Friday, 5 June 2015

Devare nannannu kaapadu.

ದೇವರೇ ನನ್ನನ್ನು ಕಾಪಾಡು..
      ದೇವರು ನಮ್ಮನ್ನು ಕಾಪಾಡಬಲ್ಲನೇ ? ಪ್ರತಿದಿನ ಕೊಟ್ಯಾಂತರ ಜನ ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ, ನಮಗೆ ಒಳ್ಳೆಯದನ್ನು ಮಾಡಪ್ಪಾ ಎನ್ನುತ್ತಾರೆ. ಈ ಎಲ್ಲರ ಪ್ರಾರ್ಥನೆಗೆ ದೇವರು 'ಓ'ಗೊಡುತ್ತಾನೆಯೇ?
      ಈ ದೇವರು ಯಾರು? ಎಲ್ಲ ಧರ್ಮಗ್ರಂಥಗಳು ದೇವರನ್ನು ಸರ್ವಶಕ್ತ ಎಂದು ಒಪ್ಪುತ್ತವೆ. ಈ ಸೃಷ್ಟಿಯ ಸೃಷ್ಟಿಕರ್ತ  ಅವನೇ ಎನ್ನುವುದನ್ನೂ ಒಪ್ಪುತ್ತವೆ. ಅಂದ ಮೇಲೆ ಈ ಜಗತ್ತಿನ ಒಡೆಯ ದೇವರು, ನಾವೆಲ್ಲರೂ ಅವನ ಮಕ್ಕಳು .
      ದೇವರನ್ನು ನಂಬದ ನಾಸ್ತಿಕರು ಕೂಡ ತಮ್ಮ ಅಂಕೆಯಲ್ಲಿಲ್ಲದ ನಮ್ಮನ್ನು ಮೀರಿದ ಆಘಾದವಾದ ಶಕ್ತಿ ಇರುವುದನ್ನು ನಂಬುತ್ತಾರೆ. ಪ್ರಕೃತಿಶಕ್ತಿಯ ಅರಿವಂತೂ ಅವರಿಗೆ ಇದ್ದೇ ಇರುತ್ತದೆ. ನಮ್ಮಲ್ಲಿ ಯಾವೊದೋ ಒಂದು ಶಕ್ತಿ ಇದೆ, ಅದು ಇರುವವರೆಗೂ ನಾವು ಜೀವಂತವಾಗಿ ಇರುತ್ತೇವೆ  ಎನ್ನುವುದನ್ನೂ ಒಪ್ಪುತ್ತಾರೆ.
       ಆಸ್ಥಿಕರು ನಂಬುವ 'ದೇವರ' ಬಗ್ಗೆ ಒಂದಷ್ಟು ಚಿಂತಿಸೋಣ. ಒಂದು ಕ್ಷಣ ನಾನೇ ದೇವರು ಅಂದುಕೊಂಡರೆ... ನನ್ನ ಬಳಿ ಬೇಡುವ ಕೋಟಿ ಕೋಟಿ ಮಂದಿ ನನ್ನ ಕಣ್ಣ ಮುಂದೆ ಬರುತ್ತಾರೆ.
       ಅವರಲ್ಲಿ 'ಸಮಾಜ' ಗುರುತಿಸಿದ ಕಳ್ಳರು, ದರೋಡೆಕೋರರು, ಕೊಡುಗೈ ದಾನಿಗಳು, ನ್ಯಾಯವಾದಿಗಳು ಇತರರಿಗೆ ಸಹಾಯ ಮಾಡುವವರು, ಭಕ್ತರು, ಸಂತರು, ಕೂಲಿ ಮಾಡುವವರು, ಭಿಕ್ಷೆ ಬೇಡುವವರು...ಹೀಗೆ ಹಲವು ಮಂದಿಯ ದೊಡ್ಡ ಗುಂಪೇ ಎದುರಿಗೆ ನಿಂತಿದೆ.. ಎಲ್ಲರೂ ನನ್ನ ಮಕ್ಕಳೇ !  
