ಸಾಕಾರ ಧ್ಯಾನ
ಸಾಕಾರ ರೂಪದಲ್ಲಿ ದೇವರನ್ನು ಧ್ಯಾನ ಮಾಡುವ ಬಗ್ಗೆ ನನಗೆ ಆರಂಭದ ದಿನಗಳಲ್ಲಿ ಗುರುಗಳು ತರಬೇತಿ ನೀಡಿದರು. ಇದರ ವಿಶೇಷತೆ ಏನೆಂದರೆ ದೇವರ ಬಿಂಬವನ್ನು ಮನಸ್ಸಿನಲ್ಲಿ ಸಾಕ್ಷಾತ್ಕಾರಿಸಲು ಪ್ರಯತ್ನಿಸುವುದು. ನಮಗಿಷ್ಟವಾದ ದೇವರನ್ನು ಮನದಲ್ಲಿಯೇ ಅಡಿಯಿಂದ ಮುಡಿಯವರೆಗೆ ಒಳಗಿನ ಕಣ್ಣುಗಳಿಂದ ಸೂಕ್ಷ್ಮವಾಗಿ ಗಮನಿಸುವುದು.
ನಾನು ನನಗಿಷ್ಟವಾದ ದೇವಿಯ ಬಿಂಬವನ್ನು ತುಂಬಾ ಪ್ರೀತಿಯಿಂದ ಮನದಲ್ಲಿ ಸಾಕ್ಷಾತ್ಕರಿಸಲು ಪ್ರಯತ್ನಪಟ್ಟೆ. ಅದೊಂದು ಸುಂದರ ಅನುಭವ. ಸಾಕ್ಷಾತ್ ದೇವಿ ನನ್ನೆದುರು ನಿಂತಿರುವಳೇನೋ ಎಂದು ಭಾವಿಸಿ ಅವಳ ಬಿಂಬವನ್ನು ಚಿತ್ತದಲ್ಲಿ ವಿವರವಾಗಿ ಮೂಡಿಸಿದೆ. ಮೊದಲು ದೇವಿಯ ಪಾದಗಳು. ಅತಿ ನಾಜೂಕಾದ ಗೌರವರ್ಣದಿಂದ ಮಿನುಗುತ್ತಿರುವ ಕಾಂತಿ. ಕಿರಿದಾದ ಗೆಜ್ಜೆಗಳನ್ನು ಧರಿಸಿದ ಪಾದಕಮಲಗಳೆರಡು. ಬಂಗಾರದ ಅಂಚಿನಿಂದ ಕೂಡಿದ ಕಡುಗೆಂಪು ವರ್ಣದ ಸೀರೆ. ಅಚ್ಚುಕಟ್ಟಾಗಿ ಮೂಡಿದ ನೆರಿಗೆ. ಸೊಂಟಕ್ಕೊಂದು ಮುತ್ತಿನಮಣಿಗಳಿಂದ ಅಲಂಕೃತಗೊಂಡ ಡಾಬು. ನೀಳವಾದ ಕೈಗಳು. ಗಿಲಿಗಿಲಿನಾದದ ಬಳೆಗಳು. ವಜ್ರ-ವೈಢೂರ್ಯಗಳಿಂದ ತುಂಬಿದ ಕಂಠಾಭರಣ. ಇಲ್ಲಿಂದ ಮುಂದೆ ಕಾತುರದ ಕ್ಷಣಗಳು. ದಿವ್ಯವಾದ ದೈವಿಕಕಳೆಯಿಂದ ಮಿನುಗುತ್ತಿರುವ ದೇವಿಯ ಸುಂದರ ವದನ. ಇಲ್ಲೊಂದು ಭಾವದ ಪರಾಕಾಷ್ಠೆ. ಒಂದಷ್ಟು ಸಮಯ ಆ ಭಾವದಲ್ಲೇ ಇದ್ದು ನಂತರ ದೇವಿಯ ಪಾದಗಳಿಗೆ ಶರಣಾಗಿ ಬಿಡುವುದು. ಆ ಪಾದಕಮಲಗಳಲ್ಲಿ ತಲೆ ಇಟ್ಟ ಮೇಲೆ ನಿರಂತರ ಧ್ಯಾನ. ದೇವಿಯೊಡನೆ ಮಾನಸಲೋಕದಲ್ಲಿ ಮಾತುಕತೆ. ಸಂಪೂರ್ಣ ಸಮರ್ಪಣಾಭಾವದಲ್ಲಿ ಮನಸ್ಸನ್ನು ಸ್ಥಿರಗೊಳಿಸಿವುದು.
ಮುಂದಿನ ಹಂತ ಮಾನಸ ಪೂಜೆ. ಇಲ್ಲಿ ನಮಗೆ ತಿಳಿದಂತೆ ದೇವಿಯನ್ನು ಪೂಜಿಸುವುದು. ದೀಪಗಳನ್ನು ಬೆಳಗುವುದು. ದೇವಿಯನ್ನು ಹೂವಿನಿಂದ ಅಲಂಕರಿಸುವುದು. ಧೂಪವನ್ನು ಪಸರಿಸುವುದು. ನೈವೇದ್ಯವನ್ನು ಅರ್ಪಿಸುವುದು. ಆರತಿಯನ್ನು ಬೆಳಗುವುದು. ಸಾಷ್ಟಾಂಗನಮಸ್ಕಾರ ಮಾಡಿ ಮತ್ತದೇ ಸಮರ್ಪಣಾ ಭಾವದಲ್ಲಿ ಒಂದಾಗುವುದು. (ಇವಿಷ್ಟನ್ನೂ ಕುಳಿತ ಜಾಗದಿಂದ ಕದಲದೇ ಮಾನಸಿಕವಾಗಿಯೇ ಮಾಡಬೇಕಾಗುತ್ತದೆ.)
ಈ ವಿಧಾನವನ್ನು ಅನುಭವಿಸಿದಷ್ಟು ಸುಲಭವಾಗಿ ಬರೆಯುವುದು ಅಸಾಧ್ಯ. ಈ ಧ್ಯಾನದ ವಿಧಾನದಲ್ಲಿರುವ ವಿಶೇಷತೆ ಏನೆಂದರೆ ಆರಂಭದಿಂದ ಕೊನೆಯವರೆಗೂ ಮನಸ್ಸು ಸೂಕ್ಷ್ಮವಾಗಿ ದೇವಿಯನ್ನು ಗಮನಿಸುತ್ತಾ ಹೋಗುವುದರಿಂದ ಏಕಾಗ್ರತೆ ಸುಲಭವಾಗುತ್ತದೆ.
ಈ ವಿಧಾನದಲ್ಲಿ ಮನಸ್ಸನ್ನು ತೊಡಗಿಸಿಕೊಂಡಾಗ ನಡೆದ ಒಂದು ವಿಶೇಷವನ್ನು ಹೇಳಲು ಇಷ್ಟ ಪಡುತ್ತೇನೆ. ಮೊದಲ ದಿನ ನಾನು ದೇವಿಗೆ ನೈವೇದ್ಯವಾಗಿ ಏಲಕ್ಕಿಬಾಳೆಯನ್ನು ಅರ್ಪಿಸಿದ್ದೆ. ಅಂದು ಅಂಗಡಿಯೊಂದರ ಬಳಿ ನಿಂತಿರುವಾಗ ಗೆಳೆಯನೊಬ್ಬ ಅಂಗಡಿಗೆ ಪ್ರವೇಶಿಸಿ ಏಲಕ್ಕಿ ಬಾಳೆಹಣ್ಣುಗಳನ್ನು ಕೊಂಡುಕೊಂಡು ಬಂದ. 'ತೊಗೊಳ್ಳೋ, ಹದವಾಗಿ ಹಣ್ಣಾಗಿದೆ' ಎಂದು ನನಗೂ ನೀಡಿದ. ನಾನು ಅವನನ್ನು ಕೇಳಿದೆ 'ಏಲಕ್ಕಿ ಬಾಳೆಹಣ್ಣನ್ನೇ ತೆಗೆದುಕೊಳ್ಳಬೇಕೆಂದು ನಿನಗೇಕೆ ಅನ್ನಿಸಿತು?' 'ಹದವಾಗಿ ಹಣ್ಣಾಗಿ ಹೊಳೆಯುತ್ತಿತ್ತು. ತಿನ್ನೋಣ ಅನ್ನಿಸಿತು' ಅಂದ. ನನ್ನ ನೈವೇದ್ಯಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ಒಂದು ಕ್ಷಣ ಅನಿಸಿದರೂ, ಕಾಕತಾಳೀಯವಿರಬಹುದೇನೋ ಎಂದು ಸುಮ್ಮನಾದೆ.
