'ತ್ರಾಟಕ'ದ ಅಭ್ಯಾಸ ನನಗೆ ಅಷ್ಟಾಂಗಯೋಗದ ಬಹುಮುಖ್ಯ ಅಂಗವಾದ 'ಧ್ಯಾನ'ಕ್ಕೆ ಅತ್ಯಂತ ಸಹಕಾರಿಯಾಯಿತು. ಧ್ಯಾನ ಮಾಡಲು ಹಲವಾರು ವಿಧಾನಗಳಿವೆ. ಸಾಕಾರ ಹಾಗೂ ನಿರಾಕಾರ ಎರಡೂ ವಿಧಾನಗಳಲ್ಲಿ ನನಗೆ ತರಬೇತಿ ನೀಡಲಾಯಿತು.
ಧ್ಯಾನದ ಆರಂಭಿಕ ಶಿಕ್ಷಣದಲ್ಲಿ, ಮನಸ್ಸಲ್ಲಿ ಯಾವುದೇ ಭಾವನೆಗಳು, ಆಲೋಚನೆಗಳು ಬಾರದಂತೇ ಕೆಲಕಾಲ ಕುಳಿತುಕೊಳ್ಳಲು ಸಾಧ್ಯವೇ ಎಂದು ಪ್ರಯತ್ನ ಪಡುವಂತೆ ನನಗೆ ಸೂಚಿಸಲಾಗಿತ್ತು. 'ಅಷ್ಟೇ ತಾನೇ' ಎಂದುಕೊಂಡು ಕುಳಿತ ನನಗೆ 'ಅದೆಷ್ಟು ಕಷ್ಟ' ಎಂದು ಅರಿವಾಯಿತು. 'ನನಗೀಗ ಯಾವ ಆಲೋಚನೆಯೂ ಬೇಡ' ಎಂದು ಕುಳಿತ ಮರುಕ್ಷಣವೇ ಆಲೋಚನೆಗಳ ಮಹಾಪೂರವೇ ಹರಿದು ಬಂತು. ಸುಮ್ಮನೆ ಇದ್ದಾಗಲೂ ಬಾರದಿರುವ, ಸಂಬಂಧವೇ ಇಲ್ಲದಿರುವ, ಅನಗತ್ಯ ಭಾವನೆಗಳೆಲ್ಲಾ ತಲೆಯಲ್ಲಿ ತುಂಬತೊಡಗಿದವು. ಮಸಾಲೆದೋಸೆಯಿಂದ ಚಂದ್ರಲೋಕದವರೆಗೆ ಏನೇನೋ ಯೋಚನೆಗಳು. ಅದೆಲ್ಲಿ ಹುದುಗಿ ಕುಳಿತಿದ್ದವೋ ಅನ್ನಿಸತೊಡಗಿತು.
ಇದೇಕೋ ಅಸಾಧ್ಯದ ವಿಷಯ ಎಂದುಕೊಂಡು ಗುರುಗಳಿಗೆ ಹೇಳಿದೆ 'ಬೇಡ' ಎಂದುಕೊಂಡು ಕುಳಿತಾಗ, ಎಂದಿಗಿಂತ ಬಲವಾಗಿ ಹಾಗೂ ಅಸಹ್ಯವೆನಿಸುವಂತಹ ವಿಷಯಗಳೂ ಕೂಡಾ ಮನಸ್ಸಿನಲ್ಲಿ ತುಂಬಿ ಬರುತ್ತಿದೆ, ಬಹುಶಃ ನನ್ನಿಂದ ಧ್ಯಾನ ಮಾಡಲು ಸಾಧ್ಯವಾಗದು ಅನ್ನಿಸುತ್ತಿದೆ'.
