ಹಾಯ್ ಫ್ರೆಂಡ್ಸ್, ನೆನ್ನೆ ನಾನು ಮಾತು ಕೊಟ್ಟಂತೆ ನನ್ನ ಬಾಲ್ಯದ ಸಂತಸದ ಕ್ಷಣಗಳ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನೋಡಿದಿರಾ? ಎಲ್ಲರೂ ನನ್ನನ್ನು ಮುದ್ದಿಸುವವರೇ. ನಾನು ಕನ್ಯಾವಸ್ಥೆಗೆ ಕಾಲಿಟ್ಟೆ. ಕಾಲಿಟ್ಟೆ ಅಷ್ಟೇ.. ಅದು ಹೇಗೋ ಏನೋ ನನ್ನ ಜಾಡು ಹಿಡಿದು ಹಲವಾರು ಗಂಡು ಗಡವ ಬೆಕ್ಕುಗಳು ನನ್ನ ಬೆನ್ನು ಹತ್ತಿದವು. ನಾನಿನ್ನೂ ಬಾಲ್ಯದ ತುಂಟಾಟಗಳ ಗುಂಗಿನಲ್ಲೇ ಇದ್ದೆ. ನನಗೆ ಇಷ್ಟು ಬೇಗ ತಾಯಿಯಾಗುವುದು ಬೇಕಿರಲಿಲ್ಲ. ಆದರೆ ಈ ದುಷ್ಟ ಪುರುಷರ ಕಪಿಮುಷ್ಠಿಯಿಂದ ಪಾರಾಗುವುದು ಸುಲಭದ ಮಾತಾಗಿರಲಿಲ್ಲ. ಅವು ಹತ್ತಿರ ಬಂದಾಗ ಕೆಲವೊಮ್ಮೆ ಪರಚಿಬಿಡುತ್ತಿದ್ದೆ. ತಪ್ಪಿಸಿಕೊಂಡು ಓಡುತ್ತಿದ್ದೆ. ಸಣ್ಣ ಸಣ್ಣ ಜಾಗಗಳಲ್ಲಿ ಅವಿತುಕೊಳ್ಳುತ್ತಿದ್ದೆ. ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ರಾತ್ರಿ ನಿದ್ದೆ ಮಾಡಲು ಹೆದರುತ್ತಿದ್ದೆ. ಯಾವ ಕ್ಷಣದಲ್ಲಿ ಯಾವ ಗಂಡು ಬೆಕ್ಕು ದಾಳಿ ಮಾಡುವುದೋ ಎಂಬ ಭಯ. ನಿಮ್ಮಗಳ ಹಾಗೆ ಬಾಗಿಲು ಮುಚ್ಚಿ ಮಲಗಲು ನನಗೆ ನನ್ನದೇ ಆದ ಮನೆ ಇರಲಿಲ್ಲವೇ! ಒಮ್ಮೆ ಬೀದಿಯಲ್ಲಿ ಹೆಣ್ಣೊಬ್ಬರು 'ಈ ಇಪ್ಪತ್ತೊಂದನೇ ಶತಮಾನದಲ್ಲಿ ಮಹಿಳೆಯರು ಅಬಲೆಯರಲ್ಲ. ಸಬಲೆಯರು. ಸರಿಸಮಾನರು' ಎಂದೆಲ್ಲಾ ಭಾಷಣ ಬಿಗಿಯುತ್ತಿದ್ದರು. ನನಗನ್ನಿಸಿದ್ದು ಇಪ್ಪತ್ತೊಂದಲ್ಲ, ಇನ್ನೂರು ಶತಮಾನಗಳು ಕಳೆದರೂ ಮಹಿಳೆಯರನ್ನು ಅಬಲೆಯರಾಗಿಯೇ ಇಡಲು ಪ್ರಯತ್ನಿಸುತ್ತದೆ ಈ ಪುರುಷ ಪ್ರಧಾನ ಸಮಾಜ.