       ಒಬ್ಬ ಭಕ್ತ ಆದರೆ ವ್ರತ್ತಿಯಲ್ಲಿ ಕಳ್ಳ, ನನ್ನ ಬಳಿ ಬೇಡುತ್ತಿದ್ದಾನೆ.
       'ಮರಣಶಯ್ಯೆಯಲ್ಲಿರುವ ನನ್ನ ತಾಯಿಯನ್ನು ಉಳಿಸಲು ನನ್ನ ಬಳಿ ಹಣವಿಲ್ಲ..ನನಗೆ ಶಿಕ್ಷಣ ಕೊಡಲು ಅವಳ ಬಳಿ ಹಣವಿರಲಿಲ್ಲ..ನನಗೆ ಯಾರೂ ಕೆಲಸ ಕೊಡಲಿಲ್ಲ..ಕಳ್ಳನಾಗುವುದು ನನಗೆ ಅನಿವಾರ್ಯವಾಗಿತ್ತು..ಹೊಟ್ಟೆಗೆ ಬಟ್ಟೆ ಕಟ್ಟಿ ನನ್ನನ್ನು ಕಾಪಾಡಿದ್ದಾಳೆ..ಈಗ ಆಕೆಯನ್ನು ಕಾಪಾಡುವುದು ನನ್ನ ಕರ್ತವ್ಯ..ನೀನು ಕರುಣಾಮಯಿ.. ನಿನಗೆ ನನ್ನ ನೋವು ಅರ್ಥವಾಗುತ್ತದೆ..ಆದ್ದರಿಂದ ನಾನು ಕಳ್ಳತನ ಮಾಡುವಾಗ ಯಾರ ಕೈಗೂ ಸಿಕ್ಕಿಹಾಕಿಕೊಳ್ಳದಂತೆ ನನ್ನನ್ನು ಕಾಪಾಡು.' 
        ಅವನನ್ನು ಹಿಡಿಯಲು ಕಾದಿರುವ ನನ್ನ ಇನ್ನೊಬ್ಬ ಭಕ್ತ, ನಿಷ್ಠಾವಂತ ಪೋಲಿಸ್ ಅಧಿಕಾರಿ ನನ್ನ ಬಳಿ ಬೇಡುತ್ತಾನೆ 'ಈ ದಿನ ಹೇಗಾದರೂ ಅವನನ್ನು ಬಂಧಿಸುವಲ್ಲಿ ನನಗೆ ಯಶಸ್ಸು ಸಿಗಲಿ ದೇವರೇ..ಆತ ಸಮಾಜಘಾತುಕ, ದ್ರೋಹಿ, ಕಳ್ಳ.. ಆತನನ್ನು ಬಂಧಿಸಿ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಲು ನನಗೆ ನೆರವಾಗು ತಂದೇ.'    
       ಈಗ ನಾನು ಯಾರ ಬೇಡಿಕೆ ಈಡೇರಿಸಲಿ ? ಕಳ್ಳನು ಕಳ್ಳನಾಗಲು ಈ ಸಮಾಜವೇ ಕಾರಣವಾಗಿರುತ್ತದೆ. ಪೋಲಿಸ್, ಪೋಲಿಸ್ ಅಧಿಕಾರಿಯಾಗಲೂ ಈ ಸಮಾಜವೇ ಕಾರಣವಾಗಿರುತ್ತದೆ.
       ಇನ್ನೊಂದೆಡೆ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಇಬ್ಬರಿಗೂ ಸಮಸ್ಯೆಗಳೇ.. ಇಬ್ಬರೂ ನನ್ನ ಮಕ್ಕಳೇ ! ಎಲ್ಲರಿಗೂ ಅವರವರ ಬೇಡಿಕೆಗೆ ಅವರದ್ದೇ ಆದ ಬಲಿಷ್ಠ ಕಾರಣಗಳಿವೆ. 
       ದೇವನಾದ ನಾನು ಈ ಪಂಚಾಯ್ತಿಗೆ ಕುಳಿತರೆ ಅದು ಸಾದ್ಯವೇ? ಇದು ಒಂದೆಡೆ ಇರಲಿ.
