Thursday, 28 May 2015

ಜೀವ ಯಾವ ಕುಲ ?


                                     ಜೀವ ಯಾವ ಕುಲ ?
1968 - ನಾನಾಗ ಎರಡನೆಯ ಕ್ಲಾಸಿನ ವಿದ್ಯಾರ್ಥಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 
ಬರೋಬ್ಬರಿ ೨೦ ವರ್ಷಗಳೇ ಉರುಳಿ ಹೊಗಿದ್ದವು. ೨೧ನೇ ವರ್ಷಕ್ಕೆ ಕಾಲಿಡುತ್ತಿದ್ದ ಸಮಯ.
       ರಜಾದಿನಗಳಲ್ಲಿ ಮಂಗಳೂರಿನ ರಥಬೀದಿಯಲ್ಲಿರುವ ನಮ್ಮ ಅಜ್ಜಿಯ ಮನೆಗೆ 
ಹೋಗುತ್ತಿದ್ದ ಕಾಲವದು. ಅಜ್ಜಿ-ಅಜ್ಜನ ಪ್ರೀತಿ, ಓರಗೆಯ ಮಕ್ಕಳೊಂದಿಗೆ ಆಟ, ಅಜ್ಜಿ ಮಾಡಿಟ್ಟ ಚಕ್ಕುಲಿ-ಕೋಡುಬಳೆಗಳನ್ನು ಸವಿಯುತ್ತಿದ್ದ ದಿನಗಳವು. ನೆನಪೇ ಮಧುರ.  ಆದರೆ.. 
        ಅಜ್ಜಿಯ ಮನೆ. ಮನೆಯ ಹಿಂದೊಂದು ದನಗಳ ಕೊಟ್ಟಿಗೆ. ಅಲ್ಲಿಂದ ಅನತಿ ದೂರದಲ್ಲಿ ಸಾಲಾಗಿ ಕಟ್ಟಿದ ಏಳು ಶೌಚಾಲಯಗಳು (ಅಲ್ಲಿದ್ದ ಏಳು ಮನೆಗಳಿಗಾಗಿ). ಆಗ ಇಂದಿನಂತೆ ಆಧುನಿಕ ಶೌಚಾಲಯಗಳಿರಲಿಲ್ಲ. ಅಂದಿನ ಶೌಚಾಲಯಗಳ ಸ್ವರೂಪವೇ ಬೇರೆ. ಅದು ಎತ್ತರದಲ್ಲಿದ್ದು ಕೆಳಭಾಗದಲ್ಲಿ ಗಲೀಜು ಗುಡ್ಡೆಯಂತೆ ಶೇಖರವಾಗುತ್ತಿತ್ತು. ಇಂದಿನಂತೆ ಫ್ಲಶ್ ಮಾಡಿದರೆ ಸ್ವಚ್ಛವಾಗುವ ಅನುಕೂಲಗಳಿರಲಿಲ್ಲ. 
         ಒಮ್ಮೆ ಎಂದಿನಂತೆ ಬೆಳಿಗ್ಗೆ ಶೌಚಾಲಯಕ್ಕೆ ಹೋದೆ. ಮೂಗು ಕಟ್ಟಿ ಕುಳಿತು ಕೊಳ್ಳುವ ಸನ್ನಿವೇಶ. ನಾನು ನನ್ನ ಪ್ರಾಥಃವಿಧಿ ನಡೆಸುತ್ತಿದ್ದಂತೇ ಕೆಳಗೆ ಗುಂಡಿಯಲ್ಲಿ ಇದ್ದಕ್ಕಿದ್ದಂತೇ ಎರಡು ಕೈಗಳು ಪ್ರತ್ಯಕ್ಷವಾಗಿ ತಗಡಿನ ತುಂಡೊಂದರಿಂದ ಶೇಖರವಾಗಿದ್ದ ಗಲೀಜನ್ನು ಬಾಚುತ್ತಿದ್ದವು (ಆ ಶೌಚಾಲಯಗಳ ಕೆಳಭಾಗದಲ್ಲಿ ಹಿಂಬದಿಯಿಂದ ಕಿಂಡಿಗಳಿರುತ್ತಿದ್ದವು). ಅದನ್ನು ನೋಡಿದೊಡನೆ ನನ್ನ ದ್ವಾರಗಳೆಲ್ಲ ಬಂದ್ ಆದವು. ಏಕೆಂದರೆ ಇನ್ನು ನಾನು ಮುಂದುವರೆಸಿದರೆ ಆತನ ಕೈ ಮೇಲೆ ಗಲೀಜು ಬೇಳಬೇಕಾಗುತ್ತಿತ್ತು. ಹೊರಗೆ ಬಂದು ತೊಟ್ಟಿಯಲ್ಲಿದ್ದ ನೀರಿನಿಂದ ಶುಚಿಭ್ರೂತನಾಗಿ ಅಜ್ಜಿಯ ಮನೆ ಕಡೆ ಹೆಜ್ಜೆ ಹಾಕಿದೆ. 