ಅಲ್ಲಿಂದ ಮುಂದೆ ಪ್ರತಿದಿನ ನಾನು ಮನಸ್ಸಿನಲ್ಲಿ ಏನೆಂದು ನೈವೇದ್ಯವೆಂದು ಅರ್ಪಿಸುತ್ತಿದ್ದೆನೋ ಅದೇ ಹಣ್ಣು, ಪಾಯಸ ಮುಂತಾದವು ನನಗೆ ಅಂದಂದೇ ದೊರೆಯಲಾರಂಭಿಸಿದವು. ಒಂದು ದಿನ ನನಗೆ ಹಠ ಬಂದು 'ಈ ಹಣ್ಣುಹಂಪಲು ಕಾಕತಾಳೀಯವಾಗಿ ಸಿಗಲೂಬಹುದು. ಆದ್ದರಿಂದ ಏನಾದರೂ ವಿಶೇಷ ನೈವೇದ್ಯ ನೀಡುತ್ತೇನೆ' ಎಂದು ನಿರ್ಧರಿಸಿ ಬಾದಾಮಿಯನ್ನು ನೈವೇದ್ಯ ಮಾಡಿದೆ. ರಾತ್ರಿಯಾಗುತ್ತಾ ಬಂತು. ಯಾರೂ ಬಾದಾಮಿ ನೀಡಲಿಲ್ಲ. 'ಓಹ್.. ಅಪರೂಪದ ವಸ್ತುವನ್ನು ನೈವೇದ್ಯವಾಗಿ ಕೊಟ್ಟರೆ ಸಿಗುವುದಿಲ್ಲವೇನೋ' ಎಂದುಕೊಳ್ಳುತ್ತಿದ್ದೆ. ಕೋಣೆಯ ಬಾಗಿಲು ಬಡಿದ ಶಬ್ದ. ಬಾಗಿಲು ತೆರೆದರೆ ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದ ಗೆಳೆಯನೊಬ್ಬ ಲೋಟವೊಂದನ್ನು ಹಿಡಿದು ನಿಂತಿದ್ದ. 'ಊಟ ಆಯ್ತಾ?' ಎಂದು ಕೇಳಿದ. ಇಲ್ಲವೆಂದಾಗ 'ನನ್ನ ಊಟ ಆಯಿತು. ರೂಮಿಗೆ ಬಂದಾಗ ನೆನಪಿಗೆ ಬಂತು. ಬೆಳಿಗ್ಗೆ ವಾಕ್ ಹೋಗಿ ಬಂದ ಮೇಲೆ ತಿನ್ನಲೆಂದು ಬಾದಾಮಿಯನ್ನು ನೀರಿನಲ್ಲಿ ಹಾಕಿ ಇಟ್ಟಿದ್ದೆ. ತಿನ್ನಲು ಮರೆತು ಹೋದೆ. ಈಗ ಭರ್ಜರಿ ಊಟದ ನಂತರ ತಿನ್ನಲು ಮನಸ್ಸಾಗುತ್ತಿಲ್ಲ. ಹ್ಯಾಗೂ ನಿನ್ನ ಊಟ ಆಗಿಲ್ವಲ್ಲ, ತೆಗೆದುಕೋ' ಎಂದು ಕೊಟ್ಟ. ಬಾದಾಮಿಯನ್ನು ಕಣ್ಣಿಗೊತ್ತಿಕೊಂಡು ಸೇವಿಸಿದೆ. ದೇವಿ ನಗುತ್ತಿದ್ದಂತೆ ಭಾಸವಾಗಿತ್ತು. ಅಂದ ಹಾಗೆ ನಾನಾಗ ಬುಲ್ ಟೆಂಪಲ್ ರಸ್ತೆಯ ದ್ವಾರಕಾ ಹೋಟೆಲಿನ ಹಿಂಭಾಗದ ಕೊಠಡಿಯೊಂದರಲ್ಲಿ ವಾಸವಿದ್ದೆ.