       ಈಗ ವೇದಾಂತ ದೇವರ ಬಗ್ಗೆ ಏನು ಹೇಳುತ್ತದೆ ನೋಡೋಣ.
       ದೇವರನ್ನು 'ತತ್ '  ಅಂದರೆ 'ಅದು' ಎನ್ನುತ್ತದೆ ವೇದಾಂತ. ಅದು ಹೆಣ್ಣೂ ಅಲ್ಲ ಗಂಡೂ ಅಲ್ಲ. ಅದ್ವೈತ ಸಿದ್ದಾಂತದ ಪ್ರಕಾರ ದೇವರು ಆದ್ಯಂತ ರಹಿತ, ನಿರಾಕಾರ, ನಿರ್ಗುಣ, ನಿರ್ವಿಕಲ್ಪ. ಅಂದ ಮೇಲೆ ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ, ಅದು ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ. ಅದಕ್ಕೆ ಯಾವ ರೂಪ ಭಾವನೆಗಳೂ ಇಲ್ಲ.
       ಈ ಶಕ್ತಿಗೆ ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ,ತಾರತಮ್ಯ ಆ ಶಕ್ತಿಗೆ ಗೊತ್ತಿಲ್ಲ. ಎಲ್ಲರ ಮೇಲೂ ಅದು ಸಮಾನ ಪ್ರಭಾವ ಬೀರುತ್ತದೆ. 
       ಸುನಾಮಿ ಬಂದಾಗ ಆಸ್ತಿಕರು, ನಾಸ್ತಿಕರು, ಸಂತರು, ಕಳ್ಳರು..ಹೀಗೆ ಎಲ್ಲರೂ ಕೊಚ್ಚಿಕೊಂಡು ಹೋಗುತ್ತಾರೆ. 
      ಒಳ್ಳೆಯದು, ಕೆಟ್ಟದ್ದು ಇವೆಲ್ಲ  ನಾವು ನಾಗರೀಕ ಸಮಾಜದ ಕಲ್ಪನೆಯಲ್ಲಿ ಮಾಡಿಕೊಂಡ ಗುಣಗಳು. ನಮಗೆ ಹಿತ ನೀಡುವುದು ಒಳ್ಳೆಯದು, ನಮಗೆ ಕಿರಿಕಿರಿ ಉಂಟುಮಾಡುವುದು ಕೆಟ್ಟದ್ದು. Good and Bad are relative terms.
       ದೇವರು ಒಬ್ಬನಿಗೆ ಲಾಭ ಮಾಡಿ ಕೊಟ್ಟರೆ ಅದು ಇನ್ನೊಬ್ಬನಿಗೆ ನಷ್ಟವಾಗಬಹುದು. ನಾವು ನಮಗಾಗಿ ಮಾಡಿಕೊಂಡ ಒಳ್ಳೆಯದು ಕೆಟ್ಟದ್ದು 'ದೇವರ' ದೃಷ್ಟಿಯಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದು ಅಲ್ಲ. ಎಲ್ಲರ ಬೇಡಿಕೆಗೂ ದೇವರು ನಿರ್ಲಿಪ್ತನಾಗೇ ಇರುತ್ತಾನೆ. ಯಾರಿಗೂ ಸಹಾಯ ಮಾಡಲಾರ .  
       ಹಾಗಾದರೆ ದೇವರನ್ನು ಪ್ರಾರ್ಥಿಸಿ ನಮಗೆ ಒಳ್ಳೆಯದಾಗಿದೆಯಲ್ಲ? ಪವಾಡ ಸದೃಶ ಘಟನೆಗಳು ನಡೆದಿವೆಯಲ್ಲ? ನಂಬಿದ ದೇವರು ಕಷ್ಟಕಾಲದಲ್ಲಿ ನನ್ನ ಕೈ ಬಿಡಲಿಲ್ಲವಲ್ಲ? ಅದು ಹೇಗೆ?
       ಇದಕ್ಕೆ ಉತ್ತರ ಮುಂದಿನ ಬರಹದಲ್ಲಿ ನೀಡುತ್ತೇನೆ.

No comments:

Post a Comment