆ ಖುಷಿ ನೀಡುತ್ತದೆ ಎಂಬ ಕಾರಣಕ್ಕಾಗಿ ಅನಗತ್ಯವಾಗಿ ಸುಳ್ಳನ್ನು ಹೇಳುವ ಅಗತ್ಯವೂ ಇಲ್ಲ.
        ಇನ್ನೊಬ್ಬರಿಗೆ ಹಾನಿ ತರುವ ಸತ್ಯ ಅಸತ್ಯಕ್ಕಿಂತ ಘೋರವಾಗಿರುತ್ತದೆ. ಒಂದು ಸಣ್ಣ ಕತೆಯನ್ನು ಉದಾಹರಣೆಯಾಗಿ ಹೇಳುತ್ತೇನೆ.
        ಸತ್ಯವನ್ನೇ ಹೇಳುವ ಒಬ್ಬ ಋಷಿ ತನ್ನ ಆಶ್ರಮದ ಮುಂದೆ ಮರವೊಂದರ ನೆರಳಲ್ಲಿ ಕುಳಿತಿರುತ್ತಾನೆ. ಅಮಾಯಕನೊಬ್ಬ ಓಡೋಡಿ ಬಂದು ಆ ಮರದ ಹಿಂದಿರುವ ಪೊಟರೆಯಲ್ಲಿ ಅವಿತುಕೊಳ್ಳುತ್ತಾನೆ. ಕೈಯಲ್ಲಿಮಚ್ಚು,ಕತ್ತಿಗಳನ್ನು ಹಿಡಿದುಕೊಂಡು ವೀರಾವೇಶದಿಂದ ಒಂದಷ್ಟು ದರೋಡೆಕೋರರು ಅದೇ ಸ್ಥಳಕ್ಕೆ ಧಾವಿಸಿ ಬರುತ್ತಾರೆ ಹಾಗೂ ಸತ್ಯಸಂಧನಾದ ಆ ಋಷಿಯ ಬಳಿ ಕೇಳುತ್ತಾರೆ 'ಸ್ವಾಮೀ ಇಲ್ಲಿ ಯಾರಾದರೂ ಓಡುತ್ತಾ ಬಂದಿದ್ದರೇ, ನೀವೇನಾದರೂ ನೋಡಿದಿರಾ ?
   ಅದಕ್ಕೆ ಸತ್ಯವೃತನಾದ ಆ ಋಷಿ 'ಹೌದು ನೋಡಿದ್ದೇನೆ' ಎಂದು ಹೇಳುತ್ತಾನೆ.
   'ಯಾವ ಕಡೆಗೆ ಹೋದ?' ದರೋಡೆಕೋರರಲ್ಲೊಬ್ಬ ಕೇಳುತ್ತಾನೆ.
   'ಇದೋ, ಈ ಮರದ ಹಿಂದಿರುವ ಪೊಟರೆಯಲ್ಲಿ ಕುಳಿತಿದ್ದಾನೆ' ಸತ್ಯವನ್ನೇ ನುಡಿಯುತ್ತಾನೆ ಸತ್ಯವಂತನಾದ ಆ ಮಹಾಋಷಿ.
        ದರೋಡೆಕೋರರು ಪೊಟರೆಯಲ್ಲಿ ಅವಿತಿರುವ ಆತನನ್ನು ಹೊರಗೆಳೆದು ಬರ್ಬರವಾಗಿ ಹತ್ಯೆಗೈದು ಆತನ ಹಣವನ್ನು ಲೂಟಿ ಮಾಡಿ ಪರಾರಿಯಾಗುತ್ತಾರೆ.
'ಸತ್ಯ ಹರಿಶ್ಚಂದ್ರನಂತೆಯೇ ಸತ್ಯವನ್ನು ಎಂತಹ ಸಂದರ್ಭದಲ್ಲಿಯೂ ಹೇಳಲೇ ಬೇಕಾ?' ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಆ ಅಮಾಯಕನ ಸಾವಿಗೆ ಸತ್ಯವೃತನಾದ ಋಷಿಯೇ ಕಾರಣನಾದ.
        ಮೇಲೆ ಉದಹರಿಸಿದ ಸುಭಾಷಿತ, ಇಂತಹ ಕೆಲವು ಕ್ಲಿಷ್ಟ ಸಂದರ್ಭಗಳಲ್ಲಿ ನೆನಪಿಸಿಕೊಳ್ಳಬೇಕಾದ ಸುಭಾಷಿತ.
         ಅಪರಿಚಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮಾತನಾಡಿದ, ಹೇಳಿದ ಒಂದು ಅತ್ಯುತ್ತಮ ಉದಾಹರಣೆಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರಿಸುತ್ತೇನೆ. ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿ .... 

Monday, 16 December 2019

ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ? - ಜೀವನದ ಕಟುಸತ್ಯಗಳು - 4

ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ? 
ನಾನು ಯಾರಿಗೂ ಹೇಳದಿರುವ ಈ ರಹಸ್ಯವನ್ನು ಬಯಲು ಮಾಡಬಹುದೇ? 
ಈ ಪ್ರಶ್ನೆಯನ್ನು ನನ್ನ 'ಥೆರಪಿ ಸೆಂಟರ್' ಗೆ ಬರುವ ಬಹಳಷ್ಟು ಮಂದಿ ಕೇಳುತ್ತಾರೆ.

