Sunday, 6 August 2017

ಪ್ರಕೃತಿ ಪ್ರೇಮ

                                ಪ್ರಕೃತಿ ಪ್ರೇಮ 
        ಇತ್ತೀಚಿಗೆ ಟ್ವಿಟ್ಟರ್ ಗೆಳೆಯರನ್ನು ಒಂದುಗೂಡಿಸಿದ್ದು ಲೋಕೇಶ್ (ಆಚಾರ್ಯ). ಇಡ್ಲಿ ತಿಂದೆವು, ಖಾರಾಬಾತ್ ಸವಿದೆವು ಹಾಗೂ ಮಸಾಲೆದೋಸೆ ಮುಗಿಸಿದೆವು. ಹೊರಡುವಾಗ ಸಂಜಯ್ (ಪುಟಾಣಿ ಪಾಪ) ಅವರ ಜವಾಬ್ದಾರಿಯಲ್ಲಿ ಎಲ್ಲರಿಗೂ ಒಂದೊಂದು ಹೊಂಗೇ ಸಸಿಯನ್ನು ಪ್ರೀತಿಯಿಂದ ಕೊಟ್ಟರು.
        ನಮ್ಮ ಮನೆಯ ಮುಂದೆ ಮರವೊಂದು ಕಾಲನ ದಾಳಿಗೆ ತುತ್ತಾಗಿ ಉರುಳಿತ್ತು. ಗಾಳಿ-ಬಿರುಗಾಳಿ ಹಾಗೂ ಮಳೆ-ಜಡಿಮಳೆಗೆ ತನ್ನ ಮೈಯೊಡ್ಡಿದ್ದಲ್ಲದೇ ನರಬಾಧೆ-ವಾನರಬಾಧೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ತನ್ನ ಪಾಡಿಗೆ ತಾನು ಮೈದಳೆದು ನಿಂತಿತ್ತು. 'ಕಾಲನಿಗೆ ಕರುಣೆಯಿಲ್ಲ' ಎಂಬ ಸತ್ಯವನ್ನು ಜಗತ್ತಿಗೆ ಸಾರಲು ಕಡೆಗೊಮ್ಮೆ ಧರೆಗುರುಳಿತು. ನಾನು ತಂದ ಸಸಿಯನ್ನು ಅದೇ ಜಾಗದಲ್ಲಿ ನೆಟ್ಟು, ಅದರ ಎಲೆಗಳನ್ನು ನವಿರಾಗಿ ಸವರಿ ನೀರುಣಿಸಿದೆ. ಒಂದು ಕ್ಷಣ ಮೈಮರೆತೆ, ಮನಸ್ಸು ಬಾಲ್ಯಕ್ಕೆ ಜಾರಿತು.
       ೧. 'ಬಂಟ್ವಾಳ'ದಿಂದ, ಮೋಟಾರಿಗೆ ಕಮ್ಮಿ... ಕಾಲ್ನಡಿಗೆಗೆ ತುಸು ಜಾಸ್ತಿ ಅನ್ನುವಷ್ಟು ದೂರದಲ್ಲಿರುವ 'ಮಂಡಾಡಿ' ಯಲ್ಲಿ ಸುಮಾರು ಹತ್ತು ಎಕರೆಯಲ್ಲಿ ಹಸಿರು ಹೊಲಗದ್ದೆಗಳು ಯಾರ ಕಣ್ಣಿಗಾದರೂ ರಾಚುವಂತಿದ್ದವು. ಹಿರಿಯರಿಂದ ಬಂದ ಆಸ್ತಿಯನ್ನು ಜತನ ಮಾಡುವುದರಲ್ಲಿ ನನ್ನ ತಂದೆ ಅಪರಿಮಿತ ಕಾಳಜಿ ಹೊಂದಿದ್ದರು. ತಳಚೇರಿಯಿಂದ ತೆಂಗಿನ ಸಸಿಗಳನ್ನು ತಂದು ನೆಡುವುದು ಅಂತೆಯೇ ಕಾರ್ಕಳದಿಂದ ರಸಬಾಳೆ ಹಣ್ಣಿನ ಗಿಡ, ಬೆಂಗಳೂರಿಂದ ತರಕಾರಿ ಬೀಜಗಳು ಹಾಗೂ ಪಾಣೆಮಂಗಳೂರಿನಿಂದ ಗೊಬ್ಬರ .. ಹೀಗೆ ಎಲ್ಲಿ ಏನಾದರೂ ವಿಶೇಷವೆಂದರೆ ಅಲ್ಲಿಂದ ಅದನ್ನು ತರುವುದು ಅಥವಾ ತರಿಸುವುದು ನನ್ನ ತಂದೆಯ ಆಸಕ್ತಿಯಾಗಿತ್ತು. ಪಾಳೇಗಾರರಾಗಿದ್ದ ನನ್ನ ಮುತ್ತಾತಂದಿರ ದರ್ಪ ತನ್ನ ರಕ್ತದಲ್ಲಿ ಇದ್ದರೂ ಊರಿಗೆ ಬಂದಾಗ ನನ್ನಪ್ಪ ಭೂಮಿತಾಯಿಯ ಮಗನಾಗುತ್ತಿದ್ದರು. ನನ್ನಪ್ಪ ನಡೆದು ಹೋಗುತ್ತಿರುವಾಗ, ಸ್ಥಳೀಯರು ಎದುರಿಗೆ ಸಿಕ್ಕಾಗ 'ನಮಸ್ಕಾರ ಧನಿಕ್ಲೇ' ಎಂದು ಮೈಬಗ್ಗಿಸಿ ಗೌರವ ಸೂಚಿಸುತ್ತಿದ್ದಾಗ ಜತೆಯಲ್ಲಿ ಸಾಗುತ್ತಿದ್ದ ನನಗೆ ಹೆಮ್ಮೆ ಅನಿಸುತ್ತಿತ್ತು. ಅಪ್ಪ ನನಗೆ ಪಾಳೇಗಾರನಂತೇ ಕಾಣುತ್ತಿದ್ದರು. ನಮ್ಮ ದೇಗುಲದಲ್ಲಿ ಇದ್ದ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ  ಕತ್ತಿ -ಗುರಾಣಿಗಳು ಕಣ್ಣಮುಂದೆ ಬಂದು ನಿಲ್ಲುತ್ತಿದ್ದವು.
        'ನಮ್ಮಪ್ಪಾಜಿ ಕಾಲದಲ್ಲಿ ಐವತ್ತು ಎಕರೆಗಿಂತ ಜಾಸ್ತಿ ಆಸ್ತಿ ಇತ್ತು, ಉಳುವವನಿಗೆ ಭೂಮಿ ಅಂತ ಬಂದಾಗ ಹನ್ನೆರಡು ಎಕರೆ ಮಾತ್ರ ಉಳೀತು, ಅದ್ರಲ್ಲಿ ಎರಡು ಎಕರೆ ಕಾಲೇಜಿಗೆ ಅಂತ ಕೊಟ್ವಿ.. ನಿಮ್ಮ 'ಪಿಜ್ಜಿ' ಇಲ್ಲಿ ನೋಡ್ಕೋತಿದ್ದಿದ್ರಿಂದ ಅಷ್ಟಾದ್ರೂ ಉಳೀತು ... ಇದಲ್ಲದೇ 'ಕೊಳ್ಕೆರೆ' ಊರೇ ನಮ್ಮದಾಗಿತ್ತು...'  ಅಪ್ಪನಿಗೆ ಗತವೈಭವ ಯಾವಾಗಲೂ ಮುದನೀಡುತ್ತಿತ್ತು ಹಾಗೆಯೇ ನನಗೂ ಕೂಡ !
        ಅಪ್ಪನ ಜತೆ ಓಡಾಡುತ್ತಾ ಗದ್ದೆಗೆ ಇಳಿದು, ಸಸಿಗಳನ್ನು ನೆಟ್ಟು, ಮುಂದಿನ ಸಲ ಹೋದಾಗ 'ನಾನು ನೆಟ್ಟ ಸಸಿ ಎಷ್ಟು ಬೆಳೆದಿದೆ' ಎಂದು ಪರೀಕ್ಷಿಸಿ ಹೆಮ್ಮೆಯಿಂದ ಬೀಗುತ್ತಿದ್ದೆ. ಯಾವದಾದರೂ ಸಸಿಯನ್ನು 'ದನ ತಿಂದು ಹೋಯಿತು' ಎಂದು ಧರ್ನು ಪೂಜಾರಿ (ಹಿಂದೆ ಒಕ್ಕಲಾಗಿದ್ದವರು) ಹೇಳುವಾಗ ಆ ದನವನ್ನು ಹುಡುಕಿಕೊಂಡು ಹೋಗಿ ಹೊಡೆಯುವಷ್ಟು ಕೋಪ ಬರುತ್ತಿತ್ತು !   