        ನನ್ನ ಅಜ್ಜ ಈಸಿಛೇರಿನಲ್ಲಿ ಕುಳಿತಿದ್ದರು. ಕೆಲವೇ ಕ್ಷಣಗಳಲ್ಲಿ ತಳಭಾಗದಲ್ಲಿ ಬಾಳೆ ಎಲೆ ಹೊಂದಿಸಿ ಮೇಲೆ ಗಲೀಜು ತುಂಬಿದ ಬುಟ್ಟಿಯನ್ನು ತಲೆಯ ಮೇಲೆ  ಹೊತ್ತುಕೊಂಡು  ಬರುತ್ತಿದ್ದ ವ್ಯಕ್ತಿಯೊಬ್ಬ ಸಮೀಪಿಸಿದ. ದೂರದಲ್ಲಿ ಆ ಬುಟ್ಟಿಯನ್ನು ಕೆಳಗಿಳಿಸಿ ನನ್ನ ಅಜ್ಜನ ಬಳಿ ಸುಮಾರು ಹತ್ತು ಮಾರು ದೂರದವರೆಗೂ ಬಂದು ಕೈಕಟ್ಟಿ ನಿಂತುಕೊಂಡ. ನನ್ನ ಅಜ್ಜ ತನ್ನ ಪಂಚೆಯಲ್ಲಿ ಕಟ್ಟಿಕೊಂಡಿದ್ದ ಗಂಟನ್ನು ಬಿಚ್ಚಿ ಒಂದು ನಾಣ್ಯ(ಅದರ ಮೌಲ್ಯ ಗೊತ್ತಿಲ್ಲ)ವನ್ನು ಆತನ ಬಳಿ ರಿವ್ವನೇ ಎಸೆದರು. ಅದನ್ನು ಪ್ರಸಾದವೆಂಬಂತೆ ಆಟ ಸ್ವೀಕರಿಸಿ ಕೈ ಮುಗಿದು ಮತ್ತೆ ಆ ಬುಟ್ಟಿಯನ್ನು ತಲೆ ಮೇಲೆ ಹೊತ್ತು ನಡೆದ. 
      ನಾನು ಅಜ್ಜನನ್ನು ಕೇಳಿದೆ 'ಆತನೇಕೆ ನಮ್ಮ ಗಲೀಜನ್ನು ಹೊತ್ತು ಹೋಗಬೇಕು? ನನಗೇ ಅಸಹ್ಯವಾಯಿತು.'
        ಅದಕ್ಕೆ ಅಜ್ಜ 'ಅದು ಅವನ ಕರ್ಮ. ಅದೇ ಅವನ ಕೆಲಸ . ಅವನು ಅದಕ್ಕೇ ಲಾಯಕ್ಕು. ವಿದ್ಯೆ ಆತನ ತಲೆಗೆ ಹತ್ತದು. ಬುದ್ಧಿಶೂನ್ಯ. ಅವನೊಬ್ಬ ಹೊಲೆಯ!!' ಎಂದು ಹೇಳಿದರು. 
        `ಆದರೂ ನಮ್ಮ ಇದನ್ನು ಅವನು ತಲೆಯ ಮೇಲೆ ಹೊತ್ತುಕೊಂಡು.... ' ಮಾತನಾಡಲು ತಡವರಿಸಿದೆ. 
       'ಏನು ಮಾಡೋಕಾಗುತ್ತೆ? ಅವರವರ ಕರ್ಮಕ್ಕೆ ತಕ್ಕಂತೆ ಅವರವರಿಗೆ ಜನ್ಮ ಬಂದಿರುತ್ತೆ. ಅದು ಅವನ ಹಣೆಬರಹ. ನಾವು ಪುಣ್ಯಕ್ಕೆ ಬ್ರಾಹ್ಮಣರಾಗಿ ಹುಟ್ಟಿದ್ದೇವೆ. ಹೋದ ಜನ್ಮದ ಪುಣ್ಯ ನಮ್ಮನ್ನು ಈಗ ಕಾಪಾಡುತ್ತಿದೆ.'