ಕೇಸ್ ೧ 
ತನ್ನನ್ನು ನಂಬಿದ್ದ ಗೆಳೆಯನೊಬ್ಬನಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದ 'ಆತ'. ಅದರಲ್ಲಿ 'ಆತ'ನಿಗೂ ಸಿಂಹ ಪಾಲಿತ್ತು. ಆದರೆ ಗೆಳೆಯನಿಗೆ ಆ ವ್ಯವಹಾರದ ಸೂತ್ರಧಾರಿ 'ಆತ'ನೇ ಎಂದು ಗೊತ್ತಿಲ್ಲ. ಗೆಳೆಯ ಈಗಲೂ 'ಆತ'ನನ್ನು ನಂಬಿದ್ದಾನೆ, 'ಆತ'ನ ಕಷ್ಟಕಾಲದಲ್ಲಿ ಈಗಲೂ ನೆರವಾಗುತ್ತಾನೆ. 'ಆತ' ನನ್ನ ಬಳಿ ಬಂದು ಕೇಳಿದ. 
'ಗೆಳೆಯ ನನಗೆ ನೆರವು ನೀಡುವಾಗೆಲ್ಲಾ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ. ನಿನಗಾದ ನಷ್ಟಕ್ಕೆ ಕಾರಣಕರ್ತನು ನಾನೇ ಎಂದು ಹೇಳಿಬಿಡಲೇ?'
'ಇದರಿಂದ ನಿನಗೇನು ಲಾಭ? ಅವನಿಗೇನು ಲಾಭ?' ನಾನು ಕೇಳಿದೆ.
'ನನಗಾಗುವ ಲಾಭವೆಂದರೆ, ನನ್ನ ಗೆಳೆಯನಿಗೆ ಮಾಡಿದ ಮೋಸಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗಾಗುತ್ತದೆ. ಈ ಪಾಪಪ್ರಜ್ಞೆಯಿಂದ ಹೊರಬರಬಹುದು. ಆದರೆ ಅವನು ಹೇಗೆ ತೆಗೆದುಕೊಳ್ಳುತ್ತಾನೋ ಎನ್ನುವ ಭಯ ಕಾಡುತ್ತದೆ' ಪ್ರಾಮಾಣಿಕವಾಗಿ ಹೇಳಿದ ಆತ.
'ನೀನು ಮೋಸ ಮಾಡಿ ಪಡೆದ ಹಣವನ್ನು ಹಿಂದಿರುಗಿಸಲು ಈಗ ನಿನಗೆ ಶಕ್ತಿಯಿದೆಯೇ?' ಕೇಳಿದೆ. 
'ದೇವರಾಣೆಗೂ ಇಲ್ಲ' ಎಂದು ದೇವರ ಮೇಲೆ ಆಣೆ ಹಾಕಿ ಸತ್ಯ ಹೇಳಿದ ಆತ. 

ಕೇಸ್ ೨
'ನಾನು ಇಬ್ಬರು ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದೆ. ಈಗ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ. ಆಕೆಗೆ ಈ ವಿಷಯವನ್ನು ಮೊದಲೇ ಹೇಳಿದರೆ ಒಳಿತಲ್ಲವೇ?' ಒಬ್ಬಾತ ಕೇಳುತ್ತಾನೆ. ಇಂತಹದೇ ಪ್ರಶ್ನೆಯನ್ನು ಒಬ್ಬಾಕೆಯೂ ಕೇಳುತ್ತಾಳೆ. ಇನ್ನು ಕೆಲವರು ಮದುವೆಯಾದ ನಂತರ ಇಂತಹದೇ ಪ್ರಶ್ನೆಯನ್ನು ಕೇಳುತ್ತಾರೆ. 
'ನಿಮಗೇನು ಲಾಭ ಇದರಿಂದ?' ಎಂದು ಕೇಳಿದರೆ 'ಮುಂದೆ ಎಂದಾದರೂ ಅವರಿಗೆ ತಿಳಿದಲ್ಲಿ ಇದನ್ನು ವಂಚನೆಯೆಂದು ತಿಳಿಯಬಹುದಲ್ಲವೇ?' ಎನ್ನುತ್ತಾರೆ. 

ಕೇಸ್ ೩
'ನನಗೊಂದು ವಿಲಕ್ಷಣ ಕಾಯಿಲೆ ಇದೆ. ಮದುವೆಗೆ ಮುನ್ನ ಇದನ್ನು ತಿಳಿಸುವುದು ಒಳಿತಲ್ಲವೇ?' ಗಂಡಾಗಲೀ, ಹೆಣ್ಣಾಗಲೀ ಕೆಲವೊಮ್ಮೆ ಕೇಳುವ ಪ್ರಶ್ನೆ. 