       ನನ್ನ ಅರಿವಿಲ್ಲದೇ ನಾನು ಪ್ರಕೃತಿಯನ್ನು ಪ್ರೀತಿಸಲು ಹಚ್ಚಿಕೊಂಡಿದ್ದೆ. ಗಿಡಮರಗಳನ್ನು ಮುದ್ದಿಸುತ್ತಿದ್ದೆ, ಅವುಗಳೊಂದಿಗೆ ಮಾತನಾಡುತ್ತಿದ್ದೆ. ಅವುಗಳೂ ನನ್ನೊಡನೆ ಮಾತನಾಡುತ್ತಿರುವಂತೆಯೇ  ಭಾಸವಾಗುತ್ತಿತ್ತು !
        ೨. ಬ್ಯಾಂಕ್ ಮೇನೇಜರ್ ಆಗಿದ್ದ ನನ್ನ ತಂದೆಗೆ ಬೆಂಗಳೂರಿಗೆ ವರ್ಗವಾಗಿತ್ತು. (೧೯೭೪). ನಮ್ಮ ಮನೆಯ ಮುಂದೆ ನೆಡಲು ನಾಲ್ಕು ಗಿಡಗಳನ್ನು ಮಲ್ಲೇಶ್ವರದ ಅರಣ್ಯಭವನಕ್ಕೆ ಹೋಗಿ ತರಲು ಹೊರಟಿದ್ದ ತಂದೆಯ ಜತೆ ನಾನೂ ಹೋಗಿದ್ದೆ. ಮನೆಯ ಆ ಬದಿ ಎರಡು ಗಿಡಗಳನ್ನು ನನ್ನ ತಂದೆ ಹಾಗೂ ಈ ಬದಿ ಎರಡು ಗಿಡಗಳನ್ನು ನಾನೂ ನೆಟ್ಟೆವು. ದಿನಾ ಆ ಗಿಡಗಳಿಗೆ ನೀರು ಹಾಕುವ ಹೊಣೆಯನ್ನು ನನ್ನ ತಂದೆ ನನಗೆ ಒಪ್ಪಿಸಿದ್ದರು.  ಪ್ರೀತಿಯಿಂದ ಅವುಗಳನ್ನು ಮುದ್ದು ಮಾಡುತ್ತಾ ನಾನು ಆ ಕೈಂಕರ್ಯವನ್ನು ಮಾಡುತ್ತಿದ್ದೆ. ಎಲ್ಲ ಗಿಡಗಳ ಬಳಿ ನಿಂತು 'ಒಹ್.. ನನ್ನ ತೊಡೆಯವರೆಗೆ ಬಂದಿದೆ...ಒಹ್ ಈಗ ಸೊಂಟದವರೆಗೂ ಬಂದು ಬಿಟ್ಟಿದೆ' ..ಎಂದೆಲ್ಲಾ ಕಾಲ ಕಾಲಕ್ಕೆ ನೋಡಿ ಖುಷಿ ಪಡುತ್ತಿದ್ದೆ.
ಆದರೆ ಅದೊಂದು ದಿನ...
       ಶಾಲೆ ಮುಗಿಸಿ ಮನೆಗೆ ಬಂದಾಗ ನನಗೆ ಆಘಾತ ಕಾದಿತ್ತು !
       ನಾನು ನೆಟ್ಟ ಎರಡು ಗಿಡಗಳಲ್ಲಿ ಒಂದು ಗಿಡವನ್ನು ಯಾರೋ ದುರುಳ, ದುಷ್ಟ, ದುರ್ಬುದ್ಧಿಯುಳ್ಳ ದುರಾತ್ಮನೊಬ್ಬ ಎರಡು ಭಾಗವಾಗಿ ಸೀಳಿ ಬಿಟ್ಟಿದ್ದ !! ಎದುರು ಸಿಕ್ಕರೆ ಅವನನ್ನೇ ಎರಡೆರಡಾಗಿ ಸೀಳುವಷ್ಟು ರೋಷವಿದ್ದರೂ ಸನಿಹ ಯಾರೂ ಕಾಣಲಿಲ್ಲ.. ಅವನ್ಯಾವನೋ ಈ  ಅಮಾನುಷ ಕೃತ್ಯವೆಸಗಿ ಹೋಗಿಬಿಟ್ಟಿದ್ದ.