'ಏಕೆ ಸಾಧ್ಯವಾಗದು? ಎಲ್ಲರ ಆರಂಭವು ಹೀಗೆಯೇ ಇರುತ್ತದೆ. ಯಾವುದೇ ಯೋಚನೆ ಬರಲಿ, ಇಲ್ಲ.. ನನಗಿದು ಬೇಡ ಎಂದು ಬದಿಗೆ ತಳ್ಳುತ್ತಾ ಇದ್ದರೆ ನಿಧಾನವಾಗಿ ಯೋಚನೆಗಳನ್ನು ಒಂದು ನಿಯಂತ್ರಣಕ್ಕೆ ತರಬಹುದು. ಮನುಷ್ಯನ ಮನಸ್ಸಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ' ಎಂದರು.
'ಆದರೆ ಈ ಅಸಹ್ಯ ಹಾಗೂ ಅನವಶ್ಯಕ ವಿಷಯಗಳು ಬಂದಾಗ ಕಿರಿಕಿರಿಯಾಗುತ್ತದೆ' ನನ್ನ ಅಳಲು ತೋಡಿಕೊಂಡೆ.
'ಬರಲಿ ಏನಂತೆ ? ಬಗ್ಗಡಗಳು ಮೇಲೆ ಬಂದು ಮನಸ್ಸು ನಿರ್ಮಲವಾಗಲು ಸಹಾಯ ಮಾಡುತ್ತಿದೆ ಎಂದು ತಿಳಿದುಕೊಂಡರೆ ಆಯಿತು ಅಷ್ಟೇ, ಹಾಲಾಹಲ ಬಂದ ಮೇಲೆಯೇ ಅಮೃತ ಬಂದಿದ್ದು. 'Never give up' ಎಂದು ಉತ್ತೇಜನ ನೀಡಿದರು.
ಮತ್ತೆ ನವೋತ್ಸಾಹದಿಂದ 'ಧ್ಯಾನ' ಮುಂದುವರೆಸಿದೆ. ಯೋಚನೆಗಳನ್ನು 'ನನಗಿದು ಬೇಡ' ಎಂದು ಬದಿಗೆ ಸರಿಸಿದರೂ ಮತ್ತೆ ಮತ್ತೆ ಕಾಡುತ್ತಿದ್ದಾಗ ನನ್ನದೇ ಆದ ಒಂದು ಉಪಾಯ ಕಂಡು ಹಿಡಿದೆ. ಮನಸ್ಸಿನಲ್ಲಿಯೇ ಒಂದು ಕಸದ ಬುಟ್ಟಿಯನ್ನು ಕಲ್ಪಿಸಿಕೊಂಡು ಯಾವ ಆಲೋಚನೆ ಬಂದರೂ ಆ ಕಸದ ಬುಟ್ಟಿಯಲ್ಲಿ ಹಾಕುತ್ತಾ ಬಂದೆ. ಈ ವಿಧಾನ ಬಹಳಷ್ಟು ಸಹಕಾರಿಯಾಯಿತು.
ಒಂದಷ್ಟು ಕಾಲ ಕಳೆದ ಮೇಲೆ ಗುರುಗಳು ಒಮ್ಮೆ ಮಾತಿಗಿಳಿದರು. 'ಮನಸ್ಸಿನ ಸ್ವಭಾವವೇ ಯೋಚನಾಲಹರಿಯಲ್ಲಿ ಮುಳುಗುವುದು. ಅದು ಇಷ್ಟು ಹೊತ್ತಿಗಾಗಲೇ ನಿಮ್ಮ ಮನಸ್ಸಿಗೆ ಅರ್ಥವಾಗಿರಬಹುದು. ಅದರಲ್ಲಿ ತಪ್ಪೇನೂ ಇಲ್ಲ, ಏಕೆಂದರೆ ಅದು ಮನಸ್ಸಿನ ಸಹಜ ಕ್ರಿಯೆ. ಇಷ್ಟು ಅರ್ಥ ಆದರೆ ಸಾಕು. ಇಲ್ಲಿಂದ ಮುಂದೆ ಸಾಕಾರ ಧ್ಯಾನವನ್ನು ಅಭ್ಯಾಸ ಮಾಡಿ. ನಂತರ ನಿರಾಕಾರ ಧ್ಯಾನದತ್ತ ಗಮನ ಹರಿಸಬಹುದು' ಎಂದು ಹೇಳಿದರು.
ಇಲ್ಲಿಂದ ಮುಂದೆ ನನಗೆ ಓಂಕಾರದ ಚಿತ್ರವನ್ನು ನೋಡುತ್ತಾ ಧ್ಯಾನ ಮಾಡುವುದು ಹೇಗೆ ಎಂದು ಹೇಳಿಕೊಟ್ಟರು. ಓಂಕಾರವನ್ನು ಬರೆಯುವಾಗ ಹೇಗೆ ಕೈ ಓಡುತ್ತದೋ ಅದೇ ರೀತಿ ಓಂಕಾರದ ಮೇಲೆ ಮನಸ್ಸನ್ನು ಓಡಿಸುವುದು ಅಂದರೆ ಮನಸ್ಸಿನಿಂದ ಓಂಕಾರವನ್ನು ಬರೆಯುವುದು. ಇದೇ ರೀತಿ ನಾನಾ ವಿಧದ ಯಂತ್ರಗಳನ್ನು ನೋಡುತ್ತಾ ಧ್ಯಾನ ಮಾಡುವುದು ಹೇಗೆ ಎಂದು ವಿವರಿಸಿ ಹೇಳಿದರು.
ಇದಾದ ಮೇಲೆ ಸಾಕಾರ ದೇವರ ಚಿತ್ರವನ್ನು ನೋಡುತ್ತಾ ನಂತರ ಕಣ್ಣು ಮುಚ್ಚಿ ಆಯಾ ದೇವರನ್ನು ಮನಸ್ಸಿನೊಳಗೆ ಹೇಗೆ ಸಾಕ್ಷಾತ್ಕರಿಸುವುದು ಎಂದು ಹೇಳಿಕೊಟ್ಟರು. ಇದಾದ ನಂತರ 'ಶಾಂಭವೀಮುದ್ರೆ'ಯ ಮೂಲಕ ಧ್ಯಾನಿಸುತ್ತಾ ಸಾಕಾರವನ್ನು ನಿರಾಕಾರವಾಗಿ ಅನುಷ್ಠಾನ ಮಾಡುವ ಬಗ್ಗೆ ತರಬೇತಿ ಪಡೆದೆ.
ಮನಸ್ಸನ್ನು ನನಗೆ ಬೇಕಾದಂತೆ ಪಳಗಿಸಿದ ಮೇಲೆ ಆರಂಭದ ದಿನಗಳಲ್ಲಿ ಕಷ್ಟಪಟ್ಟ ನೆನಪು ಒಂದು ರೀತಿಯ ಸಂತಸ ನೀಡುತ್ತಿತ್ತು. 'ಕಲಿಯುವವರೆಗೂ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿವಿದ್ಯೆ' ಎನ್ನುವ ಗಾದೆ ನೆನಪಾಗುತ್ತಿತ್ತು. ಮುಂದೆ ಗುರುರಾಜ್ ತಂತ್ರಿ ಹಾಗೂ ನಾನು ಜತೆಗೂಡಿ ಕೆಲವು ಯೋಗಶಿಬಿರಗಳನ್ನು ಆಯೋಜಿಸಿದ್ದೆವು. ಅಲ್ಲಿ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ಹಾಗೂ ನನ್ನ ಅನುಭವವನ್ನು ತಳಹದಿಯಾಗಿಟ್ಟುಕೊಂಡು 'ಧ್ಯಾನ' ಎಂಬ ಒಂದು ಕಿರುಪುಸ್ತಕವನ್ನು 1989ರಲ್ಲಿ ಪ್ರಕಟಿಸಿದೆ.
'ಧ್ಯಾನ'ದಲ್ಲಿ ನನಗಾದ ಅನುಭವಗಳನ್ನು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.
No comments:
Post a Comment