ನಾನು ಇವರಿಗೆ ನೀಡಿದ/ನೀಡುವ ಉತ್ತರವನ್ನು ಹೇಳುವ ಮೊದಲು, ನೀವು ಈ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸುತ್ತೀರಿ? ದಯವಿಟ್ಟು ತಿಳಿಸಿ. ಮುಂದೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇನೆ.   

Wednesday, 27 November 2019

ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.- ಜೀವನದ ಕಟುಸತ್ಯಗಳು - 3

 ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.
        ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕೆಲವು ಅನುಭವಗಳನ್ನು ಯಾರ ಬಳಿಯೂ ಹೇಳದೇ ಗುಟ್ಟಾಗಿಯೇ ಇಟ್ಟಿರುತ್ತಾರೆ. ಕಡೆ ಪಕ್ಷ ಒಂದಾದರೂ ಗುಟ್ಟನ್ನು ತನ್ನಲ್ಲಿಯೇ ಬಚ್ಚಿಟ್ಟುಕೊಂಡಿರುತ್ತಾರೆ. ಆ ಗುಟ್ಟು ಅವರ ಸಾವಿನೊಂದಿಗೆ ಸತ್ತು ಹೋಗುತ್ತದೆ ! 

ಯಾಕೆ ಈ ಗುಟ್ಟು ? 
        ಆ ಗುಟ್ಟಿನ ಹಿಂದೆ ಒಂದು ಅವಮಾನ, ಅನೈತಿಕತೆ, ಕೀಳರಿಮೆ, ತಾವು ಮಾಡಿದ ಮೋಸ ಅಥವಾ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದಾದರೂ ಒಂದು ತಪ್ಪಿತಸ್ಥ ಭಾವನೆ ಇರಬಹುದು. ಈ ರೀತಿ ಯಾರಿಗೂ ಹೇಳದೇ ಗುಟ್ಟಾಗಿ ಇಟ್ಟುಕೊಳ್ಳುವುದು ಸರಿಯೇ? ನನ್ನ ಪ್ರಕಾರ ಸರಿ. ಏಕೆಂದರೆ ಇಂತಹ ಗುಟ್ಟನ್ನು ರಟ್ಟು ಮಾಡಿಕೊಳ್ಳುವುದರಿಂದ, ಲಾಭಕ್ಕಿಂತ ನಷ್ಟವೇ ಜಾಸ್ತಿ. 
        ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು? ಯಾವುದು ಪಾಪ, ಯಾವುದು ಪುಣ್ಯ?  ಈ ತುಲನಾತ್ಮಕ ವಿಷಯಕ್ಕೆ ಸರಿಯಾದ ತಕ್ಕಡಿ ಇಲ್ಲ. ಅದು ಸಮಾಜ, ನಾಗರಿಕತೆಗಾಗಿ ಸೃಷ್ಟಿಸಿಕೊಂಡ ನಿಯಮಗಳಾಗಿರುತ್ತವೆ. ಅವು ದೇಶ, ಕಾಲ, ನಿಮಿತ್ತಗಳಿಗೆ ಅನುಗುಣವಾಗಿರುತ್ತವೆ. ಒಂದು ದೇಶದಲ್ಲಿ 'ಸರಿ' ಎನ್ನಿಸಿಕೊಳ್ಳುವುದು, ಇನ್ನೊಂದು ದೇಶದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಒಂದು ಕಾಲದಲ್ಲಿ 'ಸರಿ' ಎನ್ನಿಸಿಕೊಂಡಿರುವುದು ಮತ್ತೊಂದು ಕಾಲದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಅಂತೆಯೇ ಈ ಕಾರಣಕ್ಕೆ 'ತಪ್ಪು' ಎಂದುಕೊಂಡಿರುವುದು ಆ ಕಾರಣಕ್ಕೆ 'ಸರಿ' ಎಂದೂ ಆಗಬಹುದು. ಆದರೆ ವಿಜ್ಞಾನಕ್ಕೆ ಇದಾವುದೂ ಗೊತ್ತಿಲ್ಲ. ಅದು ತನ್ನ ನಿಯಮಗಳನ್ನು ಮಾತ್ರ ಹೇಳುತ್ತದೆ. ವಿಷಯ ಹೀಗಿರುವಾಗ ಇದು 'ಸರಿ' ಅದು 'ತಪ್ಪು' ಎಂದು ಹೇಳಲು ಸಾಧ್ಯವಿಲ್ಲ. 