         ಅಂದು ಅಜ್ಜ ಆಡಿದ ಈ ಮಾತುಗಳು ಅರ್ಥವಾಗದಿದ್ದರೂ ಸ್ಪಷ್ಟವಾಗಿ ತಲೆಯಲ್ಲಿ ಉಳಿದಿದ್ದಂತೂ ಸತ್ಯ. ಅಜ್ಜನ ಅಭಿಪ್ರಾಯ ಮುಂದೆ ಕೆಲವರ್ಷಗಳ ಕಾಲ ನನ್ನಲ್ಲಿ ಘನೀಕೃತವಾದದ್ದೂ ನಿಜ. 
         ಆದರೆ ಮುಂದಿನ ದಿನಗಳಲ್ಲಿ ಪುಸ್ತಕ ಪ್ರೇಮಿಯಾಗಿದ್ದ ನಾನು ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಬಸವಣ್ಣನವರ ಕೃತಿಗಳನ್ನು ಓದುತ್ತಾ ಕ್ರಮೇಣ ನನ್ನ ಅಜ್ಜನ ಅಭಿಪ್ರಾಯಗಳನ್ನು ಪ್ರಶ್ನಿಸುವಂತಾದೆ. ಈ ಹೊತ್ತಿಗಾಗಲೇ ನಾನು ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದೆ. ಆ ಶಾಲೆಯಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದವರು ಹೆಚ್. ನರಸಿಂಹಯ್ಯನವರು (ಪ್ರೀತಿಯ ಹೆಚ್.ಎನ್). ಅವರು ಪದೇ ಪದೇ ಹೇಳುತ್ತಿದ್ದದ್ದು 'ಪ್ರಶ್ನಿಸದೇ  ಒಪ್ಪಬೇಡಿ. ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ. ಅಜ್ಜ ನೆಟ್ಟ ಆಲದ ಮರವೆಂದು ಜೋತುಬೇಳಬೇಕಾಗಿಲ್ಲ.'
      ಅವರ ಮಾತುಗಳನ್ನು ಕೇಳಿದಾಗಲೆಲ್ಲ ನನಗೆ ನೆನಪಾಗುತ್ತಿದ್ದುದು ನನ್ನ ಅಜ್ಜ ಹೇಳಿದ ಮಾತುಗಳು. 
       ನಮ್ಮ ನ್ಯಾಷನಲ್ ಶಾಲೆಯ ಸಮೀಪದಲ್ಲೇ ಇದ್ದ ನಗರ ಕೇಂದ್ರ ಗ್ರಂಥಾಲಯದಲ್ಲಿ ಬಹುಕಾಲ ಕಳೆಯುತ್ತಿದ್ದೆ. ಯಾವ ಪುಸ್ತಕದ ಪ್ರೇರಣೆಯೋ ಏನೋ ಒಟ್ಟಾರೆಯಾಗಿ ನನ್ನ ಬ್ರಾಹ್ಮಣತ್ವದ ಬಗ್ಗೆ ನನಗೇ ಜಿಗುಪ್ಸೆ ಉಂಟಾಗುವಂತೆ ಮಾಡಿತು. 
       ಯಾರು ಮಾಡಿದ್ದು ಈ ಜಾತಿ ಭೇಧವನ್ನು? ನಾವೇಕೆ ಉತ್ತಮರು? ಅವರೇಕೆ ಅಧಮರು? ಹುಟ್ಟಿದ ಆ ಜಾತಿಯಲ್ಲಿ ಹುಟ್ಟಲು ಮಾಡಿದ ತಪ್ಪಾದರೂ ಏನು? 
ಉತ್ತರವಂತೂ ಇನ್ನೂ ಸಿಕ್ಕಿಲ್ಲ.                    - ದೇವರು ಧರ್ಮ ಏನಿದರ ಮರ್ಮ

                 
      
                               

No comments:

Post a Comment