       ಈಗೇನು ಮಾಡುವುದು ? ಅಸಹಾಯಕನಾಗಿ ಅತ್ತುಬಿಟ್ಟಿದ್ದೆ. ಆ ಗಿಡವನ್ನೊಮ್ಮೆ ಬಾಚಿ ತಬ್ಬಿಕೊಂಡೆ....
       ಅರೆರೆ.. ! .. 'ಈ ಗಿಡ ನನ್ನ ಬಳಿ ಏನೋ ಮಾತಾಡುತ್ತಿದೆಯಲ್ಲ' ಎಂದು ಎನಿಸತೊಡಗಿತು.. 'ಹಾಗಾದರೆ ಇದಕ್ಕೆ ಇನ್ನೂ ಜೀವವಿದೆ' ಎಂಬ ಭಾವನೆ ಬಲವಾಗತೊಡಗಿತು. ನನ್ನ ಮನಸ್ಸಿಗೆ ಏನು ಮಾಡಬೇಕೆಂದು ತೋಚಿತ್ತೋ ಅದನ್ನೇ ಮಾಡಿದೆ. ಆಗ ನನಗೆ ನೂರಾನೆ ಬಲ ಬಂದ ಹಾಗೆ ಆಗಿತ್ತು.







      ಗಿಡವನ್ನು ಸೀಳಿದ ಜಾಗದಲ್ಲಿ, ಒದ್ದೆ ಮಾಡಿ ಮುದ್ದೆ ಮಾಡಿದ ಮಣ್ಣನ್ನು ಮೆತ್ತುತ್ತಾ ಬಂದೆ.. ಎರಡು ಭಾಗಗಳನ್ನು ಒಟ್ಟು ಮಾಡಿ ದಾರದಿಂದ ಒಂದು ಕಟ್ಟು ಹಾಕಿದೆ. ಮನೆಯಲ್ಲಿ  ಹಳೆಯ ಕಮಂಡಲವೊಂದಿತ್ತು, ಅದರಲ್ಲಿ ನೀರು ತುಂಬಿ ದೊಡ್ಡ ಮಹರ್ಷಿಯ ಹಾಗೆ ದೇವರ ಮೇಲೆ ಪ್ರತಿಜ್ಞೆ ಮಾಡಿ 'ನನ್ನ ಆಯಸ್ಸಿನಲ್ಲಿ ಮುವ್ವತ್ತು  ದಿನಗಳ ಆಯಸ್ಸನ್ನು ಕಮ್ಮಿ ಮಾಡಿ ಈ ಮರಕ್ಕೆ ಧಾರೆ ಎರೆಯುತ್ತಿದ್ದೇನೆ, ಇದಕ್ಕೆ ಮತ್ತೆ ಪ್ರಾಣ ನೀಡು ದೇವರೇ' ಎಂದು ಬೇಡಿಕೊಂಡೆ. (ಅಂದಿನ ಮನಸ್ಥಿತಿ).
      ಇಂದು ಮನೆಯ ಮುಂದೆ ಸುಳಿದಾಡುವಾಗೆಲ್ಲಾ  ಬೃಹತ್ತಾಗಿ ಬೆಳೆದಿರುವ ಆ ಮರವನ್ನು ಹೆಮ್ಮೆಯಿಂದ ಒಮ್ಮೆ ತಬ್ಬಿಕೊಳ್ಳುತ್ತೇನೆ.. ಆರದ ಆ ಗಾಯವನ್ನು ನವಿರಾಗಿ ಸವರುತ್ತೇನೆ... ಭಾವುಕನಾಗಿ ಮನೆ ಸೇರುತ್ತೇನೆ.
ಮರಗಿಡಗಳನ್ನು ಪ್ರೀತಿಸಿದರೆ ಮಾತ್ರ ಅವುಗಳು ನೀಡುವ ಪ್ರೀತಿಯನ್ನು ನಾವು ಸವಿಯಲು ಸಾಧ್ಯ .. ಹೆಚ್ಚೇನೂ ಹೇಳಲಾರೆ .........