ಆದರೆ... 
ನಾವು ಈ ಕಾಲದಲ್ಲಿ, ಈ ಸಮಾಜದಲ್ಲಿ ಬದುಕುತ್ತಿರುವುದರಿಂದ, ಈ ಸಮಾಜದ ನಿಯಮಗಳಿಗೆ ನಾವು ತಲೆ ಬಾಗಬೇಕಾಗುತ್ತದೆ. ಅದು ಸಮಾಜ ಬಯಸುವ ನೈತಿಕತೆಯ ವಿಷಯವಾಗಲೀ, ಸಮಾಜ ಸೃಷ್ಟಿಸಿದ ಕಾನೂನಿನ ಚೌಕಟ್ಟಿನ ವಿಷಯವಾಗಲೀ ಇದಕ್ಕೆ ನಾವು ವಿರುದ್ಧವಾಗಿ ಹೋದಾಗ ಅದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು. ಆದ್ದರಿಂದ, ಆದಷ್ಟು ಈ ಚೌಕಟ್ಟಿನೊಳಗೆ ಜೀವನ ಸಾಗಿಸುವುದು ಅತ್ಯಂತ ಸುರಕ್ಷಿತ ಹಾದಿ. ಆದರೆ 'ಕದ್ದು ತಿನ್ನುವುದರಲ್ಲಿ ಸಿಹಿ ಜಾಸ್ತಿ' ಎಂಬ ಗಾದೆಯಂತೇ ಅದರಲ್ಲಿ ಸಿಗುವ ರೋಮಾಂಚನ ಹಾಗೂ ಪುಳಕ, ಅಂತಹ ಸಾಮಾಜಿಕ/ಅನೈತಿಕ ಅಪರಾಧಗಳನ್ನು ಮಾಡುವಂತೆ ಮನಸ್ಸು ಕುಮ್ಮಕ್ಕು ಕೊಡುತ್ತದೆ. ಬಾಲ್ಯದಲ್ಲಿ ಹಣವನ್ನು ಕದ್ದು ತಿಂಡಿ ತಿನ್ನುವುದು, ಸುಳ್ಳು ಹೇಳುವುದು,  ಯೌವನದಲ್ಲಿ ಆಕರ್ಷಣೆಗೆ ಒಳಗಾಗಿ ಗಂಡು ಹೆಣ್ಣು ಪರಸ್ಪರ ಸೆಳೆತಕ್ಕೆ ಒಳಗಾಗಿ ಸಮಾಜ 'ನೀತಿಬಾಹಿರ' ಎಂದು ಕರೆಯುವ ಕೆಲಸಗಳನ್ನು ಮಾಡಲು ಹಾತೊರೆಯುವುದು, ಜೀವನ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ಹಣ ಸಂಪಾದಿಸಲು ಮೋಸ, ಅನ್ಯಾಯ, ವಂಚನೆಗಳನ್ನು ಮಾಡಲು ಮನ ಈಡಾಗುವುದು.... ಹೀಗೆ ಆಯಾ ವಯಸ್ಸಿಗನುಗುಣವಾಗಿ 'ತಪ್ಪು' ಅಥವಾ 'ಪಾಪ' ಎಂದು ಸಮಾಜ ಕರೆದಿರುವ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ. 
        ಇವುಗಳಲ್ಲಿ ಯಾವುದಾದರೂ ವಿಷಯಕ್ಕೆ ನಾವೇ ಬಲಿಯಾದಾಗ ಹಾಗೂ ಅದರಲ್ಲಿ ನಾವು ಏನನ್ನಾದರೂ ಕಳೆದುಕೊಂಡಾಗ ಒಂದಷ್ಟು ಪಶ್ಚಾತ್ತಾಪ ಪಡುವ ಸಾಧ್ಯತೆ ಇದೆ. ಅದಲ್ಲದೇ ಈ ವಿಷಯ ಬೇರೆಯವರಿಗೆ ತಿಳಿದರೆ ನನ್ನ ಬಗ್ಗೆ ಕೀಳಾಗಿ ಅಥವಾ ಲಘುವಾಗಿ ನೋಡಬಹುದು, ನನ್ನನ್ನು ಗೇಲಿ ಮಾಡಬಹುದು, ನನಗೆ ಈಗಿರುವ ಮರ್ಯಾದೆಗೆ ಭಂಗ ಬರಬಹುದು ಮುಂತಾದ ಭಾವನೆಗಳಿಂದ ಅದನ್ನು ಸಾಯುವವರೆಗೂ ಗುಟ್ಟಾಗಿಯೇ ಇಟ್ಟಿರಲು ಬಯಸುತ್ತಾರೆ.
        ಕೆಲವು ಇಕ್ಕಟ್ಟಿನ ಸಮಯದಲ್ಲಿ ತನ್ನಲ್ಲಿ ಗುಪ್ತವಾಗಿ ಇಟ್ಟುಕೊಂಡಿರುವ ಈ ಗುಟ್ಟನ್ನು ಹೇಳಿಬಿಡಲೇ? ಹೇಳದಿದ್ದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುವುದಲ್ಲವೇ? ಇಂತಹ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಬಳಿ ಬಂದವರಿಗೆ ನಾನು ಹೇಳುವ ಮಾತುಗಳೇನು ? 
......ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Monday, 25 November 2019