ಅದೊಂದು ರಾತ್ರಿ ಸುಸ್ತಾಗಿ ಮಲಗಿದ್ದೆ. ಕಣ್ಣುರೆಪ್ಪೆಗಳು ಅದಾವಾಗ ಮುಚ್ಚಿದವೋ ತಿಳಿಯದು. ಗಂಡುಬೆಕ್ಕೊಂದು ಎರಗಿರುವುದು ಅರಿವಾದಾಗ ತಡವಾಗಿತ್ತು. ಹೌದು. ನಾನು ತಾಯಿಯಾಗಲೇ ಬೇಕಾಯಿತು. ಈಗ ಮತ್ತೊಂದು ಸಮಸ್ಯೆ ಕಾಡತೊಡಗಿತು. ಈ ಮರಿಗಳನ್ನು ಹೆರುವುದು, ಜೋಪಾನ ಮಾಡುವುದು ಎಲ್ಲಿ? ಈ ಅನಾಗರೀಕ ಪ್ರಪಂಚದಲ್ಲಿ ನನ್ನ ಮರಿಗಳನ್ನು ಸಂರಕ್ಷಿಸಲು ಸುರಕ್ಷಿತವಾದ ಸ್ಥಳ ಯಾವುದು? ಕಣ್ಣಿಗೆ ಬಿದ್ದ ಸ್ಥಳಗಳನ್ನೆಲ್ಲಾ ತಡಕಾಡಿದೆ. ಸಜ್ಜಾ ಮೇಲೆ, ಬಟ್ಟೆ ಒಗೆಯುವ ಕಲ್ಲಿನ ಹಿಂದೆ, ಗಿಡಗಳ ಮರೆಯಲ್ಲಿ.. ಊಹೂಂ ಯಾವುದು ಸುರಕ್ಷಿತವಲ್ಲ ಎಂದೇ ಅನಿಸುತ್ತಿತ್ತು. 'ಆ' ಮನೆಯಲ್ಲಿ ಹೇಗಾದರೂ ನುಸುಳೋಣವೆಂದು ಶತಪ್ರಯತ್ನ ಪಟ್ಟೆ, ಎಲ್ಲವೂ ವ್ಯರ್ಥವಾದವು.
ಪುಣ್ಯವಶಾತ್ 'ಆ' ಮನೆಯ ಪಕ್ಕದ ಮನೆಯವರು ನಾನು ಮನೆಯೊಳಗೆ ನುಗ್ಗಿದಾಗ ನನ್ನ ಪರಿಸ್ಥಿತಿಯನ್ನು ನೋಡಿ ಆಶ್ರಯ ಕೊಟ್ಟರು. ಅಂತೂ ಮುದ್ದಾದ ಮೂರು ಮರಿಗಳಿಗೆ ಜನ್ಮ ನೀಡಿದೆ. ಅಷ್ಟು ದಿನಗಳ ಪ್ರಯಾಸ ಹಾಗೂ ಆಯಾಸ ಎಲ್ಲವೂ ಮಂಜಿನಂತೆ ಕರಗಿದವು. ತಾಯ್ತನದ ಸುಖವನ್ನು ಅನುಭವಿಸಿದೆ. ಮಕ್ಕಳಿಗೆ ಹಾಲುಣಿಸುವುದು, ಮುದ್ದಾಡುವುದು, ಜೀವನೋಪಾಯಕ್ಕೆ ಬೇಕಾದ ವಿಧವಿಧದ ಶಿಕ್ಷಣ ನೀಡುವುದರಲ್ಲಿ ದಿನಗಳೆದದ್ದೇ ಗೊತ್ತಾಗಲಿಲ್ಲ. ಅವುಗಳಿಗೂ ಹಲ್ಲು ಬಲಿತು ಕರಂ ಕುರುಂ ಎಂದು ಮನೆಯವರು ನೀಡಿದ ತಿಂಡಿಯನ್ನು ನನ್ನ ಜೊತೆಯೇ ತಿನ್ನುತ್ತಿದ್ದವು. ಇವೆಲ್ಲವೂ ನನ್ನ ಪಾಲಿನ ಸ್ವರ್ಗವಾಗಿತ್ತು. ನಾನೂ ನನ್ನ ಮರಿಗಳು ಆಹಾ!
ಕೆಲದಿನಗಳಲ್ಲಿ ಅವರ ಸಂಬಂಧಿಕರೊಬ್ಬರು ಬಂದರು. ' ಒಹ್ ಮರಿಗಳು ಎಷ್ಟು ಮುದ್ದಾಗಿವೆ' ಎಂದು ಅವರು ಹೇಳಿದಾಗ ನನಗೂ ಹೆಮ್ಮೆಯೆನಿಸಿತ್ತು. ಆದರೆ ಮುಂದಿನ ಮಾತುಗಳು ನನ್ನ ಕಿವಿಗೆ ಕಾದ ಸೀಸ ಹುಯ್ದಂತಾಗಿತ್ತು. 'ಒಂದು ಮರೀನಾ ನಾವು ತೆಗೆದುಕೊಂಡು ಹೋಗ್ತೀವಿ' ಎಂದಾಗ ಮನೆಯವರು 'ಆಯಿತು, ಚೆನ್ನಾಗಿ ನೋಡಿಕೊಳ್ಳಿ' ಎಂದು ನನ್ನ ಬಳಿಯಿದ್ದ ಮರಿಯನ್ನು ಎತ್ತಿಕೊಂಡು ಅವರ ಕೈವಶ ಮಾಡಿದರು. ನಾನು ನನ್ನ ಕೈಲಾದ ಮಟ್ಟಿಗೆ ಪ್ರತಿರೋಧಿಸಿದೆ. ಆದರೆ ಬೆಕ್ಕಾದ ನಾನೆಲ್ಲಿ? ಬಲಿಷ್ಠ ಮಾನವರೆಲ್ಲಿ? ನೋಡನೋಡುತ್ತಿದ್ದಂತೆ ನನ್ನ ಪುಟ್ಟ ಕಂದನೊಬ್ಬ ನನ್ನಿಂದ ಮರೆಯಾದ.