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. - ಜೀವನದ ಕಟುಸತ್ಯಗಳು - 2

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. 
        ಸಣ್ಣ ಪುಟ್ಟ ಸೋಲುಗಳನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಸೋಲಲ್ಲದೇ, ನಮ್ಮವರ ಸೋಲನ್ನು, ಬೇಸರವಾದರೂ ಸಹಿಸಿಕೊಳ್ಳುತ್ತೇವೆ. ಉದಾಹರಣೆಗೆ ನಾವು ಯಾವುದಾದರೂ ಕ್ರೀಡೆಗಳಲ್ಲಿ ಸೋತಾಗ 'ಛೆ! ಇನ್ನೊಂದು ಸ್ವಲ್ಪ ಚೆನ್ನಾಗಿ ಆಡಿದ್ರೆ ಗೆಲ್ತಿದ್ದೆ' ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಕ್ರಿಕೆಟ್ ಆಡುವಾಗ ನಮ್ಮ ತಂಡ ಇತರ ದೇಶದ ತಂಡಕ್ಕೆ ಸೋತಾಗ 'ನಮ್ಮವರೂ ಚೆನ್ನಾಗಿಯೇ ಆಡಿದ್ರು, ಅದೃಷ್ಟ ಕೈಕೊಡ್ತು' ಎಂದೆಲ್ಲಾ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇವೆ. ಅತಿರೇಕದ ಕೆಲವು ಉದಾಹರಣೆಗಳು ಕಾಣ ಸಿಗುವುದೂ ಉಂಟು. 
        ದೊಡ್ಡ ಮಟ್ಟದ ಸೋಲು,ಜೀವನದ ದೆಸೆಯನ್ನೇ ಬದಲಿಸುವಂತಹ ಸೋಲು, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ನೋವಿನ ಬೇಗುದಿಯನ್ನು ನೀಡುವಂತಹ ಸೋಲಿನಿಂದ ಹೊರಬರುವುದು ಹೇಗೆ? ಇಂತಹ ಸೋಲುಗಳ ಹಿಂದೆ ಅವಮಾನ, ಅನ್ಯಾಯ, ಮೋಸ, ತಪ್ಪಿತಸ್ಥ ಭಾವನೆ ಮುಂತಾದ ಕಾರಣಗಳಿರುತ್ತವೆ. ಅದರಲ್ಲೂ ತನ್ನದೇನೂ ತಪ್ಪಿಲ್ಲದಿರುವಾಗ ಈ ಸೋಲು ಗಾಢವಾದ ನೋವಿನ ತರಂಗಗಳನ್ನು ಎಬ್ಬಿಸುತ್ತವೆ. ಉದಾಹರಣೆಗೆ ಎಲ್ಲರ ಮುಂದೆ ಕೀಳಾಗಿ ಕಂಡು, ಎಲ್ಲರ ಗೇಲಿಗೆ ತುತ್ತಾಗುವಂತಹ ಅವಮಾನಗಳು. ನಂಬಿದ ಮಂದಿಯಿಂದಾಗಿ ಆರ್ಥಿಕ ನಷ್ಟವನ್ನು ಅನುಭವಿಸುವಂತಹ ಅನ್ಯಾಯ. ಮನಸ್ಸಿನೊಡನೆ ಆಟವಾಡಿ ಅಥವಾ ಪ್ರೀತಿಯ ನಾಟಕವಾಡಿ ಕೈ ಕೊಟ್ಟ ಮೋಸದ ಪ್ರಸಂಗಗಳು. ತಾವೇ ಯಾರಿಗಾದರೂ ಮೋಸ ಮಾಡಿ, ಅವರು ನರಳುವಂತೆ ಮಾಡಿದಾಗ ಮೂಡುವ ತಪ್ಪಿತಸ್ಥ ಭಾವನೆ. ಇಂತಹ ನೋವುಗಳು ಜೀವನದ ಕೊನೆಯ ಉಸಿರಿರುವವರೆಗೂ ಕಾಡುವುದುಂಟು. 

ನೀವು ಇಂತಹ ಯಾವುದಾದರೂ ನೋವಿನಿಂದಾಗಿ ಬಳಲುತ್ತಿದ್ದೀರಾ? 
       ನಿಲ್ಲಿ! ಒಂದು ಕ್ಷಣ ಯೋಚಿಸಿ. ಜೀವನ ಅಷ್ಟೇ ಅಲ್ಲ. ಅದು ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆ. ಮೋಸಗಾರರು ತುಂಬಿದ್ದರೂ, ಈ ಜಗತ್ತಿನಲ್ಲಿ 
ಒಳ್ಳೆಯವರೂ ಇದ್ದಾರೆ. ನಿಮ್ಮನ್ನು ಇಷ್ಟ ಪಡುವವರು, ನಿಮ್ಮ ಬಗ್ಗೆ ಕಾಳಜಿ ಇರುವವರು ನಿಮ್ಮ ಉನ್ನತಿಯನ್ನು ಬಯಸುವವರು ನಿಮಗೆ ಸಿಕ್ಕೇ ಸಿಗುತ್ತಾರೆ. ಆದ್ದರಿಂದ ಜಗತ್ತನ್ನು ಹಾಗೂ ಜೀವನವನ್ನು ದ್ವೇಷಿಸಬೇಡಿ. ಪ್ರಪಂಚ ವಿಶಾಲವಾಗಿದೆ. ನೀವು ಸೋಲುಂಡ ಎಲ್ಲ ಘಟನೆಗಳು ಕಳೆದು ಹೋದ ಕಾಲಘಟ್ಟದಲ್ಲಿರುತ್ತವೆ. ನಿಮ್ಮ ಇಂದಿನ ದುಃಸ್ಥಿತಿಗೆ ನೀವು ಕಳೆದುಹೋದ ಘಟನೆಗಳನ್ನು ಮೆಲುಕು ಹಾಕುತ್ತಿರುವುದೇ ಕಾರಣವಾಗಿರುತ್ತದೆ. ನಿಮ್ಮ ನಾಳೆ ಸಧೃಢವಾಗಿ ಉತ್ತಮವಾಗಿ ಇರಬೇಕೆಂದರೆ, ನೀವು ಈ ಯೋಚನೆಗಳಿಗೆ ಕಡಿವಾಣ ಹಾಕಲೇ ಬೇಕು. 

ಇನ್ನೆಷ್ಟು ಕೊರಗುವಿರಿ?
        ಸಾಕು ! ಸೋಲಿನಿಂದಾದ ನಷ್ಟವನ್ನು ಅನುಭವಿಸಿದ್ದು ಸಾಕು. ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆ ನಷ್ಟವನ್ನು ಹತ್ತು ಪಟ್ಟು, ನೂರು ಪಟ್ಟು ಮಾಡಿ ಕೊಳ್ಳುವುದು ಬೇಡ. ನೀವು ಸೋತ ಕ್ಷಣಗಳೇ ನಿಮ್ಮ ಸೋಲಲ್ಲ. ನೀವು ಅದನ್ನು ಮೆಲುಕು ಹಾಕುತ್ತಿರುವುದೇ ನಿಜವಾದ ಸೋಲು. ತಪ್ಪು ಮಾಡಿದ್ದು ಒಂದು ಸೋಲಾದರೆ, ತಪ್ಪಿತಸ್ಥ ಭಾವನೆಯಲ್ಲಿ ನರಳುವುದು ದೊಡ್ಡ ಸೋಲು. ಮನಸ್ಸನ್ನು ಕೆಡಿಸುವ ಇಂತಹ ನೋವಿನ ಹತಾಶ ಭಾವನೆಗಳು ನಿಮ್ಮನ್ನು ಮನೋವ್ಯಾಧಿಗೆ ತುತ್ತಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲೇ ಇದೆ. ನಿಮ್ಮ ಮನಸ್ಸು ಸರ್ವಶಕ್ತ. ಮನೆಯಲ್ಲಿ ತುಂಬಿರುವ ಕಸವನ್ನು ಗುಡಿಸಿ ಹೇಗೆ ಹೊರಗೆ ಹಾಕುವಿರೋ ಹಾಗೆಯೇ ಮನಸ್ಸಿನಲ್ಲಿ ತುಂಬಿರುವ ಆ ಕಸವನ್ನು ಹೊರಗೆ ಹಾಕಿ. 
         ನಿಮ್ಮ ಮನಸ್ಸಿನೊಡನೆ ಮಾತನಾಡಿ. 'ಓ ನನ್ನ ಸರ್ವಶಕ್ತ ಮನಸ್ಸೇ, ಈ ಕಸವು ನನಗೆ ಬೇಡ. ಇದರಿಂದ ನನಗೆ ವಿಮುಕ್ತಿ ಕೊಡು. ಹೊಸ ಹೊಸ ಉತ್ಸಾಹಭರಿತ, ಉಲ್ಲಾಸಭರಿತ ಯೋಚನಾಲಹರಿಯನ್ನು ನನ್ನಲ್ಲಿ ತುಂಬು' ಹೀಗೆ ಪದೇ ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತಲಿರಿ. ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಇದೇ ಮಾತನ್ನು ನೀವು ದೇವರ ಬಳಿಯೂ ಕೇಳಿಕೊಳ್ಳಬಹುದು. ನಂತರದ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಆಗುವ ಮಹತ್ತರ ಬದಲಾವಣೆಗಳಿಗೆ ಎದುರು ನೋಡುತ್ತಿರಿ ಹಾಗೂ ಚಂದದ ಜೀವನವನ್ನು ಅನುಭವಿಸಿ.  

ಸರ್ವೇಜನಾಃ ಸುಖಿನೋ ಭವಂತು. 





Saturday, 23 November 2019

ಜೀವನದಲ್ಲಿ ಸೋಲುವ ಕ್ಷಣಗಳು - ಜೀವನದ ಕಟುಸತ್ಯಗಳು - 1


ಜೀವನದಲ್ಲಿ ಸೋಲುವ ಕ್ಷಣಗಳು  
        ಕೆಲವು ಸತ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಮ್ಮ ನಿಯಮಿತ ಅರಿವು, ಭರವಸೆಯ ಮೇಲೆ ನಿಂತಿರುವ ಬದುಕು ಹಾಗೂ ನಮ್ಮ ಮನಸ್ಸಿನ ಸ್ವ-ಸಮರ್ಥಿಸುವ ಗುಣದಿಂದಾಗಿ  ಕೆಲವು ಸತ್ಯಗಳನ್ನು ಅದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಜೀವನದಲ್ಲಿ ಸೋತು, ನನ್ನ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡಾಗ ನಾನು ಗ್ರಹಿಸಿದ ಅನಿಸಿಕೆಗಳನ್ನು ಈ ಮೊದಲನೆಯ ಕಂತಿನಲ್ಲಿ ಹಂಚಿಕೊಳ್ಳುತ್ತೇನೆ. 
        ಜೀವನದುದ್ದಕ್ಕೂ ಬರೀ ಗೆಲುವು ಅಥವಾ ಯಶಸ್ಸನ್ನೇ ಕಾಣಲಾಗುವುದಿಲ್ಲ. ಸೋಲನ್ನು ಕೂಡಾ ಅನುಭವಿಸಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. 'ಬೇಕು' ಎಂದುಕೊಳ್ಳುವ ಗೆಲುವು ಸಿಗದಿದ್ದರೂ, 'ಬೇಡ' ಅನ್ನುವ ಸೋಲು ಮಾತ್ರ ಎಲ್ಲರಿಗೂ ಸಿಗುತ್ತದೆ. ಸೋಲಿನ ಮಟ್ಟ ಕಿರಿದಾಗಿರಬಹುದು ಅಥವಾ ಹಿರಿದಾಗಿರಬಹುದು, ಆದರೆ ಸೋಲನ್ನು ಒಪ್ಪಿಕೊಳ್ಳಬೇಕಾಗುವುದಂತೂ ಸತ್ಯ. ಈಗ ಸೋಲಿನ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಮಾಡೋಣ. 
        'ಸೋಲು' ನಮಗೆ ಹತಾಶೆ,ನಿರಾಶೆ, ನೋವು ಇತ್ಯಾದಿ ಮಾನಸಿಕ ತುಮುಲಗಳಿಗೆ ಹಾದಿ ಮಾಡಿಕೊಡುತ್ತದೆ. ಗೆಲುವು ತನ್ನದೆಂದು ಬೀಗುವ ಮನುಷ್ಯ ಸೋಲಿಗೆ ಇತರರನ್ನು ದೂಷಿಸುತ್ತಾನೆ. 

ಸೋಲಿಗೆ ಕಾರಣಗಳೇನು ?  
        ಗೆಲುವಿಗೆ ಒಮ್ಮೊಮ್ಮೆ ಅದೃಷ್ಟ ಕಾರಣವಾದರೆ, ಸೋಲಿಗೆ ದುರಾದೃಷ್ಟ ಕಾರಣವಾಗಿರುತ್ತದೆ. ಅಂದ ಮಾತ್ರಕ್ಕೆ ನಮ್ಮೆಲ್ಲ ಸೋಲುಗಳನ್ನು ದುರಾದೃಷ್ಟದ ಮೇಲೆ ಹೊರಿಸಲಾಗುವುದಿಲ್ಲ. ಬಹುತೇಕ ನಮ್ಮ ಸೋಲಿಗೆ  ನಾವೇ ಕಾರಣಕರ್ತರಾಗಿರುತ್ತೇವೆ. ನಾವು ಮಾಡಿರಬಹುದಾದ ತಪ್ಪುಗಳು, ನಮ್ಮ ಆಲಸ್ಯತನ, ನಮ್ಮ ತಪ್ಪು ಗ್ರಹಿಕೆ, ನಮ್ಮಿಂದಾದ ಕಡೆಗಣನೆ.. ಹೀಗೆ ಹತ್ತು ಹಲವು ಕಾರಣಗಳಿರಬಹುದು. ಬಹುತೇಕ ನಾವೇ ಮಾಡಿರಬಹುದಾದ ತಪ್ಪುಗಳನ್ನು ನಾವು  ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಪ್ರಕಾರ ನಾವು ತಪ್ಪು ಮಾಡದವರು, ಬುದ್ಧಿವಂತರು, ನಿರಪರಾಧಿಗಳು,ವಿವೇಕಿಗಳು... ಎಂದೆಲ್ಲಾ ಅಂದುಕೊಂಡಿರುತ್ತೇವೆ. ಬೇರೆಯವರ ಮೇಲೆ ತಪ್ಪು ಹೊರಿಸುವುದರಲ್ಲಿ ನಾವು ನಿಷ್ಣಾತರಾಗಿರುತ್ತೇವೆ. ಏಕೆಂದರೆ ನಮ್ಮ ಮನಸ್ಸಿನ ಸ್ವ-ಸಮರ್ಥನಾಗುಣ ನಮ್ಮನ್ನು ಎಲ್ಲಾ ವಿಷಯದಲ್ಲಿ ರಕ್ಷಿಸುತ್ತಿರುತ್ತದೆ. 
        ನಿಧಾನವಾಗಿ ತೆರೆದ ಮನಸ್ಸಿನಿಂದ ಯೋಚಿಸಿದಾಗ ನಾವು ಎಲ್ಲಿ ಎಡವಿದ್ದೇವೆ ಎಂದು ಮನಗಾಣುತ್ತೇವೆ. ನಮ್ಮದೇ ಆದ ತಪ್ಪು ನಿರ್ಧಾರಗಳಿಂದಾಗಿ ಜೀವನವನ್ನು ಸಂಕೀರ್ಣಗೊಳಿಸಿಕೊಂಡಿರುತ್ತೇವೆ. ದುರಾದೃಷ್ಟದಿಂದಾಗುವ ಸೋಲಿಗೆ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಸೋಲನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಎಲ್ಲಾ ಸೋಲುಗಳನ್ನು ಚೆನ್ನಾಗಿ ಅವಲೋಕಿಸಿ, ವಿವೇಚಿಸಿದಾಗ ನಮ್ಮ ತಪ್ಪುಗಳು, ಅವಿವೇಕ ಮುಂತಾದವು ಎದ್ದು ಕಾಣುತ್ತವೆ. 

ಪೊಳ್ಳು ಸಮಾಧಾನಗಳು 
        'ಬೆಟರ್ ಲಕ್ ನೆಕ್ಸ್ಟ್ ಟೈಮ್' - ಯಾರಾದರೂ ಸೋತಾಗ ಬಹಳಷ್ಟು ಜನ ಹೇಳುವ ಮಾತಿದು. ಸೋತು ಸುಣ್ಣವಾದ ಮನುಷ್ಯ ಇದನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನುವುದೇ ಪ್ರಶ್ನೆ. ಇತರರು ಪದೇ ಪದೇ ಆಡುವ ಈ ಮಾತುಗಳು ಅವನ ಸೋಲನ್ನು ಎತ್ತಿ ತೋರಿಸುತ್ತಲೇ ಇರುತ್ತವೆ. ಆತ ಜೀವನದಲ್ಲಿ ಸೋತಾಗಲೆಲ್ಲಾ ಈ ಮಾತುಗಳನ್ನು ಕೇಳುತ್ತಿರುತ್ತಾನೆ. ಆ 'ಬೆಟರ್ ಲಕ್' ಇರುವ 'ನೆಕ್ಸ್ಟ್ ಟೈಮ್' ಬಾರದೇ ಇರಲೂಬಹುದು. 
'ಸೋಲೇ ಗೆಲುವಿನ ಮೆಟ್ಟಿಲು' - ಅಪರೂಪದ ಕೆಲವು ಉದಾಹರಣೆಗಳನ್ನು ಬಿಟ್ಟರೆ ಈ ಮಾತುಗಳನ್ನು ಕೇಳಿ ಗೆದ್ದವರಿಲ್ಲ. ಸೋತು ಮೆಟ್ಟಿಲಾಗಿ ಎಲ್ಲರಿಂದಲೂ ತುಳಿಸಿಕೊಳ್ಳುತ್ತಲೇ ಇರುತ್ತಾರೆ. 
'ಸೋಲನ್ನು ಪಾಠವೆಂದು ತಿಳಿದುಕೋ' - ಈ ಮಾತನ್ನು ಸಾರಿ ಸಾರಿ ಹೇಳಿದರೂ, ಸೋತವರು ಮತ್ತದೇ ತಪ್ಪುಗಳನ್ನು ಮಾಡಿ ಸೋಲುತ್ತಲೇ ಇರುತ್ತಾರೆ. ಈ ರೀತಿಯ ಎಲ್ಲ ಮಾತುಗಳು ಪರೋಕ್ಷವಾಗಿ 'ನೀನು ಸೋತಿರುವೆ' ಎಂದು ಸಾರಿ ಹೇಳುತ್ತಿರುತ್ತವೆ.
        ಕೆಲವೊಮ್ಮೆ ಜೀವನದಲ್ಲಿ ಸೋಲನ್ನು ದೊಡ್ಡ ರೀತಿಯಲ್ಲಿ ಅನುಭವಿಸಬೇಕಾಗಬಹುದು. ಅದು ಜೀವನವನ್ನು ಅಲ್ಲಾಡಿಸಬಹುದು.ಅಂತಹವರಿಗ
ಮೇಲಿನ ಮಾತುಗಳೆಲ್ಲಾ ಪೊಳ್ಳು ಮಾತುಗಳಂತೆಯೇ ಕಾಣುತ್ತವೆ. ಏಕೆಂದರೆ ಆತ ಅನುಭವಿಸಿದ ಸೋಲಿನ ಕಾರಣಕರ್ತರು - ಆತ ನಂಬಿದ್ದ ಗೆಳೆಯ, ಸಂಬಂಧಿಕ,
ಪ್ರೇಮಿ ಅಥವಾ ಹಿತೈಷಿಗಳೇ ಆಗಿರುತ್ತಾರೆ. ನಂಬಿಕೆ ದ್ರೋಹವಾದಾಗ ಆಗುವ ಆಘಾತ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. 
        ಹೇಗಾದರೂ, ಎಂತಾದರೂ ಇಂತಹ ತೀವ್ರವಾಗಿ ಬಾಧಿಸುವ ಸೋಲಿನಿಂದ ಹೊರಬಂದವರು ಜಗತ್ತಿನಲ್ಲಿ ಅತ್ಯುನ್ನತ ಮಟ್ಟ ತಲುಪಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸೋಲಿನಿಂದ ಹೊರಬರುವುದು ಹೇಗೆ? 
...ಮುಂದಿನ ಕಂತಿನಲ್ಲಿ