ಉಳಿದ ಎರಡುಮರಿಗಳನ್ನು ಜೀವದಂತೆ ಕಾಪಾಡುತ್ತಿದ್ದೆ. ಆ ದುರ್ದಿನ ಬಂದೇಬಿಟ್ಟಿತು. ನನ್ನ ಬಾಳಿಗೆ ಬರಸಿಡಿಲು ಬಡಿದ ದಿನ. ನಾನು ಎಂದಿನಂತೆ ಹೊರ ಹೋಗಿ ಮನೆಗೆ ಬರುವುದರೊಳಗೆ ನನ್ನ ಉಳಿದೆರಡು ಕಂದಮ್ಮಗಳು ಕಾಣೆಯಾಗಿದ್ದವು. ಮನೆಯೆಲ್ಲಾ ಹುಡುಕಾಡಿದೆ. ಕಂಡ ಕಂಡ ಸ್ಥಳಗಳನ್ನೆಲ್ಲ ತಡಕಾಡಿದೆ. ಸುಸ್ತಾಗಿ ದಣಿದು ಬಳಲಿ ಬೆಂಡಾಗಿ ಮನೆಗೆ ಬಂದಾಗ ಮನೆಯಾಕೆ ನನ್ನನ್ನು ಮುದ್ದಿಸುತ್ತಾ 'ಏನೂ ಯೋಚನೆ ಮಾಡಬೇಡ. ನಿನ್ನ ಎರಡು ಮರಿಗಳನ್ನು ತೆಗೆದುಕೊಂಡು ಹೋದವರು ತುಂಬಾ ಒಳ್ಳೆಯ ಜನ. ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ' ಎಂದರು. ನನಗೆಷ್ಟು ಕೋಪ ಬಂದರೇನು ಪ್ರಯೋಜನ? 'ಬಡವನ ಕೋಪ ದವಡೆಗೆ ಮೂಲ' ಎಂಬ ಗಾದೆ ಮಾತು ನೆನಪಾಗಿ 'ಬಡವಾ ನೀನು ಮಡಗ್ದಂಗಿರು' ಎಂದು ಅಸಹಾಯಕಳಾಗಿ ಮೂಲೆ ಸೇರಿದೆ. ದುಃಖ ಉಮ್ಮಳಿಸಿ ಬರುತ್ತಿತ್ತು. ಇನ್ನೆಲ್ಲಿ ನಾನು ಮುದ್ದು ಮಾಡುತ್ತಿದ್ದ ಆ ಕಂದಮ್ಮಗಳು? ಎಲ್ಲಿರುವವೋ? ಎಷ್ಟು ಅಪಾಯಗಳನ್ನು ಎದುರಿಸುತ್ತಿರುವವೋ? ಏನೂ ಅರಿಯದ ಪುಟ್ಟ ಕಂದಮ್ಮಗಳು. ಅದು ಹೇಗೆ ನಿಭಾಯಿಸುತ್ತವೋ? ಈ ಚಿಂತೆಗಳಲ್ಲೇ ಮನಸ್ಸು ಮೂಕವಾಯಿತು. ಕೇವಲ ಕೆಲಕಾಲಗಳ ಹಿಂದಿದ್ದ ಉತ್ಸಾಹಕ್ಕೆ ಮಂಕು ಬಡಿಯಿತು.
ಮತ್ತೆ 'ಆ' ಮನೆಯ ನೆನಪಾಯಿತು. ಅಲ್ಲಿ ನನಗಾಗಿ ಮನೆಯ ಹಿಂದೆ ಹಳೆಯ ಕುರ್ಚಿಯೊಂದನ್ನು ಇಟ್ಟಿದ್ದರು. ಅಲ್ಲಿ ಒಬ್ಬಳೇ ಹೋಗಿ ಕುಳಿತುಕೊಳ್ಳುತ್ತೇನೆ. ನೂರೊಂದು ನೆನಪು ಅಂತರಾಳದಲ್ಲಿ ಮಿಡಿಯುತ್ತಾ ಇರುತ್ತದೆ. ಅರಿವು ಮೂಡುವ ವೇಳೆಗೆ ನಾನು ತಬ್ಬಲಿಯಾಗಿದ್ದೆ. ಮಕ್ಕಳಲ್ಲಿ ಅರಿವು ಮೂಡಿಸುವ ಮೊದಲೇ ಅವರನ್ನು ತಬ್ಬಲಿಗಳನ್ನಾಗಿ ಮಾಡಿದ ಅಸಹಾಯಕ ಪಾಪಿ ನಾನು. ಆದರೂ ಮನದ ಮೂಲೆಯಲ್ಲೊಂದಾಸೆ. ಮತ್ತೆ ನನ್ನ ಕಂದಮ್ಮಗಳು ನನ್ನನ್ನು ಹುಡುಕಿ ಬಂದೆ ಬರುತ್ತವೆ. ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ.